Search
  • Follow NativePlanet
Share
» »ಶೇಷನಾಗ್ ಸರೋವರ ನೋಡಿದ್ದೀರಾ?

ಶೇಷನಾಗ್ ಸರೋವರ ನೋಡಿದ್ದೀರಾ?

By Vijay

ಕಾಶ್ಮೀರ ಕಣಿವೆ ನಿಜಕ್ಕೂ ಮನಮೋಹಕ ಪ್ರವಾಸಿ ತಾಣ. ಕಣಿವೆಗಳ ರಾಜ್ಯವೆಂದೆ ಪ್ರಖ್ಯಾತವಾದ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಕಾಶ್ಮೀರ ಕಣಿವೆಯನ್ನು ಕಾಣಬಹುದು. ಇನ್ನೊಂದು ವಿಷಯವೆಂದರೆ ಕಾಶ್ಮೀರ ಕಣಿವೆಯು ತನ್ನಲ್ಲಿ ಹಲವಾರು ಮನಸೆಳೆವ ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿರುವುದು.

ಧಾರ್ಮಿಕ ಆಕರ್ಷಣೆಯಿಂದ ಹಿಡಿದು ಕೌಟುಂಬಿಕ ಹಾಗೂ ಸಾಹಸಮಯ ಪ್ರವಾಸಿ ಆಕರ್ಷಣೆಗಳಿಗೆ ಹೆಸರುವಾಸಿಯಾಗಿದೆ ಕಾಶ್ಮೀರ ಕಣಿವೆ. ಪ್ರಸ್ತುತ ಲೇಖನವು ಕಾಶ್ಮೀರದಲ್ಲಿ ನೋಡಬಹುದಾದ ಪ್ರಖ್ಯಾತ ಪ್ರವಾಸಿ ಆಕರ್ಷಣೆಗಳ ಪೈಕಿ ಒಂದಾಗಿರುವ ಶೇಷನಾಗ್ ಸರೋವರದ ಕುರಿತು ತಿಳಿಸುತ್ತದೆ.

ಶೇಷನಾಗ್ ಸರೋವರ ನೋಡಿದ್ದೀರಾ?

ಚಿತ್ರಕೃಪೆ: Akhilesh Dasgupta

ಹೌದು ಶೇಷನಾಗ್ ಸರೋವರ, ಕಾಶ್ಮೀರ ಕಣಿವೆಯ ಅನಂತನಾಗ್ ಜಿಲ್ಲೆಯಲ್ಲಿದೆ. ಹಿಂದುಗಳಿಗೆ ಪವಿತ್ರವಾದ ಅಮರನಾಥ ಯಾತ್ರೆಗೆ ತೆರಳುವ ಸಂದರ್ಭದಲ್ಲಿ ಶೇಷನಾಗ್ ದೊರೆಯುತ್ತದೆ. ಪಹಲ್ಗಾಮ್ ನಿಂದ 23 ಕಿ.ಮೀ ಗಳಷ್ಟು ದೂರದಲ್ಲಿದೆ. ಅಮರನಾಥ ಯಾತ್ರೆಗೆ ಹೊರಡುವವರು ಸಾಮಾನ್ಯವಾಗಿ ಶೇಷನಾಗ್ ಸರೋವರಕ್ಕೆ ಭೇಟಿ ನೀಡಿ ಮುಂದೆ ಸಾಗುತ್ತಾರೆ. ಈ ಕೆರೆಗೆ ಚಾರಣದ ಮೂಲಕವೆ ತಲುಪಬೇಕಾಗುತ್ತದೆ.

ಒಂದು ಕಥೆಯ ಪ್ರಕಾರ, ಶಿವನು ಪಾರ್ವತಿ ದೇವಿಗೆ ಅಮರತ್ವದ ಕುರಿತು ರಹಸ್ಯ ತಿಳಿಸಲು ತೆರಳುವಾಗ ಇಲ್ಲಿ ಶೇಷನಾಗ್ ಸರ್ಪವನ್ನು ಬಿಟ್ಟು ಹೋಗಿದ್ದನಂತೆ. ಇನ್ನೊಂದು ಪುರಾಣ ಕಥೆಗಳ ಪ್ರಕಾರವಾಗಿ, ಶೇಷನಾಗ್ ಸ್ವತಃ ತಾನಾಗಿಯೆ ಇಲ್ಲಿ ಬಂದು ಕೆರೆಯನ್ನು ನಿರ್ಮಿಸಿ ವಾಸಿಸಹತ್ತಿದನಂತೆ. ಇಂದಿಗೂ ಇಲ್ಲಿ ಶೇಷನಾಗ್ ಸರ್ಪವಿದೆಯೆಂದು ನಂಬಲಾಗುತ್ತದೆ.

ಶೇಷನಾಗ್ ಸರೋವರ ನೋಡಿದ್ದೀರಾ?

ಚಿತ್ರಕೃಪೆ: Pauk

ವಿಷ್ಣುವಿನ ಆಸನವಾದ, ಸರ್ಪಗಳ ರಾಜನಾದ ಸೌರ ಮಂಡಲವನ್ನೆ ತನ್ನ ಹೆಡೆಯ ಮೇಲೆ ಹಿಡಿದಿರುವ ಶೇಷನಾಗ್ ಇಂದಿಗೂ ಈ ಸರೋವರದಲ್ಲಿರುವ ನಂಬಿಕೆಯಿಂದಾಗಿ ಅಮರನಾಥ ಯಾತ್ರೆಗೆ ತೆರಳುವವರು ಈ ಸರೋವರಕ್ಕೆ ಭೇಟಿ ನೀಡಿಯೆ ಮುಂದೆ ಶಿವನ ದರ್ಶನಕ್ಕೆಂದು ತೆರಳುತ್ತಾರೆ. ಈ ಕೆರೆಯೆ ಉತ್ತರಕ್ಕೆ ಸುಮಾರು 20 ಕಿ.ಮೀ ದೂರದಲ್ಲಿ ಅಮರನಾಥ ಗುಹೆಯಿದೆ.

ವೈಜ್ಞಾನಿಕವಾಗಿ ಈ ಕೆರೆಯು ಒಂದು ಕ್ಯಾಟೋಟ್ರೊಫಿಕ್ ಪ್ರಕಾರದ ಕೆರೆಯಾಗಿದೆ. ಅಂದರೆ ಈ ಕೆರೆಯಲ್ಲಿ ಪೋಷಕಾಂಶಗಳ ಪ್ರಮಾಣ ಅತಿ ಕಡಿಮೆ ಆದರೆ ಆಮ್ಲಜನಕದ ಪ್ರಮಾಣ ಹೆಚ್ಚಾಗಿರುತ್ತದೆ. ಆಳಕ್ಕೆ ಇಳಿದಂತೆ ಇದರ ಆಮ್ಲಜನಕದ ಪ್ರಮಾಣ ಇನ್ನೂ ಹೆಚ್ಚಾಗುತ್ತದೆ. ಹೆಚ್ಚಿನ ಆಮ್ಲಜನಕ ಬೇಕಾಗಿರುವ ಟ್ರೌಟ್ ನಂತಹ ಮೀನುಗಳು ಇದರಲ್ಲಿ ಯಥೇಚ್ಚವಾಗಿರುತ್ತವೆ. ಸುತ್ತಮುತ್ತಲಿರುವ ಪರ್ವತಗಳ ಕರಗುವ ಹಿಮವೆ ಇದಕ್ಕೆ ನೀರಿನ ಮೂಲ. ಇದರ ನೀರು ಪಹಲ್ಗಾಮ್ ನಲ್ಲಿರುವ ಲಿಡ್ಡರ್ ನದಿಯಲ್ಲಿ ಸೇರುತ್ತದೆ.

ಶೇಷನಾಗ್ ಸರೋವರ ನೋಡಿದ್ದೀರಾ?

ಚಿತ್ರಕೃಪೆ: Ravinder Singh Gill

ಶೇಷನಾಗ್ ಕೆರೆ ಶ್ರೀನಗರದಿಂದ 120 ಕಿ.ಮೀ ಹಾಗೂ ಪಹಲ್ಗಾಮ್ ನಿಂದ 23 ಕಿ.ಮೀ ದೂರವಿದ್ದು ಚಂದನ್ವಾರಿವರೆಗೆ ಅಂದರೆ ಸುಮಾರು 113 ಕಿ.ಮೀ ಮಾರ್ಗವನ್ನು ರಸ್ತೆಯ ಮೂಲಕ ಸಾಗಿ ತಲುಪಬಹುದು. ನಂತರ ಏಳು ಕಿ.ಮೀ ಗಳಷ್ಟು ದೂರವನ್ನು ಚಾರಣದ ಮೂಲಕವೆ ತಲುಪಬೇಕಾಗುತ್ತದೆ. ನಿಗದಿತ ಶುಲ್ಕಕ್ಕೆ ಕುದುರೆ ಸವಾರಿಯ ಚಾರಣ ಲಭ್ಯವಿರುತ್ತದೆ.

ಮೈ ಜುಮ್ಮೆನಿಸುವ ಕಣಿವೆಗಳನ್ನು ಸುತ್ತೋಣವೆ?

ಜೂನ್ ತಿಂಗಳಿನಿಂದ ಪ್ರಾರಂಭವಾಗಿ ಸೆಪ್ಟಂಬರ್ ತಿಂಗಳಿನವರೆಗೂ ಈ ಸರೋವರಕ್ಕೆ ಭೇಟಿ ನೀಡಲು ಪ್ರಶಸ್ತವಾದ ಸಮಯವಾಗಿದೆ. ಇದರ ನಂತರದಿಂದ ಇಲ್ಲಿ ಚಳಿ ವಿಪರೀತವಾಗಿ ಹಿಮಪಾತ ಪ್ರಾರಂಭವಾಗುತ್ತದೆ. ಅಲ್ಲದೆ ಚಳಿಗಾಲದಲ್ಲಿ ಈ ಸರೋವರವು ಹಿಮಗಟ್ಟುತ್ತದೆ.

ಶ್ರೀನಗರಕ್ಕೆ ತೆರಳುವ ಹಲವು ಬಗೆಗಳು

ಜಮ್ಮು ಮತ್ತು ಕಾಶ್ಮೀರದ ಸಮಗ್ರ ಪ್ರವಾಸಿ ಸ್ಥಳಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X