Search
  • Follow NativePlanet
Share
» »ಯಾವ ಉತ್ಸವಕ್ಕೆ ಯಾವ ರಾಜ್ಯ ಹೆಸರುವಾಸಿ?

ಯಾವ ಉತ್ಸವಕ್ಕೆ ಯಾವ ರಾಜ್ಯ ಹೆಸರುವಾಸಿ?

By Vijay

ನಾಡ ಉತ್ಸವಗಳು ಅಥವಾ ರಾಜ್ಯ ಉತ್ಸವಗಳ ವಿಶೇಷತೆ ಅಪಾರವಾಗಿರುತ್ತದೆ. ಇದರಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಈ ಉತ್ಸವಗಳ ಆನಂದ ಅಥವಾ ಅದರ ಆಕರ್ಷಣೆ ರಾಜ್ಯದ ಬಹುತೇಕ ಎಲ್ಲ ಸ್ಥಳಗಳಿಗೂ ವ್ಯಾಪಿಸಿರುತ್ತದೆ. ಹೀಗಾಗಿ ರಾಜ್ಯಕ್ಕೆ ರಾಜ್ಯವೆ ಇಂತಹ ಉತ್ಸವದ ಸಂದರ್ಭದಲ್ಲಿ ಸಜ್ಜಾಗಿರುತ್ತದೆ.

ಭಾರತವು 29 ರಾಜ್ಯಗಳ ಒಂದು ಒಕ್ಕೂಟ ವ್ಯವಸ್ಥೆಯಿರುವ ದೇಶ. ಇಲ್ಲಿರುವ ಎಲ್ಲ ರಾಜ್ಯಗಳಲ್ಲೂ ಸಂಸ್ಕೃತಿ-ಸಂಪ್ರದಾಯಗಳು, ಆಚಾರ-ವಿಚಾರಗಳು ಸಾಕಷ್ಟು ವೈವಿಧ್ಯಮಯತೆಯಿಂದ ಕೂಡಿದೆ. ಒಂದೊಂದು ರಾಜ್ಯದ ಒಂದೊಂದು ನಾಡ ಉತ್ಸವಗಳು ಒಂದೊಂದು ರೀತಿಯಲ್ಲಿ ವಿಶೇಷವಾಗಿದ್ದು ಅವರ ಸಂಸ್ಕೃತಿಯನ್ನು ಬಲು ಹತ್ತಿರದಿಂದ ನೋಡಲು ಬಲು ಸಹಕಾರಿಯಾಗಿವೆ.

ವೈವಿಧ್ಯತೆಯಲ್ಲಿ ಏಕತೆಯಿರುವ ಭಾರತದ ಇತರೆ ಆಕರ್ಷಕ ಹಾಗೂ ಹೊಸ ಮುಖಗಳನ್ನು ಕಾಣುವ ಚಪಲ, ನೋಡುವ ಕುತೂಹಲ ನಿಮಗಿದ್ದರೆ ಈ ರಾಜ್ಯಗಳ ಪ್ರಮುಖ ಹಬ್ಬಗಳ ಸಂದರ್ಭದಲ್ಲಿ ಭೇಟಿ ನೀಡಲೇಬೇಕು. ಇದರಿಂದ ಭವ್ಯ ಭಾರತದ ಅಗೋಚರ ಮುಖ, ವೈವಿಧ್ಯತೆ ನಿಮಗೆ ದರ್ಶನವಾಗುತ್ತದೆ.

ಹಾಗಾದರೆ, ಪ್ರಸ್ತುತ ಲೇಖನದ ಮೂಲಕ ಭಾರತದ ಯಾವ ಯಾವ ರಾಜ್ಯಗಳು ಯಾವ ಯಾವ ಪ್ರಮುಖ ಉತ್ಸವಗಳಿಗೆ ಪ್ರಸಿದ್ಧವಾಗಿವೆ ಹಾಗೂ ಆಯಾ ಸಂದರ್ಭದಲ್ಲಿ ಯಾವ ಯಾವ ರಾಜ್ಯಗಳಿಗೆ ಭೇಟಿ ನೀಡಿದಾಗ ಪ್ರವಾಸದ ಗರಿಷ್ಠ ಆನಂದ ಪಡೆಯಬಹುದೆಂಬುದರ ಕುರಿತು ತಿಳಿಯಿರಿ.

ಯುಗಾದಿ

ಯುಗಾದಿ

ಇತ್ತೀಚಿಗಷ್ಟೆ ವಿಭಜನೆಗೊಂಡು ಹೊಸ ನಕ್ಷೆ ಪಡೆದಿರುವ ಆಂಧ್ರಪ್ರದೇಶವು ದಕ್ಷಿಣ ಭಾರತದ ಒಂದು ರಾಜ್ಯವಾಗಿದ್ದು ಇಲ್ಲಿ ಪ್ರಮುಖವಾಗಿ ಆಚರಿಸಲ್ಪಡುವ ಉತ್ಸವವೆಂದರೆ ಯುಗಾದಿ ಹಬ್ಬ. ಹಿಂದು ಸಂಪ್ರದಾಯದಂತೆ ಇದು ಹೊಸ ವರ್ಷದ ಸಂಭ್ರಮಾಚರಣೆಯಾಗಿದ್ದು ರಾಜ್ಯದೆಲ್ಲೆಡೆ ಸಂಭ್ರಮ ಮೂಡಿರುತ್ತದೆ. ಹಬ್ಬ ಬರುವ ಒಂದು ವಾರದ ಮುಂಚೆಯೆ ಮನೆಗಳನ್ನು ಶುಚಿಗೊಳಿಸಲಾಗುತ್ತದೆ, ನಂಟರ ಬರುವಿಕೆ, ವಿವಿಧ ಖಾದ್ಯಗಳ ತಯಾರಿ ಹೀಗೆ ಹಬ್ಬದ ಆನಂದ ಏರುತ್ತಲೆ ಸಾಗುತ್ತದೆ. ಆ ದಿನದಂದು ಹೊಸ ಉಡುಪುಗಳನ್ನು ಕೊಂಡು ಹಾಕಿಕೊಂಡು ಸಂತಸಪಡಲಾಗುತ್ತದೆ. ಪಕ್ಕದ ಕರ್ನಾಟಕ ಹಾಗೂ ಮಹಾರಾಷ್ಟ್ರಗಳಲ್ಲೂ ಸಹ ಇದನ್ನು ಆಚರಿಸಲಾಗುತ್ತದೆ. ಬಲು ವಿಶೇಷವಾದ ಉಗಾದಿ ಪಚಡಿ.

ಚಿತ್ರಕೃಪೆ: Kalyan Kanuri

ಲೋಹ್ಸಾರ್ ಉತ್ಸವ

ಲೋಹ್ಸಾರ್ ಉತ್ಸವ

ಈಶಾನ್ಯ ಭಾರತದ ಪುಟ್ಟ ಹಾಗೂ ಪ್ರಾಕೃತಿಕ ಸೌಂದರ್ಯದಿಂದ ಕೂಡಿರುವ ರಾಜ್ಯವಾದ ಅರುಣಾಚಲ ಪ್ರದೇಶದಲ್ಲಿ ಅದ್ಭುತವಾಗಿ ಆಚರಿಸ್ಲಾಗುವ ಉತ್ಸವವೆಂದರೆ ಲೋಹ್ಸಾರ್/ಲೋಸಾರ್ ಉತ್ಸವ. ಈ ಸಮ್ದರ್ಭದಲ್ಲಿ ಅರುಣಾಚಲ ಪ್ರದೇಶದ ವಾಸಿಗಳು ತುಂಬು ಸಂತಸದಿಂದ ಕೂಡಿರುತ್ತಾರೆ ಹಾಗೂ ಎಲ್ಲರೂ ಒಂದೆಡೆ ಸೇರಿ ಸಂಭ್ರಮಿಸುತ್ತಾರೆ. ಕುಣಿತ, ಸಂಗೀತ, ಭರ್ಜರಿ ಭೋಜನ ಸಾಮಾನ್ಯವಾಗಿರುತ್ತದೆ. ಹೊಸ ವರ್ಷಾಚರಣೆಯ ಸಂಕೇತ ಇದಾಗಿದೆ.

ಚಿತ್ರಕೃಪೆ: Fountain Posters

ಬಿಹು

ಬಿಹು

ಅಸ್ಸಾಮಿ ಜನರು ತಮ್ಮ ಪೂರ್ವಜರಿಂದ ಬಳುವಳಿಯಾಗಿ ಪಡೆದುಕೊಂಡು ಇಂದಿಗೂ ಜೀವಂತವಿಟ್ಟು ಅತ್ಯಂತ ಸಡಗರ ಹಾಗೂ ಆನಂದಗಳಿಂದ ಭಾಗವಹಿಸುವ ಉತ್ಸವ ಬಿಹು ಉತ್ಸವ. ಇದು ಅಸ್ಸಾಂ ರಾಜ್ಯದ ಉತ್ಸವ ಎಂದೆ ಖ್ಯಾತಿಗಳಿಸಿದೆ. ಈ ಉತ್ಸವದ ಪ್ರಮುಖ ಆಕರ್ಷಣೆಗಳೆಂದರೆ ಬಿಹು ನೃತ್ಯ ಹಾಗೂ ಬಿಹು ಸಂಗೀತ. ಈ ಅದ್ಭುತ ಉತ್ಸವ ಸುಮಾರು ಏಳು ದಿನಗಳ ಕಾಲ ವಿವಿಧ ಹೆಸರುಗಳಿಂದ ಆಚರಿಸಲ್ಪಡುವುದು ಮತ್ತೊಂದು ವಿಶೇಷ.

ಚಿತ್ರಕೃಪೆ: Jaideep kumar dohutia

ಛತ್ ಪೂಜಾ

ಛತ್ ಪೂಜಾ

ಇದೊಂದು ವೈದಿಕ ಶಾಸ್ತ್ರಾನುಸಾರ ಆಚರಿಸಲಾಗುವ ಉತ್ಸವವಾಗಿದ್ದು ಸೂರ್ಯ ದೇವರಿಗೆ ಮುಡಿಪಾದ ಕುತೂಹಲಕರ ಉತ್ಸವವಾಗಿದೆ. ಸಾಮಾನ್ಯವಾಗಿ ಉತ್ತರ ಭಾರತದಲ್ಲಿ ಈ ಉತ್ಸವದ ಆಚರಣೆ ಪ್ರಚಲಿತದಲ್ಲಿದ್ದು ಬಿಹಾರ ರಾಜ್ಯದಲ್ಲಿ ಈ ಹಬ್ಬಕ್ಕೆ ಹೆಚ್ಚಿನ ತೂಕವಿದೆ. ಸೂರ್ಯ ದೇವರು ಭೂಮಿಯಲ್ಲಿ ಸರ್ವ ಜೀವಿಗಳನ್ನು ಕಾಯುತ್ತಿರುವುದಕ್ಕೆ ಗೌರವ ಸೂಚಕವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ.

ಚಿತ್ರಕೃಪೆ: Steffen Gauger

ಮಾಘಿ ಪೂರ್ಣಿಮಾ

ಮಾಘಿ ಪೂರ್ಣಿಮಾ

ಛತ್ತೀಸಗಡ್ ರಾಜ್ಯದಲ್ಲಿ ದಸರಾ, ದೀಪಾವಳಿಗಳಂತಹ ಹಬ್ಬಗಳನ್ನು ಅದ್ದೂರಿಯಿಂದ ಆಚರಿಸಲಾದರೂ ಮಾಘಿ ಪೂರ್ಣಿಮಾ ಹಬ್ಬವನ್ನು ರಾಜ್ಯದೆಲ್ಲೆಡೆ ಬಲು ಸಡಗರ ಹಾಗೂ ಸಂಭ್ರಮಗಳಿಂದ ಆಚರಿಸುತ್ತಾತೆ. ಮಾಘ ಮಾಸದ ಈ ಹಬ್ಬವು ಗುರು ಘಸಿದಾಸ್ ಅವರ ಜನ್ಮ ಸಮಯವೂ ಬರುವುದರಿಂದ ಇದಕ್ಕೆ ಹೆಚ್ಚಿನ ಮಹತ್ವ ಬಂದಿದೆ.

ಚಿತ್ರಕೃಪೆ: Pankaj Oudhia

ಶಿಗ್ಮೊ

ಶಿಗ್ಮೊ

ಗೋವಾದ ಗ್ರಾಮೀಣ ಹಾಗೂ ಕೊಂಕಣಿ ಸಂಸ್ಕೃತಿಯನ್ನು ಅನಾವರಣಗೊಳಿಸುವ ಶಿಗ್ಮ್ ಮೇಳ ರಾಜ್ಯದ ಪ್ರಮುಖ ಉತ್ಸವವಾಗಿದೆ. ಇದರಲ್ಲಿ ಜನರು ಅತ್ಯಂತ ಸಂತಸದಿಂದ ಪಾಲ್ಗೊಂಡು ಸಂಭ್ರಮಿಸುತ್ತಾರೆ. ಮೆರವಣಿಗೆ, ಜಾನಪದ ನೃತ್ಯ, ಸಂಗೀತಗಳು ಅವ್ಯಾಹತವಾಗಿ ಸಾಗುತ್ತವೆ. ಪ್ರತಿ ವರ್ಷದ ಮಾರ್ಚ್ ಸಮಯದಲ್ಲಿ ನೀವು ಗೋವಾಗೆ ಭೇಟಿ ನೀಡಿದರೆ ಈ ಅದ್ಭುತ ಉತ್ಸವವನ್ನು ಕಣ್ಣಾರೆ ಕಂಡು ಆನಂದಿಸಬಹುದು.

ಚಿತ್ರಕೃಪೆ: Abhisek Sarda

ನವರಾತ್ರ

ನವರಾತ್ರ

ದೇವಿ ದುರ್ಗೆಯನ್ನು ಅತ್ಯಂತ ಭಕ್ತಿ-ಶೃದ್ಧೆಗಳಿಂದ ಒಂಭತ್ತು ದಿನಗಳ ಕಾಲ ಆರಾಧಿಸುವ ಅಕ್ಟೋಬರ್ ಸಮಯದಲ್ಲಿ ಬರುವ ನವರಾತ್ರ/ನವರಾತ್ರಿ ಉತ್ಸವವು ಗುಜರಾತ್ ರಾಜ್ಯದ ಪ್ರಮುಖ ಉತ್ಸವವಾಗಿದೆ. ದಾಂಡಿಯಾ (ಕೋಲಾಟ) ಈ ಸಂದರ್ಭದಲ್ಲಿ ಉತ್ಸವದ ಪ್ರಮುಖ ಆಕರ್ಷಣೆಯಾಗಿರುತ್ತದೆ.

ಚಿತ್ರಕೃಪೆ: Donald Judge

ಗುಗ್ಗಾ ನವಮಿ

ಗುಗ್ಗಾ ನವಮಿ

ನಮ್ಮಲ್ಲಿ ನಾಗರ ಪಂಚಮಿ ಹೇಗೊ ಅದೆ ರೀತಿಯಾಗಿ ಹರಿಯಾಣದಲ್ಲೂ ಸಹ ನಾಗಗಳನ್ನು ಆರಾಧಿಸುವ ಉತ್ಸವವಾಗಿದೆ ಗುಗ್ಗಾ ನವಮಿ. ಅಗಸ್ಟ್-ಸೆಪ್ಟಂಬರ್ ಸಮಯದಲ್ಲಿ ಈ ಉತ್ಸವವನ್ನು ಭಕ್ತಿಯಿಂದ ರಾಜ್ಯದೆಲ್ಲೆಡೆ ಆಚರಿಸಲಾಗುತ್ತದೆ.

ಹಿಮಾಚಲ ಪ್ರದೇಶ

ಹಿಮಾಚಲ ಪ್ರದೇಶ

ಇದೊಂದು ವಿಚಿತ್ರ ಉತ್ಸವವಾಗಿದ್ದರೂ ಅದರದೆ ಆದ ಮಹತ್ವ ಹಾಗೂ ವಿಶೇಷತೆ ಹೊಂದಿದೆ. ಸಾಮಾನ್ಯವಾಗಿ ಹಿಮಾಚಲ ಪ್ರದೇಶ ರಾಜ್ಯದ ಭಾಗಗಳಲ್ಲಿ ಈ ಉತ್ಸವವನ್ನು ಪ್ರತಿ ವರ್ಷ ಫೆಬ್ರುವರಿ ಸಮಯದಲ್ಲಿ ಆಚರಿಸುತ್ತಾರೆ. ಹಿಂದಿನ ವರ್ಷ ಮನೆಯಲ್ಲಿ ಹುಟ್ಟಿರುವ ಗಂಡು ಸಂತಾನದ ಸಂತಸಕ್ಕಾಗಿ ಇದನ್ನು ಆಚರಿಸಲಾಗುತ್ತದೆ. ಸುಂದರ ಹಿಮಾಚಲ ಪ್ರದೇಶ ನೋಟ.

ಚಿತ್ರಕೃಪೆ: Kprateek88

ಬಾಹು ಮೇಳ

ಬಾಹು ಮೇಳ

ಕಣಿವೆ ರಾಜ್ಯ, ಜಮ್ಮು ಮತ್ತು ಕಾಶ್ಮೀರದಲ್ಲಿ ರಾಮನವಮಿಯ ಸಂದರ್ಭದಂದು ಆಚರಿಸಲಾಗುವ ಬಾಹು ಮೇಳ/ಉತ್ಸವವು ಬಲು ಆಕರ್ಷಕ ಹಾಗೂ ಜನಪ್ರೀಯವಾದ ಹಬ್ಬವಾಗಿದೆ. ಎಲ್ಲ ವಯೋಮಾನದವರು ಹಾಗೂ ಎಲ್ಲ ವರ್ಗದವರು ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಜಮ್ಮು ನಗರದ ಬಾಹು ಕೋಟೆಯಲ್ಲಿರುವ ಕಾಳಿ ದೇವಾಲಯವು ಈ ಉತ್ಸವದ ಪ್ರಮುಖ ಕೇಂದ್ರವಾಗಿದೆ.

ಚಿತ್ರಕೃಪೆ: Nvvchar

ಕರಮ್ ಉತ್ಸವ

ಕರಮ್ ಉತ್ಸವ

ಜಾರ್ಖಂಡ್ ರಾಜ್ಯದಲ್ಲಿ ಆಚರಿಸಲ್ಪಡುವ ಕರಮ್ ಉತ್ಸವ ಒಂದು ವಿಶಿಷ್ಟ ಉತ್ಸವವಾಗಿದೆ. ಜಾರ್ಖಂಡ್ ನ ರೈತಾಪಿ ಜನರು ಶಕ್ತಿ, ಸಾಮರ್ಥ್ಯಗಳ ಅವತಾರವಾದ ಕರಮ್ ದೇವತೆಯನ್ನು ಪೂಜಿಸುವ ಉತ್ಸವ ಇದಾಗಿದೆ.

ಚಿತ್ರಕೃಪೆ: Pankaj076

ದಸರಾ ಹಬ್ಬ

ದಸರಾ ಹಬ್ಬ

ಸೆಪ್ಟಂಬರ್-ನವಂಬರ್ ಸಮಯದಲ್ಲಿ ಬರುವ ದಸರಾ ಉತ್ಸವ ಕರ್ನಾಟಕ ರಾಜ್ಯದ ಪ್ರಮುಖ ಉತ್ಸವವಾಗಿದೆ. ಅದರಲ್ಲೂ ಮೈಸೂರು ದಸರಾ ಉತ್ಸವ ನಾಡ ಹಬ್ಬವಾಗಿದ್ದು ತನ್ನ ಶ್ರೀಮಂತ ಇತಿಹಾಸದ ಕಾರಣದಿಂದಾಗಿ ಜಗದ್ವಿಖ್ಯಾತಿಗಳಿಸಿದೆ. ಹತ್ತು ದಿನಗಳ ಕಾಲ ರಜ್ಜ್ಯದೆಲ್ಲೆಡೆ ಹಾಗೂ ಮೈಸೂರಿನಲ್ಲಿ ಅದ್ದೂರಿಯಾಗಿ ಆಚರಿಸಲ್ಪಡುತ್ತದೆ.

ಚಿತಕೃಪೆ: Kalyan Kumar

ಓಣಂ

ಓಣಂ

ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಅತಿ ಪ್ರಮುಖ ಉತ್ಸವಗಳಲ್ಲೊಂದಾಗಿದೆ ಓಣಂ/ಓಣಮ್. ವಿಶೇಷವಾಗಿ ಕೇರಳ ರಾಜ್ಯದಲ್ಲಾಚರಿಸಲಾಗುವ ಅತಿ ಮಹತ್ವದ ಉತ್ಸವವಾಗಿ ಓಣಂ ಪ್ರಸಿದ್ಧವಾಗಿದೆ. ಈ ಹಬ್ಬದ ಪ್ರಾಮುಖ್ಯತೆ ಎಷ್ಟಿದೆ ಎಂದರೆ ಇದು ರಾಜ್ಯ ಉತ್ಸವವಾಗಿ ಎಲ್ಲೆಡೆ ಅದ್ದೂರಿಯಿಂದ ಆಚರಿಸಲ್ಪಡುತ್ತದೆ. ಓಣಂ ಸಾದ್ಯಾ (ಮೃಷ್ಟಾನ ಭೋಜನ).

ಚಿತ್ರಕೃಪೆ: Augustus Binu

ಲೋಕರಂಗ್

ಲೋಕರಂಗ್

ಇದೊಂದು ನೃತ್ಯೋತ್ಸವವಾಗಿದೆ ಹಾಗೂ ರಾಜ್ಯದ ಗಮನಾರ್ಹ ಬುಡಕಟ್ಟು ಉತ್ಸವವಾಗಿದೆ. ಮಧ್ಯ ಪ್ರದೇಶ ಸರ್ಕಾರದ ಸಂಬಂಧಪಟ್ಟ ಇಲಾಖೆಯಿಂದ ಈ ಅದ್ಭುತ ನೃತ್ಯೋತ್ಸವವನ್ನು ಆಯೋಜಿಸಲಾಗುತ್ತದೆ. ವಿವಿಧ ಗ್ರಾಮಗಳ ಬುಡಕಟ್ಟು ಜನಾಂಗಗಳು ಹಿಂದಿನಿಂದಲೂ ಅನುಸರಿಸಿಕೊಂಡು ಬಂದಿರುವ ನೃತ್ಯಗಳನ್ನು ಇನ್ನೂ ಜೀವಂತವಾಗಿರಿಸುವ ಉದ್ದೇಶ ಈ ಉತ್ಸವ ಹೊಂದಿದೆ. ಸಾಂದರ್ಭಿಕ.

ಚಿತ್ರಕೃಪೆ: Dennis Jarvis

ಗಣೇಶ ಚತುರ್ಥಿ

ಗಣೇಶ ಚತುರ್ಥಿ

ನಿಮಗೆಲ್ಲ ಗೊತ್ತಿರುವಂತೆ ದೇಶದಲ್ಲೆ ಗಣೇಶ ಚತುರ್ಥಿಯು ಅತ್ಯಂತ ವಿಜೃಂಭಣೆಯಿಂದ ನಡೆಯುವ ರಾಜ್ಯವೆಂದರೆ ಮಹಾರಾಷ್ಟ್ರ. ಈ ಉತ್ಸವದ ಸಂದರ್ಭದಲ್ಲಿ ಸಂಪೂರ್ಣ ರಾಜ್ಯವೆ ಹನ್ನೊಂದು ದಿನಗಳ ಕಾಲ ಕಳೆಗಟ್ಟಿರುತ್ತದೆ.

ಚಿತ್ರಕೃಪೆ: VedSutra

ಯಾವ್ ಶಾಂಗ್

ಯಾವ್ ಶಾಂಗ್

ಇದೊಂದು ರೀತಿ ಬಣ್ಣದ ಹಬ್ಬ. ಮಣಿಪುರ ರಾಜ್ಯದಲ್ಲಿ ನವಂಬರ್ ನಲ್ಲಿ ಆಚರಿಸಲಾಗುವ ಯಾವ್ ಶಾಂಗ್ ಉತ್ಸವ ಬಲು ಆಕರ್ಷಣೆಯಿಂದ ಕೂಡಿರುತ್ತದೆ. ಹಣ ಸಂಗ್ರಹಣೆ, ಹೆಣ್ಣು ಮಕ್ಕಳು ತಮ್ಮ ನಂಟರ ಮನೆಗೆ ಹೋಗಿ ಅಡಿಗೆ ಮಾಡುವುದು ಹೀಗೆ ಆಚರಣೆಗಳು ನಡೆಯುತ್ತವೆ. ಐದು ದಿನಗಳ ಕಾಲ ನಡೆಯುವ ಈ ಉತ್ಸವ ಕೊನೆಯಲ್ಲಿ ಬಣ್ಣ ಆಡುವ ಮೂಲಕ ಸಮಾಪ್ತಗೊಳ್ಳುತ್ತದೆ.

ಚಿತ್ರಕೃಪೆ: Akkkanksha

ಖಾಸಿಸ್

ಖಾಸಿಸ್

ಮೋಡಗಳ ನಿವಾಸವಿರುವ, ಎತ್ತರದಲ್ಲಿ ನಲೆಸಿರುವ ಈಶಾನ್ಯ ಭಾರತದ ಪ್ರಾಕೃತಿಕ ಸೌಂದರ್ಯದಿಂದ ಕಂಗೋಲಿಸುವ ಮೇಘಾಲಯ ರಾಜ್ಯದ ಪ್ರಮುಖ ಉತ್ಸವ ಖಾಸಿಸ್. ಈ ಉತ್ಸವದಲ್ಲಿ ನೃತ್ಯ್ ಪ್ರಮುಖವಾಗಿದ್ದು ಅದರ ಮೂಲಕ ಮೇಘಾಲಯದ ಸಾಂಪ್ರದಾಯಿಕ ನಿವಾಸಿಗಳು ತಮ್ಮ ಆಚರಣೆಗಳ ಶ್ರೀಮಂತಿಕೆಯನ್ನು ಮೆರೆಯುತ್ತಾರೆ.

ಚಿತ್ರಕೃಪೆ: Vishma thapa

ಚಪ್ಚಾರ್ ಕುಟ್

ಚಪ್ಚಾರ್ ಕುಟ್

ಸಾಕಷ್ಟು ಉತ್ಸವಗಳು ಈ ರಾಜ್ಯದಲ್ಲಿ ಆಚರಿಸಲ್ಪಡುತ್ತವಾದರೂ ಗಮನ ಸೆಳೆವ ಉತ್ಸವವೆಂದರೆ ಚಪ್ಚಾರ್ ಕುಟ್. ಸಾಂಪ್ರದಾಯಿಕ ಉತ್ಸವವು ಮಿಜೋರಾಮ್ ಸಾಂಪ್ರದಾಯಿಕ ಶ್ರೀಮಂತಿಕೆಯನ್ನು ಬಿಂಬಿಸುತ್ತದೆ.

ಚಿತ್ರಕೃಪೆ: Coolcolney

ಸೆಕ್ರೆನ್ಯಿ

ಸೆಕ್ರೆನ್ಯಿ

ನಾಗಾಲ್ಯಾಂಡ್ ನಲ್ಲಿ ಹೆಚ್ಚಾಗಿ ಹಲವಾರು ಬುಡಕಟ್ಟು ಜನಾಂಗಗಳ ಜನರೆ ವಾಸಿಸುತ್ತಾರೆ. ಹೀಗಾಗಿ ಇಲ್ಲಿ ಹತ್ತು ಹಲವು ಉತ್ಸವಗಳು ಆಚರಿಸಲಾಗುವುದನ್ನು ಕಾಣಬಹುದು. ಆದಾಗ್ಯೂ ಇವರ ಬುಡಕಟ್ಟು ಸಂಸ್ಕೃತಿಯ ಶ್ರೀಮಂತಿಕೆಯನ್ನು ಬಿಂಬಿಸುವ ಸೆಕ್ರೆನ್ಯಿ ಉತ್ಸವ ಜೋರಾಗಿ ನಡೆಯುತ್ತದೆ. ನೃತ್ಯವೆ ಉತ್ಸವದ ಜೀವಾಳ.

ಚಿತ್ರಕೃಪೆ: Vikramjit Kakati

ಡೋಲಾ ಯಾತ್ರೆ

ಡೋಲಾ ಯಾತ್ರೆ

ಜಗನ್ನಾಥ ದೇವರೊಂದಿಗೂ, ಹೊಸ ವರ್ಷದೊಂದಿಗೂ ನಂಟನ್ನು ಹೊಂದಿರುವ ಡೋಲಾ ಯಾತ್ರೆ ಒಡಿಶಾದ ಮನಮೋಹಕ ಉತ್ಸವಾಗಿ ಪ್ರವಾಸಿಗರ ಗಮನಸೆಳೆಯುತ್ತದೆ. ಒರಿಯಾ ಕ್ಯಾಲೆಂಡರಿನ ನಿರ್ಮಾಣದ ನಂಟನ್ನು ಈ ಉತ್ಸವ ಹೊಂದಿದೆ.

ಚಿತ್ರಕೃಪೆ: AshokWikiAc

ಬಂದಿ ಚೋಡ್ ದಿವಸ್

ಬಂದಿ ಚೋಡ್ ದಿವಸ್

ಕೈದಿ ಬಿಡುಗಡೆಗೊಂಡ ದಿನ ಎಂದು ಇದನ್ನು ಅರ್ಥೈಸಬಹುದಾಗಿದೆ. ಹಾಗೆ ನೋಡಿದರೆ ಪಂಜಾಬ್ ರಾಜ್ಯದಲ್ಲೂ ಮಾಘಿ ಪೂರ್ಣಿಮಾ, ಬಸಂತ, ದೀಪಾವಳಿ ಹೀಗೆ ಹತ್ತ ಹಲವು ಉತ್ಸವಗಳನ್ನು ಆಚರಿಸುವುದನ್ನು ಕಾಣಬಹುದು. ಆದರೆ ದೀಪಾವಳಿ ಸಮಯದಲ್ಲೆ ಬರುವ ಈ ದಿನ ಬಲು ವಿಶಿಷ್ಟವಾಗಿ ಆಚರಿಸಲ್ಪಡುತ್ತದೆ. ಇದೆ ದಿನದಂದು ಸಿಖ್ಖರ ಆರನೇಯ ಗ್ರುವಾದ ಗುರು ಹರಗೋಬಿಂದರು ಗ್ವಾಲಿಯರ್ ಜೈಲಿನಿಂದ ಬಿಡುಗಡೆ ಹೊಂದಿದ್ದರು.

ಚಿತ್ರಕೃಪೆ: wikipedia

ಗಂಗೌರ್

ಗಂಗೌರ್

ಮರಭೂಮಿಗಳ ರಾಜ್ಯ, ಕೋಟೆಗಳ ತಾಣ ಎಂದೆಲ್ಲ ಕರೆಸಿಕೊಳ್ಳುವ ರಾಜಸ್ಥಾನ ರಾಜ್ಯದಲ್ಲಿ ಬಿತ್ತನೆಗೆ ಸಂಬಂಧಿಸಿದಂತೆ ಹಾಗೂ ಮಾತೆ ಗೌರಿಯ ಜನನಕ್ಕೆ ಸಂಬಂಧಿಸಿದಂತೆ ಬಲು ಅದ್ದೂರಿಯಾಗಿ ಆಚರಿಸಲಾಗುವ ಹಬ್ಬವೆ ಗಂಗೌರ್.

ಚಿತ್ರಕೃಪೆ: Ggia

ಲೋಸರ್

ಲೋಸರ್

ಅರುಣಾಚಲದಂತೆ ಸಿಕ್ಕಿಂನಲ್ಲೂ ಸಹ ಲೋಸರ್ ಹಬ್ಬ ವಿಶೆಷವಾಗಿದೆ. ಟಿಬೆಟಿಯನ್ ಹೊಸ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ಈ ಉತ್ಸವವನ್ನು ಆಚರಿಸಲಾಗುತ್ತದೆ. ಸಾಂದರ್ಭಿಕ

ಚಿತ್ರಕೃಪೆ: Chris Baranski

ಪೊಂಗಲ್

ಪೊಂಗಲ್

ಎಲ್ಲರಿಗೂ ತಿಳಿದಿರುವ ಹಾಗೆ ಪೊಂಗಲ್ ಉತ್ಸವವು ತಮಿಳುನಾಡಿನಲ್ಲಿ ಅತಿ ವಿಜೃಂಭಣೆಯಿಂದ ಆಚರಿಸಲ್ಪಡುತ್ತದೆ. ಈ ಸಂದರ್ಭದಲ್ಲಿ ರಾಜ್ಯದೆಲ್ಲೆಡೆ ಎಲ್ಲರ ಮೈಮನಗಳಲ್ಲಿ ಸಂಭ್ರಮ ಮನೆ ಮಾಡಿರುತ್ತದೆ. ಬಿತ್ತನೆಯ ಹೊಸ ಆಯಾಮವನ್ನು ಬರಮಾಡಿಕೊಳ್ಳಲಾಗುತ್ತದೆ.

ಚಿತ್ರಕೃಪೆ: Thiagupillai

ಬತುಕಮ್ಮ ಪಂಡುಗ

ಬತುಕಮ್ಮ ಪಂಡುಗ

ತೆಲಂಗಾಣದ ರಾಜ್ಯ ಮಟ್ಟದ ಉತ್ಸವವಾಗಿರುವ ಬತುಕಮ್ಮ ಪಂಡುಗವನ್ನು ಇಲ್ಲಿ ಬಲು ಅದ್ದೂರಿಯಿಂದ ಆಚರಿಸಲಾಗುತ್ತದೆ. ಈ ಉತ್ಸವವು ಸೆಪ್ಟಂಬರ್-ಅಕ್ಟೋಬರ್ ಸಮಯದಲ್ಲಿ ಬರುತ್ತದೆ. ವಿಶೇಷವೆಂದರೆ ಈ ಉತ್ಸವವು ಮಹಿಳೆಯರಿಂದ ಮಾತ್ರವೆ ಆಚರಿಸಲ್ಪಡುವುದು. ರಾಜ್ಯದ ಎಲ್ಲ ಭಾಗಗಳಲ್ಲಿ ಇದು ಆಚರಿಸಲ್ಪಡುತ್ತದೆ. ಆದರೆ ಪದ್ಮಾಕ್ಷಿ ಗುಟ್ಟದ ಉತ್ಸವ ಸಾಕಷ್ಟು ವಿಶೇಷವಗಿರುತ್ತದೆ.

ಚಿತ್ರಕೃಪೆ: Randhirreddy

ಖರ್ಚಿ ಪೂಜಾ

ಖರ್ಚಿ ಪೂಜಾ

ತ್ರಿಪುರಾ ರಾಜ್ಯದ ದೇವಿಗೆ ಮುಡಿಪಾದ ಉತ್ಸವ ಇದಾಗಿದೆ. ಹದಿನಾಲ್ಕು ದೇವತೆಗಳು ಒಡಗೂಡಿ ತ್ರಿಪುರಾ ರಚಿಸಿ ನಿಯಮಿಸಿದ ದೇವಿಯ ಆರಾಧನಾ ಉತ್ಸವ ಇದಾಗಿದೆ. ಖರ್ ಎಂದರೆ ಪಾಪ ಎಂತಲೂ ಚಿ ಎಂದರೆ ಹೋಗಲಾಡಿಸುವವಳು ಎಂತಲೂ ತ್ರಿಪುರಿ ಭಾಷೆಯಲ್ಲಿ ಅರ್ಥವಿದೆ. ಹಾಗಾಗಿ ಪಾಪಗಳನ್ನು ಹೋಗಲಾಡಿಸುವ ದೇವಿಯ ಉತ್ಸವ ಇದಾಗಿದೆ.

ಚಿತ್ರಕೃಪೆ: Scorpian ad

https://commons.wikimedia.org/wiki/File:Scorpian_ad_(2).jpg

ರಾಮನವಮಿ

ರಾಮನವಮಿ

ರಾಮನು ಜನಸಿದ ಸಂದರ್ಭ ಅತ್ಯಂತ ಪ್ರಸಿದ್ಧ ಉತ್ಸವವಾಗಿ ದೇಶದೆಲ್ಲೆಡೆ ಆಚರಿಸಲಾದರೂ ಉತ್ತರ ಪ್ರದೇಶದಲ್ಲಿ ಇದರ ಗಮ್ಮತ್ತೆ ಬೇರೆ. ಹೌದು, ಉತ್ತರ ಪ್ರದೇಶದ ಪ್ರಮುಖ ಉತ್ಸವವಾಗಿ ರಾಮನವಮಿಯನ್ನು ಬಲು ಅದ್ದೂರಿಯಿಂದ ಆಚರಿಸಲಾಗುತ್ತದೆ. ಸಂಭ್ರಮ, ಸಡಗರ ಎಲ್ಲೆಡೆ ಮನೆ ಮಾಡಿರುತ್ತದೆ.

ಚಿತ್ರಕೃಪೆ: Matheesha

ಕುಂಭ ಮೇಳ

ಕುಂಭ ಮೇಳ

ಈ ಉತ್ಸವ ಜಗತ್ತಿನಲ್ಲೆ ಅತಿ ದೊಡ್ಡದಾದ ಉತ್ಸವ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅದರಲ್ಲೂ ವಿಶೇಷವಾಗಿ ಕೋಟಿಗಿಂತಲೂ ಅಧಿಕ ಸಮ್ಖ್ಯೆಯಲ್ಲಿ ಜನರು ನೆರೆಯುವ ಅತಿ ದೊಡ್ಡ ಉತ್ಸವವಾಗಿದೆ. ಮಹಾ ಕುಂಭ ಮೇಳ ಪ್ರತಿ ಹನ್ನೆರ್‍ಅದು ವರ್ಷಗಳಿಗೊಮ್ಮೆ ಆಚರಿಸಲಾಗುತ್ತದೆ ಉತ್ತರಾಖಂಡದ ಹರಿದ್ವಾರದಲ್ಲಿ. ಅರ್ಧ ಕುಂಭವೂ ಸಹ ವಿಶೇಷವಾಗಿ ನಡೆಯುತ್ತದೆ. ಹನ್ನೆರಡು ಮಹಾಕುಂಭಗಳಾದ ಮೇಲೆ ಅಂದರೆ 144 ವರ್ಷಕ್ಕೊಮ್ಮೆ ನಡೆಯುತ್ತದೆ ಪೂರ್ಣಕುಂಭ. ದೇವ ಭೂಮಿ ಎಂದೆ ಬಿರುದು ಪಡೆದ ಉತ್ತರಾಖಂಡವು ಈ ಉತ್ಸವಕ್ಕೆ ಸಾಕಷ್ಟು ಹೆಸರುವಾಸಿಯಾಗಿದೆ.

ಚಿತ್ರಕೃಪೆ: Coupdoeil

ದುರ್ಗಾ ಪೂಜೆ

ದುರ್ಗಾ ಪೂಜೆ

ಪಶ್ಚಿಮ ಬಂಗಾಳದಲ್ಲಿ ಪ್ರಮುಖವಾಗಿ ಕಾಳಿ ಮಾತೆಯನ್ನು ಆರಾಧಿಸಲಾಗುತ್ತದೆ. ನವರಾತ್ರಿಯ ಸಂದರ್ಭದಲ್ಲಿ ದುರ್ಗಾ ಪೂಜೆಯು ರಾಜ್ಯದಲ್ಲೆ ಬಲು ಸಡಗರ ಸಂಭ್ರಮಗಳಿಂದ ಆಚರಿಸಲಾಗುತವ ಅದ್ಭುತ ಉತ್ಸವವಾಗಿ ಗುರುತಿಸಿಕೊಂಡಿದೆ. ಗಣೇಶ ಚತ್ರುರ್ಥಿಯ ಹಾಗೆಯೆ ಸಾಮಾನ್ಯವಾಗಿ ಪಶ್ಚಿಮ ಬಂಗಾಳದಾದ್ಯಂತ ದುರ್ಗೆಯ ವಿಗ್ರಹಗಳನ್ನು ಪ್ರತಿಷ್ಠಾಪಿಸಿ, ಪೂಜಿಸಿ ನಂತರ ನೀರಿನಲ್ಲಿ ವಿಸರ್ಜಿಸಲಾಗುತ್ತದೆ.

ಚಿತ್ರಕೃಪೆ: Soumyasch

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more