Search
  • Follow NativePlanet
Share
» »ವೀರಭದ್ರನ ಎರಡು ವಿಶಿಷ್ಟ ದೇವಸ್ಥಾನಗಳು

ವೀರಭದ್ರನ ಎರಡು ವಿಶಿಷ್ಟ ದೇವಸ್ಥಾನಗಳು

By Vijay

ಹಿಂದೂ ಪೌರಾಣಿಕ ಕಥೆಯ ಪ್ರಕಾರ, ವೀರಭದ್ರ ಒಬ್ಬ ಶಕ್ತಿಶಾಲಿಯಾದ ಪರಮಶಿವನ ಕಡುಕೋಪದ ಪರಿಣಾಮವಾಗಿ ಉತ್ಪತ್ತಿಯಾದ ದೇವ. ಯಾವಾಗ ದಕ್ಷ ಪ್ರಜಾಪತಿಯು ನಡೆಸುತ್ತಿರುವ ಯಜ್ಞದಲ್ಲಿ ಶಿವನ ಮಡದಿಯಾದ ಸತಿಯು ತನ್ನ ಪತಿಯನ್ನು ಯಜ್ಞಕ್ಕೆ ಆಹ್ವಾನಿಸದ್ದಿದ್ದುದಕ್ಕೆ ಹೋಮಕುಂಡದಲ್ಲಿ ಸ್ವೈಚ್ಛೆಯಿಂದ ಬಿದ್ದು ಅಗ್ನಿಗೆ ಆಹುತಿಯಾದಳೋ ಆ ಒಂದು ಪ್ರಸಂಗವು ವೀರಭದ್ರನ ಜನ್ಮಕ್ಕೆ ಕಾರಣೀಭೂತವಾಯಿತು.

ವೀರಭದ್ರನನ್ನು ಒಬ್ಬ ಭಯಂಕರವಾದ ಶಕ್ತಿಯುಳ್ಳ ವೀರ ಯೋಧನನ್ನಾಗಿ ಬಣ್ಣಿಸಲಾಗಿದೆ. ವೀರಭದ್ರನು ದಕ್ಷಾ ಪ್ರಜಾಪತಿ ನಡೆಸುತ್ತಿದ್ದ ಯಜ್ಞ ಸ್ಥಳಕ್ಕೆ ಆಗಮಿಸಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದನು. ಹಲವಾರು ದೇವತೆಗಳ, ಸೈನಿಕರ ರುಂಡ ಮುಂಡಗಳನ್ನು ಚೆಂಡಾಡಿದನು. ಹೀಗೆ ಧೈರ್ಯ, ಶಕ್ತಿಗಳಿಗೆ ಪ್ರತೀಕನಾಗಿರುವ ವೀರಭದ್ರನನ್ನು ಹಿಂದೂಗಳು ಭಕ್ತಿ, ಶೃದ್ಧೆಗಳಿಂದ ಪೂಜಿಸುತ್ತಾರೆ.

ವಿಶೇಷ ಲೇಖನ : ಅಹೋಬಲಂ ಎಂಬ ಶಕ್ತಿಶಾಲಿ ಕ್ಷೇತ್ರ

ವೀರಭದ್ರನಿಗೆಂದೆ ಮುಡಿಪಾದ ಹಲವಾರು ದೇವಸ್ಥಾನಗಳು ಭಾರತದಾದ್ಯಂತ ಕಂಡುಬರುತ್ತವೆ. ಅಷ್ಟೆ ಏಕೆ ವೀರಭದ್ರನಿಗೆಂದೆ ಮುಡಿಪಾದ ಪಟ್ಟಣವೊಂದೂ ಸಹ ಉತ್ತರಾಖಂಡ ರಾಜ್ಯದ ಡೆಹ್ರಾಡೂನ್ ಜಿಲ್ಲೆಯಲ್ಲಿದೆ. ಆ ಪಟ್ಟಣದ ಹೆಸರೂ ಸಹ ವೀರಭದ್ರ ಎಂದೆ ಆಗಿದೆ ಹಾಗೂ ಅಲ್ಲಿ ಅವನಿಗೆ ಮುಡಿಪಾದ ದೇವಾಲಯವೂ ಸಹ ಇದೆ.

ಪ್ರಸ್ತುತ ಲೇಖನದಲ್ಲಿ ವೀರಭದ್ರನಿಗೆ ಮುಡಿಪಾದ ಎರಡು ವಿಶಿಷ್ಟ ದೇವಾಲಯಗಳ ಕುರಿತು ತಿಳಿಯಿರಿ. ಇಲ್ಲಿ ಹೇಳಲಾಗಿರುವ ಎರಡು ದೇವಸ್ಥಾನಗಳ ಪೈಕಿ ಒಂದು ಆಂಧ್ರಪ್ರದೇಶ ರಾಜ್ಯದ ಲೇಪಾಕ್ಷಿಯಲ್ಲಿದ್ದರೆ ಇನ್ನೊಂದು ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿದೆ. ಈ ಎರಡೂ ದೇವಸ್ಥಾನಗಳು ತಮ್ಮದೆ ಆದ ವಿಶಿಷ್ಟತೆಯನ್ನು ಹೊಂದಿವೆ.

ವೀರಭದ್ರ ದೇವಸ್ಥಾನ:

ವೀರಭದ್ರ ದೇವಸ್ಥಾನ:

ಭಕ್ತಿಯಿಂದ ಬೇಡಿದಾಗ ವರ ನೀಡುವ, ಧೈರ್ಯ, ಶಕ್ತಿ ಕರುಣಿಸುವ ರುದ್ರ ಭಗವಂತನಾದ ಶಿವನ ಕೋಪದಿಂದ ಉತ್ಪತ್ತಿಯಾದ ವೀರಭದ್ರನ ಎರಡು ದೇವಸ್ಥಾನಗಳ ವಿಶೇಷತೆಯನ್ನು ಈ ಲೇಖನದ ಮೂಲಕ ತಿಳಿಯಿರಿ.

ಚಿತ್ರಕೃಪೆ: Balaji Srinivasan

ವೀರಭದ್ರ ದೇವಸ್ಥಾನ:

ವೀರಭದ್ರ ದೇವಸ್ಥಾನ:

ಯಡೂರ ವೀರಭದ್ರೇಶ್ವರ ದೇವಸ್ಥಾನ : ಶ್ರೀಕ್ಷೇತ್ರ ಯಡೂರಿನಲ್ಲಿದೆ ವೀರಭದ್ರನ ಈ ಪ್ರಸಿದ್ಧ ದೇವಸ್ಥಾನ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿ ಹರಿದಿರುವ ಕೃಷ್ಣಾ ನದಿಯ ದಂಡೆಯ ಮೇಲೆ ಶ್ರೀ ವೀರಭದ್ರೇಶ್ವರನ ಈ ದೇವಸ್ಥಾನವಿದೆ.

ಚಿತ್ರಕೃಪೆ: Karnataka ka

ವೀರಭದ್ರ ದೇವಸ್ಥಾನ:

ವೀರಭದ್ರ ದೇವಸ್ಥಾನ:

ಇಲ್ಲಿ ಪ್ರತಿಷ್ಠಾಪಿಸಲಾಗಿರುವ ಶಿವಲಿಂಗವನ್ನು ಶ್ರೀ ವಿರೂಪಾಕ್ಷ ಲಿಂಗ ಎಂದೂ ಸಹ ಕರೆಯಲಾಗುತ್ತದೆ ಹಾಗೂ ಈ ದೇವಸ್ಥಾನವು 12 ನೆಯ ಶತಮಾನದ ಸಂದರ್ಭದಲ್ಲಿ ಕರ್ನಾಟಕದ ಪ್ರಖ್ಯಾತ ವೀರಶೈವ ಸಂತರಾದ ಶ್ರೀ ಕಾಡಸಿದ್ಧೇಶ್ವರರಿಂದ ಸ್ಥಾಪಿಸಲ್ಪಟ್ಟಿದೆ ಎಂದು ಹೇಳಲಾಗಿದೆ. ಇಂದಿಗೂ ಕಾಡಸಿದ್ಧೇಶ್ವರ ಮಠದ ಅಡಿಯಲ್ಲಿ ದೇಗುಲವು ನಿರ್ವಹಿಸಲ್ಪಡುತ್ತದೆ. ಸಾಕಷ್ಟು ಸೇವೆಗಳು ಇಲ್ಲಿ ಲಭ್ಯವಿದ್ದು ಹಲವಾರು ಉತ್ಸವಗಳನ್ನು ದೇವಸ್ಥಾನದ ಅಧಿಕಾರಿಗಳು ಕಾಡಸಿದ್ಧೇಶ್ವರ ಮಠದ ಅಧಿಕಾರಿಗಳ ಸಹಯೋಗದಲ್ಲಿ ಆಯೋಜಿಸುತ್ತಾರೆ.

ಚಿತ್ರಕೃಪೆ: Karnataka ka

ವೀರಭದ್ರ ದೇವಸ್ಥಾನ:

ವೀರಭದ್ರ ದೇವಸ್ಥಾನ:

ಕಾಡಸಿದ್ದೇಶ್ವರ ಮಠದ ಸ್ವಮೀಜಿಗಳು ಈ ದೇವಾಲಯದ ಉನ್ನತ ಅಧಿಕಾರಿಗಳಾಗಿರುತ್ತಾರೆ ಹಾಗೂ ಪ್ರಸ್ತುತ ದೇಗುಲದ ಅಧಿಕಾರಿಗಳು ಮತ್ತು ಮಠದ ಅಧಿಕಾರಿಗಳು ಸೇರಿ ಪೀಠಾಧಿಪತಿಗಳ ಮಾರ್ಗದರ್ಶನದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದಾರೆ. ಯಾತ್ರಿ ನಿವಾಸ, ಕಲ್ಯಾಣ ಮಂಟಪ, ಮಂಜರಿ ದ್ವಾರ, ದಾಸೋಹ ಸಭಾಂಗಣ, ರಥ ನಿರ್ಮಾಣ ಮುಂತಾದ ಕಾರ್ಯಗಳು ಭರದಲ್ಲಿ ಸಾಗುತ್ತಿವೆ. ನೂತನವಾಗಿ ನಿರ್ಮಿಸಲಾಗಿರುವ ಭೋಜನ ಶಾಲೆ.

ಚಿತ್ರಕೃಪೆ: Karnataka ka

ವೀರಭದ್ರ ದೇವಸ್ಥಾನ:

ವೀರಭದ್ರ ದೇವಸ್ಥಾನ:

ಬ್ರಾಹ್ಮಣ ಸಮುದಾಯ ಹಾಗೂ ವೀರಶೈವ ಲಿಂಗಾಯತ ಸಮುದಾಯದವರ ಪವಿತ್ರ ಕ್ಷೇತ್ರವಾಗಿ ವೀರಭದ್ರೇಶ್ವರ ದೇವಸ್ಥಾನ ಸರ್ವರನ್ನು ಆಕರ್ಷಿಸುತ್ತದೆ. ಕೇವಲ ಕರ್ನಾಟಕ ಮಾತ್ರವಲ್ಲದೆ ಪಕ್ಕದ ಮಹಾರಾಷ್ಟ್ರದಿಂದಲೂ ಸಹ ಸಾಕಷ್ಟು ಜನ ಭಕ್ತಾದಿಗಳು ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಅಲ್ಲದೆ ಈ ಕ್ಷೇತ್ರವು ಮಹಾರಾಷ್ಟ್ರದ ಗಡಿಗೆ ಹತ್ತಿರದಲ್ಲಿರುವುದರಿಂದ ಇಲ್ಲಿ ಕನ್ನಡ ಹಾಗೂ ಮರಾಠಿ ಎರಡೂ ಭಾಷೆಗಳು ರೂಢಿಯಲ್ಲಿವೆ.

ಚಿತ್ರಕೃಪೆ: Karnataka ka

ವೀರಭದ್ರ ದೇವಸ್ಥಾನ:

ವೀರಭದ್ರ ದೇವಸ್ಥಾನ:

ಪ್ರತಿನಿತ್ಯ ವೀರಭದ್ರನಿಗೆ ಭಕ್ತರ ಪರವಾಗಿ ಅಭಿಷೇಕ, ಬುಟ್ಟಿ ಪೂಜೆ, ಎಲೆ ಪೂಜೆ, ಅಕ್ಕಿ ಪೂಜೆ, ಭಕ್ತರ ಬಯಕೆಯಂತ್ರೆ ತುಲಾಭಾರ ಸೇವೆ ನೆರವೇರಿಸಲಾಗುತ್ತದೆ. ಅಲ್ಲದೆ ಮದುವೆ, ಜವಳ, ಗುಗ್ಗುಲ ಮುಂತಾದ ಕಲ್ಯಾಣ ಕಾರ್ಯಗಳನ್ನು ದೇವಸ್ಥಾನದಲ್ಲಿ ಮುಂಚಿತವಾಗಿ ಮಾತಾಡಿ, ಕಾಯ್ದಿರಿಸಿ ಭಕ್ತರು ನೆರವೇರಿಸಿಕೊಳ್ಳಬಹುದಾಗಿದೆ. ಯಡೂರು ಬೆಳಗಾವಿ ನಗರದಿಂದ 94 ಕಿ.ಮೀ ಗಳಷ್ಟು ದೂರದಲ್ಲಿದ್ದು ತೆರಳಲು ಬಸ್ಸುಗಳು ದೊರೆಯುತ್ತವೆ. ಅಲ್ಲದೆ ನಗರದಿಂದ ಬಾಡಿಗೆ ಕಾರುಗಳನ್ನೂ ಸಹ ಮಾಡಿಕೊಂಡು ಯಡೂರಿಗೆ ತೆರಳಬಹುದು. ಇನ್ನೂ ಬೆಳಗಾವಿಯು ಕರ್ನಾಟಕದ ಎಲ್ಲ ಪ್ರಮುಖ ನಗರಗಳಿಂದ ರಸ್ತೆ ಸಂಪರ್ಕ ಹಾಗೂ ರೈಲು ಸಂಪರ್ಕ ಹೊಂದಿದೆ. ನೂತನವಾಗಿ ನಿರ್ಮಿಸಲಾಗಿರುವ ಯಾತ್ರಿ ನಿವಾಸ.

ಚಿತ್ರಕೃಪೆ: Karnataka ka

ವೀರಭದ್ರ ದೇವಸ್ಥಾನ:

ವೀರಭದ್ರ ದೇವಸ್ಥಾನ:

ವೀರಭದ್ರ ಸ್ವಾಮಿ ದೇವಸ್ಥಾನ, ಲೇಪಾಕ್ಷಿ : ಆಂಧ್ರಪ್ರದೇಶ ರಾಜ್ಯದ ಅನಂತಪುರ ಜಿಲ್ಲೆಯಲ್ಲಿರುವ ಲೇಪಾಕ್ಷಿಯು ಒಂದು ಪ್ರಸಿದ್ಧ ಐತಿಹಾಸಿಕ ಪ್ರವಾಸಿ ಕೇಂದ್ರವಾಗಿದ್ದು ತನ್ನಲ್ಲಿರುವ ವೀರಭದ್ರ ಸ್ವಾಮಿ ದೇವಸ್ಥಾನ ಹಾಗೂ ಅದರ ಅತ್ಯದ್ಭುತ ಶಿಲ್ಪಕಲೆಗೆ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Mahesh Telkar

ವೀರಭದ್ರ ದೇವಸ್ಥಾನ:

ವೀರಭದ್ರ ದೇವಸ್ಥಾನ:

ಕರ್ನಾಟಕದ ಬೆಂಗಳೂರು ಮಹಾನಗರಿಯಿಂದ ಕೇವಲ 140 ಕಿ.ಮೀ. ದೂರದಲ್ಲಿರುವ ಲೇಪಾಕ್ಷಿ ಹಿಂದುಪುರ ಪಟ್ಟಣದಿಂದ 15 ಕಿ.ಮೀ. ಗಳಷ್ಟು ದೂರದಲ್ಲಿದೆ. ತುಂಬಾ ಚಿಕ್ಕ ಹಳ್ಳಿಯಾದರೂ ಹೇರಳ ಪ್ರಮಾಣದ ಐತಿಹಾಸಿಕ ಶ್ರೀಮಂತಿಕೆಯುಳ್ಳ ಧಾರ್ಮಿಕ ಸ್ಥಳ ಇದಾಗಿದೆ. ಸ್ಥಳೀಯರ ಪಾಲಿಗೆ ಇದು ಅತ್ಯಂತ ಪವಿತ್ರ ಸ್ಥಳ. ಈ ಪ್ರದೇಶವು ದಕ್ಷಿಣ ಭಾರತದಲ್ಲಿ ಅತ್ಯಂತ ಪ್ರಸಿದ್ಧಿ ಹೊಂದಿದೆ. ಇಲ್ಲಿ ಮೂರು ಪ್ರಮುಖ ದೇವಾಲಯಗಳು ಇವೆ. ಅವು ಶಿವ, ವಿಷ್ಣು ಹಾಗೂ ವೀರಭದ್ರನಿಗೆ ಮುಡಿಪಾಗಿವೆ.

ಚಿತ್ರಕೃಪೆ: Vinu raj

ವೀರಭದ್ರ ದೇವಸ್ಥಾನ:

ವೀರಭದ್ರ ದೇವಸ್ಥಾನ:

16 ನೆಯ ಶತಮಾನದ ಸಂದರ್ಭದಲ್ಲಿ ನಿರ್ಮಾಣವಾದ ವೀರಭದ್ರಸ್ವಾಮಿ ದೇವಸ್ಥಾನದ ವಾಸ್ತುಶೈಲಿ ಹಾಗೂ ಶಿಲ್ಪ ಕಲೆಗಳು ಕರ್ನಾಟಕದ ವಿಜಯ ನಗರ ಸಾಮ್ರಾಜ್ಯದ ಶಿಲ್ಪಕಲೆಗೆ ಸಾಕಷ್ಟು ಸಾಮ್ಯತೆಯನ್ನು ಹೊಂದಿವೆ.

ಚಿತ್ರಕೃಪೆ: Rahulpurushot

ವೀರಭದ್ರ ದೇವಸ್ಥಾನ:

ವೀರಭದ್ರ ದೇವಸ್ಥಾನ:

ಇಲ್ಲಿರುವ ದೇವಸ್ಥಾನದ ಹಲವು ರಚನೆಗಳ ಮೇಲೆ ವರ್ಣ ಚಿತ್ರಗಳನ್ನು ಬಿಡಿಸಲಾಗಿದ್ದು ನೋಡಲು ಅತ್ಯಾಕರ್ಷಕವಾಗಿ ಕಾಣುತ್ತವೆ. ರಾಮ, ಕೃಷ್ಣ ಹೀಗೆ ಹಲವು ಪೌರಾಣಿಕ ಪಾತ್ರಧಾರಿಗಳನ್ನು ಗೋಡೆಗಳ ಮೇಲೆ ಸೂಕ್ಷವಾಗಿ ಹಾಗೂ ಅಷ್ಟೆ ಸುಂದರವಾಗಿ ಬಿಡಿಸಲಾಗಿದೆ.

ಚಿತ್ರಕೃಪೆ: Pp391

ವೀರಭದ್ರ ದೇವಸ್ಥಾನ:

ವೀರಭದ್ರ ದೇವಸ್ಥಾನ:

ಹಿಂದೆ ಈಗಿರುವ ಹಾಗೆ ಯಾವ ಆಧುನಿಕ ಉಪಕರಣಗಳೂ ಇರಲಿಲ್ಲ. ಅದಾಗ್ಯೂ ಅಂದಿನ ಶಿಲ್ಪಿಗಳು ತಮ್ಮ ಬಳಿಯಿದ್ದ ಪಾರಂಪರಿಕ ಉಪಕರಗಳಿಂದ, ತಮ್ಮ ನಿಪುಣತೆಯಿಂದ ಕೆತ್ತಿರುವ ರೀತಿಯನ್ನು ನೋಡಿದಾಗ ಒಂದು ಕ್ಷಣ ಯಾರಿಗಾದರೂ ಆಗಲಿ ಆಶ್ಚರ್ಯವಾಗದೆ ಇರಲಾರದು.

ಚಿತ್ರಕೃಪೆ: Pponnada

ವೀರಭದ್ರ ದೇವಸ್ಥಾನ:

ವೀರಭದ್ರ ದೇವಸ್ಥಾನ:

ಇಲ್ಲಿರುವ ಜೋತಾಡುವ ಖಂಬಗಳು ಅಚ್ಚರಿಯ ಆಕರ್ಷಣೆಯಾಗಿದೆ. ಯಾವುದೆ ಆಧಾರವಿಲ್ಲದೆ ನೆಲದಿಂದ ಮಿ.ಮೀ ಗಳಷ್ಟು ಅಂತರದಲ್ಲಿ ಮೇಲಿರುವುದನ್ನು ಗಮನಿಸಬಹುದು. ಇದು ಇಂದಿನ ವಿಜ್ಞಾನಕ್ಕೆ ಒಂದು ಸವಾಲೂ ಸಹ ಆಗಿದೆ.

ಚಿತ್ರಕೃಪೆ: Mahesh Telkar

ವೀರಭದ್ರ ದೇವಸ್ಥಾನ:

ವೀರಭದ್ರ ದೇವಸ್ಥಾನ:

ವೀರಭದ್ರನ ದೇವಸ್ಥಾನ ಅಂಗಳದಿಂದ 200 ಮೀ. ಗಳಷ್ಟು ಅಂತರದಲ್ಲಿ ಬೃಹತ್ ಏಕ ಶಿಲಾ ಬಂಡೆಯೊಂದರಲ್ಲಿ ದೊಡ್ಡ ಆಕಾರದ ನಂದಿಯ ವಿಗ್ರಹವನ್ನು ಕಾಣಬಹುದಾಗಿದೆ. ಇದೊಂದು ಪ್ರಮುಖ ಪ್ರವಾಸಿ ಆಕರ್ಷಣೆಯೂ ಹೌದು. ಜಗತ್ತಿನಲ್ಲಿಯೆ ಅತಿ ದೊಡ್ಡದಾದ ಬೆರಳೆಣಿಕೆಯಷ್ಟಿರುವ ನಂದಿ ವಿಗ್ರಹಗಳ ಪೈಕಿ ಇದೂ ಸಹ ಒಂದು.

ಚಿತ್ರಕೃಪೆ: Vinay332211

ವೀರಭದ್ರ ದೇವಸ್ಥಾನ:

ವೀರಭದ್ರ ದೇವಸ್ಥಾನ:

ಲೇಪಾಕ್ಷಿ ಪಟ್ಟಣದ ದಕ್ಷಿಣಕ್ಕೆ ಉಬ್ಬು ಹೊಂದಿರುವ ಗ್ರಾನೈಟ್ ಶಿಲೆಯ ಬೆಟ್ಟವೊಂದರ ಮೇಲೆ ಈ ದೇವಾಲಯದ ನಿರ್ಮಾಣವಾಗಿದೆ. ಈ ಪ್ರದೇಶವು ಉಬ್ಬು ಹೊಂದಿರುವುದರಿಂದ ಇದನ್ನು ಕೂರ್ಮ ಶೈಲ ಎಂದು ಕರೆಯಲಾಗುತ್ತದೆ.

ಚಿತ್ರಕೃಪೆ: Reddy Bhagyaraj

ವೀರಭದ್ರ ದೇವಸ್ಥಾನ:

ವೀರಭದ್ರ ದೇವಸ್ಥಾನ:

ಈ ದೇವಾಲಯದಲ್ಲಿ ವಿಶ್ವಕರ್ಮ ಬ್ರಾಹ್ಮಣರ ವಾಸ್ತುಶಿಲ್ಪ ಮಾದರಿಯನ್ನು ಹೆಚ್ಚಾಗಿ ಕಾಣಬಹುದು. ಇವರು ತಮ್ಮ ಕಲಾ ವೈಭವವನ್ನು ಇಲ್ಲಿ ಮೆರೆದಿದ್ದಾರೆನ್ನಬಹುದು. ದೇವಾಲಯದ ಆರಂಭಿಕ ವಿನ್ಯಾಸವನ್ನು ಇವರೇ ಸಿದ್ಧಪಡಿಸಿದ್ದು, ಆಕರ್ಷಕ ಹಾಗೂ ಅಪರೂಪದ ಇವರ ಕಲಾತ್ಮಕತೆಗೆ ಇದೊಂದು ಉದಾಹರಣೆಯಾಗಿ ಗೋಚರಿಸುತ್ತದೆ.

ಚಿತ್ರಕೃಪೆ: Pavithrah

ವೀರಭದ್ರ ದೇವಸ್ಥಾನ:

ವೀರಭದ್ರ ದೇವಸ್ಥಾನ:

ಆಕರ್ಷಕ ಶಿಲ್ಪಕಲೆಗೆ ದೇವಾಲಯ ಹೆಸರುವಾಸಿಯಾಗಿದೆ. ದೇವಾಲಯದಲ್ಲಿ ಒಂದು ಮಂಟಪ ಇದೆ. ದೇವಾಲಯದ ಕಂಬದ ಮೇಲೆ ಸಾಮಾನ್ಯ ಮನುಷ್ಯ ಗಾತ್ರದ ನೃತ್ಯಗಾರ್ತಿ ಹಾಗೂ ಇತರೆ ಸಂಗೀತಗಾರರನ್ನು ಸುಂದರವಾಗಿ ಕೆತ್ತಿಡಲಾಗಿದೆ.

ಚಿತ್ರಕೃಪೆ: రహ్మానుద్దీన్

ವೀರಭದ್ರ ದೇವಸ್ಥಾನ:

ವೀರಭದ್ರ ದೇವಸ್ಥಾನ:

ದೇವಾಲಯ ಹಲವು ವಿಸ್ಮಯಗಳಿಗೆ ಸಾಕ್ಷಿಯಾಗಿದ್ದು, ಹಲವು ಪ್ರವಾಸಿಗರು, ಭಕ್ತರು ವರ್ಷದ ಎಲ್ಲಾ ದಿನದಲ್ಲೂ ಆಗಮಿಸುತ್ತಾರೆ. ವರ್ಷದಿಂದ ವರ್ಷಕ್ಕೆ ಆಗಮಿಸುವವರ ಸಂಖ್ಯೆ ವೃದ್ಧಿಸುತ್ತಿದೆ. ಅಲ್ಲದೆ ಸ್ಕಂದ ಪುರಾಣದ ಪ್ರಕಾರ, ಈ ದೇವಾಲಯವು ಶಿವನ ಮುಖ್ಯ ತೀರ್ಥ ಕ್ಷೇತ್ರಗಳ ಕುರಿತು ಹೇಳುವ ದಿವ್ಯ ಕ್ಷೇತ್ರಗಳ ಪೈಕಿ ಒಂದಾಗಿದೆ.

ಚಿತ್ರಕೃಪೆ: Lucky1841999

ವೀರಭದ್ರ ದೇವಸ್ಥಾನ:

ವೀರಭದ್ರ ದೇವಸ್ಥಾನ:

ಭೌತಿಕವಾಗಿ ದೇವಾಲಯವು ಮೂರು ಭಾಗಗಳಲ್ಲಿ ವಿಂಗಡಿಸಲ್ಪಟ್ಟಿದೆ. ಮುಖ/ನಾಟ್ಯ/ರಂಗ ಮಂಟಪ, ಅಂತರಾಳ ಅಥವಾ ಅರ್ಧ ಮಂಟಪ ಹಾಗೂ ಗರ್ಭಗೃಹ. ಒಟ್ಟಾರೆಯಾಗಿ ಇವು ಎರಡು ಗೋಡೆಗಳಿಂದ ಸುತ್ತುವರಿಯಲ್ಪಟ್ಟಿವೆ.

ಚಿತ್ರಕೃಪೆ: Madhavkopalle

ವೀರಭದ್ರ ದೇವಸ್ಥಾನ:

ವೀರಭದ್ರ ದೇವಸ್ಥಾನ:

ಹೊರಗೋಡೆಯು ಮೂರು ದ್ವಾರಗಳನ್ನು ಹೊಂದಿದ್ದು, ಉತ್ತರದ ದ್ವಾರವು ಹೆಚ್ಚಾಗಿ ಬಳಸಲ್ಪಡುತ್ತದೆ. ಒಳಗೋಡೆಯ ಪೂರ್ವ ದ್ವಾರವು ಮುಖ ಮಂಟಪಕ್ಕೆ ಸ್ವಾಗತಿಸುತ್ತದೆ. ಇದು ಗರ್ಭಗೃಹದ ಪ್ರವೇಶ ದ್ವಾರದಲ್ಲಿದ್ದು ವಿಶಾಲವಾಗಿ ಹಾಗೂ ಅಷ್ಟೆ ಸುಂದರವಾಗಿ ವಿನ್ಯಾಸಿಸಲ್ಪಟ್ಟಿದೆ.

ಚಿತ್ರಕೃಪೆ: Somasakshini

ವೀರಭದ್ರ ದೇವಸ್ಥಾನ:

ವೀರಭದ್ರ ದೇವಸ್ಥಾನ:

ದೇವಾಲಯದ ಪ್ರತಿ ಖಂಬಗಳ ಮೇಲೆ ಪೌರಾಣಿಕ ಪ್ರಸಂಗಗಳು, ದೇವ ದೇವತೆಯರ, ಸಂತರ, ಪ್ರಸಿದ್ಧ ಸಂಗೀತಗಾರರ, ನೃತ್ಯಗಾರರ ಅದ್ಭುತವಾದ ಶಿಲ್ಪಗಳನ್ನು ಕೆತ್ತಿ ಅಲಂಕೃತ ಮಾಡಲಾಗಿದೆ. ಈ ಒಂದು ಸುಂದರ ಕಲೆಯನ್ನರಸುತ್ತ ಅದೆಷ್ಟೊ ಇತಿಹಾಸ, ವಾಸ್ತುಶಿಲ್ಪ ಪ್ರಿಯ ಪ್ರವಾಸಿಗರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: pd

ವೀರಭದ್ರ ದೇವಸ್ಥಾನ:

ವೀರಭದ್ರ ದೇವಸ್ಥಾನ:

ಇನ್ನೂ ಏಷಿಯಾದಲ್ಲೆ ದೊಡ್ಡದು ಎನ್ನಲಾಗುವ ವರ್ಣ ಚಿತ್ರ ಬಿಡಿಸಿರುವ ಅರ್ಧ ಮಂಟಪದ ಛಾವಣಿಯು ನೋಡಲು ಬಲು ಆಕರ್ಷಕವಾಗಿ ಕಂಡುಬರುತ್ತದೆ. ಈ ವರ್ಣಚಿತ್ರಗಳಲ್ಲಿ ಶಿವನ 14 ಅವತಾರಗಳನ್ನು ಅಂದವಾಗಿ ಬಿಡಿಸಲಾಗಿದೆ.

ಚಿತ್ರಕೃಪೆ: రహ్మానుద్దీన్

ವೀರಭದ್ರ ದೇವಸ್ಥಾನ:

ವೀರಭದ್ರ ದೇವಸ್ಥಾನ:

ಗರ್ಭಗೃಹದಲ್ಲಿ ಮನುಷ್ಯನಾಕಾರದ ವೀರಭದ್ರನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಗಂಭೀರವಾದ ಭಂಗಿಯಲ್ಲಿರುವ ವೀರಭದ್ರನು ಆಯುಧಗಳನ್ನು ಹಿಡಿದು ತಲೆ ಬುರುಡೆಗಳಿಂದ ಅಲಂಕೃತನಾಗಿ ನಿಂತಿರುವುದನ್ನು ಕಾಣಬಹುದು.

ಚಿತ್ರಕೃಪೆ: Mahesh Telkar

ವೀರಭದ್ರ ದೇವಸ್ಥಾನ:

ವೀರಭದ್ರ ದೇವಸ್ಥಾನ:

ಈ ಗರ್ಭಗೃಹದಲ್ಲಿ ಗುಹೆಯೊಂದಿದೆ ಎಂದು ಹೇಳಲಾಗುತ್ತದೆ. ಅಗಸ್ತ್ಯ ಮುನಿಗಳು ಶಿವಲಿಂಗವನ್ನು ಸ್ಥಾಪಿಸಿ ನಂತರ ಇಲ್ಲಿಯೆ ಇದ್ದರೆನ್ನಲಾಗಿದೆ. ಗರ್ಭಗುಡಿಯ ಮುಖ್ಯ ಮೂರ್ತಿಯ ಛಾವಣಿಯ ಮೇಲೆ ದೇವಾಲಯ ನಿರ್ಮಿಸಿದ ವಿರೂಪಣ್ಣ ಹಾಗೂ ವೀರಣ್ಣರ ಚಿತ್ರಗಳನ್ನು ಬಿಡಿಸಲಾಗಿದೆ.

ಚಿತ್ರಕೃಪೆ: Pavithrah

ವೀರಭದ್ರ ದೇವಸ್ಥಾನ:

ವೀರಭದ್ರ ದೇವಸ್ಥಾನ:

ದೇವಾಲಯ ಸಂಕೀರ್ಣದ ಪೂರ್ವ ಭಾಗದಲ್ಲಿ ಒಂದು ಪ್ರತ್ಯೇಕವಾದ ಕೊಣೆಯಿದ್ದು ಶಿವ ಹಾಗೂ ಪಾರ್ವತಿಯರ ವಿಗ್ರಹಗಳನ್ನು ದೊಡ್ಡದಾದ ಬಂಡೆಯೊಂದರ ಮೇಲೆ ಸುಂದರವಾಗಿ ಕೆತ್ತಲಾಗಿರುವುದನ್ನು ಕಾಣಬಹುದು. ಇದೇ ರೀತಿಯಾಗಿ ಇನ್ನೊಂದು ಕೊಣೆಯಲ್ಲಿ ವಿಷ್ಣುವಿನ ವಿಗ್ರಹವನ್ನು ಕಡಿಯಲಾಗಿದೆ.

ಚಿತ್ರಕೃಪೆ: Vinu raj

ವೀರಭದ್ರ ದೇವಸ್ಥಾನ:

ವೀರಭದ್ರ ದೇವಸ್ಥಾನ:

ದೇವಾಲಯದ ಸಂಕೀರ್ಣದಲ್ಲೆ ಪೂರ್ವ ದಿಕ್ಕಿನಲ್ಲಿ ಒಂದು ದೊಡ್ಡ ಬಂಡೆಯನ್ನು ಶಿವಲಿಂಗವನ್ನು ಕಾಯುತ್ತಿರುವ ಉದ್ದೇಶದಿಂದ ಅದನ್ನು ಸುತ್ತಿಕೊಂಡು ಕುಳಿತಿರುವ ಐದು ಹೆಡೆಯ ಸರ್ಪವನ್ನು ಆಕರ್ಷಕವಾಗಿ ಕೆತ್ತಲಾಗಿದೆ. ಇದನ್ನು ನಾಗಲಿಂಗಂ ಎಂದು ಕರೆಯುತ್ತಾರೆ.

ಚಿತ್ರಕೃಪೆ: Narasimha Prakash

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X