ಔರಂಗಾಬಾದ್ – ಇತಿಹಾಸ ಪುನರುಜ್ಜೀವನಗೊಳ್ಳುವ ಸ್ಥಳ.

ಔರಂಗಾಬಾದ್ ಮಹಾರಾಷ್ಟ್ರದ ಪ್ರಮುಖ ನಗರವಾಗಿದ್ದು, ಮುಘಲ್ ರ ಪ್ರಸಿದ್ಧ ದೊರೆ ಔರಂಗಜೇಬನಿಂದ ತನ್ನ ಹೆಸರು ಪಡೆಯಿತು. ಔರಂಗಬಾದ್ ಎಂದರೆ ’ಸಾಮ್ರಾಟನಿಂದ ನಿರ್ಮಾಣವಾದುದು’ ಎಂದರ್ಥ. ಔರಂಗಬಾದ್ ನಗರವು ಮಹಾರಾಷ್ಟ್ರ ರಾಜ್ಯದ ಉತ್ತರಭಾಗದಲ್ಲಿ ನೆಲೆಸಿದ್ದು, ಭಾರತದ ಪಶ್ಚಿಮ ಭಾಗದಲ್ಲಿ ಬರುತ್ತದೆ. ಖಾಮ್ ನದಿಯ ದಂಡೆಯಲ್ಲಿರುವ ಈ ಊರು ಜಿಲ್ಲಾಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ನಗರವು ತನ್ನಲ್ಲಿ ಭೇಟಿಕೊಡುವವರಿಗೆ ಯಾವ ಕುಂದುಕೊರತೆಯು ಬಾರದಂತೆ ನೋಡಿಕೊಳ್ಳುತ್ತದೆ.

1681ರಲ್ಲಿ  ಔರಂಗಬಾದ್ ಔರಂಗಜೇಬನ ದಂಡಯಾತ್ರೆಗಳ ಮೂಲನೆಲೆಯಾಗಿ ಬಳಕೆಯಾಗಿತ್ತು. ಈ ಪ್ರಾಂತ್ಯವು ಮುಘಲ್ ದೊರೆಗೆ ಶಿವಾಜಿಯ ಮೇಲೆ ದಿಗ್ವಿಜಯ ಸಾಧಿಸುವ ಕಾರ್ಯಕ್ಕಾಗಿ ಕೆಲವು ಕಾಲದವರೆಗೆ ಸಹಾಯ ಮಾಡಿತು. ಔರಂಗಬಾದ್ ಭಾರತದ ಮಧ್ಯಭಾಗದಲ್ಲಿದ್ದು ಆಪ್ಘನ್ ಮತ್ತು ಮಧ್ಯ ಏಶಿಯಾದ ದಾಳಿಕೋರರ ದಾಳಿಗಳಿಂದ ರಕ್ಷಿಸಿಕೊಳ್ಳಲು ಅತ್ಯಂತ ಸುರಕ್ಷಿತವಾಗಿತ್ತು. ಔರಂಗಜೇಬನ ಮರಣಾನಂತರ ಔರಂಗಬಾದ್ ಭಾರತ ಗಣರಾಜ್ಯದಲ್ಲಿ ವಿಲೀನವಾಗುವವರೆಗು ಹೈದರಾಬಾದ್ ನ ನಿಜಾಮನ ವಶದಲ್ಲಿತ್ತು. 1956 ರಲ್ಲಿ ಈ ಪ್ರಾಂತ್ಯವು ಮಹಾರಾಷ್ಟ್ರ ರಾಜ್ಯಕ್ಕೆ ಸೇರ್ಪಡೆಗೊಂಡಿತು. ಔರಂಗಬಾದ್ ಈಗ ಹತ್ತು ಲಕ್ಷಕ್ಕು ಮಿಗಿಲಾದ ಜನಸಂಖ್ಯೆಯುಳ್ಳ ನಗರವಾಗಿದೆ. ಇಲ್ಲಿ ಮರಾಠಿ ಮತ್ತು ಉರ್ದು ಹೆಚ್ಚಾಗಿ ಮಾತನಾಡಲಾಗುತ್ತದೆ.

ಔರಂಗಬಾದ್ ನಲ್ಲಿ ಪ್ರವಾಸಿಗರು ಏನೇನು ನಿರೀಕ್ಷಿಸಬಹುದು?

ಔರಂಗಬಾದ್ ಒಳ್ಳೆಯ ಕಾರಣಗಳಿಗಾಗಿ ಮಹಾರಾಷ್ಟ್ರದ ಪ್ರವಾಸೋದ್ಯಮದ ಅಧಿಕೃತ ರಾಜಧಾನಿಯಾಗಿದೆ. ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿರುವ ಔರಂಗಬಾದ್ ನಿಮಗೆ ಗತ ಇತಿಹಾಸದೊಳಗೆ ಮುಳುಗೇಳುವ ಅವಕಾಶವನ್ನು ಒದಗಿಸುತ್ತದೆ. ಮೊಘಲರ ಆಡಳಿತಾವಧಿಗೆ ಮೊದಲು, ಔರಂಗಬಾದ್ ನ ಇತಿಹಾಸ ಬೌದ್ಧರ ಕಾಲದವರೆಗು ಹಿಂದಕ್ಕೆ ಹೋಗುತ್ತದೆ. ಬೌದ್ಧರ ಗುಹೆಗಳಾದ ಅಜಂತಾ ಮತ್ತು ಎಲ್ಲೋರಗಳು ದೇಶದ ಮೇಲೆ ಉಂಟಾದ ಬೌದ್ಧರ ಪ್ರಭಾವವನ್ನು ಸೂಚಿಸುವ ಅಮರ ಸಾಕ್ಷಿಗಳಾಗಿ ನಿಂತಿವೆ. ಇವೆರಡು ಸ್ಮಾರಕಗಳು ಯುನೆಸ್ಕೊದಿಂದ ವಿಶ್ವ ಪಾರಂಪರಿಕ ತಾಣಗಳಾಗಿ ಘೋಷಿಸಲ್ಪಟ್ಟಿವೆ.

ಔರಂಗಬಾದ್ ನಗರದಲ್ಲಿನ ಸಂಸ್ಕೃತಿ ಹೈದರಾಬಾದ್ ನ ಮೂಲ ಸಂಸ್ಕೃತಿಯನ್ನು ಬಹುತೇಕವಾಗಿ ಹೋಲುತ್ತದೆ. ಹಳೆಯ ನಗರವು ಇಂದಿಗು ನಮ್ಮ ಶ್ರೀಮಂತ ಇತಿಹಾಸದ ವರ್ಚಸ್ಸನ್ನು ಹೊಂದಿದೆ. ಇದರ ಪ್ರಭಾವವು ಇಲ್ಲಿನ ಸ್ಥಳೀಯ ಭಾಷೆ ಮತ್ತು ಖಾದ್ಯಗಳಲ್ಲಿ ಕಾಣಬಹುದು. ಔರಂಗಬಾದ್ ಮೊಘಲರ ಸ್ಮಾರಕಗಳಿಂದ ತುಂಬಿ ತುಳುಕುತ್ತಿದೆ. ಔರಂಗಜೇಬನ ಸಮಾಧಿ ಇರುವ ಖುಲ್ತಬಾದ್ ಔರಂಗಬಾದ್ ಬಳಿಯ ಸಣ್ಣ ಪಟ್ಟಣವಾಗಿದ್ದು, ಪ್ರಸಿದ್ಧ ಪ್ರವಾಸಿ ತಾಣವಾಗಿ ಸಹ ಹೆಸರಾಗಿದೆ. ಇಲ್ಲಿನ ಮತ್ತೊಂದು ಪ್ರಸಿದ್ಧ ಸ್ಮಾರಕ ಬೀಬಿ ಕಾ ಮಕ್ಬರಾ ಇದು ಔರಂಗ ಜೇಬನ ಪತ್ನಿಯ ಸಮಾಧಿಯಾಗಿದ್ದು, ತಾಜ್ ಮಹಲಿನ ಸಾಮ್ಯತೆಗಳನ್ನು ಹೊಂದಿದೆ.

ಔರಂಗಬಾದ್ ನಲ್ಲಿ ನೋಡಬೇಕಾದುದು ಮತ್ತು ಮಾಡಬೇಕಾದುದು

ಹಿಮ್ರೂ ಕಾರ್ಖಾನೆಯು ಇಲ್ಲಿನ ಮತ್ತೊಂದು ಪ್ರಸಿದ್ಧ ಸ್ಥಳ. ಇದು ಉಣ್ಣೆ ಶಾಲುಗಳು, ಮಶ್ರು ಮತ್ತು ಕಿಮ್ ಖಾಬ್ ನೇಯ್ಗೆಗಳಿಗೆ ಮತ್ತು ಪ್ರವಾಸಿಗರ ವ್ಯಾಪಾರಕ್ಕಾಗಿ ಉತ್ತಮ ಸ್ಥಳವಾಗಿದೆ. ಇದು ಔರಂಗಬಾದವು ನಾಲ್ಕು ಶತಮಾನಗಳ ಹಿಂದೆ ರೇಷ್ಮೆ ಮಾರ್ಗದಲ್ಲಿ ಗುರುತಿಸಲ್ಪಟ್ಟಿತ್ತು ಹಾಗು ಪ್ರಮುಖ ವ್ಯಾಪಾರಿ ಕೇಂದ್ರವಾಗಿತ್ತು ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿ ನಿಂತಿದೆ. ಈ ನಗರಕ್ಕೆ ಭೇಟಿಕೊಡುವ ಮಹಿಳೆಯರು ಇಲ್ಲಿನ ಕನ್ನೌಟ್ ಪೈಥಾನಿ ಸೀರೆಗಳು ಮತ್ತು ಅಮೂಲ್ಯವಾದ ಹರಳುಗಳಿಂದ ಕೂಡಿದ ಆಭರಣಗಳಿಗೆ ಮರುಳಾಗದೆ ಇರಲಾರರು. ಬಿದ್ರಿ ಎಂಬ ಕಬ್ಬಿಣದ, ತಾಮ್ರದ ಅಥವಾ ಯಾವುದಾದರು ಲೋಹದ ವಸ್ತುಗಳ ಮೇಲೆ ಚಿತ್ತಾರಗಳನ್ನು ರಚಿಸುವ ಕಲೆಯಿಂದ ಕೂಡಿದ ವಸ್ತುಗಳು ಈ ನಗರದ ಪ್ರಸಿದ್ಧ ಉತ್ಪನ್ನಗಳಾಗಿವೆ. ಈ ಸುಂದರವಾದ ಕಲಾವಸ್ತುಗಳು ಕೇವಲ ಈ ರಾಜ್ಯದಲ್ಲಿ ಮಾತ್ರ ದೊರೆಯುತ್ತವೆ.

ಔರಂಗಬಾದ್ ನಗರವು ಮಧ್ಯಕಾಲದ ಸಾಂಸ್ಕೃತಿಕ ಪರಂಪರೆಗೆ ಹೆಸರಾಗಿದೆ. ಬೀಬಿ ಕಾ ಮಕ್ಬರಾ, ಪಂಚಕ್ಕಿ ಇಲ್ಲಿನ ಪ್ರಮುಖ ಪ್ರವಾಸಿ ತಾಣಗಳಾಗಿವೆ. ಈ ಸ್ಥಳವು ಸೂಫಿ ಸಂತ ಬಾಬಾ ಷಾ ಮುಝಾಫರರ ಸಮಾಧಿಯನ್ನು ಹೊಂದಿದೆ. ಪುರ್ವಾರ್ ವಸ್ತು ಸಂಗ್ರಹಾಲಯವು ಈ ನಗರದಲ್ಲಿ ನೋಡಲೆ ಬೇಕಾದ ಮತ್ತೊಂದು ಆಕರ್ಷಣೆಯಾಗಿದೆ. ಈ ನಗರದಲ್ಲಿ ಮೂರು ವಸ್ತು ಸಂಗ್ರಹಾಲಯಗಳಿದ್ದು, ಈ ಪ್ರಾಂತ್ಯದ ಕಲೆಯ ಖಜಾನೆಯನ್ನೆ ತಮ್ಮಲ್ಲಿ ಅಡಗಿಸಿಕೊಂಡಿವೆ. – ಸುನ್ಹೇರಿ ಮಹಲ್ ವಸ್ತು ಸಂಗ್ರಹಾಲಯ, ವಿಶ್ವ ವಿದ್ಯಾನಿಲಯ ವಸ್ತು ಸಂಗ್ರಹಾಲಯ ಮತ್ತು ಛತ್ರಪತಿ ಶಿವಾಜಿ ವಸ್ತು ಸಂಗ್ರಹಾಲಯಗಳು ಇಲ್ಲಿವೆ.

ಸ್ಮರಣೀಯವಾದ ಮತ್ತು ಮುದಕೊಡುವ ವಿಹಾರ ತಾಣ

ಅಭಿವೃದ್ಧಿ ಹೊಂದುತ್ತಿರುವ ಔರಂಗಬಾದ್ ನಗರದಲ್ಲಿ ಮಿತವಾದ ಹಿತವಾದ ಬೇಸಿಗೆ ಮತ್ತು ಚಳಿಗಾಲಗಳಿಂದಾಗಿ ಹಿತವಾದ ಹವಾಗುಣವನ್ನು ಹೊಂದಿದೆ. ಮಳೆಗಾಲದಲ್ಲಿ ಈ ಊರು ಅತಿ ಹೆಚ್ಚು ಆತೀಥ್ಯವನ್ನುವಹಿಸುತ್ತದೆ. ಆದರು ಈ ಅದ್ಭುತ ನಗರಕ್ಕೆ  ಹೋಗಲು ಮತ್ತು ಇಲ್ಲಿ ಸುತ್ತಾಡಲು ಇಚ್ಛಿಸುವ ಉತ್ಸಾಹಿಗಳಿಗೆ ಚಳಿಗಾಲವು ಅತ್ಯಂತ ಪ್ರಶಸ್ತವಾದ ಕಾಲವಾಗಿದೆ. ನೀವು ಪ್ರಕೃತಿ ಪ್ರಿಯರಾದಲ್ಲಿ ನಿಮಗೆ ಬನಿ ಬೇಗಂ ಉದ್ಯಾನವನವು ಪ್ರಶಾಂತವಾದ ಸಂಜೆಗಳನ್ನು ಒದಗಿಸುತ್ತದೆ.

 

ಔರಂಗಬಾದ್ ಮುಂಬೈನಿಂದ 375 ಕಿ.ಮೀ ದೂರದಲ್ಲಿದ್ದು, ರಸ್ತೆ, ರೈಲು ಮತ್ತು ವಿಮಾನ ಯಾನದ ಮೂಲಕ ಎಲ್ಲ ಪ್ರಮುಖ ನಗರಗಳೊಂದಿಗೆ ಸಂಪರ್ಕವನ್ನು ಹೊಂದಿದೆ. ಔರಂಗಬಾದ್ ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು ಭಾರತದ ಎಲ್ಲ ಪ್ರಮುಖ ನಗರಗಳೊಂದಿಗೆ ಹಾಗು ರಾಜ್ಯಗಳೊಂದಿಗೆ ಸಂಪರ್ಕವನ್ನು ಹೊಂದಿದೆ. ಈ ನಗರಕ್ಕೆ ರೈಲು ಮತ್ತು ರಸ್ತೆಯ ಮಾರ್ಗಗಳು ಉತ್ತಮವಾಗಿದ್ದು, ಹಲವಾರು ರಾಜ್ಯ ಸಾರಿಗೆ ಬಸ್ಸುಗಳು,ಖಾಸಗಿ ಬಸ್ಸುಗಳು ಮತ್ತು ರೈಲುಗಳು ಈ ಊರಿಗೆ ನಿಮ್ಮನ್ನು ತಲುಪಿಸುತ್ತವೆ. ಭಾರತದ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರಗಳಲ್ಲಿ ಒಂದಾಗಿರುವ ಔರಂಗಬಾದ್ ನಿಮಗೆ ಮರೆಯಲಾಗದ ಅನುಭವವನ್ನು ಒದಗಿಸುತ್ತದೆ. ಕಲೆ, ಸಂಸ್ಕೃತಿ ಮತ್ತು ಪವಿತ್ರತೆಯು ತುಂಬಿ ತುಳುಕುವ ಈ ’ಹೆಬ್ಬಾಗಿಲುಗಳ ನಗರ’ ವು ನಿಮಗೆ ಜೀವನ ಪೂರ್ತಿ ಮರೆಯಲಾಗದ ನೆನಪುಗಳನ್ನು ಒದಗಿಸುತ್ತವೆ.

Please Wait while comments are loading...