• Follow NativePlanet
Share
Menu
» »ರಸ್ತೆ ಮಾರ್ಗದಿಂದ ಹಂಪಿ ಪ್ರವಾಸ...

ರಸ್ತೆ ಮಾರ್ಗದಿಂದ ಹಂಪಿ ಪ್ರವಾಸ...

Posted By: Divya

ಒಂದು ಕಾಲದಲ್ಲಿ ಕಲೆ, ಸಾಹಿತ್ಯ, ಶಿಕ್ಷಣ ಹಾಗೂ ವ್ಯಾಪಾರ ಕ್ಷೇತ್ರದಲ್ಲಿ ಉನ್ನತ ಸ್ಥಾನದಲ್ಲಿದ್ದ ನಾಡೆಂದರೆ ಹಂಪಿ. ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾದ ಈ ತಾಣ ಶಿಲ್ಪಕಲೆಗೆ ಪ್ರಸಿದ್ಧಿ ಪಡೆದಿತ್ತು. ಇತಿಹಾಸದ ಪುಸ್ತಕದಿಂದ ಪರಿಚಯವಾದ ಈ ಸ್ಥಳವನ್ನು ನೋಡಬೇಕು ಎಂದು ಮನಸ್ಸು ಆಗಾಗ ಹೇಳುತ್ತಿತ್ತು. ಅದಕ್ಕೆ ಸರಿಯಾಗಿ ನನ್ನ ಸ್ನೇಹಿತೆಯೊಬ್ಬಳು ಎಲ್ಲಾದರೂ ಐತಿಹಾಸಿಕ ಪ್ರವಾಸ ಮಾಡಬೇಕು ಎಂದು ಚಾಟ್ ಮಾಡುತ್ತಿದ್ದಳು. ಸಿಕ್ಕಿದ್ದೇ ಸಮಯ ಎಂದು ಹಂಪಿಗೆ ಹೋಗೋಣ ಎನ್ನುವ ವಿಚಾರ ಮುಂದಿಟ್ಟೆ... 

ವಿರೂಪಾಕ್ಷ ದೇವಾಲಯ, ಹಂಪಿ

ರಸ್ತೆ ಮಾರ್ಗದಿಂದ ಹಂಪಿ ಪ್ರವಾಸ...

                                                PC: en.wikipedia.org

ವಿಚಾರಕ್ಕೆ ಸಮ್ಮತಿ ಸೂಚಿಸಿದ ಅವಳು, ತಕ್ಷಣಕ್ಕೆ ಎಷ್ಟು ಹಣ ಬೇಕಾಗಬಹುದು ಎನ್ನುವುದನ್ನು ಲೆಕ್ಕಹಾಕ ತೊಡಗಿದಳು. ನಾವು ಅಂದುಕೊಂಡ ಬಜೆಟ್ಅಲ್ಲಿಯೇ 2 ದಿನದ ಪ್ರವಾಸಕ್ಕೆ ಹೋಗಬಹುದು ಎಂಬುದನ್ನು ಅರಿತೆವು. ಜೊತೆಗೆ ಕಾರ್ ಒಂದನ್ನು ಬುಕ್ ಮಾಡಿದೆವು. ಹಾಗೇ ಇನ್ನಿಬ್ಬರು ಸ್ನೇಹಿತೆಯರನ್ನು ಆಹ್ವಾನಿಸಿದೆವು.

ಪ್ರವಾಸಕ್ಕೆ ಅಣಿಯಾಗಿ ನಿಂತ ನಮ್ಮ ಮಾರ್ಗ ಹೀಗಿತ್ತು...
ಬೆಂಗಳೂರು-ತುಮಕೂರು-ಚಿತ್ರದುರ್ಗ-ಹೊಸಪೇಟೆ-ಹಂಪಿ

https://en.wikipedia.org/wiki/File:Virupaksha_Temple_Pattadakal.jpg

ಮೊದಲ ದಿನ
ಬೆಂಗಳೂರಿನಿಂದ ಮುಂಜಾನೆಯೇ ತುಮಕೂರು ಮಾರ್ಗವಾಗಿ ಚಿತ್ರದುರ್ಗಕ್ಕೆ ಹೊರಟೆವು. ಚಿತ್ರದುರ್ಗಕ್ಕೆ ಬಂದು ತಲುಪಲು ಸುಮಾರು 3 ರಿಂದ 4 ತಾಸುಗಳೇ ಬೇಕಾದವು. ಮೊದಲು ಊಟ ಮುಗಿಸಿಯೇ ಚಿತ್ರದುರ್ಗದ ಕೋಟೆಯನ್ನು ನೋಡೋಣ ಎನ್ನುವ ನಿಲುವಿಗೆ ಬಂದೆವು. ಊಟವಾದ ನಂತರ ನಿಧಾನವಾಗಿ ಕೋಟೆಯೆಡೆಗೆ ಹೆಜ್ಜೆ ಹಾಕಿದೆವು. 15 ರಿಂದ 18ನೇ ಶತಮಾನದ ಮಧ್ಯದಲ್ಲಿ ನಿರ್ಮಾಣಗೊಂಡ ಈ ಕೋಟೆಯು ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಒಬವ್ವನ ಕಿಂಡಿ, ಮಸೀದಿ ಹಾಗೂ ಕೋಟೆಯ ಸಂಕೀರ್ಣದಲ್ಲಿ 18ದೇವಾಲಯಗಳನ್ನು ಕಾಣಬಹುದು. ಕೋಟೆಯ ಸುತ್ತ ಇರುವ ಪರಿಸರವನ್ನೆಲ್ಲಾ ನೋಡಿಕೊಂಡು ನಿಧಾನವಾಗಿ ಕಾರ್ ಹತ್ತಿದೆವು...

ರಸ್ತೆ ಮಾರ್ಗದಿಂದ ಹಂಪಿ ಪ್ರವಾಸ...

                                                 PC: en.wikipedia.org

ಮತ್ತೆ ಸುಮಾರು 2 ರಿಂದ 3 ತಾಸುಗಳ ಪ್ರಯಾಣ ಬೆಳೆಸಿ, ಹೊಸಪೇಟೆಗೆ ಬಂದು ಇಳಿದೆವು. ಸ್ವಲ್ಪ ಸಮಯ ಅಲ್ಲೆ ಅತ್ತಿತ್ತ ಅಡ್ಡಾಡಿದೆವು. ಮೊದಲು ಹಂಪಿಗೆ ಹೋಗಿ ಮುಟ್ಟಬೇಕು ಎನ್ನುವ ಹಂಬಲ ಕಾಡುತ್ತಿದ್ದುದರಿಂದ, ಹಾಗೇ ಮತ್ತೆ ಕಾರೇರಿ ಕುಳಿತೆವು. ಸುಮಾರು 12.7 ಕಿ.ಮೀ. ದೂರ ಬರುತ್ತಿದ್ದಂತೆ ಹಂಪಿಗೆ ತಲುಪಿದೆವು ಎನ್ನುವ ಖುಷಿಗೆ ಒಮ್ಮೆ ಎಲ್ಲರೂ ಜೋರಾಗಿ ಕೂಗಿದೆವು. ಮೊದಲೇ ರೂಮ್ ವ್ಯವಸ್ಥೆ ಮಾಡಿಕೊಂಡಿದ್ದುದರಿಂದ, ಸೀದಾ ಅಲ್ಲಿಗೆ ಹೋಗಿ ಬ್ಯಾಗ್‍ಗಳನ್ನು ಇಟ್ಟು ಫ್ರೆಶ್ ಆದೆವು.

ಹಾಗೇ ಮೊದಲು ವಿರೂಪಾಕ್ಷ ದೇಗುಲಕ್ಕೆ ಭೇಟಿ ನೀಡಿದೆವು. 50 ಮೀ. ಎತ್ತರದ ಗೋಪುರವನ್ನು ಹೊಂದಿರುವ ಈ ದೇಗುಲವನ್ನು ನೋಡುತ್ತಿದ್ದಂತೆಯೇ ಏನೋ ಒಂದು ಬಗೆಯ ಸಂತೋಷ. ಇನ್ನೇನಿದೆ ಎನ್ನುವ ಕುತೂಹಲ ಎಲ್ಲವೂ ಒಮ್ಮೆಲೇ ಕಾಡುತ್ತಿತ್ತು. ದಕ್ಷಿಣ ಭಾರತದ ದ್ರಾವಿಡಿಯನ್ ಶೈಲಿಯ ವಾಸ್ತು ಶಿಲ್ಪವನ್ನು ಹೊಂದಿರುವ ದೇಗುಲ ಮುಖ ಮಂಟಪ ಹಾಗೂ ವಿಶಾಲವಾದ ಕೊಠಡಿಯನ್ನು ಹೊಂದಿದೆ. ಧಾರ್ಮಿಕ ಮೌಲ್ಯವನ್ನು ಬಿಂಬಿಸುವಂತಹ ಪ್ರಾಣಿ-ಪಕ್ಷಿಗಳ ಕೆತ್ತನೆಗಳು ಸುಂದರವಾಗಿ ಮೂಡಿಬಂದಿವೆ.

ರಸ್ತೆ ಮಾರ್ಗದಿಂದ ಹಂಪಿ ಪ್ರವಾಸ...

                                            PC: en.wikipedia.org

ದೇಗುಲದ ಸೊಬಗನ್ನು ನೋಡುತ್ತಿದ್ದಂತೆಯೇ ಸೂರ್ಯನು ಮರೆಯಾಗತೊಡಗುತ್ತಿದ್ದ. ಸೂರ್ಯಾಸ್ತದ ಆ ಸುಂದರ ಕ್ಷಣ ಬಣ್ಣಿಸಲಸಾಧ್ಯ... ಸುತ್ತಲ ಪರಿಸರವು ಒಮ್ಮೆಲೇ ಕೇಸರಿ ಬಣ್ಣದಿಂದ ಕಂಗೊಳಿಸಲಾರಂಭಿಸಿದವು. ಒಂದು ಕ್ಷಣಕ್ಕೆ ಅಬ್ಬಾ! ಎಂಥ ಸೌಂದರ್ಯ ಎನ್ನುವ ಉದ್ಗಾರ ನಮ್ಮೆಲ್ಲರ ಬಾಯಲ್ಲೂ ಬಂತು. ಈ ರಮ್ಯ ಸೊಬಗನ್ನು ನೋಡಿಕೊಂಡು ರೂಮಿನತ್ತ ನಡೆದೆವು. ಹಾಗೇ ನಾಳೆಯ ತಯಾರಿ ಏನು ಎನ್ನುವ ಪೂರ್ವ ತಯಾರಿಯನ್ನು ಮಾಡಿಕೊಂಡೆವು.

ರಸ್ತೆ ಮಾರ್ಗದಿಂದ ಹಂಪಿ ಪ್ರವಾಸ...

                                                 PC: en.wikipedia.org

ಎರಡನೇ ದಿನ
ಮರುದಿನ ಬೆಳಗ್ಗೆ, ಅಲ್ಲಿಯೇ ಸಿಗುವ ಬಾಡಿಗೆ ಸೈಕಲ್ ಪಡೆದು ವಿರೂಪಾಕ್ಷದೇವಾಲಯ ಹಾಗೂ ಪುರಂದರ ಮಂಟಪದ ಬಳಿಯೆಲ್ಲಾ ಸುತ್ತಾಡಿಕೊಂಡು ಊಟಕ್ಕೆ ತೆರಳಿದೆವು. ಊಟದ ನಂತರ ಲೋಟಸ್ ಮಹಲ್ ಕಡೆಗೆ ಪ್ರಯಾಣ ಬೆಳೆಸಿದೆವು. ಇಂಡೋ ಇಸ್ಲಾಮಿಕ್ ಮಾದರಿಯ ವಾಸ್ತುಶಿಲ್ಪವನ್ನು ಒಳಗೊಂಡ ಈ ಅರಮನೆ, ಕಮಲದ ಹೂವಿನ ಎಸಳಿನಂತಿವೆ. ಹಾಗಾಗಿಯೇ ಇದಕ್ಕೆ ಲೋಟಸ್ ಮಹಲ್ ಎಂದು ಕರೆಯುತ್ತಾರೆ. ಇಲ್ಲಿ ಹತ್ತಿರದಲ್ಲೇ ಹಜಾರ ರಾಮನ ಮಂದಿರವೂ ಇದೆ. ಇವುಗಳನ್ನು ನೋಡಿಕೊಂಡು ಹಾಗೆಯೇ ಬೆಂಗಳೂರಿನ ಹಾದಿ ಹಿಡಿದೆವು. ಮತ್ತೆ ಅದೇ ಟ್ರಾಫಿಕ್ ಹಾಗೂ ಮಾಲಿನ್ಯ ನಮ್ಮನ್ನು ಸ್ವಾಗತಿಸಲು ಕಾಯುತ್ತಿತ್ತು.

Read more about: hampi, bangalore

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ