ರತ್ನಾಗಿರಿ - ಐತಿಹಾಸಿಕ ಪ್ರಾಮುಖ್ಯತೆ ಪಟ್ಟಣ

ಮಹರಾಷ್ಟ್ರದ ದಕ್ಷಿಣ ಭಾಗದಲ್ಲಿ ಅರಬ್ಬಿ ಸಮುದ್ರದ ತೀರದಲ್ಲಿ ಹರಡಿಕೊಂಡಿರುವ ಸುಂದರ ಹಾಗೂ ರಮಣೀಯವಾದ ಪುಟ್ಟ ನಗರವೇ ರತ್ನಾಗಿರಿ.

ಭಾರತದ ಈ ಭಾಗವನ್ನು ಆಳಿದ ಶಿವಾಜಿ ಮಹಾರಾಜರ ಆಳ್ವಿಕೆಯ ನಂತರ ಸುಮಾರು 1731ರ ಆಸುಪಾಸಿನಲ್ಲಿ ಸತಾರ್ ರಾಜರ ಆಡಳಿತಕ್ಕೆ ಈ ಪ್ರದೇಶ ಒಳಪಟ್ಟಿತ್ತು ಮತ್ತು 1818 ರಲ್ಲಿ ಬ್ರಿಟೀಷರು ಇದನ್ನು ವಶ ಪಡಿಸಿಕೊಂಡರು.

ಮಹಾಭಾರತದ ಕಥೆಯಲ್ಲಿ ಬರುವ ಪಾಂಡವರು 12 ವರ್ಷ ವನವಾಸಕ್ಕೆ ಬಂದಾಗ ಕೆಲವು ಕಾಲ ಈ ರತ್ನಾಗಿರಿಯಲ್ಲಿ ವಾಸವಾಗಿದ್ದರು ಎಂದು ಹೇಳಲಾಗುತ್ತದೆ. ಈ ಪ್ರದೇಶವನ್ನು ಆಳಿದ ಅಂದಿನ ರಾಜ ಪಾಂಡವರ ಪಕ್ಷ ವಹಿಸಿಕೊಂಡು ಕೌರವರ ವಿರುದ್ಧ ತಾನೇ ಕುರುಕ್ಷೇತ್ರ ಯುದ್ಧದಲ್ಲಿ ಪಾಲ್ಗೊಂಡಿದ್ದನಂತೆ.

ಇತರ ಪ್ರಮುಖ ಸ್ಥಳಗಳು

ಇಲ್ಲಿನ ಜೈಗಡ್ ಕೋಟೆಯು ತನ್ನ ಅಮೋಘ ಸೌಂದರ್ಯದಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ರತ್ನಾಗಿರಿಯ ಪರ್ಯಾಯ ದ್ವೀಪದಂತಿರುವ ಈ ಕೋಟೆಯು ಸಮುದ್ರ ದಂಡೆಯಲ್ಲಿ ನಿಂತಿರುವ ಸುಂದರಿಯಂತೆ ಕಂಗೊಳಿಸುತ್ತದೆ. ಸಮೀಪದಲ್ಲೆ ಜೈಗಡ್ ಲೈಟ್ ಹೌಸ್ ಇದೆ. ಹತ್ತಿರದಲ್ಲೆ ಸುಮಾರು 600 ವರ್ಷಗಳ ಇತಿಹಾಸವುಳ್ಳ ರತ್ನಾದುರ್ಗ ಕೋಟೆಯೂ ಇದೆ.

ಒಂದು ಸಮುದ್ರ ತೀರದಲ್ಲೇ ನಿಮ್ಮ ಎಲ್ಲಾ ಆಟೋಟಗಳನ್ನು ಮುಗಿಸಿಬಿಡ ಬೇಡಿ, ಇನ್ನೂ ಅನೇಕ ಸಮುದ್ರ ತೀರಗಳ ಸೌಂದರ್ಯ ರಾಶಿ ನಿಮಗಾಗಿ ಕಾದಿದೆ ಅಲ್ಲಿಯೂ ಹೋಗಿ ಬನ್ನಿ. ಮಾಂಡವಿ ಬೀಚ್ ಅತ್ಯಂತ ಆಕರ್ಷಕ ತಾಣ. ತನ್ನ ಕಪ್ಪು ಬಣ್ಣದ ಮರಳಿನಿಂದ ರೋಮಾಂಚನಗೊಳಿಸುತ್ತದೆ. ಹಾಗೆಯೆ ಗಣಪತಿಪುಲೆ ಬೀಚ್ ಮತ್ತು ಗಣೇಶ್ ಗುಲೆ ಬೀಚ್ ಕೂಡ ಮನಮೋಹಕವೇ.. ಒಮ್ಮೆ ಹೋಗಿ ಬನ್ನಿ.

ಗಣಪತಿಪುಲೆ ಬೀಚ್ ಸಮೀಪದಲ್ಲೆ ಇರುವ ಅದೆ ಹೆಸರಿನಲ್ಲೂ ಕರೆಯಲ್ಪಡುವ ಸ್ವಯಂಭೂ ಗಣಪತಿ ದೇವಸ್ಥಾನ ಬಹಳ ಪುರಾತನದ್ದು. ಇಲ್ಲಿ ಸುಮಾರು 400 ವರ್ಷಗಳಿಂದಲೂ ಪೂಜಾ ವಿಧಿವಿಧಾನಗಳು ನಡೆಯುತ್ತಿವೆ. ಇದೊಂದು ಜನಪ್ರಿಯ ದೇವಸ್ಥಾವಾಗಿದ್ದು ಅನೇಕ ಭಕ್ತಾಧಿಗಳನ್ನು ದೇಶದ ಉದ್ದಕ್ಕೂ ಹೊಂದಿದೆ.

ನೀವು ಇಲ್ಲಿಗೆ ಭೇಟಿ ನೀಡಿದಾಗ ಸ್ಥಳೀಯವಾಗಿ ದೊರಕುವ ರುಚಿಯಾದ ಮೀನು ಸಾಂಬಾರನ್ನು ತಿನ್ನಲು ಮರೆಯಬೇಡಿ ಹಾಗೂ ಕೊಕ್ಕಂ ಕರಿ ಅಂತ ಮತ್ತೊಂದು ರುಚಿಕರವಾದ ಅಡುಗೆ ರುಚಿಸಿ ಬಂದರೆ, ಅಯ್ಯೋ ಮಿಸ್ ಮಾಡ್ಕೊಂಡ್ವಿ ಅನ್ನೋ ಬೇಸರ ಇರುವುದಿಲ್ಲ.

ನಿಮಗೆ ತುಂಬಾ ಶಾಪಿಂಗ್ ಮಾಡುವ ಕ್ರೇಜ್ ಇದ್ದರೆ ರತ್ನಾಗಿರಿಯಲ್ಲಿ ಖರೀದಿಸಲು ವಿಶೇಷವಾದ ಸಂಗ್ರಹಗಳು ಹಾಗೂ ಪುರಾತನ - ಆಧುನಿಕ ವಸ್ತುಗಳು ನಿಮಗೆ ಸಿಗುತ್ತವೆ. ಪ್ರವಾಸ ಮುಗಿಸಿ ಮನೆಗೆ ಹಿಂದಿರುಗಿ ಬಂದಾಗ ಉತ್ತಮವಾದ ವಸ್ತುಗಳನ್ನು ಖರೀದಿಸಿದ್ದೇವೆ ಎಂಬ ತೃಪ್ತಿ ನಿಮಗಿರುತ್ತದೆ. ಬೇಸಿಗೆ ಕಾಲದಲ್ಲಿ ನೀವು ಈ ಪ್ರದೇಶಕ್ಕೆ ಭೇಟಿ ನೀಡಿದ್ದರೆ ಆಲ್ಫೋನ್ಸಾ ಮಾವು ಹಾಗೂ ದೇವಗಿರಿಯ ಹ್ಯಾಪಸ್ ರುಚಿಸದೆ ಬಂದರೆ ನಿಮಗೆ ನಷ್ಟ. ಸ್ಥಳೀಯ ಮಾರುಕಟ್ಟೆಯಲ್ಲಿ ಸಿಗುವ 'ಅಂಬಾಪುಳಿ'ಯಂತಹ ಮಾವಿನ ಕಾಯಿಯ ವಿವಿಧ ಖಾದ್ಯಗಳನ್ನು ನಿಮ್ಮ ಬ್ಯಾಗ್ ಗಳಲ್ಲಿ ತುಂಬಿಕೊಳ್ಳಿ.

ಹೇಗೆ ಮತ್ತು ಯಾವಾಗ ಭೇಟಿ ನೀಡಬಹುದು!

ರತ್ನಾಗಿರಿಯಲ್ಲಿ ಬೇಸಿಗೆ ಕಾಲದಲ್ಲಿ ತಾಪ ಸ್ವಲ್ಪ ಮಟ್ಟಿಗೆ ಹೆಚ್ಚಾಗಿಯೇ ಇರುತ್ತದೆ, ಸಹಿಸಿಕೊಳ್ಳುವುದೂ ಕಷ್ಟವೆ ಸರಿ. ಬೇಸಿಗೆಯಲ್ಲಿ ಇಲ್ಲಿಗೆ ಪ್ರವಾಸ ಹೋಗುವುದನ್ನು ತಡೆದರೆ ಒಳ್ಳೆಯದು. ಏಕೆಂದರೆ ಬಿಸಿಲಿನಲ್ಲಿ ಏನನ್ನೂ ನೋಡಲು ಸಾಧ್ಯವಿಲ್ಲ. ಆದರೆ, ಇಲ್ಲಿ ದೊರಕುವ ರುಚಿ ರುಚಿಯಾದ ಮಾವಿನ ಹಣ್ಣಿನ ಸವಿ ನೋಡಲೇ ಬೇಕೆಂದು ತೀರ್ಮಾನಿಸಿಕೊಂಡಿದ್ದರೆ ಬೇಸಿಯೆ ಸೂಕ್ತ ಕಾಲ. ಮಳೆಗಾಲ ಬಂದಾಗ ಈ ನಗರದ ಸ್ವರೂಪವೆ ಬದಲಾಗುತ್ತದೆ. ಆದಾಗ್ಯೂ ಇಲ್ಲಿಗೆ ಭೇಟಿ ನೀಡಲು ಚಳಿಗಾಲವೆ 'ದಿ ಬೆಸ್ಟ್' ಟೈಮ್. ಸುತ್ತಲಿನ ಎಲ್ಲಾ ಪ್ರವಾಸಿ ತಾಣಗಳಿಗೂ ಖುಷಿ ಖುಷಿಯಿಂದ ಹೋಗಿ ಬರಬಹುದು.

ಇತ್ತೀಚಿನ ಎಲ್ಲಾ ಸಾರಿಗೆ ಸೌಕರ್ಯಗಳು ರತ್ನಾಗಿರಿಯಲ್ಲಿದೆ. ಸ್ಥಳೀಯ ವಿಮಾನ ನಿಲ್ದಾಣವೂ ಇಲ್ಲಿದ್ದು ವಿಮಾನಿನಲ್ಲಿ ಪ್ರಯಾಣಿಸಲು ಬಯಸುವ ಪ್ರವಾಸಿಗರಿಗೆ ಅನುಕೂಲಕರವಾಗಿದೆ. ಕೊಂಕಣ ರೈಲು ಮಾರ್ಗ ಇಲ್ಲಿರುವುದರಿಂದ ಮಹಾರಾಷ್ಟ್ರದ ಪ್ರಮುಖ ನಗರ ಹಾಗೂ ಪಟ್ಟಣಗಳ ರೈಲು ನಿಲ್ದಾಣಕ್ಕೆ ಇಲ್ಲಿಂದ ಸಂಪರ್ಕ ಕಲ್ಪಿಸಲಾಗಿದೆ. ರಸ್ತೆ ಮಾರ್ಗವೂ ಇಲ್ಲಿಗೆ ಸಲೀಸಾಗಿದ್ದು ರಾಷ್ಟ್ರೀಯ ಹೆದ್ದಾರಿ ಹಾಗೂ ರತ್ನಾಗಿರಿ-ನಾಗಪುರಕ್ಕೆ ಹೋಗುವ ಮಾರ್ಗದ ಮೂಲಕ ಇಲ್ಲಿಗೆ ತಲುಪಬಹುದಾಗಿದೆ.

ಇತಿಹಾಸ, ಧರ್ಮ, ಪ್ರಕೃತಿ, ಮನಸ್ಸಿಗೆ ಬೇಕಾದ ಶಾಂತಿ ಸಮಾಧಾನ, ಮರಾಠರ ಸಂಸ್ಕೃತಿ ಹೀಗೆ ಎಲ್ಲವೂ ಒಟ್ಟಾಗಿ ಮೈಗೂಡಿಸಿಕೊಂಡು ರತ್ನಾಗಿರಿಯಲ್ಲೆ ಸಿಗುತ್ತದೆ. ಅತ್ಯಂತ ಸುಂದರವಾದ ವಾಸ್ತುಶಿಲ್ಪವನ್ನು ಹೊಂದಿರುವ ಕೋಟೆಗಳು, ಪ್ರಶಾಂತವಾಗಿ ಹರಡಿಕೊಂಡಿರುವ ಸಮುದ್ರ ತೀರಗಳು, ಆಲ್ಫೋನ್ಸಾ ಮಾವಿನ ತೋಟಗಳು.. ನಿಜಕ್ಕೂ ಇಲ್ಲಿಗೆ ಒಮ್ಮೆ ಭೇಟಿ ನೀಡುವುದು ಲಾಭದಾಯಕವೇ ಹೌದು.

Please Wait while comments are loading...