Search
  • Follow NativePlanet
Share
» »ವೈವಿಧ್ಯಮಯವಾಗಿ ದೀಪಾವಳಿಯನ್ನು ಆಚರಿಸುವ ರಾಜ್ಯಗಳು

ವೈವಿಧ್ಯಮಯವಾಗಿ ದೀಪಾವಳಿಯನ್ನು ಆಚರಿಸುವ ರಾಜ್ಯಗಳು

By Vijay

ಭಾರತವು ಹಲವು ವೈವಿಧ್ಯಮಯ ಸಂಸ್ಕೃತಿ ಸಂಪ್ರದಾಯಗಳನ್ನು ಒಳಗೊಂಡಿರುವ ಒಂದು ಧಾರ್ಮಿಕ ಕ್ಷೇತ್ರ. ಉತ್ತರದ ಕಾಶ್ಮೀರದಿಂದ ಹಿಡಿದು ದಕ್ಷಿಣದ ಕನ್ಯಾಕುಮಾರಿಯವರೆಗೂ ವರ್ಷಪೂರ್ತಿ ಹಲವು ಬಗೆಯ ಆಚರಣೆಗಳು, ಹಬ್ಬ ಹರಿದಿನಗಳನ್ನು ಇಲ್ಲಿ ಆಚರಿಸುವುದನ್ನು ನಾವು ಕಾಣಬಹುದು. ಅದರಲ್ಲೂ ವಿಶೇಷವಾಗಿ ಭಾರತದ ಎಲ್ಲ ರಾಜ್ಯಗಳೂ ತಮ್ಮದೆ ಆದ ಪ್ರತ್ಯೇಕ ಹಬ್ಬಗಳನ್ನು ಹೊಂದಿದ್ದರೂ ದೀಪಾವಳಿ ಎಂಬ ದೀಪಗಳ ಉತ್ಸವದ ಹಬ್ಬವು ಭಾರತದ ಎಲ್ಲೆಡೆಯಲ್ಲೂ ಅತಿ ವಿಜೃಂಭಣೆಯಿಂದ ಆಚರಿಸಲಾಗುವಂತಹ ಅಕ್ಷರಶಃ ಒಂದು ದೀಪಗಳ ಅಮೋಘ ಹಬ್ಬ.

ಬಾಣ ಬಿರುಸುಗಳೊಂದಿಗೆ ಪ್ರಾರಂಭವಾಗುವ ಈ ಹಬ್ಬವು ಸಾಮಾನ್ಯವಾಗಿ ಮೂರು ದಿನಗಳ ಕಾಲ ನಿರಂತರವಾದ ಆನಂದ, ಹುರುಪಗಳನ್ನು ಕೇವಲ ಮಕ್ಕಳಷ್ಟೆ ಅಲ್ಲ ಹಿರಿಯರಲ್ಲೂ ತರುತ್ತದೆ. ಕುಟುಂಬ ಹಾಗು ನೆಂಟರೊಂದಿಗೆ ಬಾಂಧವ್ಯವನ್ನು ಮತ್ತಷ್ಟು ವೃದ್ಧಿಗೊಳಿಸುವ ನಿಟ್ಟಿನಲ್ಲಿ ಅತಿ ಮಹತ್ವದ ಪಾತ್ರವನ್ನು ಈ ಹಬ್ಬವು ನಿರ್ವಹಿಸುತ್ತದೆ. ಹಾಗಾದರೆ ಬನ್ನಿ ಈ ಲೇಖನದ ಮೂಲಕ ವಿವಿಧ ರಾಜ್ಯಗಳ ಪ್ರವಾಸ ಮಾಡಿ ಅಲ್ಲಿ ಆಚರಿಸಲಾಗುವ ಈ ಹಬ್ಬದ ರೀತಿಯನ್ನು ತಿಳಿದುಕೊಂಡು ನಮ್ಮ ನೆರೆಹೊರೆಯ ರಾಜ್ಯಗಳ ಜೊತೆಗಿರುವ ಬಾಂಧವ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳೊಣ.

ವೈವಿಧ್ಯಮಯವಾಗಿ ದೀಪಾವಳಿಯನ್ನು ಆಚರಿಸುವ ರಾಜ್ಯಗಳು

ಕರ್ನಾಟಕ:

ಕರ್ನಾಟಕದ ಮೂಲೆ ಮೂಲೆಯಲ್ಲು ಈ ಹಬ್ಬವನ್ನು ಅತಿ ಉತ್ಸಾಹದಿಂದ ಆಚರಿಸಲಾಗುತ್ತದೆ. ಕತ್ತಲೆ ಎಂಬ ಅಜ್ಞಾನವನ್ನು ದೀಪ + ಆವಳಿ (ಸಾಲು) ಬೆಳಗಿಸುವ ಮೂಲಕ ಹೊಡೆದೊಡಿಸುವುದರ ಸಂಕೇತ ಈ ಹಬ್ಬವಾಗಿದೆ. ಅಲ್ಲದೆ ನೆಂಟರಿಷ್ಟರೊಂದಿಗೆ ಸುಮಧುರವಾಗಿ ಬೆರೆಯುವ ಅವಕಾಶವನ್ನು ಈ ಹಬ್ಬ ಒದಗಿಸುತ್ತದೆ. ಮೂರು ದಿನಗಳ ಕಾಲ ಈ ಹಬ್ಬವನ್ನು ಆಚರಿಸಲಾಗುತ್ತದೆ. ನೀರು ತುಂಬೊ ಹಬ್ಬ, ನರಕ ಚತುರ್ದಶಿ ಹಾಗು ಬಲಿ ಪಾಡ್ಯಮಿ ದಿನಗಳಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ.

ಉತ್ತರ ಕರ್ನಾಟಕ ಭಾಗದಲ್ಲಿ ವಿಶೇಷವಾಗಿ ಮನೆಯ ಮುಂಬದಿಯಲ್ಲಿ ವೈವಿಧ್ಯಮಯ ಆಕಾಶ ಬುಟ್ಟಿಗಳನ್ನು ಹಾಗು ಹಣತೆಗಳನ್ನು ಬೆಳಗಿಸಲಾಗುತ್ತದೆ. ನರಕ ಚತುರ್ದಶಿಯ ದಿನದಂದು ಬೆಳಿಗ್ಗೆ ನಸುಕಿನ ಜಾವದಲ್ಲೆ ಮನೆಮಂದಿಯೆಲ್ಲ ಎದ್ದು ಹೊಸ ಬಟ್ಟೆಗಳನ್ನು ಹಾಕಿಕೊಳ್ಳುತ್ತಾರೆ ಹಾಗು ಮನೆಯ ಹೆಣ್ಣು ಮಕ್ಕಳೆಲ್ಲ ಸೇರಿ, ಗಂಡಸರಿಗೆ ಆರತಿಯನ್ನು ಬೆಳಗುತ್ತಾರೆ. ನಂತರ ಪಟಾಕಿಗಳ ಕಾರುಬಾರು, ಸಿಹಿ ತಿಂಡಿ ತಿನುಸುಗಳ ಚಪ್ಪರಿಸುವಿಕೆ ಹಾಗು ಹರಟೆ ಮುಂದುವರೆಯುತ್ತದೆ.

ಮಹಾರಾಷ್ಟ್ರ:

ಈ ಹಬ್ಬವು ಮಹಾರಾಷ್ಟ್ರದಲ್ಲಿ ವೈವಿಧ್ಯಮಯ ರೀತಿಗಳನ್ನು ಒಳಗೊಂಡಿದೆ. ಮಹಾರಾಷ್ಟ್ರದಲ್ಲಿ ದೀಪಾವಳಿ ಹಬ್ಬವು 'ವಸುಬರಸ್' ನಿಂದ ಆರಂಭಗೊಳ್ಳುತ್ತದೆ. ಇದು ಮರಾಠಿಯ ಅಶ್ವಿನ್ ತಿಂಗಳಿನ ಎರಡನೆಯ ಭಾಗದ 12 ನೇಯ ದಿನ. ಆಕಳು ಹಾಗು ಕರುವಿಗೆ ಆರತಿ ಬೆಳುಗುವುದರ ಮೂಲಕ ಇದು ಆರಂಭಗೊಳ್ಳುತ್ತದೆ.

ನಂತರದ ದಿನ ಧನ ತ್ರಯೋದಶಿಯಾಗಿರುತ್ತದೆ. ವ್ಯಪಾರಿ ಸಮುದಾಯಕ್ಕೆ ಈ ದಿನ ಬಹು ಮಹತ್ವದ್ದಾಗಿರುತ್ತದೆ. ಈ ದಿನದಂದು ಉಕ್ಕಿನ ಹಾಗು ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲಾಗುತ್ತದೆ. ನಂತರ ಬರುವುದೆ ನರಕ ಚತುರ್ದಶಿ. ಈ ಸಂದರ್ಭದಲ್ಲಿ ನಸುಕಿನಲ್ಲೆ ಎದ್ದು ಸುಗಂಧ ಭರಿತ ಎಣ್ಣೆ ಸ್ನಾನ ಮಾಡಿ, ಹೆಂಗಸರು ಗಂಡಸರಿಗೆ ಆರತಿ ಬೆಳುಗುವುದರೊಂದಿಗೆ ಆರಂಭಿಸಲಾಗುತ್ತದೆ.

ಇದರ ನಂತರ ಬರುವುದು ಲಕ್ಷ್ಮಿ ಪೂಜೆ. ಮನೆಯಲ್ಲಿರುವ ಆಭರಣ, ನಗದು ಇತ್ಯಾದಿಗಳನ್ನು ಇಟ್ಟು ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ. ವ್ಯಾಪಾರಿಗಳು ತಮ್ಮ ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಅಲಂಕರಿಸಿ ಲಕ್ಷ್ಮಿ ಪೂಜೆಯನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಬಾಣ ಬಿರುಸುಗಳ ಭರಾಟೆ ಮುಗಿಲು ಮುಟ್ಟಿರುತ್ತದೆ.

ಬಲಿ ಪ್ರತಿಪದ : ಹೆಂಡತಿಯು ಗಂಡನ ಹಣೆಗೆ ತಿಲಕವಿಟ್ಟು ದೀರ್ಘಾಯುಷ್ಯ ಹಾಗು ಉತ್ತಮ ಆರೋಗ್ಯವನ್ನು ಬೇಡುವುದರ ಮೂಲಕ ಇದು ಆರಂಭವಾಗುತ್ತದೆ. ಈ ಸಂದರ್ಭದಲ್ಲಿ ಪತಿಯು ಪತ್ನಿಗೆ ದುಬಾರಿ ಉಡುಗೊರೆಯನ್ನು ನೀಡುತ್ತಾನೆ.

ಭಾವ್-ಬೀಜ್: ಈ ದಿನದಂದು ಸಹೋದರಿಯರು ತಮ್ಮ ಸಹೋದರರಿಗೆ ದೀರ್ಘಾಯುಷ್ಯ ಹಾಗು ಉತ್ತಮ ಆರೋಗ್ಯ ಕೋರಿ ಆರತಿ ಬೆಳಗುತ್ತಾರೆ. ಅದಕ್ಕೆ ಪ್ರತಿಯಾಗಿ ಸಹೋದರರು ತಮ್ಮ ಸಹೋದರಿಯರಿಗೆ ಉಡುಗೊರೆಯನ್ನು ನೀಡುತ್ತಾರೆ.

ವೈವಿಧ್ಯಮಯವಾಗಿ ದೀಪಾವಳಿಯನ್ನು ಆಚರಿಸುವ ರಾಜ್ಯಗಳು

ತಮಿಳುನಾಡು:

ನರಕಾಸುರನು, ಶ್ರೀಕೃಷ್ಣನಿಂದ ಸಂಹರಿಸಲ್ಪಟ್ಟ ಕುರುಹಾಗಿ ದೀಪಗಳ ಈ ಹಬ್ಬವು ತಮಿಳುನಾಡಿನಲ್ಲಿ ವಿಜೃಂಭಣೆಯಿಂದ ಆರಂಭಗೊಳ್ಳುತ್ತದೆ. ಈ ವಿಜಯೋತ್ಸವವನ್ನು ದೀಪಗಳನ್ನು ಬೆಳಗಿಸುವುದು ಹಾಗು ಸಿಡಿ ಮದ್ದುಗಳನ್ನು ಸಿಡಿಸುವುದರ ಮೂಲಕ ಆಚರಿಸಲಾಗುತ್ತದೆ. ಬೆಳಿಗ್ಗೆ ಬೇಗನೆ ಎದ್ದು ಎಣ್ಣೆ ಸ್ನಾನ, ಹೊಸ ಬಟ್ಟೆ ತೊಡುವಿಕೆ ಹಾಗು ಗಣೇಶ, ವಿಷ್ಣು ಮತ್ತು ಶಿವ ದೇವಾಲಯಗಳಿಗೆ ಭೇಟಿ ನೀಡುವುದರ ಮೂಲಕ ಉತ್ಸಾಹದಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ.

ವಿಶೇಷವಾಗಿ ಸ್ನಾನದ ನಂತರ ತಯಾರಿಸಲಾದ "ದೀಪಾವಳಿ ಲೇಹಿಯಂ" ಎಂಬ ಮನೆ ಔಷಧಿಯನ್ನು ಸೇವಿಸಲಾಗುತ್ತದೆ. ಇದು ಪಚನ ಕ್ರಿಯೆಯನ್ನು ಸುಗಮಗೊಳಿಸುವ ಔಷಧಿಯಾಗಿದೆ.

ಆಂಧ್ರ ಪ್ರದೇಶ:

ಆಂಧ್ರ ಪ್ರದೇಶದಲ್ಲಿ ಎರಡು ದಿನಗಳ ಕಾಲ ಆಚರಿಸಲಾಗುವ ಈ ದೀಪಾವಳಿ ಹಬ್ಬವು ರಾಜ್ಯದ 7 ಪ್ರಮುಖ ಹಬ್ಬಗಳಲ್ಲೊಂದಾಗಿದೆ. ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ದೇವಾಲಯಗಳಿ ಭೇಟಿ ನೀಡುವುದರ ಮೂಲಕ ಈ ಹಬ್ಬವನ್ನು ಬರಮಾಡಿಕೊಳ್ಳಲಾಗುತ್ತದೆ. ತದನಂತರ ಪಟಾಕಿಗಳನ್ನು ಸಿಡಿಸುವುದರ ಜೊತೆಗೆ ಹಣತೆಗಳನ್ನು ಬೆಳುಗುವುದರ ಮೂಲಕ ಈ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ.

ಕೇರಳ:

ಅಚ್ಚರಿಯ ಸಂಗತಿಯೆಂದರೆ ಕೇರಳದಲ್ಲಿ ದೀಪಾವಳಿಯು ಪ್ರಮುಖವಾಗಿ ಆಚರಿಸಲ್ಪಡುವ ಹಬ್ಬವಲ್ಲ. ಕೇವಲ ತಮಿಳು ಜನ ಹಾಗು ಉತ್ತರ ಭಾರತ ಜನ ನೆಲೆಸಿರುವ ಪ್ರದೇಶಗಳಲ್ಲಿ ಈ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ.

ವೈವಿಧ್ಯಮಯವಾಗಿ ದೀಪಾವಳಿಯನ್ನು ಆಚರಿಸುವ ರಾಜ್ಯಗಳು

ಒಡಿಶಾ:

ಕುಟುಂಬದವರೊಡನೆ ಬೆರೆತು, ಪಕ್ವಾನಗಳನ್ನು ಭುಜಿಸಿ, ಪಟಾಕಿಗಳನ್ನು ಸಿಡಿಸುತ್ತ ದೀಪಾವಳಿ ಹಬ್ಬವನ್ನು ಆನಂದದಿಂದ ಬರಮಾಡಿಕೊಳ್ಳುತ್ತಾರೆ ಒಡಿಶಾದ ಜನ. ಮುಸ್ಸಂಜೆಯ ಸಮಯದಲ್ಲಿ ಕುಟುಂಬದವರೆಲ್ಲ ಒಂದೆಡೆ ಸೇರಿ ವಿಶೇಷವಾದ ದೋಣಿಯ ರಂಗೋಲಿಯೊಂದನ್ನು ಹಾಕುತ್ತಾರೆ. ಈ ದೋಣಿಯ ಉತ್ತರದ ಭಾಗವು ಏಳು ಕೋಣೆಗಳನ್ನು, ಪೂರ್ವದ ಭಾಗವು 10 ಕೋಣೆಗಳನ್ನು ಹಾಗು ದಕ್ಷಿಣದ ಭಾಗವು 12 ಕೋಣೆಗಳನ್ನು ಹೊಂದಿರುತ್ತದೆ. ಪೂರ್ವದ ಕೋಣೆಗಳು ದೇವತೆಗಳಿಗೆ ಮೀಸಲಾಗಿದ್ದರೆ, ಉತ್ತರದ ಕೋಣೆಗಳು ಋಷಿಗಳಿಗೆ ಹಾಗು ದಕ್ಷಿಣದ ಕೋಣೆಗಳು ಹಿರಿಯರಿಗೆ ಮೀಸಲಾಗಿರುತ್ತವೆ.

ಹತ್ತಿ, ಉಪ್ಪು, ಬೇರು, ಸಿಹಿ ಖಾದ್ಯಗಳು, ಅರಿಷಿಣ ಹೀಗೆ ಹಲವಾರು ವಸ್ತುಗಳನ್ನು ಪ್ರತಿ ಕೋಣೆಯಲ್ಲು ಇರಿಸಲಾಗಿರುತ್ತದೆ. ಮಧ್ಯದ ಕೋಣೆಯಲ್ಲಿ ಪ್ರಸಾದವನ್ನು ಇರಿಸಲಾಗಿರುತ್ತದೆ ಜೊತೆಗೆ ಒಂದು ತೊಗಟೆಯ ನಾರನ್ನು ಕಟ್ಟಿರಲಾಗಿರುತ್ತದೆ. ಇದನ್ನು ಬೆಳಗಿಸುವುದರ ಮೂಲಕ ಪೂಜೆಯು ಆರಂಭಗೊಳ್ಳುತ್ತದೆ.

ಪಶ್ಚಿಮ ಬಂಗಾಳ ಹಾಗು ಅಸ್ಸಾಂ:

ಈ ಎರಡು ರಾಜ್ಯಗಳಲ್ಲಿ ದೀಪಾವಳಿಯ ಸಮಯದಂದು ಕಾಳಿ ದೇವಿಯನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ಅಗಲಿದ ಹಿರಿಯರ ಸ್ಮರಣಾರ್ಥ ದೀಪಗಳನ್ನು ಬೆಳಗಿಸಲಾಗುತ್ತದೆ. ಈ ಸಂದರ್ಭದಲ್ಲಿ ಪೂರ್ಣ ರಾತ್ರಿಯನ್ನು ಕಾಳಿ ದೇವಿಯನ್ನು ನೆನೆಯುವುದವರ ಮೂಲಕ ಕಳೆಯಲಾಗುತ್ತದೆ. ಯುವಕರು, ಮಕ್ಕಳು ಇಡಿ ರಾತ್ರಿ ಪಟಾಕಿ ಸಿಡಿಸುವುದರ ಮೂಲಕ ಈ ಹಬ್ಬವನ್ನು ಆಚರಿಸುತ್ತಾರೆ.

Read more about: festivals diwali
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X