
ಒರಿಸ್ಸಾದಲ್ಲಿರುವ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಉದಯಗಿರಿ ಗುಹೆಗಳೂ ಕೂಡಾ ಒಂದು. ಉದಯಗಿರಿಯು ಭಾರತದಲ್ಲಿನ ಅದ್ಭುತ ವಾಸ್ತುಶಿಲ್ಪಕಲೆಗೆ ಅತ್ಯುತ್ತಮ ಉದಾಹರಣೆಯಾಗಿದೆ. ಈ ಊರನ್ನು ಪ್ರಾಕೃತಿಕ ಸೌಂದರ್ಯ ಮತ್ತು ಮನುಷ್ಯ ಕಲೆಯ ಅಪರೂಪದ ಸಮ್ಮಿಲನ ಎಂದೇ ಕರೆಯಬಹುದು. ಈ ಸ್ಥಳವು ವಾಸ್ತುಶಿಲ್ಪ ಮತ್ತು ಐತಿಹಾಸಿಕ ದೃಷ್ಟಿಯಿಂದ ಮಹತ್ವದ್ದಾಗಿದ್ದು, ಇಲ್ಲಿ ಬೌದ್ಧ ಮಠಗಳೂ, ಸ್ತೂಪಗಳು ಮತ್ತು ಜೈನ ವಾಸ್ತುಶಿಲ್ಪದ ಅವಶೇಷಗಳನ್ನು ಅಗೆದು ಸಂಗ್ರಹಿಸಲಾಗಿದೆ.

ಸೂರ್ಯೋದಯದ ಬೆಟ್ಟಗಳು
ಉದಯಗಿರಿಯು ‘ಸೂರ್ಯೋದಯದ ಬೆಟ್ಟಗಳಿಗೆ' ಹೆಸರುವಾಸಿಯಾಗಿದೆ. ಇದು ಭುವನೇಶ್ವರದಿಂದ 85 ಕಿಮೀ ದೂರದಲ್ಲಿದೆ. ಇಲ್ಲಿ 18 ಗುಹೆಗಳಲ್ಲಿ ಕೆತ್ತಲಾಗಿರುವ ಶಿಲ್ಪಗಳು ಮತ್ತು ಶಾಸನಗಳು ಪ್ರವಾಸಿಗರನ್ನು ಸೆಳೆಯುತ್ತವೆ. ಇಲ್ಲಿನ ಶಾಸನಗಳು ತಿಳಿಸುವಂತೆ ಈ ಗುಹೆಗಳನ್ನು ಕಲ್ಲುಗಳನ್ನು ಕೊರೆಯುವ ಮೂಲಕ ನಿರ್ಮಿಸಲಾಗಿದೆ. ಖರವೇಲರ ಕಾಲದಲ್ಲಿ ಜೈನ ಸನ್ಯಾಸಿಗಳ ವಸತಿಗಾಗಿ ಈ ಗುಹೆಗಳು ನಿರ್ಮಾಣವಾದವು.

ಸುತ್ತಮುತ್ತಲ ಪ್ರವಾಸಿ ಆಕರ್ಷಣೆಗಳು
ಉದಯಗಿರಿಯಲ್ಲಿ 18 ಗುಹೆಗಳಿದ್ದು ಇವು ಉದಯಗಿರಿ ಗುಹೆಗಳು ಎಂದೇ ಹೆಸರುವಾಸಿಯಾಗಿದೆ. ಉದಯಗಿರಿಯ ಸಮೀಪದಲ್ಲೇ ಇರುವ ಖಂದಗಿರಿಯಲ್ಲಿ 15 ಗುಹೆಗಳಿವೆ. ಇವೆರಡೂ ಸ್ಥಳಗಳು ಉದಯಗಿರಿ ಪ್ರವಾಸೋದ್ಯಮದ ಪ್ರಮುಖ ಸ್ಥಳಗಳು. ಈ ಬೆಟ್ಟಗಳಲ್ಲದೆ, ಲಂಗುಡಿ ಬೆಟ್ಟ, ಲಲಿತಗಿರಿ ಮತ್ತು ರತ್ನಗಿರಿ ಬೆಟ್ಟಗಳು ಬೌದ್ಧ ಪ್ರದೇಶಗಳಾಗಿ ಗುರುತಿಸಲ್ಪಟ್ಟಿವೆ. ಇವುಗಳಲ್ಲಿ ಲಲಿತಗಿರಿಯಲ್ಲಿ ಗೌತಮ ಬುದ್ಧನಿಗೆ ಸಂಬಂಧಿಸಿದ ಸ್ಮಾರಕಗಳಿವೆ. ಈ ಸ್ಥಳಗಳ ಆಕರ್ಷಣೆಯು ಉದಯಗಿರಿ ಪ್ರವಾಸೋದ್ಯಮಕ್ಕೆ ಲಾಭದಾಯಕವಾಗಿದೆ.

ಯಾವಾಗ ಭೇಟಿ ನೀಡುವುದು ಸೂಕ್ತ
ಉದಯಗಿರಿಯಲ್ಲಿ ಬೇಸಿಗೆ, ಮಳೆಗಾಲ ಮತ್ತು ಚಳಿಗಾಲಗಳನ್ನು ಕಾಣಬಹುದು. ಬೇಸಿಗೆ ಧಗೆ ಮತ್ತು ಉಷ್ಣಾಂಶ ಹೆಚ್ಚಿರುತ್ತದೆ. ಚಳಿಗಾಲಗಳು ಹೆಚ್ಚು ತಣ್ಣಗಿರುತ್ತವೆ. ಅಕ್ಟೋಬರ್ - ಮಾರ್ಚ್ ಅವಧಿಯಲ್ಲಿ ಹವಾಮಾನವು ತಂಪಾಗಿ ಆಹ್ಲಾದಕರವಾಗಿರುವುದರಿಂದ ಪ್ರವಾಸಿಗರು ಈ ಸಮಯದಲ್ಲಿ ಹೆಚ್ಚಾಗಿ ಭೇಟಿ ನೀಡುತ್ತಾರೆ.

ತಲುಪುವುದು ಹೇಗೆ?
ಉದಯಗಿರಿಯು ಒಡಿಸ್ಸಾಗೆ ಮಾತ್ರವಲ್ಲ ದೇಶಕ್ಕೆ ಕೂಡ ಬಹಳ ಮುಖ್ಯವಾದ ಸಾಂಸ್ಕೃತಿಕ ಪ್ರದೇಶ. ಹಾಗಾಗಿ ಇಲ್ಲಿಗೆ ತಲುಪುವುದು ತ್ರಾಸದಾಯಕವಲ್ಲ. ಇದು ಭುವನೇಶ್ವರಕ್ಕೆ ಸಮೀಪದಲ್ಲಿರುವುದರಿಂದ ಪ್ರವಾಸಿಗರು ವಿಮಾನ, ರೈಲು ಅಥವ ರಸ್ತೆ ಮೂಲಕ ಇಲ್ಲಿಗೆ ತಲುಪಬಹುದು.
ವಿಮಾನದಲ್ಲಿ : ಭುವನೇಶ್ವರ ವಿಮಾನ ನಿಲ್ದಾಣವು ಉದಯಗಿರಿ ತಲುಪಲು ಸಮೀಪದ ವಿಮಾನ ನಿಲ್ದಾಣವಾಗಿದೆ. ಇದು ಕೇವಲ 10 ಕಿ.ಮೀ ದೂರದಲ್ಲಿದೆ. ಚೆನ್ನೈ, ಕೊಲ್ಕತ್ತಾ, ದೆಹಲಿ ಮತ್ತು ಹೈದರಾಬಾದ್ ಸೇರಿದಂತೆ ಭಾರತದ ಹಲವು ಪ್ರಮುಖ ನಗರಗಳಿಗೆ ಇದು ನಿಯಮಿತ ವಿಮಾನ ಸಂಪರ್ಕವನ್ನು ಹೊಂದಿದೆ.

ರೈಲಿನ ಮೂಲಕ
ಭುವನೇಶ್ವರ ರೈಲ್ವೇ ನಿಲ್ದಾಣವು ಸುಮಾರು 6 ಕಿ.ಮೀ ದೂರದಲ್ಲಿ ಹತ್ತಿರದ ರೈಲು ನಿಲ್ದಾಣವಾಗಿದೆ. ಇದು ರಾಜ್ಯದ ಎಲ್ಲಾ ಪ್ರಮುಖ ಪಟ್ಟಣಗಳು ಮತ್ತು ಭಾರತದ ಪ್ರಮುಖ ನಗರಗಳೊಂದಿಗೆ ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ. ಕಟಕ್ ರೈಲು ನಿಲ್ದಾಣವೂ ಇಲ್ಲಿಗೆ ಸಮೀಪದಲ್ಲೇ ಇದೆ.
ರಸ್ತೆ ಮೂಲಕ: ಉದಯಗಿರಿ ರಾಷ್ಟ್ರೀಯ ಹೆದ್ದಾರಿ NH-5 ಮೂಲಕ ಸಾರ್ವಜನಿಕ ಸಾರಿಗೆ ಬಸ್ಸುಗಳನ್ನು ಸುಲಭವಾಗಿ ತಲುಪಬಹುದು. ಭುವನೇಶ್ವರ ಪಟ್ಟಣಕ್ಕೆ ನಿಯಮಿತ ಬಸ್ಸುಗಳು ಪುರಿ, ಕಟಕ್ ಮತ್ತು ಇತರ ಪ್ರಮುಖ ನಗರಗಳಿಂದ ಕಾರ್ಯನಿರ್ವಹಿಸುತ್ತವೆ. ಭುವನೇಶ್ವರದಿಂದ ಟ್ಯಾಕ್ಸಿ ಮೂಲಕ ಅಥವಾ ಸ್ಥಳೀಯ ಸಾರಿಗೆಯ ಮೂಲಕ ಗುಹೆಗಳನ್ನು ಸುಲಭವಾಗಿ ತಲುಪ ಬಹುದು.