ಸ್ಪಿತಿ: ಭಾರತ ಹಾಗೂ ಟಿಬೆಟ್‌ನ ಸಂಪರ್ಕ ಕೊಂಡಿ

ಹಿಮಾಚಲ ಪ್ರದೇಶ ರಾಜ್ಯದ ಈಶಾನ್ಯ ದಿಕ್ಕಿನಲ್ಲಿ ಬಹುದೂರದಲ್ಲಿರುವ ಹಿಮಾಲಯ ಕಣಿವೆ ಪ್ರದೇಶದಲ್ಲಿ ಸ್ಪಿತಿ ನೆಲೆಸಿದೆ. ಸ್ಪಿತಿ ಅಂದರೆ ಮಧ್ಯದ ಭೂಮಿ ಎಂದಾಗುತ್ತದೆ. ಇದು ಭಾರತ ಹಾಗೂ ಟಿಬೆಟ್‌ ನಡುವೆ ಇರುವ ಪ್ರದೇಶ. ಅತಿ ಎತ್ತರವಾದ ಸ್ಥಳದಲ್ಲಿ ಈ ತಾಣ ಇದೆ. ವೀಕ್ಷಣಾ ದೃಷ್ಟಿಯಿಂದ ಇದು ಅತ್ಯಂತ ಜನಪ್ರಿಯ ಪ್ರದೇಶ. ಬೌದ್ಧ ಧರ್ಮದ ಸಂಸ್ಕೃತಿ ಹಾಗೂ ಆಶ್ರಮಗಳು ಇಲ್ಲಿ ಹೆಚ್ಚಿವೆ. ಅತಿ ಕಡಿಮೆ ಜನಸಂಖ್ಯೆ ಉಳ್ಳ ಭಾರತದ ಕೆಲವೇ ಕೆಲವು ಪ್ರದೇಶಗಳಲ್ಲಿ ಇದೂ ಒಂದೆನಿಸಿದೆ. ಭೂತಿ ಇಲ್ಲಿನ ಸ್ಥಳೀಯ ವಾಸಿಗಳ ಆಡು ಭಾಷೆ.

ಕೀ ಆಶ್ರಮ ಇಲ್ಲಿನ ಪ್ರಮುಖ ಆಕರ್ಷಣೆ ಆಗಿದೆ. ದೇಶದ ಅತ್ಯಂತ ಪುರಾತನ ಆಶ್ರಮ ಎಂಬ ಹೆಗ್ಗಳಿಕೆ ಇದರದ್ದು. ಇಲ್ಲಿ ಕೆಲ ಸಾಹಸ ಕ್ರೀಡೆಗೆ ಅವಕಾಶ ಇದೆ. ಬೆಟ್ಟದ ಮೇಲೆ ಬೈಕಿಂಗ್‌, ಯಾಕ್‌ ಸಫಾರಿ ಇಲ್ಲಿನ ಪ್ರಮುಖ ಆಕರ್ಷಣೆಗಳು. ನೈಸರ್ಗಿಕ ಸೌಂದರ್ಯವು ಈ ಪ್ರದೇಶವನ್ನು ಇನ್ನಷ್ಟು ಅಪ್ಯಾಯಮಾನವಾಗಿಸಿದೆ. ಸಾಕಷ್ಟು ಬಾಲಿವುಡ್‌ ಚಿತ್ರಗಳು ಕೂಡ ಇಲ್ಲಿ ಚಿತ್ರೀಕರಣಗೊಂಡಿವೆ. ಅವುಗಳಲ್ಲಿ ಪಾಪ್‌ ಹಾಗೂ ಮಿಲಾರೆಪ್ಪಾ ಮುಖ್ಯವಾದುದು.

ಇಲ್ಲಿನ ಅತ್ಯಂತ ಪ್ರಮುಖ ಎರಡು ಪಟ್ಟಣಗಳು ಖಾಜಾ ಹಾಗೂ ಕೀಲಾಂಗ್‌. ಕೆಲವೊಂದು ಅಪರೂಪದ ಜೀವಿಗಳು, ಹೂವು, ಸಸ್ಯಗಳು ಈ ಪ್ರದೇಶದಲ್ಲಿ ಕಂಡು ಬರುತ್ತವೆ. ಇವು ಪ್ರದೇಶದ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿವೆ. ಗೋಧಿ, ಬಾರ್ಲಿ, ಪೇಸ್‌ ಮತ್ತಿತರವು ಇಲ್ಲಿ ಬೆಳೆಯುವ ಬೆಳೆಗಳು. ಸ್ಪಿತಿಗೆ ಸಮೀಪದ ವಿಮಾನ ನಿಲ್ದಾಣ ಭುಂತರ್‌. ಇದು ಶಿಮ್ಲಾ ಹಾಗೂ ದಿಲ್ಲಿ ಸೇರಿದಂತೆ ಹತ್ತು ಹಲವು ನಗರಗಳೊಂದಿಗೆ ಸಂಪರ್ಕ ಹೊಂದಿದೆ.

ಅಂತಾರಾಷ್ಟ್ರೀಯ ಪ್ರವಾಸಿಗರು ಇಲ್ಲಿ ಬರಬೇಕಾದರೆ ದಿಲ್ಲಿಯಿಂದ ಭುಂತರ್‌ಗೆ ಬಂದು ಬರಬಹುದು. ಉತ್ತಮ ಸಂಪರ್ಕ ಸೌಲಭ್ಯ ಇಲ್ಲಿಂದಿದೆ. ಸ್ಪಿತಿಗೆ ಸಮೀಪದ ರೈಲು ನಿಲ್ದಾಣ ಜೋಗಿಂದರನಗರ್‌. ಇದು ನ್ಯಾರೋಗೇಜ್‌ ರೈಲು ನಿಲ್ದಾಣವನ್ನು ಹೊಂದಿದೆ. ಇದಲ್ಲದೇ ಚಂಡಿಘಡ, ಶಿಮ್ಲಾವು ಸ್ಪಿತಿಗೆ ಹತ್ತಿರದಲ್ಲಿರುವ ಇನ್ನಿತರ ಪ್ರಮುಖ ರೈಲು ನಿಲ್ದಾಣಗಳು. ಇವು ದೇಶದ ಪ್ರಮುಖ ನಗರಗಳಿಂದ ಉತ್ತಮ ಸಂಚಾರ ಸಂಪರ್ಕ ಹೊಂದಿವೆ.

ರೈಲು ನಿಲ್ದಾಣದಿಂದ ಸ್ಪಿತಿಗೆ ಬರಲು ಪ್ರವಾಸಿಗರಿಗೆ ಸಾಕಷ್ಟು ಕಾರು, ಕ್ಯಾಬ್‌ಗಳು ಸಿಗುತ್ತವೆ. ಇನ್ನು ರಸ್ತೆ ಮಾರ್ಗ ಗಮನಿಸಿದಾಗ, ರಾಷ್ಟ್ರೀಯ ಹೆದ್ದಾರಿ 21 ಈ ಮೂಲಕವೇ ಹಾದು ಹೋಗಿದೆ. ಇದರಿಂದ ಇಲ್ಲಿಗೆ ರೋಹತಂಗ್‌ ಪಾಸ್‌ ಹಾಗೂ ಕುಂಜಂ ಪಾಸ್‌ಗಳಿಂದ ಸಂಪರ್ಕ ಹೊಂದಿದೆ.

ಇನ್ನು ತಿಳಿದುಕೊಳ್ಳಲೇಬೇಕಾದ ಅಂಶವೆಂದರೆ ಈ ಪ್ರದೇಶ ನವೆಂಬರ್‌ನಿಂದ ಜೂನ್‌ವರೆಗೆ ಪ್ರವೇಶ ಮುಕ್ತವಾಗಿರುವುದಿಲ್ಲ. ಅತಿಯಾದ ಹಿಮಪಾತ ಆಗುವುದರಿಂದ ಪ್ರವೇಶ ನಿರ್ಬಂಧಿಸಲಾಗುತ್ತದೆ. ಸ್ಪಿತಿಗೆ ತಲುಪಲು ಕಿನ್ನೌರ್ ಮಾರ್ಗದಲ್ಲಿ ಬರುವುದು ಅತ್ಯಂತ ಪ್ರಶಸ್ತ. ಇದು ಸ್ಪಿತಿಯಿಂದ 412 ಕಿ.ಮೀ. ದೂರದಲ್ಲಿದೆ.

ವರ್ಷದ ಎಲ್ಲಾ ದಿನವೂ ಸ್ಪಿತಿಯ ವಾತಾವರಣ ಸಹನೀಯವಾಗಿರುತ್ತದೆ. ಆದರೂ ಚಳಿಗಾಲದಲ್ಲಿ ವರ್ಷದಲ್ಲೇ ಕೊಂಚ ಸಮಸ್ಯೆ ಇರುತ್ತದೆ. ಹಿಮಪಾತ ಆಗುವುದರಿಂದ ಬರುವುದು ಸರಿಯಲ್ಲ. ಬೇಸಿಗೆ ಕಾಲದಲ್ಲಿ ಅಂದರೆ ಮೇ ನಿಂದ ಅಕ್ಟೋಬರ್‌ ನಡುವೆ ಇಲ್ಲಿಗೆ ಬರುವುದು ಸೂಕ್ತ. ತಾಪಮಾನವೂ ಕಡಿಮೆ ಇದ್ದು, ವಾತಾವರಣ ಆಹ್ಲಾದಮಯವಾಗಿರುತ್ತದೆ. ಈ ಪ್ರದೇಶದಲ್ಲಿ ಉಷ್ಣಾಂಶ ಆ ಸಂದರ್ಭದಲ್ಲಿ 15 ಡಿಗ್ರಿ ಸೆಲ್ಶಿಯಸ್‌ಗಿಂತ ಕಡಿಮೆ ಆಗುವುದಿಲ್ಲ. ಇದು ಮಳೆ ನೆರಳು ಪ್ರದೇಶ ವ್ಯಾಪ್ತಿಗೆ ಬರುತ್ತದೆ. ಇದರಿಂದಾಗಿ ಇಲ್ಲಿ ಮಳೆ ಬೀಳುವುದು ವಿರಳ. ಚಳಿಗಾಲದಲ್ಲಿ ವಿಪರೀತ ಹಿಮಪಾತ ಆಗುವುದರಿಂದ ತಾಪಮಾನ ಶೂನ್ಯ ಡಿಗ್ರಿ ಸೆಲ್ಶಿಯಸ್‌ವರೆಗೂ ತಲುಪುತ್ತದೆ.

Please Wait while comments are loading...