ದೇವಪ್ರಯಾಗ್‌ - ಪ್ರಮುಖ ಧಾರ್ಮಿಕ ಸ್ಥಳ

ಉತ್ತರಾಖಂಡ್‌ನ ಟೆಹ್ರಿ ಗಡ್ವಾಲ್ ಜಿಲ್ಲೆಯಲ್ಲಿರುವ ದೇವಪ್ರಯಾಗ್ ಹಿಂದೂಗಳ ಪವಿತ್ರ ಕ್ಷೇತ್ರಗಳಲ್ಲೊಂದು. ಇದು ಸಮುದ್ರ ಮಟ್ಟದಿಂದ 2723 ಮೀಟರ್‌ ಎತ್ತರದಲ್ಲಿದೆ. ಸಂಸ್ಕೃತದಲ್ಲಿ ದೇವಪ್ರಯಾಗ್‌ ಅಂದರೆ 'ಪವಿತ್ರ ಸಂಗಮ'. ಅಲಕನಂದಾ ಮತ್ತು ಭಾಗೀರಥಿ ನದಿಗಳ ಸಂಗಮವೂ ಹೌದು ಈ ಸ್ಥಳ. ಏಳನೇ ಶತಮಾನದಿಂದೀಚೆಗೆ ಈ ಪ್ರದೇಶ ಹಲವು ಹೆಸರುಗಳಿಂದ ಕರೆಸಿಕೊಂಡಿದೆ.

ಮುಖ್ಯವಾಗಿ ಬ್ರಹ್ಮಪುರಿ, ಬ್ರಹ್ಮ ತೀರ್ಥ, ಶ್ರೀಖಂಡ ನಗರ ಮತ್ತು ಉತ್ತರಾಖಂಡದ ಜೆಮ್ ಅಂತಲೂ ಕರೆಯಲ್ಪಡುತ್ತಿತ್ತು. ಹಿಂದೂ ಸಾದು ದೇವ ಶರ್ಮಾ ಇಲ್ಲಿ ವಾಸಿಸುತ್ತಿದ್ದುದರಿಂದ ದೇವಪ್ರಯಾಗವೆಂಬ ಹೊಸ ಹೆಸರು ಬಂದು, ಅದೇ ಶಾಶ್ವತವಾಯಿತು. ಹಿಂದೂಗಳಲ್ಲಿ ಚಾಲ್ತಿಯಲ್ಲಿರುವ ದಂತಕಥೆಗಳ ಪ್ರಕಾರ, ರಾಮ ಮತ್ತು ಆತನ ತಂದೆ ದಶರಥ ಮಹಾರಾಜ ಈ ಪ್ರದೇಶದಲ್ಲಿ ತಪಸ್ಸು ಕೈಗೊಂಡಿದ್ದರು.

ಹಿಂದೂಗಳ ಮಹಾಕಾವ್ಯ ಮಹಾಭಾರತದಲ್ಲೂ ಈ ಪ್ರದೇಶದ ಉಲ್ಲೇಖವಿದ್ದು, ಪಾಂಡವರು ಬದರೀನಾಥಕ್ಕೆ ಹೋಗುವ ಮುನ್ನ ಈ ಪ್ರದೇಶದಲ್ಲಿ ಸ್ನಾನ ವಗೈರೆ ಶೌಚ ಪ್ರಕ್ರಿಯೆಗಳನ್ನು ನಡೆಸಿದ್ದರು. ದೇಶದ ಐದು ಪವಿತ್ರ ನದಿ ಸಂಗಮಗಳ ಪೈಕಿ ದೇವಪ್ರಯಾಗವೂ ಒಂದಾಗಿದ್ದು, ಶ್ರದ್ಧಾಭಕ್ತಿಯ ಕೇಂದ್ರವಾಗಿದೆ. ವರ್ಷಂಪ್ರತಿ ದೇಶದ ನಾನಾ ಭಾಗಗಳಿಂದ ಆಸ್ತಿಕರು ಆಗಮಿಸಿ ಪವಿತ್ರ ಸ್ನಾನ ಕೈಗೊಳ್ಳುತ್ತಾರೆ. ಇದನ್ನು ಪಂಚ ಪ್ರಯಾಗ ಎಂದೂ ಕರೆಯುತ್ತಾರೆ.

ರುದ್ರ ಪ್ರಯಾಗ, ನಂದಪ್ರಯಾಗ, ವಿಷ್ಣು ಪ್ರಯಾಗ, ಕರ್ಣ ಪ್ರಯಾಗ ಇನ್ನುಳಿದ ನಾಲ್ಕು ಪ್ರಯಾಗಗಳು. ದೇವಪ್ರಯಾಗ ಪಟ್ಟಣದೊಳಗೆ ಹಲವಾರು ಪುರಾತನ ದೇವಾಲಯಗಳಿವೆ. ಅವುಗಳಲ್ಲಿ ಮುಖ್ಯವಾಗಿ ರಘುನಾಥ ದೇವಾಲಯ, ಚಂದ್ರಬಾಡನಿ ದೇವಾಲಯ, ದಶ್ರತ್ಸಾಹಿಲಾ ದೇವಾಲಯಗಳು ಪ್ರಮುಖವಾಗಿವೆ. ಭಾಗೀರಥಿ ಮತ್ತು ಅಲಕನಂದಾ ನದಿಗಳಿಗೆ ಕಟ್ಟಿದ ತೂಗು ಸೇತುವೆಗಳು ಕೂಡ ಹೆಸರುವಾಸಿಯಾಗಿವೆ.

ದೇವಪ್ರಯಾಗವನ್ನು ರೈಲು, ವಿಮಾನ ಮತ್ತು ರಸ್ತೆ ಮಾರ್ಗಗಳ ಮೂಲಕ ಸುಲಭವಾಗಿ ತಲುಪಬಹುದು. ಡೆಹ್ರಾಡೂನಿನ ಜಾಲಿ ಗ್ರಾಂಟ್ ವಿಮಾನ ನಿಲ್ದಾಣ ಇಲ್ಲಿಗೆ ಹತ್ತಿರದಲ್ಲಿದೆ. ಇಲ್ಲಿಂದ ದೆಹಲಿಗೆ ನಿರಂತರ ವಿಮಾನ ಸೌಲಭ್ಯವಿದೆ. ದೇವಪ್ರಯಾಗದಿಂದ ಈ ನಿಲ್ದಾಣಕ್ಕೆ ಕೇವಲ 94 ಕಿಮೀ ಅಂತರದಲ್ಲಿರುವ ಹರಿದ್ವಾರ ರೈಲು ನಿಲ್ದಾಣದಲ್ಲಿಳಿದೂ ಇಲ್ಲಿಗೆ ಬರಬಹುದು. ಈ ರೈಲು ನಿಲ್ದಾಣ ದೇಶದ ಪ್ರಮುಖ ನಗರಗಳಾದ ನವದೆಹಲಿ, ಲಖ್ನೌ, ಮುಂಬೈ, ಡೆಹ್ರಾಡೂನ್‌ಗಳೊಂದಿಗೆ ಸಂಪರ್ಕ ಕಲ್ಪಿಸುತ್ತದೆ.

ಈ ಪವಿತ್ರ ಕ್ಷೇತ್ರ ವರ್ಷವಿಡೀ ಉಪ ಉಷ್ಣವಲಯ ವಾತಾವರಣ ಹೊಂದಿರುತ್ತದೆ. ಸುಧೀರ್ಘವಾದ ಚಳಿಗಾಲದಲ್ಲಿ ತಾಪಮಾನ ಕನಿಷ್ಠ ಮಟ್ಟಕ್ಕೆ ಇಳಿಯುತ್ತದೆ. ಬೇಸಿಗೆ ಹಿತಕರವಾಗಿದ್ದು, ಪ್ರವಾಸಿರು ಈ ಸಮಯದಲ್ಲಿ ಇಲ್ಲಿಗೆ ಆಗಮಿಸಲು ಸೂಕ್ತವಾಗಿದೆ. ವರ್ಷವಿಡೀ ಇಲ್ಲಿಗೆ ಬರಬಹುದು. 

Please Wait while comments are loading...