Search
  • Follow NativePlanet
Share
» »ಅತ್ಯಂತ ಮಸಾಲೆಯುಕ್ತ ಆಹಾರ ಬಡಿಸುವ ಭಾರತದ ಐದು ರಾಜ್ಯಗಳು

ಅತ್ಯಂತ ಮಸಾಲೆಯುಕ್ತ ಆಹಾರ ಬಡಿಸುವ ಭಾರತದ ಐದು ರಾಜ್ಯಗಳು

ಮಸಾಲೆಗೆ ಭಾರತ ಇತಿಹಾಸ ಪ್ರಸಿದ್ಧವಾಗಿದೆ. ಅಷ್ಟಿಲ್ಲದೇ ಕೊಲಂಬಸ್ ಸುಖಾಸುಮ್ಮನೇ ಭಾರತವನ್ನು ಹುಡುಕಲು ಹೊರಟನೇ? ಆದರೆ ವಿದೇಶೀಯರು ನೋಡುವಂತೆ ಮಸಾಲೆ ಇಡಿಯ ಭಾರತಕ್ಕೆ ಏಕಕ್ರಮದಲ್ಲಿ ಅನ್ವಯಿಸುವಂತಿಲ್ಲ. ನಮ್ಮ ದಕ್ಷಿಣ ಭಾರತದಲ್ಲಿಯೇ ಪ್ರತಿ ಹತ್ತು ಕಿಲೋಮೀಟರಿಗೆ ಭಾಷೆಯಲ್ಲಿ ಬದಲಾವಣೆ ಇರುವಂತೆಯೇ ಅಡುಗೆಯಲ್ಲಿ ಬಳಸುವ ಮಸಾಲೆಗಳಲ್ಲಿಯೂ ಬದಲಾವಣೆ ಇರುತ್ತದೆ. ಉತ್ತರ ಭಾರತದಲ್ಲಿ ಮಸಾಲೆ ಬಳಸುತ್ತಾರಾದರೂ ದಕ್ಷಿಣ ಭಾರಕ್ಕಿಂತ ಖಾರ ಕೊಂಚ ಕಡಿಮೆ. ಅತ್ತ, ಪೂರ್ವಭಾರತದಲ್ಲಂತೂ ಭಿನ್ನವಾದ ಮಸಾಲೆ ಬಳಸಲಾಗುತ್ತದೆ. ಹಾಗಾಗಿ, ನಾವು ಭಾಷೆಯನ್ನು ಅನ್ವಯಿಸಿ ಭಿನ್ನತೆಯಲ್ಲಿ ಏಕತೆಯನ್ನು ಸಾಧಿಸುತ್ತಿದ್ದೇವೆಯೋ ಹಾಗೆಯೇ ಪ್ರತಿ ಪ್ರಾಂತ, ರಾಜ್ಯದಲ್ಲಿಯೂ ಅಡುಗೆಗೆ ಬಳಸುವ ಸಾಮಾಗ್ರಿ ಮತ್ತು ಮಸಾಲೆಗಳಲ್ಲಿ ವೈವಿಧ್ಯತೆ ಇದೆ. ಇದರಲ್ಲಿ ಕೆಲವು ರಾಜ್ಯಗಳಲ್ಲಿ ಅತಿ ಹೆಚ್ಚು ಮಸಾಲೆ ಮತ್ತು ಖಾರವನ್ನು ಬಳಸಿದರೆ ಕೆಲವು ರಾಜ್ಯಗಳಲ್ಲಿ ಸಪ್ಪೆ ಎನಿಸುವಷ್ಟು ಕಡಿಮೆ. ಕೆಲವು ರಾಜ್ಯಗಳಲ್ಲಿ ಭಾರೀ ಪ್ರಮಾಣದ ಎಣ್ಣೆ ಬಳಸಿದರೆ ಕೆಲವು ರಾಜ್ಯಗಳ ಅಡುಗೆಯಲ್ಲಿ ಬೆಲ್ಲವೇ ಬೆಲ್ಲ!

ಈ ವಿಷಯ ಜನಸಾಮಾನ್ಯರಿಗೆ ಅಷ್ಟೊಂದು ಮಹತ್ವದ್ದು ಎನ್ನಿಸುವುದಿಲ್ಲವಾದರೂ ವಿದೇಶದಲ್ಲಿ ಹೋಟೆಲು ಪ್ರಾರಂಭಿಸುವವರಿಗೆ ಅಥವಾ ಭಾರತದಲ್ಲಿ ವಿದೇಶೀ ಮೂಲದ ಹೋಟೆಲು ಪ್ರಾರಂಭಿಸುವವರಿಗೆ ಎದುರಾಗುವ ಪ್ರಮುಖ ಸವಾಲಾಗಿದೆ. ಏಕೆಂದರೆ ವಿದೇಶದಲ್ಲಿ ಇವರು ಭಾರತವನ್ನು ಕೇವಲ 'ಇಂಡಿಯನ್ ಫುಡ್' ಅಥವಾ 'ಸ್ಪೈಸೀ ಫುಡ್' ಎಂಬ ಅಳತೆಗೋಲಿನಿಂದ ಅಳೆಯಲು ಸಾಧ್ಯವಿಲ್ಲ. ಏಕೆಂದರೆ ಇಲ್ಲಿ ಬರುವ ಗ್ರಾಹಕ ಭಾರತದ ಯಾವ ರಾಜ್ಯದಿಂದ ಬಂದಿದ್ದಾನೆ ಎಂಬುದನ್ನು ಅನುಸರಿಸುತ್ತದೆ. ಆಯಾ ರಾಜ್ಯದ ಗ್ರಾಹಕನ ಮಸಾಲೆಯ ನಿರೀಕ್ಷೆ ಭಿನ್ನವೇ ಆಗಿರುತ್ತದೆ. ಹಾಗಾಗಿ ಈ ಗೊಂದಲವನ್ನು ನಿವಾರಿಸಲು ಒಂದು ರಾಜ್ಯದ ಹೋಟೆಲು ಇನ್ನೊಂದು ರಾಜ್ಯದಲ್ಲಿ ಪ್ರಾರಂಭಿಸಿದರೆ ಇದು ಯಾವ ರಾಜ್ಯದ ಅಡುಗೆ ಎಂದು ಸೂಚಿಸಲಾಗುತ್ತದೆ. ಆದರೆ ವಿದೇಶೀ ಮೂಲಕ ಹೋಟೆಲುಗಳಲ್ಲಿ ಈ ಸೌಲಭ್ಯವಿಲ್ಲ. ಅವರು ಸೂಚ್ಯವಾಗಿ 'ಇಂಡಿಯನ್ ಸ್ಪೈಸಿ' ಎಂಬ ಹೆಸರಿನಿಂದ ಒಂದು ಮಿಶ್ರಣವನ್ನು ಬಡಿಸಿ ಎಲ್ಲಾ ರಾಜ್ಯದವರಿಗೂ ಒಂದೇ ಬಗೆಯ ರುಚಿಯನ್ನು ನೀಡುತ್ತವೆ. ಆದರೆ ಪ್ರಾಮಾಣಿಕವಾಗಿ ನಾವು ಯಾವ ರಾಜ್ಯದ ಅಡುಗೆ ಬಡುತ್ತಿದ್ದೇವೆ ಎಂದು ಸ್ಪಷ್ಟಪಡಿಸುವ, ಭಾರತದಲ್ಲಿ ಅತಿ ಹೆಚ್ಚಿನ ಮಸಾಲೆಯುಕ್ತ ಆಹಾರ ಬಡಿಸುವ ಐದು ಪ್ರಮುಖ ರಾಜ್ಯಗಳು ಯಾವುವು ಎಂಬುದನ್ನು ನೋಡೋಣ. ಕೆಳಗಿನ ವಿವರಗಳು ಕೇವಲ ಮಸಾಲೆಪ್ರಿಯರಿಗೆ ಮಾತ್ರವಲ್ಲ, ಮಸಾಲೆಪ್ರಿಯರಲ್ಲದವರಿಗೂ ಕುತೂಹಲ ಮೂಡಿಸಬಹುದು.

1. ರಾಜಸ್ಥಾನ

ವರ್ಣಯುಕ್ತ ಕೈಕುಸುರಿ ವಸ್ತುಗಳು, ಐತಿಹಾಸಿಕೆ ಕೋಟೆಗಳು, ಗುಲಾಬಿ ಕಟ್ಟಡಗಳು, ಭವ್ಯ ಪರಂಪರೆ ಮತ್ತು ಭಾರತದ ಇನ್ನಾವುದೇ ರಾಜ್ಯದಲ್ಲಿರದ ವೈಶಿಷ್ಠ್ಯವೆಂದರೆ ಮರುಭೂಮಿ. ಅಂತೆಯೇ ರಾಜಸ್ಥಾನದ ಅಡುಗೆಯೂ ಇತರ ರಾಜ್ಯಗಳಿಗಿಂತ ಕೊಂಚ ಭಿನ್ನವೇ ಆಗಿದೆ. ಈ ರಾಜ್ಯದ ಬಹುತೇಕ ಜನರು ಶಾಕಾಹಾರಿಗಳು. (ಸಂಸ್ಕೃತದಲ್ಲಿ ಶಾಕ ಎಂದರೆ ಸಸ್ಯ, ಹಾಗಾಗಿ, ಶಾಕಾಹಾರಿ ಎನ್ನುವುದು ಸರಿಯಾದ ಪದ. ಕೆಲವೆಡೆ ಇದನ್ನು ತಪ್ಪಾಗಿ ಶಾಖಾಹಾರಿ ಎಂದು ಬರೆಯಲಾಗುತ್ತದೆ). ರಾಜಸ್ಥಾನಿಗಳಿಗೆ ಮಸಾಲೆ ಎಂದರೆ ಪಂಚಪ್ರಾಣ. ಹೆಚ್ಚಿನ ಮಸಾಲೆಯುಕ್ತ ಖಾದ್ಯಗಳೆಂದರೆ ಘಾಟೇ ಕೀ ಸಬ್ಜೀ, ಕೇರ್ ಸಾಂಗ್ರಿಯಾ ಕೀ ಸಬ್ಜೀ ಮತ್ತು ಕೇರ್ ಉಪ್ಪಿನಕಾಯಿ.

ರಾಜಸ್ಥಾನದ ಇನ್ನೊಂದು ಮಸಾಲೆಯುಕ್ತ ಮತ್ತು ಜನಪ್ರಿಯ ಖಾದ್ಯವೆಂದರೆ ಲಾಲ್ ಮಾಂಸ್. ಆದರೆ ಇದು ಸಸ್ಯಾಹಾರಿಯಲ್ಲ, ಕುರಿಮಾಂಸದಿಂದ ಮಾಡಲ್ಪಟ್ಟ, ಅತಿ ಖಾರವಾದ ಮಥಾನಿಯಾ ಮೆಣಸಿನಿಂದ ತುಂಬಿದ ಖಾದ್ಯವಾಗಿದೆ. ಈ ಮೆಣಸು ರಾಜಸ್ಥಾನದ ಜೋಧಪುರದಲ್ಲಿ ಬೆಳೆಸಲಾಗುತ್ತದೆ.

ಈ ರಾಜ್ಯದಲ್ಲಿ ಬೆಳೆಸಿದ ಈ ಖಾರವಾದ ಮೆಣಸನ್ನು ಅತಿ ಖಾರವಾದ ಉಪ್ಪಿನಕಾಯಿ ಮಾಡಲೂ ಬಳಸಲಾಗುತ್ತದೆ. ಈ ಉಪ್ಪಿನಕಾಯಿ ಎಷ್ಟು ರುಚಿಕರವೆಂದರೆ ಊಟ ಮಾಡುವವರು ಬೆರಳನ್ನು ಸೀಪದಿರಲು ಸಾಧ್ಯವೇ ಇಲ್ಲ. ಹಾಗಾಗಿ, ಖಾರವಾಗಿದ್ದು ರುಚಿಕರವಾಗಿರುವ ಊಟ ನಿಮ್ಮ ಆಯ್ಕೆಯಾಗಿದ್ದರೆ ರಾಜಸ್ಥಾನಿ ಊಟ ನಿಮಗೆ ಪ್ರಥಮ ಆಯ್ಕೆಯಾಗಿದೆ. ಆದರೆ ರಾಜಸ್ಥಾನದ ಪ್ರತಿ ನಗರದ ಅಡುಗೆಯೂ ಕೊಂಚ ಭಿನ್ನವಾಗಿದ್ದು ರುಚಿಯಲ್ಲಿ ಕೊಂಚ ವ್ಯತ್ಯಾಸವಿದ್ದರೂ ಎಣ್ಣೆ ಮತ್ತು ಮಸಾಲೆಯ ಪ್ರಮಾಣ ಮಾತ್ರ ಎಲ್ಲೆಡೆ ಏಕಸಮಾನವಾಗಿರುವುದು ಇನ್ನೊಂದು ಹೆಗ್ಗಳಿಕೆಯಾಗಿದೆ.

ಈ ರಾಜ್ಯದ ಖಾದ್ಯಗಳಲ್ಲಿ ಖಂಡಿತಾ ಪ್ರಯತ್ನಿಸಬೇಕಾದವುಗಳು ಎಂದರೆ: ಘಾಟೇ ಕೀ ಸಬ್ಜೀ, ಲಾಲ್ ಮಾಂಸ್, ಕೇರ್ ಸಾಂಗ್ರಿ ಮತ್ತು ಮಿರ್ಚಿ ಬಡಾ.

2. ನವದೆಹಲಿ

ನವದೆಹಲಿ ನಮ್ಮ ದೇಶದ ರಾಜಧಾನಿಯಾಗಿದ್ದು ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಇತಿಹಾಸದಲ್ಲಿ ಮೊಗಲರ ರಾಜ್ಯಭಾರವಿದ್ದ ಪ್ರಭಾವದಿಂದ ಅಡುಗೆಯಲ್ಲಿಯೂ ಮೊಗಲರ ರುಚಿ ಇಲ್ಲದಿಲ್ಲ. ಇಂದು ನವದೆಹಲಿ ರಸ್ತೆ ವ್ಯಾಪಾರ ಮತ್ತು ರಸ್ತೆಯಡುಗೆಗಳಿಗೆ ಪ್ರಸಿದ್ದಿ ಪಡೆದಿದೆ. ಎಷ್ಟೂ ಜನರು ಈ ರಸ್ತೆತಿಂಡಿಗಳನ್ನು ಸವಿಯಲಿಕ್ಕಾಗಿಯೇ ದೆಹಲಿಗೆ ಬರುತ್ತಾರೆ. ವಿವಿಧ್ಯಮಯ ತಿಂಡಿಪ್ರಿಯರಿಗೆ ನವದೆಹಲಿ ಅಂತಿಮ ತಾಣ. ಇಂದು ನವದೆಹಲಿಯಲ್ಲಿ ಸಿಗದ ಆಹಾರಬಗೆಯೇ ಇಲ್ಲ. ಭಾರತದ ಯಾವುದೇ ರಾಜ್ಯದ ಅಡುಗೆಯಿರಲಿ, ನವದೆಹಲಿಯ ಕೆಲವು ರಸ್ತೆಗಳಲ್ಲಿ ಇದು ಲಭ್ಯ! ಅಹಾರದ ಮೂಲಕ ಇಲ್ಲಿ ಎಲ್ಲಾ ರಾಜ್ಯಗಳ ವೈವಿಧ್ಯತೆಯಲ್ಲಿ ಏಕತೆ ಸಾಧಿಸಲಾಗಿದೆ! ಅಷ್ಟೇ ಅಲ್ಲ, ಪ್ರಮಾಣದ ಮಿತಿಯಿಲ್ಲದೇ ನಿಮಗಿಷ್ಟ ಬಂದ ಖಾದ್ಯವನ್ನು ಸವಿಯಬಹುದಾದ 'ಬಫೆ' ವ್ಯವಸ್ಥೆಯನ್ನೂ ಹಲವಾರು ಹೋಟೆಲುಗಳು ನೀಡುತ್ತವೆ. ಈ ಸೌಲಭ್ಯ ಒದಗಿಸುವ ರಸ್ತೆಗಳಿಗೆ 'ಫುಡ್ ಸ್ಟ್ರೀಟ್' ಎಂಬ ಅನ್ವರ್ಥನಾಮವೂ ದೊರಕಿದೆ. ಇಲ್ಲಿ ಆಗಮಿಸುವ ಪ್ರವಾಸಿಗೆ ಇಲ್ಲಿನ ಪ್ರತಿ ರುಚಿಯನ್ನೂ ಸವಿಯಬೇಕಾದರೆ ದಿನಕ್ಕೆ ಹತ್ತರಂತೆ ಪ್ರಯತ್ನಿಸಿದರೂ ಪೂರ್ಣಗೊಳಿಸಲು ತಿಂಗಳುಗಳೇ ಬೇಕಾಗಬಹುದು.

ಈ ರಾಜ್ಯದ ಖಾದ್ಯಗಳಲ್ಲಿ ಖಂಡಿತಾ ಪ್ರಯತ್ನಿಸಬೇಕಾದವುಗಳು ಎಂದರೆ: ಆಲೂ ಚಾಟ್, ಹಾಟ್ ಗ್ರೀನ್ ಬೀನ್ಸ್, ಬಿರಿಯಾನಿ ಮತ್ತು ಇತರ ಚಾಟ್ ಗಳು.

3. ಕೇರಳ:

ಮಸಾಲೆ ಎಂಬ ಪದಕ್ಕೆ ಇನ್ನೊಂದು ಪರ್ಯಾಯ ಪದವೆಂದರೆ ಕೇರಳ. ಭಾರತದ ಮಸಾಲೆಗಳು ಇತಿಹಾಸದಲ್ಲಿ ವಿದೇಶಕ್ಕೆ ಹೋಗುತ್ತಿದ್ದುದೇ ಕೇರಳದ ಕೊಚ್ಚಿನ್ ತೀರದಿಂದ. ಕೇರಳ ಮತ್ತು ಕರ್ನಾಟಕದ ಅಡುಗೆಗಳಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲವಾದರೂ ಮಸಾಲೆಯ ವಿಷಯ ಬಂದಾಗ ಕೇರಳ ನಮಗಿಂತ ಕೊಂಚವೇ ಮುಂದಿದೆ. ಅಪ್ಪಂ ಎಂಬ ನಡುವೆ ದಪ್ಪ, ಅಂಚುಗಳಲ್ಲಿ ತೆಳ್ಳಗಿರುವ ದೋಸೆ, ಹಪ್ಪಳದಂತಹ ಅಕ್ಕಿರೊಟ್ಟಿಯಾದ ಪತ್ತಿರಿ, ಕುಚ್ಚಿಗೆ ಅಕ್ಕಿಯನ್ನು ಬೇಯಿಸಿ ಉಂಡೆ ಮಾಡಿ ಹಬೆಯಲ್ಲಿ ಬೇಯಿಸಿದ ಕಡುಬು, ಹಬೆಯಲ್ಲಿ ಬೇಯಿಸಿದ ಅಕ್ಕಿ ಶ್ಯಾವಿಗೆ ಮೊದಲಾದವು ಅತ್ಯಂತ ಆರೋಗ್ಯಕರ ಖಾದ್ಯಗಳಾಗಿವೆ. ಆದರೆ ಇವನ್ನು ಸವಿಯಲು ಕೊಂಚ ಖಾರವಾದ ಸಾರು ಬೇಕೇ ಬೇಕು. ಈ ಸಾರುಗಳಲ್ಲಿಯೇ ಅತಿ ಹೆಚ್ಚಿನ ಪ್ರಮಾಣದ ಮಸಾಲೆಯ ಬಳಕೆಯಾಗುತ್ತದೆ.

ದೇವರ ಸ್ವಂತ ನಾಡು ಎಂಬ ಉಪನಾಮವನ್ನು ಪಡೆದಿರುವ ಕೇರಳ ಹೆಸರಿಗೆ ತಕ್ಕಂತಹ ಊಟವನ್ನೂ ಬಡಿಸುತ್ತದೆ. ಸಸ್ಯಾಹಾರಿ ಅಡುಗೆಗಳು ಎಷ್ಟು ರುಚಿಕರವೋ ಅದಕ್ಕಿಂತಲೂ ಇಲ್ಲಿನ ಮಾಂಸಾಹಾರಿ, ವಿಶೇಷವಾಗಿ ಮೀನಿನ ಖಾದ್ಯಗಳು ಮತ್ತು ಅತ್ಯಂತ ಸರಳವಾದ 'ಮೀನ್ ಕರಿ' ಊಟದ ರುಚಿಯನ್ನು ಹೆಚ್ಚಿಸುತ್ತವೆ. ಇವುಗಳಲ್ಲಿ ಹೆಚ್ಚಾಗಿ ಕೆಂಪು ಒಣಮೆಣಸನ್ನು ಬಳಸುವುದರಿಂದ ಇವು ಮೂಗಿನಲ್ಲಿ ನೀರು ಬರುವಷ್ಟು ಖಾರವಾಗಿದ್ದು ಕೆಲವರಿಗೆ ಹಣೆ ತಲೆಯಲ್ಲಿ ಬೆವರನ್ನೂ ಮೂಡಿಸಬಹುದು. ಕೇರಳ ಅತಿ ಜನಪ್ರಿಯ ಮಾಂಸಾಹಾರಿ ಖಾದ್ಯವೆಂದರೆ ಚಿಕನ್ ಕರಿ. ನಮ್ಮ ಕರ್ನಾಟಕದ ಕರಾವಳಿಯ ವೈವಿಧ್ಯತೆಯಂತೆಯೇ ಕೇರಳದ ತೀರದ ಪ್ರತಿ ಹತ್ತು ಕಿಲೋಮೀಟರುಗಳಿಗೆ ಈ ಖಾದ್ಯಗಳು ಕೊಂಚ ಬದಲಾಗುತ್ತವೆ. ಈ ಮೂಲಕ ವೈವಿಧ್ಯತೆಯ ಭಂಡಾರವನ್ನೇ ಕೇರಳ ಒದಗಿಸುತ್ತದೆ.

ಈ ರಾಜ್ಯದ ಖಾದ್ಯಗಳಲ್ಲಿ ಖಂಡಿತಾ ಪ್ರಯತ್ನಿಸಬೇಕಾದವುಗಳು ಎಂದರೆ: ಕೇರಳ ಚಿಕನ್ ಕರಿ, ಕೇರಳ ಮಟನ್ ಕರಿ, ಸ್ಪೈಸಿ ಚಿಕನ್, ಸಿಗಡಿ ಪಲ್ಯ, ಪತ್ತಿರಿ ಕೋಯಿಕ್ಕರಿ.

4. ಆಂಧ್ರ ಪ್ರದೇಶ:

ಈ ಪಟ್ಟಿಯಲ್ಲಿ ನಾಲ್ಕನೆಯ ಸ್ಥಾನ ಪಡೆದಿರುವ ರಾಜ್ಯ ಆಂಧ್ರ ಪ್ರದೇಶ. ನಮ್ಮ ಕರ್ನಾಟಕದ ಬ್ಯಾಡಗಿ ಮತ್ತು ದೇವನೂರಿನ ಒಣಮೆಣಸು ಹೇಗೆ ಪ್ರಸಿದ್ಧವೋ ಹಾಗೇ ಆಂಧ್ರ ಪ್ರದೇಶದ ಗುಂಟೂರು ಮೆಣಸು ಪ್ರಸಿದ್ಧವಾಗಿದೆ. ನಮ್ಮ ಮೆಣಸುಗಳು ಬಣ್ಣದಲ್ಲಿ ಗಾಢ ಕೆಂಪಾಗಿದ್ದು ರುಚಿಯಲ್ಲಿ ಕಡಿಮೆ ಖಾರವಾಗಿದ್ದರೆ ಗುಂಟೂರು ಮೆಣಸು ಇದಕ್ಕೆ ವಿರುದ್ಧ. ಇದು ನಮ್ಮ ಮೆಣಸಿನಷ್ಟು ಪ್ರಖರ ಕೆಂಪಾಗಿಲ್ಲದಿದ್ದರೂ ಖಾರ ಮಾತ್ರ ಹೆಚ್ಚು. ಹಾಗಾಗಿ ಈ ಮೆಣಸನ್ನು ಬಳಸಿ ತಯಾರಿಸಿದ ಖಾದ್ಯಗಳೆಲ್ಲವೂ ಖಾರ! ಖಾರ! ಖಾರ! ಇದೇ ಕಾರಣಕ್ಕೆ ಆಂಧ್ರದಲ್ಲಿ ಅತಿಥಿಗಳಿಗೆ ಊಟ ಬಡಿಸುವಾಗ ನೀರು ಕುಡಿಯಲು ನೀಡಲಾಗುವ ಲೋಟವೂ ದೊಡ್ಡದೇ ಇರುತ್ತದೆ. ಖಾರ ತಾಳಲಾಗದೇ ಇದ್ದರೆ ಇದನ್ನು ಕಡಿಮೆಯಾಗಿಸಲು ಹುರಿಗಡಲೆಯ ಪುಡಿಯನ್ನೂ ಎದುರಿಗೆ ಇರಿಸಲಾಗಿರುತ್ತದೆ. ಇದನ್ನು ಮಿಶ್ರಣ ಮಾಡಿಕೊಂಡು ರುಚಿಗೆ ಯಾವುದೇ ಅನ್ಯಾಯ ಮಾಡದೇ ಖಾರವನ್ನು ಕೊಂಚ ಕಡಿಮೆ ಮಾಡಿಕೊಳ್ಳಬಹುದು.

ಈ ಖಾರದ ಕಾರಣದಿಂದಲೇ ಆಂಧ್ರ ಪ್ರದೇಶವನ್ನು ಭಾರತದ ಮೆಕ್ಸಿಕೋ ಎಂಬ ಅನ್ವರ್ಥನಾಮದಿಂದ ಗುರುತಿಸಲಾಗುತ್ತದೆ. ಇಲ್ಲಿನ ಊಟದಲ್ಲಿ ಅನ್ನ, ರೊಟ್ಟಿ ಮತ್ತು ಇಡ್ಲಿಗಳು ಪ್ರಮುಖವಾಗಿದ್ದರೂ ವೈವಿಧ್ಯತೆ ಇರುವುದು ಇದಕ್ಕೆ ಬಳಸುವ ಸಾರು ಮತ್ತು ಚಟ್ನಿಗಳಲ್ಲಿ. ಈ ಸಾರು ಚಟ್ನಿಗಳೂ ಮಸಾಲೆಯುಕ್ತವಾಗಿದ್ದು ಪ್ರತಿಯೊಂದೂ ತನ್ನದೇ ಆದ ರುಚಿಯನ್ನು ಹೊಂದಿವೆ. ಅಲ್ಲದೇ ಗುಂಟೂರು ಮಟನ್ ಕರಿ, ಕೂರಾ, ಪೂತರೇಕು ಇತ್ಯಾದಿಗಳೂ ಹೆಚ್ಚು ಜನಪ್ರಿಯವಾಗಿವೆ. ಒಂದು ವೇಳೆ ನೀವು ಆಹಾರಪ್ರಿಯರಾಗಿದ್ದು ವೈವಿಧ್ಯತೆಯನ್ನು ಬಯಸುವಿರಾದರೆ ಆಂಧ್ರ ಪ್ರದೇಶದಲ್ಲಿ ಒಂದು ಪ್ರವಾಸ ಮಾಡಿದರೆ ಸಾಕು. ವಿಶೇಷವಾಗಿ ಖಾದ್ಯಪ್ರಿಯರಿಗೆ ಇದು ಒಂದು ಸ್ವರ್ಗವೇ ಆಗಿದೆ.

ಈ ರಾಜ್ಯದ ಖಾದ್ಯಗಳಲ್ಲಿ ಖಂಡಿತಾ ಪ್ರಯತ್ನಿಸಬೇಕಾದವುಗಳು ಎಂದರೆ: ಪುಳಿಹೋರಾ, ಚೆಪಾ ಪುಳುಸು, ಗೋಂಗ್ರಾ ಉಪ್ಪಿನಕಾಯಿ ಮತ್ತು ವಿಶೇಷವಾಗಿ ಆಂಧ್ರ ಚಿಕನ್ ಬಿರಿಯಾನಿ.

5. ನಾಗಾಲ್ಯಾಂಡ್:

ಭಾರತದ ಅತಿ ಹೆಚ್ಚಿನ ಮಸಾಲೆಯುಕ್ತ ಆಹಾರ ಸಿಗುವುದು ಅಚ್ಚರಿ ಎಂಬಂತೆ ನಾಗಾಲ್ಯಾಂಡ್ ಆಗಿದೆ. ಈ ಶ್ರೇಯ ಪಡೆಯಲು ಕಾರಣವಾಗಿದ್ದು ಇದರ ರಾಜಾ ಮಿರ್ಚಾ ಎಂಬ ಮೆಣಸು! ಈ ರಾಜ್ಯ ಎಷ್ಟು ಸುಂದರ ನೈಸರ್ಗಿಕ ತಾಣವೋ ಅಷ್ಟೇ ಈ ರಾಜ್ಯ ಸಾಂಸ್ಕೃತಿಕ ವೈವಿಧ್ಯತೆಯನ್ನೂ ಪಡೆದಿದೆ. ಅದ್ಭುತ ಗುಡ್ಡಗಾಡುಗಳು, ನದಿತೊರೆಗಳು, ಹಸಿರುಟ್ಟ ನೆಲ, ತಣ್ಣಗಿನ ಗಾಳಿ ಮೊದಲಾದವು ಯಾವುದೇ ನಿಸರ್ಗಪ್ರಿಯರಿಗೆ ಅಲ್ಲಗಳೆಯದ ತಾಣವಾಗಿದೆ. ಇಲ್ಲಿ ನೀವು ಮೊದಲ ಬಾರಿಗೆ ಹೋಗುವುದಾದರೆ ಇಲ್ಲಿನ ವಿಶಿಷ್ಟ ಖಾದ್ಯಗಳನ್ನು ಸೇವಿಸಲು ಮರೆಯದಿರಿ. ಆದರೆ ಇವು ಅತಿ ಖಾರವಾಗಿರುತ್ತವೆ ಎಂಬುದು ನೆನಪಿರಲಿ.

ನಾಗಾಲ್ಯಾಂಡ್ ನ ಸಂಸ್ಕೃತಿಯಲ್ಲಿ ಅತಿಥಿ ಸತ್ಕಾರಕ್ಕೆ ಹೆಚ್ಚಿನ ಮಹತ್ವವಿದೆ ಹಾಗೂ ಇಲ್ಲಿ ಮಾಂಸಾಹಾರದಷ್ಟೇ ಸಸ್ಯಾಹಾರಿ ಖಾದ್ಯಗಳೂ ಇವೆ. ಇವೆರಡೂ ಖಾರವೇ ಆಗಿರುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಹಾಗಾಗಿ, ನಿಮಗೆ ಖಾರ ಇಷ್ಟವಿಲ್ಲದಿದ್ದರೆ ನಿಮಗೆ ಈ ರಾಜ್ಯದಲ್ಲಿ ಖಾರವಿರದ ಅಡುಗೆ ಸಿಗುವುದು ಅತಿ ಕಡಿಮೆ. ಆದರೆ ನಾಗಾಲ್ಯಾಂಡ್ ನ ವಿವಿಧ ಭಾಗಗಳಲ್ಲಿ ಈ ಖಾರ ಕೊಂಚ ಹೆಚ್ಚು ಕಡಿಮೆಯಾಗುತ್ತಿರುತ್ತದೆ.

ಈ ರಾಜ್ಯದ ಖಾದ್ಯಗಳಲ್ಲಿ ಖಂಡಿತಾ ಪ್ರಯತ್ನಿಸಬೇಕಾದವುಗಳು ಎಂದರೆ: ಸಾಮಂತು, ಐಕಿಬೆಯೆ, ಅಕೀನಿ, ಹುಳಿಬರಿಸಿದ ಮೀನು ಮತ್ತು ಮಾಂಸ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X