Search
  • Follow NativePlanet
Share
» »ಭಾರತದ ಪ್ರಾಚೀನ ನಗರಗಳು

ಭಾರತದ ಪ್ರಾಚೀನ ನಗರಗಳು

By Vijay

ಒಂದೊಮ್ಮೆ ಗುಹಾವಾಸಿಗಳಾಗಿದ್ದ ಮಾನವ ಜನಾಂಗವು ಸಮಯ ಕಳೆದಂತೆ ವ್ಯಕ್ತಿತ್ವ ವಿಕಸನ ಹೊಂದಿ ಒಂದು ವ್ಯವಸ್ಥಿತವಾದ ಚೌಕಟ್ಟಿನಲ್ಲಿ ಒಂದು ನಿರ್ದಿಷ್ಟ ಪ್ರದೇಶದಲ್ಲಿ ವಾಸಿಸಲಾರಂಭಿಸಿದರು. ತಮಗೆ ಬೇಕಾದ ಅನುಕೂಲ, ಸೌಲತ್ತುಗಳನ್ನು ಆ ಜಾಗದಲ್ಲಿ ನಿರ್ಮಿಸತೊಡಗಿದರು. ಕ್ರಮೇಣ ಗುಂಪುಗಳಿಂದ ಬೇರ್ಪಟ್ಟು ಸಮಾಜವನ್ನು ನಿರ್ಮಿಸಿ ವಾಸಿಸತೊಡಗಿದರು. ಸಮಾಜವು ಸುಗಮವಾಗಿ ಹಾಗು ಪರಿಣಾಮಾತ್ಮಕವಾಗಿ ನಡೆಯಲು
ಆಡಳಿತ ವ್ಯವಸ್ಥೆಗಳು ನಿರ್ಮಾಣವಾದವು. ಈ ರೀತಿಯಾಗಿ ನಗರ ಅಥವಾ ಪಟ್ಟಣಗಳು ರೂಪಗೊಂಡವು.

ಪ್ರಸ್ತುತ ನಾವು, ಜಗತ್ತಿನಲ್ಲಿ ಅನೇಕ ಪ್ರಾಚೀನ ಅಥವಾ ಪುರಾತನ ನಗರಗಳನ್ನು ಕಾಣಬಹುದು. ಇವು ತಮ್ಮದೆ ಆದ ವಿಶೀಷ್ಟತೆಯನ್ನು ಒಳಗೊಂಡಿವೆ. ಇಂತಹ ಪುರಾತನ ಪಟ್ಟಣಗಳು ಭಾರತದಲ್ಲೂ ಸಹ ಇವೆ. ಸಾವಿರ ಸಾವಿರ ವರುಷಗಳ ಹಿಂದೆ ನಿರ್ಮಾಣವಾದ ಇಂತಹ ನಗರಗಳಿಗೆ ಭೇಟಿ ನೀಡುವುದು ಕೇವಲ ರೋಮಾಂಚನಗೊಳಿಸುವುದಲ್ಲದೆ ಹೆಮ್ಮೆಯೂ ಸಹ ಉಂಟಾಗುತ್ತದೆ. ಅಲ್ಲದೆ ಈ ಸ್ಥಳಗಳು ಇತಿಹಾಸಪ್ರಿಯ ಪ್ರವಾಸಿಗನಿಗೆ ಒಂದು ಪ್ರಮುಖವಾದ ಪ್ರವಾಸಿ ಆಕರ್ಷಣೆಗಳೂ ಹೌದು. ಈ ಲೇಖನವು ಭಾರತದಲ್ಲಿರುವ ಹಲವು ನಿರಂತರ ಜನವಸತಿ ಹೊಂದಿರುವ ಪ್ರಾಚೀನ ನಗರಗಳ ಪೈಕಿ ಕೆಲವು ನಗರಗಳ ಪರಿಚಯ ನಿಮಗೆ ಮಾಡಿಕೊಡುತ್ತದೆ.

ಓದಿರಿ : ಭಾರತದ 10 ಮನಸೆಳೆವ ರೋಮಾಂಚಕ ಸ್ಥಳಗಳು

ವಾರಣಾಸಿ:

ವಾರಣಾಸಿ:

ಕಾಶಿ ಅಥವಾ ಬನಾರಸ್ ಎಂತಲೂ ಕರೆಯಲಾಗುವ ಉತ್ತರ ಪ್ರದೇಶ ರಾಜ್ಯದಲ್ಲಿರುವ ವಾರಣಾಸಿಯು ಭಾರತದ ಅತ್ಯಂತ ಪುರಾತನ ನಗರವಾಗಿದ್ದು, ಭಾರತದ ಆಧ್ಯಾತ್ಮಿಕ ರಾಜಧಾನಿ ಎಂಬ ಮನ್ನಣೆಯನ್ನೂ ಸಹ ಪಡೆದಿದೆ. ಸಪ್ತ ಪುರಿಗಳ ಪೈಕಿ ಒಂದಾಗಿರುವ ಈ ನಗರವು ಹಿಂದುಗಳಿಗೆ ಅತಿ ಪವಿತ್ರ ಯಾತ್ರಾ ಕ್ಷೇತ್ರವೂ ಸಹ ಆಗಿದೆ. ಜಗತ್ತಿನ ಇತರೆ ಪ್ರಮುಖ ಧರ್ಮಗಳಿಗಿಂತಲೂ ಪ್ರಾಚೀನವಾದ ಇತಿಹಾಸವನ್ನು ಹೊಂದಿರುವ ಈ ನಗರವು ಉತ್ತರಭಾರತದ ಸಾಂಸ್ಕೃತಿಕ ಕೇಂದ್ರವಾಗಿದೆ. ಸಂಗೀತ, ಆಧ್ಯಾತ್ಮಿಕ, ಜ್ಯೋತಿಷ್ಯ ಮುಂತಾದ ವಿದ್ಯೆಗಳ ಮುಖ್ಯ ಕೇಂದ್ರವಾಗಿರುವ ವಾರಣಾಸಿಯಲ್ಲಿ ಅನೇಕ ಪ್ರಾಚೀನ ಪಂಡಿತಪ್ರಮುಖರು, ಲೇಖಕರು, ಕವಿಗಳು, ತತ್ವಜ್ಞಾನಿಗಳು ವಾಸಿಸಿದ್ದಾರೆ. ಪವಿತ್ರ ಗಂಗಾ ನದಿ ತಟದಲ್ಲಿ ನೆಲೆಸಿರುವ ವಾರಣಾಸಿಯಲ್ಲಿ ಸಾವು ಪಡೆಯುವವರು ಮೋಕ್ಷವನ್ನು ಪಡೆಯುತ್ತಾರೆ ಎಂಬ ಅಚಲವಾದ ನಂಬಿಕೆ ಹಿಂದುಗಳಲ್ಲಿದೆ.

ಚಿತ್ರಕೃಪೆ: Nandanupadhyay

ಅಯೋಧ್ಯಾ:

ಅಯೋಧ್ಯಾ:

ಹಿಂದುಗಳ ಪವಿತ್ರ ದೇವರಾದ ಶ್ರೀ ರಾಮಚಂದ್ರನು ಜನ್ಮತಳೆದ, ಉತ್ತರ ಪ್ರದೇಶದಲ್ಲಿರುವ ಈ ಪುಣ್ಯ ಭೂಮಿಯು ಭಾರತದ ಪ್ರಾಚೀನ ನಗರಗಳ ಪೈಕಿ ಒಂದಾಗಿದೆ. ಸಾಕೇತ್ ಎಂಬ ಹೆಸರಿನಿಂದಲೂ ಕರೆಯಲ್ಪಡುವ ಈ ನಗರವು ಹಿಂದೆ ಕೋಸಲ ರಾಜ್ಯದ ರಾಜಧಾನಿಯಾಗಿತ್ತು. ರಾಮಾಯಣದ ಮೂಲ ಸ್ಥಳವಾದ ಈ ನಗರವು ಸರಯು ನದಿ ತಟದ ಮೇಲೆ ನೆಲೆಸಿದ್ದು, ರಾಮಾಯಣ ಮಹಾಕಾವ್ಯದ ಪ್ರಕಾರ, 9000 ವರ್ಷಗಳಷ್ಟು ಪುರಾತನವಾದ ನಗರವಾಗಿದೆ. ಪ್ರಸ್ತುತ ಇದೊಂದು ಯಾತ್ರಾ ಕ್ಷೇತ್ರವಾಗಿದೆ. ಅಥರ್ವ ವೇದವು ಅಯೋಧ್ಯೆಯನ್ನು "ಭಗವಂತನು ನಿರ್ಮಿಸಿದ ನಗರ" ಎಂದು ಉಲ್ಲೇಖಿಸಿದೆ. ಸೂರ್ಯವಂಶದ ಇಕ್ಶ್ವಾಕು ಈ ನಗರದ ಪ್ರಥಮ ಆಡಳಿತಗಾರ. ನಂತರದಲ್ಲಿ ಅಯೋಧ್ಯೆಯನ್ನು ಆಳಿದ ಕೆಲವು ಪ್ರಮುಖರೆಂದರೆ, ವೈವಸ್ವತ ಮನು, ಪ್ರಿಥು (ಪೃಥ್ವಿ), ರಾಜಾ ಹರೀಶ್ಚಂದ್ರರು. ಕ್ರಮೇಣ ರಘುವಂಶವು ಆಡಳಿತಕ್ಕೆ ಬಂದು ಇವರಲ್ಲಿ ಪ್ರಮುಖರು ದಶರಥ ಮಹಾರಜ ಹಾಗು ಶ್ರೀರಾಮನು.

ಚಿತ್ರಕೃಪೆ: Ramnath Bhat

ಮದುರೈ:

ಮದುರೈ:

ದಕ್ಷಿಣ ಭಾರತದ ಸುಪ್ರಸಿದ್ಧ ಯಾತ್ರಾ ಕ್ಷೇತ್ರ ಹಾಗು ತಮಿಳುನಾಡು ರಾಜ್ಯದ ಮೂರನೆಯ ದೊಡ್ಡ ನಗರವಾದ ಮದುರೈ ಒಂದು ನಿರಂತರ ಜನವಸತಿಯಿರುವ ಪ್ರಾಚೀನ ನಗರವಾಗಿದೆ. ದಾಖಲಾದ ಈ ನಗರದ ಇತಿಹಾಸವು ಕ್ರಿ.ಪೂ 3 ನೆಯ ಶತಮಾನಕ್ಕೆ ಕೊಂಡೊಯ್ಯುತ್ತದೆ. ಗ್ರೀಕ್ ದೇಶದ ರಾಯಭಾರಿ ಮೆಗಸ್ತನೀಸ್ ಹಾಗು ಚಂದ್ರಗುಪ್ತ ಮೌರ್ಯನ ಆಡಳಿತದಲ್ಲಿ ಮಂತ್ರಿಯಾಗಿದ್ದ ಕೌಟಿಲ್ಯನು ಮದುರೈ ಕುರಿತು ಉಲ್ಲೇಖಿಸಿದ್ದಾರೆ. ಈ ಧಾರ್ಮಿಕ ಕ್ಷೇತ್ರದಲ್ಲಿ ಹಲವು ದೇವಸ್ಥಾನಗಳು ಹಾಗು ಸ್ಮಾರಕಗಳಿದ್ದು ಅವುಗಳಲ್ಲಿ ಮೀನಾಕ್ಷಿ ಅಮ್ಮನವರ ದೇವಾಲಯ ಹಾಗು ತಿರುಮಲೈ ನಾಯಕ ಅರಮನೆಗಳು ಪ್ರಮುಖವಾಗಿವೆ.

ಚಿತ್ರಕೃಪೆ: Lombardelli

ಸೋಮನಾಥ:

ಸೋಮನಾಥ:

ಗುಜರಾತ್ ರಾಜ್ಯದ ಸೌರಾಷ್ಟ್ರ ಪ್ರದೇಶದಲ್ಲಿರುವ ಸೋಮನಾಥವು ಒಂದು ಪ್ರಾಚೀನ ನಗರವಾಗಿದೆ. ಪ್ರಸ್ತುತ ಭಾರತದಲ್ಲಿರುವ ಪವಿತ್ರ ಹನ್ನೆರಡು ಜ್ಯೋತಿರ್ಲಿಂಗಗಳ ಪೈಕಿ ಸೋಮನಾಥ ಕೂಡ ಒಂದು. ದಂತಕಥೆಯ ಪ್ರಕಾರ, ಒಮ್ಮೆ ವಿಷ್ಣು ಹಾಗು ಬ್ರಹ್ಮರು ತಮ್ಮಲ್ಲಿ ಶ್ರೇಷ್ಠರು ಯಾರೆಂಬ ಸ್ಪರ್ಧೆಗಿಳಿದರಂತೆ. ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಮಹಾದೇವನು ಒಂದು ಪ್ರಕಾಶಮಾನವಾದ ಖಂಬವನ್ನು ನಿರ್ಮಿಸಿ ಅದರ ತುದಿಯನ್ನು ಹುಡುಕಲು ಹೇಳಿದನು. ಅದರಂತೆ ಬ್ರಹ್ಮನು ಮೇಲ್ಭಾಗದಲ್ಲಿಯೂ, ವಿಷ್ಣುವು ಖಂಬದ ಕೆಳ ಭಾಗದ ತುದಿಯನ್ನು ಹುಡುಕಲು ಪ್ರಾರಂಭಿಸಿದರು. ಆ ಖಂಬದ ಉದ್ದವು ಅನಂತವಾಗಿದ್ದುದರಿಂದ ಇಬ್ಬರಿಂದಲೂ ಅದರ ತುದಿಗಳನ್ನು ಹುಡುಕಲು ಸಾಧ್ಯವಾಗಲಿಲ್ಲ. ಆದರೆ ಬ್ರಹ್ಮನು ಮಾತ್ರ ತಾನು ಹುಡುಕಿದೆ ಎಂದು ಸುಳ್ಳು ಹೇಳಿದನಂತೆ. ಅದಕ್ಕೆ ಶಿವನು ಕ್ರೋಧಗೊಂಡು ಬ್ರಹ್ಮನನ್ನು ಕುರಿತು ನಿನ್ನ ಪೂಜೆಯನ್ನು ಜಗದಲ್ಲಿ ಇನ್ನು ಮುಂದೆ ಯಾರು ಮಾಡುವುದಿಲ್ಲ ಎಂದು ಶಪಿಸಿ ಲಿಂಗರೂಪದಲ್ಲಿ ಸೋಮನಾಥದಲ್ಲಿ ನೆಲೆಸಿದ ಎಂದು ಹೇಳಲಾಗುತ್ತದೆ.

ಉಜ್ಜಯಿನಿ:

ಉಜ್ಜಯಿನಿ:

ಮಧ್ಯಪ್ರದೇಶ ರಾಜ್ಯದ ಮಾಳ್ವ ಪ್ರದೇಶದ ಕ್ಷಿಪ್ರಾ ನದಿ ತಟದ ಮೇಲೆ ನೆಲೆಸಿದೆ ಈ ಪವಿತ್ರ ಪ್ರಾಚೀನ ನಗರ. ಆವಂತಿ, ಆವಂತಿಕಾ, ಆವಂತಿಕಾಪುರಿ ಎಂಬ ಹೆಸರುಗಳಿಂದಲೂ ಗುರುತಿಸಲ್ಪಡುವ ಈ ಪಟ್ಟಣವು 12 ಜ್ಯೋತಿರ್ಲಿಂಗ ತಾಣಗಳ ಪೈಕಿ ಒಂದಾಗಿರುವುದು ಅಲ್ಲದೆ ವಿಶ್ವವಿಖ್ಯಾತ ಕುಂಭ ಮೇಳ ಆಯೋಜನೆಗೊಳ್ಳುವ ನಾಲ್ಕು ತಾಣಗಳ ಪೈಕಿಯೂ ಒಂದಾಗಿದೆ. ಉಜ್ಜಯಿನಿಯಲ್ಲೆ ಶ್ರೀಕೃಷ್ಣ, ಬಲರಾಮ ಹಾಗು ಸುಧಾಮರು ಸಾಂದೀಪನಿ ಮಹಾಋಷಿಗಳಿಂದ ವಿದ್ಯೆಯನ್ನು ಪಡೆದಿದ್ದರು. ದಂತಕಥೆಯ ಪ್ರಕಾರ, ಸಮುದ್ರ ಮಂಥನದಲ್ಲಿ ಉದ್ಭವವಾದ ಅಮೃತವನ್ನು ಪಡೆಯಲು ದೇವತೆಗಳು ಹಾಗು ದಾನವರ ಮಧ್ಯೆ ಕಿತ್ತಾಟ ಪ್ರಾರಂಭವಾದಾಗ ಅಮೃತದ ಒಂದು ಹನಿಯು ಉಜ್ಜಯಿನಿ ನಗರದಲ್ಲಿ ಬಿದ್ದು ಈ ತಾಣ ಪವಿತ್ರವಾಗಿದೆ. ಇಲ್ಲಿ ಹರಿಯುವ ಕ್ಷಿಪ್ರಾ ನದಿಯು ಸಮುದ್ರ ಮಂಥನದಿಂದಲೆ ಉತ್ಪತ್ತಿಯಾಗಿದೆ ಎನ್ನಲಾಗಿದೆ. ಅಲ್ಲದೆ ಮಹಾಪ್ರತಿಮರಾದ ಎರಡನೆಯ ಚಂದ್ರಗುಪ್ತ, ಬ್ರಹ್ಮಗುಪ್ತ, ಭಾಸ್ಕರಾಚಾರ್ಯ, ಕವಿರತ್ನ ಕಾಳಿದಾಸರು ಉಜ್ಜಯಿನಿಯವರು.

ಚಿತ್ರಕೃಪೆ: Claude Renault

ದ್ವಾರಕಾ:

ದ್ವಾರಕಾ:

ದೇವಭೂಮಿ ದ್ವಾರಕೆಯು ಗುಜರಾತ್ ರಾಜ್ಯದಲ್ಲಿರುವ ಒಂದು ಪ್ರಾಚೀನ ನಗರವಾಗಿದ್ದು, ಹಿಂದೆ ಇಲ್ಲಿ ಶ್ರೀಕೃಷ್ಣನು ರಾಜ್ಯವಾಳಿದ್ದನು. ಹಿಂದುಗಳ ಪವಿತ್ರ ಚಾರ್ ಧಾಮ್ (ನಾಲ್ಕು ಧಾಮ) ಯಾತ್ರಾ ಕ್ಷೇತ್ರಗಳ ಪೈಕಿ ಒಂದಾಗಿರುವ ಈ ಪಟ್ಟಣವು ಸಪ್ತ ಪುರಿ ಕ್ಷೇತ್ರಗಳಲ್ಲಿಯೂ ಒಂದಾಗಿದೆ. ಹಿಂದೆ ಗುಜರಾತ್ ರಾಜ್ಯದ ರಾಜಧಾನಿ ಇದಾಗಿತ್ತು ಎಂದು ನಂಬಲಾಗಿದ್ದು ಇಲ್ಲಿನ ದ್ವಾರಕಾಧೀಶ್ ದೇವಾಲಯವು ಸುಮಾರು 6 ರಿಂದ 7 ನೆಯ ಶತಮಾನದಲ್ಲಿ ನಿರ್ಮಾಣವಾಗಿದೆ.

ಚಿತ್ರಕೃಪೆ: Scalebelow

ಹಂಪಿ:

ಹಂಪಿ:

ಉತ್ತರ ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿರುವ ಯುನೆಸ್ಕೊದಿಂದ ವಿಶ್ವ ಪಾರಂಪರಿಕ ತಾಣದ ಮಾನ್ಯತೆ ಪಡೆದಿರುವ ಹಂಪಿಯು ಕರ್ನಾಟಕದ ಅತಿ ವೈಭವದ ವಿಜಯನಗರ ಸಾಮ್ರಾಜ್ಯದ ವೈಭೋಗವನ್ನು ಸಾರುವ ಒಂದು ಹೆಮ್ಮೆಯ ಪಟ್ಟಣವಾಗಿದ್ದು ಭಾರತದ ಪ್ರಾಚೀನ ನಗರಗಳ ಪೈಕಿ ಒಂದಾಗಿದೆ. ಪ್ರವಾಸೋದ್ಯಮದ ದೃಷ್ಟಿಯಿಂದಲೂ ಸಹ ಮಹತ್ವವಾಗಿರುವ ಈ ಪಟ್ಟಣವು ಅಸಂಖ್ಯಾತ ಸಂಖ್ಯೆಯಲ್ಲಿ ಕೇವಲ ಭಾರತೀಯರಿಂದ ಮಾತ್ರವಲ್ಲದೆ ವಿದೇಶಿ ಪ್ರವಾಸಿಗರಿಂದಲೂ ಸಹ ಭೇಟಿ ನೀಡಲ್ಪಡುತ್ತದೆ. ತುಂಗಭದ್ರಾ ನದಿಯ ಅತಿ ಪುರಾತನ ಹೆಸರು ಪಂಪ. ಆಂಗ್ಲೀಕರಣದ ಪ್ರಭಾವದಿಂದಾಗಿ ಕ್ರಮೇಣ ಇದಕ್ಕೆ ಹಂಪೆ ಅಥವಾ ಹಂಪಿ ಎಂಬ ಹೆಸರು ಬಂದಿತು. ಏಕೆಂದರೆ ಈ ಪಟ್ಟಣವು ತುಂಗಭದ್ರಾ ನದಿ ದಂಡೆಯ ಮೇಲೆಯೆ ನೆಲೆಸಿದೆ. ಕಾಲಕ್ರಮೇಣ ಇದನ್ನು ವಿಜಯನಗರ ಅಥವಾ ವಿರೂಪಾಕ್ಷಪುರ ಎಂಬ ಹೆಸರುಗಳಿಂದಲೂ ಸಹ ಕರೆಯಲಾಯಿತು.

ಚಿತ್ರಕೃಪೆ: Bjørn Christian Tørrissen

ತಂಜಾವೂರು:

ತಂಜಾವೂರು:

ತಮಿಳುನಾಡಿನ ತಂಜಾವೂರು ಪಟ್ಟಣವು ಭಾರತದ ಪ್ರಾಚೀನ ನಗರಗಳ ಪೈಕಿ ಒಂದಾಗಿದೆ. ಹಿಂದು ಪೌರಾಣಿಕತೆಯ ಪ್ರಕಾರ, ತಂಜನ್ ಎಂಬ ದೈತ್ಯನಿಂದ ಇದಕ್ಕೆ ತಂಜಾವೂರು ಎಂಬ ಹೆಸರು ಬಂದಿದೆ. ಇಲ್ಲಿರುವ ಬೃಹದೇಶ್ವರ ದೇವಾಲಯವು ಯುನೆಸ್ಕೊದಿಂದ ಮಾನ್ಯತೆ ಪಡೆದಿದ್ದು ವಿಶ್ವಪ್ರಖ್ಯಾತ ದೇವಾಲಯವಾಗಿದೆ. ಚೋಳರ ಕಾಲದಲ್ಲಿ ರಾಜಧಾನಿಯಾಗಿ ಪ್ರವರ್ಧಮಾನಕ್ಕೆ ಬಂದಿತು.

ಚಿತ್ರಕೃಪೆ: Purshi

ಮಥುರಾ:

ಮಥುರಾ:

ಪ್ರಸಿದ್ಧ ಧಾರ್ಮಿಕ ಯಾತ್ರಾ ಕ್ಷೇತ್ರ ಹಾಗು ಉತ್ತರಭಾರತದ ಜನಪ್ರಿಯ ದೇವರಾದ ಶ್ರೀಕೃಷ್ಣನು ಹುಟ್ಟಿದ ಊರೆನ್ನಲಾಗುವ ಮಥುರಾ ಒಂದು ಪ್ರಾಚೀನ ನಗರ. ಉತ್ತರ ಪ್ರದೇಶದಲ್ಲಿರುವ ಈ ಪಟ್ಟಣವು ದೆಹಲಿ ಹಾಗು ಆಗ್ರಾಗಳಿಂದ ಕ್ರಮವಾಗಿ 145 ಹಾಗು 50 ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: Poco a poco

ಪುಷ್ಕರ್:

ಪುಷ್ಕರ್:

ಭಾರತದ ರಾಜಸ್ಥಾನ ರಾಜ್ಯದ ಅಜ್ಮೇರ್ ಜಿಲ್ಲೆಯಲ್ಲಿರುವ ಪುಷ್ಕರ್ ಒಂದು ಪ್ರಾಚೀನ ನಗರ. ದಂತಕಥೆಯ ಪ್ರಕಾರ, ಈ ನಗರದ ಸೃಷ್ಟಿಯ ಹಿಂದಿರುವ ಕಥೆಯು ಬ್ರಹ್ಮ ದೇವರೊಂದಿಗೆ ಸಂಪರ್ಕವನ್ನು ಹೊಂದಿದೆ. ಪುಷ್ಕರದಲ್ಲಿರುವ ಬ್ರಹ್ಮ ದೇವರಿಗೆ ಸಮರ್ಪಿತವಾದ ದೇವಾಲಯವು 14 ನೆಯ ಶತಮಾನದಲ್ಲಿ ನಿರ್ಮಿತವಾಗಿದ್ದು ಜಗತ್ತಿನಲ್ಲಿ ಕಾಣಬಹುದಾದ ಕೆಲವೆ ಕೆಲವು ಬ್ರಹ್ಮ ದೇವರ ದೇವಾಲಯಗಳ ಪೈಕಿ ಒಂದಾಗಿದೆ. ಪುಷ್ಕರ್ ನದಿ ತಟದಲ್ಲಿ ನೆಲೆಸಿರುವ ಈ ಪಟ್ಟಣವು ಹಿಂದುಗಳಿಗೆ ಪವಿತ್ರ ಯಾತ್ರಾ ಕ್ಷೇತ್ರವಾಗಿದೆ.

ಚಿತ್ರಕೃಪೆ: LRBurdak

ಪಾಟ್ನಾ:

ಪಾಟ್ನಾ:

ಪಾಟಲಿಪುತ್ರ ಅಥವಾ ಇಂದಿನ ಬಿಹಾರ ರಾಜ್ಯದ ರಾಜಧಾನು ಪಾಟ್ನಾವು ಭಾರತದ ಪ್ರಾಚೀನ ನಗರಗಳ ಪೈಕಿ ಒಂದಾಗಿದೆ. ಅಜಾತಶತ್ರು ಎಂಬ ರಾಜನಿಂದ ಗಂಗಾ ನದಿ ತಟದಲ್ಲಿ ನಿರ್ಮಾಣವಾದ ಈ ಗ್ರಾಮವು ನಂತರ ಮಗಧ ರಾಜ್ಯದ ರಾಜಧಾನಿಯಾಗಿ ಪ್ರವರ್ಧಮಾನಕ್ಕೆ ಬಂದಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X