ಆಂಧ್ರಪ್ರದೇಶ ಪ್ರವಾಸೋದ್ಯಮ : ಆಂಧ್ರದ ಹೆಗ್ಗುರುತು

ಮುಖಪುಟ » ಸ್ಥಳಗಳು » » ಮುನ್ನೋಟ

ಆಂಧ್ರಪ್ರದೇಶ ರಾಜ್ಯವು ಎರಡು ಪ್ರಮುಖ ಪ್ರದೇಶಗಳಾದ ರಾಯಲ್ ಸೀಮಾ ಹಾಗೂ ಕರಾವಳಿ ಆಂಧ್ರಗಳನ್ನು ಒಳಗೊಂಡಿದೆ. ಆಂಧ್ರ ಪ್ರದೇಶ ಪುನರ್ವಿಂಗಡನೆ ಕಾಯ್ದೆ ಎಂಬ ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಿದ ಆಧಾರದ ಮೇಲೆ ಆಂಧ್ರ ಪ್ರದೇಶ ರಾಜ್ಯದಿಂದ ತೆಲಂಗಾಣ ರಾಜ್ಯವನ್ನು ಜೂನ್ 2014 ರಲ್ಲಿ ಸ್ಥಾಪಿಸಲಾಯಿತು.

ಭೌಗೋಳಿಕವಾಗಿ ಆಂಧ್ರಪ್ರದೇಶ ರಾಜ್ಯವು ಅನಂತಪುರ, ಚಿತ್ತೂರು, ವಿಶಾಖಾಪಟ್ಟಣ, ವಿಜಯವಾಡಾ, ಕಡಪ, ಕರ್ನೂಲ್, ಶ್ರೀಕಾಕುಲಂ, ವಿಜಿನಗರಂ, ಪೂರ್ವ ಗೋದಾವರಿ, ಪಶ್ಚಿಮ ಗೋದಾವರಿ, ಗುಂಟೂರು, ಪ್ರಕಾಶಂ, ನೆಲ್ಲೂರು ಮತ್ತು ಕೃಷ್ಣ ಜಿಲ್ಲೆಗಳನ್ನು ಒಳಗೊಂಡಿದೆ. ಪ್ರಸ್ತುತ ತೆಲಂಗಾಣ ರಾಜ್ಯದಲ್ಲಿರುವ ಹೈದರಾಬಾದ್ ನಗರವು ಈ ರಾಜ್ಯಕ್ಕೂ ಸಹ ರಾಜಧಾನಿ ನಗರವಾಗಿ ಸೇವೆ ಸಲ್ಲಿಸುತ್ತಿದೆ.

ಆಂಧ್ರಪ್ರದೇಶದ ಪ್ರವಾಸೋದ್ಯಮ

ಆಂಧ್ರಪ್ರದೇಶದಲ್ಲಿ ವಿಶ್ವ ಪ್ರಖ್ಯಾತ ತಿರುಪತಿ ತಿರುಮಲ ದೇಗುಲ ತಾಣ ಬರುವುದರಿಂದ ಪ್ರವಾಸೋದ್ಯಮ ದೃಷ್ಟಿಯಿಂದ ಈ ರಾಜ್ಯವು ಹೆಚ್ಚು ಜನಪ್ರಿಯತೆಗಳಿಸಿದೆ. ಅಲ್ಲದೆ ವಿಶಾಖಾಪಟ್ಟಣ, ಸುಂದರವಾದ ಅರಕು ಕಣಿವೆ, ಧಾರ್ಮಿಕ ಪ್ರಖ್ಯಾತಿಯ ಲೇಪಾಕ್ಷಿ, ಶ್ರೀಕಾಳಹಸ್ತಿ, ಮಂತ್ರಾಲಯ, ಪುಟ್ಟಪರ್ತಿ ಮುಂತಾದ ಸ್ಥಳಗಳು ಸದಾಕಾಲ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ರಾಜ್ಯದಲ್ಲಿ ಕಂಡುಬರುವ ಕಪೀಲ ತೀರ್ಥ, ಪುಲಿಕಟ್ ಕೆರೆ ಅಪಾರವಾದ ಜನ ಮನ್ನಣೆಯನ್ನುಗಳಿಸಿದ್ದು ಚುಂಬಕದಂತೆ ಪ್ರವಾಸಿಗರನ್ನು ಸೆಳೆಯುತ್ತದೆ.

ಆಂಧ್ರಪ್ರದೇಶ ಸಂಸ್ಕೃತಿ

ಹಲವು ಪ್ರಖ್ಯಾತ ತೆಲುಗು ಕವಿಗಳು, ಸಾಹಿತಿಗಳು, ಕಲಾವಿದರು ಆಂಧ್ರ ಪ್ರದೇಶದವರಾಗಿದ್ದು, ಸಾಹಿತ್ಯ, ಸಂಗೀತದಲ್ಲಿ ಶ್ರೀಮಂತಿಕೆಯನ್ನು  ಆಂಧ್ರಪ್ರದೇಶ ಪಡೆದಿದೆ. ಈ ಪ್ರದೇಶದಲ್ಲಿ ತೆಲುಗು ಮಾತನಾಡುವ ಮುಖ್ಯ ಭಾಷೆಯಾಗಿದ್ದು, ಹಲವು ವೈವಿಧ್ಯಮಯ ರಾಜರುಗಳು ಆಳಿದ್ದ ಪ್ರಭಾವದಿಂದ ತೆಲುಗುವಿನ ಇತರೆ ಉಪಭಾಷೆಗಳು ಇಲ್ಲಿ ಚಾಲ್ತಿಯಲ್ಲಿರುವುದು ಕಂಡುಬರುತ್ತದೆ.

ಕುಚಿಪುಡಿ ಜನ್ಮ ನಾಡು

ವಿಶ್ವಪ್ರಖ್ಯಾತವಾದ ಕುಚಿಪುಡಿ ನೃತ್ಯವು ಉಗಮಗೊಂಡಿದ್ದು ಈ ರಾಜ್ಯದಲ್ಲಿರುವ ಕುಚಿಪುಡಿ ಎಂಬ ಹಳ್ಳಿಯಿಂದ. ಅದರಲ್ಲೂ ವಿಶೇಷವಾಗಿ ಈ ನೃತ್ಯವು ಪ್ರಖ್ಯಾತಿ ಪಡೆದಿದ್ದರಿಂದಲೇ ಆ ಹಳ್ಳಿಗೆ ಕುಚಿಪುಡಿ ಎಂಬ ಹೆಸರು ಬಂದಿತು.

ಆಂಧ್ರಪ್ರದೇಶ ಖಾದ್ಯ

ಈ ರಾಜ್ಯದಲ್ಲಿ ಅನ್ನವು ಅತಿ ಪ್ರಮುಖ ಊಟದ ಭಾಗವಾಗಿದ್ದು, ಇತರೆ ಖಾರದ ತಿನಿಸುಗಳಿಗಾಗಿ ಈ ರಾಜ್ಯವು ಪ್ರಸಿದ್ಧವಾಗಿದೆ. ರಾಜ್ಯದ ಕರಾವಳಿ ಭಾಗವು ವಿವಿಧ ಸಮುದ್ರ ಖಾದ್ಯಗಳಿಂದಾಗಿ ಜನಪ್ರಿಯವಾಗಿದೆ. ವಿಶೆಷವಾಗಿ ರಾಜ್ಯದ ರಾಯಲ್ ಸೀಮಾ ಭಾಗವು ದಕ್ಷಿಣ ಕರ್ನಾಟಕ ಹಾಗು ತಮಿಳುನಾಡು ರಾಜ್ಯಗಳಿಗೆ ಅತಿ ಹತ್ತಿರವಿರುವುದರಿಂದ ಈ ರಾಜ್ಯಗಳ ಆಹಾರದ ಪ್ರಭಾವವನ್ನೂ ಸಹ ಇಲ್ಲಿ ಕಾಣಬಹುದಾಗಿದೆ. ಇಲ್ಲಿ ಕಂಡುಬರುವ ಕೆಲವು ವಿಶಿಷ್ಟ ತಿನಿಸುಗಳೆಂದರೆ ಬೊರುಗು ಉಂಡಾಲು (ಜೋಳ ಹಾಗೂ ಬೆಲ್ಲದಿಂದ ಮಾಡಲಾಗುವ ಒಂದು ಸಿಹಿ ಖಾದ್ಯ), ಅತ್ತಿರಸಾಲು (ಅಕ್ಕಿ ಹಾಗೂ ಬೆಲ್ಲದಿಂದ ಮಾಡಲಾಗುವ ಖಾದ್ಯ), ಮಸಾಲಾ ಬೊರುಗುಲು (ಕುರುಕಲು ತಿಂಡಿ) ಹಾಗೂ ರವೆ ಉಂಡೆ.

ಸಾರಿಗೆ ಸಂಚಾರ

ರಾಜ್ಯದ ಪ್ರಮುಖ ವಾಯು ನಿಲ್ದಾಣವು ವೈಜಾಗ್ ಅಥವಾ ವಿಶಾಖಾಪಟ್ಟಣದಲ್ಲಿದೆ. ಅಲ್ಲದೆ ವಿಜಯವಾಡಾ ಹಾಗೂ ರಾಜಮುಂಡ್ರಿಯಲ್ಲಿ ದೇಶೀಯ ವಿಮಾನ ನಿಲ್ದಾಣವಿದೆ. ರಾಜ್ಯದ ವೈಜಾಗ್, ವಿಜಯವಾಡಾ ಮುಂತಾದ ಹಲವು ಪ್ರಮುಖ ನಗರಗಳು ಉತ್ತಮವಾದ ರೈಲು ಹಾಗೂ ರಸ್ತೆ ಜಾಲವನ್ನು ಹೊಂದಿದ್ದು ದೇಶದ ಪ್ರಮುಖ ನಗರಗಳೊಂದಿಗೆ ಸಂಪರ್ಕವನ್ನು ಕಲ್ಪಿಸುತ್ತವೆ.

Please Wait while comments are loading...