ಕತುವಾ ಜಿಲ್ಲೆ ಜಮ್ಮು ಕಾಶ್ಮೀರ ರಾಜ್ಯದಲ್ಲಿದ್ದು ಜಮ್ಮುವಿನಿಂದ 88 ಕಿಲೋ ಮೀಟರ್ ದೂರದಲ್ಲಿದೆ. 2000 ವರ್ಷಗಳ ಇತಿಹಾಸವಿರುವ ಈ ಜಿಲ್ಲೆಯಲ್ಲಿ ಅಂದೋತ್ರಾ ಸಾಮ್ರಾಜ್ಯದ ಪ್ರಸಿದ್ದ ರಜಪೂತ ದೊರೆ ಜೋಧ್ ಸಿಂಗ್ ತನ್ನ ಮೂವರು ಮಕ್ಕಳೊಂದಿಗೆ ಇಲ್ಲಿಯೇ ವಾಸವಾಗಿದ್ದ. ಈ ಮೂವರು ಮಕ್ಕಳು ಮೂರು ಪುಟ್ಟ ನಗರಗಳನ್ನು ಸ್ಥಾಪಿಸುತ್ತಾರೆ- ತರಫ್ ಮಂಜಲಿ, ತರಫ್ ತಾಜ್ವಾಲ್ ಮತ್ತು ತರಫ್ ಭಜ್ವಾಲ್. ಈ ಮೂರೂ ನಗರಗಳನ್ನು ಒಟ್ಟಿಗೆ ಸೇರಿಸಿ ಕತಾಯಿ ಎಂದು ಸ್ಥಳೀಯರು ಕರೆಯುತ್ತಿದ್ದರು. ಕತಾಯಿ ಎಂಬುದು ಮುಂದೆ ಕತುವಾ ಆಗಿದೆ.
ಜಮ್ಮು ಕಾಶ್ಮೀರದಲ್ಲಿಯೇ ಅತ್ಯಂತ ಸುಂದರ ಜಿಲ್ಲೆ ಕತುವಾ ಆಗಿದ್ದು, ಇಲ್ಲಿರುವ ಪ್ರವಾಸಿ ಆಕರ್ಷಣೆಗಳು ಮತ್ತು ಧಾರ್ಮಿಕ ಕೇಂದ್ರಗಳಿಂದಾಗಿ ಪ್ರಸಿದ್ದಿ ಪಡೆದಿದೆ. ಬನಿ, ಪನ್ಯಾಲಾಗ್ ಚಂದೆಲ್, ಸರ್ತಲ್, ದುಗ್ಗಾನ್ ಮತ್ತು ಬನ್ಸಾಲ್ ಗಳು ಕೆಲವು ಪ್ರಮುಖ ಪ್ರವಾಸಿ ತಾಣಗಳು. ಬನಿ ಕಣಿವೆ ನಿಸರ್ಗದ ಮಡಿಲಿನಲ್ಲಿ ನೆಲೆ ನಿಂತಿದ್ದು ದಟ್ಟವಾದ ಅರಣ್ಯ, ಹತ್ತಾರು ಜಲಪಾತಗಳು ಮತ್ತು ಸುಂದರವಾದ ಹುಲ್ಲುಗಾವಲುಗಳಿಂದ ಕೂಡಿದೆ. ಧೌಲಾವಾಲಿ ಮಾತಾ, ಜೋದಿಯಾ ದಿ ಮಾತಾ ದೇವಸ್ಥಾನಗಳು ಬನಿಯಲ್ಲಿವೆ. ಮಾತಾ ಸುಂದ್ರಿಕೋಟ್, ಮಾತಾ ಬಲಾ ಸುಂದ್ರಿ, ಐರ್ವಾನ್ ದೇವಾಲಯ, ಆಶಾ ಪುರಾನಿ ಮಂದಿರ ಇವುಗಳು ಕತುವಾದಲ್ಲಿರುವ ಕೆಲವು ದೇವಸ್ಥಾನಗಳು. ಪೀರ್ ಚತ್ತೇರಷಾ ಮತ್ತು ಗುರುದ್ವಾರ ಸಿಂಗ್ ಸಭಾ ಗಳೂ ಕೂಡ ಇಲ್ಲಿರುವ ಕೆಲವು ಧಾರ್ಮಿಕ ಶೃದ್ದಾ ಕೇಂದ್ರಗಳು. ಬಸೋಲಿ, ಭದ್ದು, ಹೀರಾನಗರ್, ಬಿಲ್ಲಾವರ್ ಮುಂತಾದ ಪ್ರಿಸಿದ್ದ ನಗರಗಳು ಈ ಜಿಲ್ಲೆಯಲ್ಲಿವೆ. ಬಸೋಲಿ ಪುಟ್ಟ ನಗರವಾಗಿದ್ದು ಕಲ್ಲಿನ ಕೆತ್ತನೆಯ ಮೂರ್ತಿಗಳಿವೆ ಮತ್ತು ಸಣ್ಣಳತೆಯ ಚಿತ್ರಕಲೆಗಳೂ ಕೂಡ ಇದ್ದು ಇವುಗಳು ಬಸೋಲಿ ಚಿತ್ರಕಲೆಗಳೆಂದೇ ಹೆಸರು ಪಡೆದಿವೆ. ಬಿಲ್ಲವರ್ ಎನ್ನೋದು ಮತ್ತೊಂದು ನಗರವಾಗಿದ್ದು 1598 ಮತ್ತು 1614 ರ ಮಧ್ಯೆ ರಾಜಾ ಭೋಪಟ್ ಪಾಲ್ ಇದನ್ನು ಕಟ್ಟಿಸಿದ. ಇಲ್ಲಿ ಮಹಾಬಿಲ್ವಕೇಶ್ವರ ದೇವಸ್ಥಾನ ಮತ್ತು ಶಿವ ದೇವಸ್ಥಾನಗಳು ಹಾಗೂ ಸ್ಮಾರಕಗಳಿವೆ.
ಕತುವಾ ಜಿಲ್ಲೆಗೆ ಎಲ್ಲ ರೀತಿಯ ಸಂಪರ್ಕ ವ್ಯವಸ್ಥೆಗಳಿವೆ. ಶ್ರೀನಗರ ವಿಮಾನ ನಿಲ್ದಾಣ ಕತುವಾ ಜಿಲ್ಲೆಗೆ ಹತ್ತಿರದಲ್ಲಿರುವ ವಿಮಾನ ನಿಲ್ದಾಣ. ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇದಕ್ಕೆ ಹತ್ತಿರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ವಿದೇಶಿ ಪ್ರವಾಸಿಗರು ಇಲ್ಲಿಂದ ಕತುವಾ ಜಿಲ್ಲೆಗೆ ಬರಬಹುದು.
ಕತುವಾ ರೈಲ್ವೇ ನಿಲ್ದಾಣಕ್ಕೆ ಕಾನ್ಪುರ್, ಜಲಂದರ್, ದೆಹಲಿ, ಜಮ್ಮು, ಮತ್ತು ಕರ್ನಲ್ ಜಿಲ್ಲೆಗೆಳಿಂದ ರೈಲು ಸಂಚಾರವಿದೆ. ರೈಲ್ವೇ ನಿಲ್ದಾಣ ನಗರದ ಮಧ್ಯಭಾಗದಿಂದ 7 ಕಿಲೋ ಮೀಟರ್ ದೂರದಲ್ಲಿದ್ದು, ಇಲ್ಲಿಂದ ಖಾಸಗಿ ಟ್ಯಾಕ್ಸಿ ಸೌಲಭ್ಯಗಳಿವೆ. ನ್ಯೂ ದೆಹಲಿ, ಜಮ್ಮು, ಶಿಮ್ಲಾ, ಶ್ರೀನರ, ಕತ್ರಾ, ಉಧಂಪುರ್, ಚಂಡೀಘರ್ ಮತ್ತು ಪಠಾನ್ ಕೋಟ್ ದಿಂದ ಕತುವಾಗೆ ನಿರಂತರ ಬಸ್ ಸಂಚಾರವಿದೆ.


Click it and Unblock the Notifications