ಕೇದಾರನಾಥ: ಬೆಟ್ಟದ ತಪ್ಪಲಿನ ಮಹತ್ವದ ಧಾರ್ಮಿಕ ತಾಣ

ಉತ್ತರಖಂಡ ರಾಜ್ಯದ ರುದ್ರಪ್ರಯಾಗ ಜಿಲ್ಲೆಯಲ್ಲಿದೆ ಕೇದಾರನಾಥ. ದಟ್ಟ ಹಿಮಾಲಯ ಪರ್ವತದ ನಡುವೆ ಈ ತಾಣ ಇದ್ದು, ಸಮುದ್ರ ಮಟ್ಟದಿಂದ 3584 ಮೀಟರ್‌ ಎತ್ತರದಲ್ಲಿದೆ. ಇಲ್ಲಿನ ಅತ್ಯಂತ ಪ್ರಮುಖ ಹಾಗೂ ಮುಖ್ಯ ಆಕರ್ಷಣೆ, ಹಿಂದೂ ಧರ್ಮಿಯರ ಕೇದಾರನಾಥ ದೇವಾಲಯ. ಇದು 12 ಜ್ಯೋರ್ತಿಲಿಂಗಗಳಲ್ಲಿ ಅತ್ಯಂತ ಮಹತ್ವದ್ದಾಗಿದ್ದು, ನಾಲ್ಕು ಪವಿತ್ರಧಾಮ(ಚಾರ್ ಧಾಮ್)ಗಳಲ್ಲಿ ಒಂದಾಗಿದೆ. ಈ ಸುಂದರ ದೇವಾಲಯದ ಪಕ್ಕದಲ್ಲಿಯೇ  ಪ್ರಸಿದ್ಧ ಮಂದಾಕಿನಿ ನದಿಯು ಹರಿದಿದೆ. ಇಲ್ಲಿನ ದೇವಾಲಯದಲ್ಲಿರುವ ಶಿವನ ಮೂರ್ತಿಗೆ ಪೂಜೆ ಸಲ್ಲಿಸಲು ಬೇಸಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.

1000 ವರ್ಷಗಳಷ್ಟು ಪುರಾತನವಾಗಿರುವ ಈ ದೇವಾಲಯವನ್ನು ಕಲ್ಲಿನ ಚಪ್ಪಡಿಗಳನ್ನು ಬಳಸಿ ನಿರ್ಮಿಸಲಾಗಿದೆ. ಈ ದೇವಾಲಯದ ಗರ್ಭಗುಡಿಗೆ ಕರೆದೊಯ್ಯುವ ಮೆಟ್ಟಿಲುಗಳ ಮೇಲೆ ಪಾಲಿ ಭಾಷೆಯಲ್ಲಿ ಬರೆಯಲಾಗಿರುವ ಬರವಣಿಗೆಗಳನ್ನು ಪ್ರವಾಸಿಗರು ಗಮನಿಸಬಹುದು. ಸಮುದ್ರ ಮಟ್ಟದಿಂದ 3584 ಮೀಟರ್‌ ಎತ್ತರದಲ್ಲಿರುವ ಈ ಧಾರ್ಮಿಕ ಧಾಮವು ಪ್ರಸ್ತುತ ನಾಲ್ಕೂ ಧಾಮಗಳ ಪೈಕಿ ಅತ್ಯಂತ ಕಠಿಣತೆಯಿಂದ ತಲುಪಬಹುದಾಗಿದೆ. ಬೇಸಿಗೆ ಕಾಲದ ಆರು ತಿಂಗಳುಗಳ ಕಾಲ ಮಾತ್ರ ದೇವಾಲಯಕ್ಕೆ ಭೇಟಿ ಕೊಡಬಹುದು. ಉಳಿದಂತೆ ಚಳಿಗಾಲದ ಸಮಯದಲ್ಲಿ ಈ ಭಾಗವು ವಿಪರೀತ ಹಿಮಪಾತ ಹಾಗು ಅಹಿತಕರವಾದ ವಾತಾವರಣವನ್ನು ಹೊಂದಿರುವುದರಿಂದ ದೇವಾಲಯವು ಮುಚ್ಚಲ್ಪಟ್ಟಿರುತ್ತದೆ. ಈ ಸಂದರ್ಭದಲ್ಲಿ ಇತ್ತ ತೆರಳುವುದು ಅಪಾಯಕಾರಿ. ಈ ಚಳಿಗಾಲದ ಸಂದರ್ಭದಲ್ಲಿ ಇಲ್ಲಿನ ವಾಸಿಗಳು ಕೂಡ ಕೆಳ ಸ್ತರಕ್ಕೆ ತೆರಳುತ್ತಾರೆ. ಕೇದಾರನಾಥ ದೇವರ ಪಲ್ಲಕ್ಕಿ ಕೂಡ ಈ ಸಂದರ್ಭದಲ್ಲಿ ಉಕ್ಕಿಮಠಕ್ಕೆ ಸ್ಥಳಾಂತರಗೊಳ್ಳುತ್ತದೆ.

ಪ್ರವಾಸಿಗರು ಕೇದಾರನಾಥಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಇಲ್ಲಿರುವ ಆದಿ ಗುರು ಶಂಕರಾಚಾರ್ಯರ ಸಮಾಧಿಗೂ ಭೇಟಿ ನೀಡಿಯೇ ತೆರಳುತ್ತಾರೆ. ಕೇದಾರನಾಥ ದೇವಾಲಯದ ಸನೀಹದಲ್ಲಿಯೇ ಈ ಸಮಾಧಿಯನ್ನು ಕಾಣಬಹುದಾಗಿದೆ. ಆದಿಗುರು ಶಂಕರಾಚಾರ್ಯರು ಭಾರತ ಕಂಡ ಅತ್ಯಂತ ಜನಪ್ರಿಯ ಧಾರ್ಮಿಕ ಸಂತರು. ಇವರು ಅದ್ವೈತ ಸಿದ್ಧಾಂತದ ಭೋದಕರಾಗಿದ್ದರು ಮತ್ತು ಜಗತ್ತಿಗೆ ಇದನ್ನು ಪರಿಚಯಿಸುವ ಕಾರ್ಯ ಮಾಡಿದ್ದರು. ನಾಲ್ಕು ಮಹತ್ವದ ಧಾರ್ಮಿಕ ಪೀಠಗಳನ್ನು ಸ್ಥಾಪಿಸಿದ ಮೇಲೆ ತಮ್ಮ 32ನೇ ವರ್ಷದ ಪ್ರಾಯದಲ್ಲೇ ಇವರು ಸಮಾಧಿ ಸ್ಥಿತಿಯನ್ನು ಸ್ವೀಕರಿಸಿದರು.  ಕೇದಾರ್‌ನಾಥ್‌ದಿಂದ 19 ಕಿ.ಮೀ. ದೂರದಲ್ಲಿ ನೆಲೆಗೊಂಡಿರುವ ಮತ್ತೊಂದು ಆಕರ್ಷಣೆ ಸೋನ್ ಪ್ರಯಾಗ. ಇದು ಸಮುದ್ರ ಮಟ್ಟದಿಂದ 1829 ಮೀಟರ್‌ ಎತ್ತರದಲ್ಲಿದೆ. ಇದು ವಾಸುಕಿ ಹಾಗೂ ಮಂದಾಕಿನಿ ನದಿಗಳು ಒಂದನ್ನೊಂದು ಸಂಧಿಸುವ ಸಂಗಮ ಪ್ರದೇಶವಾಗಿದೆ. ಈ ತಾಣವು ತನ್ನಲ್ಲಿರುವ ಜಲಕ್ಕೆ ಪ್ರಸಿದ್ಧ ಹಾಗು ಜನಪ್ರಿಯವಾಗಿದೆ, ಏಕೆಂದರೆ ಈ ನೀರಿನಲ್ಲಿ ಧಾರ್ಮಿಕ ಶಕ್ತಿ ಇದೆ ಎಂದು ನಂಬಲಾಗುತ್ತದೆ. ಪುರಾಣಗಳ ಪ್ರಕಾರ, ಯಾರು ಈ ನೀರನ್ನು ಸ್ಪರ್ಷಿಸುತ್ತಾರೋ, ಅವರು ವೈಕುಂಠಧಾಮವನ್ನೇ ಸೇರುತ್ತಾರೆ ಅರ್ಥಾತ್ ಮೋಕ್ಷವನ್ನು ಪಡೆಯುತ್ತಾರೆ ಎನ್ನುವ ನಂಬಿಕೆ ಇದೆ.

ಕೇದಾರನಾಥ ಸಮೀಪದ ಇನ್ನೊಂದು ಪ್ರಮುಖ ತಾಣ ವಾಸುಕಿ ತಾಲ. ಇದು ಸಮುದ್ರ ಮಟ್ಟದಿಂದ 4135 ಮೀಟರ್‌ ಎತ್ತರದಲ್ಲಿದ್ದು, 8 ಕಿ.ಮೀ. ದೂರದಲ್ಲಿದೆ. ಕೆರೆಯ ಸುತ್ತಲೂ ಹಿಮಾಲಯ ಪರ್ವತಗಳು ಸುತ್ತುವರೆದಿದ್ದು, ಅದ್ಭುತವಾಗಿ ಗೋಚರಿಸುವ ನೈಸರ್ಗಿಕ ಸೌಂದರ್ಯವು ಕಣ್ಣುಕುಕ್ಕುವಂತಿರುತ್ತದೆ. ಮತ್ತೊಂದು ಅತ್ಯಾಕರ್ಷಕ ಚೌಖಂಬಾ ಪರ್ವತದ ಶೃಂಗಗಳು ಈ ಕೆರೆಗೆ ಸಮೀಪದಲ್ಲಿಯೇ ಇವೆ. ಒಮ್ಮೆ ಚತುರಂಗಿ ಹಾಗೂ ವಾಸುಕಿಯನ್ನು ಕಂಡು ಹೋದರೆ ಮನಸ್ಸು ಅತ್ಯಂತ ನಿರಾಳವಾಗುತ್ತದೆ.

ಇಲ್ಲಿರುವ ಕೇದಾರನಾಥ ವನ್ಯಜೀವಿ ಧಾಮವು 1972 ರಲ್ಲಿ ಸ್ಥಾಪಿತವಾಯಿತು. ಇದು ಅಲಕಾನಂದ ನದಿ ತೀರದಲ್ಲಿದೆ. ಈ ಧಾಮವು ಸರಿಸುಮಾರು 967 ಚದರ್‌ ಕಿ.ಮೀ. ವಿಸ್ತಾರವಾಗಿದೆ. ಇಡೀ ರಕ್ಷಿತಾರಣ್ಯವು ಪೈನ್‌, ಓಕ್‌, ಬ್ರೀಚ್‌, ಬುಗ್ಯಾಲ, ಆಲ್‌ಪೈನ್‌ ಮರಗಳಿಂದ ಆವೃತ್ತವಾಗಿದೆ. ಸಾಕಷ್ಟು ವಿಧದ ಸಸ್ಯ ಹಾಗೂ ಜೀವ ಸಂಕುಲವನ್ನು ಇಲ್ಲಿ ಕಾಣಬಹುದಾಗಿದ್ದು ಇದಕ್ಕೆ ಕಾರಣ ಇದರ ಅದ್ಭುತ ಭೌತಿಕ ಹಾಗೂ ಭೌಗೋಲಿಕ ರಚನೆಯಾಗಿದೆ. ಇಲ್ಲಿ ಕಂಡುಬರುವ ಮುಖ್ಯ ಪ್ರಾಣಿಗಳೆಂದರೆ ಭರಲ್ಗಳು, ಬೆಕ್ಕು, ಗೋರಿಲ್ಲಾ, ತೋಳ, ಕಪ್ಪು ಕರಡಿ, ಹಿಮ ಚಿರತೆ, ಸಾಂಬಾರ್‌ಗಳು, ತಾಹಿರ್‌ಗಳು, ಶೇರ್ವಾಗಳು. ಅಲ್ಲದೆ, ಇದು ಸ್ಥಳೀಯ ಪ್ರಾಣಿಯಾದ 'ಕೇದಾರನಾಥ ಮಸ್ಕ್‌ ಜಿಂಕೆ'ಯ ಆವಾಸತಾಣವೂ ಆಗಿದೆ. ಇಲ್ಲಿ ಪಕ್ಷಿ ವೀಕ್ಷಣೆಗೆ ಉತ್ತಮ ಅವಕಾಶ ಇದೆ. ಮೋನಲ್‌ಗಳು, ಗ್ರೇ ಚಿಕ್ಡ್‌ ವಾರ್ಬಲ್‌ಗಳು ಮತ್ತಿತರ ಹತ್ತಾರು ವಿಧದ ಪಕ್ಷಿಗಳು ಕಾಣಸಿಗುತ್ತವೆ. ಅಲ್ಲದೆ, ಇಲ್ಲಿ ಹರಿದಿರುವ ಮಂದಾಕಿನಿ ನದಿಯಲ್ಲಿ ಪ್ರವಾಸಿಗರು ಸಾಕಷ್ಟು ವಿಧದ ಮೀನುಗಳನ್ನು ಕೂಡ ಕಾಣಬಹುದು.

ಕೇದಾರ್‌ನಾಥಕ್ಕೆ ಭೇಟಿ ನೀಡುವ ಪ್ರವಾಸಿಗರು ಕಡ್ಡಾಯವಾಗಿ ಇಲ್ಲಿನ ಗುಪ್ತಕಾಶಿಗೂ ಭೇಟಿಕೊಡಬೇಕು. ಈ ಭಾಗದಲ್ಲಿ ಮೂರು ದೇವಾಲಯಗಳಿವೆ. ಇದರಲ್ಲಿ ಅತ್ಯಾಕರ್ಷಕ ವಿಶ್ವನಾಥ ದೇವಾಲಯವೂ ಒಂದು. ಇನ್ನುಳಿದವೆಂದರೆ ಮಣಿಕರ್ಣಿಕ ಕುಂಡ ಹಾಗೂ ಅರ್ಧನಾರೀಶ್ವರ ದೇವಾಲಯ. ಅರ್ಧನಾರೀಶ್ವರ ದೇವಾಲಯದಲ್ಲಿರುವ ದೇವರು ಅರ್ಧ ಪುರುಷ ಹಾಗೂ ಅರ್ಧ ನಾರಿ ರೂಪದಲ್ಲಿರುವುದು ವಿಶೇಷ. ಇದು ಶಿವನ ದೇವಾಲಯವಾಗಿದೆ. ವಿಶ್ವನಾಥ ದೇವಾಲಯದಲ್ಲಿ ಕೂಡ ಶಿವನ ಆರಾಧನೆ ಆಗುತ್ತದೆ. ಇಲ್ಲಿ ಶಿವನ ಹಲವು ಅವತಾರಗಳ ಪರಿಚಯವೂ ಆಗುತ್ತದೆ. ಕೇದಾರನಾಥದ ಇನ್ನೊಂದು ಪ್ರಮುಖ ದೇವಾಲಯ ಭೈರವನಾಥ ದೇಗುಲ. ಇದು ಕೇದಾರನಾಥದಿಂದ ಅರ್ಧ ಕಿ.ಮೀ. ದೂರದಲ್ಲಿದೆ. ಈ ದೇವಾಲಯವು ಶಿವನ ಗಣನಾದ ಭೈರವ ದೇವರಿಗೆ ಮೀಸಲಾಗಿದೆ. ಈ ದೇವಾಲಯದಲ್ಲಿ ಮೂಲ ವಿಗ್ರಹವನ್ನು ಪ್ರತಿಷ್ಠಾಪಿಸಿದವರು ಕೇದಾರನಾಥದ ಮೊದಲ ರಾವಲ್‌ ಆದ ಶಾ.ಬೈಕುಂಡ.

ಗೌರಿಕುಂಡ ಸಮುದ್ರ ಮಟ್ಟದಿಂದ 1982 ಮೀಟರ್‌ ಎತ್ತರದಲ್ಲಿದೆ. ಇದು ಕೇದಾರನಾಥದ ಪ್ರಮುಖ ಪ್ರವಾಸಿ ತಾಣವಾಗಿದೆ. ಅತ್ಯಂತ ಪುರಾತನ ದೇವಾಲಯಗಳು ಇಲ್ಲಿವೆ. ಹಿಂದು ದೇವತೆ ಪಾರ್ವತಿಯ ಮಂದಿರವೂ ಇದೆ. ನಂಬಿಕೆಗಳ ಪ್ರಕಾರ, ದೇವಿ ಪಾರ್ವತಿಯು ಶಿವನೇ ತನ್ನ ಪತಿಯಾಗಲಿ ಎಂದು ತಪಸ್ಸು ಮಾಡಿದ್ದು ಇದೇ ಜಾಗದಲ್ಲಿ. ಗೌರಿಕುಂಡದಲ್ಲಿ ಬಿಸಿನೀರ ಬುಗ್ಗೆ ಇದೆ. ಈ ನೀರು ದೈವಿಶಕ್ತಿ ಹೊಂದಿರುವುದು ಮಾತ್ರವಲ್ಲ, ಪ್ರತಿಯೊಬ್ಬರ ಮನಸ್ಸಿನ ಕೊಳೆಯನ್ನೂ ನಿವಾರಿಸುತ್ತದೆ ಎಂಬುದು ಪ್ರತೀತಿ.

ಕೇದಾರನಾಥಕ್ಕೆ ತಲುಪಲು ಸಮೀಪದ ವಿಮಾನ ನಿಲ್ದಾಣ ಡೆಹ್ರಾಡೂನ್‌ನ ಜಾಲಿ ಗ್ರಾಂಟ್‌. ಇದು ಕೇದಾರನಾಥದಿಂದ 239 ಕಿ.ಮೀ. ದೂರದಲ್ಲಿದೆ. ರೈಲಿಗೆ ಹೋಗ ಬಯಸುವವರು ರಿಷಿಕೇಶದವರೆಗೆ ಟಿಕೆಟ್‌ ಪಡೆದು ತೆರಳಿ ಅಲ್ಲಿಂದ ಬೇರೆ ವಾಹನದಲ್ಲಿ ತೆರಳಬೇಕು. ರಿಷಿಕೇಶದಿಂದ ಕೇದಾರನಾಥ 227 ಕಿ.ಮೀ. ದೂರದಲ್ಲಿದೆ.

ಮೇ ತಿಂಗಳಿಂದ ಅಕ್ಟೋಬರ್‌ ನಡುವಿನ ಸಮಯ ಕೇದಾರನಾಥ ಪ್ರವಾಸಕ್ಕೆ ಅತ್ಯಂತ ಸೂಕ್ತ. ಈ ಸಂದರ್ಭದಲ್ಲಿ ತಾಪಮಾನವು ಸಹನೀಯವಾಗಿರುತ್ತದೆ. ಚಳಿಗಾಲದಲ್ಲಿ ಇಲ್ಲಿಗೆ ಭೇಟಿ ಅಸಾಧ್ಯ. ವಿಪರೀತ ಹಿಮಪಾತ ಆಗುತ್ತಿರುತ್ತದೆ.

Please Wait while comments are loading...