Search
  • Follow NativePlanet
Share
» »ಚಿಕ್ಕಮಗಳೂರಿನ ಬೆರುಗುಗೊಳಿಸುವ ಸ್ಥಳಗಳು

ಚಿಕ್ಕಮಗಳೂರಿನ ಬೆರುಗುಗೊಳಿಸುವ ಸ್ಥಳಗಳು

ಕರ್ನಾಟಕದಲ್ಲಿ ಕಂಡುಬರುವ ಅತಿ ಸುಮಧುರ ಪ್ರೇಕ್ಷಣೀಯ ಸ್ಥಳಗಳನ್ನು ಹೆಸರಿಸುವುದಾದರೆ ಅವುಗಳಲ್ಲಿ ಚಿಕ್ಕಮಗಳೂರು ಸಹ ಒಂದು. ಹಲವು ಮನಮೋಹಕವಾದ ಗಿರಿಧಾಮಗಳನ್ನು ಹೊಂದಿರುವ ಈ ತಾಣವನ್ನು ಬಹುಶಃ ಕರ್ನಾಟಕದ ಗಿರಿಧಾಮಗಳ ರಾಣಿ ಎಂದರೂ ತಪ್ಪಾಗಲಾರದು. ಎಲ್ಲೆಲ್ಲೂ ಕಾಫಿಯ ಸುಮಧುರ ಸುವಾಸನೆಯನ್ನು ಪಸರಿಸಿಕೊಂಡಿರುವ ಕರ್ನಾಟಕದ ಕಾಫಿ ನಗರವಿದು. ಬೆಂಗಳೂರಿನಿಂದ ವಾಯವ್ಯ ದಿಕ್ಕಿಗೆ ಸುಮಾರು 250 ಕಿ.ಮೀ ದೂರದಲ್ಲಿರುವ ಚಿಕ್ಕಮಗಳೂರನ್ನು ನೆಲಮಂಗಲ, ಕುಣಿಗಲ್, ಹಾಸನ ಮಾರ್ಗದ ಮೂಲಕ ಸುಲಭವಾಗಿ ತಲುಪಬಹುದು.

ನೀವು ಚಾರಣಪ್ರಿಯರಾಗಿದ್ದರೆ, ಮುಖ್ಯವಾಗಿ ಚಿಕ್ಕಮಗಳೂರಿನಲ್ಲಿ ಮುಳ್ಳಯ್ಯನಗಿರಿ, ಬಾಬಾ ಬುಡನ್ ಗಿರಿ, ದೇವಿರಮ್ಮ ಬೆಟ್ಟ ಹಾಗು ಕೆಮ್ಮಣ್ಣುಗುಂಡಿ ಗಳಂತಹ ಗಿರಿ ಶಿಖರ ಪ್ರದೇಶಗಳಲ್ಲಿ ಅದ್ಭುತವಾದ ಚಾರಣಾನಂದವನ್ನು ಅನುಭವಿಸಬಹುದು. ಅದರಲ್ಲೂ ವಿಶೇಷವಾಗಿ ದೇವಿರಮ್ಮ ಬೆಟ್ಟದ ತಪ್ಪಲಿನಲ್ಲಿ ನೆಲೆಸಿರುವ ದೇವಿರಮ್ಮನ ದೇವಸ್ಥಾನವು ಹಾಸನದ ಹಾಸನಾಂಬೆ ದೇವಸ್ಥಾನ ದ ಹಾಗೆ ಕೇವಲ ದೀಪಾವಳಿ ಹಬ್ಬದ ಸಂದರ್ಭದಲ್ಲಿ ತೆರೆಯಲ್ಪಡುತ್ತದೆ. ಚಿಕ್ಕಮಗಳೂರು ಹಾಗು ಸುತ್ತಮುತ್ತಲಿನ ಕೆಲವು ಅದ್ಭುತ ಗಿರಿ ಶಿಖರಗಳು ಮತ್ತು ಪ್ರೇಕ್ಷಣೀಯ ಸ್ಥಳಗಳ ಕುರಿತು ಕಿರು ಪರಿಚಯ ನಿಮಗಾಗಿ ಈ ಲೇಖನದ ಮೂಲಕ. ಒಂದೊಂದಾಗಿ ಓದಿರಿ ಹಾಗು ಪ್ರವಾಸ ಯೋಜನೆಯನ್ನು ಇಂದೆ ಹಾಕಿರಿ.

ಇಲ್ಲಿಗೆ ತೆರಳುವ ಬಗೆ:

ಬೆಂಗಳೂರು -> ಹಾಸನ -> ಬೇಲೂರು -> ಚಿಕ್ಕಮಗಳೂರು (ಒಟ್ಟಾರೆ 250 ಕಿ.ಮೀ)
ಬೆಂಗಳೂರಿನಿಂದ ಚಿಕ್ಕಮಗಳೂರಿಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳ ನಿರ್ಗಮನ ಸಮಯ: 11.00, 14.00, 18.00, 23.05

ದೇವರ ಬೆಟ್ಟ:

ದೇವರ ಬೆಟ್ಟ:

ಚಿಕ್ಕಮಗಳೂರಿನ ಮಲ್ಲೇನಹಳ್ಳಿಯ ಬಿಂಡಿಗದಲ್ಲಿರುವ ದೇವಿರಮ್ಮನ ದೇವಸ್ಥಾನ, ಈ ಬೆಟ್ಟದ ಪ್ರಮುಖ ಆಕರ್ಷಣೆ. ದೀಪಾವಳಿಯ ಸಂದರ್ಭದಲ್ಲಷ್ಟೆ ತೆರೆಯಲ್ಪಡುವ ಈ ದೇವಸ್ಥಾನವನ್ನು ಬೆಟ್ಟವನ್ನು ಹತ್ತಿ ಮಾತ್ರ ತಲುಪಬೇಕು. ಬೆಟ್ಟದ ತುದಿ ತಲುಪಲು ಸುಮಾರು ಏಳು ಕಿ.ಮೀ ಉದ್ದವನ್ನು ಕ್ರಮಿಸಬೇಕಾಗಿದ್ದು, ಬರಿಗಾಲಿನಲ್ಲೆ ತೆರಳ ಬೇಕಾಗಿರುವುದು ವಿಶೇಷ. ತರೀಕೆರೆ, ಕಡೂರು, ಬಿರೂರು ಹಾಗು ಚಿಕ್ಕಮಗಳೂರಿನಿಂದ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಇಲ್ಲಿಗೆ (ಬಿಂಡಿಗಕ್ಕೆ) ಲಭ್ಯವಿರುತ್ತದೆ.

ಮುಳ್ಳಯ್ಯನಗಿರಿ:

ಮುಳ್ಳಯ್ಯನಗಿರಿ:

ನೀವು ತಿಳಿದುಕೊಳ್ಳಬೇಕಾದ ಒಂದು ಆಸಕ್ತಿಕರ ವಿಷಯವೆಂದರೆ ಮುಳ್ಳಯ್ಯನಗಿರಿ ಬೆಟ್ಟವು ಇಡಿ ಕರ್ನಾಟಕ ರಾಜ್ಯದಲ್ಲೆ ಅತಿ ಎತ್ತರವಾಗಿರುವ ಗಿರಿ ಶಿಖರ. ಬಾಬಾ ಬುಡನ್ ಗಿರಿ ಪರ್ವತ ಶ್ರೇಣಿಗಳ (ಚಂದ್ರ ದ್ರೋಣ ಪರ್ವತ ಶ್ರೇಣಿ) ಭಾಗವಾಗಿರುವ ಈ ಶಿಖರವು 1930 (6,330 ಅಡಿಗಳು) ಮೀಟರ್ ಗಳಷ್ಟು ಎತ್ತರವಾಗಿದೆ. ಈ ಶಿಖರದ ಮೇಲೆ ಒಂದು ಚಿಕ್ಕ ದೇವಾಲಯವಿದ್ದು, ಆ ದೇವಾಲಯದ ಆವರಣದಲ್ಲಿರುವ ಒಂದು ಪುಟ್ಟ ಶಿಖರವೇ ಕರ್ನಾಟಕದ ಅತ್ಯಂತ ಎತ್ತರದ ಸ್ಥಳ ಅಥವಾ ಕೇಂದ್ರವಾಗಿದೆ. ನಿಲಗಿರಿ ಹಾಗು ಹಿಮಾಲಯಗಳ ಎತ್ತರದ ಮಧ್ಯದಲ್ಲಿರುವ ಈ ಗಿರಿ ಶಿಖರವು ಚಾರಣಯೋಗ್ಯವಾಗಿದೆ ಹಾಗು ಚಾರಣಿಗರಿಗೆ ಅದ್ಭುತವಾದ ಅನುಭವವನ್ನು ಒದಗಿಸುತ್ತದೆ.

ಸರ್ಪಧಾರಿ ಎಂಬ ಸ್ಥಳದಿಂದ ಚಾರಣವನ್ನು ಆರಂಭಿಸಬಹುದು. ಚಿಕ್ಕಮಗಳೂರಿನಿಂದ ರಿಕ್ಷಾ ಹಾಗು ಜೀಪ್ ಗಳನ್ನು ಬಾಡಿಗೆಗೆ ಪಡೆದು ಈ ಸ್ಥಳಕ್ಕೆ ಆಗಮಿಸಬಹುದು. ಇಲ್ಲಿಂದ ಕೇವಲ ಮುಳ್ಳಯ್ಯನಗಿರಿಗೆ ತಲುಪಲು 3 ಕಿ.ಮೀ ಚಲಿಸಬೇಕಾಗಿದ್ದು, ಬಾಬಾ ಬುಡನ್ ಗಿರಿ ಗೂ ಹೋಗಬಯಸುವಿರೆಂದರೆ ಸುಮಾರು 10 ಕಿ.ಮೀ ವರೆಗೆ ಚಲಿಸಬೇಕಾಗುತ್ತದೆ.

ಬಾಬಾ ಬುಡನ್ ಗಿರಿ:

ಬಾಬಾ ಬುಡನ್ ಗಿರಿ:

ಚಂದ್ರ ದ್ರೋಣ ಪರ್ವತ ಶ್ರೇಣಿಯಲ್ಲಿ ನೆಲೆಸಿರುವ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾವು ಹಿಂದು ಹಾಗು ಮುಸ್ಲಿಮ್ ಧರ್ಮದವರಿಬ್ಬರಿಗೂ ಪವಿತ್ರವಾಗಿರುವ ಕರ್ನಾಟಕದ ಪ್ರಖ್ಯಾತ ಧಾರ್ಮಿಕ ಗಿರಿಧಾಮ ಪ್ರದೇಶವಾಗಿದೆ. ಇಲ್ಲಿರುವ ಲ್ಯಾಟರೈಟ್ ಗುಹೆಯಲ್ಲಿ ದತ್ತಾತ್ರೇಯ ಸ್ವಾಮಿ ಹಾಗು ಹಜರತ್ ದಾದಾ ಹಯತ್ ಮೀರ್ ಕಲಂದರ್ ನೆಲೆಸಿ ಇದನ್ನು ಪವಿತ್ರಗೊಳಿಸಿದ್ದಾರೆನ್ನಲಾಗಿದೆ. ಮಂಜಿನ ಮೋಡಗಳಲ್ಲಿ ನಡೆಯುತ್ತ ಸಾಗುವಾಗ ಆಗುವ ಆನಂದ ಹೇಳತೀರದು.

ಇದರ ಹತ್ತಿರದಲ್ಲಿ ಮಣಿಕ್ಯಧಾರಾ ಜಲಪಾತವನ್ನು ಕಾಣಬಹುದು. ಚೆಂಡುಗಳಂತೆ ಉದುರುವ ಈ ಜಲಪಾತದ ನೀರಿನ ಹನಿಗಳು ಎಂಥವರನ್ನಾದರೂ ಸರಿ ಮೂಕವಿಸ್ಮಿತರನ್ನಾಗಿ ಮಾಡುತ್ತದೆ.

ಕೋದಂಡ ರಾಮಸ್ವಾಮಿ ದೇವಾಲಯ:

ಕೋದಂಡ ರಾಮಸ್ವಾಮಿ ದೇವಾಲಯ:

ಚಿಕ್ಕಮಗಳೂರು ಪಟ್ಟಣದಿಂದ ಸುಮಾರು ನಾಲ್ಕು ಕಿ.ಮೀ ದೂರದಲ್ಲಿರುವ ಹಿರೆಮಗಳೂರಿನ ಕೋದಂಡ ರಾಮಸ್ವಾಮಿ ದೇವಾಲಯವು ಧಾರ್ಮಿಕ ಪ್ರೇಕ್ಷಣೀಯ ಸ್ಥಳವಾಗಿದೆ. ದ್ರಾವಿಡ ಹಾಗು ಹೊಯ್ಸಳ ಶೈಲಿಯಲ್ಲಿರುವ ಈ ದೇವಾಲಯವು ಸ್ಥಳ ಪುರಾಣದ ಪ್ರಕಾರ, ಪರಶುರಾಮನು ಶ್ರೀರಾಮನನ್ನು ಭೇಟಿ ಮಾಡಿದ ಸ್ಥಳ ಇದಾಗಿದೆ.

ರತ್ನಗಿರಿ ಬೋರ್:

ರತ್ನಗಿರಿ ಬೋರ್:

ಚಿಕ್ಕಮಗಳೂರು ಪಟ್ಟಣದ ಉತ್ತರ ದಿಕ್ಕಿಗೆ ಸುಮಾರು 4 ಕಿ.ಮೀ ದೂರದಲ್ಲಿ ನೆಲೆಸಿರುವ "ರತ್ನಗಿರಿ ಬೋರ್‍" ಒಂದು ಆಕರ್ಷಣೀಯ ಪಿಕ್ನಿಕ್ ತಾಣವಾಗಿದೆ. ಇದೊಂದು ಮಕ್ಕಳ ಆಟದ ಪಾರ್ಕ್ ಆಗಿದ್ದು ಪುಟ್ಟ ಬೆಟ್ಟದ ಮೇಲೆ ನೆಲೆಸಿದೆ. ವಾರಾಂತ್ಯದ ರಜಾ ತಾಣಕ್ಕೆ ಆದರ್ಶಪ್ರಾಯವಾಗಿರುವ ಈ ಸ್ಥಳದಿಂದ ಮುಳ್ಳಯ್ಯನಗಿರಿ ಬೆಟ್ಟದ ಅದ್ಭುತ ನೋಟವನ್ನು ಕಾಣಬಹುದು ಹಾಗು ನಿಮ್ಮ ಕ್ಯಾಮೆರಾಗಳಲ್ಲಿ ಸೆರೆ ಹಿಡಿಯಲೂಬಹುದು.

ಕೆಮ್ಮಣ್ಣುಗುಂಡಿ:

ಕೆಮ್ಮಣ್ಣುಗುಂಡಿ:

ಚಿಕ್ಕಮಗಳೂರು ಪಟ್ಟಣದ ಉತ್ತರ ದಿಕ್ಕಿಗೆ ಸುಮಾರು 55 ಕಿ.ಮೀ ದೂರದಲ್ಲಿ ನೆಲೆಸಿದೆ ಪ್ರಕೃತಿಯ ಸುಂದರ ಚಿತ್ರ ಕೆಮ್ಮಣ್ಣುಗುಂಡಿ ಗಿರಿಧಾಮ. ಮೈಸೂರಿನ ಅರಸರಾಗಿದ್ದ ಕೃಷ್ಣರಾಜ ಒಡೇಯರ್ ಅವರು ಈ ತಾಣವನ್ನು ತಮ್ಮ ನೆಚ್ಚಿನ ಬೇಸಿಗೆಯ ರಜಾ ತಾಣವನ್ನಾಗಿ ಮಾಡಿಕೊಂಡ ತರುವಾಯ ಇದನ್ನು ಕೆ.ಆರ್.ಹಿಲ್ಸ್ ಎಂಬ ನಾಮದಿಂದಲೂ ಕೂಡ ಕರೆಯಲಾಗುತ್ತದೆ.

ಕೆಮ್ಮಣ್ಣುಗುಂಡಿ:

ಕೆಮ್ಮಣ್ಣುಗುಂಡಿ:

ದಟ್ಟ ಹಸಿರು ಬಣ್ಣದ ಸೀರೆಗೆ ಮಾಡಿದ ಬೆಳ್ಳಿ ಕುಸುರಿಯ ಕೆಲಸದ ಹಾಗೆ ಈ ಪ್ರದೇಶದಲ್ಲಿ ಅಲ್ಲಲ್ಲಿ ಕಂಡುಬರುವ ಜಲಪಾತಗಳು ಮನಕ್ಕೆ ಮುದ ನೀಡುತ್ತವೆ. ಸುಂದರಮಯ ಗುಲಾಬಿ ಹೂಗಳ ತೋಟವನ್ನು ಹೊಂದಿರುವ ಈ ಸ್ಥಳವು "z" ಪಾಯಿಂಟ್ ಎಂಬ ವೀಕ್ಷಣಾ ಕೇಂದ್ರವನ್ನು ಹೊಂದಿದೆ. ಇಲ್ಲಿಂದ ಪಶ್ಚಿಮಘಟ್ಟದ ದಟ್ಟವಾದ ಗಿಡಮರಗಳ ಪಾಕ್ಷಿಕ ನೋಟವನ್ನು ನೋಡಬಹುದು.

ಕುದುರೆಮುಖ:

ಕುದುರೆಮುಖ:

ಚಿಕ್ಕಮಗಳೂರು ಪಟ್ಟಣದ ನೈರುತ್ಯ ದಿಕ್ಕಿಗೆ ಸುಮಾರು 95 ಕಿ.ಮೀ ಗಳ ಅಂತರದಲ್ಲಿ ನೆಲೆಸಿದೆ ಕರ್ನಾಟಕದ ಮತ್ತೊಂದು ಪ್ರಖ್ಯಾತ ಗಿರಿಧಾಮ ಕುದುರೆಮುಖ. ಈ ಗಿರಿಶಿಖರದ ಆಕಾರವು ಕುದುರೆಯ ಮುಖದ ಹಾಗೆ ಗೋಚರಿಸುವುದರಿಂದ ಇದಕ್ಕೆ ಕುದುರೆಮುಖವೆಂಬ ಹೆಸರು ಬಂದಿದೆ. ಮೊನಚಾದ ತುದಿಗಳು ಹಾಗು ಆಳವಾದ ಕಣಿವೆಗಳಿಂದ ಕೂಡಿರುವ ಈ ಶಿಖರವು ಅರೇಬಿಯನ್ ಸಮುದ್ರಕ್ಕೆ ಎದುರಾಭಿಮುಖವಾಗಿ ನೆಲೆ ನಿಂತಿದೆ. ಸಮುದ್ರ ಮಟ್ಟದಿಂದ ಸುಮಾರು 1894.3 ಮೀ ಎತ್ತರವಿರುವ ಈ ಗಿರಿ ಪ್ರದೇಶವು ಹೇರಳವಾಗಿ ಕಬ್ಬಿಣದ ಅದಿರುಗಳನ್ನು ತನ್ನ ಒಡಲಲ್ಲಿ ಹುದುಗಿಸಿಟ್ಟುಕೊಂಡಿದೆ. ಈ ಪ್ರದೇಶವನ್ನು ಚಾರಣಿಗರ ಸ್ವರ್ಗವೆಂದೆ ಹೇಳಬಹುದು.

ಬೆಳವಡಿ:

ಬೆಳವಡಿ:

ಇದೊಂದು ಐತಿಹಾಸಿಕ ಮಹತ್ವವುಳ್ಳ ಪ್ರದೇಶವಾಗಿದೆ. ಚಿಕ್ಕಮಗಳೂರಿನ ಆಗ್ನೇಯ ದಿಕ್ಕಿಗೆ ಕೇವಲ 25 ಕಿ.ಮೀ ದೂರದಲ್ಲಿರುವ ಈ ಪುರಾತನ ಹಳ್ಳಿಯು ಹಲವು ಐತಿಹಾಸಿಕ ಸ್ಮಾರಕಗಳನೊಳಗೊಂಡ ಸುಂದರ ಗ್ರಾಮವಾಗಿದೆ. ಇಲ್ಲಿರುವ ಮುಖ್ಯ ಪ್ರವಾಸಿ ಆಕರ್ಷಣೆ ಎಂದರೆ ವೀರನಾರಾಯಣ ದೇವಾಲಯ. ಹೊಯ್ಸಳ ವಾಸ್ತುಶಿಲ್ಪಕ್ಕೆ ಅದ್ಭುತವಾದ ಉದಾಹರಣೆಯಾಗಿ ಈ ಸ್ಮಾರಕವು ಕಂಗೊಳಿಸುತ್ತದೆ.

ಅಮೃತಪುರ:

ಅಮೃತಪುರ:

ಚಿಕ್ಕಮಗಳೂರಿನ ಉತ್ತರ ದಿಕ್ಕಿಗೆ ಸುಮಾರು 67 ಕಿ.ಮೀ ದೂರದಲ್ಲಿರುವ ಈ ಅಂರುತಪುರವು ತನ್ನಲ್ಲಿರುವ ಅಮೃತಪುರ ದೇವಾಲಯದಿಂದಾಗಿ ಹೆಸರುವಾಸಿಯಾಗಿದೆ. ಇಲ್ಲಿನ ಸೂಕ್ಷ್ಮವಾದ ಕೆತ್ತನೆಗಳು ಅಂದಿನ ಕರಕುಶಲತೆಗೆ ಹಿಡಿದ ಕೈಗನ್ನಡಿಯಾಗಿದೆ. ಅಂದಿನ್ಬ ಹೊಯ್ಸಳರ ಎರಡನೇಯ ಬಲ್ಲಾಳನಿಗೆ ಜನರಲ್ ಆಗಿದ್ದ ಅಮೃತೇಶ್ವರ ದಂಡನಾಯಕನಿಂದ 1196 ರಲ್ಲಿ ದೇವಾಲಯ ನಿರ್ಮಿಸಲ್ಪಟ್ಟಿದೆ. ನಮ್ಮ ಪುರಾತನ ಸಂಸ್ಕೃತಿಯನ್ನು ಕುರಿತು
ತಿಳಿಯಬಯಸುವವರಿಗೆ ಇದೊಂದು ನೋಡಲೇಬೇಕಾದ ಸ್ಥಳವಾಗಿದೆ.

ಶೃಂಗೇರಿ:

ಶೃಂಗೇರಿ:

ಚಿಕ್ಕಮಗಳೂರಿನ ಪಶ್ಚಿಮ ದಿಕ್ಕಿಗೆ ಸುಮಾರು 90 ಕಿ.ಮೀ ಗಳಷ್ಟು ಅಂತರದಲ್ಲಿ ನೆಲೆಸಿದೆ, ಆದಿ ಶಂಕರರು ಸ್ಥಾಪಿಸಿದ ಪೀಠಗಳಲ್ಲೊಂದಾದ ಪ್ರಖ್ಯಾತ ಧಾರ್ಮಿಕ ಶ್ರೀಕ್ಷೇತ್ರ ಶೃಂಗೇರಿ. 9 ನೇಯ ಶತಮಾನದಲ್ಲಿ ನಿರ್ಮಿಸಲಾದ ವಿದ್ಯಾಶಂಕರ ಹಾಗು ಶಾರದಾಂಬೆಯ ದೇಗುಲಗಳು ಮನೋಹರವಾದ ವಾಸ್ತುಶಿಲ್ಪದ ಪ್ರತಿರೂಪಗಳಾಗಿವೆ. ತುಂಗಭದ್ರಾ ನದಿ ತಟದ ಮೇಲಿರುವ ಈ ನೆಲೆಯ ವಿದ್ಯಾಶಂಕರ ದೇವಸ್ಥಾನವನ್ನು ಅತಿ ಕಲಾತ್ಮಕವಾಗಿ ಹಾಗು ಅಷ್ಟೆ ಮನೋಜ್ಞವಾಗಿ ರಚಿಸಲಾಗಿದೆ. ಇಲ್ಲಿರುವ 12 ಖಂಬಗಳು ಹಿಂದು ಧರ್ಮದ ಹನ್ನೆರಡು ರಾಶಿಗಳನ್ನು ಸೂಚಿಸುತ್ತಿದ್ದು ಪ್ರತಿ ತಿಂಗಳು ಸೂರ್ಯನ ರಶ್ಮಿಯು ಆಯಾ ತಿಂಗಳನ್ನು ಪ್ರತಿನಿಧಿಸುವ ರಾಶಿಯ ಖಂಬದ ಮೇಲೆ ಬೀಳುತ್ತದೆ.

ಹೊರನಾಡು:

ಹೊರನಾಡು:

ಹಿಂದು ಧರ್ಮದಲ್ಲಿ ಅನ್ನಕ್ಕೆ(ಊಟ) ವಿಶೇಷವಾದ ಮಹತ್ವವನ್ನು ನೀಡಲಾಗಿದೆ. ಅದಕ್ಕೆಂದೆ ಮೀಸಲಾದ ದೇವತೆಯು ನಮ್ಮಲ್ಲಿದ್ದಾಳೆ. ಅವಳನ್ನೆ ನಾವು ಅನ್ನಪೂರ್ಣೇಶ್ವರಿ ಎಂದು ಕರೆಯುತ್ತೇವೆ. ಈ ಅನ್ನಪೂರ್ಣೇಶ್ವರಿ ದೇವಿಯು ನೆಲೆ ನಿಂತ ಪ್ರದೇಶವೆ ಹೊರನಾಡು. ಈ ತಾಣವು ಚಿಕ್ಕಮಗಳೂರಿನ ನೈರುತ್ಯಕ್ಕೆ ಸುಮಾರು100 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದೆ. ಪ್ರಕೃತಿಯ ಸುಂದರ ಗಿರಿ ಪರ್ವತಗಳ ಮಧ್ಯದಲ್ಲಿ ನೆಲೆಸಿರುವ ಈ ಕ್ಷೇತ್ರವು ಪ್ರತಿದಿನವೂ ಭೇಟಿ ನೀಡುವ ಹಲವಾರು ಭಕ್ತ ಜನರಿಂದ ತುಂಬಿರುತ್ತದೆ.

ಭದ್ರಾ ವನ್ಯಜೀವಿಧಾಮ:

ಭದ್ರಾ ವನ್ಯಜೀವಿಧಾಮ:

ಚಿಕ್ಕಮಗಳೂರು ಪಟ್ಟಣದ ವಾಯವ್ಯ ದಿಕ್ಕಿಗೆ 38 ಕಿ.ಮೀ ಗಳ ದೂರದಲ್ಲಿ ನೆಲೆಸಿರುವ ಈ ಅಭಯಾರಣ್ಯವು ಸುತ್ತಲೂ ಗಿರಿಶಿಖರಗಳು, ಭದ್ರಾ ಹಾಗು ಅದರ ಉಪನದಿಗಳಿಂದ ಆವರಿಸಲ್ಪಟ್ಟಿದೆ. ಇದರ ಪಶ್ಚಿಮ ಭಾಗದಲ್ಲಿ ಭದ್ರಾ ಜಲಾಶಯವನ್ನು ಕಾಣಬಹುದು. ಆನೆ, ಹುಲಿ, ಚಿರತೆ, ಕರಡಿ, ಜಿಂಕೆ ಹಾಗು ಮುಳ್ಳುಹಂದಿಗಳಂತಹ ಪ್ರಾಣಿಗಳ ಜೊತೆಗೆ ಹಲವು ಬಗೆಯ ಪಕ್ಷಿಗಳನ್ನು ಇಲ್ಲಿ ಕಾಣಬಹುದಾಗಿದೆ. ಈ ಎಲ್ಲ ಪ್ರಾಣಿಗಳನ್ನು ವಾಹನದಲ್ಲಿ ಸುಮಾರು 150 ಕಿ.ಮೀ ಉದ್ದವಿರುವ ಹಾಗು ಈ ಅಭಯಾರಣ್ಯದೊಳಗೆ ನಿರ್ಮಿಸಲಾಗಿರುವ ಮಾರ್ಗದ ಮೂಲಕ ಚಲಿಸುತ್ತ ಕಾಣಬಹುದು.

ಕಲ್ಲತಿಗಿರಿ ಜಲಪಾತ:

ಕಲ್ಲತಿಗಿರಿ ಜಲಪಾತ:

ಚಿಕ್ಕಮಗಳೂರಿನಲ್ಲಿರುವ ಕೆಮ್ಮಣ್ಣುಗುಂಡಿಯಿಂದ ಕೇವಲ 10 ಕಿ.ಮೀ ದೂರದಲ್ಲಿ ಈ ಜಲಪಾತವನ್ನು ನೋಡಬಹುದು. ಕಾಳಹಸ್ತಿ ಜಲಪಾತವೆಂದೂ ಕರೆಯಲ್ಪಡುವ ಈ ಜಲಪಾತದ ಶುಭ್ರವಾದ ನೀರು ಚಂದ್ರ ದ್ರೋಣ ಗಿರಿಯ ತಪ್ಪಲಿನಿಂದ ಸುಮಾರು 122 ಮೀ ಎತ್ತರದಿಂದ ವಸುಂಧರೆಯ ಮಡಿಲಿಗೆ ಧುಮುಕುತ್ತದೆ. ಈ ಚೆಂದದ ಅನುಭವವನ್ನು ವರ್ಣಿಸುವುದು ಅಸಾಧ್ಯ ಹಾಗು ಸ್ವತಃ ನೋಡುವುದೆ ಸಮಂಜಸ.

ಹೆಬ್ಬೆ ಜಲಪಾತ:

ಹೆಬ್ಬೆ ಜಲಪಾತ:

ಕೆಮ್ಮಣ್ಣುಗುಂಡಿಯಿಂದ 10 ಕಿ.ಮೀ ಗೂ ಅಧಿಕ ದೂರದಲ್ಲಿ ಕ್ರಮಿಸಿದಾಗ ಈ ಸುಂದರವಾದ ಹೆಬ್ಬೆ ಜಲಪಾತವನ್ನು ಭೇಟಿ ಮಾಡಬಹುದು. ಕಾಫಿ ತೋಟದಲ್ಲಿ ನೆಲೆಸಿರುವ ಈ ಜಲಪಾತ ತಾಣಕ್ಕೆ ವಾಹನ(ದ್ವಿಚಕ್ರ ಹಾಗು ಕಾರು) ಅಥವಾ ನಡಿಗೆಯ ಮೂಲಕ ಸುಲಭವಾಗಿ ತಲುಪಬಹುದು. 168 ಮೀ ಎತ್ತರದಿಂದು ಧುಮುಕುವ ನೀರು ಎರಡು ಕವಲುಗಳಲ್ಲಿ ಒಡೆದು ದೊಡ್ಡ ಹೆಬ್ಬೆ ಹಾಗು ಚಿಕ್ಕ ಹೆಬ್ಬೆಗಳಾಗಿ ಭುವಿಗೆ ಬೀಳುತ್ತವೆ.

ಅಯ್ಯನಕೆರೆ:

ಅಯ್ಯನಕೆರೆ:

ಚಿಕ್ಕಮಗಳೂರು ಪಟ್ಟಣದ ಈಶಾನ್ಯ ದಿಕ್ಕಿಗೆ ಸುಮಾರು 18 ಕಿ.ಮೀ ದೂರದಲ್ಲಿರುವ ಈ ಪುರಾತನ ಕೆರೆಯು ಅಂದಿನ ಸಕ್ರೆಪಟ್ಟಣದ ಮುಖ್ಯಸ್ಥನಾಗಿದ್ದ ರುಕ್ಮಾಂಗದನಿಂದ ನಿರ್ಮಿಸಲ್ಪಟ್ಟಿದೆ ಎಂದು ನಂಬಲಾಗಿದೆ. ಇದು ಕೂಡ ನೋಡಲು ಅಥವಾ ಭೇಟಿ ನೀಡಲು ಒಂದು ಗಮ್ಯವಾದ ಪ್ರವಾಸಿ ತಾಣವಾಗಿದೆ.

ಕಳಸ:

ಕಳಸ:

ಚಿಕ್ಕಮಗಳೂರಿನ ನೈರುತ್ಯ ದಿಕ್ಕಿಗೆ 92 ಕಿ.ಮೀ ದೂರದಲ್ಲಿ ನೆಲೆಸಿದೆ ಮತ್ತೊಂದು ಪ್ರಕೃತಿ ಸೌಂದರ್ಯವನ್ನು ಹೊತ್ತು ನಿಂತಿರುವ ಧಾರ್ಮಿಕ ಕ್ಷೇತ್ರ ಕಳಸ. ಭದ್ರಾ ನದಿ ತಟದಲ್ಲಿ ನೆಲೆ ನಿಂತಿರುವ ಈ ತಾಣವು ಭದ್ರಾ ನದಿ ತಟದ ಪಂಚ ಕ್ಷೇತ್ರಗಳಲ್ಲೊಂದಾಗಿದೆ. ಇಲ್ಲಿನ ಪುಟ್ಟ ಬೆಟ್ಟದ ಮೇಲೆ ಶಿವನ ರೂಪ ಕಳಸೇಶ್ವರನನ್ನು ಪೂಜಿಸಲಾಗುತ್ತದೆ. ಇಲ್ಲಿ ಪಂಚತೀರ್ಥಗಳಿದ್ದು ಅವುಗಳಲ್ಲಿ ಒಂದು ತೀರ್ಥದ ಬಳಿ ಮಧ್ವಾಚಾರ್ಯ ಬಂಡೆಯನ್ನು ಕಾಣಬಹುದು. ದ್ವೈತ ಮತದ ಸ್ಥಾಪಕರಾದ ಮಧ್ವಾಚಾರ್ಯರು ಈ ಬಂಡೆಯನ್ನು ಇಲ್ಲಿ ಪ್ರತಿಷ್ಠಾಪಿಸಿದ್ದರೆಂದು ನಂಬಲಾಗಿದ್ದು ಅವರ ವಿಗ್ರಹವನ್ನು ಈ ಬಂಡೆಯ ಮೇಲ್ಭಾಘದಲ್ಲಿ ಕೆತ್ತಲಾಗಿದೆ.

Read more about: hill station chikmagalur
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X