ವಡೋದರಾ : ಅಡಿಗಡಿಗೂ ನೆಲೆಗೊಂಡಿದೆ ಸಾಂಸ್ಕೃತಿಕ ವೈಭವ

ವಡೋದರಾ ಅಥವಾ ಬರೋಡಾವು ವಿಶ್ವಮಿತ್ರಿ ನದಿಯ ತೀರದಲ್ಲಿ ನೆಲೆಗೊಂಡಿರುವ ನಗರವಾಗಿದ್ದು, ಹಿಂದಿನ ಗಾಯಕ್ವಾಡ್ ರಾಜ್ಯದ ರಾಜಧಾನಿಯಾಗಿಯು ಸಹ ಸೇವೆ ಸಲ್ಲಿಸಿತ್ತು. ಇಲ್ಲಿನ ಪ್ರಾಚ್ಯ ವಸ್ತುಗಳು ಸುಮಾರು 2000 ವರ್ಷಗಳಷ್ಟು ಹಿಂದಿನ ಇತಿಹಾಸವನ್ನು ತಮ್ಮಲ್ಲಿ ಅಡಕಗೊಳಿಸಿಕೊಂಡಿವೆ. ಆಗ ಇಲ್ಲಿನ ವಿಶ್ವ ಮಿತ್ರಿ ನದಿಯ ತೀರದಲ್ಲಿ ಒಂದು ಸಣ್ಣ ಜನನಿವಾಸವು ನೆಲೆಗೊಂಡಿತ್ತು. ಅದನ್ನು ಅಂಕೊಟ್ಟಕ ಎಂದು ಕರೆಯುತ್ತಿದ್ದರು. ಇದರ ಸಮೀಪದಪಲ್ಲಿ ಅಕೊಲ ಮರಗಳ ತೋಪು ಇತ್ತು, ಇದನ್ನು ಇಂದು ಅಕೊಟ ಎಂದು ಕರೆಯುತ್ತಾರೆ.

ಅಲ್ಲಿಂದ ಪೂರ್ವಕ್ಕೆ ಕೆಳಭಾಗದಲ್ಲಿ ಸಾಗಿದರೆ ದಟ್ಟವಾದ ಅರಣ್ಯವನ್ನು ಹೊಂದಿರುವ ಒಂದು ಶಿಬಿರವು ನೆಲೆಸಿತ್ತು, ಇದು ವಾಡ್ ಅಥವಾ ಆಲದ ಮರಗಳ ದಟ್ಟ ಕಾಡಾಗಿತ್ತು. ಹಾಗಾಗಿ ಈ ಸ್ಥಳವನ್ನು ವಡಪದ್ರಕ ಎಂದು ಕರೆಯಲಾಗುತ್ತಿತ್ತು. ಅಂದು ವಡಪದ್ರಕ ಎಂದು ಕರೆಯಲಾಗುತ್ತಿದ್ದ ಸ್ಥಳದಲ್ಲಿ ವಡೋದರಾವು ನೆಲೆಗೊಂಡಿದೆ. ವಡೋದರಾ ಎಂದರೆ ಸಂಸ್ಕೃತ ಭಾಷೆಯಲ್ಲಿ " ಆಲದಮರದ ಉದರ" ಎಂದರ್ಥ. ಬ್ರಿಟೀಷರ ಆಡಳಿತಾವಧಿಯಲ್ಲಿ ಈ ನಗರಕ್ಕೆ ಬರೋಡಾ ಎಂಬ ಹೆಸರು ಬಂತು. ತೀರಾ ಇತ್ತೀಚೆಗೆ ವಡೋದರಾ ಎಂಬ ಹಳೆಯ ಹೆಸರನ್ನೆ ಮರು ನಾಮಕರಣ ಮಾಡುವವರೆಗು ಬರೋಡಾ ಎಂಬ ಹೆಸರೇ ಚಾಲ್ತಿಯಲ್ಲಿತ್ತು.

ಈ ನಗರವು ಒಂದಾನೊಂದು ಕಾಲದಲ್ಲಿ ನಾಲ್ಕು ದ್ವಾರಗಳ ನಡುವೆ ನೆಲೆಗೊಂಡಿತ್ತು. ಈ ದ್ವಾರಗಳನ್ನು ಇಂದಿಗು ಕಾಣಬಹುದು. 10ನೇ ಶತಮಾನದಲ್ಲಿ ವಡೋದರಾವನ್ನು ಚಾಲುಕ್ಯರು ಆಳುತ್ತಿದ್ದರು, ನಂತರ ಸೋಲಂಕಿಗಳು, ವಾಘೇಲಾಗಳು ಮತ್ತು ದೆಹಲಿ ಹಾಗು ಗುಜರಾತಿನ ಸುಲ್ತಾನರು ಆಳಿದರು. ಮರಾಠರ ದಂಡನಾಯಕ ಪಿಲಾಜಿ ಗಾಯಕ್ವಾಡ್ ಈ ಪ್ರದೇಶವನ್ನು ಅಭಿವೃದ್ಧಿಪಡಿಸಿದನು. ಈತನಿಂದಾಗಿಯೇ ವಡೋದರಾದ ಆಧುನಿಕ ಇತಿಹಾಸವು ಆರಂಭಗೊಂಡಿತು ಎಂದು ಹೇಳಬಹುದು. ಮುಮ್ಮಡಿ ಸಯ್ಯಾಜಿರಾವ್ ಮಹಾರಾಜರ ಆಡಳಿತಾವಧಿಯನ್ನು ವಡೋದರಾ ಇತಿಹಾಸದ ಸುವರ್ಣ ಯುಗವೆಂದು ಕರೆಯಲಾಗುತ್ತದೆ. ಆಗ ಈ ನಗರವು ಸಮಕಾಲೀನ ಪ್ರಪಂಚದ ಸಮಕ್ಕೆ ಸಾಮಾಜಿಕವಾಗಿ- ಆರ್ಥಿಕವಾಗಿ ಭಾರೀ ಬೆಳವಣಿಗೆಯನ್ನು ಕಂಡಿತು.

ವಡೋದರಾ ನಗರವನ್ನು ಸಂಸ್ಕಾರಿ ನಗರ್ ಎಂದು ಕರೆಯುತ್ತಾರೆ. ಕಾರಣ ಇಲ್ಲಿ ಸಂಸ್ಕೃತಿಗೆ ಅತಿ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತದೆ ಮತ್ತು ಸಂಸ್ಕೃತಿಯನ್ನು ಪೋಷಿಸಿಕೊಂಡು ಬರಲಾಗುತ್ತಿದೆ.

ಸಂಸ್ಕೃತಿ

ವಡೋದರಾವು ಇಲ್ಲಿ ನಡೆಯುವ ಗರ್ಬಾ ಆಚರಣೆಗೆ ಇಡೀ ಗುಜರಾತಿನಲ್ಲಿಯೇ ಹೆಸರುವಾಸಿಯಾಗಿದೆ. ಸ್ಥಳೀಯ ಗರ್ಬಾ ಮೈದಾನಗಳಲ್ಲಿ ನಡೆಯುವ ಈ ಆಚರಣೆಯಲ್ಲಿ ಹಾಡು, ನೃತ್ಯ, ಬೆಳಕುಗಳು ಮತ್ತು ಅಪರಿಮಿತ ಉತ್ಸಾಹವನ್ನು ನಾವು ಕಾಣಬಹುದು. ರಾಸ ಮತ್ತು ಗರ್ಬಾ ನೃತ್ಯಗಳ ಸಂದರ್ಭದಲ್ಲಿ ಮಧ್ಯರಾತ್ರಿಗಳಲ್ಲಿ ನೋಡಬೇಕಾಗುತ್ತದೆ. ದೀಪಾವಳಿ, ಉತ್ತರಾಯಣ, ಹೋಳಿ, ಈದ್, ಗುಡಿ ಪಡ್ವ ಮತ್ತು ಗಣೇಶ್ ಚತುರ್ಥಿಗಳನ್ನು ವಡೋದರಾದಲ್ಲಿ ಭಾರೀ ಸಂಭ್ರಮ ಮತ್ತು ಸಡಗರಗಳಿಂದ ಆಚರಿಸಲಾಗುತ್ತದೆ.

ವಡೋದರಾ ತನ್ನ ಸಂಸ್ಕೃತಿಯನ್ನು ಕಾಯ್ದುಕೊಂಡು ಬರುವ ಸಲುವಾಗಿ " ಸಂಸ್ಕಾರಿ ನಗರ್" ಕೀರ್ತಿಗೆ ಪಾತ್ರವಾಗಿದೆ. ಈ ಹೆಸರನ್ನು ಸಾರ್ಥಕಪಡಿಸಿಕೊಳ್ಳುವ ಸಲುವಾಗಿ ಇಲ್ಲಿ ವಡೋದರಾ ವಸ್ತು ಸಂಗ್ರಹಾಲಯ ಮತ್ತು ಮಹಾರಾಜಾ ಫತೇಹ್ ಸಿಂಗ್ ವಸ್ತು ಸಂಗ್ರಹಾಲಯ, ಕೀರ್ತಿ ಮಂದಿರದಲ್ಲಿರುವ ನಂದ್‍ಲಾಲ್ ಬೋಸ್‍ರವರ - ಭಗವದ್ಗೀತೆಯ ಭಿತ್ತಿಚಿತ್ರಗಳು, ಮಹಾರಾಜ್ ಸಯ್ಯಾಜಿರಾವ್ ವಿಶ್ವವಿದ್ಯಾನಿಲಯ ಮತ್ತು ಪಿಕ್ಚರ್ ಗ್ಯಾಲರಿಗಳು ಈ ಪ್ರದೇಶವನ್ನು ಆಳಿದ ಗಾಯಕ್ವಾಡ್‍ರ ವೈಭವವನ್ನು ಬರುವ ಪ್ರವಾಸಿಗರಿಗೆ ಸಾರಿ ಸಾರಿ ಹೇಳುತ್ತಿವೆ.

ಭೌಗೋಳಿಕ ಅಂಶಗಳು

ವಿಶ್ವಮತಿ ನದಿ ತೀರದಲ್ಲಿ ನೆಲೆಗೊಂಡಿರುವ ವಡೋದರಾವು ಗುಜರಾತಿನ ಕೇಂದ್ರಭಾಗದಲ್ಲಿ ನೆಲೆಗೊಂಡಿದೆ. ಈ ನದಿಯು ಬೇಸಿಗೆಯ ಅವಧಿಯಲ್ಲಿ ಬತ್ತಿ ಹೋಗಿ, ಒಂದು ಸಣ್ಣ ಝರಿಯಾಗುತ್ತದೆ. ಈ ನಗರವು ಮಹಿ ಭೂಭಾಗ ಮತ್ತು ನರ್ಮದಾ ನದಿಗಳ ಮಧ್ಯೆ ನೆಲೆಗೊಂಡಿದೆ. ಇಲ್ಲಿ ಭೂಕಂಪಗಳು ಸಂಭವಿಸುವ ಸಾಧ್ಯತೆ ಅತಿ ಹೆಚ್ಚಾಗಿದೆ. ಹಾಗಾಗಿ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಈ ನಗರವನ್ನು ಸಿಸ್ಮಿಕ್ ಜೋನ್-III ಹಾಗು ಸ್ಕೇಲ್ ಆಫ್ I -IV ಅಡಿಯಲ್ಲಿ ಗುರುತಿಸಿದೆ.

ವಿಶ್ವಮಿತ್ರಿ ನದಿಯು ವಡೋದರಾವನ್ನು ಭೌಗೋಳಿಕವಾಗಿ ಎರಡು ಭಾಗಗಳಾಗಿ ಪ್ರತ್ಯೇಕಿಸುತ್ತದೆ. ಅದರಲ್ಲಿ ಒಂದು ಪೂರ್ವ ಭಾಗವಾದರೆ, ಇನ್ನೊಂದು ಪಶ್ಚಿಮ ಭಾಗವಾಗಿ ಗುರುತಿಸಲ್ಪಡುತ್ತಿದೆ. ಪೂರ್ವದ ತೀರದಲ್ಲಿ ವಡೋದರಾದ ಹಳೆಯ ನಗರವು ನೆಲೆಗೊಂಡಿದೆ. ಇದನ್ನು ಹಳೆಯ ವಡೋದರಾ ಎಂದೇ ಗುರುತಿಸುತ್ತಾರೆ. ವಿಶ್ವಮಿತ್ರಿಯ ಪಶ್ಚಿಮ ದಂಡೆಯಲ್ಲಿ ವಡೋದರಾದ ನವನಗರವು ನಿರ್ಮಾಣಗೊಂಡಿದೆ. ಈ ಭಾಗವನ್ನು ಎಲ್ಲಾ ಆಧುನಿಕ ಸೌಲಭ್ಯಗಳ ಜೊತೆಗೆ ನಿರ್ಮಾಣ ಮಾಡಲಾಗಿದೆ.

ಹವಾಗುಣ

ವಡೋದರಾವು ಉಷ್ಣವಲಯದ ಸವನ್ನಾ ಮಾದರಿಯ ಹವಾಗುಣವನ್ನು ಹೊಂದಿದೆ. ಇಲ್ಲಿ ಬೇಸಿಗೆ, ಮಳೆಗಾಲ ಮತ್ತು ಚಳಿಗಾಲಗಳೆಂಬ ಮೂರು ಕಾಲಗಳನ್ನು ನಾವು ಕಾಣಬಹುದು. ಮಳೆಗಾಲವನ್ನು ಹೊರತುಪಡಿಸಿದರೆ ಉಳಿದ ಕಾಲಗಳು ಇಲ್ಲಿ ಒಣ ಹವೆಯಿಂದ ಕೂಡಿರುತ್ತವೆ. ಬೇಸಿಗೆಯು ಒಣ ಹವೆಯ ಜೊತೆಗೆ ವಿಪರೀತವೆನ್ನುವಂತಹ ಬಿಸಿಲಿನಿಂದ ಕೂಡಿರುತ್ತದೆ. ಮಳೆಗಾಲದಲ್ಲಿ ಇಲ್ಲಿ ಆರ್ದ್ರತೆಯು ಅಧಿಕವಾಗಿರುತ್ತದೆ ಹಾಗು ಮಳೆ ವಿರಳವಾಗಿ ಮತ್ತು ಬಿಟ್ಟು ಬಿಟ್ಟು ಬೀಳುತ್ತಿರುತ್ತದೆ. ಉತ್ತರದಿಂದ ಬೀಸುವ ಚಳಿಗಾಳಿಗಳಿಂದಾಗಿ ಇಲ್ಲಿನ ಚಳಿಗಾಲಗಳು ಅಧಿಕ ಚಳಿಯಿಂದ ಕೂಡಿರುತ್ತವೆ.

ತಲುಪುವುದು ಹೇಗೆ

ವಡೋದರಾವು ದೆಹಲಿ, ಅಹಮದಾಬಾದ್, ಗಾಂಧೀನಗರ್ ಮತ್ತು ಮುಂಬಯಿಗಳ ಮಧ್ಯೆ ಉತ್ತಮ ಸಂಪರ್ಕವನ್ನು ಹೊಂದಿದೆ. ಈ ನಗರದ ಒಳಗೆ ಬಸ್, ಆಟೊ ರಿಕ್ಷಾ ಮತ್ತು ಟ್ಯಾಕ್ಸಿಗಳು ಪ್ರವಾಸಿಗರಿಗೆ ಅನುಕೂಲಕರವಾಗಿ ದೊರೆಯುತದೆ. ಅದರಲ್ಲಿಯೂ ಇಲ್ಲಿ ಟೆಲಿಕಮ್ಯೂಟಿಂಗ್ ವ್ಯವಸ್ಥೆ ಇರುವುದರಿಂದ ಪ್ರವಾಸಿಗರಿಗೆ ತಮಗೆ ಬೇಕಾದ ಕಡೆಗೆ ಹೋಗಲು ಯಾವುದೇ ತೊಂದರೆಯಾಗುವುದಿಲ್ಲ. ಇಲ್ಲಿನ ಸಾರ್ವಜನಿಕರು ಕಾರುಗಳು, ಸ್ಕೂಟರ್, ಮೋಟರ್ ಸೈಕಲ್ ಮತ್ತು ಸೈಕಲ್‍ಗಳನ್ನು ಇಷ್ಟಪಡುತ್ತಾರೆ.

ಕುತೂಹಲಕಾರಿ ಸ್ಥಳಗಳು

ಕಡಿಯ ಡುಂಗರ್ ಗುಹೆಗಳೂ, ಲಕ್ಷ್ಮೀ ನಿವಾಸ್ ಅರಮನೆ, ನಝರ್ ಬಾಗ್ ಅರಮನೆ, ಮಕರ್ ಪುರ ಅರಮನೆ, ಶ್ರೀ ಅರವಿಂದ್ ನಿವಾಸ್, ಅಂಕೊಟ್ಟಕ, ಸಯಾಜಿ ಬಾಗ್, ಸುರ್ ಸಾಗರ್ ತಲಾವ್, ದಭೋಯ್, ಚೋಟಾ ಉದೆಪುರಗಳು ಇಲ್ಲಿನ ಐತಿಹಾಸಿಕ ಸ್ಥಳಗಳಾಗಿದ್ದು, ಪ್ರವಾಸಿ ಆಕರ್ಷಣೆಯನ್ನು ಗಳಿಸಿವೆ. ಇವುಗಳ ಜೊತೆಗೆ ವಧ್ವಾನ ಜೌಗು ಪ್ರದೇಶ ಮತ್ತು ಇಕೊ ಕ್ಯಾಂಪ್‍ಸೈಟ್‍ಗಳು ಪ್ರವಾಸಿಗರಿಗೆ ಅಪರೂಪದ ವಲಸೆ ಹಕ್ಕಿಗಳನ್ನು ನೋಡುವ ಭಾಗ್ಯವನ್ನು ಒದಗಿಸುತ್ತವೆ. ಸಂಖೇಡವು ತನ್ನಲ್ಲಿ ತಯಾರಾಗುವ ಅಪರೂಪದ ಮತ್ತು ವಿಶಿಷ್ಟವಾದ ಮರದ ಕೆತ್ತನೆಗಳನ್ನು ಹೊಂದಿರುವ ಪೀಠೋಪಕರಣಗಳು ಹಾಗು ಕರಕುಶಲ ವಸ್ತುಗಳಿಗೆ ಪ್ರಸಿದ್ಧಿಯನ್ನು ಗಳಿಸಿದೆ. ನೀವು ಇಲ್ಲಿಗೆ ಭೇಟಿ ನೀಡಿದಾಗ ನೇರವಾಗಿ ಅದರ ತಯಾರಕರಿಂದ ಈ ವಸ್ತುಗಳನ್ನು ಕೊಳ್ಳಬಹುದು.

ಗಾಯಕ್ವಾಡ್‍ರವರ ಕಾಲದಿಂದ ಬಂದ ಸಂಸ್ಕೃತಿಯನ್ನು ಅತ್ಯಂತ ಜತನವಾಗಿ ಕಾಪಾಡಿಕೊಂಡು ಇಂದಿಗು ಪ್ರದರ್ಶಿಸುತ್ತಿರುವ ಅಂಶದಿಂದ ಹಿಡಿದು, ಹಲವಾರು ಪ್ರಾಕೃತಿಕ ವೈವಿಧ್ಯತೆಗಳನ್ನು ತೋರಿಸುವವರೆಗು ವಡೋದರಾವು ಪ್ರವಾಸಿಗರಿಗಾಗಿ ಹಲವಾರು ವಿಶೇಷತೆಗಳನ್ನು ತನ್ನಲ್ಲಿ ಅಡಗಿಸಿಕೊಂಡು, ರಂಜಿಸುತ್ತಿದೆ.

Please Wait while comments are loading...