Search
  • Follow NativePlanet
Share
» »ಭಾರತದ ಪ್ರಸಿದ್ಧ ನಗರ ಕಡಲ ದಂಡೆಗಳು

ಭಾರತದ ಪ್ರಸಿದ್ಧ ನಗರ ಕಡಲ ದಂಡೆಗಳು

By Vijay

ಕಡಲ ತೀರಗಳು ಅಥವಾ ಬೀಚ್‌‌‌ಗಳು ಸಂಜೆಯ ಸಮಯ ಕಳೆಯಲೊ ಅಥವಾ ಸೂರ್ಯೋದಯ/ಸೂರ್ಯಾಸ್ತದ ಮನಮೋಹಕ ನೋಟವನ್ನು ಕಣ್ತುಂಬಿಕೊಳ್ಳಲೊ ಅತ್ಯಂತ ಪ್ರಶಸ್ತವಾದ ಸ್ಥಳಗಳಾಗಿವೆ. ಇನ್ನೂ ಹದಿಹರೆಯದವರಿಗಂತೂ ಭೋರ್ಗೆರೆಯುತ್ತ ಬಂದು ಅಪ್ಪಳಿಸುತ್ತಿರುವ ಸಮುದ್ರದ ಅಲೆಗಳಲ್ಲಿ ಆಟವಾಡುವುದೆಂದರೆ ಎಲ್ಲಿಲ್ಲದ ಪ್ರೀತಿ. ಮಹಾನಗರಗಳಲ್ಲಿನ ಸಮುದ್ರ ತೀರಗಳಂತೂ ಆ ನಗರಗಳ ಅತಿ ಪ್ರಮುಖ ಪ್ರವಾಸಿ ಆಕರ್ಷಣೆ ಎಂದರೆ ತಪ್ಪಾಗಲಾರದು. ಕೆಲಸದೊತ್ತಡದಿಂದ ಬೆಂದು ಬಸವಳಿದ ಜನರಿಗೆ ವಾರಾಂತ್ಯದ ರಜೆಯನ್ನು ಸಮಾಧಾನ ಹಾಗು ಆನಂದದಿಂದ ಕಳೆಯಲು ನಗರ ಕಡಲ ತೀರಗಳು ಪ್ರಮುಖ ಪಾತ್ರವಹಿಸುತ್ತವೆ.

ಭಾರತದಲ್ಲಿ ಕೆಲವು ಮಹಾನಗರಗಳು ತಮ್ಮಲ್ಲಿರುವ ಕಡಲ ಕಿನಾರೆಗಳಿಂದ ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಾಗಿ ಹೊರಹೊಮ್ಮಿವೆ. ಈ ಲೇಖನದಲ್ಲಿ ಕಡಲ ತೀರಗಳಿರುವ ಅಂತಹ ಕೆಲವು ಪ್ರಸಿದ್ಧ ಮಹಾನಗರಗಳ ಕುರಿತು ತಿಳಿಸಲಾಗಿದೆ. ಒಂದೊಮ್ಮೆ ನೀವು ಸಹ ಈ ನಗರಗಳ ಪ್ರವಾಸ ಯೋಜನೆಯನ್ನು ಹಾಕಿ ಹಾಗು ಅಲ್ಲಿನ ಕಡಲ ತೀರಗಳಿಗೆ ಭೇಟಿ ನೀಡಿ ಕುಣಿದು ಕುಪ್ಪಳಿಸಿರಿ.

ಸೀ ಬೀಚ್ ಪುರಿ, ಪುರಿ

ಸೀ ಬೀಚ್ ಪುರಿ, ಪುರಿ

ಒಡಿಶಾದ ಪ್ರಖ್ಯಾತ ಧಾರ್ಮಿಕ ಕ್ಷೇತ್ರ ಪುರಿ ನಗರದಲ್ಲಿರುವ ಈ ಕಡಲ ತೀರವು ಒಂದು ಪ್ರಮುಖ ಪ್ರವಾಸಿ ತಾಣವಾಗಿದೆ. ವಾರ್ಷಿಕವಾಗಿ ಜರುಗುವ ಪುರಿ ಕಡಲ ತೀರ ಉತ್ಸವ ಹಾಗು ಮರಳಿನಲ್ಲಿನ ಕಲೆಗೆ ಈ ಕಡಲ ತೀರವು ಅತ್ಯಂತ ಜನಪ್ರಿಯವಾಗಿದೆ. ಕಡಲ ದಡದಿಂದ ಸೋಮನಾಥ್ ದೇವಾಲಯದ ಸುಂದರ ನೋಟ.

ಚಿತ್ರಕೃಪೆ: Tierecke

ಪ್ರೊಮೆನೇಡ್ ಬೀಚ್, ಪಾಂಡಿಚೆರಿ

ಪ್ರೊಮೆನೇಡ್ ಬೀಚ್, ಪಾಂಡಿಚೆರಿ

ಪಾಂಡಿಚೆರಿ ಪಟ್ಟಣದಗುಂಟ ಹರಡಿರುವ ಈ ಪ್ರಖ್ಯಾತ ಕಡಲ ತೀರವು ಇಲ್ಲಿ ಕಂಡುಬರುವ ನಾಲ್ಕು ಬೀಚುಗಳಲ್ಲಿ ಪ್ರಮುಖವಾಗಿದೆ. ನಗರದ ಅತಿ ಹೆಮ್ಮೆಯ ಕಡಲತೀರವಾಗಿರುವ ಈ ಕಡಲ ತೀರದಗುಂಟ ಹಲವ್ವರು ಪ್ರಸಿದ್ಧ ಸ್ಮಾರಕ ತಾಣಗಳನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Sanyambahga

ಮಜಲಿ ಬೀಚ್, ಕಾರವಾರ

ಮಜಲಿ ಬೀಚ್, ಕಾರವಾರ

ಕರ್ನಾಟಕದ ವಾಯವ್ಯ ಭಾಗದಲ್ಲಿರುವ ಉತ್ತರಕನ್ನಡ ಜಿಲ್ಲೆಯ ಕಾರವಾರ ಪಟ್ಟಣದಲ್ಲಿದೆ ಈ ಪ್ರಶಾಂತಮಯ ಕಡಲ ತೀರ. ಕೇವಲ ಕಡಲ ತೀರಕ್ಕಾಗಿ ಮಾತ್ರವಲ್ಲದೆ ಈ ಪಟ್ಟಣವು ಹಲವು ಜನಪ್ರಿಯ ದೇವಾಲಯಗಳು, ದ್ವೀಪ ಸಮೂಹಗಳು ಹಾಗು ವಿಶೀಷ್ಟ ಸಮುದ್ರ ಖಾದ್ಯಗಳಿಗೂ ಸಹ ಹೆಸರುವಾಸಿಯಾಗಿದೆ. ಕಾರವಾರ್ ಬೀಚಿನ ಚಿತ್ರ.

ಮರೀನಾ ಬೀಚ್, ಚೆನ್ನೈ

ಮರೀನಾ ಬೀಚ್, ಚೆನ್ನೈ

ಚೆನ್ನೈ ಮಹಾನಗರದಲ್ಲಿರುವ ಮರೀನಾ ಕಡಲ ತೀರವು ಪ್ರಖ್ಯಾತ ಬೀಚ್ ಆಗಿದ್ದು ಭಾರತದ ಬಂಗಾಳ ಕೊಲ್ಲಿಯ ಭಾಗದ ಅತ್ಯಂತ ಉದ್ದನೆಯ ತೀರ ಹೊಂದಿರುವ ಖ್ಯಾತಿಗೆ ಇದು ಪಾತ್ರವಾಗಿದೆ. ಅತ್ಯಂತ ಜನಸಂದಣಿ ಹೊಂದಿರುವ ಬೀಚ್ ಇದಾಗಿದ್ದು ಜಗತ್ತಿನ ಎರಡನೆಯ ಅತಿ ಉದ್ದದ ಸ್ವಾಭಾವಿಕ ಕಡಲ ತೀರವನ್ನು ಹೊಂದಿದೆ.

ಅಲೆಪ್ಪಿ ಬೀಚ್, ಅಲಪುಳಾ

ಅಲೆಪ್ಪಿ ಬೀಚ್, ಅಲಪುಳಾ

ಕೇರಳದ ಅಲಪುಳಾ ನಗರದಲ್ಲಿರುವ ಈ ಬೀಚ್ ಒಂದು ಜನಪ್ರಿಯ ಪ್ರವಾಸಿ ಆಕರ್ಷಣೆಯಾಗಿದೆ. ಸಮುದ್ರ ಸೇತುವೆಯ ಅವಶೇಷವನ್ನು ಹೊಂದಿರುವ ಈ ಕಡಲ ತೀರವು ಸೂರ್ಯಾಸ್ತದ ನೋಟಕ್ಕೆ ಬಹು ಜನಪ್ರಿಯವಾಗಿದೆ. ಅಲೆಪ್ಪಿ ಅಥವಾ ಅಲಪುಳಾ ನಗರವನ್ನು "ಪೂರ್ವದ ವೆನಿಸ್" ಎಂದು ಸಂಭೋದಿಸಲಾಗಿದೆ.

ಚಿತ್ರಕೃಪೆ: Akhilan

ಬಾಗಾ ಬೀಚ್, ಗೋವಾ

ಬಾಗಾ ಬೀಚ್, ಗೋವಾ

ಗೋವಾದ ಬಾಗಾ ಪಟ್ಟಣದಲ್ಲಿರುವ ಬಾಗಾ ಕಡಲ ತೀರವು ಒಂದು ಉತ್ಕೃಷ್ಟ ಪ್ರವಾಸಿ ಆಕರ್ಷಣೆಯಾಗಿದೆ. ಡಾಲ್ಫಿನ್ ವೀಕ್ಷಣೆ, ಸಮುದ್ರ ಖಾದ್ಯ, ವಿವಿಧ ಜಲಕ್ರೀಡೆಗಳಿಗೆ ಈ ಕಡಲ ತೀರವು ಹೆಸರುವಾಸಿಯಾಗಿದೆ.

ಚಿತ್ರಕೃಪೆ: McKay Savage

ನಗೋವಾ ಬೀಚ್, ದೀವ್

ನಗೋವಾ ಬೀಚ್, ದೀವ್

ಕೇಂದ್ರಾಡಳಿತ ಪ್ರದೇಶವಾದ ದಮನ್ ಮತ್ತು ದೀವ್ ನ ದೀವ್ ಪಟ್ಟಣದಲ್ಲಿದೆ ಈ ಮನೋಹರ ಕಡಲ ತೀರ. ಇದೊಂದು ಪ್ರಮುಖವಾದ ಪ್ರವಾಸಿ ಆಕರ್ಷಣೆಯಾಗಿದೆ.

ಆರ್.ಕೆ ಬೀಚ್, ವೈಜಾಗ್

ಆರ್.ಕೆ ಬೀಚ್, ವೈಜಾಗ್

ಆಂಧ್ರಪ್ರದೇಶದ ವಿಶಾಖಾಪಟ್ಟಣಂ ಅಥವಾ ಇಂದಿನ ವೈಜಾಗ್ ಪಟ್ಟಣದಲ್ಲಿರುವ ರಾಮಕೃಷ್ಣ ಮಿಷನ್ ಕಡಲ ತೀರವು ಹೊರಾಂಗಣ ಕ್ರೀಡಾ ಚಟುವಟಿಕೆಗಳಿಗೆ ಹೆಸರುವಾಸಿಯಾಗಿರುವ ಒಂದು ಪ್ರವಾಸಿ ಆಕರ್ಷಣೆಯ ಬೀಚ್ ಆಗಿದೆ. ಬೀಚ್ ಬದಿಯಲ್ಲಿ ಪಾರ್ಕನ್ನೂ ಹೊಂದಿರುವ ಈ ಕಡಲ ತೀರವು ಐ.ಎನ್.ಎಸ್ ಕುರ್ಸುರ ಜಲಾಂತರ್ಗಾಮಿ (ಸಬ್ ಮರೈನ್) ಸಂಗ್ರಹಾಲಯಕ್ಕೆ ಪ್ರಸಿದ್ಧವಾಗಿದೆ.

ಚಿತ್ರಕೃಪೆ: P.Suresh

ಜೂಹು ಬೀಚ್, ಮುಂಬೈ

ಜೂಹು ಬೀಚ್, ಮುಂಬೈ

ಮುಂಬೈ ನಗರ ಕೇಂದ್ರ ಭಾಗದಲ್ಲಿ ಸ್ಥಿತವಿರುವ ಜೂಹು ಕಡಲ ತೀರವು ನಗರದ ಜನಪ್ರಿಯ ಬೀಚ್ ಆಗಿದ್ದು ಒಂದು ಉತ್ತಮವಾದ ಪ್ರವಾಸಿ ಆಕರ್ಷಣೆಯೂ ಆಗಿದೆ. ಅಷ್ಟೆ ಅಲ್ಲ, ಈ ಕಡಲ ತೀರದಗುಂಟ ದೊರೆಯುವ ಕುರುಕಲು ತಿಂಡಿಗಳೂ ಸಹ ಅತ್ಯಂತ ಜನಪ್ರಿಯವಾಗಿವೆ. ಆವಾಗಾವಾಗ ಹಿಂದಿ ಚಿತ್ರಗಳ ಸಾಹಸಮಯ ಸನ್ನಿವೇಷಗಳನ್ನು ಸಹ ಇಲ್ಲಿ ಚಿತ್ರೀಕರಿಸಲಾಗುತ್ತಿರುತ್ತದೆ.

ಚಿತ್ರಕೃಪೆ: VISHU

ಸೋಮನಾಥ್ ಬೀಚ್, ವೇರಾವಲ್

ಸೋಮನಾಥ್ ಬೀಚ್, ವೇರಾವಲ್

ಗುಜರಾತ್ ರಾಜ್ಯದ ಸೌರಾಷ್ಟ್ರ ಪ್ರದೇಶದ ವೇರಾವಲ್ ಎಂಬಲ್ಲಿದೆ ಈ ಪ್ರಖ್ಯಾತ ಕಡಲ ತೀರ. ಮತ್ತೊಂದು ಧಾರ್ಮಿಕ ಪ್ರವಾಸಿ ಆಕರ್ಷಣೆಯಾದ ಸೋಮನಾಥ್ ಜ್ಯೋತಿರ್ಲಿಂಗವು ವೇರಾವಲ್ ಬಳಿಯಲ್ಲೆ ಇದೆ. ಸೂರ್ಯಾಸ್ತದ ಸಮಯದಲ್ಲಿ ಸೋಮನಾಥ್ ದೇವಾಲಯದ ವಿಹಂಗಮ ನೋಟವನ್ನು ಈ ಕಡಲ ತೀರವು ಕರುಣಿಸುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X