ಗುಂಟೂರು: ಶೈಕ್ಷಣಿಕ ನಗರಕ್ಕೆ ಮತ್ತೊಂದು ಹೆಸರು     

ದಕ್ಷಿಣ ಭಾರತದ ರಾಜ್ಯವಾದ ಆಂಧ್ರಪ್ರದೇಶದಲ್ಲಿರುವ ಗುಂಟೂರು ನಗರ ಬಂಗಾಳಕೊಲ್ಲಿ ಸಮುದ್ರ ತೀರದಿಂದ ಸರಿಸುಮಾರು 60 ಕಿಲೋ ಮೀಟರ್ ದೂರದಲ್ಲಿದೆ. ಆಂಧ್ರಪ್ರದೇಶದ ರಾಜಧಾನಿ ಹೈದರಾಬಾದ್ ನ ಆಗ್ನೇಯ ದಿಕ್ಕಿಗಿರುವ ಗುಂಟೂರು ರಾಜಧಾನಿಯಿಂದ 266 ಕಿಲೋ ಮೀಟರ್ ಅಂತರದಲ್ಲಿದೆ. 2012 ರಲ್ಲಿ ಗುಂಟೂರಿನ ವ್ಯಾಪ್ತಿಯನ್ನು ವಿಸ್ತರಿಸಲಾಗಿದ್ದು ಹತ್ತು ಹಳ್ಳಿಗಳನ್ನು ಹೊಂದಿರುವ ಗುಂಟೂರು ಗಾತ್ರದಲ್ಲಿ ಆಂಧ್ರಪ್ರದೇಶದಲ್ಲಿಯೇ ಮೂರನೇ ದೊಡ್ಡ ನಗರವೆಂಬ ಖ್ಯಾತಿ ಪಡೆದುಕೊಂಡಿದೆ.

ಶಿಕ್ಷಣ ಕ್ಷೇತ್ರ ಮತ್ತು ಆಡಳಿತಾತ್ಮಕ ದೃಷ್ಟಿಯಿಂದ ಗುಂಟೂರು ಆಂಧ್ರಪ್ರದೇಶದಲ್ಲಿಯೇ ಮಹತ್ವದ ಭಾಗವೆನಿಸಿದೆ. ಇಲ್ಲಿರುವ ಹತ್ತಾರು ಶಿಕ್ಷಣ ಸಂಸ್ಥೆಗಳು ಮತ್ತು ಆಡಳಿತ ಸಮೂಹದ ಸಂಸ್ಥೆಗಳಿಂದಾಗಿ ರಾಜ್ಯದಲ್ಲಿಯೇ ಗುಂಟೂರು ಹೆಚ್ಚು ಅಭಿವೃದ್ದಿ ಹೊಂದಿದ ಪ್ರದೇಶ.

ಪ್ರಾಚೀನತೆ ಮತ್ತು ಆಧುನಿಕತೆ

ಗುಂಟೂರು ಜಿಲ್ಲೆ ಪ್ರಾಚೀನ ಇತಿಹಾಸವನ್ನು ಹೊಂದಿದ್ದು ಕ್ರಿಪೂ 500 ವರ್ಷಗಳ ಹಿಂದಿನ ಇತಿಹಾಸದ ಛಾಯೆಯನ್ನು ನಾವು ಕಾಣಬಹುದು. ದಕ್ಷಿಣ ಭಾರತದಲ್ಲಿ ಇಷ್ಟು ಸುದೀರ್ಘ ಇತಿಹಾಸದ ಛಾಯೆಯನ್ನು ಕಾಣಬಹುದಾದ ಪ್ರದೇಶ ಮತ್ತೊಂದಿಲ್ಲ. ಹಿಂದಿನ ಕಾಲದಲ್ಲಿ, ಗುಂಟೂರು ಪ್ರದೇಶದಲ್ಲಿ ಭಟ್ಟಿಪೊರುಲು ರಾಜಮನೆತನದವರು ಆಳ್ವಿಕೆ ನಡೆಸಿದ್ದರು. ಇದು ಸಾಬೀತಾಗಿದ್ದು ಐಡರ್ನ್ ತಟ್ಟೆಗಳ ಮೇಲಿನ ರಚನೆಗಳಿಂದ. ಈ ರಚನೆಗಳೆಲ್ಲ 922-929 CE (ಕಾಮನ್ ಎರಾ)ವರೆಗೆ ಆಳ್ವಿಕೆ ನಡೆಸಿದ ವೆಂಗಿ ಚಾಲುಕ್ಯ ದೊರೆ ಮೊದಲನೆ ಅಮ್ಮರಾಜನಿಗೆ ಸೇರಿದ್ದು. 1147CE ಮತ್ತು 1158CE ಕಾಲಕ್ಕೆ ಸೇರಿದ ಲಿಪಿಗಳಲ್ಲೂ ಗುಂಟೂರಿನ ಉಲ್ಲೇಖವಿದೆ. ಲಿಪಿಗಳಲ್ಲಿ ತೋರಿಸಿದ ಪ್ರಕಾರ ಗುಂಟೂರು ಈ ಮುಂಚೆ ಸಂಸ್ಕೃತ ಹೆಸರಾದ ಗರ್ತಪುರಿ ಎಂದೇ ಪ್ರಸಿದ್ದವಾಗಿತ್ತು. ಗರ್ತಪುರಿ ಎಂಬುದರ ಸಂಸ್ಕೃತ ಅರ್ಥ ಕೊಳಗಳಿಂದ ಸುತ್ತುವರಿದ ಪ್ರದೇಶ ಎಂದು.

ಗುಂಟೂರಿನ ಆಧುನಿಕ ಇತಿಹಾಸ ಶುರುವಾಗುವುದು ಯೂರೋಪಿಯನ್ನರ ಆಗಮನದೊಂದಿಗೆ. ಇದು ಗುಂಟೂರಿಗೆ ಹೊಸಶಕೆಯಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಹತ್ವ ಪಡೆದುಕೊಳ್ಳಲು ಸಹಾಯಕವಾಯಿತು. ನಗರದ ಅಭಿವೃದ್ದಿಗೆ ಫ್ರೆಂಚರು ಬಹಳವೇ ಆಕರ್ಷಿತರಾಗಿದ್ದು 1752 ರಲ್ಲಿ ತಮ್ಮ ಸೇನಾ ಮುಖ್ಯ ಕಚೇರಿಯನ್ನು ಗುಂಟೂರಿಗೆ ಸ್ಥಳಾಂತರಿಸುತ್ತಾರೆ. ನಂತರ ಗುಂಟೂರನ್ನು ಆಳಿದವರು ನಿಝಾಮ್ ಮತ್ತು ಹೈದರ್ ಅಲಿ. 1788 ರಲ್ಲಿ ಬ್ರಿಟಿಷರು ಈ ಪ್ರದೇಶವನ್ನು ತಮ್ಮ ಸುಪರ್ದಿಯಲ್ಲಿ ತೆಗೆದುಕೊಳ್ಳುತ್ತಾರೆ. ಬ್ರಿಟಿಷರ ಅಧಿಪತ್ಯದಲ್ಲಿ ಗುಂಟೂರು ಪ್ರಮುಖ ಕೃಷಿಕೇಂದ್ರವಾಗಿ ರೂಪುಗೊಂಡಿದ್ದರ ಪರಿಣಾಮ 1890 ರಲ್ಲಿ ಗುಂಟೂರಿಗೊಂದು ರೈಲ್ವೇ ಹಳಿಯೂ ಬಂದಿತು. ಈ ಅಭಿವೃದ್ದಿಯ ಕೆಲಸ ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ನಡೆದುಬಂತು. ಇಂದಿಗೂ ಕೂಡ ಅಭಿವೃದ್ದಿಯ ಕೆಲಸಗಳು ನಡೆಯುತ್ತಿದೆ. ಶೈಕ್ಷಣಿಕ ಮತ್ತು ತಂತ್ರಜ್ನಾನದ ಅಭಿವೃದ್ದಿಯಲ್ಲಿ ಗುಂಟೂರು ದಕ್ಷಿಣ ಭಾರತದ ಹಲವು ನಗರಗಳನ್ನು ಹಿಂದಿಕ್ಕಿದೆ.

ಪ್ರವಾಸೋದ್ಯಮ

ಆಂಧ್ರಪ್ರದೇಶದಲ್ಲಿ ಗುಂಟೂರು ಪ್ರಮುಖ ಪ್ರವಾಸಿ ಗಮ್ಯಸ್ಥಾನ. ಪ್ರಸಿದ್ದವಾದ ಕೆಲವು ಸ್ಥಳಗಳನ್ನು ಹೆಸರಿಸುವುದಾದರೆ ಕೊಂಡವೀಡು ಕೋಟೆ, ಉಂದವಳ್ಳಿ ಗುಹೆ, ಅಮರಾವತಿ, ಉಪ್ಪಲಪಾಡು ಉದ್ಯಾನವನ ಮತ್ತು ಪ್ರಕಾಶಂ ಬ್ಯಾರೇಜ್.

ಈ ರಾಜ್ಯದ ಉಳಿದ ನಗರಗಳಂತೆಯೇ ಗುಂಟೂರು ಉಷ್ಣವಲಯದ ವಾತಾವರಣವನ್ನು ಹೊಂದಿದ್ದು ಬಿಸಿಯಾದ ಬೇಸಿಗೆ ಮತ್ತು ಸಾಧಾರಣ ಚಳಿಯನ್ನು ಕಾಣುತ್ತದೆ. ಮಾನ್ಸೂನ್ ತಿಂಗಳಲ್ಲಿ ಸಾಧಾರಣದಿಂದ ಹಿಡಿದು ಧಾರಾಕಾರ ಮಳೆಯನ್ನು ಅನುಭವಿಸಬಹುದು.

ಗುಂಟೂರು ಜಿಲ್ಲೆಯಲ್ಲಿ ಪ್ರತ್ಯೇಕ ವಿಮಾನನಿಲ್ದಾಣವಿಲ್ಲ. ಹತ್ತಿರದ ವಿಮಾನನಿಲ್ದಾಣವೆಂದರೆ ಗುಂಟೂರಿನಿಂದ 250 ಕಿಲೋ ಮೀಟರ್ ದೂರದಲ್ಲಿರುವ ಹೈದರಾಬಾದ್ ನಿಲ್ದಾಣ. ಆದರೆ ಬಸ್ ಮತ್ತು ರೈಲು ಸೌಲಭ್ಯ ಬೇಕಾದಷ್ಟಿದೆ. ಗುಂಟೂರಿನಲ್ಲಿರುವ ರೈಲ್ವೇ ನಿಲ್ದಾಣದಿಂದ ಬಹಳಷ್ಟು ರೈಲು ಸಂಪರ್ಕವಿದ್ದು ದೇಶದ ಹತ್ತಾರು ಪ್ರಮುಖ ನಗರಗಳನ್ನು ತಲುಪಲು ಸಾಧ್ಯ. ಪ್ರಮುಖ ಮಹಾನಗರಗಳಾದ ದೆಹಲಿ, ಕೊಲ್ಕತ್ತಾ, ಮುಂಬೈ, ಚೆನ್ನೈ, ಹೈದರಾಬಾದ್ ಮತ್ತು ಬೆಂಗಳೂರಿನಿಂದ ಗುಂಟೂರಿಗೆ ಯಥೇಚ್ಚ ರೈಲುಗಳಿವೆ. ಅಕ್ಕಪಕ್ಕದ ಪಟ್ಟಣಗಳೊಂದಿಗೆ ರಾಜ್ಯದೊಳಗಿನ ಹತ್ತಾರು ನಗರಗಳಿಗೂ ಇಲ್ಲಿ ರೈಲು ಸಂಪರ್ಕವಿದೆ. ಹೀಗಾಗಿಯೇ ಇಲ್ಲಿ ಪ್ರವಾಸಿಗರ ಓಡಾಟ ಜಾಸ್ತಿಯಿದೆ. ಈ ಕಾರಣಕ್ಕಾಗಿಯೇ ದಕ್ಷಿಣ ರೈಲ್ವೇ ಪ್ರವಾಸಿಗರ ಅವಶ್ಯಕತೆಯನ್ನು ಪೂರೈಸಲು ಹೊಸ ರೈಲು ಸಂಚಾರಗಳನ್ನು ಪ್ರಾರಂಭಿಸಿದೆ. ಖಾಸಗಿ ವಾಹನದಲ್ಲಿ ಪ್ರಯಾಣಿಸುವುದಾದರೂ ಚಿಂತೆಯಿಲ್ಲ: ಗುಂಟೂರಿನಲ್ಲಿ ಉತ್ತಮ ರಸ್ತೆಗಳಿವೆ. ನಗರಕ್ಕೆ ಹಲವಾರು ಬಸ್ ಗಳು ನಿರಂತರವಾಗಿ ಚಲಿಸುತ್ತಿರುತ್ತವೆ. ಸಾಧಾರಣ ಬಸ್ ಗಳಿಗೆ ಹೊರತಾಗಿ ಡಿಲಕ್ಸ್ ಮತ್ತು ವೋಲ್ವೋ ಬಸ್ ಗಳೂ ಹೆಚ್ಚಿನದ ದರಕ್ಕೆ ಉತ್ತಮ ಪ್ರಯಾಣ ನೀಡುತ್ತವೆ.

Please Wait while comments are loading...