ಗಣಪತಿಪುಲೆ - ಭಾರತದ ಕೆರಿಬಿಯನ್

ಕೊಂಕಣ ಪ್ರಾಂತ್ಯದ ಕರಾವಳಿಯ ಸುಂದರವಾದ ಸಮುದ್ರ ತೀರದ ಪಟ್ಟಣವಾದ ಗಣಪತಿ ಪುಲೆಯು, ಕೆರಿಬಿಯನ್ ದ್ವೀಪಗಳಿಗೆ ಸಮರೂಪವಾಗಿದ್ದು ಭಾರತದ ಕೆರಿಬಿಯನ್ ಎಂಬ ಖ್ಯಾತಿಗಳಿಸಿದೆ. ಈ ಸ್ಥಳವು ರತ್ನಾಗಿರಿ ಜಿಲ್ಲೆಯಲ್ಲಿದ್ದು, ಮುಂಬೈನಿಂದ ಅಂದಾಜು 375 ಕಿ.ಮೀ ದೂರದಲ್ಲಿದೆ. ಮಹಾರಾಷ್ಟ್ರದ ಈ ಸಣ್ಣ ಗ್ರಾಮವು ನಗರದ ಪೊಳ್ಳು ವಾಣಿಜ್ಯೀಕರಣದಿಂದ ಮುಕ್ತವಾಗಿದ್ದು, ತನ್ನ ಹಳ್ಳಿಗಾಡಿನ ನೈಜತೆಯ ವರ್ಚಸ್ಸನ್ನು ಕಾಪಾಡಿಕೊಂಡು ಬಂದಿದೆ. ಹಾಗಾಗಿ ಇದು ಪ್ರಮುಖ ಯಾತ್ರಾ ಸ್ಥಳವಾಗಿ ತನ್ನ ಹೆಸರನ್ನು ಉಳಿಸಿಕೊಂಡಿದೆ.

ಧರ್ಮ, ಬೀಚು ಮತ್ತು ಇತಿಹಾಸ - ಎಲ್ಲವೂ ಒಂದೆ ಕಡೆಯಲ್ಲಿ!

ಗಣಪತಿಪುಲೆ ಗ್ರಾಮದಲ್ಲಿರುವ ಸ್ವಯಂಭು ಗಣಪತಿ ದೇವಾಲಯವು ಪ್ರವಾಸಿಗರ ಪ್ರಧಾನ ಆಕರ್ಷಣೀಯ ತಾಣವಾಗಿದೆ. ಈ ದೇವಾಲಯದಲ್ಲಿ ಏಕಶಿಲೆಯಿಂದ ಕೆತ್ತಲಾಗಿರುವ ಗಣಪತಿ ವಿಗ್ರಹವು 400 ವರ್ಷದಷ್ಟು ಹಳೆಯದು ಎಂದು ಖಚಿತಗೊಂಡಿದೆ. ಪ್ರತಿ ವರ್ಷವು ಗಣಪತಿಯ ಆಶೀರ್ವಾದ ಪಡೆಯಲು ಭಕ್ತಾಧಿಗಳು ಇಲ್ಲಿಗೆ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಇಲ್ಲಿನ ಗಣಪತಿಯನ್ನು ಪಶ್ಚಿಮ ದ್ವಾರ ದೇವತೆ ಎಂದು ಪರಿಗಣಿಸಲಾಗುತ್ತದೆ. ಗಣಪತಿಪುಲೆಯಲ್ಲಿ ನೆಲೆಸಿರುವ ಸ್ಥಳೀಯರು ತಮ್ಮನ್ನು ತಾವು ಗಣಪತಿಯ ವರಪುತ್ರರೆಂದು ಹಾಗು ಗಣಪತಿ ತಮ್ಮನ್ನು ಪೊರೆಯುವನೆಂದು ನಂಬುತ್ತಾರೆ.

ಗಣಪತಿಪುಲೆಯ ಬೀಚುಗಳು ಸ್ವಚ್ಛ ಮತ್ತು ಪರಿಪೂರ್ಣತೆಯಿಂದ ಕೂಡಿದೆ. ಇಲ್ಲಿನ ನೀರು ಕಲುಷಿತ ರಹಿತವಾಗಿದ್ದು ಪರಿಶುದ್ಧವಾಗಿದೆ. ಈ ಪ್ರಾಂತ್ಯವು ಯಥೇಚ್ಛವಾದ ಸಸ್ಯ ವೈವಿಧ್ಯಗಳಿಂದ ಕೂಡಿದೆ. ಮ್ಯಾಂಗ್ರೋವ್ ಮತ್ತು ತೆಂಗಿನ ತೋಪುಗಳು ಇಲ್ಲಿನ ಬೀಚಿನಲ್ಲಿ ವಿಸ್ತಾರವಾಗಿ ಹರಡಿವೆ. ಈ ತೋಪುಗಳು ದೂರದಿಂದ ನೋಡುವವರಿಗೆ ಅತ್ಯಂತ ಸುಂದರವಾಗಿ ಕಾಣಿಸುತ್ತವೆ.

ರಾಯ್ ಗಡ್ ಕೋಟೆ ಮತ್ತು ರಾಯ್ ಗಡ್ ದೀಪದ ಗೋಪುರ (ಲೈಟ್ ಹೌಸ್) ದ ಸ್ಥಳಗಳನ್ನು ಈ ಪ್ರದೇಶಕ್ಕೆ ಭೇಟಿಕೊಟ್ಟಾಗ ತಪ್ಪದೆ ನೋಡಲೇ ಬೇಕು.

ಈ ಊರಿಗೆ ಭೇಟಿಕೊಟ್ಟಾಗ, ನೀವು ಇಲ್ಲಿ ಸಿಗುವ ವಿಶೇಷ ಖಾದ್ಯಗಳಾದ ಅಂಬಾಪೊಳಿ ಮತ್ತು ಫಾನಪೊಳಿ ಎಂಬ ಮಾವಿನ ಮತ್ತು ಹಲಸಿನ ಹಪ್ಪಳಗಳ ರುಚಿಯನ್ನು ಸವಿಯಬಹುದು. ಇಲ್ಲಿನ ಸ್ಥಳೀಯರ ನೆಚ್ಚಿನ ಖಾದ್ಯವಾದ ಕೊಕಂ ಕಡಿಯನ್ನು ಸಹ ಒಮ್ಮೆ ರುಚಿಗಾಗಿ ನೋಡಬಹುದು. ದೇವ್ ಗಡ್ ಆಪುಸ್ ( ಒಂದು ಬಗೆಯ ಮಾವಿನಹಣ್ಣು) ಇಲ್ಲಿ ಬೆಳೆಯಲಾಗುವ ವಿಶ್ವ ವಿಖ್ಯಾತ ಹಣ್ಣಾಗಿದೆ. ನೀವು ಗಣಪತಿಪುಲೆಗೆ ಬೇಸಿಗೆಯಲ್ಲಿ ಭೇಟಿಕೊಡುವಿರಾದರೆ ದೇವ್ ಗಡ್ ಆಪುಸ್ ಮಾವಿನಹಣ್ಣಿನ ರುಚಿ ನೋಡುವ ಅವಕಾಶವನ್ನು ಕಳೆದು ಕೊಳ್ಳಬೇಡಿ. ಈ ಊರಿನಲ್ಲಿರುವಾಗ ನೀವು ಗಣಪತಿಯ ನೆಚ್ಚಿನ ತಿಂಡಿಯಾದ ಮೋದಕ( ಕಡುಬು)ವೆಂಬ ಸಿಹಿ ತಿಂಡಿಯ ರುಚಿಯನ್ನು ಸವಿಯದೆ ಇರುವುದಿಲ್ಲ.

ಇಲ್ಲಿಗೆ ಪ್ರವಾಸ ಹೊರಟಾಗ ಗಮನದಲ್ಲಿಡ ಬೇಕಾದ ಕೆಲವು ಅಂಶಗಳು

ಗಣಪತಿಪುಲೆ ಗ್ರಾಮದ ಸ್ಥಳೀಯರು ಇಲ್ಲಿನ ಗಣಪತಿಯ ಕಟ್ಟಾ ಭಕ್ತರಾಗಿದ್ದು, ಅತ್ಯಂತ ಆದರದ ಆತಿಥ್ಯಕ್ಕೆ ಹೆಸರಾಗಿದ್ದಾರೆ. ಈ ಊರು ಪ್ರಮುಖ ಯಾತ್ರಾಸ್ಥಳವಾಗಿದ್ದು, ಇಲ್ಲಿನ ಜನರು ಮುಖ್ಯವಾಗಿ ಮರಾಠಿಯನ್ನು ಮಾತನಾಡುತ್ತಾರೆ. ಆದರು ಇಲ್ಲಿ ಹಿಂದಿ ಮತ್ತು ಇಂಗ್ಲೀಷ್ ನಲ್ಲಿಯೂ ಸಹ ವ್ಯವಹರಿಸಬಹುದಾಗಿದೆ.

ಗಣಪತಿಪುಲೆ ಅರಬ್ಬೀ ಸಮುದ್ರಕ್ಕೆ ಅತ್ಯಂತ ಸಮೀಪದಲ್ಲಿರುವುದರಿಂದ ಇಲ್ಲಿನ ಹವಾಗುಣವು ವರ್ಷಪೂರ್ತಿ ಆಹ್ಲಾದಕರವಾಗಿರುತ್ತದೆ. ಇಲ್ಲಿ ಬೇಸಿಗೆಯು ಸ್ವಲ್ಪ ಬಿಸಿಲಿನಿಂದ ಕೂಡಿದ್ದು, ಪ್ರವಾಸಿಗರು ಈ ಕಾಲದಲ್ಲಿ ಇಲ್ಲಿಗೆ ಭೇಟಿಕೊಡಲು ಮನಸ್ಸು ಮಾಡುವುದಿಲ್ಲ. ಆದರೂ ನೀವು ಇಲ್ಲಿಗೆ ಭೇಟಿಕೊಡಲೆ ಬೇಕಾದಲ್ಲಿ ನಿಮ್ಮ ಈಜುಡುಗೆಗಳನ್ನು ತರಲು ಮಾತ್ರ ಮರೆಯಬೇಡಿ. ಇಲ್ಲಿನ ವಾತಾವರಣವು ನಿಮಗೆ ಈಜಿನ ಮೋಜನ್ನು ಸವಿಯಲು ವಿಫುಲ ಅವಕಾಶ ಒದಗಿಸುತ್ತದೆ. ಅಷ್ಟೇ ಅಲ್ಲದೆ ಮಳೆಗಾಲವು ಇಲ್ಲಿಗೆ ಭೇಟಿಕೊಡಲು ಇರುವ ಅತ್ಯಂತ ಲಾಭಕರ ಸಮಯವಾಗಿದೆ. ಈ ಕಾಲದಲ್ಲಿ ರಸ್ತೆಯ ಮೂಲಕ ಈ ಸ್ವರ್ಗ ಸದೃಶ್ಯವಾದ ಗ್ರಾಮಕ್ಕೆ ಹೋಗುವುದು ಅವಿಸ್ಮರಣೀಯ ಅನುಭವವನ್ನು ಕೊಡುತ್ತದೆ. ಇಲ್ಲಿನ ಪ್ರಾಂತ್ಯವು ಯಥೇಚ್ಛವಾದ ಮಳೆಯನ್ನು ಕಾಣುವುದರಿಂದ ಮಳೆಗಾಲದಲ್ಲಿ ಇಲ್ಲಿನ ನಿಸರ್ಗವು ರಮಣೀಯವಾಗಿ ಕಂಗೊಳಿಸುವುದರೊಂದಿಗೆ ನಿಮ್ಮನ್ನು ಮಂತ್ರ ಮುಗ್ಧಗೊಳಿಸುತ್ತದೆ. ಯಾರಿಗೆ ಮಳೆಯೆಂದರೆ ಆಗುವುದಿಲ್ಲವೊ ಅವರು ಚಳಿಗಾಲದಲ್ಲಿ ಈ ಪವಿತ್ರ ಸ್ಥಳಕ್ಕೆ ಭೇಟಿಕೊಡಬಹುದು.

ಪ್ರಥಮ ಬಾರಿಗೆ ಗಣಪತಿಪುಲೆಗೆ ಪ್ರವಾಸ ಹೊರಡುವ ವ್ಯಕ್ತಿಯು ಸುಲಭವಾಗಿ ಗಣಪತಿಪುಲೆಗೆ ತಲುಪಬಹುದು. ನೀವು ಗಣಪತಿಪುಲೆಗೆ ವಿಮಾನದಲ್ಲಿ ತಲುಪಲು ಬಯಸಿದರೆ ರತ್ನಾಗಿರಿ ವಿಮಾನ ನಿಲ್ದಾಣವು ಇಲ್ಲಿಗೆ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಅಲ್ಲದೆ ರತ್ನಾಗಿರಿ ಗಣಪತಿಪುಲೆಗೆ ಸಮೀಪದ ರೈಲುನಿಲ್ದಾಣವನ್ನು ಹೊಂದಿದೆ. ಪ್ರವಾಸಿಗರು ಇಲ್ಲಿಂದ ಮಿನಿಬಸ್ ಅಥವಾ ಆಟೋ ರಿಕ್ಷಾದ ಮೂಲಕ ಗಣಪತಿಪುಲೆಗೆ ತಲುಪಬಹುದು. ಇಲ್ಲಿಗೆ ತಲುಪಲು ಇರುವ ಉತ್ತಮ ಸಾರಿಗೆಯ ವಿಧವೆಂದರೆ ಅದು ರಸ್ತೆಯ ಮೂಲಕ ತಲುಪುವುದು. ಘಟ್ಟಗಳ ನಡುವೆ ವಾಹನ ಚಲಾಯಿಸುತ್ತ ಸಾಗಿದರೆ ಸೌಂದರ್ಯದ ಖನಿಯಾದ ಈ ಗ್ರಾಮದ ಹಲವು ಮುಖಗಳನ್ನು ನಾವು ಸವಿಯಬಹುದು.

ನಿಮ್ಮ ಪ್ರವಾಸದ ಬ್ಯಾಗನ್ನು ಸಿದ್ಧಪಡಿಸಿ ಮತ್ತು ಹೊರಡಿ ಈ ಸಣ್ಣ ಗ್ರಾಮಕ್ಕೆ. ಈ ಗ್ರಾಮವು ನಿಮಗೆ ಮರೆಯಲಾಗದ ನೆನಪುಗಳನ್ನು ಒದಗಿಸುತ್ತದೆ.

Please Wait while comments are loading...