ಪಾಲಂಪೂರ್ ಕಂಗ್ರ ಕಣಿವೆಯಲ್ಲಿರುವ ಪಾಲಂಪೂರ್ ಬೆಟ್ಟದ ಮೇಲೆ ನೆಲೆ ನಿಂತಿದೆ. ದಟ್ಟವಾದ ಪೈನ್ ಕಾಡು ಮತ್ತು ಸುಗಂಧಭರಿತ ಸ್ಪಟಿಕದಷ್ಟು ಶೂದ್ದವಾದ ಹರಿಯುವ ತೊರೆ ಈ ಸ್ಥಳದ ಮೆರುಗು ಹೆಚ್ಚಿಸಿದೆ. ಒಂದೊಳ್ಳೆಯ ರಜಾ ಸಮಯವನ್ನು ಕಳೆಯುವುದಕ್ಕೆ ಪಾಲಂಪೂರ್ ಸೂಕ್ತ ಸ್ಥಳವಾಗಿದ್ದು ಉಳಿದ ವ್ಯಾವಹಾರಿಕ ಪ್ರವಾಸಿ ತಾಣಗಳಿಗಿಂತ ಭಿನ್ನವಾಗಿದೆ. ಸಮುದ್ರ ಮಟ್ಟದಿಂದ ಸುಮಾರು 1220 ಮೀಟರ್ ಎತ್ತರದಲ್ಲಿರುವ ಪಾಲಂಪೂರ್ ನಿಸರ್ಗ ಮತ್ತು ಕಲಾ ಪ್ರಿಯರಿಗೆ ಒಳ್ಳೆಯ ಔತಣ ನೀಡುತ್ತದೆ. ಈ ಸ್ಥಳಕ್ಕೆ ಹೆಸರು ಹಿಮಾಚಲಿ ಭಾಷೆಯ ಶಬ್ದ ಪುಲುಂ ಎಂಬುದರಿಂದ ಬಂದಿದ್ದು ಅದರರ್ಥ ನೀರಿನ ಬುಗ್ಗೆ ಎಂದು.
19 ನೇ ಶತಮಾನದಲ್ಲಿ ಬ್ರಿಟಿಷರು ಈ ಸ್ಥಳವನ್ನು ಹುಡುಕಿ ಇಲ್ಲಿನ ಇಳಿಜಾರು ಭೂಮಿಯಲ್ಲಿ ಚಹ ಗಿಡಗಳನ್ನು ಬೆಳೆಸಲು ತೀರ್ಮಾನಿಸಿದರು. ಪಾಲಂಪುರ್ ರಾಜ್ಯದ ಚಹ ರಾಜಧಾನಿ ಎಂದೇ ಪ್ರಸಿದ್ದಿ ಪಡೆದಿದ್ದು ಬೇರೇ ಬೇರೇ ಬ್ರ್ಯಾಂಡ್ ಗಳ ಹೆಸರಲ್ಲಿ ಚಹ ರಫ್ತು ಮಾಡಲಾಗುತ್ತದೆ. ಸಣ್ಣ ನಗರಗಳು, ಭತ್ತದ ಗದ್ದೆಗಳು, ಹಳ್ಳಿಗಳು, ಸಾಲು ಸಾಲು ಬಂಗಲೆಗಳು ಮತ್ತು ಹಿಮಾವೃತ ದೌಲಾಧರ್ ಪರ್ವತ ಶ್ರೇಣಿಗಳು ಪ್ರವಾಸಿಗರ ಪಾಲಿಗೆ ಸ್ವರ್ಗದಂತಾಗಿದೆ.
ಗಗ್ಗಲ್ ಅಥವಾ ಧರ್ಮಶಾಲಾ-ಕಂಗ್ರ ವಿಮಾನ ನಿಲ್ದಾಣ ಪಾಲಂಪುರ್ ದಿಂದ 40 ಕಿಲೋ ಮೀಟರ್ ದೂರದಲ್ಲಿದೆ. ಈ ವಿಮಾನ ನಿಲ್ದಾಣ ದೆಹಲಿ ಮತ್ತು ಮುಂಬೈ ನಗರಗಳಿಗೆ ನೇರ ಸಂಪರ್ಕ ಕಲ್ಪಿಸುತ್ತದೆ. ರೈಲಿನಲ್ಲಿ ಪ್ರಯಾಣಿಸಲು ಇಚ್ಚಿಸುವವರು ಮರಂಡದಲ್ಲಿರುವ ನ್ಯಾರೋ ಗೇಝ್ ರೈಲು ನಿಲ್ದಾಣ ಮತ್ತು 120 ಕಿಲೋ ಮೀಟರ್ ದೂರದಲ್ಲಿರುವ ಬ್ರಾಡ್ ಗೇಝ್ ರೈಲು ನಿಲ್ದಾಣದಿಂದ ರೈಲ್ವೇ ಸಂಪರ್ಕ ಪಡೆಯಬಹುದು. ಇದರ ಜೊತೆಗೆ ರಸ್ತೆ ಪ್ರಯಾಣವೂ ಇಲ್ಲಿ ಸಾಧ್ಯ. ಮಂಡಿ, ಪಠಾನಕೋಟ್ ಮತ್ತು ಧರ್ಮಶಾಲಾದಿಂದ ಖಾಸಗಿ ಮತ್ತು ಸರ್ಕಾರಿ ಬಸ್ ಸೌಲಭ್ಯಗಳಿವೆ.


Click it and Unblock the Notifications