» »ಹೋಳಿಯಲ್ಲಿ ಸುಗ್ಗಿ ಕುಣಿತದ ಫೋಟೋ ಪ್ರವಾಸ

ಹೋಳಿಯಲ್ಲಿ ಸುಗ್ಗಿ ಕುಣಿತದ ಫೋಟೋ ಪ್ರವಾಸ

Posted By: Divya

ಅಂದು ಬೆಳಗಿನ ಜಾವ ಸುಂದರವಾದ ನಿದ್ರೆ... ಅದೇನೇನೋ ಕನಸು ಬೀಳುತ್ತಿತ್ತು... ಅಷ್ಟರಲ್ಲಿ ಬೆಳಗಾಗಿದೆ ಎದ್ದೇಳು ಎನ್ನುವ ಅಮ್ಮನ ಕೂಗು ಆಗಾಗ ಎಬ್ಬಿಸುತ್ತಿತ್ತು... ಅಯ್ಯೋ! ಇರಮ್ಮಾ ಎನ್ನುವುದು ನನ್ನ ಪ್ರತಿಧ್ವನಿ... ಈ ನಡುವೆ ಢಣ ಢಣ ಎನ್ನುವ ಜಮಟೆಯ ಸದ್ದು ಕೇಳತೊಡಗಿತು... ಅರೇ ಇದೇನು? ಎಂದು ರೂಮಿನಿಂದ ಹೊರಗೆ ಬರುವಷ್ಟರಲ್ಲಿ ತಂಗಿ ಅಡ್ಡ ನಿಂತು, ಮೊದಲು ಕನ್ನಡಿಯಲ್ಲಿ ಮುಖ ನೋಡಿಕೊಂಡು ಆಮೇಲೆ ಹೋಗು ಎಂದಳು... ಸರಿ ಎಂದು ಕನ್ನಡಿಯಲ್ಲಿ ನನ್ನ ಮುಖ ನೋಡಿಕೊಳ್ಳುತ್ತಿದ್ದಂತೆಯೇ, ಬಣ್ಣದಿಂದ ಕೂಡಿದ ನನ್ನ ಮುಖ ಒಮ್ಮೆ ನನಗೇ ಭಯ ಹುಟ್ಟಿಸಿತು... ಅರೆ ಕ್ಷಣದಲ್ಲಿ ಬಂದೆ ಇರು ಎಂದು ಅವಳನ್ನು ಓಡಿಸಿಕೊಂಡು ಹೊರಟೆ...

ಮನೆಯಿಂದ ಹೊರಗೆ ಓಡಿದಳು... ಅವಳನ್ನು ಹಿಡಿಯಲು ಓಡುತ್ತಿದ್ದ ನನಗೆ ಕರಡಿಯೊಂದು ಅಡ್ಡ ಬಂತು... ಅಬ್ಬಾ! ಸತ್ತೆ ಎಂದು ಕಿರುಚಿದೆ... ಅಷ್ಟರಲ್ಲಿ ಅಮ್ಮ ಮನೆಯ ಒಳಗೆ ಕರೆದೊಯ್ದಳು... ಇದೆಲ್ಲಾ ನಡೆದಿದ್ದು ಮೂರುವರ್ಷದ ಹಿಂದಿನ ಹೋಳಿ ಹಬ್ಬದಲ್ಲಿ... ಅಮ್ಮನ ಮನೆಯಲ್ಲಿದ್ದಾಗ ಸವಿದ ಹೋಳಿ ಹಬ್ಬದ ಸಂಭ್ರಮ ಹಾಗೇ ನೆನಪಿಗೆ ಬಂತು...

ಹೋಳಿ ಹಬ್ಬವೆಂದರೆ ಬಣ್ಣಗಳನ್ನು ಎರಚುವುದು, ನಂತರ ಒಂದಿಷ್ಟು ಸಿಹಿ ತಿಂಡಿಯನ್ನು ಮಾಡಿ ಸವಿಯುವುದಷ್ಟೇ ಅಲ್ಲ... ಅದಕ್ಕೂ ಮಿಗಿಲಾದ ಹಲವಾರು ಪದ್ಧತಿಗಳು, ಆಚರಣೆಗಳು ನಮ್ಮ ನಾಡಿನ ಕರಾವಳಿ ತೀರದಲ್ಲಿದೆ. ಉತ್ತರ ಕನ್ನಡದ ಹೊನ್ನಾವರ, ಕುಮಟಾ, ಗೋಕರ್ಣ, ಅಂಕೋಲ ಹಾಗೂ ಕಾರವಾರದಲ್ಲಿ ಇವುಗಳ ಆಚರಣೆ ಬಹಳ ಅದ್ದೂರಿಯಿಂದ ನಡೆಯುತ್ತದೆ. ಇಲ್ಲಿಯ ಹೋಳಿ ಸಂಭ್ರಮ ಸವಿಯುವುದು, ಆ ಜಾನಪದ ಶೈಲಿಯ ಕುಣಿತವನ್ನು ವೀಕ್ಷಿಸುವುದು ಒಂದು ವಿಶೇಷ. ಇದಕ್ಕಾಗಿಯೇ ಆ ಊರಿನ ಜನರು ಸಹ ಹಬ್ಬಕ್ಕಾಗಿ ಕಾದು ಕುಳಿತಿರುತ್ತಾರೆ. ಇವುಗಳ ಕಿರು ಪರಿಚಯವನ್ನು ಫೋಟೋ ಪ್ರವಾಸದ ಮೂಲಕ ತಿಳಿಯೋಣ ಬನ್ನಿ...

ಹೋಳಿ ಸಂಭ್ರಮ

ಹೋಳಿ ಸಂಭ್ರಮ

ಫಾಲ್ಗುಣ ಮಾಸದ ಶುಕ್ಲ ಪಕ್ಷದ ಪೂರ್ಣಿಮೆಯಂದು ಹೋಳಿಹಬ್ಬವನ್ನು ಆಚರಿಸಲಾಗುತ್ತದೆ. ದೇಶದಾದ್ಯಂತ ಆಚರಿಸುವ ಹೋಳಿ, ಕರ್ನಾಟಕದ ಕರಾವಳಿ ತೀರಗಳಲ್ಲಿ ಸ್ವಲ್ಪ ಭಿನ್ನವಾಗಿರುತ್ತವೆ. ಕೆಲವೆಡೆ ಗ್ರಾಮದೇವತೆಗಳ ಜಾತ್ರೆಗಳು ಹೋಳಿ/ಸುಗ್ಗಿ ಹಬ್ಬದ ಜೊತೆಗೆ ಬೆಸೆದುಕೊಂಡಿರುತ್ತವೆ. ಈ ಹಬ್ಬದ ಪ್ರಯುಕ್ತ ಉತ್ತರ ಕನ್ನಡದ ಹಾಲಕ್ಕಿ ಗೌಡರು ಹಾಗೂ ಕೆಲವು ಜನಾಂಗದವರು ಸುಗ್ಗಿ ಕುಣಿತವನ್ನು ಮಾಡುತ್ತಾರೆ.
PC: wikipedia.org

ಹುಡುಗರ ಹೋಳಿ

ಹುಡುಗರ ಹೋಳಿ

ಈ ಪ್ರದೇಶದಲ್ಲಿ ಹೋಳಿ/ಸುಗ್ಗಿ ಹಬ್ಬವನ್ನು ಹುಡುಗರ ಹಬ್ಬ ಎಂದರೆ ತಪ್ಪಾಗಲಾರದು. ಹಬ್ಬದಂದು ಹುಡುಗರು ಮೈ-ಕೈಗೆಲ್ಲಾ ಬಣ್ಣ ಬಡಿದುಕೊಂಡು, ಮುಖಕ್ಕೆ ವಿವಿಧ ಪ್ರಾಣಿಗಳ ಮುಖವಾಡವನ್ನು ಧರಿಸಿ, ಪ್ರತಿಯೊಂದು ಮನೆ ಮುಂದೆ ಬಂದು "ದುಮ್ಮ ಸಾಯಲೇ ಅಣ್ಣ-ತಮ್ಮ ದುಮ್ಮ ಸಾಯಲೇ' ಎನ್ನುವ ಪದವನ್ನು ಹೇಳುತ್ತಾರೆ. ಮನೆ ಮಂದಿ ಅನುಕೂಲಕ್ಕೆ ತಕ್ಕಂತೆ ಹಣವನ್ನು ನೀಡುತ್ತಾರೆ.
PC: flickr.com

ಸುಗ್ಗಿಯ ಆಚರಣೆ

ಸುಗ್ಗಿಯ ಆಚರಣೆ

ಸುಗ್ಗಿ ಕುಣಿತಕ್ಕೆ ಪ್ರಮುಖ ವ್ಯಕ್ತಿ/ಗೌಡ ಅಕ್ಕಿಯನ್ನು ಮಂತ್ರಿಸಿ ಕೊಡುತ್ತಾನೆ. ಸುಗ್ಗಿ ಕುಣಿಯುವವರಿಗೆ ಕರಿ ಅಕ್ಕಿ ಹೆಚ್ಚು ಪ್ರಾಶಸ್ತ್ಯವಾದದ್ದು. ಇದನ್ನು ಮೊದಲು ತಮ್ಮ ಸೊಂಟಕ್ಕೆ ಕಟ್ಟಿಕೊಳ್ಳುತ್ತಾರೆ. ನಂತರ ಕುಣಿತಕ್ಕೆ ಎಂದು ಮಾಡಲಾದ ಕರಿಕಣಕ್ಕೆ ಬರುತ್ತಾರೆ. ಕರಿಕಣ ಎಂದರೆ ಪ್ರತಿವರ್ಷ ಸುಗ್ಗಿ ಕಟ್ಟುವ ಸ್ಥಳ. ಇದಕ್ಕೆ ಹೆಚ್ಚು ಪವಿತ್ರ ಸ್ಥಾನ ನೀಡಲಾಗುತ್ತದೆ. ಇಲ್ಲಿಂದಲೇ ಸುಗ್ಗಿ ಹೊರಡಬೇಕು. ಇಲ್ಲಿ ಒಂದು ಸುರಗಿ ಕಂಬವನ್ನು ನಿಲ್ಲಿಸಿರುತ್ತಾರೆ. ಇದಕ್ಕಿರುವ ಟಿಸಿಲುಗಳಿಗೆ ತಾಳ ಮದ್ದಳೆ, ಜಮಟೆಗಳನ್ನು ತೂಗು ಹಾಕಿರುತ್ತಾರೆ. ಇಲ್ಲಿಂದ ಹೊರಡುವ ಮುನ್ನ ಊರಿನ ಜನರಿಗೆ ತಿಳಿಸುವ ಸಲುವಾಗಿ ಹೆದ್ದುಂಬೆ ಕೋಲು ವಾದ್ಯವನ್ನು ಊದುತ್ತಾರೆ. ಇದು ಮರದಿಂದ ಮಾಡಿರುವ ವಾದ್ಯದ ಸಾಧನ. ಇದು ಸುಮಾರು ನಾಲ್ಕು ಕಿ.ಮೀ. ದೂರದವರೆಗೆ ಕೇಳುತ್ತದೆ ಎನ್ನಲಾಗುತ್ತದೆ.
PC: wikimedia.org

ವೇಷ ಭೂಷಣ

ವೇಷ ಭೂಷಣ

ಸುಗ್ಗಿ ಕುಣಿಯುವ ತಂಡದಲ್ಲಿ ಹಲವಾರು ಪ್ರಾಣಿ ವೇಷಗಳು, ಗಂಡಸರೇ ಹೆಣ್ಣಿನ ವೇಷ ಧರಿಸುವುದು, ಕೆಲವು ಆಯ್ಕೆಯಾದ ಕಲಾವಿದರ ತಲೆಗೆ ತುರಾಯಿ ಎನ್ನುವ ಬಣ್ಣ ಬಣ್ಣದ ಕಾಗದದಿಂದ ಕೂಡಿರುವ ಹೂವು, ಎಲೆ, ಪುಟ್ಟ ಹಕ್ಕಿಯಂತಹ ಗೊಂಚಲುಗಳಿರುತ್ತವೆ. ಇದನ್ನು ಸೂಕ್ಷ್ಮವಾಗಿ ಗಾರುಡಿಗ ತಯಾರಿಸಿರುತ್ತಾನೆ. ತಲೆಗೆ ರುಮಾಲನ್ನು ಸುತ್ತಿ, ನಂತರ ತುರಾಯಿಗೆ ಪೂಜೆ ಮಾಡಿಯೇ ಕಟ್ಟಿಕೊಳ್ಳುತ್ತಾರೆ.

ಕುಣಿತದ ಸೊಬಗು

ಕುಣಿತದ ಸೊಬಗು

ಸುಗ್ಗಿ ತಂಡ ಊರಿನ ಪ್ರತಿಯೊಂದು ಮನೆಯ ಮುಂದೆಯೂ ಕುಣಿಯುತ್ತದೆ. ಜಾನಪದ ಹಾಡು, ಭಕ್ತಿ ಗೀತೆ ಹಾಗೂ ಕೆಲವೊಂದು ಸಿನಿಮಾ ಹಾಡುಗಳಿಗೂ ಹೆಜ್ಜೆ ಹಾಕುತ್ತಾರೆ. ಇವರ ಕುಣಿತ ಜಾನ ಪದ ಶೈಲಿಯಲ್ಲೇ ಇರುತ್ತದೆ. ಇದರಲ್ಲಿ ಕೆಲವರು ನವಿಲುಗರಿಯ ಗೊಂಚಲನ್ನು ಕೈಯಲ್ಲಿ ಹಿಡಿದರೆ ಇನ್ನೂ ಕೆಲವರು ಕೋಲಾಟದ ಕೋಲನ್ನು ಹಿಡಿದಿರುತ್ತಾರೆ. ಇವರ ಸುಂದರ ಜಾನಪದ ನೃತ್ಯವನ್ನು ನೋಡುವುದೇ ಹಬ್ಬದ ಸಂಭ್ರಮ.

ಸಂಪ್ರದಾಯ

ಸಂಪ್ರದಾಯ

ಈ ಕುಣಿತ ಮಾಡುವ ಮೊದಲು ಮನೆ ಮಾಲಿಕನಲ್ಲಿ ತಂಡದ ಮುಖ್ಯಸ್ಥ ಪರವಾನಗಿ ಕೇಳಿಕೊಳ್ಳುತ್ತಾನೆ. ಮನೆಯ ಸದಸ್ಯರೆಲ್ಲ ಕುಳಿತುಕೊಂಡಮೇಲೆಯೇ ಕುಣಿತ ಆರಂಭವಾಗುತ್ತದೆ. ಕುಣಿತ ಮುಗಿದ ಮೇಲೆ ಮನೆಯ ಯಜಮಾನ ಅನುಕೂಲಕ್ಕೆ ತಕ್ಕಂತೆ ಹಣ, ತೆಂಗಿನ ಕಾಯಿ, ಅಕ್ಕಿ, ವೀಳ್ಯದೆಲೆ, ಅಡಿಕೆ ಹಾಗೂ ತಿಂಡಿಗಳನ್ನು ಕೊಟ್ಟು ಸತ್ಕರಿಸುತ್ತಾನೆ. ಜೊತೆಗೆ ಕುಣಿತದ ಬಗ್ಗೆ ಒಂದೆರಡು ಮಾತನಾಡುತ್ತಾನೆ. ವಾದ್ಯಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ಮತ್ತೆ ಮುಂದಿನ ವರ್ಷ ಬರುತ್ತೇವೆ ಎಂದು ಹೇಳಿ ಮುಂದಿನ ಮನೆಗೆ ಹೋಗುತ್ತಾರೆ.

ಕಾಮನ ಸುಡುವುದು

ಕಾಮನ ಸುಡುವುದು

ಬಿಟ್ಟ ಬಟ್ಟೆಗಳನ್ನು ಒಂದು ಕೋಲಿಗೆ ಸುತ್ತಿ ಕಾಮನನ್ನು ನಿರ್ಮಿಸುತ್ತಾರೆ. ಬೆಳಗ್ಗೆಯಿಂದ ಕುಣಿದು ದಣಿದ ಕಲಾವಿದರು ಸಂಜೆ ಪುನಃ ಸಂಪ್ರದಾಯದಡಿಯಲ್ಲೇ ವೇಷವನ್ನು ತೆಗೆದು, ಕೋಲಿನಲ್ಲಿ ನಿರ್ಮಿಸಿದ ಕಾಮನನ್ನು ಸುಡುತ್ತಾರೆ. ಸುಟ್ಟ ಬೆಂಕಿಯ ಸುತ್ತ ಕುಣಿದು, ಅಲ್ಲಿರುವ ಬೂದಿಯನ್ನು ಹಣೆಗೆ ಹಚ್ಚಿಕೊಳ್ಳುತ್ತಾರೆ. ನಂತರ ಹೊಳೆ, ಕೆರೆಗಳಿಗೆ ಹೋಗಿ ಸ್ನಾನ ಮಾಡಿ, ತಂದ ಅಕ್ಕಿ-ಕಾಯಿಯಿಂದ ಸಿಹಿ ಅಡುಗೆಯನ್ನು ಮಾಡಿ ಎಲ್ಲರೂ ಸವಿಯುತ್ತಾರೆ...

ನೀವು ನೋಡಬೇಕು

ನೀವು ನೋಡಬೇಕು

ಈ ಸುಂದರ ಸೊಗಡನ್ನು ನೋಡಬೇಕೆಂದರೆ ಈ ಸಮಯದಲ್ಲಿ ಕುಮಟಾ, ಗೋಕರ್ಣ, ಹೊನ್ನಾವರ ತಾಲೂಕಿನೆಡೆಗೆ ಪ್ರವಾಸ ಬೆಳೆಸಬೇಕು. ಆಗ ಈ ಸುಂದರ ನೃತ್ಯವನ್ನು ನೋಡಲು ಸಾಧ್ಯ. ತಪ್ಪದೆ ಮುಂದಿನ ವರ್ಷ ಈ ಪ್ರದೇಶಗಳಿಗೆ ಪ್ರವಾಸ ಹೋಗಿ ಹಬ್ಬದ ಸಂಭ್ರಮ ಸವಿಯಿರಿ.