ಕುರುಕ್ಷೇತ್ರ - ಮಹಾಭಾರತದ ಯುದ್ಧಭೂಮಿ.

ಕುರುಕ್ಷೇತ್ರವೆಂದರೆ ಧರ್ಮಶೀಲತ್ವವನ್ನು ಹೊಂದಿದ ನಾಡು ಎಂದರ್ಥವಾಗುತ್ತದೆ. ಕುರುಕ್ಷೇತ್ರದಲ್ಲಿನ ಪ್ರವಾಸವು ನಿಮಗೆ ಒಟ್ಟೊಟ್ಟಿಗೆ ಇತಿಹಾಸ ಮತ್ತು ಪುರಾಣ ಕಾಲದ ಸ್ಥಳಗಳೆರಡನ್ನು ಪರಿಚಯಿಸುತ್ತವೆ. ಕೌರವರು ಮತ್ತು ಪಾಂಡವರು ಹಸ್ತಿನಾಪುರದ ಸಿಂಹಾಸನಕ್ಕಾಗಿ ಇದೇ ಕುರುಕ್ಷೇತ್ರದಲ್ಲಿ ಹೋರಾಡಿದರು. ಇದೇ ಪಟ್ಟಣವು ಹಿಂದೆ ಭಗವಾನ್ ಶ್ರೀ ಕೃಷ್ಣನು ಅರ್ಜುನನಿಗೆ ಭೋದಿಸಿದ ಭಗವದ್ಗೀತೆಗೆ ಸಾಕ್ಷಿಯಾಗಿತ್ತು. ಈ ಪವಿತ್ರ ಗ್ರಂಥವು ಕರ್ಮ ಯೋಗವನ್ನು ಮತ್ತು ಹಿಂದೂ ಧರ್ಮದ ಅತ್ಯುನ್ನತ ಆದರ್ಶಗಳನ್ನು ಭೋದಿಸಿದೆ. ಇಲ್ಲಿ ಕೇವಲ ಭಗವದ್ಗೀತೆಯೊಂದೆ ಅಲ್ಲದೆ ಹಲವಾರು ಪವಿತ್ರಗ್ರಂಥಗಳು ಇಲ್ಲಿಯೇ ರಚಿಸಲ್ಪಟ್ಟಿವೆ.

ಕುರುಕ್ಷೇತ್ರವು ತನ್ನ ಒಡಲಲ್ಲಿ ವರ್ಣರಂಜಿತವಾದ ಇತಿಹಾಸವನ್ನು ಹೊಂದಿದೆ. ಸುಮಾರು ಕಾಲದಿಂದಲು ಇಲ್ಲಿನ ಭೂಮಿಯು ಪವಿತ್ರತೆಯನ್ನು ತನ್ನ ಕಣಕಣದಲ್ಲಿಯು ಪಸರಿಸುತ್ತಿದೆ. ಭಗವಾನ್ ಬುದ್ಧನಿಂದ ಹಿಡಿದು ಹಲವಾರು ಸಿಖ್ ಧರ್ಮಗುರುಗಳು ಇಲ್ಲಿಗೆ ಭೇಟಿ ನೀದಿದ್ದರು. ಇವರೆಲ್ಲರು ಸೇರಿ ಇಲ್ಲಿನ ಧಾರ್ಮಿಕ ವರ್ಚಸ್ಸಿಗೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಹಾಗಾಗಿ ಇಂದು ಕುರುಕ್ಷೇತ್ರವು ಕೇವಲ ಹಿಂದೂಗಳಿಗಷ್ಟೆ ಅಲ್ಲದೆ, ಬೌದ್ಧ ಮತ್ತು ಸಿಖ್ ಧರ್ಮಿಯರಿಗು ಸಹ ಅತ್ಯಂತ ಪವಿತ್ರ ಯಾತ್ರಾಕ್ಷೇತ್ರವಾಗಿದೆ. ಈ ಪಟ್ಟಣದಲ್ಲಿ ದೇವಾಲಯಗಳು, ಗುರುದ್ವಾರಗಳು ಮತ್ತು ಕುಂಡಗಳು ಹಾಗು ಇನ್ನಿತರ ಧಾರ್ಮಿಕ ಕೇಂದ್ರಗಳು ಇಲ್ಲಿ ನೆಲೆಗೊಂಡಿವೆ. ಇವುಗಳಲ್ಲಿ ಕೆಲವೊಂದು ಭಾರತದಲ್ಲಿ ನಾಗರೀಕತೆ ಕುಡಿ ಹೊಡೆದ ಕಾಲದ್ದಾಗಿವೆ ಎಂಬುದು ವಿಶೇಷ.

ಕುರುಕ್ಷೇತ್ರದಲ್ಲಿ ಮತ್ತು ಅದರ ಸುತ್ತ ಮುತ್ತ ಇರುವ ಪ್ರವಾಸಿ ತಾಣಗಳು

ಕುರುಕ್ಷೇತ್ರದಲ್ಲಿ ಕುತೂಹಲಕೆರಳಿಸುವ ಹಲವಾರು ಧಾರ್ಮಿಕ ಸ್ಥಳಗಳು ಇವೆ. ಸೂರ್ಯಗ್ರಹಣದ ದಿನ ಇಲ್ಲಿರುವ ಬ್ರಹ್ಮ ಸರೋವರ ಕಲ್ಯಾಣಿಯು ಅಸಂಖ್ಯಾತ ಭಕ್ತಾಧಿಗಳನ್ನು ತನ್ನತ್ತ ಸೆಳೆಯುತ್ತದೆ. ಇದರ ಜೊತೆಗೆ ಸನ್ನಿಹಿತ್ ಸರೋವರದಲ್ಲಿ ತೀರ್ಥ ಸ್ನಾನ ಮಾಡುವುದರಿಂದ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ನಂಬಲಾಗುತ್ತದೆ. ಹಾಗಾಗಿ ಇಲ್ಲಿ ಅಸಂಖ್ಯಾತ ಸಂಖ್ಯೆಯಲ್ಲಿ ಹಿಂದೂಗಳು ತಮ್ಮ ಪೂರ್ವಿಕರಿಗೆ ಹಾಗು ಪ್ರೀತಿ ಪಾತ್ರರಿಗೆ ಪಿಂಡ ಪ್ರಧಾನ ಮಾಡಲು ಇಲ್ಲಿಗೆ ಆಗಮಿಸುತ್ತಿರುತ್ತಾರೆ.

ಕುರುಕ್ಷೇತ್ರದ ಪ್ರಧಾನ ಆಕರ್ಷಣೆಯೆಂದರೆ ಹಿಂದೂಗಳ ಯಾತ್ರಾಸ್ಥಳಗಳು. ಅದರಲ್ಲಿಯು ಇಲ್ಲಿರುವ ಜ್ಯೋತಿಸರ್ ಎಂಬ ಸ್ಥಳವು ಅವುಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಸ್ಥಾನಪಡೆದಿದೆ. ಇದೇ ಸ್ಥಳದಲ್ಲಿ ಶ್ರೀ ಕೃಷ್ಣನು ಅರ್ಜುನನಿಗೆ ಭಗವದ್ಗೀತೆಯನ್ನು ಭೋದಿಸಿದನಂತೆ.

1987ರಲ್ಲಿ ಕುರುಕ್ಷೇತ್ರ ಅಭಿವೃದ್ಧಿ ನಿಗಮವು ಇಲ್ಲಿ ಕೃಷ್ಣ ವಸ್ತು ಸಂಗ್ರಹಾಲಯವನ್ನು ನಿರ್ಮಿಸಿದ್ದಾರೆ. ಈ ವಸ್ತು ಸಂಗ್ರಹಾಲಯವು ಪ್ರಖ್ಯಾತ ರಾಜಕೀಯ ಮುತ್ಸದಿ, ಅನುಪಮ ತತ್ವಙ್ಞಾನಿ, ನಿಜವಾದ ಧಾರ್ಮಿಕ ಗುರು ಮತ್ತು ಮಹಾನ್ ಪ್ರೇಮಿಯಾದ ಕೃಷ್ಣನ ಜೀವನವನ್ನು ಸಾರುವ ಹಲವಾರು ಕರಕುಶಲ ವಸ್ತುಗಳನ್ನು, ವಿಗ್ರಹಗಳನ್ನು, ವರ್ಣಚಿತ್ರಗಳನ್ನು, ಹಸ್ತಪ್ರತಿಗಳನ್ನು, ಫಲಕಗಳನ್ನು, ನೆನಪಿನ ಕಾಣಿಕೆಗಳನ್ನು ಮತ್ತು ಇನ್ನಿತರ ಕಲಾವಸ್ತುಗಳನ್ನು ತನ್ನಲ್ಲಿ ಒಳಗೊಂಡಿದೆ.

ಕಲ್ಪನಾ ಚಾವ್ಲಾ ತಾರಾಲಯವನ್ನು ಗಗನಯಾತ್ರಿ ಕಲ್ಪನಾ ಚಾವ್ಲಾರವರ ನೆನಪಿಗಾಗಿ ನಿರ್ಮಿಸಲಾಗಿದೆ. ಈಕೆಯು ದೇಶದ ಹೆಮ್ಮೆಯ ಪುತ್ರಿ, ಗಗನ ಯಾನದ ಕ್ಷೇತ್ರದಲ್ಲಿ ಮತ್ತು ಅಂತರಿಕ್ಷ ಯಾತ್ರೆಗಳಲ್ಲಿ ಈಕೆ ದೇಶವೆ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾಕ್ಕಾಗಿ ಆಕೆಯ ಹೆಸರಿನಲ್ಲಿ ಒಂದು ತಾರಾಲಯವನ್ನು ಇಲ್ಲಿ ಸ್ಥಾಪಿಸಲಾಗಿದೆ. ಜ್ಯೋತಿಸರದಲ್ಲಿ ಪ್ರತಿದಿನವು ಸಂಜೆ ಧ್ವನಿ ಮತ್ತು ಬೆಳಕಿನ ಪ್ರದರ್ಶನವನ್ನು ಏರ್ಪಡಿಸಲಾಗುತ್ತದೆ.

ಕುರುಕ್ಷೇತ್ರ ನಗರದ ಹೊರಭಾಗದಲ್ಲಿ ಶೇಖ್ ಚೆಹ್ಲಿಯವರ  ಗೋರಿಯನ್ನು ನಿರ್ಮಿಸಲಾಗಿದೆ. ಇದು ಸಹ ಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಸ್ಥಾನಪಡೆದಿದೆ.ಸ್ಥಾನೇಶ್ವರ್ ಮಹಾದೇವ್ ದೇವಾಲಯವು ಕುರುಕ್ಷೇತ್ರದಲ್ಲಿರುವ ಸ್ಥಾನೇಶ್ವರ್ ಎಂಬ ಸ್ಥಳದಲ್ಲಿ ನೆಲೆಗೊಂಡಿದೆ. ಈ ಶಿವನ ದೇವಾಲಯದಲ್ಲಿ ಒಂದು ಲಿಂಗವನ್ನು ನಾವು ಕಾಣಬಹುದು.

ನಾಭಿಕಮಲ್ ದೇವಾಲಯವು ಕುರುಕ್ಷೇತ್ರದಲ್ಲಿರುವ  ಥಾನೇಶ್ವರದಲ್ಲಿದೆ. ಇದರಲ್ಲಿ ಒಂದೆ ಸೂರಿನಡಿ ಎರಡು ದೇವರುಗಳನ್ನು ನಾವು ಕಾಣಬಹುದು. ಇದು ಅಷ್ಟೇನು ದೊಡ್ಡ ದೇವಾಲಯವಲ್ಲ. ಆದರೂ ಇದು ಬ್ರಹ್ಮನಿಗಾಗಿ ನಿರ್ಮಾಣಗೊಂಡಿರುವ ಕೆಲವೇ ಕೆಲವು ದೇವಾಲಯಗಳಲ್ಲಿ ಒಂದಾಗಿದೆ. ಕುರುಕ್ಷೇತ್ರದಲ್ಲಿ ಅಮೃತ ಶಿಲೆಯಿಂದ ನಿರ್ಮಾಣ ಮಾಡಲಾದ ಬಿರ್ಲಾ ಮಂದಿರವನ್ನು ನಾವು ಕಾಣಬಹುದು.

ಸಿಖ್ಖರ ಗುರು ಹರ್ ಗೋಬಿಂದ್‍ರವರು ತಮ್ಮ ಸೇನೆಯ ಜೊತೆಗೆ ಕುರುಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಇದರ ನೆನಪಿಗಾಗಿ ಇಲ್ಲಿ ಗುರುದ್ವಾರ ಚೆವಿನ್ ಪಟ್‍ಶಾಹಿಗಳನ್ನು ನಿರ್ಮಿಸಲಾಗಿದೆ. ಬಾನ್ ಗಂಗಾ ಅಥವಾ ಭೀಷ್ಮ ಕುಂಡವು ಮಹಾಭಾರತದಲ್ಲಿ ದಾಖಲಾದ ಅತ್ಯಂತ ಭಾವನಾತ್ಮಕ, ನಾಟಕೀಯ ಮತ್ತು ಪರಿಣಾಮಕಾರಿ ಸನ್ನಿವೇಶಕ್ಕೆ ಸಾಕ್ಷಿಯಾಗಿತ್ತು. ಕುರುಕ್ಷೇತ್ರದಲ್ಲಿನ ಆಧುನಿಕ ಹಳ್ಳಿಯಾದ ನರಕ್ಟಾರಿಯಲ್ಲಿ ಭೀಷ್ಮನು ಶರಶಯ್ಯೆಯಲ್ಲಿ ಇಹಲೋಕವನ್ನು ತ್ಯಜಿಸಿದ ನೆನಪಿಗಾಗಿ ಇಲ್ಲಿ ಒಂದು ಸಣ್ಣ ದೇವಾಲಯವನ್ನು ನಿರ್ಮಿಸಲಾಗಿದೆ.

ದಿದರ್ ನಗರ್ ಎಂಬುದು ಕುರುಕ್ಷೇತ್ರಕ್ಕೆ ಸಮೀಪದಲ್ಲಿರುವ ಒಂದು ಧಾರ್ಮಿಕ ಸ್ಥಳವಾಗಿದ್ದು, ವರ್ಷಪೂರ್ತಿ ಭಕ್ತಾಧಿಗಳನ್ನು ತನ್ನತ್ತ ಆಕರ್ಷಿಸುತ್ತಿರುತ್ತದೆ.

ಕುರುಕ್ಷೇತ್ರಕ್ಕೆ ತಲುಪುವುದು ಹೇಗೆ

ಕುರುಕ್ಷೇತ್ರಕ್ಕೆ ರೈಲು ಮತ್ತು ರಸ್ತೆಯ ಮೂಲಕ ಸಾಗಬಹುದು. ಚಂಡೀಗಢ್ ವಿಮಾನ ನಿಲ್ದಾಣವು ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವಾಗಿದೆ.

Please Wait while comments are loading...