Search
  • Follow NativePlanet
Share
» »ಬೇಡಿದ್ದೆಲ್ಲ ನೀಡುವ ಆದಿಕೇಶವನಿಗೆ ಪ್ರಣಾಮಗಳು!

ಬೇಡಿದ್ದೆಲ್ಲ ನೀಡುವ ಆದಿಕೇಶವನಿಗೆ ಪ್ರಣಾಮಗಳು!

By Vijay

ದಿವ್ಯ ದೇಶಂನಲ್ಲಿ ಪಟ್ಟಿ ಮಾಡಲಾಗಿರುವ 108 ವಿಷ್ಣುವಿನ ಸ್ವಯಂವ್ಯಕ್ತ ಕ್ಷೇತ್ರಗಳಲ್ಲಿ ಇದೂ ಒಂದು. ಆದಿ ಶೇಷನ ಮೇಲೆ ಗಂಭೀರವಾಗಿಯೂ, ಸೌಮ್ಯದಿಂದಲೂ ವಿಶ್ರಾಂತಿ ಪಡೆಯುತ್ತಿರುವ ಕೇಶವನ ದೇವಾಲಯವಿದು. ಈ ಕೇಶವ ಸಾಮಾನ್ಯನಲ್ಲ. ಭಕ್ತರು ತನ್ನನ್ನು ನಂಬಿ ಅರಸಿ ಬಂದಾಗ ಅವರ ಎಲ್ಲ ಬೇಡಿಕೆಗಳನ್ನು ಈಡೇರಿಸುವ ಭಕ್ತವತ್ಸಲನಿವನು.

ಬ್ರಹ್ಮನೊಮ್ಮೆ ಯಜ್ಞದಲ್ಲಿ ಮಾಡಿದ ಅನಿರೀಕ್ಷಿತ ತಪ್ಪಿನಿಂದಾಗಿ ಉದ್ಭವಿಸಿದ ಇಬ್ಬರು ರಾಕ್ಷಸರ ಉಪಟಳದಿಂದ ದೇವ-ದೇವತೆಯರನ್ನು ಕಾಪಾಡಿದ, ಲೋಕಕ್ಕೆ ಒಳಿತು ಉಂಟುಮಾಡಿದ ಶ್ರೀಮನ್ನಾರಾಯಣನಿವನು. ಅಲ್ಲದೆ 108 ದಿವ್ಯ ದೇಶಂ ತೀರ್ಥಯಾತ್ರೆಯಲ್ಲಿರುವವರು ತಿರುವನಂತಪುರಂನ ಅನಂತ ಪದ್ಮನಾಭಸ್ವಾಮಿಯ ದೇವಾಲಯಕ್ಕೆ ತೆರಳುವ ಮುಂಚೆ ಈ ಪೆರುಮಾಳನನ್ನು ದರ್ಶಿಸುವ ಪ್ರತೀಯಿದೆ.

ತ್ರಿಪುರಸುಂದರಿಯಾದ ನಾನು ಯಾರೆಂದು ಗೊತ್ತೆ?

ತಮಿಳುನಾಡಿನಲ್ಲಿರುವ ಈ ವಿಷ್ಣುವಿನ ದೇವಾಲಯವು ಶ್ರೀ ಆದಿಕೇಶವ ಪೆರುಮಾಳ ದೇವಾಲಯ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಅಲ್ಲದೆ ಸಾಮಾನ್ಯವಾಗಿ ತಮಿಳುನಾಡಿನಲ್ಲಿ ಕಂಡುಬರುವ ದೇವಾಲಯಗಳ ರಚನೆಯಂತೆ ಈ ದೇವಾಲಯ ರಚನೆ ಇಲ್ಲದಿರುವುದು ಬದಲಾಗಿ ಕೇರಳ ಶೈಲಿಯ ವಾಸ್ತುಶೈಲಿಯನ್ನು ಹೊಂದಿರುವುದು ವಿಶೇಷವಾಗಿದೆ. ಪ್ರಸ್ತುತ ಲೇಖನದಲ್ಲಿ ಈ ದೇವಾಲಯದ ಕುರಿತು ತಿಳಿಯಿರಿ.

ತಿರುವತ್ತರ

ತಿರುವತ್ತರ

ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ತಿರುವತ್ತರ ಎಂಬ ಕ್ಷೇತ್ರದಲ್ಲಿ ಈ ದೇವಾಲಯವಿದೆ. ಪ್ರಸಿದ್ಧ ನಾಗರಕೋಯಿಲ್ ಪಟ್ಟಣದಿಂದ ಕೇವಲ 30 ಕಿ.ಮೀ ಗಳಷ್ಟು ದೂರದಲ್ಲಿರುವ ಈ ದೇವಾಲಯವು ದಿವ್ಯದೇಶಂನ 108 ವಿಷ್ಣುವಿನ ಪರಮ ಪವಿತ್ರ ದೇವಾಲಯಗಳಲ್ಲೊಂದಾಗಿದೆ.

ಚಿತ್ರಕೃಪೆ: Ilya Mauter

ಪ್ರವಾಸಿಗರ ನೆಚ್ಚಿನ ತಾಣ

ಪ್ರವಾಸಿಗರ ನೆಚ್ಚಿನ ತಾಣ

ಈ ದೇವಾಲಯವು ಅದ್ಭುತವಾದ ಪ್ರಾಕೃತಿಕ ಹಿನ್ನೆಲೆಯಿರುವ ಸ್ಥಳದಲ್ಲಿ ನೆಲೆಸಿದ್ದು ನಿಸರ್ಗಪ್ರಿಯ ಪ್ರವಾಸಿಗರನ್ನೂ ಸಹ ಆಕರ್ಷಿಸುತ್ತದೆ. ಅಲ್ಲದೆ ಇನ್ನೂ ವಿಶೇಷವಾಗಿ ಹೇಳಬೇಕೆಂದರೆ ಈ ಕ್ಷೇತ್ರವು ಮೂರು ಕಡೆಗಳಲ್ಲಿ ಮೂರು ನದಿ ಮೂಲಗಳಿಂದ ಆವೃತವಾಗಿರುವುದು. ಇದಕ್ಕೆ ಸಂಬಂಧಿಸಿದಂತೆ ಪ್ರಚಲಿತದಲ್ಲಿರುವ ಕಥೆಯೂ ಸಹ ಸಾಕಷ್ಟು ರೋಚಕಮಯವಾಗಿದೆ.

ಚಿತ್ರಕೃಪೆ: Gaura

ತಪ್ಪಾದಾಗ...

ತಪ್ಪಾದಾಗ...

ಒಂದೊಮ್ಮೆ ಬ್ರಹ್ಮದೇವರು ಯಜ್ಞವೊಂದನ್ನು ನೆರವೇರಿಸುವಾಗ ಗೊತ್ತಿಲ್ಲದಂತೆಯೆ ಅವರಿಂದ ಪ್ರಮಾದವೊಂದು ನಡೆದು ಕೇಶ ಹಾಗೂ ಕೇಶಿ ಎಂಬ ರಾಕ್ಷಸರು ಹುಟ್ಟಿ ಬಿಡುತ್ತಾರೆ. ಹೀಗೆ ಜನ್ಮಪಡೆದ ಅವರು ಅಪಾರವಾದ ಬಲವನ್ನು ಹೊಂದಿರುತ್ತಾರೆ ಹಾಗೂ ತಮ್ಮ ಶಕ್ತಿಯನ್ನು ದುರುಪಯೋಗಗೊಳಿಸುತ್ತ ಎಲ್ಲರನ್ನೂ ಪೀಡಿಸಲು ಪ್ರಾರಂಭಿಸುತ್ತಾರೆ.

ಚಿತ್ರಕೃಪೆ: Ilya Mauter

ಎಲ್ಲರೂ ರೋಸಿಹೋದರು

ಎಲ್ಲರೂ ರೋಸಿಹೋದರು

ಸಕಲ ದೇವ-ದೇವತೆಯರು, ಋಷಿಗಳು ಇವರ ಉಪಟಳದಿಂದ ರೋಸಿ ಹೋಗಿ ಕಡೆಯದಾಗಿ ಶ್ರೀಹರಿಯನ್ನೆ ಪ್ರಾರ್ಥಿಸುತ್ತಾರೆ. ಇವರ ಕರೆಗೆ ಓಗೊಟ್ಟ ವಿಷ್ಣು ಸ್ವಯಂವ್ಯಕ್ತವಾಗಿ ಕೇಶನನ್ನು ವಧಿಸುತ್ತಾನೆ ಹಾಗೂ ಆತನ ಸಹೋದರಿಯಾದ ಕೇಶಿಯನ್ನು ಹಿಡಿದು ತನ್ನ ಹಾಸಿಗೆಯಂತಿರುವ ಆದಿಶೇಷನ ಮೇಲೆ ತಲೆದಿಂಬಾಗಿ ಮಾಡಿಕೊಳ್ಳುತ್ತಾನೆ.

ಚಿತ್ರಕೃಪೆ: Ilya Mauter

ಮೂರು ನದಿಗಳು

ಮೂರು ನದಿಗಳು

ಈ ಸಂದರ್ಭದಲ್ಲಿ ಕೇಶಿ ತನ್ನ ಶಕ್ತಿಯಿಂದ ಮೂರು ನದಿಗಳಾದ ಕೊದೈ, ಪರಲಿ ಹಾಗೂ ತಾಮಿರಬರಣಿಯನ್ನು ಪ್ರವಾಹವನ್ನಾಗಿ ಮಾಡಿ ವಿಷ್ಣುವಿನನ್ನು ಮುಳುಗುವಂತೆ ಮಾಡಬಯಸುತ್ತಾಳೆ. ಆದರೆ ಭೂಮಿತಾಯಿಯು ಇದನ್ನರಿತು ವಿಷ್ಣು ನೆಲೆಸಿರುವ ಭೂಮಿಯು ಇನ್ನಷ್ಟು ಎತ್ತರವಾಗುವಂತೆ ನೋಡಿಕೊಳ್ಳುತ್ತಾಳೆ.

ಚಿತ್ರಕೃಪೆ: Ilya Mauter

ಏನೂ ಮಾಡಲಾಗಲಿಲ್ಲ

ಏನೂ ಮಾಡಲಾಗಲಿಲ್ಲ

ಇದರಿಂದ ಆ ಮೂರು ನದಿಗಳಿಗೆ ಏನೂ ಮಾಡಲಾಗದೆ ಕೊನೆಗೆ ಅರಬ್ಬಿ ಸಮುದ್ರವನ್ನು ಸೇರುತ್ತವೆ. ಇತ್ತ ಕೇಶಿಯು ತನ್ನ ಹನ್ನೆರಡು ಕೈಗಳಿಂದ ತೆವಳಿಕೊಂಡು ತಪ್ಪಿಸಿಕೊಳ್ಳಲು ಪ್ರಯತ್ನಿಸುವಾಗ ಅವಳ ಪ್ರತಿ ಕೈಗಳಲ್ಲಿ ವಿಷ್ಣು ರುದ್ರಾಕ್ಷಗಳನ್ನು ಹಾಕಿ ಅವು ತಟಸ್ಥವಾಗಿ ನಿಲ್ಲುವಂತೆ ಮಾಡಿಬಿಡುತ್ತಾನೆ.

ಚಿತ್ರಕೃಪೆ: Ilya Mauter

ಗಮನಿಸಿ

ಗಮನಿಸಿ

ಹಾಗಾಗಿ ಈ ಪೆರುಮಾಳನನ್ನು ಆದಿಕೇಶವನೆಂದು ಕರೆಯಲಾಗಿದೆ. ನೀವು ಸಾಮಾನ್ಯವಾಗಿ ಆದಿಶೇಷನ ಮೇಲೆ ಮಲಗಿರುವ ಶ್ರೀಮನ್ನಾರಾಯಣನನ್ನು ದರ್ಶಿಸುವಾಗ ಗಮನಿಸಿರಬೇಕಲ್ಲವೆ ವಿಷ್ಣು ಸದಾ ನಿಮ್ಮ ಎಡದಲ್ಲಿ ಮುಖ ಹಾಗೂ ಬಲದಲ್ಲಿ ಕಾಲುಗಳನ್ನು ಚಾಚಿ ಮಲಗಿರುವುದನ್ನು? ಆದರೆ ಇಲ್ಲಿ ಹಾಗಿಲ್ಲ!

ಚಿತ್ರಕೃಪೆ: Gaura

ವಿಶೇಷ

ವಿಶೇಷ

ಇಲ್ಲಿ ವಿಷ್ಣು ನಿಮ್ಮ ಬಲಭಾಗಕ್ಕೆ ಮುಖ ಮಾಡಿರುವುದನ್ನು ಗಮನಿಸಬಹುದು. ಅಲ್ಲದೆ ಇಲ್ಲಿನ ವಿಷ್ಣು ವಿಗ್ರಹವು ಸಾಕಷ್ಟು ದೊಡ್ಡದಾಗಿದ್ದು ವಿಶೇಷವಾದ ಪದಾರ್ಥಗಳಿಂದಮಾಡಲ್ಪಟ್ಟಿದೆ. ಅಲ್ಲದೆ 16008 ಸಾಲಿಗ್ರಾಮಗಳನ್ನು ಈ ವಿಗ್ರಹ ರಚನೆಯಲ್ಲಿ ಬಳಸಲಾಗಿದೆ. ಆದ ಕಾರಣ ಈ ವಿಗ್ರಹಕ್ಕೆ ಅಭಿಷೇಕದಂತಹ ಕಾರ್ಯಗಳನ್ನು ಮಾಡಲಾಗುವುದಿಲ್ಲ.

ಚಿತ್ರಕೃಪೆ: Raji.srinivas

ಅವುಗಳ ಮೂಲಕ ಸಂಪೂರ್ಣ ದರ್ಶನ

ಅವುಗಳ ಮೂಲಕ ಸಂಪೂರ್ಣ ದರ್ಶನ

ಇನ್ನೊಂದು ವಿಶೇಷವೆಂದರೆ ಗರ್ಭಗೃಹದಲ್ಲಿ ವಿಷ್ಣು ಮಲಗಿರುವ ಭಂಗಿಯನ್ನು ನೋಡಲು ಮೂರು ದ್ವಾರಗಳಿದ್ದು ಅದರ ಮೂಲಕ ಮಾತ್ರವೆ ಸಂಪೂರ್ಣ ದರ್ಶನ ಪಡೆಯಬಹುದು. ಇಲ್ಲಿ ವಿಷ್ಣುವಿನ ನಾಭಿಗೆ ಬ್ರಹ್ಮನಿಲ್ಲ. ಬದಲಾಗಿ ತಲೆಯ ಬಳಿ ಕತಲೇಯ ಮಹರ್ಷಿಯಿದ್ದು, ಮಧ್ಯದಲ್ಲಿ ಶ್ರೀದೇವಿ ಹಾಗೂ ಭೂದೇವಿಯರು ನೆಲೆಸಿದ್ದಾರೆ. ಶಿವಲಿಂಗವೂ ಸಹ ಇಲ್ಲಿರುವುದು ವಿಶೇಷ.

ಚಿತ್ರಕೃಪೆ: Balaji191091

ತುಪ್ಪದ ಬತ್ತಿ ಬೆಳಕು

ತುಪ್ಪದ ಬತ್ತಿ ಬೆಳಕು

ಯಾವುದೆ ಕೃತಕ ಬೆಳಕಿನ ವ್ಯವಸ್ಥೆ ಇಲ್ಲಿ ಮಾಡಲಾಗಿಲ್ಲ. ಕೇವಲ ತುಪ್ಪದ ಬತ್ತಿಯಿಂದ ಕಂಡುಬರುವ ವಿಷ್ಣುವಿನ ವಿಗ್ರಹ ಅಮೋಘವಾಗಿದ್ದು ಕ್ಷಣಿಕ ದರ್ಶನವೆ ಮೈಮನಗಳನ್ನು ಪುಳಕಿತಗೊಳಿಸುತ್ತದೆ. ಅಲ್ಲದೆ ಕೆಲ ನಿರ್ದಿಷ್ಟ ಸಮಯದಲ್ಲಿ ಸೂರ್ಯನ ಕಿರಣಗಳು ವಿಷ್ಣುವಿನ ಸಮ್ಪೂರ್ಣ ವಿಗ್ರಹದ ಮೇಲೆ ಬಿದ್ದಾಗ ಕಾಣುವ ನೋಟ ಸಾಕ್ಷಾತ್ ವೈಕುಂಠವನ್ನೆ ನೋಡುತ್ತಿರಬಹುದೇನೋ ಎನಿಸುವಂತಿರುತ್ತದೆ.

ಚಿತ್ರಕೃಪೆ: Ilya Mauter

ಕೇರಳ ಶೈಲಿಯಲ್ಲಿದೆ

ಕೇರಳ ಶೈಲಿಯಲ್ಲಿದೆ

ಇನ್ನೂ ದೇವಾಲಯವು ಸಾಕಷ್ಟು ಪ್ರಾಚೀನವಾಗಿದ್ದು ಅದ್ಭುತವಾದ ಕಟ್ಟಿಗೆಯ ಮೇಲಿನ ಕೆತ್ತನೆ ಕೆಲಸಗಳಿಂದ ಕೂಡಿದೆ. ಮನಸಿಗೆ ಮುದ ನೀಡುಅವಂತಹ ಮನಮೋಹಕ ಕೆತ್ತನೆಗಳನ್ನು ದೇವಾಲಯದಲ್ಲಿ ಬಳಸಲಾದ ಹಲವು ಕಟ್ಟಿಗೆಗಳ ಭಾಗದಲ್ಲಿ ಕಾಣಬಹುದು. ಕೇರಳ ಶೈಲಿಯ ದೇವಾಲಯ ರಚನೆಯನ್ನು ಇದು ಒಳಗೊಂಡಿದ್ದು ನೋಡಲು ಸಾಕಷ್ಟು ಆಕರ್ಷಕವಾಗಿದೆ.

ಚಿತ್ರಕೃಪೆ: Raji.srinivas

ಮಾಡಿದ್ದಾನೆ

ಮಾಡಿದ್ದಾನೆ

ಇಲ್ಲಿ ಪೆರುಮಾಳನು ಪಶ್ಚಿಮಕ್ಕೆ ಮುಖ ಮಾಡಿ ನೋಡುವಂತಿದ್ದು ಆ ಪ್ರಕಾರವಾಗಿ ತಿರುವನಂತಪುರಂನ ಪದ್ಮನಾಭಸ್ವಾಮಿಯನ್ನು ದರ್ಶಿಸುತ್ತಿರುವನೆಂದು ಹೇಳಬಹುದಾಗಿದೆ. ಅನಂತಪದ್ಮನಾಭನ ದೇವಾಲಯವೂ ಸಹ ಈ ದೇವಾಲಯದೊಂದಿಗೆ ಸಾಕಷ್ಟು ಸಾಮ್ಯತೆಯನ್ನು ಹೊಂದಿದೆ. ಈ ದೇವಾಲಯವು ಪದ್ಮನಾಭನ ದೇವಾಲಯಕ್ಕಿಂತಲೂ ಪ್ರಾಚೀನ ಎಂದು ಹೇಳಲಾಗುತ್ತದೆ.

ಚಿತ್ರಕೃಪೆ: Balaji191091

ಮೊದಲು ಇಲ್ಲಿಗೆ ಭೇಟಿ

ಮೊದಲು ಇಲ್ಲಿಗೆ ಭೇಟಿ

ಹಾಗಾಗಿ ಭೌತಿಕವಾಗಿ ದಿಕ್ಕುಗಳ ನಿಟ್ಟಿನಲ್ಲಿ ಗಮನಿಸಿದಾಗ ತಿರುವನಂತಪುರಂನ ಅನಂತಪದ್ಮನಾಭ ಹಾಗೂ ತಿರುವತ್ತೂರಿನ ಪೆರುಮಾಳರು ಒಬ್ಬರಿಗೊಬ್ಬರು ನೋಡುತ್ತಿರುವುದಾಗಿ ಕಂಡುಬರುತ್ತದೆ. ಅಲ್ಲದೆ 108 ವಿಶ್ಣು ದೇವಾಲಯಗಳ ದರ್ಶನ ತೀರ್ಥಯಾತ್ರೆ ಮಾಡುವವರು ತಿರುವನಂತಪುರಂನ ಅನಂತಪದ್ಮನಾಭನ ದರ್ಶನಕ್ಕೆ ತೆರಳುವ ಮುಂಚೆ ಇಲ್ಲಿ ಭೇಟಿ ನೀಡಬೇಕೆಂಬ ಪ್ರತೀತಿಯಿದೆ.

ಚಿತ್ರಕೃಪೆ: Balaji191091

ಎಲ್ಲಿದೆ?

ಎಲ್ಲಿದೆ?

ಕನ್ಯಾಕುಮಾರಿ ಜಿಲ್ಲೆಯ ತಿರುವತ್ತರ ಎಂಬಲ್ಲಿ ಈ ದೇವಾಲಯವಿದೆ. ನಾಗರಕೋಯಿಲ್ ಪಟ್ಟಣದಿಂದ 30 ಕಿ.ಮೀ ದೂರವಿದ್ದು ಸ್ಥಳೀಯವಾಗಿ ಬಸ್ಸುಗಳು ದೊರಕುತ್ತವೆ. ಇಲ್ಲದಿದ್ದರೆ ತಿರುವನಂತಪುರಂ-ಕನ್ಯಾಕುಮಾರಿ ರೈಲು ಮಾರ್ಗದಲ್ಲಿ ತಿರುವತ್ತೂರು ಪಟ್ಟಣವಿದೆ. ತಿರುವನಂತಪುರಂನಿಂದ ನಾಗರಕೋಯಿಲ್ ಗೆ ಸಿಗುವ ಬಸ್ಸುಗಳನ್ನು ಹಿಡಿದು ಮಾರ್ತಾಂಡಂ ಎಂಬಲ್ಲಿ ಇಳಿದು ಅಲ್ಲಿಂದ ಒಂಭತ್ತು ಕಿ.ಮೀ ಪ್ರಯಾಣಿಸುವ ಮೂಲಕ ತಿರುವತ್ತರವನ್ನು ತಲುಪಬಹುದು.

ಚಿತ್ರಕೃಪೆ: Infocaster

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X