India
Search
  • Follow NativePlanet
Share
» »ಗೋಕರ್ಣದ ದಂತಕಥೆ, ಮಹಿಮೆ ಏನು?

ಗೋಕರ್ಣದ ದಂತಕಥೆ, ಮಹಿಮೆ ಏನು?

By Vijay

ಸಿದ್ಧಿ ಕ್ಷೇತ್ರ, ಮುಕ್ತಿ ಸ್ಥಳ ಎಂದೆಲ್ಲ ಕರೆಯಲಾಗುವ ಧಾರ್ಮಿಕವಾಗಿ ಮಹತ್ವದ ಸ್ಥಾನ ಪಡೆದಿರುವ, ಪ್ರಮುಖವಾಗಿ ಶೈವರ ಹಾಗೂ ಶಿವನ ಭಕ್ತರ ಮುಖ್ಯ ತೀರ್ಥಕ್ಷೇತ್ರಗಳಲ್ಲೊಂದಾಗಿರುವ ಗೋಕರ್ಣ, ಒಂದು ಅದ್ಭುತವಾದ ಕುಟುಂಬ ಸಮೇತರಾಗಿ ಭೇಟಿ ನೀಡಬಹುದಾದ ಪ್ರವಾಸಿ ಸ್ಥಳವೂ ಹೌದು.

ಉತ್ತರ ಕನ್ನಡ ಜಿಲ್ಲೆಯ, ಅರಬ್ಬಿ ಸಮುದ್ರ ತೀರದಲ್ಲಿ ನೆಲೆಸಿರುವ, ಹಲವಾರು ನಯಮನ ಮನೋಹರ ಕಡಲ ತೀರಗಳಿಗೆ ಆಶ್ರಯವಾಗಿರುವ ಗೋಕರ್ಣದ ಹಿನ್ನೆಲೆಯೂ ಸಹ ಸಾಕಷ್ಟು ರೋಚಕವಾಗಿದ್ದು ಪ್ರವಾಸಿಗರ ಕುತೂಹಲ ಕೆರಳಿಸುತ್ತದೆ. ಅನೇಕ ಪೌರಾಣಿಕ ಪ್ರಸಂಗಗಳಿಗೆ ಸಾಕ್ಷಿಯಾಗಿದೆ ಈ ಗೋಕರ್ಣ.

ಜೀವನದಲ್ಲೊಮ್ಮೆಯಾದರೂ ನೋಡಲೇಬೇಕಾದ ಸ್ಥಳವಾಗಿ ಕಂಡುಬರುವ ಗೋಕರ್ಣದ ಕುರಿತು ಅದರ ಹಿನ್ನೆಲೆ, ಅಲ್ಲಿರುವ ಪ್ರವಾಸಿ ಆಕರ್ಷಣೆಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ. ವರ್ಷದ ಎಲ್ಲಾ ಸಮಯದಲ್ಲಿ ಭೇಟಿ ನೀಡಲು ಯೋಗ್ಯವಾಗಿದ್ದರೂ ಗೋಕರ್ಣಕ್ಕೆ ಚಳಿಗಾಲದಲ್ಲಿ ಭೇಟಿ ನೀಡಿದರೆ ಪ್ರವಾಸದ ಅತ್ಯುನ್ನತ ಆನಂದವನ್ನು ಪಡೆಯಬಹುದು.

ಗೋಕರ್ಣ

ಗೋಕರ್ಣ

ಗೋಕರ್ಣ ಹೆಸರಿಗ್ಗೆ ಸಂಬಂಧಿಸಿದಂತೆ ಸಾಕಷ್ಟು ರೋಚಕವಾದ ಕಥೆಯಿದೆ. ಒಂದು ಮೂಲದ ಪ್ರಕಾರ ಶಿವನು ಲಿಂಗರೂಪಿಯಾಗಿ ಈ ಸ್ಥಳದಲ್ಲಿ ಖಾಯಂ ಆಗಿ ನೆಲೆಸಿದಾಗ ಗೋವಿನ ಕಿವಿಯ ಆಕಾರ ಹೊಂದಿದ್ದರಿಂದ ಕ್ರಮೇಣವಾಗಿ ಈ ಸ್ಥಳಕ್ಕೆ ಗೋಕರ್ಣ ಎಂಬ ಹೆಸರು ಬಂದಿತೆನ್ನಲಾಗಿದೆ. ಕರ್ಣ ಎಂದರೆ ಕಿವಿ ಎಂಬರ್ಥವಿದೆ.

ಚಿತ್ರಕೃಪೆ: Nishanth Jois

ಕಿವಿಯ ಆಕಾರ

ಕಿವಿಯ ಆಕಾರ

ಇನ್ನೊಂದು ಮೂಲದ ಪ್ರಕಾರ, ಗಂಗವಲ್ಲಿ ನದಿ ಹಾಗೂ ಅಘನಾಶಿನಿ ನದಿಗಳ ಮಧ್ಯೆ ಈ ಸ್ಥಳವು ನೆಲೆಸಿದ್ದು ಆ ಎರಡು ನದಿಗಳು ಅರಬ್ಬಿ ಸಮುದ್ರ ಸೇರುವುದನ್ನು ಮೇಲಿನಿಂದ ನೋಡಿದಾಗ ಗೋವಿನ ಕಿವಿಯ ಆಕಾರದಲ್ಲಿ ಕಂಡುಬರುವುದರಿಂದ ಇದಕ್ಕೆ ಗೋಕರ್ಣ ಎಂಬ ಹೆಸರು ಬಂದಿದೆ ಎನ್ನಲಾಗಿದೆ. ಭಾರತ ಗುಡಿ. ಹಿನ್ನೆಲ್ಯಲ್ಲಿ ಗೋಕರ್ಣ ಕಡಲ ತೀರ.

ಚಿತ್ರಕೃಪೆ: Daniel Hauptstein

ಭಾಗವತ ಪುರಾಣ

ಭಾಗವತ ಪುರಾಣ

ಇನ್ನೂ ಒಂದು ಕಥೆಯ ಪ್ರಕಾರ, ಭಾಗವತ ಪುರಾಣದಲ್ಲಿ ಉಲ್ಲೇಖಿಸಲಾಗಿರುವಂತೆ ಗೋಕರ್ಣ ಹಾಗೂ ಧುಂಡಕರಿ ಎಂಬಿಬ್ಬರು ಸಹೋದರರು ಇಲ್ಲಿ ವಾಸಿಸುತ್ತಿದ್ದರು. ಗೋಕರ್ಣ ಆಕಳಿನ ಹೊಟ್ಟೆಯಿಂದ ಜನ್ಮ ಪಡೆದಿದ್ದ ಹಾಗೂ ಆಕಳಿನ ಹಾಗೆ ಕಿವಿಗಳನ್ನು ಹೊಂದಿದ್ದ. ಗೋಕರ್ಣ ಪಟ್ಟಣ.

ಚಿತ್ರಕೃಪೆ: Nimesh.singh90

ದುಂಢಕರಿ ಹಾಗೂ ಗೋಕರ್ಣ

ದುಂಢಕರಿ ಹಾಗೂ ಗೋಕರ್ಣ

ಧುಂಡಕರಿ ಕ್ರೂರನಾಗಿದ್ದ ಹಾಗೂ ತನ್ನ ಅತ್ಯಾಚಾರಗಳಿಂದ ಸಾಕಷ್ಟು ಜನರಿಗೆ ಹಿಂಸಿಸುತ್ತಿದ್ದ. ಒಂದು ದಿನ ಹತ್ಯೆಗೊಂಡು ಮುಕ್ತಿ ದೊರಕದ ಆತ್ಮವಾಗಿ ಪರಿತಪಿಸತೊಡಗಿದ. ಗೋಕರ್ಣ ತಪಸ್ಸು ಮಾಡಿ ತನ್ನ ಸಹೋದರನಿಗೆ ಮುಕ್ತಿ ಲಭಿಸುವಂತೆ ಮಾಡಿದ. ಹಾಗಾಗಿ ಅವನ ಗೌರವಾರ್ಥವಾಗಿ ಈ ಸ್ಥಳ ಗೋಕರ್ಣ ಎಂದು ಕರೆಯಲ್ಪಟ್ಟಿತು. ಗೋಕರ್ಣ ಬೀದಿ ಮಾರುಕಟ್ಟೆ.

ಚಿತ್ರಕೃಪೆ: Uleli

ರೋಚಕಮಯ

ರೋಚಕಮಯ

ಹಿಂದೆ ರಾವಣನು ಸರ್ವ ಲೋಕದಲ್ಲೆ ಅತ್ಯಂತ ಬಲಶಾಲಿಯಾಗಬೇಕೆಂಬ ಕನಸು ಕಂಡಿದ್ದ. ಅದಕ್ಕಾಗಿ ಅವನು ಸಾಕ್ಷಾತ್ ಶಿವನ ಬಲವನ್ನೆ ಪಡೆಯಬಯಸಿದ್ದ. ಆದರೆ ಆ ಬಲ ಸಿಗುವುದು ಶಿವನ ಆತ್ಮಲಿಂಗದ ಮೂಲಕ ಮಾತ್ರವೆ ಎಂಬ ಅರಿವು ಅವನಿಗಿತ್ತು. ಅಲ್ಲದೆ ರಾವಣನ ತಾಯಿಯೂ ಸಹ ಶಿವನ ಆತ್ಮಲಿಂಗವನ್ನು ಪೂಜಿಸಬೇಕೆಂದು ಅಪೇಕ್ಷಿಸಿದ್ದರು. ಗೋಕರ್ಣದಲ್ಲೊಂದು ಸಾಮಾನ್ಯ ದಿನ.

ಚಿತ್ರಕೃಪೆ: Humawaka

ಪ್ರಾರ್ಥಿಸತೊಡಗಿದ

ಪ್ರಾರ್ಥಿಸತೊಡಗಿದ

ಇದರಿಂದ ಪ್ರೇರಣೆಗೊಂಡ ರಾವಣ ತನ್ನ ಸಿದ್ಧ ಶಕ್ತಿಗಳನ್ನು ಬಳಸಿಕೊಂಡು ಕೈಲಾಸಕ್ಕೆ ನೇರವಾಗಿ ತೆರಳಿ ಅಲ್ಲಿ ಶಿವನನ್ನು ಕುರಿತು ತಪಸ್ಸನ್ನಾಚರಿಸಲು ತೊಡಗಿದ. ಆದರೆ ಮೊದ ಮೊದಲು ಅವನಿಗೆ ಯಶಸ್ಸು ಸಿಗಲಿಲ್ಲ. ಇದರಿಂದ ಬೇಸರಗೊಂಡನಾದರೂ ತನ್ನ ಪ್ರಯತ್ನ ಬಿಡಲಿಲ್ಲ. ರಥ ಬೀದಿ.

ಚಿತ್ರಕೃಪೆ: Nvvchar

ಪ್ರಸನ್ನನಾದ ಶಿವ

ಪ್ರಸನ್ನನಾದ ಶಿವ

ನಂತರ ಅತ್ಯಂತ ಕಠಿಣವಾದ ತಪಸ್ಸನ್ನು ಅತ್ಯಂತ ಭಕ್ತಿ, ಶೃದ್ಧೆಗಳಿಂದ ಮಾಡಲು ಪ್ರಾರಂಭಿಸಿದ. ಅವನ ಈ ಭಕ್ತಿಗೆ ಮೆಚ್ಚಿದ ಶಿವ ಅವನ ಮುಂದೆ ಪ್ರತ್ಯಕ್ಷನಾಗಿ ಬೇಕಾದ ವರವನ್ನು ಕೇಳಲು ಹೇಳಿದ. ಇದರಿಂದ ಸಂತಸಗೊಂಡ ರಾವಣ ಶಿವನ ಆತ್ಮಲಿಂಗವನ್ನೆ ಕೇಳಿ ಪಡೆದ. ರಾಮತೀರ್ಥ

ಚಿತ್ರಕೃಪೆ: Nvvchar

ಭೂಸಂಪರ್ಕ ಕೂಡದು

ಭೂಸಂಪರ್ಕ ಕೂಡದು

ಹೀಗೆ ಆತ್ಮಲಿಂಗವನ್ನು ನೀಡುವುದಕ್ಕೂ ಮುಂಚೆ ಶಿವನು ರಾವಣನಿಗೆ, ಆತ್ಮಲಿಂಗವನ್ನು ನೇರವಾಗಿ ನಡೆಯುತ್ತ ಮನೆಗೆ ತೆಗೆದುಕೊಂಡು ಹೋಗಬೇಕೆಂತಲೂ ಮಧ್ಯದಲ್ಲಿ ಒಂದು ಕ್ಷಣವಷ್ಟೂ ಭೂಮಿಯಲ್ಲಿರಿಸಬಾರದೆಂದು ಸೂಚಿಸಿದ. ಒಂದು ವೇಳೆ ಆತ್ಮಲಿಂಗವು ಭೂಮಿಯ ಸಂಪರ್ಕಕ್ಕೆ ಬಂದದ್ದೆ ಆದಲ್ಲಿ ಅದೆ ಸ್ಥಳದಲ್ಲಿ ಅದು ಶಾಶ್ವತವಾಗಿ ಉಳಿದುಬಿಡುವುದೆಂದೂ ಹೇಳಿ ಕಳುಹಿಸಿದ. ಶಂಕರಾಚಾರ್ಯರ ಸ್ಮಾರಕ ಗೋಪುರ.

ಚಿತ್ರಕೃಪೆ: Nvvchar

ವಿಷ್ಣುವಿನ ಬಳಿ ನಡೆದರು

ವಿಷ್ಣುವಿನ ಬಳಿ ನಡೆದರು

ಇವೆಲ್ಲವನ್ನು ಗಮನಿಸುತ್ತಿದ್ದ ಸಕಲ ದೇವ ದೇವತೆಯರು ಇದರಿಂದ ಆಘಾತಕ್ಕೊಳಗಾದರು. ಶಿವನ ಶಕ್ತಿಯೆ ಮುಂದೆ ರಾವಣನಲ್ಲಿ ಬಂದು ಈ ಲೋಕವೆ ಅವನ ಕಪಿ ಮುಷ್ಟಿಯಲ್ಲಿ ನಡುಗುವಂತಾಗಬಹುದೆಂದು ಕಂಡುಕೊಂಡು, ಹೇಗಾದರೂ ಮಾಡಿ ಅದನ್ನು ತಪ್ಪಿಸಬೇಕೆಂದು ನಿಶ್ಚಯಿಸಿ ವಿಷ್ಣುವಿನ ಬಳಿ ತೆರಳಿದರು. ಮಹಾಬಲೇಶ್ವರ ದೇವಾಲಯ.

ಚಿತ್ರಕೃಪೆ: Nvvchar

ಗಣೇಶನ ಸಹಕಾರ

ಗಣೇಶನ ಸಹಕಾರ

ನಂತರ ಎಲ್ಲ ದೇವಾನುದೇವತೆಗಳು ಇದರ ಕುರಿತು ಚರ್ಚಿಸಿ ಇದಕ್ಕಾಗಿ ಒಂದು ತಂತ್ರವನ್ನು ಹೆಣೆದು ರಾವಣನಿಂದ ಆತ್ಮಲಿಂಗವನ್ನು ಬೇರ್ಪಡಿಸುವ ನಿರ್ಧಾರ ತಳೆದರು. ಅದಕ್ಕಾಗಿ ಗಣೇಶನ ಸಹಾಯ ಕೇಳಿದರು. ಇದಕ್ಕೊಪ್ಪಿದ ಗಣೇಶನು ಪುಟ್ಟ ಬಾಲಕನ ವೇಷಧಾರಿಯಾಗಿ ಒಂದು ಸ್ಥಳಕ್ಕೆ ಬಂದು ರಾವಣನಿಗೊಸ್ಕರ ಕಾಯತೊಡಗಿದ. ಮಹಾಬಲೇಶ್ವರ ದೇವಾಲಯದ ಪ್ರವೇಶ ದ್ವಾರ.

ಚಿತ್ರಕೃಪೆ: Nvvchar

ಅವೆ ಮೊದಲ ಆದ್ಯತೆ

ಅವೆ ಮೊದಲ ಆದ್ಯತೆ

ರಾವಣನು ಮೊದಲಿನಿಂದಲೂ ಆಚರಣೆಗಳನ್ನು ಬಲು ಶಿಸ್ತು ಹಾಗೂ ಸಮಯ ಬದ್ಧವಾಗಿ ಆಚರಿಸಿಕೊಂಡು ಬರುತ್ತಿದ್ದ ವಿಷಯ ಎಲ್ಲರಿಗೂ ತಿಳಿದಿತ್ತು. ಅದರಂತೆ ರಾವಣನು ಸಾಯಂಕಾಲದೊಳಗಾಗಿ ಲಂಕೆಗೆ ತೆರಳಬೇಕೆಂದು ವೇಗವಾಗಿ ನಡೆಯುತ್ತಿದ್ದ. ಗೋಕರ್ಣದ ಒಂದು ಚಿತ್ರ.

ಚಿತ್ರಕೃಪೆ: Miran Rijavec

ಸಾಯಂಕಾಲದ ವಾತಾವರಣ

ಸಾಯಂಕಾಲದ ವಾತಾವರಣ

ಇದೆ ಸಮಯವನ್ನು ನೋಡಿಕೊಂಡು ಬಾಲಕ ಗಣೇಶನಿದ್ದ ಸ್ಥಳಕ್ಕೆ ರಾವಣ ಬಂದಾಗ ವಿಷ್ಣು ತನ್ನ ಸುದರ್ಶನ ಚಕ್ರವನ್ನು ಸೂರ್ಯನಿಗೆ ಎದುರು ಹಿಡಿದು ಸಾಯಂಕಾಲ ಆಗಿರುವಂತೆ ವಾತಾವರಣ ಸೃಷ್ಟಿಸಿದ. ಇದರಿಂದ ಗಲಿಬಿಲಿಗೊಂಡ ರಾವಣ ಸಾಯಂಕಾಲದ ವಿಧಿ ವಿಧಾನಗಳಿಗೆ ಮೊದಲು ಆದ್ಯತೆ ನೀಡಿ ಸಂಧ್ಯಾವಂದನೆ ಮಾಡಲು ನಿರ್ಧರಿಸಿದ. ಗೋಕರ್ಣದಲ್ಲಿರುವ ಈ ರಾಮತೀರ್ಥದ ನೀರು ಸಾಕಷ್ಟು ಪಾವಿತ್ರ್ಯತೆ ಹೊಂದಿದ್ದು ಔಷಧೀಯ ಗುಣಗಳನ್ನು ಹೊಂದಿದೆ ಎನ್ನಲಾಗಿದೆ.

ಚಿತ್ರಕೃಪೆ: Miran Rijavec

ಒಪ್ಪಿದ ರಾವಣ

ಒಪ್ಪಿದ ರಾವಣ

ಆ ಸಮಯಕ್ಕೆ ಸರಿಯಾಗಿ ಬಾಲಕನ ರೂಪದಲ್ಲಿದ್ದ ಗಣೇಶನು ಅತ್ತ ಬರುತ್ತಿದ್ದುದನ್ನು ಗಮನಿಸಿದ ರಾವಣ ಅವನನ್ನು ಕರೆದು ಆತ್ಮಲಿಂಗವನ್ನು ತಾನು ಬರುವವರೆಗೆ ಹಿಡಿದಿಟ್ಟುಕೊಳ್ಳಬೇಕೆಂದು ವಿನಂತಿಸಿದ. ಅದಕ್ಕೊಪ್ಪಿದ ಆ ಬಾಲಕ ಗಣೇಶ ತನ್ನ ಕೈಗಳಲ್ಲಿ ಎಷ್ಟು ಸಾಧ್ಯವೊ ಅಷ್ಟು ಹೊತ್ತು ಹಿಡಿದುಕೊಳ್ಳುವುದಾಗಿಯೂ ಸಾಧ್ಯವಾಗದ ಸಂದರ್ಭದಲ್ಲಿ ಮೂರು ಬಾರಿ ರಾವಣನನ್ನು ಕೂಗಿ ನೆಲದ ಮೇಲೆ ಇದುವುದಾಗಿಯೂ ಶರತ್ತು ಹಾಕಿದ. ಗೋಕರ್ಣದ ಒಂದು ಚಿತ್ರ.

ಚಿತ್ರಕೃಪೆ: Sohini Basu

ಸಂಧ್ಯಾವಂದನೆ ಪ್ರಾರಂಭಿಸಿದ

ಸಂಧ್ಯಾವಂದನೆ ಪ್ರಾರಂಭಿಸಿದ

ಇದಕ್ಕೊಪ್ಪಿದ ರಾವಣ ಶೀಘ್ರದಲ್ಲಿ ಸಂಧ್ಯಾವಂದನೆ ಮಾಡಲು ಪ್ರಾರಂಭಿಸಿದ. ಹೀಗೆ ಅವನು ಸಂಧ್ಯಾವಂದನೆ ಮಾಡುತ್ತ ಅರ್ಧ ಸಮಯವೂ ಆಗಿರಲಿಲ್ಲ, ಗಣೇಶನು ಕೂಗಲು ಪ್ರಾರಂಭಿಸಿದ. ಇದರಿಂದ ವಿಚಲಿತನಾದ ರಾವಣ ಬಲು ವೇಗದಿಂದ ಪ್ರಾರ್ಥನೆ ಮುಗಿಸಿ ಬಾಲಕನ ಬಳಿ ಓಡಿದಾಗ ಬಾಲಕ ಆ ಆತ್ಮಲಿಂಗವನ್ನು ಅಲ್ಲಿಯೆ ಬಿಟ್ಟು ಹೋಗಿದ್ದುದನ್ನು ನೋಡಿ ದುಖಿತನಾದ. ಗೋಕರ್ಣದ ಒಂದು ಚಿತ್ರ.

ಚಿತ್ರಕೃಪೆ: Miran Rijavec

ಸಾಧ್ಯವಾಗಲಿಲ್ಲ

ಸಾಧ್ಯವಾಗಲಿಲ್ಲ

ನಂತರ ತನ್ನ ಸರ್ವ ಬಲದಿಂದ ಆ ಆತ್ಮಲಿಂಗವನ್ನು ಎಷ್ಟು ಮೇಲಕ್ಕೆತ್ತಲು ಪ್ರಯತ್ನಿಸಿದರೂ ಅವನಿಂದ ಕಿಂಚಿತ್ತೂ ಅದನ್ನು ಅಲುಗಾಡಿಸಲೂ ಸಹ ಸಾಧ್ಯವಾಗಲಿಲ್ಲ. ಅದರ ಆ ಅತಿಶಯ ಬಲವನ್ನು ಕಂಡು ರಾವಣನು ಆ ಆತ್ಮಲಿಂಗಕ್ಕೆ ಎಂತಹ ಮಹಾಬಲವಿರುವ ಶಿವಲಿಂಗವಿದು ಎಂದು ಒಂದು ಸಲ ಉದ್ಘರಿಸಿದ. ಅಂದಿನಿಂದಲೆ ಗೋಕರ್ಣದಲ್ಲಿ ಶಿವನನ್ನು ಮಹಾಬಲೇಶ್ವರನಾಗಿಯೆ ಪೂಜಿಸಲಾಗುತ್ತದೆ. ಗೋಕರ್ಣದ ಒಂದು ಚಿತ್ರ.

ಚಿತ್ರಕೃಪೆ: Anurag Dutta

ಇತರೆ ಕ್ಷೇತ್ರಗಳು

ಇತರೆ ಕ್ಷೇತ್ರಗಳು

ನಂತರ ತನ್ನ ನಿಸ್ಸಹಾಯಕತೆಯಿಂದ ಕೊಪಗೊಂಡ ರಾವಣನು ಆ ಆತ್ಮಲಿಂಗದ ಮೇಲೆ ಬಲವಾದ ಗುದ್ದುಗಳನ್ನು ಹೊಡೆದು ಕೆಲವು ಅದರ ಮೇಲಿರುವ ಕೆಲವು ಅಂಶಗಳನ್ನಷ್ಟೆ ಕಿತ್ತಿ ಅಲ್ಲಿ ಇಲ್ಲಿ ಬಿಸಾಡಿದ. ಹೀಗೆ ಅವನು ಬಿಸಾಡಿದ ಆ ಆತ್ಮಲಿಂಗ ಚೂರುಗಳೂ ಸಹ ಇಂದು ಗೋಕರ್ಣದ ಅಕ್ಕ ಪಕ್ಕದಲ್ಲಿದ್ದು ಧಾರ್ಮಿಕ ಮಹತ್ವ ಪಡೆದ ಸ್ಥಳಗಳಾಗಿವೆ. ಗೋಕರ್ಣದ ಒಂದು ಚಿತ್ರ.

ಚಿತ್ರಕೃಪೆ: Prashant Ram

ಏನಾದವು?

ಏನಾದವು?

ಆ ರೀತಿಯಾಗಿ ಆತ್ಮಲಿಂಗದ ಕೆಲವು ಅಂಶಗಳು ಬಿದ್ದ ಸ್ಥಳಗಳು ಇಂದು ಮುರುಡೇಶ್ವರ, ಧಾರೇಶ್ವರ, ಗುಣವಂತೇಶ್ವರ, ಶೆಜ್ಜೇಶ್ವರ ಸ್ಥಳಗಳಾಗಿದ್ದು ಗೋಕರ್ಣದ ಆಸು ಪಾಸಿನಲ್ಲೆ ನೆಲೆಸಿವೆ. ಅಲ್ಲದೆ ಈ ಸ್ಥಳಗಳಲ್ಲಿ ಶಿವನಿಗೆ ಮುಡಿಪಾದ ದೇವಾಲಯಗಳೂ ಸಹ ಇರುವುದನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Miran Rijavec

ಭೇಟಿ ನೀಡಿದ

ಭೇಟಿ ನೀಡಿದ

ಈ ಘಟನೆಯ ನಂತರ ಇದರ ಕುರಿತು ಸಂಪೂರ್ಣ ಮಾಹಿತಿಯು ಶಿವನಿಗೆ ದೊರಕಿತು ಹಾಗೂ ಅವನು ತನ್ನ ಮಡದಿ ಪಾರ್ವತಿ ಹಾಗೂ ತನ್ನ ಭೂತಗಣಗಳೊಂದಿಗೆ ಈ ಐದೂ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿ ಒಡಮೂಡಿದ್ದ ಆತ್ಮಲಿಂಗಗಳನ್ನು ಪೂಜಿಸಿದ. ಅಂದಿನಿಂದ ಇವು ಪಂಚ ಕ್ಷೇತ್ರಗಳು ಎಂದೆ ಪ್ರಸಿದ್ಧಿ ಪಡೆದಿವೆ.

ಚಿತ್ರಕೃಪೆ: Miran Rijavec

ಯಾವುವು ಗೊತ್ತೆ?

ಯಾವುವು ಗೊತ್ತೆ?

ಅಂದರೆ ಇಂದು ಸಾಮಾನ್ಯವಾಗಿ ಹೇಳಲಾಗುವ ಪಂಚ ಕ್ಷೇತ್ರಗಳು ಯಾವುವು ಎಂದರೆ, ಗೋಕರ್ಣ, ಮುರುಡೇಶ್ವರ, ಧಾರೇಶ್ವರ, ಗುಣವಂತೇಶ್ವರ, ಶೆಜ್ಜೇಶ್ವರ ಕ್ಷೇತ್ರಗಳು. ಎಲ್ಲವೂ ಇರುವುದು ಉತ್ತರ ಕನ್ನಡ ಜಿಲ್ಲೆಯಲ್ಲೆ. ಗೋಕರ್ಣಕ್ಕೆ ಸಾಮಾನ್ಯವಾಗಿ ಬಹಳಷ್ಟು ಸಂಖ್ಯೆಯಲ್ಲಿ ವಿದೇಶಿ ಪ್ರವಾಸಿಗರು ಭೇಟಿ ನೀಡುತ್ತಾರೆ.

ಚಿತ್ರಕೃಪೆ: Miran Rijavec

ಪರಶುರಾಮರ ಕೊಡಲಿ

ಪರಶುರಾಮರ ಕೊಡಲಿ

ಇನ್ನೊಂದು ಪ್ರತೀತಿಯಂತೆ ಪರಶುರಾಮರು ತಮ್ಮ ಕೊಡಲಿಯನ್ನು ಸಮುದ್ರದಲ್ಲಿ ದೂರದವರೆಗೆ ಎಸೆದು ಭೂಮಿಯನ್ನು ಸಮುದ್ರ ದೇವನಿಂದ ಪಡೆದಿದ್ದರು. ಹಾಗೆ ಸಮುದ್ರದಿಂದ ಪಡೆದ ಸ್ಥಳವು ಪ್ರಸ್ತುತ ಗೋಕರ್ಣದಿಂದ ಹಿಡಿದು ಕನ್ಯಾಕುಮಾರಿಯವರೆಗಿದೆ ಎಂದು ಹೇಳಲಾಗುತ್ತದೆ.

ಚಿತ್ರಕೃಪೆ: Manoj Vasanth

ಶಿವನಿಗೆ ಮುಡಿಪಾದ

ಶಿವನಿಗೆ ಮುಡಿಪಾದ

ಇನ್ನೂ ಗೋಕರ್ಣದಲ್ಲಿ ನೋಡಬಹುದಾದ ಕೆಲವು ಪ್ರವಾಸಿ ಆಕರ್ಷಣೆಗಳ ಕುರಿತು ತಿಳಿಯಿರಿ. ಮೊದಲನೇಯದಾಗಿ ಮುಖ್ಯವಾದ ಮಹಾಬಲೇಶ್ವರ ದೇವಸ್ಥಾನ. ಇಲ್ಲಿ ಶಿವನ ಆತ್ಮಲಿಂಗವನ್ನು ನೋಡಬಹುದಾಗಿದೆ. ಸಾಕಷ್ಟು ಶಿವ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Sbblr geervaanee

ಬಲು ಅಪರೂಪ

ಬಲು ಅಪರೂಪ

ಮಹಾಬಲೇಶ್ವರ ದೇವಾಲಯದಲ್ಲಿ ಇಂದಿಗೂ ಆರು ಅಡಿಗಳಷ್ಟು ಎತ್ತರದ ಶಿವನ ಆತ್ಮಲಿಂಗವಿರುವುದನ್ನು ಕಾಣಬಹುದು. ಆದರೆ ಈ ಆತ್ಮಲಿಂಗದ ದರ್ಶನ ಬೇಕೆಂದಾಗ ಆಗಲು ಸಾಧ್ಯವೆ ಇಲ್ಲ. ಅದಕ್ಕಾಗಿ 40 ವರ್ಷಗಳಷ್ಟು ಕಾಯಬೇಕು. ಪ್ರತಿ 40 ವರ್ಷಕ್ಕೊಮ್ಮೆ ಜರುಗುವ ಅಷ್ಟಕುಂಬಾಭಿಷೇಕದ ಸಮಯದಲ್ಲಿ ಈ ಆತ್ಮಲಿಂಗವನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Sbblr geervaanee

ಪವಿತ್ರ ಕಲ್ಯಾಣಿ

ಪವಿತ್ರ ಕಲ್ಯಾಣಿ

ಕೋಟಿತೀರ್ಥ ಇದೊಂದು ಪಾವಿತ್ರ್ಯತೆ ಪಡೆದಿರುವ ಕಲ್ಯಾಣಿಯಾಗಿದೆ. ಗೋಕರ್ಣದ ಮಹಾಬಲೇಶ್ವರ ದೇವಾಲಯದ ಬಳಿ ಇರುವ ಈ ಕಲ್ಯಾಣಿಯ ನೀರನ್ನು ಉತ್ಸವ ಮೂರ್ತಿಗಳ ಶುದ್ಧಿಕರಣಕ್ಕೆ ಹಾಗೂ ಇತರೆ ನಿಮಜ್ಜನ ಕಾರ್ಯಗಳಿಗೆ ಬಳಸಲಾಗುತ್ತದೆ.

ಚಿತ್ರಕೃಪೆ: Miran Rijavec

ಆಕಾರ ಹಾಗಿದೆ

ಆಕಾರ ಹಾಗಿದೆ

ಓಂ ಕಡಲ ತೀರ, ಗೋಕರ್ಣದಲ್ಲಿರುವ ಸುಂದರ ಕಡಲ ಕಿನಾರೆಯಾಗಿದೆ. ಪ್ರವಾಸಿಗರ ನೆಚ್ಚಿನ ತಾಣವಾದ ಈ ಕಡಲ ತೀರವನ್ನು ಮೇಲಿನಿಂದ ಗಮನಿಸಿದಾಗ ಇದು ॐ ಆಕಾರದಲ್ಲಿ ಕಂಡುಬರುತ್ತದೆ. ಹಾಗಾಗಿ ಇದನ್ನು ಓಂ (ॐ ) ಕಡಲ ತೀರ ಎಂದು ಕರೆಯುತ್ತಾರೆ.

ಚಿತ್ರಕೃಪೆ: Jo Kent

ಹೇಗೆ ತಲುಪಬಹುದು

ಹೇಗೆ ತಲುಪಬಹುದು

ಗೋಕರ್ಣವು ಬೆಂಗಳೂರಿನಿಂದ 485 ಕಿ.ಮೀ, ಕಾರವಾರದಿಂದ 60 ಕಿ.ಮೀ, ಮಂಗಳೂರಿನಿಂದ 240 ಕಿ.ಮೀ ಹಾಗೂ ಕುಮಟಾದಿಂದ 30 ಕಿ.ಮೀ ಗಳಷ್ಟು ದೂರವಿದೆ. ಬೆಂಗಳೂರು, ಮಂಗಳೂರು, ಕಾರವಾರಗಲಿಂದ ನಿತ್ಯ ಬಸ್ಸುಗಳು ಗೋಕರ್ಣಕ್ಕಿವೆ. ಅಲ್ಲದೆ ಕೊಂಕಣ ರೈಲು ಮಾರ್ಗದಲ್ಲಿ ಮಂಗಳೂರು-ಮುಂಬೈ ಅಥವಾ ಮಂಗಳೂರು-ಗೋವಾ ಮಾರ್ಗದಲ್ಲಿ ಗೋಕರ್ಣ ರಸ್ತೆ ರೈಲು ನಿಲ್ದಾಣವಿದ್ದು ಅಲ್ಲಿಂದ ಏಳು ಕಿ.ಮೀ ಗಳಷ್ಟು ದೂರದಲ್ಲಿ ಗೋಕರ್ಣವಿದೆ.

ಚಿತ್ರಕೃಪೆ: Sudhakarbichali

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X