ಭಾರತ ದೇಶವು ವಿವಿಧ ಸಂಸ್ಕೃತಿ ಸಂಪ್ರದಾಯಗಳನ್ನಾಚರಿಸುವ ಜಗತ್ತಿನ ಶ್ರೀಮಂತ ನಾಡು. ಉತ್ತರದ ಕಾಶ್ಮಿರದಿಂದ ಹಿಡಿದು ದಕ್ಷಿಣದ ಕನ್ಯಾಕುಮಾರಿಯವರೆಗೆ ಹಲವು ಬಗೆಯ ಪರಂಪರೆ, ಆಚಾರ - ವಿಚಾರ, ನಡೆ ನುಡಿಗಳನ್ನು ದೇಶದ ಎಲ್ಲ ರಾಜ್ಯಗಳಲ್ಲಿ ಕಾಣಬಹುದಾಗಿದೆ. ಅವುಗಳಲ್ಲೂ ಕೂಡ ಕೆಲವು ಹಬ್ಬ ಹರಿದಿನಗಳಂತೂ ವಿಶೇಷವಾಗಿ ನಿರ್ದಿಷ್ಟ ಸಮಯದಲ್ಲೊ ಅಥವಾ ಇಷ್ಟು ವರ್ಷಗಳಿಗೊಮ್ಮೊ ಆಚರಿಸಲ್ಪಡುತ್ತವೆ. ಹಾಸನದ ಹಾಸನಾಂಬೆಯು ವರ್ಷಕ್ಕೊಮ್ಮೆ ದೀಪಾವಳಿಯ ಸಂದರ್ಭದಲ್ಲಿ ಮಾತ್ರ ದರುಶನ ನೀಡಿದರೆ, ಶ್ರವಣಬೆಳಗೊಳದ ಗೊಮ್ಮಟೇಶ್ವರನ ವಿಗ್ರಹವು 12 ವರುಷಗಳಿಗೊಮ್ಮೆ ಮಹಾ ಮಸ್ತಕಾಭಿಷೇಕವನ್ನು ಕಾಣುತ್ತದೆ.
ಇದೇ ರೀತಿಯಾಗಿ ಕರ್ನಾಟಕದ ಪುರಾತನ ನಗರಿ ತಲಕಾಡಿನಲ್ಲಿ ನೆಲೆಸಿರುವ ಪಂಚ ರೂಪಗಳ ಈಶ್ವರನ ಪಂಚ ಲಿಂಗ ದೇವಸ್ಥಾನಗಳೂ ಕೂಡ ಹಲವು ವರ್ಷಗಳಿಗೊಮ್ಮೆ ಪಂಚಲಿಂಗ ದರ್ಶನ ಮಹೋತ್ಸವವನ್ನು ಕಾಣುತ್ತದೆ. 2006 ರ ನಂತರ ಮತ್ತೊಮ್ಮೆ ಈ ಉತ್ಸವವು 2013 ರ ನವಂಬರ್ 28 ರಿಂದ ಡಿಸೆಂಬರ್ 2 ರ ವರೆಗೆ ಆಯೋಜನೆಗೊಂಡಿದೆ. ಸಹಸ್ರಾರು ಭಕ್ತ ಜನ ಭೇಟಿ ನೀಡುವ ಈ ತಲಕಾಡು ಸ್ಥಳವು ಬೆಂಗಳೂರಿನ ನೈರುತ್ಯ ಭಾಗಕ್ಕೆ ಸುಮಾರು 130 ಕಿ.ಮೀ ದೂರದಲ್ಲಿ ನೆಲೆಸಿದ್ದು, ಮೈಸೂರಿನಿಂದ ಕೇವಲ 45 ಕಿ.ಮೀ ದೂರದಲ್ಲಿದೆ.

ಚಿತ್ರಕೃಪೆ: ದಿನೇಶಕನ್ನಂಬಾಡಿ
ಸಾಂಪ್ರದಾಯಿಕ ಪೂಜಾ ವಿಧಿ ವಿಧಾನ
ಈ ಉತ್ಸವದ ಪೂಜಾ ವಿಧಿ ವಿಧಾನಗಳನ್ನು ಪ್ರಾರಂಭಿಸುವ ಸಮಯವನ್ನು ಹಿಂದು ಪಂಚಾಂಗವನ್ನು ನೋಡಿ ನಿಗದಿಪಡಿಸಲಾಗುತ್ತದೆ. ಮಂಗಳಕರ ಅಥವಾ ಶ್ರೇಯಸ್ಕರವಾದ ಕುಹುಮುಹೂರತ ಉಂಟಾಗುವ ಸಂದರ್ಭದಲ್ಲಿ ಆಚರಣೆಯನ್ನು ಪ್ರಾರಂಭಿಸಲಾಗುತ್ತದೆ. ಇದು ಸಂದರ್ಭವು ಸಾಮಾನ್ಯವಾಗಿ ಏಳು ವರ್ಷಗಳಿಗೊಮ್ಮೆ ವಿಶಾಖಾ ನಕ್ಷತ್ರದ ಕೃಷ್ಣಪಕ್ಷ ಅಮವಾಸ್ಯೆಯ ಕಾರ್ತಿಕ ಸೋಮವಾರದಂದು ಜರುಗುತ್ತದೆ. ಹಿಂದೊಮ್ಮೆ ಈ ದರ್ಶನ ಉತ್ಸವವವು 2006 ರಲ್ಲಿ ಜರುಗಿದ್ದು ಅದರ ಹಿಂದಿನ ಉತ್ಸವವು 13 ವರ್ಷಗಳ ಹಿಂದೆ ಏರ್ಪಟ್ಟಿತ್ತು.
ಕಾವೇರಿ ನದಿ ತಟದ, ಲಕ್ಷಗಳ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುವ ಈ ಪಂಚಲಿಂಗೇಶ್ವರ ದೇವಸ್ಥಾನಗಳೆಂದರೆ ಶ್ರೀ ವೈದ್ಯೇಶ್ವರ, ಶ್ರೀ ಪಾತಾಳೇಶ್ವರ, ಶ್ರೀ ಮರುಳೇಶ್ವರ, ಶ್ರೀ ಅರಕೇಶ್ವರ ಹಾಗು ಶ್ರೀ ಮುದುಕುತೊರೆ ಮಲ್ಲಿಕಾರ್ಜುನೇಶ್ವರ. ಕುತೂಹಲಕರ ಸಂಗತಿಯೆಂದರೆ ಈ ಐದೂ ಲಿಂಗರೂಪಿ ಶಿವನ ದೇವಸ್ಥಾನಗಳಲ್ಲಿ ಪೂಜೆಯು ಏಕಕಾಲದಲ್ಲಿ ಪ್ರಾರಂಭಗೊಳ್ಳುತ್ತದೆ. ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರಚಕರು ಇತರೆ 10 ಮಂದಿ ಅರ್ಚಕರ ಜೊತೆಗೂಡಿ ನಿಗದಿಪಡಿಸಲಾದ ಸಮಯದಲ್ಲಿ ವೈದ್ಯೇಶ್ವರ ದೇವಸ್ಥಾನದ ಬಳಿಯಿರುವ ಗೋಕರ್ಣ ತೀರ್ಥ ಕಲ್ಯಾಣಿ ಅಥವಾ ಪುಷ್ಕರಣಿಯಲ್ಲಿ ಮಿಂದು ಅಗ್ರೋದಕ (ಪವಿತ್ರ ನೀರನ್ನು) ತಂದು ಗಂಗಾ ಪೂಜೆಯನ್ನು ನೆರವೇರಿಸುತ್ತಾರೆ.

ಈ ಸಂದರ್ಭದಲ್ಲಿ ಶಕ್ತಿ ಗಣಪತಿ, ಮನೋನ್ಮಣಿ ದೇವಿ, ಚಂಡಿಕೇಶ್ವರ ಹಾಗು ವೀರಭದ್ರಸ್ವಾಮಿಗಳಿಗೆ ಪೂಜೆಯನ್ನು ಸಲ್ಲಿಸಲಾಗುತ್ತದೆ. ನಂತರ ಅರಕೇಶ್ವರ, ಪಾತಾಳೇಶ್ವರ, ಮರಳೇಶ್ವರ ಹಾಗು ಮಲ್ಲಿಕಾರ್ಜುನೇಶ್ವರರ ಪೂಜೆಯನ್ನು ಕೈಗೊಳ್ಳಲಾಗುತ್ತದೆ. ಐದು ಪಂಚಲಿಂಗಗಳ ಪೂಜೆಯ ನಂತರ ಗಜಾರೋಹಣ, ಶ್ರೀ ದಿವ್ಯ ಬ್ರಹ್ಮ ರಥೋತ್ಸವಗಳು ಏರ್ಪಟ್ಟು, ಮರುದಿನ ಶ್ರೀ ಶಯನೋತ್ಸವವನ್ನು ಕೈಗೊಳ್ಳಲಾಗುತ್ತದೆ.
ಮೂರನೆಯ ದಿನಕ್ಕೆ ತೆಪ್ಪೋತ್ಸವ ಹಾಗು ನಾಲ್ಕನೇಯ ದಿನದಂದು ಪೂರ್ವಕ ಕೈಲಾಸನವಹನಅಳು ಜರುಗುತ್ತವೆ. ಒಟ್ಟು ಐದು ದಿನಗಳವರೆಗೆ ಜರುಗುವ ಈ ಉತ್ಸವವು ಅಂತಿಮವಾಗಿ ನಂದಿ ವಾಹನೋತ್ಸವದ ಮೂಲಕ ಸಮಾಪ್ತಿಗೊಳ್ಳುತ್ತದೆ.
ತಲಕಾಡು: ಮರಳಿನ ಕೊರಳಿನಲ್ಲಿ
ಕದಂಬರು, ಚಾಲುಕ್ಯರು, ಚೋಳರು ಹಾಗು ರಾಷ್ಟ್ರಕೂಟರು ಆಳಿದ ಕಾವೇರಿ ನದಿ ದಂಡೆಯ ಈ ನಾಡು ಮರಳಿನ ಒಡಲಿನಲ್ಲಿ ಮುಚ್ಚಿರುವ ಸುಂದರ ಹಾಗು ಅಷ್ಟೆ ಧಾರ್ಮಿಕವಾಗಿ ಪ್ರಮುಖವಾಗಿರುವ ಕ್ಷೇತ್ರ. ಇಲ್ಲಿ ಕಂಡುಬರುವ ಪುರಾತನ ದೇವಾಲಯಗಳು ವಾಸ್ತು ಶಿಲ್ಪಗಳ ಅಚ್ಚರಿ ಎಂದರೂ ತಪ್ಪಾಗಲಾರದು. ವೈದ್ಯೇಶ್ವರ ದೇವಾಲಯದ ಗೋಡೆಗಳಲ್ಲಿರುವ ಕಲ್ಲಿನಲ್ಲಿ ಕೆತ್ತಲಾದ ಐದು ಹೆಡೆಯ ಸರ್ಪ, ಯಾವುದೇ ಜೋಡಣೆಯಿಲ್ಲದೆ ನಿರ್ಮಿಸಲಾಗಿರುವ ಕಲ್ಲಿನ ಸರ್ಪಣಿ, ಕಲ್ಲಿನ ಪಾತ್ರೆಗಳು ನೋಡುಗರನ್ನು ಮೂಕವಿಸ್ಮಿತರನ್ನಾಗಿ ಮಾಡಿ ಅಂದಿನ ಕುಶಲ ಕರ್ಮಿಗಳ ಕಲಾ ನೈಪುಣ್ಯತೆಯನ್ನು ಎತ್ತಿ ತೋರುತ್ತವೆ.

ಚಿತ್ರಕೃಪೆ: ಹರಿಜಿಬಿಹೆಚ್‍ವಿ
ತಲಕಾಡು ಶಾಪ:
ಇದರ ಹಿಂದಿರುವ ಸ್ವಾರಸ್ಯಕರ ಕಥೆಯು ಹೀಗೆ ಸಾಗುತ್ತದೆ: ಹಿಂದೊಮ್ಮೆ 16 ನೆಯ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಪ್ರತಿನಿಧಿಯಾಗಿ ಶ್ರೀರಂಗರಾಯನು ಇಲ್ಲಿ ವಾಸಿಸುತ್ತಿದ್ದನು. ಅವನ ಮಡದಿಯಾದ ಅಲಮೇಲಮ್ಮಳು ಶ್ರೀರಂಗಪಟ್ಟಣದ ಶ್ರೀರಂಗನಾಯಕಿ ದೇವಿಯ ಅಲಂಕಾರಕ್ಕಾಗಿ ಪ್ರತಿ ಶುಕ್ರವಾರದಂದು ತನ್ನ ಆಭರಣಗಳನ್ನು ನೀಡುತ್ತಿದ್ದಳು. ಕಾಲಾಂತರದಲ್ಲಿ ಶ್ರೀರಂಗರಾಯನು ತೀರಿ ಹೋದಾಗ ಮೈಸೂರಿನ ರಾಜಾಧಿಕಾರಿಗಳು ಆಭರಣಗಳನ್ನು ನೀಡುವಂತೆ ಅವಳಿಗೆ ಪೀಡಿಸತೊಡಗಿದರು.
ಅಂತಿಮವಾಗಿ ಮೈಸೂರು ಅರಸನು ಅವಳ ಆಭರಣಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ತನ್ನ ಸೈನಿಕರಿಗೆ ಆದೇಶಿಸಿದಾಗ ಅಸಹಾಯಕಳಾದ ಅಲಮೇಲಮ್ಮ ಮಾಲಿಂಗಿ ಸಮೀಪದ ಕಾವೇರಿ ನದಿಯಲ್ಲಿ ಪ್ರಾಣ ತ್ಯಜಿಸಲು ಹಾರಿದಳು ಹಾಗು ಮುಳುಗುವಾಗ "ತಲಕಾಡು ಮರಳಾಗಿ, ಮಾಲಿಂಗಿ ಮಡುವಾಗಿ, ಮೈಸೂರು ದೊರೆಗೆ ಮಕ್ಕಳಾಗದೆ ಹೋಗಲಿ" ಎಂದು ಶಾಪವನ್ನಿತ್ತಳು. ಅದಕ್ಕೆ ಪೂರಕವೆಂಬಂತೆ ಇಂದು ತಲಕಾಡು ಹೆಚ್ಚು ಕಡಿಮೆ ಭಾಗ ಮರಳಿನಲ್ಲಿ ಮುಚ್ಚಿಹೋಗಿದ್ದು, ಮಾಲಿಂಗಿ ಸನೀಹದ ಕಾವೇರಿ ನದಿಯಲ್ಲಿ ಸುಳಿಗಳನ್ನು ಕಾಣಬಹುದಾಗಿದೆ.

ತೆರಳುವ ಬಗೆ: (ಬೆಂಗಳೂರಿನಿಂದ)
ಮೈಸೂರು ಜಿಲ್ಲೆಯ ತಲಕಾಡಿಗೆ ಈ ಕೆಳಗಿನ ಮಾರ್ಗದ ಮೂಲಕ ತಲುಪಬಹುದಾಗಿದೆ. ಸಾಮಾನ್ಯವಾಗಿ ಬೆಂಗಳೂರು ಬಸ್ ನಿಲ್ದಾಣದಿಂದ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಹಾಗು ಕೆ.ಆರ್ ಮಾರುಕಟ್ಟೆಯಿಂದ ಖಾಸಗಿ ಬಸ್ಸುಗಳು ಮಳವಳ್ಳಿಯವರೆಗೆ ಸಾಕಷ್ಟು ಲಭ್ಯವಿದೆ. ಮಳವಳ್ಳಿಯಿಂದ ತಲಕಾಡುವಿಗೆ ನಿಯಮಿತ ಸಂಖ್ಯೆಗಳ ಬಸ್ ಸಂಚಾರವಿದೆ. ಅಲ್ಲದೆ ಬೆಂಗಳೂರು - ಮೈಸೂರು ರಸ್ತೆಯ ಮುಖಾಂತರ ಮಳವಳ್ಳಿಗೆ ತಲುಪಿ ಅಲ್ಲಿಂದ ತಲಕಾಡುವಿಗೆ ತಲುಪಬಹುದಾಗಿದೆ.
ಬೆಂಗಳೂರು - ಕನಕಪುರ - ಮಳವಳ್ಳಿ - ತಲಕಾಡು


Click it and Unblock the Notifications
















