India
Search
  • Follow NativePlanet
Share
» »ಕೊಲ್ಲೂರಿನಿಂದ ಗೋಕರ್ಣದವರೆಗೆ ಏನಿದೆ ವಿಶೇಷ?

ಕೊಲ್ಲೂರಿನಿಂದ ಗೋಕರ್ಣದವರೆಗೆ ಏನಿದೆ ವಿಶೇಷ?

By Vijay

ಕರ್ನಾಟಕದ ಎಲ್ಲ ಉದ್ದಗಲಗಳಲ್ಲೂ ಅನೇಕ ಸುಂದರ ಪ್ರವಾಸಿ ತಾಣಗಳಿವೆಯಾದರೂ ಕರಾವಳಿ ಕರ್ನಾಟಕ ಭಾಗದ ಪ್ರವಾಸಿ ಸ್ಥಳಗಳ ವಿಶೇಷತೆಯೆ ಬೇರೆ. ಇದಕ್ಕಿರುವ ಹಲವಾರು ಕಾರಣಗಳ ಪೈಕಿ ಒಂದು ಪ್ರಧಾನ ಕಾರಣ ಇಲ್ಲಿಯ ಪ್ರಕೃತಿಯ ವೈಶಿಷ್ಟ್ಯತೆ. ಒಂದೆಡೆ ಪಶ್ಚಿಮ ಘಟ್ಟಗಳ ರಮಣೀಯ ಪರಿಸರವಿದ್ದರೆ ಇನ್ನೊಂದೆಡೆ ಅಪಾರವಾಗಿ ಚಾಚಿರುವ ಅರಬ್ಬಿ ಸಮುದ್ರದ ಅದ್ಭುತ ಸೌಂದರ್ಯ.

ಕರ್ನಾಟಕದ ಕಾರವಾರ ಜಿಲ್ಲೆಯು ಪಶ್ಚಿಮ ಘಟ್ಟಗಳ ಸ್ವಾಗತ ಕೋರಿದರೆ ಕೊಡಗು ಅದನ್ನು ಗೌರವಪೂರ್ವಕವಾಗಿ ಕೇರಳ ರಾಜ್ಯಕ್ಕೆ ಬೀಳ್ಗೊಡುತ್ತದೆ. ಕರ್ನಾಟಕದ ಪಥದಲ್ಲಿ ಪಶ್ಚಿಮ ಘಟ್ಟಗಳ ಪರಿಸರವು ಅನೇಕ ವಿಶಿಷ್ಟ ಪ್ರವಾಸಿ ಸ್ಥಳಗಳಿಂದ ಕಂಗೊಳಿಸುತ್ತದೆ. ಧಾರ್ಮಿಕ ಸ್ಥಳಗಳಾಗಲಿ, ಅರಣ್ಯ ಪ್ರದೇಶಗಳಾಗಲಿ ಎಲ್ಲವನ್ನು ಈ ಘಟ್ಟಗಳ ಸಾಲಿನಲ್ಲಿ ಕಾಣಬಹುದು.

ವಿಶೇಷ ಲೇಖನ : ಕಾರವಾರಿನ ಪ್ರಖ್ಯಾತ ಪ್ರವಾಸಿ ತಾಣಗಳು

ಹೀಗೆ ಈ ಕರಾವಳಿ ಭಾಗದಲ್ಲಿರುವ ಹಲವಾರು ಸುಂದರ ಮಾರ್ಗಗಳ ಪೈಕಿ, ಪ್ರಸ್ತುತ ಲೇಖನದ ಮೂಲಕ ಕೊಲ್ಲೂರಿನಿಂದ ಗೋಕರ್ಣದವರೆಗೆ ಒಂದು ಸುಂದರ ಹಾಗೂ ಎಂದು ಮರೆಯಲಾಗದ ಪ್ರವಾಸಿ ಮಾರ್ಗದ ಕುರಿತು ತಿಳಿಯಿರಿ. ಈ ಮಾರ್ಗದ ಒಟ್ಟಾರೆ ನೇರ ಉದ್ದವು 150 ಕಿ.ಮಿ ಸಹ ದಾಟುವುದಿಲ್ಲ ಆದರೂ ಇಲ್ಲಿರುವ ಪ್ರವಾಸಿ ಆಕರ್ಷಣೆಗಳ ಸಂಖ್ಯೆ ಅಪಾರ.

ಪ್ರಸ್ತುತ ಲೇಖನದಲ್ಲಿ ಈ ಮಾರ್ಗದಲ್ಲಿ ಬರುವ ಕೆಲವು ಸುಂದರ ಸ್ಥಳಗಳು ಹಾಗೂ ಅವುಗಳ ವಿಶೇಷತೆಗಳ ಕುರಿತು ತಿಳಿಸಲಾಗಿದೆ. ನೀವು ದಕ್ಷಿಣ ಕರ್ನಾಟಕ ಭಾಗದಿಂದ ಹೊರಡುವವರಿದ್ದರೆ ಕೊಲ್ಲೂರಿನಿಂದ ಗೋಕರ್ಣದವರೆಗೂ, ಅಥವಾ ಉತ್ತರ ಕರ್ನಾಟಕ ಭಾಗದಿಂದ ಪ್ರವಾಸ ಮಾಡಬೇಕೆಂದಿದ್ದರೆ ಗೋಕರ್ಣದಿಂದ ಕೊಲ್ಲೂರಿನವರೆಗೂ ಮಾಡಬಹುದು.

ಕೊಲ್ಲೂರಿನಿಂದ ಗೋಕರ್ಣ:

ಕೊಲ್ಲೂರಿನಿಂದ ಗೋಕರ್ಣ:

ಕೊಲ್ಲೂರು : ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿರುವ ಕೊಲ್ಲೂರು ಕ್ಷೇತ್ರವು ಪ್ರಮುಖವಾಗಿ ಮೂಕಾಂಬಿಕೆಯ ದೇವಸ್ಥಾನದಿಂದಾಗಿ ದಕ್ಷಿಣ ಭಾರತದಲ್ಲೆ ಪ್ರಸಿದ್ಧಿ ಪಡೆದ ಕ್ಷೇತ್ರವಾಗಿದೆ. ಮೂಕಾಂಬಿಕಾ ವನ್ಯಜೀವಿಧಾಮದ ವ್ಯಾಪ್ತಿಯಲ್ಲಿ ಬರುವುದರಿಂದ ಇಲ್ಲಿನ ಪ್ರಕೃತಿ ಸೌಂದರ್ಯ ಎಂತಹವರನ್ನೂ ಸಹ ಮೂಕವಿಸ್ಮಿತರನ್ನಾಗಿ ಮಾಡಿ ಬಿಡುತ್ತದೆ.

ಚಿತ್ರಕೃಪೆ: syam

ಕೊಲ್ಲೂರಿನಿಂದ ಗೋಕರ್ಣ:

ಕೊಲ್ಲೂರಿನಿಂದ ಗೋಕರ್ಣ:

ಕೊಡಚಾದ್ರಿ ಬೆಟ್ಟಗಳ ರಮಣೀಯ ನೋಟ, ಪಶ್ಚಿಮ ಘಟ್ಟಗಳ ದಟ್ಟ ಕಾಡುಗಳ ಹಚ್ಚ ಹಸಿರಿನಿಂದ ಕೂಡಿದ ನಿತ್ಯ ನೂತನದಂತಿರುವ ಗಿಡ ಮರಗಳು, ಮುಂಜಾವಿನಲ್ಲಿ ಹೊಗೆಯಂತೆ ಪಸರಿಸಿರುವ ಇಬ್ಬನಿ, ಸದ್ದುಗದ್ದಲಗಳಿಲ್ಲದ ಪ್ರಶಾಂತ ವಾತಾವರಣ, ಮೈಮನಗಳನ್ನು ಪುನಶ್ಚೇತನಗೊಳಿಸುವಂತಹ ಹವಾಮಾನ ನೋಡುಗರನ್ನು ಬೆಕ್ಕಸ ಬೆರಗಾಗಿಸುತ್ತದೆ. ಕೊಲ್ಲೂರಿಗೆ ತಲುಪಿದಾಗ ಪ್ರಕೃತಿಯ ಸುಂದರ ಸೊಬಗನ್ನು ನೋಡಲು ಮರೆಯಲೇಬಾರದು.

ಚಿತ್ರಕೃಪೆ: syam

ಕೊಲ್ಲೂರಿನಿಂದ ಗೋಕರ್ಣ:

ಕೊಲ್ಲೂರಿನಿಂದ ಗೋಕರ್ಣ:

ಇನ್ನೂ ಕೊಲ್ಲುರು, ಮೂಕಾಂಬಿಕಾ ದೇವಿಯು ನೆಲೆಸಿರುವ ಪ್ರಖ್ಯಾತ ಧಾರ್ಮಿಕ ಕ್ಷೇತ್ರವಾಗಿದೆ. ಇದು ಕರ್ನಾಟಕದವರಿಗೆ ಮಾತ್ರವಲ್ಲದೆ ಕೇರಳದಲ್ಲಿರುವ ಅಪಾರ ಸಂಖ್ಯೆಯ ಜನರಿಗೂ ಸಹ ಪವಿತ್ರ ಕ್ಷೇತ್ರವಾಗಿದೆ. ಕೊಡಚಾದ್ರಿ ಶಿಖರದ ತಪ್ಪಲು ಪ್ರದೇಶದಲ್ಲಿ ಮೂಕಾಂಬಿಕಾ ದೇವಿಯ ದೇವಸ್ಥಾನವು ನೆಲೆಗೊಂಡಿದ್ದು, ಶಿವ ಮತ್ತು ಶಕ್ತಿ ಈ ಇಬ್ಬರೂ ಸಂಯೋಜನೆಗೊಂಡ ಜ್ಯೋತಿರ್ಲಿಂಗದ ಸ್ವರೂಪದಲ್ಲಿ ಈ ದೇವಿಯು ಕಂಡುಬರುತ್ತಾಳೆ.

ಚಿತ್ರಕೃಪೆ: Rojypala

ಕೊಲ್ಲೂರಿನಿಂದ ಗೋಕರ್ಣ:

ಕೊಲ್ಲೂರಿನಿಂದ ಗೋಕರ್ಣ:

ಶ್ರೀಚಕ್ರದ ಮೇಲೆ ಸ್ಥಾಪಿಸಲಾಗಿರುವ ಮೂಕಾಂಬಿಕಾ ದೇವಿಯ ಪಂಚಲೋಹದ (ಐದು ಧಾತುಗಳನ್ನು ಬೆರೆಸಿದ ಲೋಹ) ವಿಗ್ರಹವನ್ನು ಆದಿಗುರು ಶ್ರೀ ಶಂಕರಾಚಾರ್ಯರು ಈ ಸ್ಥಳಕ್ಕೆ ತಾವು ಭೇಟಿನೀಡಿದ ಸಂದರ್ಭದಲ್ಲಿ ಪ್ರತಿಷ್ಠಾಪಿಸಿದರು ಎಂದು ಹೇಳಲಾಗುತ್ತದೆ.

ಚಿತ್ರಕೃಪೆ: Iramuthusamy

ಕೊಲ್ಲೂರಿನಿಂದ ಗೋಕರ್ಣ:

ಕೊಲ್ಲೂರಿನಿಂದ ಗೋಕರ್ಣ:

ಸ್ಥಳ ಪುರಾಣದಂತೆ, ಮೂಕಾಂಬಿಕಾ ದೇವಿಯ ಮೂಲ ಸ್ಥಳವು ಕೊಡಚಾದ್ರಿ ಶಿಖರದಲ್ಲಿದ್ದು, ಸಾಮಾನ್ಯ ಜನರು ಈ ಶಿಖರ ಪ್ರದೇಶದಲ್ಲಿ ಚಾರಣ ಮಾಡುತ್ತ ಬರುವುದು ಕಷ್ಟಕರವಾಗಿದ್ದರಿಂದ, ಇದನ್ನರಿತ ಶಂಕರರು ಈಗಿರುವ ದೇವಾಲಯದಲ್ಲಿ ದೇವಿಯ ಮೂಲ ವಿಗ್ರಹವನ್ನು ಸ್ಥಾಪಿಸಿ ಪ್ರತಿಯೊಬ್ಬರಿಗೂ ದರುಶನ ಭಾಗ್ಯ ಲಭಿಸುವಂತೆ ಮಾಡಿದರೆನ್ನಲಾಗಿದೆ. ಕೊಡಚಾದ್ರಿ ಬೆಟ್ಟದಲ್ಲಿರುವ ದೇವಿಯ ಮೂಲ ಸ್ಥಳ.

ಚಿತ್ರಕೃಪೆ: Rajeevvsm

ಕೊಲ್ಲೂರಿನಿಂದ ಗೋಕರ್ಣ:

ಕೊಲ್ಲೂರಿನಿಂದ ಗೋಕರ್ಣ:

ಕರ್ನಾಟಕದ ಮಟ್ಟದಲ್ಲಿ ಪರಶುರಾಮ ಕ್ಷೇತ್ರ ವಲಯದಲ್ಲಿ ಬರುವ ಸಪ್ತ ಮುಕ್ತಿಸ್ಥಳಗಳ ತೀರ್ಥಯಾತ್ರಾ ನೆಲೆಗಳ ಪೈಕಿ ಕೊಲ್ಲೂರು ಸಹ ಒಂದಾಗಿರುವುದು ವಿಶೇಷ. ಇನ್ನೂಳಿದ ಮಿಕ್ಕ ಆ ಆರು ತಾಣಗಳೆಂದರೆ: ಉಡುಪಿ, ಸುಬ್ರಹ್ಮಣ್ಯ, ಕುಂಬಾಶಿ, ಕೋಟೇಶ್ವರ, ಶಂಕರನಾರಾಯಣ ಹಾಗೂ ಗೋಕರ್ಣ.

ಚಿತ್ರಕೃಪೆ: GaneshSB

ಕೊಲ್ಲೂರಿನಿಂದ ಗೋಕರ್ಣ:

ಕೊಲ್ಲೂರಿನಿಂದ ಗೋಕರ್ಣ:

ಮೂಕಾಂಬಿಕಾ ದೇವಸ್ಥಾನವು ದೊಡ್ಡ ದೇವಾಲಯವಾಗಿದ್ದು ಇಲ್ಲಿ ಶ್ರೀ ಪಂಚಮುಖ ಗಣಪತಿ, ಶ್ರೀ ಚಂದ್ರಮೌಳೀಶ್ವರ, ಆಂಜನೇಯ, ಶ್ರೀ ವೆಂಕಟರಮಣ, ಶ್ರೀ ತುಳಸಿ ಗೋಪಾಲಕೃಷ್ಣ, ಶ್ರೀ ಪ್ರಾಣಲಿಂಗೇಶ್ವರ, ಶ್ರೀ ನಂಜುಂಡೇಶ್ವರ, ಶ್ರೀ ಸುಬ್ರಹ್ಮಣ್ಯ ಹಾಗೂ ಶ್ರೀ ಪಾರ್ಥೀಶ್ವರ ದೇವಾಲಯಗಳನ್ನೂ ಸಹ ಕಾಣಬಹುದು.

ಚಿತ್ರಕೃಪೆ: Deepugn

ಕೊಲ್ಲೂರಿನಿಂದ ಗೋಕರ್ಣ:

ಕೊಲ್ಲೂರಿನಿಂದ ಗೋಕರ್ಣ:

ಮೂಕಾಂಬಿಕಾ ದೇವಿಗೆ ಸಂಬಂಧಿಸಿದಂತೆ ಎರಡು ಐತಿಹ್ಯಗಳು ಪ್ರಚಲಿತದಲ್ಲಿವೆ. ಮೊದಲನೆಯ ದಂತಕಥೆಯ ಪ್ರಕಾರ, ಹಿಂದೆ ಈ ಕ್ಷೇತ್ರದಲ್ಲಿ ಕೋಲ ಎಂಬ ಮಹರ್ಷಿ ವಾಸಿಸುತ್ತಿದ್ದ. ಇದೆ ಕ್ಷೇತ್ರದಲ್ಲಿದ್ದ ಓರ್ವ ರಾಕ್ಷಸನೊಬ್ಬನಿದ್ದು ಅವನು ಅಪಾರವಾಗಿ ಜನರನ್ನು ಹಿಂಸಿಸುತ್ತಿದ್ದ. ಮಹರ್ಷಿಗೂ ಸಹ ತೊಂದರೆ ನೀಡುತ್ತಿದ್ದ. ಇದರಿಂದ ಮುಕ್ತಿ ಪಡೆಯಬೇಕೆಂದು ಮಹರ್ಷಿಗಳು ತಪಸ್ಸನ್ನಾಚರಿಸಲು ಪ್ರಾರಂಭಿಸಿದರು.

ಚಿತ್ರಕೃಪೆ: Yogesa

ಕೊಲ್ಲೂರಿನಿಂದ ಗೋಕರ್ಣ:

ಕೊಲ್ಲೂರಿನಿಂದ ಗೋಕರ್ಣ:

ಇತ್ತ ರಾಕ್ಷಸನೂ ಸಹ ಇನ್ನೂ ಅಪಾರವಾದ ಶಕ್ತಿ ಪಡೆಯುವ ಉದ್ದೇಶದಿಂದ ಶಿವನನ್ನು ಕುರಿತು ಅತ್ಯಂತ ಕಠಿಣವಾದ ತಪಸ್ಸನ್ನಾಚರಿಸ ತೊಡಗಿದ. ಇದನ್ನರಿತ ಮಹರ್ಷಿಗಳು ಆದಿಶಕ್ತಿಯನ್ನು ಪ್ರಾರ್ಥಿಸಿದಾಗ, ಆದಿಶಕ್ತಿ ದೇವಿಯು ಆ ರಾಕ್ಷಸನಿಗೆ ಮಾತುಗಳು ಬಾರದೆ ಇರುವ ಹಾಗೆ ಮಾಡಿದಳು. ಇದರಿಂದ ಶಿವನು ಪ್ರತ್ಯಕ್ಷನಾದರೂ ಸಹ ರಾಕ್ಷಸ ಯಾವ ವರವೂ ಬೇಡದೆ ಹೋದ ಹಾಗೂ ಅಂದಿನಿಂದ ಆತ ಮೂಕಾಸುರ ಎಂಬ ಹೆಸರಿನಿಂದ ಕರೆಯಲ್ಪಟ್ಟ. ದೇವಸ್ಥಾನದಲ್ಲಿರುವ ರಥ ಅಥವಾ ದೇವಿಯ ತೇರು.

ಚಿತ್ರಕೃಪೆ: Ajaykuyiloor

ಕೊಲ್ಲೂರಿನಿಂದ ಗೋಕರ್ಣ:

ಕೊಲ್ಲೂರಿನಿಂದ ಗೋಕರ್ಣ:

ಇದರಿಂದ ಕುಪಿತನಾದ ಮೂಕಾಸುರ ಮಹರ್ಷಿಗಳನ್ನು ಸಂಹರಿಸಲು ಬರುತ್ತಿರಲು, ದೇವತೆಗಳ ಹಾಗೂ ಮಹರ್ಷಿಗಳ ಪ್ರಾರ್ಥನೆ ಕೇಳಿದ ಆದಿ ಶಕ್ತಿಯು ಆ ಮೂಕಾಸುರನನ್ನು ತಡೆದು ಯುದ್ಧ ಮಾಡಿ ಅವನನ್ನು ಸಂಹರಿಸಿದಳು. ಹೀಗೆ ಆ ದೇವಿಯು ತರುವಾಯ ಮೂಕಾಂಬಿಕಾ ದೇವಿಯಾಗಿ ಶಾಶ್ವತವಾಗಿ ಈ ಸ್ಥಳದಲ್ಲಿ ನೆಲೆಸಿ ಭಕ್ತರನ್ನು ಹರಸತೊಡಗಿದಳು. ಕೊಲ್ಲೂರಿಗೆ ತಲುಪುವುದು ಬಹಳ ಸುಲಭವಾಗಿದೆ. ಉಡುಪಿ ಮತ್ತು ಕುಂದಾಪುರಗಳಿಂದ ರಸ್ತೆಯ ಮೂಲಕ ಕೊಲ್ಲೂರನ್ನು ತಲುಪಬಹುದಾಗಿದ್ದು, ಕೊಂಕಣ ರೈಲ್ವೆ ಮಾರ್ಗದಲ್ಲಿರುವ ಮೂಕಾಂಬಿಕಾ ರೋಡ್‌‌ (ಬೈಂದೂರು) ಅಥವಾ ಕುಂದಾಪುರ ಇಲ್ಲಿಗೆ ಅತಿ ಸನಿಹದ ರೈಲ್ವೆ ನಿಲ್ದಾಣ ಗಳಾಗಿವೆ.

ಚಿತ್ರಕೃಪೆ: Vinayaraj

ಕೊಲ್ಲೂರಿನಿಂದ ಗೋಕರ್ಣ:

ಕೊಲ್ಲೂರಿನಿಂದ ಗೋಕರ್ಣ:

ಒಂದೊಮ್ಮೆ ಕೊಲ್ಲೂರಿನಿಂದ ಪ್ರಯಾಣ ಮುಂದುವರಿಸಿದಾಗ ಪಶ್ಚಿಮಕ್ಕೆ ಸುಮಾರು 30 ಕಿ.ಮೀ ದೂರದಲ್ಲಿ ಬೈಂದೂರು ಎಂಬ ಸುಂದರ ಕರಾವಳಿ ಪಟ್ಟಣವನ್ನು ತಲುಪಬಹುದು. ಉಡುಪಿ ಜಿಲ್ಲೆಯಲ್ಲಿ ಬರುವ ಈ ಪಟ್ಟಣವು ತನ್ನಲ್ಲಿರುವ ಸೋಮೇಶ್ವರ ಕಡಲತೀರ, ಕೋಸಳ್ಳಿ ಜಲಪಾತ ಹಾಗೂ ಒಟ್ಟಿನೆನೆ ಸೂರ್ಯಾಸ್ತ ವೀಕ್ಷಣಾ ಸ್ಥಳಕ್ಕೆ ಹೆಚ್ಚು ಪ್ರಸಿದ್ಧಿ ಪಡೆದಿದೆ.

ಚಿತ್ರಕೃಪೆ: Rohanmontherio

ಕೊಲ್ಲೂರಿನಿಂದ ಗೋಕರ್ಣ:

ಕೊಲ್ಲೂರಿನಿಂದ ಗೋಕರ್ಣ:

ಇನ್ನೊಂದು ವಿಶೇಷವೆಂದರೆ ಮಹಾರಾಷ್ಟ್ರದ ಪನ್ವೇಲ್ ಹಾಗೂ ಕೇರಳದ ಕೊಚ್ಚಿ ನಗರಗಳನ್ನು ಬೆಸೆಯುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 66 ಈ ಕರಾವಳಿ ಪಟ್ಟಣದ ಮೂಲಕ ಹಾದು ಹೋಗಿರುವುದು ಅಲ್ಲದೆ ಕೊಂಕಣ ರೈಲು ಮಾರ್ಗದ ಮೂಲಕ ಕೊಲ್ಲೂರು ಮೂಕಾಂಬಿಕೆಯ ದರ್ಶನಕ್ಕಾಗಿ ಬರುವ ಭಕ್ತರು ಇಳಿಯಬೇಕಾದ ಮೂಕಾಂಬಿಕಾ ರಸ್ತೆ, ಬೈಂದೂರು ರೈಲು ನಿಲ್ದಾಣವೂ ಸಹ ಇಲ್ಲಿದೆ.

ಚಿತ್ರಕೃಪೆ: Stanyserra

ಕೊಲ್ಲೂರಿನಿಂದ ಗೋಕರ್ಣ:

ಕೊಲ್ಲೂರಿನಿಂದ ಗೋಕರ್ಣ:

ಬೈಂದೂರಿನ ಭೇಟಿಯ ಬಳಿಕ ಉತ್ತರಕ್ಕೆ ರಾ.ಹೆ 66 ರ ಮೂಲಕ ಮುಂದೆ ಸಾಗಿದರೆ ಮತ್ತೊಂದು ಕರಾವಳಿ ಪಟ್ಟಣವಾದ ಭಟ್ಕಳವನ್ನು ತಲುಪಬಹುದು. ಬೈಂದೂರಿನಿಂದ ಭಟ್ಕಳವು ಕೇವಲ 22 ಕಿ.ಮೀ ಗಳಷ್ಟು ಮಾತ್ರವೆ ದೂರದಲ್ಲಿದ್ದು ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿಗೆ ಒಳಪಡುತ್ತದೆ. ಕರಾವಳಿ ತೀರದ ಪಟ್ಟಣ ಇದಾಗಿದ್ದು ಸರಳ ಹಾಗೂ ಸುಂದರವಾದ ವಾತಾವರಣವನ್ನು ಹೊಂದಿದೆ. ಇಷ್ಟವಿದ್ದಲ್ಲಿ ಪ್ರವಾಸಿಗರು ಇಲ್ಲಿನ ಜಾಲಿ ಕಡಲ ತೀರಕ್ಕೆ ಭೇಟಿ ನೀಡಬಹುದು.

ಚಿತ್ರಕೃಪೆ: Magiceye

ಕೊಲ್ಲೂರಿನಿಂದ ಗೋಕರ್ಣ:

ಕೊಲ್ಲೂರಿನಿಂದ ಗೋಕರ್ಣ:

ಭಟ್ಕಳ ತೊರೆದು ಅದೆ ರಾಷ್ಟ್ರೀಯ ಹೆದ್ದಾರಿಯಲ್ಲಿ (ಎಡಪಲ್ಲಿ-ಪನ್ವೇಲ್ ಹೈವೇ) ಉತ್ತರಕ್ಕೆ ಸುಮಾರು ಐದು ಕಿ.ಮೀ ದೂರದಲ್ಲಿ ಶಿರಾಲಿ ಎಂಬ ಕರಾವಳಿ ಹಳ್ಳಿಯು ದೊರೆಯುತ್ತದೆ. ಸುಂದರವಾದ ಶಿರಾಲಿ ಕಡಲ ತೀರವನ್ನು ಹೊಂದಿದ ಈ ಗ್ರಾಮವು ಮುಖ್ಯವಾಗಿ ಎರಡು ಅಂಶಗಳಿಗೆ ಪ್ರಸಿದ್ಧವಾಗಿದೆ. ಒಂದು ಚಿತ್ರಾಪುರ ಮಠವಾದರೆ ಮತ್ತೊಂದು ಮಹಾಗಣಪತಿ ಮಹಮ್ಮಾಯಾ ದೇವಾಲಯ. ಸುಂದರವಾದ ಶಿರಾಲಿ ಕಡಲ ತೀರ.

ಚಿತ್ರಕೃಪೆ: Nishant puranik

ಕೊಲ್ಲೂರಿನಿಂದ ಗೋಕರ್ಣ:

ಕೊಲ್ಲೂರಿನಿಂದ ಗೋಕರ್ಣ:

ಚಿತ್ರಾಪುರ ಸಾರಸ್ವತ ಬ್ರಾಹ್ಮಣ ಜನಾಂಗದವರ ಅತಿ ಮುಖ್ಯ ಮಠವಾಗಿದೆ ಶಿರಾಲಿಯಲ್ಲಿರುವ ಚಿತ್ರಾಪುರ ಮಠ. ಶಿರಾಲಿಯಲ್ಲಿರುವ ಈ ಮಠವು 1757 ರಿಂದಲೂ ಈ ಪ್ರದೇಶದಲ್ಲಿ ಉಪಸ್ಥಿತವಿದ್ದು ಅದ್ಭುತವಾದ ಇತಿಹಾಸ್ವನ್ನು ಹೊಂದಿದೆ.

ಚಿತ್ರಕೃಪೆ: Nkodikal

ಕೊಲ್ಲೂರಿನಿಂದ ಗೋಕರ್ಣ:

ಕೊಲ್ಲೂರಿನಿಂದ ಗೋಕರ್ಣ:

ಮಠವು ವಿಶಾಲವಾದ ಕಟ್ಟಡವನ್ನು ಹೊಂದಿದ್ದು ಮಠದ ಹಿಂದಿನ ಪೀಠಾಧಿಪತಿಗಳ ಸಮಾಧಿ ಮಂದಿರಗಳನ್ನೂ ಸಹ ಹೊಂದಿದೆ. ನಿತ್ಯವೂ ಇಲ್ಲಿ ಶಿವನ ಅವತಾರವಾದ ಭವಾನಿಶಂಕರನನ್ನು ಮುಖ್ಯವಾಗಿ ಪೂಜಿಸಲಾಗುತ್ತದೆ.

ಚಿತ್ರಕೃಪೆ: Rajat.b

ಕೊಲ್ಲೂರಿನಿಂದ ಗೋಕರ್ಣ:

ಕೊಲ್ಲೂರಿನಿಂದ ಗೋಕರ್ಣ:

ಶಿರಾಲಿ ಗ್ರಾಮದಲ್ಲಿರುವ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ಮಹಾಗಣಪತಿ ಮಹಾಮಾಯಾ ದೇವಾಲಯ. ಸಾಮಾನ್ಯವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಧಾನವಾಗಿ ವಾಸಿಸುವ ಕಾಮತ್, ಪ್ರಭು, ಜೋಶಿ, ಪುರಾಣಿಕ್, ಮಲ್ಯ, ಕುಡ್ವಾ, ನಾಯಕ್ ಮುಂತಾದ ಕುಟುಂಬಗಳ ಕುಲದೈವನಾಗಿ ಈ ಮಹಾಗಣಪತಿಯನ್ನು ಆರಾಧಿಸಲಾಗುತ್ತದೆ. ಇಲ್ಲಿರುವ ಪ್ರಧಾನ ದೇವತೆಗಳು ಗಣಪತಿ ಹಾಗೂ ಮಹಾಮಾಯಾ (ಶಾಂತಾದುರ್ಗಾ).
ಮಹಾಗಣಪತಿಯ ಮೂಲ ವಿಗ್ರಹ.

ಚಿತ್ರಕೃಪೆ: Premkudva

ಕೊಲ್ಲೂರಿನಿಂದ ಗೋಕರ್ಣ:

ಕೊಲ್ಲೂರಿನಿಂದ ಗೋಕರ್ಣ:

ಮಹಾಮಾಯಾ ಅಂದರೆ ಪಾರ್ವತಿಯ ಅವತಾರವಾದ ಶಾಂತಾದುರ್ಗಾ ದೇವಿಯ ಮೂಲ ವಿಗ್ರಹ.

ಚಿತ್ರಕೃಪೆ: Premkudva

ಕೊಲ್ಲೂರಿನಿಂದ ಗೋಕರ್ಣ:

ಕೊಲ್ಲೂರಿನಿಂದ ಗೋಕರ್ಣ:

ಶಿರಾಲಿ ಗ್ರಾಮದಲ್ಲಿ ಸಮಯ ಕಳೆದು ಮತ್ತೆ ಎಡಪಲ್ಲಿ-ಪನ್ವೇಲ್ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಉತ್ತರಕ್ಕೆ ಸುಮಾರು ಒಂಭತ್ತು ಕಿ.ಮೀ ಮುಂದೆ ಸಾಗಿದಾಗ ದೊರೆಯುವ ಅತಿ ಪ್ರಸಿದ್ಧ ಧಾರ್ಮಿಕ ಹಾಗೂ ಪ್ರವಾಸಿ ಆಕರ್ಷಣೆಯುಳ್ಳ ತಾಣವೆ ಮುರುಡೇಶ್ವರ.

ಚಿತ್ರಕೃಪೆ: varun suresh

ಕೊಲ್ಲೂರಿನಿಂದ ಗೋಕರ್ಣ:

ಕೊಲ್ಲೂರಿನಿಂದ ಗೋಕರ್ಣ:

ಸಮೃದ್ಧವಾದ ಚರಿತ್ರೆಯ ಜೊತೆಗೆ ಜಗತ್ತಿನಲ್ಲಿ ಎರಡನೇ ಅತಿದೊಡ್ಡದಾದ ಧ್ಯಾನಾವಸ್ಥೆಯ ಶಿವನ ಪ್ರತಿಮೆಯಿರುವ ಸ್ಥಳ ಮುರುಡೇಶ್ವರ. ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟಗಳಲ್ಲಿ ನೆಲೆಸಿರುವ ಈ ಸ್ಥಳವು ರಾಮಾಯಣದ ಮೂಲ ಹೊಂದಿದ್ದು, ಸಮುದ್ರವು ಹಿನ್ನಿಲೆಯಲ್ಲಿರುವಂತೆ ಆಕರ್ಷಕವಾಗಿ ಪ್ರತಿಷ್ಠಾಪಿಸಲಾಗಿರುವ ಶಿವನ ಬೃಹತ್ ಪ್ರತಿಮೆಗೆ ಜಗತ್ಪ್ರಸಿದ್ಧವಾಗಿದೆ.

ಚಿತ್ರಕೃಪೆ: Sam valadi

ಕೊಲ್ಲೂರಿನಿಂದ ಗೋಕರ್ಣ:

ಕೊಲ್ಲೂರಿನಿಂದ ಗೋಕರ್ಣ:

ಚಿಕ್ಕ ಗುಡ್ಡವೊಂದರ ಮೇಲೆ ಸುಂದರವಾದ ಮತ್ತು ಸಮೃದ್ಧವಾಗಿ ಬೆಳೆದಿರುವ ಆಕರ್ಷಕ ಹಸಿರಿನ ಪರಿಸರದ ಮಧ್ಯದಲ್ಲಿ ತನ್ನ ಭಕ್ತನಾದ ನಂದಿಯ ಸಮ್ಮುಖದಲ್ಲಿ ಸೌಮ್ಯಭಾವದಿಂದ ಧ್ಯಾನಿಸುತ್ತಿರುವ ಪರಮ ಶಿವನ ಪ್ರತಿಮೆಯು ನಿಜವಾಗಿಯೂ ಮುರುಡೇಶ್ವರದ ಮನಸೂರೆಗೊಳ್ಳುವಂತಹ ಆಕರ್ಷಣೆಯಾಗಿದೆ.

ಚಿತ್ರಕೃಪೆ: Pradeep717

ಕೊಲ್ಲೂರಿನಿಂದ ಗೋಕರ್ಣ:

ಕೊಲ್ಲೂರಿನಿಂದ ಗೋಕರ್ಣ:

ಕಂಡುಕಗಿರಿ ಶಿಖರದಲ್ಲಿ ನೆಲೆಸಿರುವ ಮುರುಡೇಶ್ವರ ದೇವಾಲಯ ಮತ್ತು ಅತಿ ಎತ್ತರದ ರಾಜಗೋಪುರ ಮುರುಡೇಶ್ವರದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದ್ದು ಎಲ್ಲ ಪ್ರವಾಸಿಗರೂ ನೋಡಲೇಬೇಕಾದ ಸ್ಥಳವಾಗಿದೆ.ಈ ದೇವಾಲಯವು ಮೂರು ಕಡೆಗಳಿಂದಲೂ ಅರೆಬಿಯನ್ ಸಮುದ್ರದಿಂದ ಸುತ್ತುವರೆದಿದ್ದು ನೋಡಲು ವಿಶೇಷವೆನಿಸುತ್ತದೆ.

ಚಿತ್ರಕೃಪೆ: Magiceye

ಕೊಲ್ಲೂರಿನಿಂದ ಗೋಕರ್ಣ:

ಕೊಲ್ಲೂರಿನಿಂದ ಗೋಕರ್ಣ:

ಸ್ಥಳ ಪುರಾಣದಂತೆ, ಹಿಂದೆ ರಾವಣನು ಆತ್ಮಲಿಂಗವನ್ನು ಒಯ್ಯುತ್ತಿರುವಾಗ ನೈಸರ್ಗಿಕ ಕರೆಗೆಂದು ನಿಂತು ದನ ಕಾಯುವವನ ವೇಷದಲ್ಲಿದ್ದ ಶ್ರೀಗಣೇಶನಿಗೆ ತನ್ನ ಕೈಯಲ್ಲಿರುವ ಆತ್ಮಲಿಂಗವನ್ನು ಕೊಟ್ಟು ಅದನ್ನು ಕೆಳಗಿಡದಂತೆ ಕೇಳುತ್ತಾನೆ. ಅದಕ್ಕೊಪ್ಪಿದ ಗಣೇಶ ನಿಗದಿತ ಸಮಯವೊಂದನ್ನು ಹೇಳಿ ಅಷ್ಟರಲ್ಲೆ ಬರಬೇಕೆಂದು ಹೇಳಿ ಇಲ್ಲದಿದ್ದರೆ ಆ ಆತ್ಮಲಿಂಗವನ್ನು ಭೂಮಿಯ ಮೇಲಿಡುತ್ತೇನೆಂದು ಹೇಳುತ್ತಾನೆ. ಅದಕ್ಕನುಸಾರವಾಗಿ ರಾವಣ ಮರಳದಾದಾಗ ಆ ಲಿಂಗವು ಅಲ್ಲೆ ನೆಲೆಸಿ ಇಂದು ಮುರುಡೇಶ್ವರವಾಗಿದೆ ಎಂದೂ ಹೇಳಲಾಗುತ್ತದೆ. ಮುರುಡೇಶ್ವರ ದೇವಾಲಯ.

ಚಿತ್ರಕೃಪೆ: Magiceye

ಕೊಲ್ಲೂರಿನಿಂದ ಗೋಕರ್ಣ:

ಕೊಲ್ಲೂರಿನಿಂದ ಗೋಕರ್ಣ:

ಶಿವನ ಬೃಹತ್ ಪ್ರತಿಮೆ ಹೊರತಾಗಿ ಇಲ್ಲಿರುವ ಮತ್ತೊಂದು ಆಕರ್ಷಣೆ ಎಂದರೆ 20 ಅಂತಸ್ತುಗಳುಳ್ಳ ಅತಿ ಎತ್ತರದ ರಾಜಗೋಪುರ. ಈ ಭವ್ಯವಾದ ಗೋಪುರದ ಪ್ರವೇಶದ ಎರಡು ಬದಿಗಳಲ್ಲಿ ಸುಂದರವಾದ ಆನೆಯ ಕೆತ್ತನೆಗಳು ಈ ಗೋಪುರಕ್ಕೆ ರಾಜ ಕಳೆಯನ್ನು ತಂದಿರುವುದನ್ನು ಗಮನಿಸಬಹುದು.

ಚಿತ್ರಕೃಪೆ: Jim McDougall

ಕೊಲ್ಲೂರಿನಿಂದ ಗೋಕರ್ಣ:

ಕೊಲ್ಲೂರಿನಿಂದ ಗೋಕರ್ಣ:

ದೇವಾಲಯವನ್ನು ಹೊರತುಪಡಿಸಿ ಇತರೆ ಆಕರ್ಷಣೆಗಳೆಂದರೆ ಸಮುದ್ರ ತೀರದ ಚಟುವಟಿಕೆಗಳಾದ ಈಜುವುದು, ಈಜು ಕಲಿಯುವಿಕೆ ಹಾಗೂ ದೋಣಿ ವಿಹಾರಗಳು. ಇಲ್ಲಿನ ಸಮುದ್ರ ತೀರವು ಸುಂದರ ಹಾಗೂ ಪ್ರಶಾಂತ ವಾದ ವಾತಾವರಣದಿಂದ ಕೂಡಿದ್ದು ಪ್ರವಾಸಿಗರ ಅಚ್ಚುಮೆಚ್ಚಿನ ಆಕರ್ಷಣೆಯಾಗಿದೆ.

ಚಿತ್ರಕೃಪೆ: Thejas Panarkandy

ಕೊಲ್ಲೂರಿನಿಂದ ಗೋಕರ್ಣ:

ಕೊಲ್ಲೂರಿನಿಂದ ಗೋಕರ್ಣ:

ಇತರೆ ಜಲಾಕರ್ಷಣೆ ಗಳೆಂದರೆ ಪರಿವಾರ ಸಮೇತವಾಗಿ ಮಕ್ಕಳ ಜೊತೆ ಮಜಾ ಮಾಡಲು ಬರುವವರಿಗೆ ಬಹಳ ಪ್ರಸಿದ್ಧವಾದ ಅಲೆಗಳ ಕೊಳವಿದೆ. ಅದಲ್ಲದೆ ನೀವು ಕೆಲವು ಬಹು ಅಂತಸ್ತಿನ ಹೋಟೆಲುಗಳನ್ನು ನೀರಿನ ಮೇಲೆಯೇ ಕಾಣಬಹುದು. ಈ ಹೋಟೆಲಿನಲ್ಲಿ ಮಾಡಿದ ಭೋಜನ ಜೀವನದಲ್ಲೆ ಖಂಡಿತವಾಗಿಯೂ ಮರೆಯಲಾಗದ ಅನುಭವವಾಗಬಹುದೆಂದರೆ ತಪ್ಪಾಗಲಾರದು.

ಚಿತ್ರಕೃಪೆ: Yogesa

ಕೊಲ್ಲೂರಿನಿಂದ ಗೋಕರ್ಣ:

ಕೊಲ್ಲೂರಿನಿಂದ ಗೋಕರ್ಣ:

ಪ್ರಶಾಂತೆತೆಯಿಂದ ಕೂಡಿದ್ದು ಅದ್ಭುತವಾದ ಸಮಯ ಕಳೆಯುವಂತೆ ಮಾಡುವ ಮುರುಡೇಶ್ವರದ ಸುಂದರ ಕಡಲ ತೀರದ ಗಮ್ಯ ನೋಟ.

ಚಿತ್ರಕೃಪೆ: RAVIKRIPA Multimedia

ಕೊಲ್ಲೂರಿನಿಂದ ಗೋಕರ್ಣ:

ಕೊಲ್ಲೂರಿನಿಂದ ಗೋಕರ್ಣ:

ಒಂದೊಮ್ಮೆ ಮುರುಡೇಶ್ವರದಲ್ಲಿ ಸಮಯ ಕಳೆದ ಮೇಲೆ ನೇರವಾಗಿ ಅದೆ ರಾಷ್ಟ್ರೀಯ ಹೆದ್ದಾರಿಯನ್ನು ಬಳಸಿಕೊಂಡು ಸುಮಾರು 28 ಕಿ.ಮೀ ಗಳಷ್ಟು ಪ್ರಯಾಣ ಮಾಡಿದರೆ ಸಾಕು ದೊರೆಯುವ ಮತ್ತೊಂದು ಸುಂದರ ಸ್ಥಳವೆ ಹೊನ್ನಾವರ. ಹೊನ್ನಾವರ ತನ್ನ ಬಳಿಯಿರುವ ಅಪ್ಸರಕೊಂಡ ಜಲಪಾತ ಹಾಗೂ ಅಷ್ಟೊಂದಾಗಿ ಅನ್ವೇಷಿಸಲ್ಪಡದ ಆದರೆ ಬಹು ಸುಂದರವಾದ ಅಪ್ಸರಕೊಂಡ ಕಡಲ ತೀರಕ್ಕೆ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Ashok Neelakanta

ಕೊಲ್ಲೂರಿನಿಂದ ಗೋಕರ್ಣ:

ಕೊಲ್ಲೂರಿನಿಂದ ಗೋಕರ್ಣ:

ಅಪ್ಸರಕೊಂಡ ಎಂದರೆ ಅಪ್ಸರೆಯರ ಹೊಂಡ ಅಥವಾ ಕೊಳ ಎಂದು ಹೇಳಬಹುದು. ಸಮುದ್ರಕ್ಕೆ ಮುಖ ಮಾಡಿ ನಿಂತಿರುವ ಈ ಕೊಳದಲ್ಲಿ ಸ್ಥಳಪುರಾಣದಂತೆ ಅಪ್ಸರೆಯರು ಸ್ನಾನ ಮಾಡಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರಂತೆ ಹೀಗಾಗಿ ಇದಕ್ಕೆ ಅಪ್ಸರಕೊಂಡ ಎಂಬ ಹೆಸರು ಬಂದಿದೆ.

ಚಿತ್ರಕೃಪೆ: Isroman.san

ಕೊಲ್ಲೂರಿನಿಂದ ಗೋಕರ್ಣ:

ಕೊಲ್ಲೂರಿನಿಂದ ಗೋಕರ್ಣ:

ಇದೆ ಹೆಸರಿನ ಸುಂದರವಾದ ಜಲಪಾತವನ್ನೂ ಸಹ ಹೊನ್ನಾವರದಲ್ಲಿರುವ ಪಶ್ಚಿಮ ಘಟ್ಟಗಳ ಬೆಟ್ಟಗಳ ಮಧ್ಯೆ ಕಾಣಬಹುದಾಗಿದೆ. ಚಾರಣದ ಮೂಲಕ ಈ ಜಲಪಾತ ತಾಣವನ್ನು ತಲುಪಬಹುದಾಗಿದೆ.

ಚಿತ್ರಕೃಪೆ: Tiruka.yatrika

ಕೊಲ್ಲೂರಿನಿಂದ ಗೋಕರ್ಣ:

ಕೊಲ್ಲೂರಿನಿಂದ ಗೋಕರ್ಣ:

ಇನ್ನೂ ಅಪ್ಸರಕೊಂಡ ಕಡಲ ತೀರದ ಬಳಿ ಅಪ್ಸರಕೊಂಡ ದೇವಾಲಯ (ಮಹಾಗಣಪತಿ ಹಾಗೂ ಉಗ್ರನರಸಿಂಹರ ದೇವಾಲಯಗಳು) ಹಾಗೂ ಐತಿಹಾಸಿಕ ಪ್ರಾಮುಖ್ಯತೆಯುಳ್ಳ ಪಾಂಡವರ ಗುಹೆಗಳನ್ನು ಕಾಣಬಹುದು. ಹಿಂದೆ ವನವಾಸದಲ್ಲಿದ್ದಾಗ ಪಾಂಡವರು ಈ ಗುಹೆಗಳಲ್ಲಿ ತಂಗಿದ್ದರೆನ್ನಲಾಗಿದೆ.

ಚಿತ್ರಕೃಪೆ: Isroman.san

ಕೊಲ್ಲೂರಿನಿಂದ ಗೋಕರ್ಣ:

ಕೊಲ್ಲೂರಿನಿಂದ ಗೋಕರ್ಣ:

ನಂತರ ಹೊನ್ನಾವರದಿಂದ ಅದೇ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಸುಮಾರು 22 ಕಿ.ಮೀ ಮುಂದೆ ಸಾಗಿದರೆ ದೊರೆಯುವ ಸ್ಥಳ ಕುಮಟಾ. ಅವಾಕ್ಕಾಗಿಸುವ ದೃಶ್ಯವೈಭವ, ನಯನಮನೋಹರ ಕಡಲ ತೀರ, ಮನಮುದಗೊಳಿಸುವ ಸ್ಮಾರಕಗಳು ಮತ್ತು ಶ್ರೀಮಂತ ಸಾಂಸ್ಕೃತಿಕ ವೈಭವದಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಸದಾ ನೆನಪಿಡುವಂತಾಗುತ್ತದೆ. ಪ್ರಶಾಂತವಾಗಿರುವ ಕುಮಟಾ ಕಡಲ ತೀರ.

ಚಿತ್ರಕೃಪೆ: rajesh kamat

ಕೊಲ್ಲೂರಿನಿಂದ ಗೋಕರ್ಣ:

ಕೊಲ್ಲೂರಿನಿಂದ ಗೋಕರ್ಣ:

ಕುಮಟಾ ತೊರೆದ ನಂತರ ರಾಷ್ಟ್ರೀಯ ಹೆದ್ದಾರಿ ಬಳಸುತ್ತ ಮುಂದೆ ಸುಮಾರು 11 ಕಿ.ಮೀ ಪ್ರಯಾಣ ಮಾಡಿ ಮಿರ್ಜಾನ್ ಎಂಬ ತಾಣಕ್ಕೆ ಭೇಟಿ ನೀಡಬಹುದು. ಮಿರ್ಜಾನ್ ಅರಬ್ಬಿ ಸಮುದ್ರ ಬಳಿ ನೆಲೆಸಿರುವ ಐತಿಹಾಸಿಕ ಹಾಗೂ ಇಂದಿಗೂ ಸುಂದರವಾಗಿ ಕಂಡುಬರುವ ಮಿರ್ಜಾನ್ ಕೋಟೆಗೆ ಪ್ರಸಿದ್ಧವಾಗಿದೆ. ನೀವು ಇತಿಹಾಸಪ್ರಿಯ ಪ್ರವಾಸಿಗರಾಗಿದ್ದಲ್ಲಿ ಈ ಕೋಟೆ ತಾಣವನ್ನೊಮ್ಮೆ ನೋಡಿ ಮತ್ತೆ ಮುಂದೆ ನಿಮ್ಮ ಪ್ರಯಾಣವನ್ನು ಈ ನಿರ್ದಿಷ್ಟ ಪ್ರವಾಸಿ ಮಾರ್ಗದ ಕೊನೆಯ ಸ್ಥಳವಾದ ಗೋಕರ್ಣದೆಡೆ ಪಯಣ ಬೆಳೆಸಬಹುದು.

ಚಿತ್ರಕೃಪೆ: Lisa.davis

ಕೊಲ್ಲೂರಿನಿಂದ ಗೋಕರ್ಣ:

ಕೊಲ್ಲೂರಿನಿಂದ ಗೋಕರ್ಣ:

ಕೊನೆಯದಾಗಿ ಮಿರ್ಜಾನ್ ಕೋಟೆ ನೋಡಿದ ಬಳಿಕ ನೇರವಾಗಿ ಅದೆ ರಾಷ್ಟ್ರೀಯ ಹೆದ್ದಾರಿ (ಎಡುಪಲ್ಲಿ-ಪನ್ವೇಲ್ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 66) ಅನ್ನು ಬಳಸಿಕೊಂಡು ಬರ್ಗಿ, ಹಿರೆಗುತ್ತಿ ಮೂಲಕ ಸಾಗಿ ನಂತರ ರಾಷ್ಟ್ರೀಯ ಹೆದ್ದಾರಿಯಿಂದ ಎಡ ತಿರುವು ಪಡೆದು ಗೋಕರ್ಣ ರಸ್ತೆ ಹಿಡಿದು ಸುಮಾರು 24 ಕಿ.ಮೀ ಪ್ರಯಾಣ ಮಾಡಿ ಸುಂದರ ಹಾಗೂ ಧಾರ್ಮಿಕ ಪ್ರವಾಸಿ ಆಕರ್ಷಣೆಯಾದ ಗೋಕರ್ಣವನ್ನು ತಲುಪಬಹುದು.

ಚಿತ್ರಕೃಪೆ: Nechyporuk Iuliia

ಕೊಲ್ಲೂರಿನಿಂದ ಗೋಕರ್ಣ:

ಕೊಲ್ಲೂರಿನಿಂದ ಗೋಕರ್ಣ:

ಉತ್ತರ ಕನ್ನಡ ಜಿಲ್ಲೆಯಲ್ಲಿನ ಗೋಕರ್ಣವು ಒಂದು ಪುಣ್ಯ ಕ್ಷೇತ್ರ ವಾಗಿರುವುದಲ್ಲದೆ ಅಲ್ಲಿರುವ ಸುಂದರ ಕಡಲ ತೀರಗಳ ಪ್ರವಾಸಿ ತಾಣವಾಗಿ ಪ್ರಸಿದ್ಧಿ ಹೊಂದಿದೆ . ಈ ಸ್ಥಳವು ಎರಡು ನದಿಗಳಾದ ಅಗನಾಶಿನಿ ಮತ್ತು ಗಂಗಾವಳಿಯ ಸಂಗಮದ ಸಾನಿಧ್ಯದಲ್ಲಿದ್ದು ಆ ನದಿಗಳು ಒಂದಾಗುವ ಆಕಾರವು ಗೋವಿನ ಕಿವಿಯ ಆಕಾರವನ್ನು ಹೊಂದಿರುವ ಕಾರಣ ಈ ಸ್ಥಳಕ್ಕೆ ಗೋಕರ್ಣ ಎಂಬ ಹೆಸರು ಬಂದಿದೆ.

ಚಿತ್ರಕೃಪೆ: Infoayan

ಕೊಲ್ಲೂರಿನಿಂದ ಗೋಕರ್ಣ:

ಕೊಲ್ಲೂರಿನಿಂದ ಗೋಕರ್ಣ:

ಗೋಕರ್ಣದಲ್ಲಿ ಶಿವನು ಮಹಾಬಲೇಶ್ವರನಾಗಿ ನೆಲೆಸಿದ್ದು ಅಸಂಖ್ಯಾತ ಭಕ್ತರು ಶಿವನ ದರುಶನಕ್ಕಾಗಿ ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿ ಪ್ರತಿಷ್ಠಾಪನೆಗೊಂಡಿರುವ ಶಿವಲಿಂಗವು ರಾವಣನಿಂದ ತಂದಿದುದಾಗಿದೆ ಎಂಬ ನಂಬಿಕೆಯಿದೆ. ಕ್ಷೇತ್ರದಲ್ಲಿ ಮಹಾಬಲೇಶ್ವರನ ದೇವಾಲಯ ಹೊರತುಪಡಿಸಿ ಮಹಾ ಗಣಪತಿ ದೇವಾಲಯ , ಭದ್ರಕಾಳಿ ದೇವಾಲಯ, ವರದರಾಜ ದೇವಾಲಯ ಮತ್ತು ವೆಂಕಟರಮಣ ದೇವಾಲಯಗಳನ್ನೂ ಸಹ ಕಾಣಬಹುದು. ಗೋಕರ್ಣದಲ್ಲಿರುವ ಶ್ರೀ ಸೀತಾ ರಾಮ ಲಕ್ಷ್ಮಣ ದೇವಾಲಯ.

ಚಿತ್ರಕೃಪೆ: Sbblr geervaanee

ಕೊಲ್ಲೂರಿನಿಂದ ಗೋಕರ್ಣ:

ಕೊಲ್ಲೂರಿನಿಂದ ಗೋಕರ್ಣ:

ಗೋಕರ್ಣವು ಅತ್ಯಂತ ವೇಗವಾಗಿ ಪ್ರಿಯವಾಗುತ್ತಿರುವ ಪ್ರವಾಸಿ ತಾಣವಾಗಿದ್ದು ಗೋವಾದ ಅನೇಕ ಸಮುದ್ರ ತೀರಗಳನ್ನು ಹಿಮ್ಮೆಟ್ಟಿಸುವಂತಹ ಸುಂದರವಾದ ಹಲವು ಕರಾವಳಿ ಪ್ರದೇಶಗಳನ್ನು ಹೊಂದಿದೆ. ಕುಡ್ಲೆ ಸಮುದ್ರ ತೀರ, ಗೋಕರ್ಣ ತೀರ, ಹಾಫ್ ಮೂನ್ ಸಮುದ್ರ ತೀರ, ಪ್ಯಾರಾಡೈಸ್ ತೀರ ಹಾಗೂ ಓಂ ಸಮುದ್ರ ತೀರಗಳು ಇಲ್ಲಿರುವ ಐದು ಪ್ರಮುಖ ಕಡಲ ತೀರಗಳಾಗಿವೆ.

ಚಿತ್ರಕೃಪೆ: Andy Wright

ಕೊಲ್ಲೂರಿನಿಂದ ಗೋಕರ್ಣ:

ಕೊಲ್ಲೂರಿನಿಂದ ಗೋಕರ್ಣ:

ಓಂ ಸಮುದ್ರ ತೀರವು ಹಿಂದೂಗಳ ಚಿಹ್ನೆ ಯಾದ ಓಂ ಆಕಾರದಲ್ಲಿರುವ ಸುಂದರವಾದ ಕರಾವಳಿ ರೇಖೆಯನ್ನು ಹೊಂದಿದೆ. ಈ ಬೃಹತ್ ಚಿಹ್ನೆಯ ಸುತ್ತಾಕಾರ ಸಣ್ಣ ಕೊಳವನ್ನು ನಿರ್ಮಿಸಿದ್ದು ಇದು ಈಜು ಬಾರದ ಜನರಿಗೂ ಜಲಕ್ರೀಡೆಯಾಡಲು ಸುರಕ್ಷಿತ ಸ್ಥಳವಾಗಿದೆ.

ಚಿತ್ರಕೃಪೆ: Sankara Subramanian

ಕೊಲ್ಲೂರಿನಿಂದ ಗೋಕರ್ಣ:

ಕೊಲ್ಲೂರಿನಿಂದ ಗೋಕರ್ಣ:

ಸಮುದ್ರ ತೀರಗಳ ಹೊರತಾಗಿ ಗೋಕರ್ಣವು ಹಿಂದೂ ಧರ್ಮದವರಿಗೆ ಒಂದು ಪವಿತ್ರ ತೀರ್ಥ ಕ್ಷೇತ್ರವಾಗಿಯೂ ಪ್ರಸಿದ್ಧಿ ಪಡೆದಿದೆ. ಈ ಸ್ಥಳದಲ್ಲಿ ಗಂಗವಲಿ ಹಾಗೂ ಅಘನಾಶಿನಿ ನದಿಗಳು ಒಂದು ವಿಶಿಷ್ಟ ಆಕಾರದಲ್ಲಿ ಸಂಗಮಗೊಳ್ಳುತ್ತವೆ ಹಾಗೂ ಆ ಆಕಾರವು ಮೇಲಿನಿಂದ ನೋಡಿದಾಗ ಗೋವಿನ ಕಿವಿಯ ಹಾಗೆ ಗೋಚರಿಸುತ್ತದೆ. ಅದೆ ಕಾರಣದಿಂದ ಈ ಸ್ಥಳಕ್ಕೆ ಗೋವಿನ ಕರ್ಣ ಅರ್ಥಾತ್ ಗೋಕರ್ಣ ಎಂಬ ಹೆಸರು ಬಂದಿದೆ.

ಚಿತ್ರಕೃಪೆ: Mrjohncummings

ಕೊಲ್ಲೂರಿನಿಂದ ಗೋಕರ್ಣ:

ಕೊಲ್ಲೂರಿನಿಂದ ಗೋಕರ್ಣ:

ಇಲ್ಲಿನ ಮಹಾಬಲೇಶ್ವರ ದೇವಸ್ಥಾನವು ಪ್ರಭಾವಶಾಲಿಯಾಗಿದ್ದು ಶಿವನಿಗೆ ಮುಡಿಪಾಗಿದೆ. ಶಿವನು ಇಲ್ಲಿ ಆತ್ಮಲಿಂಗದ ರೂಪದಲ್ಲಿ ನೆಲೆಸಿದ್ದಾನೆಂದು ಹೇಳಲಾಗಿದೆ. ಇದು ಮುಕ್ತಿ ಸ್ಥಳವಾಗಿಯೂ ಹೆಸರುವಾಸಿಯಾಗಿದೆ. ಅಂದರೆ ಮೃತ ಪಟ್ಟ ವ್ಯಕ್ತಿಯ ಸಂಬಂಧಿಕರು ಈ ಕ್ಷೇತ್ರಕ್ಕೆ ಬಂದು ಅಂತಿಮ ವಿಧಿ ವಿಧಾನಗಳನ್ನು ಪೂರೈಸಿದರೆ ಆ ವ್ಯಕ್ತಿಗೆ ಮುಕ್ತಿ ಪ್ರಾಪ್ತಿಯಾಗುತ್ತದೆಂದು ನಂಬಲಾಗಿದೆ.

ಚಿತ್ರಕೃಪೆ: Nvvchar

ಕೊಲ್ಲೂರಿನಿಂದ ಗೋಕರ್ಣ:

ಕೊಲ್ಲೂರಿನಿಂದ ಗೋಕರ್ಣ:

ಗೋಕರ್ಣದಲ್ಲಿರುವ, ಸುತ್ತಲೂ ಹಲವಾರು ದೇಗುಲಗಳನ್ನು ಹೊಂದಿರುವ ಕೋಟಿತೀರ್ಥ ಕಲ್ಯಾಣಿಯು ಮತ್ತೊಂದು ವಿಶೇಷವಾಗಿದೆ. ವಿಸರ್ಜನೆ ಮುಂತಾದ ಧಾರ್ಮಿಕ ವಿಧಿ ವಿಧಾನಗಳಿಗೆಂದು ಈ ಪವಿತ್ರ ಕೊಳವನ್ನು ಉಪಯೋಗಿಸಲಾಗುತ್ತದೆ. ಇದು ಬಹಳ ಆಳವಾಗಿದ್ದು ಅಪಾಯಕಾರಿಯಾಗಿದೆ.

ಚಿತ್ರಕೃಪೆ: Miran Rijavec

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X