Search
  • Follow NativePlanet
Share
» »ಗಿರಿಧಾಮಗಳು, ಫಾಲ್ಸ್‌ಗಳು ಮಾತ್ರವಲ್ಲ, ಕರ್ನಾಟಕದ ಈ 13 ಸುಪ್ರಸಿದ್ಧ ಜಲಾಶಯಗಳು ಮೋಡಿ ಮಾಡಲಿವೆ

ಗಿರಿಧಾಮಗಳು, ಫಾಲ್ಸ್‌ಗಳು ಮಾತ್ರವಲ್ಲ, ಕರ್ನಾಟಕದ ಈ 13 ಸುಪ್ರಸಿದ್ಧ ಜಲಾಶಯಗಳು ಮೋಡಿ ಮಾಡಲಿವೆ

ರಾಜ್ಯದ ಅನೇಕ ಕಡೆ ಈ ಬಾರಿ ಉತ್ತಮ ಮಳೆಯಾಗಿದ್ದು, ಜಲಾಶಯಗಳು ಭರ್ತಿಯಾಗಿವೆ. ಕೆಲವೆಡೆ ಮುನ್ನೆಚ್ಚರಿಕೆ ಕ್ರಮವಾಗಿ ಡ್ಯಾಂಗಳಿಂದ ನೀರು ಬಿಡುಗಡೆ ಮಾಡಲಾಗಿದೆ. ಈ ಸಮಯದಲ್ಲಿ ಜನರು ಹೆಚ್ಚಾಗಿ ಗಿರಿಧಾಮಗಳು, ಫಾಲ್ಸ್‌ ಮತ್ತು ದೇವಾಲಯಗಳಿಗೆ ಭೇಟಿ ನೀಡಲು ಇಷ್ಟಪಡುತ್ತಾರೆ. ಆದರೆ ಮಳೆಗಾಲದಲ್ಲಿ ಭರ್ತಿಯಾದ ಡ್ಯಾಂಗಳು ಸಹ ಜನರನ್ನು ತನ್ನತ್ತ ಆಕರ್ಷಿಸುತ್ತವೆ. ಅವು ನೋಡಲು ತುಂಬಾ ಸುಂದರವಾಗಿ ಕಾಣುತ್ತವೆ.

ನೀವು ಸಹ ಕರ್ನಾಟಕ ಪ್ರವಾಸದಲ್ಲಿದ್ದರೆ ಈ ಸುಪ್ರಸಿದ್ಧ ಡ್ಯಾಂಗಳಿಗೆ ಭೇಟಿ ನೀಡಲು ಮರೆಯಬೇಡಿ. ದೊಡ್ಡ ಬಾಗಿಲುಗಳು, ಪ್ರಚಂಡ ನೀರಿನ ಹರಿವು ಮತ್ತು ಅದ್ಭುತವಾದ ಹಿನ್ನೀರು ಅವುಗಳ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಮತ್ತೇಕೆ ತಡ, ರಾಜ್ಯದ ಕೆಲವು ಪ್ರಮುಖ ಡ್ಯಾಂಗಳು ಎಲ್ಲಿವೆ ಎನ್ನುವ ಸಂಪೂರ್ಣ ಮಾಹಿತಿಯನ್ನು ನೋಡೋಣ...

ಕೆಆರ್‌ಎಸ್‌/ಕೃಷ್ಣರಾಜಸಾಗರ

ಇದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿದೆ. ಎತ್ತರ 42.67 ಮೀ, ಉದ್ದ 2,620 ಮೀ, ಪೂರ್ಣ ಮಟ್ಟ124.80 ಅಡಿ, ಸಂಗ್ರಹ ಸಾಮರ್ಥ್ಯ 49.50 ಟಿಎಂಸಿ. 1938ರಲ್ಲಿ ಕುಡಿಯುವ ನೀರು ಪೂರೈಕೆ, ನೀರಾವರಿ ಹಾಗೂ ವಿದ್ಯುತ್ ಉದ್ದೇಶಕ್ಕಾಗಿ ಇದನ್ನು ನಿರ್ಮಾಣ ಮಾಡಲಾಯಿತು. ಇಂದು ಕೆಆರ್‌ಎಸ್ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ ಮತ್ತು ಮೈಸೂರಿನ ಅತ್ಯಂತ ರಮಣೀಯ ತಾಣಗಳಲ್ಲಿ ಒಂದಾಗಿದೆ. ಕೆಆರ್‌ಎಸ್ ಅಣೆಕಟ್ಟಿಗೆ ವರ್ಷದ ಯಾವುದೇ ಸಮಯದಲ್ಲಿ ಭೇಟಿ ನೀಡಬಹುದು. ಆದರೆ ಮಳೆಗಾಲದಲ್ಲಿ ಇಲ್ಲಿಗೆ ಭೇಟಿ ನೀಡುವುದು ವಿಶೇಷವಾಗಿ ಸೂಕ್ತವೆಂದು ಪರಿಗಣಿಸಲಾಗಿದೆ. ಮಳೆಗಾಲದಲ್ಲಿ, ಅಂದರೆ ಜೂನ್ ಮತ್ತು ಆಗಸ್ಟ್ ನಡುವೆ, ಮಳೆಯಿಂದಾಗಿ ನೀರಿನ ಮಟ್ಟವು ಹೆಚ್ಚಾಗುತ್ತದೆ. ಆಗ ನೋಡಲು ಸುಂದರವಾಗಿ ಕಾಣುತ್ತದೆ. ಇದಲ್ಲದೆ, ಸುತ್ತಮುತ್ತಲಿನ ಪ್ರದೇಶವು ಹಚ್ಚ ಹಸಿರಿನಿಂದ ಕೂಡಿದೆ. ‌

ಕಬಿನಿ

ನೀರಾವರಿ, ಕುಡಿಯುವ ನೀರಿಗಾಗಿ ಉದ್ದೇಶಕ್ಕಾಗಿ 1974 ರಲ್ಲಿ ನಿರ್ಮಾಣವಾದ ಈ ಡ್ಯಾಂ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿದೆ. ಎತ್ತರ 166 ಅಡಿ, ಉದ್ದ 12,927 ಅಡಿ, ಪೂರ್ಣ ಮಟ್ಟ 2,284 ಅಡಿ, ಸಂಗ್ರಹ ಸಾಮರ್ಥ್ಯ 19.50 ಟಿಎಂಸಿ. ಈ ಡ್ಯಾಂನಿಂದ ಮೈಸೂರು, ಬೆಂಗಳೂರು, ಚಾಮರಾಜನಗರ ಜಿಲ್ಲೆಗಳು ಲಾಭ ಪಡೆಯುತ್ತವೆ. ಕಬಿನಿ ಅಣೆಕಟ್ಟಿನ ಹಿನ್ನೀರು ವನ್ಯಜೀವಿಗಳಿಂದ ಸಮೃದ್ಧವಾಗಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವು ಕಬಿನಿ ಅರಣ್ಯದ ಭಾಗವಾಗಿದೆ. ಈ ಡ್ಯಾಂ ತುಂಬಾ ಚಿಕ್ಕದಾಗಿದ್ದು, ಇದು ಮೈಸೂರಿನ ಸಮೀಪದಲ್ಲಿದೆ. ಇದರ ನೀರು ಹರಿದು ಕಾವೇರಿ ನದಿಯನ್ನು ಸೇರುತ್ತದೆ.

ತುಂಗಭದ್ರಾ

ತುಂಗಭದ್ರಾ ಕರ್ನಾಟಕದ ಅತಿ ದೊಡ್ಡ ಅಣೆಕಟ್ಟುಗಳಲ್ಲಿ ಒಂದಾಗಿದೆ. ಕೊಪ್ಪಳ ತಾಲೂಕಿನ ಮುನಿರಾಬಾದ್ ನಲ್ಲಿರುವ ಇದರ ಎತ್ತರ 49.50 ಮೀ, ಉದ್ದ 2,449 ಮೀ., ಪೂರ್ಣ ಮಟ್ಟ 1,633.00 ಅಡಿ, ಸಂಗ್ರಹ ಸಾಮರ್ಥ್ಯ 133 ಟಿಎಂಸಿ. ಈ ಡ್ಯಾಂನಿಂದ ಬಳ್ಳಾರಿ, ಕೊಪ್ಪಳ, ರಾಯಚೂರು, ಆಂಧ್ರಪ್ರದೇಶ ಹಾಗೂ ತೆಲಂಗಾಣದ ಕೆಲವು ಜಿಲ್ಲೆಗಳಿಗೆ ಲಾಭವಾಗಲಿದೆ. ಇದನ್ನು ವಿದ್ಯುತ್, ಕುಡಿಯುವ ನೀರು, ಕೈಗಾರಿಕೆ ಹಾಗೂ ನೀರಾವರಿ ಉದ್ದೇಶಕ್ಕಾಗಿ 1953ರಲ್ಲಿ ನಿರ್ಮಾಣ ಮಾಡಲಾಯ್ತು. ವಿಶೇಷತೆ ಎಂದರೆ ಆಂಧ್ರಪ್ರದೇಶ ಹಾಗೂ ಕರ್ನಾಟಕ ಜಂಟಿ ಪಾಲುದಾರಿಕೆಯಲ್ಲಿ ಜಲಾಶಯ ನಿರ್ಮಿಸಲಾಯಿತು. ಈ ಅಣೆಕಟ್ಟಿನಲ್ಲಿ ಸುಮಾರು 33 ಗೇಟ್‌ಗಳಿವೆ. ಡ್ಯಾಂ ಬಳಿ ಜನಪ್ರಿಯ ಪ್ರವಾಸಿ ತಾಣ ಹಂಪಿ ಇರುವುದರಿಂದ ಇಲ್ಲಿಗೆ ಪ್ರವಾಸ ಹಮ್ಮಿಕೊಳ್ಳುವುದು ಬೆಸ್ಟ್‌.

ವಾಣಿ ವಿಲಾಸ

ವಾಣಿ ವಿಲಾಸ ಸಾಗರ ಕರ್ನಾಟಕದ ಅತ್ಯಂತ ಹಳೆಯ ಅಣೆಕಟ್ಟು. ಇದನ್ನು ಸ್ವಾತಂತ್ರ್ಯ ಪೂರ್ವದಲ್ಲಿಯೇ ನಿರ್ಮಿಸಲಾಗಿದೆ. ಇದು ಕೂಡ ಪ್ರವಾಸಿ ಆಕರ್ಷಣೆಯಾಗುತ್ತಿದೆ. ಈ ಡ್ಯಾಂ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಮಾರಿಕಣಿವೆಯಲ್ಲಿವೆ.ಎತ್ತರ 43.28 ಮೀ., ಉದ್ದ 405.50 ಮೀ., ಪೂರ್ಣ ಮಟ್ಟ 652.28 ಮೀಟರ್, ಸಂಗ್ರಹ ಸಾಮರ್ಥ್ಯ 30 ಟಿಎಂಸಿ, ಚಿತ್ರದುರ್ಗಕ್ಕೆ ಈ ಡ್ಯಾಂನಿಂದ ಲಾಭವಾಗಲಿದೆ. ನೀರಾವರಿ ಉದ್ದೇಶಕ್ಕಾಗಿ 1907ರಲ್ಲಿ ಇದನ್ನು ನಿರ್ಮಾಣ ಮಾಡಲಾಯಿತು.

ಲಿಂಗನಮಕ್ಕಿ

ಲಿಂಗನಮಕ್ಕಿ ಡ್ಯಾಂ ದೇಶದ ಅತಿ ದೊಡ್ಡ ಮಾನವ ನಿರ್ಮಿತ ನೀರಿನ ಸಂಗ್ರಹಾಗಾರಗಳಲ್ಲಿ ಒಂದಾಗಿದೆ. ಅಣೆಕಟ್ಟಿನ ಉದ್ದವು ಕೇವಲ 2.4 ಕಿಮೀ ಆದರೆ ಅಗಲದ ಕಾರಣ, ಅದರ ನೀರಿನ ಸಂಗ್ರಹ ಸಾಮರ್ಥ್ಯವು ಇತರ ಯಾವುದೇ ಅಣೆಕಟ್ಟುಗಳಿಗಿಂತ ಹೆಚ್ಚಿದೆ. ಮಳೆಗಾಲದಲ್ಲಿ ಅಣೆಕಟ್ಟಿಗೆ ಭೇಟಿ ನೀಡಲು ಉತ್ತಮ ಸಮಯವಾಗಿದೆ. ಇದು ಶಿವಮೊಗ್ಗ ಜಿಲ್ಲೆ, ಸಾಗರ ತಾಲೂಕಿನ ಲಿಂಗನಮಕ್ಕಿಯಲ್ಲಿದೆ. ಎತ್ತರ 192 ಅಡಿ, ಉದ್ದ 2,749.29 ಮೀ., ಪೂರ್ಣ ಮಟ್ಟ 1,819.00 ಅಡಿ, ಸಂಗ್ರಹ ಸಾಮರ್ಥ್ಯ 151.75 ಟಿಎಂಸಿ, ಇಡಿ ರಾಜ್ಯ (ವಿದ್ಯುತ್) ಇದರಿಂದ ಲಾಭ ಪಡೆಯಲಿದೆ. ವಿದ್ಯುತ್ ಉತ್ಪಾದನೆ ಉದ್ದೇಶದಿಂದ 1964ರಲ್ಲಿ ಇದು ನಿರ್ಮಾಣವಾಯಿತು.

ಆಲಮಟ್ಟಿ/ ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ ಜಲಾಶಯ

ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿಯ ತಾಲೂಕಿನ ಆಲಮಟ್ಟಿಯಲ್ಲಿದೆ ಈ ಡ್ಯಾಂ. ಎತ್ತರ 52.05 ಮೀ.
ಉದ್ದ 1,565.15 ಮೀ., ಪೂರ್ಣ ಮಟ್ಟ 519.1 ಮೀ., ಸಂಗ್ರಹ ಸಾಮರ್ಥ್ಯ 123 ಟಿಎಂಸಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳು ಈ ಡ್ಯಾಂನಿಂದ ಲಾಭ ಪಡೆಯಲಿವೆ. ನೀರಾವರಿ ಹಾಗೂ ವಿದ್ಯುತ್ ಉತ್ಪಾದನೆ ಉದ್ದೇಶಕ್ಕಾಗಿ 2005 ಜುಲೈನಲ್ಲಿ ಇದನ್ನು ನಿರ್ಮಾಣ ಮಾಡಲಾಯಿತು. ಅಣೆಕಟ್ಟಿನ ಪ್ರದೇಶದಲ್ಲಿ ಏಳು ತಾರಸಿ ಉದ್ಯಾನವನವನ್ನು ಅಭಿವೃದ್ಧಿಪಡಿಸಲಾಗಿದೆ. ಇಲ್ಲಿ ದೋಣಿ ವಿಹಾರ (ಬೋಟಿಂಗ್), ಸಂಗೀತ ಕಾರಂಜಿ ಮತ್ತು ನಿಂತ ಕಾರಂಜಿಗಳು ಇವೆ. ಅಣೆಕಟ್ಟಿನ ಒಂದು ಬದಿಯಲ್ಲಿ, "ರಾಕ್ ಹಿಲ್" ಎಂಬ ಕೃತಕ ಅರಣ್ಯವನ್ನು ಅಭಿವೃದ್ಧಿ ಪಡಿಸಲಾಗಿದೆ. ,ಅದರಲ್ಲಿ ಸೆರಾಮಿಕ್ ಕಾಡುಪ್ರಾಣಿಗಳ ಹಾಗೂ ಪಕ್ಷಿಗಳ ಪ್ರತಿರೂಪಗಳಿವೆ ಮತ್ತು ಭಾರತದ ಹಳ್ಳಿಯ ಜೀವನವನ್ನು ಪ್ರತಿನಿಧಿಸುವ ಅನೇಕ ವಿಗ್ರಹಗಳನ್ನು ಹೊಂದಿದೆ.

ಬಸವಸಾಗರ/ನಾರಾಯಣಪುರ ಜಲಾಶಯ

ರಾಜ್ಯದ ಮೂರನೇ ದೊಡ್ಡ ಆಣೆಕಟ್ಟು ಎಂದು ಪ್ರಸಿದ್ಧಿ ಪಡೆದಿದೆ. ಇದು ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ನಾರಾಯಣಪುರದಲ್ಲಿದೆ. ಎತ್ತರ 29.72 ಮೀ., ಉದ್ದ 10,637 ಮೀ., ಪೂರ್ಣ ಮಟ್ಟ 492.23 ಮೀ., ಸಂಗ್ರಹ ಸಾಮರ್ಥ್ಯ 33.33 ಟಿಎಂಸಿ. ಯಾದಗಿರಿ, ರಾಯಚೂರು, ವಿಜಯಪುರ, ಬಾಗಲಕೋಟೆ ಜಿಲ್ಲೆಗೆ ಈ ಜಲಾಶಯದಿಂದ ಲಾಭವಾಗಲಿದೆ.

1982ರಲ್ಲಿ ಕುಡಿಯುವ ನೀರು ಪೂರೈಕೆ, ನೀರಾವರಿ ಹಾಗೂ ವಿದ್ಯುತ್ ಉದ್ದೇಶಕ್ಕಾಗಿ ಇದನ್ನು ನಿರ್ಮಿಸಲಾಯಿತು.

ಹೇಮಾವತಿ

ಹಾಸನ ಜಿಲ್ಲೆಯ ಗೊರೂರಿನಲ್ಲಿದೆ. ಎತ್ತರ 44.5 ಮೀ., ಉದ್ದ 4,692 ಮೀ. ಪೂರ್ಣ ಮಟ್ಟ 2,922 ಅಡಿ, ಸಂಗ್ರಹ ಸಾಮರ್ಥ್ಯ 37.103 ಟಿಎಂಸಿ. ಹಾಸನ, ತುಮಕೂರು, ಮಂಡ್ಯ, ಮೈಸೂರು ಜಿಲ್ಲೆಗಳು ಇದರಿಂದ ಲಾಭ ಪಡೆಯಲಿವೆ. ನೀರಾವರಿ, ಕುಡಿಯುವ ನೀರಿನ ಉದ್ದೇಶದಿಂದ 1979ರಲ್ಲಿ ಇದು ನಿರ್ಮಾಣವಾಯಿತು. ಅಣೆಕಟ್ಟು ನಿರ್ಮಾಣದ ಸಮಯದಲ್ಲಿ ಮುಳುಗಿದ ಶೆಟ್ಟಿಹಳ್ಳಿ ರೋಸರಿ ಚರ್ಚ್ ಅನ್ನು ಬೇಸಿಗೆಯ ತಿಂಗಳುಗಳಲ್ಲಿ ನೀರಿನ ಮಟ್ಟ ಕಡಿಮೆಯಾದಾಗ ಮಾತ್ರ ನೋಡಬಹುದು.

ಭದ್ರಾ

ಚಿಕ್ಕಮಗಳೂರು ಜಿಲ್ಲೆಯ ತರಿಕೇರೆ ತಾಲೂಕಿನ ಲಕ್ಕವಳ್ಳಿಯಲ್ಲಿದೆ. ಎತ್ತರ 59.13 ಮೀ., ಉದ್ದ 1,708 ಮೀ., ಪೂರ್ಣ ಮಟ್ಟ 186.00 ಅಡಿ, ಸಂಗ್ರಹ ಸಾಮರ್ಥ್ಯ 71 ಟಿಎಂಸಿ. ಡ್ಯಾಂನಿಂದ ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಬಳ್ಳಾರಿ ಜಿಲ್ಲೆಗಳು ಲಾಭ ಪಡೆಯುತ್ತವೆ. 1965ರಲ್ಲಿ ನೀರಾವರಿ, ವಿದ್ಯುತ್ ಉತ್ಪಾದನೆ ಉದ್ದೇಶದಿಂದ ಇದನ್ನು ನಿರ್ಮಿಸಲಾಯಿತು. ತುಂಗಭದ್ರಾ ನದಿಯ ಉಪನದಿಯಾಗಿರುವ ಭದ್ರಾ ನದಿಗೆ ಭದ್ರಾ ಡ್ಯಾಂ ನಿರ್ಮಿಸಲಾಗಿದೆ. ಅಣೆಕಟ್ಟು ಹಚ್ಚ ಹಸಿರಿನಿಂದ ಸುತ್ತುವರಿದಿದೆ. ಇಲ್ಲಿ ಅನೇಕ ಸಣ್ಣ ದ್ವೀಪಗಳನ್ನು ನೋಡಬಹುದಾಗಿದ್ದು, ಇವು ವಲಸೆ ಹಕ್ಕಿಗಳಿಗೆ ನೆಲೆಯಾಗಿದೆ. ಇಲ್ಲಿಗೆ ಮಳೆಗಾಲದಲ್ಲಿ ಭೇಟಿ ನೀಡುವುದು ಉತ್ತಮ ಸಮಯವಾಗಿದೆ.

ಘಟಪ್ರಭಾ/ ರಾಜ ಲಖಮಗೌಡ ಜಲಾಶಯ

ಇದು ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಹಿಡಕಲ್ ನಲ್ಲಿದೆ. ಎತ್ತರ 48.3 ಮೀ., ಉದ್ದ 10,183 ಮೀ.
ಪೂರ್ಣ ಮಟ್ಟ 2,175.00 ಅಡಿ, ಸಂಗ್ರಹ ಸಾಮರ್ಥ್ಯ 51 ಟಿಎಂಸಿ. ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳು ಇದರಿಂದ ಲಾಭ ಪಡೆಯಲಿವೆ. 1977 ರಲ್ಲಿ ಇದನ್ನು ನೀರಾವರಿ, ಕುಡಿಯುವ ನೀರು ಹಾಗೂ ವಿದ್ಯುತ್ ಉತ್ಪಾದನೆ ಉದ್ದೇಶದಿಂದ ನಿರ್ಮಿಸಲಾಯಿತು. ಘಟಪ್ರಭಾ ಪಕ್ಷಿಧಾಮ ಮತ್ತು ಧೂಪದಾಳ ಅಣೆಕಟ್ಟು ಗೋಕಾಕ್ ಪಟ್ಟಣದಿಂದ 15 ಕಿ.ಮೀ ದೂರದಲ್ಲಿದೆ. ಇವೆರಡೂ ಪ್ರವಾಸೋದ್ಯಮ ಇಲಾಖೆಯಿಂದ ಮಾನ್ಯತೆ ಪಡೆದ ಪ್ರವಾಸಿ ತಾಣಗಳಾಗಿವೆ.

ಮಲಪ್ರಭಾ/ ರೇಣುಕಾ ಸಾಗರ ಜಲಾಶಯ

ಇದು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ನವಿಲುತೀರ್ಥದಲ್ಲಿದೆ. ಎತ್ತರ 154.53 ಮೀ.,
ಉದ್ದ 154. 52 ಮೀ., ಪೂರ್ಣ ಮಟ್ಟ 2,079 ಅಡಿ, ಸಂಗ್ರಹ ಸಾಮರ್ಥ್ಯ 34.35. ಬೆಳಗಾವಿ, ಧಾರವಾಡ, ಗದಗ, ಬಾಗಲಕೋಟೆ ಜಿಲ್ಲೆಗಳು ಇದರಿಂದ ಲಾಭ ಪಡೆಯಲಿವೆ. ನೀರಾವರಿ, ಕುಡಿಯುವ ನೀರು ಪೂರೈಕೆ ಉದ್ದೇಶಕ್ಕಾಗಿ 1972ರಲ್ಲಿ ಇದನ್ನು ನಿರ್ಮಿಸಲಾಯಿತು.

ಹಾರಂಗಿ

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹುಡಗುರುನಲ್ಲಿದೆ ಹಾರಂಗಿ ಡ್ಯಾಂ. ಎತ್ತರ 49.99 ಮೀ., ಉದ್ದ 845.82 ಮೀ., ಪೂರ್ಣ ಮಟ್ಟ 2,859 ಅಡಿ, ಸಂಗ್ರಹ ಸಾಮರ್ಥ್ಯ 8.5 ಟಿಎಂಸಿ. ಕೊಡಗು, ಮೈಸೂರು ಜಿಲ್ಲೆಗೆ ಇದರಿಂದ ಲಾಭವಾಗಲಿದೆ. 1982ರಲ್ಲಿ ನೀರಾವರಿ ಉದ್ದೇಶಕ್ಕಾಗಿ ಇದು ನಿರ್ಮಾಣವಾಯಿತು. ಹಾರಂಗಿ ಜಲಾಶಯ ಕಾವೇರಿ ನದಿಯ ನೀರಿನಿಂದ ಆವೃತವಾಗಿದ್ದು, ಈ ಜಲಾಶಯವು ಸುಂದರವಾದ ನೈಸರ್ಗಿಕ ಸ್ಥಳವಾಗಿದೆ. ವಾರಾಂತ್ಯ ವಿರಾಮಕ್ಕೆ ಸೂಕ್ತವಾಗಿದೆ.

ಸೂಪಾ

ಉತ್ತರ ಕನ್ನಡ ಜಿಲ್ಲೆ ಜೋಯಿಡಾದಲ್ಲಿದೆ. ಎತ್ತರ 101 ಮೀ., ಉದ್ದ 332 ಮೀ., ಪೂರ್ಣ ಮಟ್ಟ 564.00 ಮೀ.
ಸಂಗ್ರಹ ಸಾಮರ್ಥ್ಯ 147 ಟಿಎಂಸಿ, ಉತ್ತರ ಕನ್ನಡ ಜಿಲ್ಲೆ ಡ್ಯಾಂನಿಂದ ಲಾಭ ಪಡೆಯಲಿದೆ. 1987ರಲ್ಲಿ ನೀರಾವರಿ, ವಿದ್ಯುತ್ ಉದ್ದೇಶಕ್ಕಾಗಿ ಇದು ನಿರ್ಮಾಣವಾಯಿತು. ಇದು ಕರ್ನಾಟಕದ ಎರಡನೇ ಅತಿದೊಡ್ಡ ಅಣೆಕಟ್ಟು ಎಂಬ ಖ್ಯಾತಿಯನ್ನೂ ಗಳಿಸಿಕೊಂಡಿದೆ. ಕಾಳಿನದಿಗೆ ಕಟ್ಟಲಾಗಿರುವ ಹಲವಾರು ದೊಡ್ಡ ಅಣೆಕಟ್ಟುಗಳಲ್ಲಿ ಇದೂ ಒಂದು.

More News

Read more about: dams karnataka ಜಲಾಶಯ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+