ಕರ್ನಾಲ್ - ಕರ್ಣನ ಜನ್ಮಸ್ಥಳ

ಕರ್ನಾಲ್‍ ಹರಿಯಾಣದ ಕರ್ನಾಲ್ ಜಿಲ್ಲೆಯ ಜಿಲ್ಲಾಕೇಂದ್ರವಾಗಿರುವ ನಗರವಾಗಿದೆ. ಈ ನಗರ ಮತ್ತು ಜಿಲ್ಲೆಯು ಪ್ರವಾಸಿಗರ ವಲಯದಲ್ಲಿ ಭಾರೀ ಖ್ಯಾತಿಗೆ ಪಾತ್ರವಾಗಿವೆ. ಈ ನಗರಗವನ್ನು ಮಹಾಭಾರತದ ಕಾಲದಲ್ಲಿ ಸ್ವತಃ ಕರ್ಣನೆ ಸ್ಥಾಪಿಸಿದನು ಎಂದು ಹೇಳಲಾಗುತ್ತದೆ. ಇದು ದೆಹಲಿಯಿಂದ ಮೂರುಗಂಟೆಗಳ ಪ್ರಯಾಣಾವಧಿಯಷ್ಟು ದೂರದಲ್ಲಿದ್ದು, ರಾಷ್ಟ್ರೀಯ ಹೆದ್ದರಿ 1ರಲ್ಲಿ ಕಂಡು ಬರುತ್ತದೆ.

ಕರ್ನಾಲ್‍ ಹಲವಾರು ವಿಶ್ವ ಪ್ರಸಿದ್ಧ ಸಂಸ್ಥೆಗಳಿಗೆ ಆಶ್ರಯವನ್ನು ನೀಡಿದೆ. ಅವುಗಳಲ್ಲಿ ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆ ( NDRI), ಗೋಧಿ ಸಂಶೋಧನಾ ನಿರ್ದೇಶನಾಲಯ (DWR), ಕೇಂದ್ರ ಮಣ್ಣಿನ ಫಲವತ್ತತೆಯ ಸಂಶೋಧನಾ ಸಂಸ್ಥೆ ( CSSRI), ರಾಷ್ಟ್ರೀಯ ಪ್ರಾಣಿ ವಂಶವಾಹಿ ಪತ್ತೆ ಸಂಶೋಧನಾಲಯ ( NBAGR) ಮತ್ತು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ( IARI)ಗಳು ಇಲ್ಲಿ ನೆಲೆಗೊಂಡಿವೆ.

ಈ ನಗರವು ತನ್ನ ಸುತ್ತಲು ಹಲವಾರು ಹಚ್ಚ ಹಸಿರಿನಿಂದ ಕಂಗೊಳಿಸುವ ಸ್ಥಳಗಳನ್ನು ಹೊಂದಿದೆ. ಇದರ ಜೊತೆಗೆ ಇಲ್ಲಿನ ಬಾಸುಮತಿ ಅಕ್ಕಿಯು ದೇಶ ವಿದೇಶದ ಮಾರುಕಟ್ಟೆಯಲ್ಲಿ ಪ್ರಸಿದ್ಧಿಯನ್ನು ಸಂಪಾದಿಸಿದೆ. ಹಾಗು ಇಲ್ಲಿ ಕೃಷಿ ಉಪಕರಣ ಮತ್ತು ಅದರ ಬಿಡಿ ಭಾಗಗಳನ್ನು ಸಹ ಉತ್ಪಾದಿಸಲಾಗುತ್ತದೆ.

ಕರ್ನಾಲ್‍ನ ಸುತ್ತ- ಮುತ್ತ ಇರುವ ಪ್ರವಾಸಿ ತಾಣಗಳುಕರ್ನಾಲ್‍ ಉತ್ತರ ಭಾರತದ ಅತ್ಯಂತ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿರುವ ಸಂಶೋಧನಾ ಕೇಂದ್ರಗಳ ಹೊರತಾಗಿ, ಇಲ್ಲಿ ಹಲವಾರು ಸ್ಮಾರಕಗಳು ಮತ್ತು ಕಟ್ಟಡಗಳು ನಮ್ಮ ಗಮನ ಸೆಳೆಯುತ್ತವೆ. ಇಲ್ಲಿ ನೀವು ಕೊಸ್ ಮಿನಾರ್, ಕಲಂಧರ್ ಶಾರವರ ಗೋರಿ, ಕರಣ್ ತಾಲ್ ಮತ್ತು ಬಾಬರ್ ಮಸೀಧಿಯನ್ನು ನೋಡಬಹುದು.

ಈ ಊರಿನಲ್ಲಿ ಎದ್ದು ಕಾಣುವ ಆಕರ್ಷಣೆಯೆಂದರೆ ಕರ್ಣ ತಾಲ್ (ಕೆರೆ). ದಂತ ಕತೆಗಳ ಪ್ರಕಾರ ಕರ್ಣನಿಂದಾಗಿಯೇ ಕರ್ನಾಲ್‍ಗೆ ಈ ಹೆಸರು ಬಂದಿತಂತೆ. ದಾನ ಶೂರ ಕರ್ಣನ ಹೆಸರನ್ನು ಮತ್ತಷ್ಟು ಬೆಳಗಲು ಹರಿಯಾಣ ಸರ್ಕಾರದ ಪ್ರವಾಸೋದ್ಯಮ ಇಲಾಖೆಯು ಇಲ್ಲಿ ಹಲವಾರು ದಾನ ಧರ್ಮಗಳನ್ನು ನಡೆಸಿಕೊಂಡು ಬರುತ್ತಿದೆ. ಇದರಲ್ಲಿ ಅನ್ನದಾನವು ಸಹ ಸೇರಿದೆ.

ಇಲ್ಲಿಗೆ ಭೇಟಿ ನೀಡಿದಾಗ ಪುಕ್ಕ ಪುಲ್‍ಗೆ ಸಹ ನೀವು ಭೇಟಿ ನೀಡಬಹುದು. ಇಲ್ಲಿ ಒಂದು ಗುಡಿಯಿದ್ದು, ಹಲವಾರು ಧಾರ್ಮಿಕ ವಿಧಿ ವಿಧಾನಗಳನ್ನು ಇಲ್ಲಿ ಕೈಗೊಳ್ಳಲಾಗುತ್ತದೆ. ಇದು ಇಲ್ಲಿನ ಸ್ಥಳೀಯರ ವಲಯದಲ್ಲಿ ಭಾರೀ ಹೆಸರುವಾಸಿಯಾಗಿದೆ.

ಕರ್ನಾಲ್‍ಗೆ ಭೇಟಿ ನೀಡಿದಾಗ ನೀವು ತಪ್ಪದೆ ಕಲಂಧರ್ ಶಾರವರ ಗೋರಿಗೆ ಭೇಟಿ ನೀಡಬೇಕು. ಇದನ್ನು ಸಂಪೂರ್ಣವಾಗಿ ಅಮೃತಶಿಲೆಯಿಂದ ನಿರ್ಮಿಸಲಾಗಿದೆ. ಈ ಸಂಕೀರ್ಣದಲ್ಲಿ ರಾಜ ಅಲಂಗೀರ್ ನಿರ್ಮಿಸಿದನೆಂದು ಹೇಳಲಾಗುವ ಒಂದು ಮಸೀದಿ ಸಹ ಇದೆ. ಇದರ ಜೊತೆಗೆ ಇಲ್ಲಿ ಮಿರನ್ ಸಾಹಿಬ್ ಗೋರಿ ಹಾಗು ಅದರ ಪಕ್ಕದಲ್ಲಿರುವ ಮಸೀದಿ ಮತ್ತು ದುರ್ಗಾ ಭವಾನಿ ಹಾಗು ಗುರುದ್ವಾರ ಮಂಜಿ ಸಾಹಿಬ್‍ಗಳನ್ನು ಸಹ ನಾವು ಕಾಣಬಹುದು.

ಬ್ರಿಟೀಷರು ಸಹ ತಮ್ಮ ಹೆಜ್ಜೆಗುರುತುಗಳನ್ನು ಕರ್ನಾಲ್‍ನಲ್ಲಿ ಉಳಿಸಿಹೋಗಿದ್ದಾರೆ. ಅದನ್ನು ಇಲ್ಲಿನ ದಂಡು ಪ್ರದೇಶದಲ್ಲಿ, ಕ್ರಿಶ್ಚಿಯನ್ ರುದ್ರಭೂಮಿಯಲ್ಲಿ ನಾವು ಕಾಣಬಹುದು.

ಇಲ್ಲಿ ಪ್ರಶಾಂತವಾಗಿ ಕಾಲ ಕಳೆಯಲು ಇಚ್ಛಿಸಿದರೆ ಓಯಸಿಸ್ ಕಾಂಪ್ಲೆಕ್ಸಿಗೆ ಭೇಟಿ ನೀಡಬಹುದು. ಇದೆಲ್ಲ ಸರಿ ಕರ್ನಾಲ್‍ ಗಾಲ್ಫ್ ಕೋರ್ಸಿಗೆ ಭೇಟಿ ನೀಡದೆ ಬಂದರೆ ನಿಮ್ಮ ರಜೆ ಅಪೂರ್ಣವೆಂದೆ ಅರ್ಥ. ನಿಮ್ಮ ವಿರಾಮ ಕಾಲವನ್ನು ಕಳೆಯಲು ಕರ್ನಾಲ್‍ ಗಾಲ್ಫ್ ಕೋರ್ಸ್ ಹೇಳಿ ಮಾಡಿಸಿದ ತಾಣ.

ಕರ್ನಾಲ್‍ಗೆ ಪ್ರವಾಸ ಹೋದಾಗ ಗೋರ್ಗಿಪುರ್ ಮತ್ತು ಟರೌರಿಗಳಂತಹ ಸುಂದರವಾದ ಸ್ಥಳಗಳನ್ನು ನೀವು ನೋಡಬಹುದು.

ಕರ್ನಾಲ್‍ ಹವಾಮಾನ

ಕರ್ನಾಲ್‍ ಬೇಸಿಗೆ, ಮಳೆಗಾಲ ಮತ್ತು ಚಳಿಗಾಲಗಳನ್ನು ಒಳಗೊಂದಿರುವ ಸಮಶೀತೋಷ್ಣವಲಯದ ಹವಾಮಾನದ ಅನುಭವವನ್ನು ನೀಡುತ್ತದೆ.

ಕರ್ನಾಲ್‍ಗೆ ತಲುಪುವುದು ಹೇಗೆ

ಕರ್ನಾಲ್‍ ದೆಹಲಿ ಮತ್ತು ಚಂಡೀಘಡ್ ನಗರಗಳ ಮಧ್ಯೆ ನೆಲೆಗೊಂಡಿದೆ. ಈ ನಗರವು ಭಾರತದ ಇನ್ನಿತರ ನಗರಗಳ ಜೊತೆಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇಲ್ಲಿಗೆ ಸಮೀಪದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ.

Please Wait while comments are loading...