ರಿಷಿಕೇಶ - ಹಿಮಾಲಯದ ಹೆಬ್ಬಾಗಿಲು

ಡೆಹ್ರಾಡೂನ್ ಜಿಲ್ಲೆಯಲ್ಲಿರುವ ಧಾರ್ಮಿಕ ಕೇಂದ್ರ ರಿಷಿಕೇಶ 'ದೇವಭೂಮಿ' ಎಂದೇ ಪ್ರಸಿದ್ದಿ ಪಡೆದಿದೆ. ಗಂಗಾ ನದಿ ದಂಡೆಯ ಮೇಲೆ ರಿಷಿಕೇಶ ನೆಲೆ ನಿಂತಿರುವ ಕಾರಣಕ್ಕೆ ಹಿಂದೂ ಧಾರ್ಮಿಕರಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ. ಪ್ರತಿವರ್ಷ ಲಕ್ಷಾಂತರ ಭಕ್ತ ಮಹಾಶಯರು ರಿಷಿಕೇಶಕ್ಕೆ ಭೇಟಿ ನೀಡಿ ಧಾರ್ಮಿಕ ಕೇಂದ್ರಗಳನ್ನು ಸಂದರ್ಶಿಸುತ್ತಾರೆ. ಹಿಮಾಲಯ ಪರ್ವತ ಶ್ರೇಣಿಗಳನ್ನು ಕಣ್ತುಂಬಿಕೊಳ್ಳುತ್ತಾರೆ. ಪವಿತ್ರ ಗಂಗಾ ನದಿಯಲ್ಲಿ ಮುಳುಗೇಳುತ್ತಾರೆ. ಹಿಮಾಲಯದ ಪಾದ ತಳದಲ್ಲಿ ರಿಷಿಕೇಶ ನೆಲೆ ನಿಂತಿರುವುದರಿಂದ ಹಿಂದೂ ಭಕ್ತರಿಗೆ ಇಲ್ಲಿ ಭಕ್ತಿ ಶ್ರದ್ದೆ ಹೆಚ್ಚು.

ಈ ಸ್ಥಳ ಹೆಚ್ಚು ಪ್ರಸಿದ್ದಿ ಪಡೆದಿರುವುದು ಪುರಾತನವಾದ ದೇವಸ್ಥಾನ ಹಾಗೂ ಆಶ್ರಮಗಳಿಂದ. ಹಲವಾರು ಯೋಗ ಮತ್ತು ಧ್ಯಾನ ಕೇಂದ್ರಗಳು ಇಲ್ಲಿದ್ದು ಅನುಭವಿ ಯೋಗ ಗುರುಗಳು ಇಲ್ಲಿ ತರಬೇತಿ ನೀಡುತ್ತಾರೆ. ಹಿಂದೂ ಪುರಾಣ ಕಥೆ ರಾಮಾಯಣದ ಪ್ರಕಾರ, ರಾವಣನ ಸಂಹಾರ ಮಾಡಿದ ನಂತರ ಶ್ರೀರಾಮ ಇದೇ ಸ್ಥಳದಲ್ಲಿ ಧ್ಯಾನಕ್ಕೆ ಕುಳಿತನಂತೆ. ಇದೇ ಸ್ಥಳದಲ್ಲಿ ಲಕ್ಷ್ಮಣನೂ ಕೂಡ ಸೇತುವೆಯ ಮೂಲಕ ಗಂಗಾ ನದಿಯನ್ನು ದಾಟಿದ ಕಥೆಯಿದೆ. ಹೀಗಾಗಿಯೇ ಈ ಸೇತುವೆಯನ್ನು ಲಕ್ಷ್ಮಣ ಝೂಲಾ ಎನ್ನುತ್ತಾರೆ. 1889 ರಲ್ಲಿ ಮೊದಲ ಬಾರಿಗೆ ಇಲ್ಲಿ ಸೇತುವೆ ನಿರ್ಮಿಸಲಾಯಿತು. ನಂತರ 1924 ರಲ್ಲಿ ಮತ್ತೊಮ್ಮೆ ಕಟ್ಟಲಾಯಿತು.

ಇಲ್ಲಿರುವ ಕುಂಜಾಪುರಿ ದೇವಸ್ಥಾನ ಸತಿ ದೇವತೆಗೆ ಅರ್ಪಿತವಾಗಿದ್ದು ಶಿವಾಲಿಕ ಪ್ರದೇಶದ 13 ಪ್ರಮುಖ ಭಕ್ತಿಕ್ಷೇತ್ರಗಳಲ್ಲಿ ಇದೂ ಕೂಡ ಒಂದು. ದಂತ ಕಥೆಗಳು ಹೇಳುವಂತೆ ಶಿವ ಪರಮಾತ್ಮ ಸತಿ ದೇವತೆಯ ದೇಹವನ್ನು ಕೈಲಾಸಕ್ಕೆ ಕೊಂಡೊಯ್ಯುವಾಗ ದೇಹದ ಮೇಲಿನ ಭಾಗ ಇಲ್ಲಿ ಬಿದ್ದುಬಿಡುತ್ತದೆ. ದೇಹದ ಭಾಗ ಬಿದ್ದ ಈ ಜಾಗದಲ್ಲಿ ದೇವಸ್ಥಾನ ಕಟ್ಟಲಾಗಿದೆ. ಪಂಕಜ ಮತ್ತು ಮಧುಮತಿ ನದಿಗಳ ಸಂಗಮ ಸ್ಥಳದಲ್ಲಿರುವ ನೀಲಕಂಠ ಮಹಾದೇವ ಮಂದಿರವನ್ನು ಪ್ರವಾಸಿಗರು ಭೇಟಿ ನೀಡಬಹುದು. ದೇವಸ್ಥಾನವನ್ನು ವಿಷ್ಣುಕೂಟ, ಮಣಿಕೂಟ ಮತ್ತು ಬ್ರಹ್ಮಕೂಟ ಬೆಟ್ಟಗಳು ನಾಲ್ಕೂ ಸುತ್ತಿನಿಂದ ಆವರಿಸುತ್ತವೆ. ಶಿವರಾತ್ರಿಯ ಹಬ್ಬದಲ್ಲಿ ಲಕ್ಷಾಂತರ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.

ತ್ರಿವೇಣಿ ಘಾಟ್ ಪಕ್ಕದಲ್ಲಿಯೇ ಇರುವ ರಿಷಿಕುಂಡವನ್ನು ಭೇಟಿ ನೀಡಲು ಪ್ರವಾಸಿಗರು ಮೆರಯಬಾರದು. ಸಂತ ಕುಬ್ಜರಿಗೆ ಗೌರವಪೂರ್ವಕವಾಗಿ ದೊರಕಿದ ಯಮುನಾ ನದಿ ನೀರನ್ನ ಇಲ್ಲಿನ ಕೊಳದಲ್ಲಿ ತುಂಬಿಡಲಾಗಿದೆ. ಕೊಳದ ನೀರಿನಲ್ಲಿ ಪುರಾತನ ರಘುನಾತ್ ದೇವಸ್ಥಾನದ ಪ್ರತಿಬಿಂಬದ ಛಾಯೆ ಮೂಡುತ್ತದೆ. ವಸಿಷ್ಟ ಗುಹೆ ಕೂಡ ರಿಷಕೇಶದ ಮತ್ತೊಂದು ಆಕರ್ಷಣೆಯಾಗಿದ್ದು ಸಾಹಸಪ್ರಿಯರಿಗೆ ಇಲ್ಲಿರುವ ಧ್ಯಾನ ಕೇಂದ್ರ ಸೆಳೆಯುತ್ತದೆ. ಗುಫಾದ ಸನಿಹದಲ್ಲಿಯೇ ಇರುವ ಸ್ವಾಮಿ ಪುರುಷೋತ್ತಮಾನಂದಜೀ ಆಶ್ರಮ ಧ್ಯಾನಕ್ಕೆ ಸೂಕ್ತ ಸ್ಥಳ.

ಶ್ರೀ ಬಾಬಾ ವಿಶುದ್ದಾನಂದಜಿಯಿಂದ ಸ್ಥಾಪಿಸಲ್ಪಟ್ಟ ಕಾಳಿ ಕಂಬ್ಲಿವಾಲೆ ಪಂಚಾಯತಿ ಕ್ಷೇತ್ರ ಕೂಡ ಮತ್ತೊಂದು ಪ್ರಮುಖ ಆಕರ್ಷಣೆ. ಇದರ ಪ್ರಮುಖ ಕಚೇರಿ ರಿಷಿಕೇಶದಲ್ಲಿದ್ದು ಇದರ ಶಾಖೆಗಳು ಗಡ್ವಾಲ್ ನ ತುಂಬ ಹರಡಿಕೊಂಡಿವೆ. ಪ್ರವಾಸಿಗರಿಗಾಗಿ ಇಲ್ಲಿ ವಸತಿ ವ್ಯವಸ್ಥೆಯೂ ಇದೆ. ಸ್ವಾಮಿ ಶಿವಾನಂದರು ಸ್ಥಾಪಿಸಿದ ಮತ್ತೊಂದು ಆಶ್ರಮ ಶಿವಾನಂದಗೂ ಕೂಡ ಭೇಟಿ ನೀಡಬಹುದು. ಹಿಮಾಲಯದ ತಪ್ಪಲಿನಲ್ಲಿ ಗಂಗಾ ನದಿಯ ದಂಡೆಯ ಮೇಲಿದೆ ಈ ಆಶ್ರಮ. 1967ರಲ್ಲಿ ಸ್ಥಾಪಿಸಲ್ಪಟ್ಟ ಓಂಕಾರಾನಂದ ಆಶ್ರಮಕ್ಕೂ ಭೇಟಿ ನೀಡಬಹುದು. ಇಲ್ಲಿನ ಆಶ್ರಮಗಳು ಸಮಾಜದ ಸ್ವಾಸ್ಥ್ಯ ಹಾಗೂ ಸಂಸ್ಕ್ರತಿಯನ್ನು  ಕಾಪಾಡಿ ಶಿಕ್ಷಣವನ್ನು ಉತ್ತೇಜಿಸುವ ಕೆಲಸಕ್ಕೆ ಕೈ ಹಾಕಿವೆ. ರಿಷಕೇಶದಿಂದ 16 ಕಿಲೋ ಮೀಟರ್ ದೂರದಲ್ಲಿ ಶಿವಪುರಿ ದೇವಸ್ಥಾನವಿದೆ. ಗಂಗಾ ನದಿಯ ದಂಡೆಯ ಮೇಲಿರುವ ಈ ಶಿವ ದೇವಸ್ಥಾನಕ್ಕೆ ಭೇಟಿ ನಿಡಿದಾಗ, ನದಿಯಲ್ಲಿ ರಾಫ್ಟಿಂಗ್ ವಿಹಾರಕ್ಕೂ ಅವಕಾಶವಿದೆ. ನೀಲಕಂಠ ಮಹಾದೇವ ದೇವಸ್ಥಾನ, ಗೀತಾಭವನ, ತ್ರಿವೇಣಿ ಘಾಟ್ ಮತ್ತು ಸ್ವರ್ಗಾಶ್ರಮ ಮುಂತಾದವು ಭೇಟಿ ನೀಡಲು ಸೂಕ್ತವಾದ ತಾಣಗಳು.

ಭಕ್ತಾದಿಗಳಿಗೆ ಮಾತ್ರ ಇಲ್ಲಿ ಖುಷಿ ಸಿಗುವುದಲ್ಲ - ಸಾಹಸ ಪ್ರಿಯರನ್ನೂ ಸೆಳೆಯುವ ತಾಣಗಳಿವೆ ಇಲ್ಲಿ. ಪರ್ವತ ಶ್ರೇಣಿಗಳ ಮಧ್ಯದಲ್ಲಿಯೇ ಇವು ಇರುವುದರಿಂದ ಚಾರಣಕ್ಕೆ ಸೂಕ್ತವಾಗಿವೆ. ಗಡ್ವಾಲ್ ಹಿಮಾಲಯನ್ ಪ್ರದೇಶ, ಬುವನಿ ಸೀರ್ಗುಡ್, ರೂಪಕುಂಡ್, ಕೌರಿ ಪಾಸ್, ಖಲಿಂದಿ ಖಾಲ್ ಟ್ರೆಕ್ ಮತ್ತು ದೇವಿ ನ್ಯಾಷನಲ್ ಪಾರ್ಕ್ ಮುಂತಾದವು ಪ್ರಸಿದ್ದ ಚಾರಣದ ಹಾದಿಗಳು. ಫೇಬ್ರವರಿ ಮತ್ತು ಅಕ್ಟೋಬರ್ ಕಾಲಾವಧಿಯು ಚಾರಣಕ್ಕೆ ಸೂಕ್ತವಾದ ಕಾಲ.

ಇದರೊಟ್ಟಿಗೆ, ರಿವರ್ ರಾಫ್ಟಿಂಗ್ ಕೂಡ ಬಹಳಷ್ಟು ಪ್ರವಾಸಿಗರನ್ನು ಸೆಳೆಯುತ್ತದೆ. ವೃತ್ತಿಪರರಿಂದ ಮಾರ್ಗದರ್ಶನ ಪಡೆದುಕೊಂಡು ಇವೆಲ್ಲವನ್ನೂ ಆಸ್ವಾದಿಸಬಹುದು. ನದಿಯನ್ನು ದಾಟುವುದೂ ಕೂಡ ಒಂದು ರೀತಿಯಲ್ಲಿ ಮಜಾ ಕೊಡುವ ಆಟ. ಈ ಆಟದಲ್ಲಿ ಹಗ್ಗದ ಮೂಲಕ ಪ್ರವಾಸಿಗರು ನದಿ ದಾಟಬೇಕು.

ರಿಷಿಕೇಶ್ ತಲುಪಲು, ವಿಮಾನದ ಮೂಲಕ ಪ್ರಯಾಣಿಸುವವರು 18 ಕಿಲೋ ಮೀಟರ್ ದೂರದ ಡೆಹ್ರಾಡೂನ್ ನ ಜಾಲಿ ಗ್ರ್ಯಾಂಟ್ ವಿಮಾನನಿಲ್ದಾಣದಿಂದ ಪ್ರಯಾಣಿಸಬೇಕು. ರಿಷಿಕೇಶದಲ್ಲಿಯೇ ರೈಲು ನಿಲ್ದಾಣವಿದ್ದು ಇಲ್ಲಿಂದ ದೆಹಲಿ, ಮುಂಬೈ, ಕೊಟದ್ವಾರ್ ಮತ್ತು ಡೆಹ್ರಾಡೂನ್ ಗೆ ಸಂಪರ್ಕ ಕಲ್ಪಿಸುತ್ತದೆ. ದೆಹಲಿ, ಡೆಹ್ರಾಡೂನ್ ಮತ್ತು ಹರಿದ್ವಾರ್ ದಿಂದ ಸರ್ಕಾರಿ ಮತ್ತು ಖಾಸಗಿ ಬಸ್ ಗಳಿವೆ. ವರ್ಷಪೂರ್ತಿ ಇಲ್ಲಿ ಹಿತಕರವಾದ ವಾತಾವರಣವಿರುತ್ತದೆ. ಹೀಗಿದ್ದರೂ ಮೇ ತಿಂಗಳಲ್ಲಿ ಉಷ್ಣಾಂಶ ಹೆಚ್ಚಿರುವ ಕಾರಣ ಮೇಯಲ್ಲಿ ಭೇಟಿ ನೀಡದಿರುವುದೇ ಒಳ್ಳೆಯದು.

Please Wait while comments are loading...