Search
  • Follow NativePlanet
Share
» »ನವತಿರುಪತಿಗಳ ಶ್ರೀವೈಕುಂಠನಾಥ ದೇವಾಲಯ!

ನವತಿರುಪತಿಗಳ ಶ್ರೀವೈಕುಂಠನಾಥ ದೇವಾಲಯ!

By Vijay

ನವತಿರುಪತಿ ಕ್ಷೇತ್ರಗಳ ಪೈಕಿ ಮೊದಲನೆಯ ತಿರುಪತಿ ಕ್ಷೇತ್ರ ಇದಾಗಿದೆ. ಅಲ್ಲದೆ ಈ ಕ್ಷೇತ್ರದಲ್ಲಿರುವ ಕೈಲಾಸನಾಥರ್ ದೇವಾಲಯವು ನವಕೈಲಾಸಗಳಲ್ಲೊಂದಾಗಿದೆ. ಅಂದರೆ ಶಿವ ಹಾಗೂ ವಿಷ್ಣು ಇಬ್ಬರಿಗೂ ಪ್ರೀಯವಾದ ಸ್ಥಳ ಇದಾಗಿದೆ. ತಾಮಿರಬರಣಿ ನದಿ ತಟದಲ್ಲಿ ನೆಲೆಸಿರುವ ಈ ಕ್ಷೇತ್ರವು ಶ್ರೀವೈಕುಂಠನಾಥ ಪೆರುಮಾಳ ದೇವಾಲಯಕ್ಕೆ ಮನೆಯಾಗಿದೆ.

ಇಲ್ಲಿ ನೆಲೆ ಶ್ರೀವಿಷ್ಣು ನೆಲೆಸಿರುವ ಹಿನ್ನೆಲೆಯೂ ಸಹ ಬಲು ರೋಚಕವಾಗಿದೆ. ಬಹು ಹಿಂದೆ ಸೋಮುಕನೆಂಬ ರಾಕ್ಷಸನಿದ್ದ. ಅವನಿಗೆ ಬ್ರಹ್ಮನ ಬಳಿ ಇದ್ದ ನಾಲ್ಕೂ ವೇದಗಳನ್ನು ವಶಪಡಿಸಿಕೊಂಡು ತನ್ನದೆ ಆದ ಸಾಮ್ರಾಜ್ಯ ನಿರ್ಮಾಣ ಮಾಡಬೇಕೆಂಬ ಆಸೆಯಿತ್ತು. ಆ ಕಾರಣದಿಂದಾಗಿ ಅವನೊಮ್ಮೆ ಸಮಯ ಸಾಧಿಸಿ ಆ ನಾಲ್ಕು ವೇದಗಳನ್ನು ಅಪಹರಿಸಿಯೆ ಬಿಟ್ಟ. ಬ್ರಹ್ಮನಿಗೆ ಏನೂ ಮಾಡಲಾಗಲಿಲ್ಲ.

ನವತಿರುಪತಿಗಳ ಶ್ರೀವೈಕುಂಠನಾಥ ದೇವಾಲಯ!

ಚಿತ್ರಕೃಪೆ: sowrirajan s

ಆದರೆ ಬ್ರಹ್ಮನು ಸುಮ್ಮನೆ ಕುಳಿತುಕೊಳ್ಳುವ ಹಾಗೆಯೂ ಇಲ್ಲ. ಕೊನೆಗೆ ವಿಷ್ಣುವಿನನ್ನು ಕುರಿತು ತಪಸ್ಸು ಮಾಡಲು ಈ ಕ್ಷೇತ್ರಕ್ಕೆ ಬಂದು, ತಾಮಿರಭರಣಿ ನದಿಯ ತಟದ ಮೇಲೆ ಕುಳಿತು ತಪಸ್ಸನ್ನಾಚರಿಸತೊಡಗಿದ. ಬ್ರಹ್ಮನ ಕಠಿಣ ತಪಸ್ಸಿನಿಂದ ಪ್ರಸನ್ನನಾದ ವಿಷ್ಣು ಪ್ರತ್ಯಕ್ಷನಾಗಿ ಬ್ರಹ್ಮನನ್ನು ವಿಚಾರಿಸಿದ.

ಬ್ರಹ್ಮನಿಂದ ವಿಷಯ ತಿಳಿದು, ವಿಷ್ಣು ಸ್ವತಃ ತಾನೆ ಆ ನಾಲ್ಕು ವೇದಗಳನ್ನು ಹಿಂಪಡೆಯುವ ಭರವಸೆಯನ್ನು ಬ್ರಹ್ಮನಿಗೆ ನೀಡುತ್ತ, ಸೋಮುಕನೊಡನೆ ಘೋರ ಯುದ್ಧ ಮಾಡಿ ಅವನಿಂದ ವೇದಗಳನ್ನು ಹಿಂಪಡೆದನು. ವೇದಗಳು ಮತ್ತೆ ಸುಸೂತ್ರವಾಗಿ ದೊರಕಿದ ಕಾರಣ ವಿಷ್ಣು ಸಂತಸಗೊಂಡು ಈ ಕ್ಷೇತ್ರವನ್ನು ಶ್ರೀವೈಕುಂಠ ಮಾಡಿ ಇಲ್ಲಿ ವೈಕುಂಠನಾಥನಾಗಿ ನೆಲೆಸಿದನೆಂಬ ಪ್ರತೀತಿಯಿದೆ.

ನವತಿರುಪತಿಗಳ ಶ್ರೀವೈಕುಂಠನಾಥ ದೇವಾಲಯ!

ಚಿತ್ರಕೃಪೆ: Ssriram mt

ಇನ್ನೊಂದು ಕಥೆಯ ಪ್ರಕಾರ, ಪಾಂಡ್ಯ ರಾಜನ ಆಡಳಿತವಿದ್ದ ಸಂದರ್ಭದಲ್ಲಿ ಇಲ್ಲಿನ ವಿಷ್ಣು ದೇವಾಲಯವು ಬಹುವರ್ಷಗಳ ಕಾಲ ಯಾರ ನಿರ್ವಹಣೆಯೂ ಇಲ್ಲದೆ ಭೂಗತವಾಗಿತ್ತು. ಆ ಸಂದರ್ಭದಲ್ಲಿ ರಾಜನ ಒಡೆತನದಲ್ಲಿದ್ದ ಹಸುಗಳು ಇಲ್ಲಿ ಮೇಯುತ್ತಿದ್ದವು. ಅವುಗಳಲ್ಲಿ ಒಂದು ಹಸು ಮಾತ್ರ ನಿರ್ದಿಷ್ಟವಾದ ಸ್ಥಳವೊಂದಕ್ಕೆ ಹೋಗಿ ತನ್ನ ಹಾಲಿನಿಂದ ನಾರಾಯಣನಿಗೆ ನಿತ್ಯವೂ ಅಭಿಷೇಕ ಮಾಡುತ್ತಿತ್ತು.

ಎಲ್ಲ ಆಕಳುಗಳಲ್ಲಿ ಈ ಒಂದು ಆಕಳು ಮಾತ್ರ ಹಾಲು ಕೊಡದ ಕಾರಣಕ್ಕೆ, ಇದರಲ್ಲಿ ದನಗಾಹಿಗಳ ಕೈವಾಡವೇನಾದರೂ ಇರಬಹುದೆಂದು ರಾಜ ಊಹಿಸಿ ತನ್ನ ಗೂಢಚರ್ಯರನ್ನು ತನಿಖೆ ನಡೆಸಲು ನೇಮಿಸಿದ. ಅದರಂತೆ ಗೂಡಚರ್ಯರು ನಡೆಯುತ್ತಿದ್ದ ಪ್ರಸಂಗಗಳನ್ನು ಸಂಗ್ರಹಿಸಿ ರಾಜನಿಗೆ ಬಂದು ಹೇಳಿದರು.

ನವತಿರುಪತಿಗಳ ಶ್ರೀವೈಕುಂಠನಾಥ ದೇವಾಲಯ!

ಚಿತ್ರಕೃಪೆ: Booradleyp1

ರಾಜನು ಆಶ್ಚರ್ಯಚಕಿತನಾಗಿ ಆಕಳು ಹಾಲು ನೀಡುತ್ತಿದ್ದ ಜಾಗವನ್ನು ಅಗೆಸಲು ಸೂಚಿಸಿದ. ಅದರಂತೆ ಭೂಮಿಯನ್ನು ಅಗೆದಾಗ ಅಲ್ಲಿದ್ದ ವಿಷ್ಣುವಿನ ವಿಗ್ರಹ ಕಂಡಿತು. ಇದರಿಂದ ಸಂತಸಗೊಂಡ ರಾಜನು ಅಲ್ಲಿಯೆ ದೊಡ್ಡದಾದ ದೇವಾಲಯವನ್ನು ನಿರ್ಮಿಸಿದ. ಹೀಗೆ ಹಾಲಿನ ವಿಷಯದಿಂದ ಉನ್ನತಿಗೆ ಬಂದ ನಾರಾಯಣನನ್ನು ಪಾಲ್ ಪಾಂಡ್ಯ ದೇವಾಲಯ ಎಂದು ಕರೆಯಲಾಯಿತು. ತಮಿಳುನಲ್ಲಿ ಪಾಲ್ ಎಂದರೆ ಹಾಲು.

ಮತ್ತೊಂದು ಕಥೆಯ ಪ್ರಕಾರ, ಈ ಪ್ರಾಂತ್ಯದಲ್ಲಿ ಕಾಲದೂಷಣನೆಂಬ ಕಳ್ಳನಿದ್ದ. ಈತ ಕಳ್ಳನಾಗಿದ್ದರೂ ಸಹ ವಿಷ್ಣುವಿನ ಪರಮಭಕ್ತ. ಅಲ್ಲದೆ ದುರಾಸೆಯಿಂದ ಹಣ ಸಂಗ್ರಹಿಸಿ ಶ್ರೀಮಂತರಾದವರ ಹಣವನ್ನು ಮಾತ್ರ ಕದಿಯುತ್ತಿದ್ದ ಹಾಗೂ ಅದನ್ನು ಬಡವರಲ್ಲಿ ಹಂಚುತ್ತಿದ್ದ. ಇವನ ಹಾವಳಿ ಜಾಸ್ತಿಯಾದಾಗ ಎಲ್ಲರೂ ರಾಜನಲ್ಲಿ ಅಳಲು ತೋಡಿಕೊಂಡರು.

ನವತಿರುಪತಿಗಳ ಶ್ರೀವೈಕುಂಠನಾಥ ದೇವಾಲಯ!

ಚಿತ್ರಕೃಪೆ: Ssriram mt

ರಾಜನು ಈ ಕಳ್ಳನನ್ನು ಹಿಡಿಯುವ ಉದ್ದೇಶದಿಂದ ತಂಡವೊಂದನ್ನು ರಚಿಸಿ ತಂತ್ರಗಾರಿಕೆಯನ್ನು ರೂಪಿಸಿದ. ನಂತರ ಒಂದೊಮ್ಮೆ ಕಳ್ಳ ಹಾಗೂ ಅವನ ತಂಡದವರಿದ್ದ ಸ್ಥಳಕ್ಕೆ ರಾಜನ ಸೈನಿಕರು ಹಟಾತ್ತನೆ ದಾಳಿ ನಡೆಸಿದರು. ಇದನ್ನು ಕಂಡ ಕಳ್ಳ ತಾನು ಸಿಕ್ಕರೆ ತನ್ನನ್ನು ಕೊಲ್ಲುವುದು ಖಚಿತವೆಂದೂ ಇದರಿಂದ ಬಡವರಿಗೆ ಮತ್ತೆ ಅನ್ಯಾಯವಾಗಬಹುದೆಂದೂ ವಿಷ್ಣುವಿನನ್ನು ಕುರಿತು ಕಾಪಾಡಲು ಬೇಡಿಕೊಂಡ.

ಅಚ್ಚರಿ ಎಂಬಂತೆ ಆ ಕಳ್ಳನೊಬ್ಬನನ್ನು ಹೊರತುಪಡಿಸಿ ಅವನ ಎಲ್ಲ ಸದಸ್ಯರು ಸೈನಿಕರಿಗೆ ಸಿಕ್ಕಿ ಬಿದ್ದಿದ್ದರು. ಅವನನ್ನು ಮಾತ್ರ ಯಾರೂ ಹಿಡೀದಿರಲಿಲ್ಲ. ಕಾರಣ ಸ್ವತಃ ವಿಷ್ಣು ಅವನ ವೇಷ ತೊಟ್ಟು ರಾಜನ ಮುಂದೆ ಶರಣಾಗಿದ್ದ. ಆ ರಾತ್ರಿ ವಿಷ್ಣು ರಾಜನ ಕನಸಿನಲ್ಲಿ ಬಂದು ಆ ಕಳ್ಳನ ಕುರಿತು ಸಮಗ್ರ ಮಾಹಿತಿ ನೀಡಿದ. ಮರುದಿನ ರಾಜನು ಆ ಕಳ್ಳನನ್ನು ಮುಂದೆಂದೂ ಕಳ್ಳತನಾ ಮಾಡಬಾರದೆಂದೂ ಅವನನ್ನು ಬಿಡುಗಡೆಗೊಳಿಸಿದ.

ತಿಮ್ಮಪ್ಪನ ದರ್ಶನ ಯಾರಿಗೆ ಬೇಕಿಲ್ಲ ಹೇಳಿ, ನೀವೂ ಹೋಗಿ

ಈ ಒಂದು ಘಟನೆಯಿಂದಾಗಿಯೂ ಸಹ ಇಲ್ಲಿ ನೆಲೆಸಿರುವ ವಿಷ್ಣು ಕಳ್ಳಪಿರನ್ ಎಂಬ ನಾಮದಿಂದಲೂ ಹೆಸರುವಾಸಿಯಾದ. ಈ ರೀತಿಯಾಗಿ ಹಲವು ವಿಶೇಷತೆಗಳುಳ್ಳ ವೈಕುಂಟನಾಥನ ದೇವಾಲಯವು ಸಾಕಷ್ಟು ಪ್ರಸಿದ್ಧಿಗಳಿಸಿದೆ. ಅಲ್ಲದೆ ನವತಿರುಪತಿಗಳಲ್ಲಿ ಮೊದಲನೆಯ ತಿರುಪತಿಯಾಗಿ ಹೆಸರುವಾಸಿಯಾಗಿದೆ.

ತಿರುಪತಿಯ ಇತರೆ ಪ್ರಮುಖ ದೇವಸ್ಥಾನಗಳು

ತಮಿಳುನಾಡಿನ ತೂತುಕುಡಿ ಜಿಲ್ಲೆಯ ಶ್ರೀವೈಕುಂಠಂ ಎಂಬ ಪಟ್ಟಣದಲ್ಲಿ ಈ ದೇವಾಲಯವಿದ್ದು ತೂತುಕುಡಿಯಿಂದ ಬಸ್ಸು ಅಥವಾ ಬಾಡಿಗೆ ಕಾರುಗಳ ಮೂಲಕ ಇಲ್ಲಿಗೆ ಸುಲಭವಾಗಿ ತಲುಪಬಹುದು. ಇನ್ನೂ ತೂತುಕುಡಿಗೆ ತೆರಳಲು ರಲಿಲುಗಳು ಲಭ್ಯವಿದ್ದು ಬೆಂಗಳೂರಿನಿಂದಲೂ ನೇರವಾಗಿ ತೂತುಕುಡಿಗೆ ತೆರಳಲು ರೈಲು ದೊರೆಯುತ್ತದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more