ಜನಪ್ರೀಯವಾಗಿ ಟಿ.ನರಸೀಪುರ ಎಂದು ಕರೆಯಲ್ಪಡುವ ತಿರುಮಕೂಡಲ ನರಸೀಪುರವು ಮೈಸೂರು ಜಿಲ್ಲೆಯಲ್ಲಿರುವ ಒಂದು ಪರಮ ಪಾವನ ಕ್ಷೇತ್ರವಾಗಿದೆ. ನರಸೀಪುರ ಎಂಬುದು ಪ್ರದೇಶದ ಹೆಸರಾಗಿದ್ದು ತ್ರಿಮಕೂಟ ಎಂಬ ಸಂಸ್ಕೃತ ಪದದಿಂದ ಕಾಲ ಉರುಳಿದಂತೆ ತಿರುಮಕೂಡಲ ನರಸೀಪುರ ಎಂಬ ಹೆಸರು ಬಂದಿದೆ. ಮೂಲತಃ ತ್ರಿಮಕೂಟ ಎಂಬ ಪದವು ಮೂರು ಅಂಶಗಳ ಸಂಗಮ ಎಂದು ಸೂಚಿಸುತ್ತದೆ.
ಅದರಂತೆ ಇಲ್ಲಿ ಕಾವೇರಿ, ಕಬಿನಿ (ಕಪಿಲಾ) ಹಾಗೂ ಸ್ಫಟಿಕ ಸರೋವರ (ಗುಪ್ತಗಾಮಿನಿ) ಒಂದಕ್ಕೊಂದು ಸಂಗಮಗೊಂಡು ಈ ಕ್ಷೇತ್ರವನ್ನು ಪವಿತ್ರವನ್ನಾಗಿಸಿದೆ. ಇಲ್ಲಿ ಗುಪ್ತಗಾಮಿನಿಯು ರಹಸ್ಯಮಯವಾಗಿದ್ದು ಕಣ್ಣಿಗೆ ಗೋಚರಿಸುವುದಿಲ್ಲ. ಕರ್ನಾಟಕದ ಈ ಒಂದು ಸ್ಥಳದಲ್ಲಿ ಮಾತ್ರವೇ ಈ ರೀತಿಯ ಸಂಗಮವಿದ್ದು ಈ ಕ್ಷೇತ್ರವು ಧಾರ್ಮಿಕವಾಗಿ ಹೆಚ್ಚು ಮಹತ್ವ ಪಡೆದಿದೆ.
ವಿಶೇಷ ಲೇಖನ : ಕರ್ನಾಟಕದ ಸುಂದರ ಕರಾವಳಿ ಮರವಂತೆ

ಗುಂಜ ನರಸಿಂಹಸ್ವಾಮಿ ದೇವಾಲಯ
ಚಿತ್ರಕೃಪೆ: romana klee
ದಕ್ಷಿಣ ಭಾರತದ ಅದರಲ್ಲೂ ವಿಶೇಷವಾಗಿ ಕರ್ನಾಟಕದ ಈ ಒಂದು ಸ್ಥಳದಲ್ಲಿ ಮಾತ್ರವೇ ಕುಂಭ ಮೇಳವು ಪ್ರತಿ ಮೂರು ವರ್ಷಗಳಿಗೊಮ್ಮೆ ಆಯೋಜಿಸಲ್ಪಡುತ್ತದೆ. ಈ ಕ್ಷೇತ್ರದ ಕುರಿತು ಸ್ಕಂದ ಪುರಾಣದಲ್ಲಿ ಉಲ್ಲೇಖಿಸಲ್ಪಟ್ಟಿದ್ದು ತ್ರಿಮಕೂಟ ಕ್ಷೇತ್ರಗಳ ಪೈಕಿ ಇದನ್ನು ಕೂಡ ಒಂದಾಗಿ ಪರಿಗಣಿಸಲಾಗಿದೆ.
ಕ್ಷೇತ್ರಕ್ಕೆ ನರಸೀಪುರ ಎಂಬ ಹೆಸರು ಕೂಡ ಇಲ್ಲಿ ಹರಿದಿರುವ ಕಬಿನಿ ನದಿಯ ಬಲ ದಂಡೆಯ ಮೇಲೆ ನೆಲೆಸಿರುವ ಗುಂಜ ನರಸಿಂಹಸ್ವಾಮಿ ದೇವಾಲಯದಿಂದ ಬಂದುದಾಗಿದೆ ಎನ್ನುತ್ತದೆ ಇಲ್ಲಿನ ಐತಿಹ್ಯ. ಕರ್ನಾಟ್ಕದ ಏಕೈಕ ಕುಂಭ ಮೇಳದ ಸ್ಥಳವಾಗಿರುವುದರಿಂದ ಇದನ್ನು ಪ್ರಯಾಗ್ ನಷ್ಟೆ ಪವಿತ್ರವಾದುದೆಂದು ಭಾವಿಸಲಾಗುತ್ತದೆ. ಇದನ್ನು ಒಮ್ಮೊಮ್ಮೆ ದಕ್ಷಿಣ ಕಾಶಿ ಕ್ಷೇತ್ರ ಎಂಬ ಹೆಸರಿನಿಂದಲೂ ಸಹ ಕರೆಯಲಾಗುತ್ತದೆ.
ವಿಶೇಷ ಲೇಖನ : ಪರಮ ಪವಿತ್ರ ಕಾಶಿ ತೀರ್ಥ ಯಾತ್ರೆ

ತ್ರಿವೇಣಿ ಸಂಗಮ (ಕಾವೇರಿ, ಕಪಿಲಾ ಹಾಗೂ ಗುಪ್ತಗಾಮಿನಿ)
ಚಿತ್ರಕೃಪೆ: romana klee
ಧಾರ್ಮಿಕ ಯಾತ್ರಾ ಸ್ಥಳವಾಗಿ, ಸುಂದರ ಪ್ರೇಕ್ಷಣೀಯ ಸ್ಥಳವಾಗಿ ಪ್ರಸಿದ್ಧಿ ಪಡೆದಿರುವ ಟಿ ನರಸೀಪುರವು ತನ್ನದೆ ಪೌರಾಣಿಕ ಕಥೆಯನ್ನೂ ಸಹ ಹೊಂದಿದೆ. ಅದರ ಪ್ರಕಾರ, ಹಿಂದೆ ಅಗಸ್ತ್ಯ ಮಹಾ ಮುನಿಗಳು ದಕ್ಷಿಣಕ್ಕೆ ಬಂದಾಗ ಈ ಪ್ರದೇಶದ ದಟ್ಟವಾದ ಹಸಿರು ಹಾಗೂ ತ್ರಿವೇಣಿ ಸಂಗಮಗಳನ್ನು (ಕಾವೇರಿ, ಕಪಿಲಾ ಹಾಗೂ ಗುಪ್ತಗಾಮಿನಿ) ನೋಡಿ ಸಂತಸಪಟ್ಟು ಇಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಲು ನಿರ್ಧರಿಸಿದರು.
ಅದಕ್ಕಾಗಿ ಆಂಜನೇಯನನ್ನು ಕರೆದು ಕಾಶಿಯಿಂದ ಶಿವಲಿಂಗವೊಂದನ್ನು ತರಲು ಸೂಚಿಸಿದರು. ನಂತರ ಸಮಯ ಕಳೆದಂತೆ ಹನುಮನು ಹನುಮನು ಮರಳದಾದಾಗ ಪ್ರತಿಷ್ಠಾಪನೆಯ ಶುಭ ಘಳಿಗೆಯು ಸಮಾಪ್ತವಾಗುವುದೆಂದು ಅರಿತು ಅಗಸ್ತ್ಯರೆ ಮರಳಿನಿಂದ ಶಿವಲಿಂಗವೊಂದನ್ನು ಮಾಡಿ ಅದನ್ನೆ ಪ್ರತಿಷ್ಠಾಪಿಸಿದರು.
ವಿಶೇಷ ಲೇಖನ : ವಿವಿಧ ಆಕಾರಗಳ ಅದ್ಭುತ ಶಿವಲಿಂಗಗಳು

ದೇವಸ್ಥಾನದಲ್ಲಿರುವ ವಿಷ್ಣು ಯಜ್ಞ ಕುಂಡ
ಚಿತ್ರಕೃಪೆ: Nvvchar
ಇತ್ತ ಹನುಮನು ಮರಳಿದಾಗ ಆಗಲೇ ಶಿವಲಿಂಗದ ಪ್ರತಿಷ್ಠಾಪನೆಯಾಗಿರುವುದನ್ನು ಕಂಡು ಅವಮಾನಗೊಂಡಿದ್ದಲ್ಲದೆ ಕೋಪಿತನೂ ಆಗಿ ಶಿವಲಿಂಗದ ಮೇಲ್ಭಾಗವನ್ನು ಕತ್ತರಿಸಿದನು. ಅಂದಿನಿಂದ ಕತ್ತರಿಸಲ್ಪಟ್ಟ ಆ ಒಂದು ಸ್ಥಳದಲ್ಲಿ ಜಲ ಮೂಲವೊಂದು ಉದ್ಭವಗೊಂಡು ಗಂಗೆಯ ನೀರೇ ಅಲ್ಲಿರುವುದೆಂದು ನಂಬಲಾಗಿದೆ. ಭಕ್ತಾದಿಗಳಿಗೆ ಇಂದಿಗೂ ಆ ನೀರನ್ನೆ ತೀರ್ಥವನ್ನಾಗಿ ನೀಡಲಾಗುತ್ತದೆ.
ತಲಕಾಡಿನಂತೆ ಟಿ ನರಸೀಪುರವೂ ಸಹ ಪಂಚಲಿಂಗ ಕ್ಷೇತ್ರವಾಗಿದ್ದು ಸೋಮೇಶ್ವರ ಲಿಂಗ, ಮಾರ್ಖಂಡೇಶ್ವರ ಲಿಂಗ, ಹನುಮನು ತಂದಿದ್ದ ಹನುಮಾನ್ ಲಿಂಗ, ಗಾರ್ಗೇಶ್ವರ ಲಿಂಗ ಹಾಗೂ ಅಗಸ್ತ್ಯೇಶ್ವರ ಲಿಂಗವನ್ನು ಇಲ್ಲಿ ಕಾಣಬಹುದಾಗಿದೆ. ಅಲ್ಲದೆ ಇಲ್ಲಿನ ನರಸೀಹಸ್ವಾಮಿ ದೇವಸ್ಥಾನಕ್ಕೂ ಸಹ ರೋಚಕ ಹಿನ್ನಿಲೆಯಿರುವುದನ್ನು ತಿಳಿಯಬಹುದಾಗಿದೆ.
ವಿಶೇಷ ಲೇಖನ : ತಲಕಾಡು ಪಂಚಲಿಂಗೇಶ್ವರ

ಕುಂಭ ಮೇಳದ ಪ್ರತೀಕವಾಗಿ ನೆರವೇರಿಸಲಾಗುತ್ತಿರುವ ಹೋಮ (ಸಂಗ್ರಹ ಚಿತ್ರ)
ಚಿತ್ರಕೃಪೆ: Nvvchar
ಅದರಂತೆ, ಒಂದೊಮ್ಮೆ ಇಲ್ಲಿ ವಾಸವಿದ್ದ ಅಗಸನೊಬ್ಬನ ಕನಸಿನಲ್ಲಿ ದೇವರು ಪ್ರತ್ಯಕ್ಷನಾಗಿ ಆತ ಬಟ್ಟೆ ಒಗೆಯಲು ಬಳಸುತ್ತಿದ್ದ ಕಲ್ಲಿನ ಕೆಳಗೆ ದೇವರ ವಿಗ್ರಹವೊಂದಿದ್ದು ಅದಕ್ಕಾಗಿ ದೇವಾಲಯ ನಿರ್ಮಿಸುವಂತೆ ಆದೇಶಿಸಿದ. ಅಲ್ಲದೆ ಅಲ್ಲಿಯೆ ಹುದುಗಿರುವ ಚಿನ್ನದ ನಾಣ್ಯಗಳನ್ನು ದೇವಾಲಯ ನಿರ್ಮಾಣಕ್ಕಾಗಿ ಬಳಸಲು ಸೂಚಿಸಿದ. ಆಗ ಅಗಸನು ತನ್ನ ಇಚ್ಛೆಯಂತೆ ಕಾಶಿಗೆ ಹೋಗುವ ಕುರಿತು ಭಗವಂತನಲ್ಲಿ ಕೇಳಿಕೊಂಡ.
ಅದಕ್ಕೆ ಸ್ವತಃ ಭಗವಂತನು ಅಗಸನನ್ನು ಕುರಿತು, ಕಾಶಿಗೆ ಭೇಟಿ ನೀಡುವ ಅವಶ್ಯಕತೆಯಿಲ್ಲದಾಗಿಯೂ, ಕಾಶಿಯ ಭೇಟಿಯಿಂದ ಪ್ರಾಪ್ತವಾಗುವ ಪುಣ್ಯವು ಬೆಳೆಯುವ ಗುಲಗಂಜಿ ಬೀಜಗಳಂತೆ (ಬಳ್ಳಿಯಂತೆ) ಅವನಿಗೆ ಆಗಲೆ ಲಭಿಸಿದ್ದಾಗಿಯೂ ಹೇಳುತ್ತಾನೆ. ಹೀಗಾಗಿ ಇಲ್ಲಿ ನೆಲೆಸಿರುವ ನರಸಿಂಹನು ಗುಂಜ ನರಸಿಂಹನಾಗಿ ದರುಶನ ಕೋರಿ ಬರುವ ಭಕ್ತರನ್ನು ಹರಸುತ್ತಿದ್ದಾನೆ ಎಂದು ಹೇಳಲಾಗುತ್ತದೆ.
ವಿಶೇಷ ಲೇಖನ : ಶೀಘ್ರ ಪರಿಹಾರ ಒದಗಿಸುವ ದಸರಿಘಟ್ಟ ಚೌಡೇಶ್ವರಿ

ಗರ್ಭಗೃಹದಲ್ಲಿರುವ ಗುಂಜ ನರಸಿಂಹಸ್ವಾಮಿಯ ಮೂಲ ವಿಗ್ರಹ
ಚಿತ್ರಕೃಪೆ: Nvvchar
ತಲುಪುವ ಬಗೆ:
ಟಿ ನರಸೀಪುರವು ಒಂದು ತಾಲೂಕು ಕೇಂದ್ರವಾಗಿದ್ದು ಮೈಸೂರು ನಗರದ ನೈರುತ್ಯಕ್ಕೆ 30 ಕಿ.ಮೀ ಗಳಷ್ಟು ಹಾಗೂ ಬೆಂಗಳೂರಿನಿಂದ ಸುಮಾರು 130 ಕಿ.ಮೀ ಗಳಷ್ಟು ದೂರದಲ್ಲಿದೆ. ಬೆಂಗಳೂರು ಹಾಗೂ ಮೈಸೂರು ನಗರಗಳಿಂದ ಇಲ್ಲಿಗೆ ತೆರಳಲು ಬಸ್ಸುಗಳು ದೊರೆಯುತ್ತವೆ. ಇದಕ್ಕೆ ಹತ್ತಿರದಲ್ಲಿರುವ ರೈಲು ನಿಲ್ದಾಣಗಳೆಂದರೆ ಒಂದು ಮೈಸೂರು ರೈಲು ನಿಲ್ದಾಣ ಹಾಗೂ ಇನ್ನೊಂದು ನಂಜನಗೂಡು ರೈಲು ನಿಲ್ದಾಣ. ನಂಜನಗೂಡು ನರಸೀಪುರದಿಂದ 30 ಕಿ.ಮೀ ಗಳಷ್ಟು ದೂರದಲ್ಲಿದೆ.


Click it and Unblock the Notifications
















