Search
  • Follow NativePlanet
Share
» »ಭಾರತದ ಕೆಲವು ವಿಚಿತ್ರ ದೇವಸ್ಥಾನಗಳು

ಭಾರತದ ಕೆಲವು ವಿಚಿತ್ರ ದೇವಸ್ಥಾನಗಳು

By Vijay

ದೇವರು, ಧರ್ಮ, ಸತ್ಯ, ಶಾಂತಿ, ಭಕ್ತಿ, ಪ್ರೀತಿಗಳ ಮೇಲೆ ಮೊದಲಿನಿಂದಲೂ ನಂಬಿಕೆಯಿಟ್ಟಿರುವ ದೇಶ ಭಾರತ. ಅಂತೆಯೆ ಸಾಕಷ್ಟು ಗುಡಿ ಗುಂಡಾರಗಳನ್ನು ದೇಶದ ತುಂಬೆಲ್ಲ ಕಾಣಬಹುದು. ಹಿಂದೂಗಳು ದೇವರ ಮೇಲಿಟ್ಟಿರುವ ಭಕ್ತಿಗೆ ಗುರುತಾಗಿರುವ ಈ ದೇವಸ್ಥಾನಗಳು ಇರುವುದು ಸಾವಿರಾರು ಅದರಲ್ಲೂ ವಿಶೇಷವಾಗಿ ಆಕರ್ಷಿಸುವ ದೇಗುಲಗಳು ನೂರಾರು.

ಹೌದು, ಕೆಲವು ದೇವಸ್ಥಾನಗಳು ತಮ್ಮ ವಿಚಿತ್ರ ಆಚರಣೆಗಳಿಂದ ಅಥವಾ ಅವುಗಳಿಗಿರುವ ವಿಚಿತ್ರ ಹಿನ್ನಿಲೆಗಳಿಂದ ಇಲ್ಲವೆ ತಮ್ಮ ವಿಚಿತ್ರವಾದ ರಚನೆಗಳಿಂದ ಪ್ರಖ್ಯಾತಿಗಳಿಸಿರುತ್ತವೆ. ಕೇವಲ ಆಸ್ಥಿಕರಲ್ಲದೆ ನಾಸ್ತಿಕರನ್ನೂ ಸಹ ತಮ್ಮ ವಿಶೇಷತೆಗಳಿಂದ ಆಕರ್ಷಿಸುವ ಈ ದೇವಸ್ಥಾನಗಳು ಒಮ್ಮೆಯಾದರೂ ಭೇಟಿ ನೀಡಯೋಗ್ಯ ಸ್ಥಳಗಳೂ ಹೌದು.

ವಿಶೇಷ ಲೇಖನ : ವಿಚಿತ್ರ ಹಿನ್ನಿಲೆಯಿಂದ ತೊರೆಯಲ್ಪಟ್ಟ ಸ್ಥಳಗಳು

ಇಂತಹ ಕೆಲವು ವಿಸ್ಮಯಕರ ದೇವಸ್ಥಾನಗಳನ್ನು ಇಂದು ನಾವು ಭಾರತದೆಲ್ಲೆಡೆ ಕಾಣಬಹುದಾಗಿದೆ. ಪ್ರವಾಸಿ ದೃಷ್ಟಿಯಿಂದಲೂ ಮಹತ್ವ ಪಡೆದಿರುವ ಈ ದೇವಸ್ಥಾನಗಳು ವಿದೇಶಿ ಪ್ರವಾಸಿಗರನ್ನೂ ಸಹ ತಮ್ಮ ವಿಶೇಷತೆಗಳಿಂದ ತಮ್ಮತ್ತ ಸೆಳೆಯುತ್ತವೆ. ಈ ಲೇಖನದ ಮೂಲಕ ಅಂತಹ ಕೆಲವು ಆಯ್ದ ವಿಚಿತ್ರ ದೇವಸ್ಥಾನಗಳ ಕುರಿತು ನೀವೂ ತಿಳಿಯಿರಿ.

ಕೆಲವು ವಿಚಿತ್ರ ದೇವಸ್ಥಾನಗಳು:

ಕೆಲವು ವಿಚಿತ್ರ ದೇವಸ್ಥಾನಗಳು:

ತನೋತ್ ಮಾತಾ : ರಾಜಸ್ಥಾನ ರಾಜ್ಯದ ಜೈಸಲ್ಮೇರ್ ಜಿಲ್ಲೆಯಲ್ಲಿರುವ ಈ ವಿಸ್ಮಯಕರ ದೇವಾಲಯವು ಭಾರತೀಯ ಸೇನೆಯ ಉಸ್ತುವಾರಿಯಲ್ಲಿದೆ. ಜೈಸಲ್ಮೇರಿನ ಲೊಂಗೇವಾಲಾ ಯುದ್ಧ ಭೂಮಿಯ ಬಳಿ ಈ ದೇವಸ್ಥಾನವಿದ್ದು ಪಾಕಿಸ್ತಾನದ ಗಡಿಗೆ ಬಹು ಹತ್ತಿರದಲ್ಲಿದೆ.

ಚಿತ್ರಕೃಪೆ: Suresh Godara

ಕೆಲವು ವಿಚಿತ್ರ ದೇವಸ್ಥಾನಗಳು:

ಕೆಲವು ವಿಚಿತ್ರ ದೇವಸ್ಥಾನಗಳು:

ಇದರ ವಿಶೇಷತೆ : ಅದು 1965 ರ ಭಾರತ ಪಾಕಿಸ್ತಾನಗಳ ಮಧ್ಯದ ಭೀಕರ ಕದನ. ಎರಡು ಬದಿಗಳಿಂದಲೂ ಸಿಡಿ ಮದ್ದುಗಳ ವಿನಿಮಯ. ಆ ಸಮಯದಲ್ಲಿ ಪಾಕಸ್ತಾನ ಪಾಳಯದಿಂದ ಕೆಲ ಸಿಡಿ ಮದ್ದುಗಳು ಹಾರುತ್ತ ಒಂದು ಜಾಗದಲ್ಲಿ ಬೀಳುತ್ತವೆ. ಆದರೆ ಸಿಡಿಯುವ ಬದಲು "ಟುಸ್" ಆಗಿ ಬಿಡುತ್ತವೆ. ಕಾರಣ ಅವುಗಳು ಬಿದ್ದಿದ್ದು ತನೋತ್ ರಾಯ್ ಮಾತೇಶ್ವರಿಯ ದೇಗುಲದ ಮುಂದೆ. ಹೀಗೆ ಇಲ್ಲಿ ಬಂದು ಬಿದ್ದ "ಬಾಂಬುಗಳು" ತೆಪ್ಪಗಾಗಿ ಬಾಂಬುಗಳಾಗೆ ಉಳಿದು ಹೋದವು.

ಚಿತ್ರಕೃಪೆ: Suresh Godara

ಕೆಲವು ವಿಚಿತ್ರ ದೇವಸ್ಥಾನಗಳು:

ಕೆಲವು ವಿಚಿತ್ರ ದೇವಸ್ಥಾನಗಳು:

ಅಂದಿನಿಂದ ಈ ಮಂದಿರವು ಭಾರತೀಯ ಸೇನೆಯ ಪಾಲಿಗೆ ಧೈರ್ಯದ ಸಂಕೇತವಾಗಿಯೂ ಅಚ್ಚಳಿಯದೆ ಉಳಿದಿದೆ. ಪ್ರವಾಸೋದ್ಯಮದ ದೃಷ್ಟಿಯಿಂದಲೂ ಮಹತ್ವ ಪಡೆದಿರುವ ಈ ದೇವಾಲಯಕ್ಕೆ ಸಾಕಷ್ಟು ಭಕ್ತಾದಿಗಳು, ಪ್ರವಾಸಿಗರು ಕುತೂಹಲದಿಂದ ಭೇಟಿ ನೀಡುತ್ತಾರೆ.

ಚಿತ್ರಕೃಪೆ: राजु सुथार

ಕೆಲವು ವಿಚಿತ್ರ ದೇವಸ್ಥಾನಗಳು:

ಕೆಲವು ವಿಚಿತ್ರ ದೇವಸ್ಥಾನಗಳು:

ಇಂದಿಗೂ ಸಹ ದೇವಾಲಯ ಪ್ರಾಂಗಣದಲ್ಲಿ ವಸ್ತು ಸಂಗ್ರಹಾಲಯವೊಂದಿದ್ದು ಅಲ್ಲಿ ಪಾಕಿಸ್ತಾನ ಎಸೆದಿದ್ದ ಆ ಸಿಡಿಯದೆ ಅಸ್ತಿತ್ವ ಕಳೆದುಕೊಂಡ ಆ "ಬಾಂಬುಗಳ" ನ್ನು ಕಾಣಬಹುದು. ಪ್ರವಾಸಿಗರಿಗೆ ಈ ದೇವಸ್ಥಾನದವರೆಗೂ ಮಾತ್ರವೆ ತೆರಳಲು ಅವಕಾಶವಿದ್ದು ಮುಂದೆ ಭಾರತ-ಪಾಕಿಸ್ತಾನ ಗಡಿ ಬಳಿಗೆ ತೆರಳಲು ಸೇನೆಯಿಂದ ನಿಗದಿತ ಪರವಾನಿಗೆ ಪತ್ರಗಳು ಬೇಕಾಗುತ್ತವೆ. ಜೈಸಲ್ಮೇರಿನಿಂದ ಸುಮಾರು 150 ಕಿ.ಮೀ ಗಳಷ್ಟು ದೂರದಲ್ಲಿ ಈ ತಾಣವಿದ್ದು ಬಾಡಿಗೆ ವಾಹನಗಳು ಹಾಗೂ ಬಸ್ಸುಗಳು ದೊರೆಯುತ್ತವೆ.

ಚಿತ್ರಕೃಪೆ: Suresh Godara

ಕೆಲವು ವಿಚಿತ್ರ ದೇವಸ್ಥಾನಗಳು:

ಕೆಲವು ವಿಚಿತ್ರ ದೇವಸ್ಥಾನಗಳು:

ಜ್ವಾಲಾಜಿ ಮಾತಾ ಮಂದಿರ : ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯ ಜ್ವಾಲಾಮುಖಿ ಎಂಬಲ್ಲಿರುವ ಈ ದೇವಸ್ಥಾನ ಶಕ್ತಿ ಮಾತೆಗೆ ಮುಡಿಪಾದ ದೇವಸ್ಥಾನವಾಗಿದ್ದು ಶಕ್ತಿ ಪೀಠಗಳ ಪೈಕಿ ಒಂದಾಗಿ ಪರಿಗಣಿಸಲ್ಪಟ್ಟಿದೆ. ವಿಶೇಷವೆಂದರೆ ಈ ದೇವಸ್ಥಾನದಲ್ಲಿ ಶಕ್ತಿಯ ವಿಗ್ರಹದ ಬದಲಾಗಿ ಬೆಂಕಿ/ಜ್ವಾಲೆಯನ್ನು ಪೂಜಿಸಲಾಗುತ್ತದೆ. ಹೌದು ಈ ಸ್ಥಳವು ನೈಸರ್ಗಿಕವಾಗಿ ರೂಪಗೊಂಡ ಊರಿಯುವ ಅನಿಲವನ್ನು ಹೊರಸೂಸುವ ಭಾಗದಲ್ಲಿ ನೆಲೆಸಿದೆ. ಈ ರಂಧ್ರದಿಂದ ನೀಳ ವರ್ಣದಲ್ಲಿ ಬೆಂಕಿಯು ನಿರಂತರವಾಗಿ ಊರಿಯುತ್ತಿರುತ್ತದೆ. ಇದನ್ನು ಶಕ್ತಿಯನ್ನಾಗಿ ಪೂಜಿಸಲಾಗುತ್ತದೆ. ಈ ದೇವಸ್ಥಾನ ಜಾಗದ ಕೊಂಚ ಮೇಲ್ಭಾಗದಲ್ಲಿ ಮೂರು ಅಡಿ ವ್ಯಾಸ ಹಾಗೂ ಆರು ಅಡಿ ಆಳ ಹೊಂದಿರುವ ಕುಣಿಯೊಂದಿದ್ದು ಅದರಲ್ಲಿ ಕುದಿಯುತ್ತಿರುವ ನೀರನ್ನು ಕಾಣಬಹುದು. ಸ್ಥಳ ಪುರಾಣದಂತೆ ಹಿಂದೆ ಅಕ್ಬರನು ಈ ದೇವಸ್ಥಾನದಲ್ಲಿರುವ ಜ್ವಾಲೆಯನ್ನು ನಂದಿಸಲು ಶತಾಯಗತಾಯ ಪ್ರಯತ್ನ ಮಾಡಿ ವಿಫಲನಾಗಿ ಕೊನೆಗೆ ಅದಕ್ಕೆ ಗೌರವ ಸೂಚಕವಾಗಿ ಬಂಗಾರವನ್ನು ಕಾಣಿಕೆಯನ್ನಾಗಿ ನೀಡಿದ್ದನಂತೆ. ಆದರೆ ದೇವಿಯು ಅದನ್ನೊಪ್ಪದ ಕಾರಣ ಆ ಬಂಗಾರವು ತಿಳಿಯದ ಯಾವುದೊ ಒಂದು ಲೋಹವಾಗಿ ಮಾರ್ಪಟ್ಟಿತಂತೆ.

ಚಿತ್ರಕೃಪೆ: Nswn03

ಕೆಲವು ವಿಚಿತ್ರ ದೇವಸ್ಥಾನಗಳು:

ಕೆಲವು ವಿಚಿತ್ರ ದೇವಸ್ಥಾನಗಳು:

ಕರ್ಣಿ ಮಾತಾ : ಈ ದೇವಸ್ಥಾನದಲ್ಲಿ ಇಲಿಗಳನ್ನು ಪವಿತ್ರವೆಂದು ಭಾವಿಸಲಾಗಿದ್ದು ಅವುಗಳಿಗೆ ಪ್ರತ್ಯೇಕವಾಗಿ ಪ್ರಸಾದ ನೈವೇದ್ಯಗಳನ್ನು ಅರ್ಪಿಸಲಾಗುತ್ತದೆ. ಭಕ್ತರಿಗಿಂತಲೂ ಅಧಿಕ ಸಂಖ್ಯೆಯಲ್ಲಿ ಇಲಿಗಳು ನಿರ್ಭಯವಾಗಿ ಎಲ್ಲೆಂದರಲ್ಲಿ ಈ ದೇವಸ್ಥಾನದಲ್ಲಿ ಓಡಾಡುತ್ತಿರುವುದನ್ನು ಕಾಣಬಹುದು. ರಸ್ತುತ, 20,000 ಕ್ಕೂ ಅಧಿಕ ಇಲಿಗಳು ಈ ದೇವಸ್ಥಾನದಲ್ಲಿ ನೆಲೆಸಿದ್ದು ಇವುಗಳ ದರುಶನ ಪಡೆಯಲು ದೂರದ ಪಟ್ಟಣಗಳಿಂದಲೂ ಸಹ ಭಕ್ತರು ಇಲ್ಲಿಗೆ ಆಗಮಿಸುತ್ತಿರುತ್ತಾರೆ.

ಚಿತ್ರಕೃಪೆ: Ingrid Truemper

ಕೆಲವು ವಿಚಿತ್ರ ದೇವಸ್ಥಾನಗಳು:

ಕೆಲವು ವಿಚಿತ್ರ ದೇವಸ್ಥಾನಗಳು:

ಈ ದೇವಾಲಯವಿರುವುದು ರಾಜಸ್ಥಾನ ರಾಜ್ಯದ ಬಿಕಾನೇರ್ ಪಟ್ಟಣದಿಂದ ಸುಮಾರು 30 ಕಿ.ಮೀ ದೂರವಿರುವ ದೇಶ್ನೋಕ್ ಎಂಬಲ್ಲಿ. ಇದು ಕರ್ಣಿ ಮಾತಾಗೆ ಮೀಸಲಾದ ದೇವಾಲಯವಾಗಿದ್ದು ಇಲಿಗಳ ದೇವಸ್ಥಾನ ಎಂತಲೂ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Schwiki

ಕೆಲವು ವಿಚಿತ್ರ ದೇವಸ್ಥಾನಗಳು:

ಕೆಲವು ವಿಚಿತ್ರ ದೇವಸ್ಥಾನಗಳು:

ಕಾಮಾಖ್ಯ ದೇವಾಲಯ : ಮಹಿಳೆಯರು ಋತುಚಕ್ರವನ್ನು ಅನುಭವಿಸುವುದು ಸರ್ವೆ ಸಾಮಾನ್ಯ. ಆದರೆ ಪರಮ ಪೂಜ್ಯವಾಗಿ ಪೂಜಿಸುವ ದೇವಿಯ ಋತುಸ್ರಾವ ಆಚರಣೆಯನ್ನು ಆಚರಿಸುವುದನ್ನು ಎಲ್ಲಾದರೂ ಕೇಳಿದ್ದೀರಾ? ಹೌದು ಇದು ಸತ್ಯ. ಈ ಒಂದು ಆಚರಣೆಯನ್ನು "ಅಂಬಾಬುಚಿ ಮೇಳ" ಎಂಬ ಹೆಸರಿನಿಂದ ಕರೆಯಲಾಗುತ್ತದೆ ಹಾಗೂ ಇದು ಅಸ್ಸಾಂ ರಾಜ್ಯದ ಅತಿ ದೊಡ್ಡ ಊರಾದ ಗುವಾಹಾಟಿಯ ಪ್ರಖ್ಯಾತ ಕಾಮಾಖ್ಯ ದೇವಿಯ ದೇವಾಲಯದಲ್ಲಿ ಆಚರಿಸಲ್ಪಡುತ್ತದೆ.

ಚಿತ್ರಕೃಪೆ: Kunal Dalui

ಕೆಲವು ವಿಚಿತ್ರ ದೇವಸ್ಥಾನಗಳು:

ಕೆಲವು ವಿಚಿತ್ರ ದೇವಸ್ಥಾನಗಳು:

ಗುವಾಹಾಟಿ ನಗರದಲ್ಲಿ ಸ್ಥಿತವಿರುವ ಕಾಮಾಖ್ಯ ದೇವಾಲಯವು ಒಂದು ಪುರಾತನ ದೇವಾಲಯವಾಗಿದ್ದು ಈ ದೇವಾಲಯಕ್ಕೆ ಹಿಂದೂ ಧರ್ಮದವರು ಅದರಲ್ಲೂ ಪ್ರಮುಖವಾಗಿ ತಂತ್ರ ವಿದ್ಯೆಗಳನ್ನು ಆಚರಿಸುವವರು ನಡೆದುಕೊಳ್ಳುತ್ತಾರೆ. ಕಾಮಾಖ್ಯ ದೇವಾಲಯದಲ್ಲಿ ಜರುಗುವ ಪ್ರಸಿದ್ಧ ಅಂಬಾಬುಚಿ ಮೇಳವು ಅಸ್ಸಾಮಿನ ತಿಂಗಳಾದ ಅಹಾರ್ ಸಂದರ್ಭ ಅಂದರೆ ಮಳೆಗಾಲದ ಸಮಯ (ಜೂನ್ ಮಧ್ಯದಲ್ಲಿ)ದಲ್ಲಿ ಆಚರಿಸಲ್ಪಡುತ್ತದೆ. ಇದು ಕಾಮಾಖ್ಯ ದೇವಿಯ ವರ್ಷದ ಋತುಮಾಸದ ಆಚರಣೆಯಾಗಿದೆ ಹಾಗೂ ಅತಿ ವೈಭವೋಪೇತವಾಗಿ ಆಚರಿಸಲ್ಪಡುತ್ತದೆ. ಈ ಸಂದರ್ಭದಲ್ಲಿ ಜನರು ಸಾಗರೋಪಾದಿಯಲ್ಲಿ ಈ ದೇಗುಲಕ್ಕೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Vikramjit Kakati

ಕೆಲವು ವಿಚಿತ್ರ ದೇವಸ್ಥಾನಗಳು:

ಕೆಲವು ವಿಚಿತ್ರ ದೇವಸ್ಥಾನಗಳು:

ಕುತೂಹಲಕರ ಸಂಗತಿ ಎಂದರೆ ಈ ದೇವಾಲಯದಲ್ಲಿ ದೇವಿಯ ವಿಗ್ರಹವಿಲ್ಲ ಬದಲಾಗಿ "ಯೋನಿ" ಆಕಾರದ ಒಂದು ಕಲ್ಲಿನ ರಚನೆಯಿದ್ದು ಅದರ ಮೇಲೆ ನೈಸರ್ಗಿಕವಾಗಿ ಉದ್ಭವವಾಗಿರುವಂತಹ ನೀರಿನ ಚಿಲುಮೆಯೊಂದು ಹರಿಯುವುದನ್ನು ಕಾಣಬಹುದು. ಕಲಿಕಾ ಪುರಾಣದ ಪ್ರಕಾರ, ಈ ದೇವಾಲಯವು ಶಿವನು ಸತಿಯ ಪ್ರಾಣ ತ್ಯಾಗದ ನಂತರ ಆಕೆಯ ದೇಹವನ್ನು ಎತ್ತಿಕೊಂಡು ಅಸಮಾಧಾನದಿಂದ ನೃತ್ಯ ಮಾಡುತ್ತಿರುವ ಸಂದರ್ಭದಲ್ಲಿ ಆಕೆಯ ಯೋನಿ ಭಾಗವು ಬಿದ್ದಿದ್ದ ಸ್ಥಳವನ್ನು ಸೂಚಿಸುತ್ತದೆ. ದೇವಿ ಭಾಗವತದಲ್ಲಿ ಉಲ್ಲೇಖಿಸಲಾದ 108 ಶಕ್ತಿ ಪೀಠಗಳಲ್ಲಿ ಸತಿಯ ಈ ದೇಹದ ಭಾಗದ ಕುರಿತು ದಾಖಲಾಗಿಲ್ಲವಾದರೂ ನಂತರದ ಅನುಬಂಧಗಳಲ್ಲಿ ಕಮಾಖ್ಯ ದೇವಿಯ ಕುರಿತು ಉಲ್ಲೇಖಿಸಲಾಗಿದೆ.

ಕೆಲವು ವಿಚಿತ್ರ ದೇವಸ್ಥಾನಗಳು:

ಕೆಲವು ವಿಚಿತ್ರ ದೇವಸ್ಥಾನಗಳು:

ಯಾಗಂಟಿ ಉಮಾ ಮಹೇಶ್ವರ ದೇವಸ್ಥಾನ : ಆಂಧ್ರಪ್ರದೇಶದ ಕುರ್ನೂಲ್ ಜಿಲ್ಲೆಯ ಯಾಗಂಟಿ ಪಟ್ಟಣದಲ್ಲಿರುವ ಉಮಾ ಮಹೇಶ್ವರ ದೇವಸ್ಥಾನವು ಪ್ರದೇಶದ ಒಂದು ಉತ್ಕೃಷ್ಟ ಹಾಗೂ ಅಷ್ಟೆ ಕೌತುಕಮಯ ತಾಣವಾಗಿದೆ. ಇಲ್ಲಿ ಶಿವ, ಪಾರ್ವತಿ ಹಾಗೂ ನಂದಿಯನ್ನು ಪ್ರಮುಖವಾಗಿ ಪೂಜಿಸಲಾಗುತ್ತದೆ.

ಕೆಲವು ವಿಚಿತ್ರ ದೇವಸ್ಥಾನಗಳು:

ಕೆಲವು ವಿಚಿತ್ರ ದೇವಸ್ಥಾನಗಳು:

ಇಲ್ಲಿರುವ ನಂದಿಯು ಪ್ರತಿ ವರ್ಷ ಬೆಳೆಯುತ್ತಲಿದೆ ಎಂದು ನಂಬಲಾಗಿದೆ. ಅಲ್ಲದೆ ದೇವಾಲಯ ಪ್ರಾಂಗಣದಲ್ಲಿ ಪುಷ್ಕರಿಣಿಯೊಂದಿದ್ದು ಅದಕ್ಕೆ ನೀರು ಪಕ್ಕದ ಬೆಟ್ಟಗುಡ್ಡಗಳಿಂದ ಹರಿದು ಬಂದು ನಂದಿಯ ಬಾಯಿಯ ಮುಖಾಂತರ ಬೀಳುತ್ತಿರುತ್ತದೆ. ಪೋತುಲುರಿ ವೀರ ಬ್ರಹ್ಮೇಂದ್ರಸ್ವಾಮಿಯವರ ಪ್ರಕಾರ, ಯಾವಾಗ ಈ ನಂದಿಯು ಜೀವ ಪಡೆದು ಒದರುತ್ತದೊ ಅಂದಿಗೆ ಕಲಿಯುಗದ ಅಂತ್ಯವಂತೆ.

ಚಿತ್ರಕೃಪೆ: Just4santosh

ಕೆಲವು ವಿಚಿತ್ರ ದೇವಸ್ಥಾನಗಳು:

ಕೆಲವು ವಿಚಿತ್ರ ದೇವಸ್ಥಾನಗಳು:

ಅಮರರಾಮ ದೇವಾಲಯ : ಆಂಧ್ರದ ಗುಂಟೂರು ನಗರ ಬಳಿಯಿರುವ ಅಮರಾವತಿ ಎಂಬಲ್ಲಿರುವ, ಶಿವನಿಗೆ ಮುಡಿಪಾಗಿರುವ ಈ ದೇವಸ್ಥಾನವು ಪಂಚರಾಮ ಕ್ಷೇತ್ರಗಳ ಪೈಕಿಯೂ ಒಂದಾಗಿದೆ. ಶ್ರೀರಾಮನಿಂದ ಪೂಜಿಸಲ್ಪಟ್ಟ ಇಲ್ಲಿನ ಅಮರೇಶ್ವರ ಸ್ವಾಮಿ ಶಿವಲಿಂಗವು ದೊಡ್ಡದಾಗಿದ್ದು ಅರ್ಚಕರು ಕಟ್ಟೆಯ ಮೇಲೇರಿ ಶಿವಲಿಂಗಕ್ಕೆ ಪೂಜೆ ಸಲ್ಲಿಸುತ್ತಾರೆ. ಈ ದೇವಸ್ಥಾನದ್ ಕುರಿತು ಅಚ್ಚರಿಯ ವಿಷಯವೆಂದರೆ ಈ ಶಿವಲಿಂಗವು ಹಿಂದೆ ದಿನೆ ದಿನೆ ಬೆಳೆಯುತ್ತಿತ್ತಂತೆ. ಇದರ ಬೆಳೆಯುವಿಕೆಯನ್ನು ತಡೆಯುವ ಉದ್ದೇಶದಿಂದ ಲಿಂಗದ ಮೇಲ್ಭಾಗದಲ್ಲಿ ಮಳೆಯೊಂದನ್ನು ಹೊಡಿಯಲಾಯಿತಂತೆ. ಇದರಿಂದಾಗಿ ರಕ್ತವು ಚಿಮ್ಮುತ್ತ ಇಂದಿಗೂ ಆ ಮೇಲ್ಭಾಗವು ಕೆಂಪು ರಕ್ತದ ಕಲೆಯಿಂದ ಕೂಡಿರುವುದನ್ನು ಭೇಟಿ ನೀಡಿದಾಗ ಪ್ರವಾಸಿಗರು ಗಮನಿಸಬಹುದು.

ಚಿತ್ರಕೃಪೆ: RameshSharma

ಕೆಲವು ವಿಚಿತ್ರ ದೇವಸ್ಥಾನಗಳು:

ಕೆಲವು ವಿಚಿತ್ರ ದೇವಸ್ಥಾನಗಳು:

ವಿಠ್ಠಲ ದೇವಸ್ಥಾನ : ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿರುವ ಹಂಪಿಯು ಒಂದು ಜಗದ್ವಿಖ್ಯಾತ ಪ್ರವಾಸಿ ತಾಣವಾಗಿದೆ, ಕಾರಣ ಹಿಂದೆ ಇದು ವಿಜಯನಗರ ಎಂಬ ವೈಭವದ ಸಾಮ್ರಾಜ್ಯವಾಗಿ ಮೆರೆದಿತ್ತು ಹಾಗೂ ಅತ್ಯದ್ಭುತ ಎನ್ನಬಹುದಾದ ಶಿಲ್ಪಕಲೆಗಳನ್ನು ಹೊಂದಿರುವ ರಚನೆಗಳಿಂದ ಸಂಪದ್ಭರಿತವಾಗಿತ್ತು. ಇಂದಿಗೂ ಹಂಪಿಯ ಶಿಲ್ಪಕಲೆಗಳು ರೋಮಾಂಚನವನ್ನುಂಟು ಮಾಡುತ್ತದೆ ಎಂದರೆ ತಪ್ಪಾಗಲಾರದು. ಹಂಪಿಯ ವಿಜಯನಗರ ಎಂದು ಕರೆಯಲಾಗುತ್ತಿದ್ದ ಸ್ಥಳದಲ್ಲಿ ಇಂದು ನೂರಾರು ಪುರಾತನ ಭವ್ಯ ರಚನೆಗಳನ್ನು ಕಾಣಬಹುದು. ಆ ರಚನೆಗಳ ಪೈಕಿ ಒಂದಾಗಿರುವ ವಿಠ್ಠಲ ಮಂದಿರವು ಇಂದಿಗೂ ಒಂದು ಕೌತುಕಮಯ ತಾಣವಾಗಿದೆ. ಕಾರಣ ಇದಕ್ಕಿರುವ ಸಂಗೀತ ನಾದ ಹೊರಡಿಸುವ ಶಕ್ತಿ. ಹೌದು ಇದರ ವಿಶಿಷ್ಟ ಖಂಬಗಳನ್ನು ಬಡಿದಾಗ ಸುಶ್ರಾವ್ಯವಾದ ಸಂಗೀತದ ಅಲೆಗಳು ಹೊರಡುವುದನ್ನು ಕೇಳಬಹುದು.

ಚಿತ್ರಕೃಪೆ: Dineshkannambadi

ಕೆಲವು ವಿಚಿತ್ರ ದೇವಸ್ಥಾನಗಳು:

ಕೆಲವು ವಿಚಿತ್ರ ದೇವಸ್ಥಾನಗಳು:

ಅಂಬ ಸಾಹಿಬ್ ಗುರುದ್ವಾರ : ಪಂಜಾಬ್ ರಾಜ್ಯದ ಮೋಹಾಲಿ ನಗರದಲ್ಲಿರುವ ಅಂಬ ಸಾಹಿಬ್ ಗುರುದ್ವಾರವು ಒಂದು ಪ್ರಮುಖ ಸಿಖ್ ಗುರುದ್ವಾರವಾಗಿದ್ದು ಭಕ್ತರಿಂದ ಭೇಟಿ ನೀಡಲ್ಪಡುವ ಕೇಂದ್ರವಾಗಿದೆ. ಅಚ್ಚರಿಯ ಸಂಗತಿಯೆಂದರೆ ಈ ಗುರುದ್ವಾರದಲ್ಲಿ ಒಂದು ಮಾವಿನ ಮರವಿದ್ದು ಪ್ರಕೃತಿ ನಿಯಮಕ್ಕೆ ವಿರುದ್ಧ ಎಂಬಂತೆ ವರ್ಷಪೂರ್ತಿ ಮಾವುಗಳು ಇಲ್ಲಿ ಬೆಳೆಯುತ್ತವೆ. ಹಿಂದೆ ಸಿಖ್ ಗುರುಗಳಾದ ಶ್ರೀ ಗುರು ಹರ್ ರಾಯ್ ಸಾಹಿಬ್ ಜೀ ರವರು ಇಲ್ಲಿಗೆ ಭೇಟಿ ನೀಡಿದ್ದಾಗ ಭಕ್ತರೊಬ್ಬರನ್ನು ಆಶೀರ್ವದಿಸಿ ಇಲ್ಲಿನ ಮಾವಿನ ಮರ ಯಾವಾಗಲೂ ಫಸಲು ನೀಡುವಂತೆ ಹರಸಿದ್ದರಂತೆ.

ಚಿತ್ರಕೃಪೆ: Amanpreet7

ಕೆಲವು ವಿಚಿತ್ರ ದೇವಸ್ಥಾನಗಳು:

ಕೆಲವು ವಿಚಿತ್ರ ದೇವಸ್ಥಾನಗಳು:

ವೀರಭದ್ರ ದೇವಸ್ಥಾನ : "ಲೇಪಾಕ್ಷಿ" ಆಂಧ್ರಪ್ರದೇಶ ರಾಜ್ಯದ ಅನಂತಪುರಜಿಲ್ಲೆಯಲ್ಲಿರುವ ಒಂದು ಐತಿಹಾಸಿಕ ಹಾಗೂ ಚಾರಿತ್ರಿಕ ಪಟ್ಟಣವಾಗಿದೆ. ಬೆಂಗಳೂರಿನಿಂದ ಸುಮಾರು125 ಕಿ.ಮೀ ಗಳಷ್ಟು ದೂರದಲ್ಲಿದೆ. ಈ ದೇವಸ್ಥಾನವು ವಿಜಯನಗರ ಶೈಲಿಯ ಅತ್ಯದ್ಭುತ ಶಿಲ್ಪ ಕಲೆಯ ಕೆತ್ತನೆಗೆ ಬಲು ಹೆಸರುವಾಸಿಯಾಗಿದೆ. ನೀವು ಶಿಲ್ಪ ಪ್ರಿಯ ಪ್ರವಾಸಿಗರಾಗಿದ್ದಲ್ಲಿ ಈ ದೇವಸ್ಥಾನಕ್ಕೊಮ್ಮೆಯಾದರೂ ಭೇಟಿ ನೀಡಿ ನಿಮ್ಮ ಮನವನ್ನು ತೃಪ್ತಿಪಡಿಸಿಕೊಳ್ಳಲೇಬೇಕು. ಅಲ್ಲದೆ ಇಲ್ಲಿನ ಒಂದು ಅಚ್ಚರಿಯೆಂದರೆ ಯಾವುದೆ ಆಧಾರವಿಲ್ಲದೆ, ನೆಲಕ್ಕೆ ತಾಗದೆ ನಿಂತಿರುವ ಖಂಬಗಳು. ಇವು ಯಾವ ರೀತಿ ನಿಲ್ಲಿಸಲ್ಪಟ್ಟಿವೆಯೊ ಎಂಬುದು ಇನ್ನೂ ಕುತೂಹಲಕರವಾಗಿ ಉಳಿದು ಹೋಗಿದೆ.

ಚಿತ್ರಕೃಪೆ: ಚಿತ್ರಕೃಪೆ: Nagesh Kamath

ಕೆಲವು ವಿಚಿತ್ರ ದೇವಸ್ಥಾನಗಳು:

ಕೆಲವು ವಿಚಿತ್ರ ದೇವಸ್ಥಾನಗಳು:

ಶ್ರೀ ಕುರ್ಮಮ್ ದೇವಸ್ಥಾನ : ಆಂಧ್ರಪ್ರದೇಶದ ಶ್ರೀಕಾಕುಲಂ ಬಳಿಯಿರುವ ಕುರ್ಮಮ್ ಎಂಬ ಹಳ್ಳಿಯ ಶ್ರೀ ಕುರ್ಮಮ್ ದೇವಸ್ಥಾನವು ಭಗವಾನ್ ವಿಷ್ಣುವಿನ ಕುರ್ಮಾವತಾರಕ್ಕೆ ಮುಡಿಪಾದ ವಿಶಿಷ್ಟ ದೇವಾಲಯವಾಗಿದೆ. ಈ ದೇವಸ್ಥಾನದಲ್ಲಿ ಕುರ್ಮಾವತಾರದ ಸಂಕೇತವಾಗಿ ಯಾವುದೆ ಮಾನವ ನಿರ್ಮಿತ ವಿಗ್ರಹಗಳಿರದೆ ಬದಲಾಗಿ ನಿಜವಾದ ಆಮೆಯ ಪಳೆಯುಳಿಕೆಯಿರುವುದು ವಿಶೇಷ. ಅಲ್ಲದೆ ಕುರ್ಮ ರೂಪದ ಏಕೈಕ ದೇವಾಲಯ ಇದಾಗಿದ್ದು ದೇಗುಲದ ಮುಂದೆ ಹಿಂದೆ ಎರಡು ದಿಕ್ಕುಗಳಲ್ಲಿ ಧ್ವಜಸ್ಥಂಬಗಳಿರುವ ಕೆಲವೆ ಕೆಲವು ದೇವಾಲಯಗಳ ಪೈಕಿ ಇದು ಒಂದಾಗಿದೆ. ನಂಬಿಕೆಯೆಂತೆ ಇಲ್ಲಿನ ಪ್ರದಕ್ಷಿಣೆ ಸ್ಥಳದಲ್ಲಿ ಪ್ರದಕ್ಷಿಣೆ ಹಾಕುವಾಗ ಒಂದು ಧನಾತ್ಮಕ ಆಯಾಸ್ಕಾಂತೀಯ ಶಕ್ತಿಯು ಪಾದಗಳ ಮೂಲಕ ದೇಹದಲ್ಲಿ ಹರಿಯುತ್ತದೆನ್ನಲಾಗಿದೆ.

ಚಿತ್ರಕೃಪೆ: Seshagirirao

ಕೆಲವು ವಿಚಿತ್ರ ದೇವಸ್ಥಾನಗಳು:

ಕೆಲವು ವಿಚಿತ್ರ ದೇವಸ್ಥಾನಗಳು:

ಸಹಸ್ರಕಾಶಿ ಮೇರು ದೇವಾಲಯ : ಆಂಧ್ರದ ವೈಜಾಗ್ (ವಿಶಾಖಾಪಟ್ಟಣಂ) ನಲ್ಲಿರುವ ದೇವಿಪುರಂ ಎಂಬಲ್ಲಿ ಈ ವಿಶಿಷ್ಟ ದೇವಾಲಯವಿದೆ. ಮೇರು ಯಂತ್ರದ (ಶ್ರೀಚಕ್ರ ) ಹಾಗೆ ಮೂರು ಅಂತಸ್ತುಗಳಲ್ಲಿ ನಿರ್ಮಿಸಲಾಗಿರುವ ಈ ದೇವಾಲಯವು ಶ್ರೀ ವಿದ್ಯಾ ಉಪಾಸನಾ ಕೇಂದ್ರವಾಗಿದೆ. ಅಂದರೆ ತಂತ್ರ ವಿದ್ಯೆಯ ಪುರಾತನ ಹಾಗೂ ಸೂಕ್ಷ್ಮ ರೂಪದ ಪೂಜೆಯ ಕೇಂದ್ರ. ಮುಖ್ಯ ದೇವಾಲಯದ ಪಕ್ಕದಲ್ಲಿ ಕಾಮಾಖ್ಯ ಪೀಠ ಹಾಗೂ ಶಿವಾಲಯಗಳಿವೆ. ಕಳೆದ ಒಂದು ದಶಕದಿಂದ ಇದು ಹೆಚ್ಚಿನ ಜನಪ್ರೀಯತೆಗಳಿಸಿದೆ. ದೇವಸ್ಥಾನದ ಪ್ರದಕ್ಷಿಣೆ ಮಾರ್ಗದಲ್ಲಿ ಶಕ್ತಿ ಅಥವಾ ಯೋಗಿನಿಯರ ಬೆತ್ತಲೆ ವಿಗ್ರಹಗಳಿದ್ದು, ನವವರ್ಣ ಪೂಜೆಗೆ ಸಂಬಂಧಿಸಿದಂತೆ ಪ್ರತಿಷ್ಠಾಪಿಸಲಾಗಿದೆ. ವಿಶೇಷವೆಂದರೆ ಲಿಂಗ, ಜಾತಿ, ಧರ್ಮ ಭೇದವಿಲ್ಲದೆ ಎಲ್ಲರೂ ಇಲ್ಲಿ ಪೂಜೆ ಗೈಯಬಹೌದಾಗಿದೆ. ಈ ರೀತಿಯ ವಿಶೇಷತೆಯನ್ನು ಅಸ್ಸಾಂನ ಗೌಹಾಟಿಯಲ್ಲಿರುವ ಪ್ರಖ್ಯಾತ ತಾಂತ್ರಿಕ ಕ್ಷೇತ್ರವಾದ ಕಾಮಾಖ್ಯದಲ್ಲಿ ಮಾತ್ರವೆ ಕಾಣಬಹುದು.

ಚಿತ್ರಕೃಪೆ: Devi bhakta

ಕೆಲವು ವಿಚಿತ್ರ ದೇವಸ್ಥಾನಗಳು:

ಕೆಲವು ವಿಚಿತ್ರ ದೇವಸ್ಥಾನಗಳು:

ಸಂಗಮೇಶ್ವರ ದೇವಾಲಯ : ತಮಿಳುನಾಡಿನ ಈರೋಡ್ ಜಿಲ್ಲೆಯ ಭವಾನಿ ಎಂಬಲ್ಲಿರುವ ಸಂಗಮೇಶ್ವರ ಆಲಯವು ಸ್ಥಿತವಿದೆ. ಭವಾನಿ, ಕಾವೇರಿ ಹಾಗೂ ಭೌತಿಕವಾಗಿ ಕಾಣಲಾಗದ ಅಮೃತ ನದಿಗಳ ಸಂಗಮದಲ್ಲಿ ಈ ದೇವಾಲಯವಿದ್ದು ಶಿವನಿಗೆ ಮುಡಿಪಾಗಿದೆ. ಈ ಸ್ಥಳದಲ್ಲಿರುವ ಬಾರಿ/ಯಲಚಿ ಹಣ್ಣಿನ ಗಿಡದಲ್ಲಿ ವರ್ಷಪೂರ್ತಿ ಹಣ್ಣುಗಳು ಬೆಳೆಯುತ್ತವೆ ಹಾಗೂ ಅವುಗಳನ್ನು ಇಂದಿಗೂ ಭಗವಂತನ ಪೂಜೆಗೆ ಬಳಸಲಾಗುತ್ತದೆ. ಅಲ್ಲದೆ ಹಿಂದೆ ಬ್ರಿಟೀಷ್ ಆಡಳಿತವಿದ್ದ ಸಮಯದಲ್ಲಿ ಒಮ್ಮೆ ಕೊಯಮತ್ತೂರಿನ ಕಲೆಕ್ಟರ್ ಆಗಿದ್ದ ವಿಲಿಯಮ್ ಕೆರೊ ಎಂಬಾತನು ಭವಾನಿಯ ವಸತಿ ಗೃಹವೊಂದರಲ್ಲಿ ಒಂದು ರಾತ್ರಿ ತಂಗಿದ್ದನು. ರಾತ್ರಿ ಮಲಗಿದ್ದಾಗ ಇದ್ದಕ್ಕಿದ್ದಂತೆ ಒಂದು ಹುಡುಗಿಯ ಕೂಗು ಕೇಳಿಸಿದಂತಾಗಿ ಹೊರಬಂದನು. ಹೊರಬಂದುದೆ ತಡ, ಆತ ತಂಗಿದ್ದ ಕಟ್ಟಡವು ಕುಸಿದು ಬಿದ್ದು ನೆಲಸಮವಾಯಿತು. ಅನಂತರ ಆ ಹುಡುಗಿಯೂ ಪತ್ತೆಯಾಗಲಿಲ್ಲ. ಕೊನೆಗೆ ದೇವಸ್ಥಾನದ ಅರ್ಚಕರ ಪ್ರಕಾರ, ಆ ಹುಡುಗಿಯಾಗಿದ್ದು ಸ್ವತಃ ಭವಾನಿಯಾಗಿದ್ದು ಆತನನ್ನು ರಕ್ಷಿಸಿದಳೆಂದು ಹೇಳಿದನು. ಇದಕ್ಕೆ ಗೌರವವಾಗಿ ಆತ ದೇವಸ್ಥಾನದ ವೇದನಾಯಕಿಯ ದೇಗುಲದ ಮುಂದೆ ಮೂರು ರಂಧ್ರ ಮಾಡಿಸಿ ಪ್ರಕಾಶಿತಗೊಳಿಸಿ ಪ್ರಾರ್ಥನೆ ಮಾಡಲು ಅನುವು ಮಾಡಿಕೊಟ್ಟು ತನ್ನ ಹಸ್ತಾಕ್ಷರವುಳ್ಳ ಸಹಿ ಹಾಗೂ ದಿನಾಂಕದ 11/01/1804 ಅಚ್ಚನ್ನು ಬಂಗಾರದ ಪ್ಲೇಟೊಂದರ ಮೇಲೆ ಹಾಕಿಸಿ ದಾನವಾಗಿ ನೀಡಿದ. ಇಂದಿಗೂ ಅದನ್ನು ಇಲ್ಲಿ ಕಾಣಬಹುದಾಗಿದೆ. ಭವಾನಿಯ ಸಂಗಮ ಸ್ಥಳ.

ಚಿತ್ರಕೃಪೆ: Rsrikanth05

ಕೆಲವು ವಿಚಿತ್ರ ದೇವಸ್ಥಾನಗಳು:

ಕೆಲವು ವಿಚಿತ್ರ ದೇವಸ್ಥಾನಗಳು:

ಉಮಾನಂದಾ ದೇವಾಲಯ : ಇದರ ವಿಶೇಷತೆ ಜಗತ್ತಿನ ಏಕೈಕ ನದಿಯ ಮಧ್ಯದ ಜನವಸತಿಯಿರುವ ಚಿಕ್ಕ ನಡುಗಡ್ಡೆಯಲ್ಲಿರುವ ಶಿವನ ದೇವಾಲಯ. ಹೌದು ಅಸ್ಸಾಮಿನ ಗೌಹಾಟಿಯ ಕಚಾರಿ ಘಾಟ್ ಪ್ರದೇಶದ ಬಳಿ ಹರಿದಿರುವ ಬ್ರಹ್ಮಪುತ್ರ ನದಿಯಲ್ಲಿರುವ ಚಿಕ್ಕ ನಡುಗಡ್ಡೆಯಾದ ಪಿಕಾಕ್ ಐಲ್ಯಾಂಡ್ ಎಂಬಲ್ಲಿ ಈ ಸುಂದರ ಶಿವ ದೇವಾಲಯವಿದೆ. ಈ ನಡುಗಡ್ಡೆಗೆ ತೆರಳಿ ದೇವಾಲಯ ವೀಕ್ಷಿಸಲು ನದಿ ತಟದಿಂದ ಸ್ಥಳೀಯ ದೋಣಿಗಳು ಲಭ್ಯವಿದೆ.

ಕೆಲವು ವಿಚಿತ್ರ ದೇವಸ್ಥಾನಗಳು:

ಕೆಲವು ವಿಚಿತ್ರ ದೇವಸ್ಥಾನಗಳು:

ಉಗ್ರ ತಾರಾ ದೇವಾಲಯ : ತಾಂತ್ರಿಕ ಶಕ್ತಿಗೆ ಮೀಸಲಾದ ಶಕ್ತಿ (ಸತಿ ದೇವಿ) ದೇವಿಯ ದೇವಾಲಯ ಇದಾಗಿದೆ. ಸ್ಥಳ ಪುರಾಣದ ಪ್ರಕಾರ, ಸತಿಯ ಮೃತ ದೇಹವನ್ನು ಶಿವನು ಕೈಗಳಿಂದ ಹಿಡಿದು ವೇದನೆಯಲ್ಲಿ ನರ್ತಿಸುತ್ತಿದ್ದಾಗ ಅವಳ ದೇಹದ ಒಮ್ದೊಂದು ಭಾಗಗಳು ಒಂದೊಂದು ದಿಕ್ಕಿನಲ್ಲಿ ಬೀಳುತ್ತಿದ್ದಾಗ ಈ ಸ್ಥಳದಲ್ಲಿ ಅವಳ ಹೊಕ್ಕಳ ಭಾಗ ಬಿದ್ದಿತು. ದೇವಾಲಯದ ಗರ್ಭಗೃಹದಲ್ಲಿ ಯಾವುದೆ ಮೂರ್ತಿ-ವಿಗ್ರಗಳಿಲ್ಲ, ಬದಲಾಗಿ ಒಂದು ಕುಳಿಯೊಂದಿದ್ದು ಅದು ನೀರಿನಿಂದ ತುಂಬಿರುತ್ತದೆ. ಅದನ್ನೆ ಮೂಲ ದೇವಿಯನ್ನಾಗಿ ಆಚರಿಸಲಾಗುತ್ತದೆ. ದೇವಿಯು ತಾಂತ್ರಿಕ ಶಕ್ತಿಯ ಅಧಿ ದೇವತೆಯಾಗಿದ್ದು ಮದ್ಯ, ಮಾಂಸ ಖಾದ್ಯಗಳ ಪ್ರಿಯಳಾಗಿದ್ದಾಳೆಂದು ನಂಬಲಾಗಿದೆ. ಈ ದೇವಾಲಯವು ಗೌಹಾಟಿ ನಗರದ ಹೃದಯ ಭಾಗದಲ್ಲಿ ಜೋರ್ಪುಖುರಿ ಎಂಬ ಜೋಡಿ ಕಲ್ಯಾಣಿಗಳಿರುವ ಉಜಾನ್ ಬಜಾರ್ ಪ್ರದೇಶದಲ್ಲಿ ಸ್ಥಿತವಿದೆ.

ಚಿತ್ರಕೃಪೆ: dkonwar

ಕೆಲವು ವಿಚಿತ್ರ ದೇವಸ್ಥಾನಗಳು:

ಕೆಲವು ವಿಚಿತ್ರ ದೇವಸ್ಥಾನಗಳು:

ಕೇತಕೇಶ್ವರ ದೇವಾಲಯ : ಅಸ್ಸಾಮಿನ ತೇಜಪುರ್ ಪಟ್ಟಣದಲ್ಲಿ ಈ ದೇವಾಲಯವಿದೆ. ಇದರ ವಿಶೇಷತೆ ಎಂದರೆ ಜಗತ್ತಿನ ಅತಿ ಎತ್ತರದ ಶಿವಲಿಂಗಗಳ ಪೈಕಿ ಇದೂ ಒಂದು. ಸ್ಥಳ ಪುರಾಣದಂತೆ ಶಿವಲಿಂಗವು ಒಂದೆಡೆಯಿದ್ದರೆ ಅದರ ಅಡಿಯು ಕೆಲವು ಮೀಟರುಗಳ ದೂರದಲ್ಲಿ ಮತ್ತೊಂದೆಡೆಯಿದೆ. ಭೂಕಂಪನವುಂಟಾದ ಒಂದು ಸಂದರ್ಭದಲ್ಲಿ ಪ್ರಸ್ತುತ ಶಿವಲಿಂಗ ಬಾಗಿದ್ದು ಅದೇ ರೀತಿಯಲ್ಲಿ ಇದನ್ನು ಪೂಜಿಸಲಾಗುತ್ತದೆ.

ಚಿತ್ರಕೃಪೆ: Bishnu Saikia

ಕೆಲವು ವಿಚಿತ್ರ ದೇವಸ್ಥಾನಗಳು:

ಕೆಲವು ವಿಚಿತ್ರ ದೇವಸ್ಥಾನಗಳು:

ಮಹಾ ಭೈರವ ದೇವಸ್ಥಾನ : ಅಸ್ಸಾಮಿನ ತೇಜಪುರ್ ಪಟ್ಟಣದ ಉತ್ತರ ದಿಕ್ಕಿನಲ್ಲಿರುವ ಗುಡ್ಡವೊಂದರ ಮೇಲೆ ಶಿವನಿಗೆ ಮುಡಿಪಾದ ಈ ದೇವಸ್ಥಾನವಿದೆ. ವಿಶೇಷವೆಂದರೆ, ಇಲ್ಲಿನ ಸ್ಥಳೀಯರು ನಂಬುವಂತೆ ಶಿವಲಿಂಗವು ಪ್ರತಿ ವರ್ಷ ಬೆಳೆಯುತ್ತಲಿದೆಯಂತೆ. ಅಲ್ಲದೆ ಶಿವರಾತ್ರಿ ಸಂದರ್ಭದಲ್ಲಿ ಜರುಗುವ ಉತ್ಸವವು ಇಲ್ಲಿ ವಿಶಿಷ್ಟವಾಗಿರುತ್ತದೆ. ಈ ಸಂದರ್ಭದಲ್ಲಿ ಭಾಂಗ್ ನಿಂದ ತಯಾರಿಸಲಾದ ಉಂಡೆಗಳನ್ನು ಪ್ರಸಾದ ರೂಪವಾಗಿ ಭಕ್ತರಿಗೆ ಮಾರಲಾಗುತ್ತದೆ. ಭಾಂಗ್ ಒಂದು ಮತ್ತೇರಿಸುವ ವಸ್ತುವಾಗಿದೆ.

ಚಿತ್ರಕೃಪೆ: Bishnu Saikia

ಕೆಲವು ವಿಚಿತ್ರ ದೇವಸ್ಥಾನಗಳು:

ಕೆಲವು ವಿಚಿತ್ರ ದೇವಸ್ಥಾನಗಳು:

ಮಾ ಬಾಗೇಶ್ವರಿ ದೇವಿ ದೇವಾಲಯ : ಛತ್ತೀಸಗಡ್ ರಾಜ್ಯದ ಸೂರಜ್ಪುರ್ ಜಿಲ್ಲೆಯ ಕುದರಗಡ್ ಎಂಬ ಪಟ್ಟಣದಲ್ಲಿರುವ ಬಾಗೇಶ್ವರಿ ದೇವಿಯ ದೇವಸ್ಥಾನ ಒಂದು ಪ್ರಸಿದ್ಧ ಯಾತ್ರಾ ಕೇಂದ್ರವಾಗಿದೆ. ದೇವಸ್ಥಾನ ನಿರ್ಮಾಣದ ಇತಿಹಾಸದ ಕುರಿತು ಯಾವ ದಾಖಲೆಗಳೂ ಸ್ಪಷ್ಟವಾಗಿ ದೊರೆತಿಲ್ಲ. ಆದರೆ ಒಂದು ಮೂಲದ ಪ್ರಕಾರ, ಈ ದೇವಾಲಯವು ಬಲಂದ್ ದೊರೆಗಳಿಂದ ನಿರ್ಮಾಣವಾದುದೆನ್ನಲಾಗಿದೆ. ಬಲಂದರು ಮೂಲತಃ 17 ನೆಯ ಶತಮಾನದ ಸಂದರ್ಭದಲ್ಲಿ ಕೋರಿಯಾ ದೇಶವನ್ನು ಆಳುತ್ತಿದ್ದ ರಾಜರಾಗಿದ್ದರು. ವಿಶೇಷವೆಂದರೆ ಈ ದೇವಸ್ಥಾನ ಹರಕೆಗೆ ಪ್ರಸಿದ್ಧಿಯಾಗಿದ್ದು, ಹರಕೆ ತೀರಿದ ನಂತರ ಇಲ್ಲಿನ ದೇವಿಯನ್ನು ಪ್ರಸನ್ನಗೊಳಿಸಲು ಆರು ಇಂಚುಗಳ ಒಂದು ಕುಳಿಯೊಳಗೆ ಕುರಿ/ಆಡಿನ ರಕ್ತವನ್ನು ಸುರಿಯುತ್ತಾರೆ. ಸ್ಥಳೀಯವಾಗಿ ಹೇಳುವಂತೆ ಈ ಕುಳಿಯಲ್ಲಿ ಎಷ್ಟು ರಕ್ತ ಸುರಿದರೂ ಆ ಕುಳಿ ಒಟ್ಟು ತುಂಬುವುದೆ ಇಲ್ಲವಂತೆ.

ಚಿತ್ರಕೃಪೆ: Rakesh spur

ಕೆಲವು ವಿಚಿತ್ರ ದೇವಸ್ಥಾನಗಳು:

ಕೆಲವು ವಿಚಿತ್ರ ದೇವಸ್ಥಾನಗಳು:

ಮಂಡೋದರಿ ದೇವಾಲಯ : ಗೋವಾದ ಪೊಂಡಾದಲ್ಲಿರುವ ಬೆಟಕಿ ಎಂಬ ಗ್ರಾಮದಲ್ಲಿ ಈ ದೇವಾಲಯವನ್ನು ಕಾಣಬಹುದು. ನಿಮಗನಿಸಿರುವಂತೆ ಈ ದೇವಸ್ಥಾನವು ಲಂಕೇಶ್ವರನಾದ ರಾವಣನ ಹೆಂಡತಿಯಾದ ಮಂಡೋದರಿಗೆ ಸಂಬಂಧಿಸಿದ್ದಲ್ಲ. ಬದಲಾಗಿ ಮಂಡ ಅಂದರೆ ನೀರು ಹಾಗೂ ಉದರ ಅಂದರೆ ಹೊಟ್ಟೆ ಎಂಬ ಪದಗಳಿಂದ ಕೂಡಿ ಕಲ್ಪನೆಯಿಂದ ಮಂಡೋದರಿ ದೇವಿಯಾಗಿ ಪೂಜಿಸಲ್ಪಡುತ್ತಾಳೆ. ಕಾರಣ ಈ ಗ್ರಾಮದಲ್ಲಿ ಯಾವುದೆ ಬಾವಿಗಳಿಲ್ಲ. ನೀರಿಗಾಗಿ ಕೇವಲ ಹರಿಯುವ ತೊರೆಗಳ ಮೇಲೆ ಅವಲಂಬಿತವಾಗಿದೆ. ಹಿಂದೆ ಯಾರ್ಯಾರು ಹಿರಿಯರು ಗ್ರಾಮದ ನೀರು ಎಂದೂ ಬತ್ತದಂತೆ ತಮ್ಮ ಮಕ್ಕಳನ್ನು ತ್ಯಾಗ ಮಾಡಿದ್ದಾರೊ ಅವರ ಪೂಜೆಗೆಂದು ಈ ದೇವಾಲಯ ನಿರ್ಮಾಣವಾಗಿದೆ.

ಚಿತ್ರಕೃಪೆ: Bartsson

ಕೆಲವು ವಿಚಿತ್ರ ದೇವಸ್ಥಾನಗಳು:

ಕೆಲವು ವಿಚಿತ್ರ ದೇವಸ್ಥಾನಗಳು:

ಶ್ರೀ ಹನುಮಾನ ಮಂದಿರ : ಗುಜರಾತ್ ರಾಜ್ಯದ ಅಹ್ಮದಾಬಾದ್ ಜಿಲ್ಲೆಯಲ್ಲಿರುವ ಸಾರಂಗಪುರ ಎಂಬ ಗ್ರಾಮದ ಬೆಟ್ಟದ ತುದಿಯೊಂದರ ಮೇಲೆ, ಆಂಜನೇಯನ ವಿಶಿಷ್ಟ ವಿಗ್ರಹವಿರುವ ಈ ದೇವಾಲಯವಿದೆ. ಕೇಬಲ್ ಕಾರಿನ ಮೂಲಕ ಈ ದೇವಾಲಯಕ್ಕೆ ತೆರಳಲು ಅನುವು ಮಾಡಿಕೊಡಲಾಗಿದ್ದು ಇಲ್ಲಿನ ಆಂಜನೇಯ ವಿಗ್ರಹವನ್ನು ಸದ್ಗುರು ಗೋಪಾಲನಂದ ಸ್ವಾಮಿಯವರು ಪ್ರತಿಷ್ಠಾಪಿಸಿದ್ದಾರೆ. ವಿಶೇಷವೆಂದರೆ, ಬರಹಗಾರರಾದ ರೇಮಂಡ್ ವಿಲಿಯಮ್ಸ್ ಅವರ ಪ್ರಕಾರ, ಗೋಪಾಲನಂದ ಸ್ವಾಮಿಯವರು ಈ ವಿಗ್ರಹವನ್ನು ಪ್ರತಿಷ್ಠಾಪಿಸುತ್ತಿದ್ದಾಗ ಒಂದು ತೆಳ್ಳನೆಯ ಕಂಬಿ ಮೂಲಕ ವಿಗ್ರಹವನ್ನು ಸ್ಪರ್ಶಿಸಿದಾಗ ವಿಗ್ರಹದ ಚಲನ ವಲನ ಉಂಟಾಗಿತ್ತಂತೆ. ಇನ್ನೂ ಆಂಜನೇಯನು ತೆಳುವಾದ ಮೀಸೆ ಹೊಂದಿದ್ದು ತನ್ನ ಕಾಲಡಿಯಲ್ಲಿ ರಕ್ಕಸಿಯೊಬ್ಬಳನ್ನು ಸಂಹರಿಸುತ್ತಿರುವ ಭಂಗಿಯಲ್ಲಿದೆ. ಈ ವಿಗ್ರಹವನ್ನು ನೋಡಿದ ಮೊದಲ ನೋಟದಲ್ಲೆ ಎಲ್ಲ ದುಷ್ಟ ಶಕ್ತಿಗಳು ತಳುಕು ಹಾಕಿಕೊಂಡಿದ್ದಲ್ಲಿ ದೂರ ಓಡುತ್ತವೆ ಎಂದು ನಂಬಲಾಗಿದೆ. ಅಂತೆಯೆ ಪ್ರತಿ ಶನಿವಾರ ಇಲ್ಲಿ ವಿಶೇಷವಾಗಿದ್ದು ಮಾನಸಿಕವಾಗಿ ಬಳಲುತ್ತಿರುವವರನ್ನು ಇಲ್ಲಿ ಕರೆ ತಂದು ಸ್ವಾಮಿಯವರು ಹಿಡಿದಿದ್ದ ಕಂಬಿಯ ಮೂಲಕ ಆಶೀರ್ವದಿಸಲಾಗುತ್ತದೆ.

ಚಿತ್ರಕೃಪೆ: Wheredevelsdare

ಕೆಲವು ವಿಚಿತ್ರ ದೇವಸ್ಥಾನಗಳು:

ಕೆಲವು ವಿಚಿತ್ರ ದೇವಸ್ಥಾನಗಳು:

ಪನಚಿಕ್ಕಾಡು ದೇವಾಲಯ: ಇದು ಸರಸ್ವತಿ ದೇವಿಗೆ ಮುಡಿಪಾದ ದೇವಾಲಯವಾದರೂ ಮೊದಲಿಗೆ ನಾರಾಯಣನನ್ನು ಪೂಜಿಸಲಾಗುತ್ತದೆ. ಅಲ್ಲದೆ ಈ ಆಸಕ್ತಿಕರ ವಿಷಯವೆಂದರೆ, ಸಾಮಾನ್ಯವಾಗಿ ಎಲ್ಲ ದೇವಾಲಯಗಳಲ್ಲಿ ಮೂಲ ವಿಗ್ರಹಗಳು ಗರ್ಭಗೃಹದಿಂದ ಸುತ್ತುವರೆದಿರುತ್ತದೆ. ಆದರೆ ಇಲ್ಲಿ ದೇವಿಯು ನೈಸರ್ಗಿಕವಾಗಿ ಉದ್ಭವವಾಗುವ ನೀರಿನ ಕೊಳವೊಂದರ ಮಧ್ಯದಲ್ಲಿ ಯಾವುದೆ ಛಾವಣಿಯಿಲ್ಲದೆ ವಿರಾಜಮಾನಳಾಗಿದ್ದಾಳೆ. ಅಲ್ಲದೆ ದೇವಸ್ಥಾನದಲ್ಲಿ ಗಣಪ, ಶಿವ ಹಾಗೂ ಯಕ್ಷಿಯ ವಿಗ್ರಹಗಳನ್ನೂ ಸಹ ಕಾಣಬಹುದಾಗಿದೆ. ಇಲ್ಲಿ ನೈಸರ್ಗಿಕವಾಗಿ ಉದ್ಭವಿಸುವ ನೀರಿನಿಂದಲೆ ವಿಗ್ರಹಗಳ ಪೂಜೆ ಮಾಡಲಾಗುತ್ತದೆ. ಈ ನೀರಿನ ತೊರೆಯು ಎಂದಿಗೂ ಬತ್ತದ ನೀರಿನ ಮೂಲವಾಗಿದೆ. ಈ ದೇವಾಲಯವು ಕೊಟ್ಟಾಯಂ ಜಿಲ್ಲೆಯ ಪನಚಿಕಾಡು ಎಂಬ ಗ್ರಾಮದಲ್ಲಿದೆ.

ಚಿತ್ರಕೃಪೆ: arunpnair

ಕೆಲವು ವಿಚಿತ್ರ ದೇವಸ್ಥಾನಗಳು:

ಕೆಲವು ವಿಚಿತ್ರ ದೇವಸ್ಥಾನಗಳು:

ಒಚಿರಾ ದೇವಾಲಯ: ಇದು ಕೇರಳದ ಅತಿ ಪುರಾತನ ದೇವಾಲಯಗಳಲ್ಲೊಂದಾಗಿದ್ದು, ಕೊಲ್ಲಂ ಜಿಲ್ಲೆಯ ಒಚಿರಾ ಎಂಬಲ್ಲಿ ಸ್ಥಿತವಿದೆ. ಸಾಂಕೇತಿಕವಾಗಿ ಕೆಸರಿನಲ್ಲಿ ಆಡುವ ಕುಸ್ತಿಗೆ ಹಾಗೂ ಕೇರಳದಲ್ಲೆ ಅತಿ ಪ್ರಮುಖ ಹಬ್ಬವಾದ ಓಣಂ ಮುಗಿದ 28 ನೇಯ ದಿನಕ್ಕೆ ಮತ್ತೊಮ್ಮೆ ಅದ್ದೂರಿಯಾಗಿ ಓಣಂ ಆಚರಿಸುವ ಉತ್ಸವಕ್ಕೆ ಈ ದೇವಾಲಯ ಹೆಸರುವಾಸಿಯಾಗಿದೆ. ಚಕಿತಗೊಳಿಸುವ ವಿಷಯವೆಂದರೆ ಈ ಒಚಿರಾ ದೇವಾಲಯಕ್ಕೆ ಯಾವುದೆ ಕಟ್ಟಡ ರಚನೆಯಿಲ್ಲ. ನಿರಾಕಾರ ಪರಬ್ರಹ್ಮನ ರೂಪದಲ್ಲಿ ಶಿವನನ್ನು ಗಿಡಗಳ ಮೂಲಕವಾಗಿ ಪೂಜಿಸಲಾಗುತ್ತದೆ.

ಚಿತ್ರಕೃಪೆ: Neon

ಕೆಲವು ವಿಚಿತ್ರ ದೇವಸ್ಥಾನಗಳು:

ಕೆಲವು ವಿಚಿತ್ರ ದೇವಸ್ಥಾನಗಳು:

ಅನಂತಪುರ ಕೆರೆ ದೇವಾಲಯ: ಅನಂತಪುರ ಕೆರೆ ದೇವಾಲಯವು ಕೇರಳದಲ್ಲಿರುವ ಕೆರೆಯ ಮಧ್ಯದ ಏಕೈಕ ದೇವಾಲಯ. ಕಾಸರಗೋಡಿನಲ್ಲಿರುವ ಈ ದೇವಾಲಯವು ಪುರಾಣದ ಪ್ರಕಾರ, ತಿರುವನಂತಪುರಂನಲ್ಲಿರುವ ಅನಂತ ಪದ್ಮನಾಭ ಸ್ವಾಮಿಯ ಮೂಲ ಸ್ಥಾನ. ಆಸಕ್ತಿಕರ ವಿಷಯವೆಂದರೆ ಈ ದೇವಾಲಯದ ಕೆರೆಯಲ್ಲಿ ಒಂದು ಮೊಸಳೆಯನ್ನು ಕಾಣಬಹುದು. ಅಷ್ಟೆ ಅಲ್ಲ ಇಲ್ಲಿನ ಮೊಸಳೆಯು ಮರಣ ಹೊಂದಿದರೆ ಅತ್ಯಾಶ್ಚರ್ಯ ಎಂಬಂತೆ ಇಲ್ಲಿ ಇನ್ನೊಂದು ಮೊಸಳೆ ಬಂದು ಸೇರುತ್ತದೆ. ಇದು ದೇವಾಲಯದ ರಕ್ಷಕ ಎನ್ನಲಾಗಿದೆ.

ಚಿತ್ರಕೃಪೆ: Vinayaraj

ಕೆಲವು ವಿಚಿತ್ರ ದೇವಸ್ಥಾನಗಳು:

ಕೆಲವು ವಿಚಿತ್ರ ದೇವಸ್ಥಾನಗಳು:

ಕೊಟ್ಟಿಯೂರು ದೇವಾಲಯ: ಕೊಟ್ಟಿಯೂರಿನಲ್ಲಿ ಆಚರಿಸಲಾಗುವ ವೈಷಾಖ ಮಹೋತ್ಸವದಿಂದಾಗಿ ಈ ದೇವಾಲಯ ಪ್ರಸಿದ್ಧವಾಗಿದೆ. ಹಬ್ಬದ ಸಂದರ್ಭದಲ್ಲಿ ಮಾತ್ರವೆ ಇಲ್ಲಿನ ಪ್ರಮುಖ ದೇವಾಲಯ ತಾತ್ಕಾಲಿಕವಾಗಿ ನಿರ್ಮಾಣಗೊಳ್ಳುತ್ತದೆ. ಅದೂ ಕೂಡ ಗುಡಿಸಲಿನ ರೂಪದಲ್ಲಿ ಮಾತ್ರವೆ. ಮೂಲತಃ ಕೊಟ್ಟಿಯೂರು ವೈಶಾಖ ಮಹೋತ್ಸವವನ್ನು ಸತಿಯ ತಂದೆಯಾಗಿದ್ದ ದಕ್ಷ ಪ್ರಜಾಪತಿಯು ನಡೆಸಿದ ಯಾಗದ ಸ್ಮರಣಾರ್ಥವಾಗಿ ಆಚರಿಸಲಾಗುತ್ತದೆ. ಈ ದೇವಸ್ಥಾನವನ್ನು ಕೊಟ್ಟಿಯೂರು ವಡಕ್ಕೇಶ್ವರಂ ದೇವಸ್ಥಾನ ಎಂತಲೂ ಕರೆಯಲಾಗುತ್ತದೆ.

ಚಿತ್ರಕೃಪೆ: Deepesh ayirathi

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X