Search
  • Follow NativePlanet
Share
» »ಮಳೆಗಾಲ ಪ್ರವಾಸ : ದ.ಭಾರತದಲ್ಲಿ ಭೇಟಿ ನೀಡಬಹುದಾದ 25 ಅತ್ಯುತ್ತಮ ಸ್ಥಳಗಳು

ಮಳೆಗಾಲ ಪ್ರವಾಸ : ದ.ಭಾರತದಲ್ಲಿ ಭೇಟಿ ನೀಡಬಹುದಾದ 25 ಅತ್ಯುತ್ತಮ ಸ್ಥಳಗಳು

By Vijay

ವರ್ಷದ ಎಲ್ಲಾ ಋತುಗಳಲ್ಲೂ ಅದಕ್ಕೆ ಹೊಂದುವಂತೆ ಭೇಟಿ ನೀಡಲು ಯೋಗ್ಯವಾದ ಪ್ರವಾಸಿ ತಾಣಗಳು ಸಾಕಷ್ಟಿವೆ ಭಾರತದಲ್ಲಿ. ಅದರಲ್ಲೂ ವಿಶೇಷವಾಗಿ ಮಳೆಗಾಲ ಒಂದು ರೀತಿಯ ಲವಲವಿಕೆ ಉಂಟುಮಾಡುವ ಕಾಲ. ಚುಮು ಚುಮು ಮಳೆಯಲ್ಲಿ, ತಂಪಾದ ಪರಿಸರದಲ್ಲಿ ಬಿಸಿ ಬಿಸಿ ಕಾಫಿ ಹೀರುತ್ತ, ಪಕೋಡಾ,ಭಜ್ಜಿಗಳನ್ನು ಸವಿಯುತ್ತ ದಟ್ಟ ಹಸಿರಿನ ಸಸ್ಯ ಸಂಪತ್ತು, ಭೊರ್ಗೆರೆವ ಜಲಧಾರೆ ನೋಡುವುದೆಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ? ಈ ಒಂದು ಅನುಭವಕ್ಕಾಗಿ ಸಾಕಷ್ಟು ಸಮಯದಿಂದ ಕಾತುರದಿಂದ ಕ್ಜಾಯುತ್ತಿರುತ್ತಾರೆ ಹಲವು ಪ್ರವಾಸಿಗರು.

ದಕ್ಷಿಣ ಭಾರತದಲ್ಲೂ ಸಹ ಮಳೆಗಾಲದ ಆನಂದವನ್ನು ಮತ್ತಷ್ಟು ಇಮ್ಮಡಿಗೊಳಿಸುವಂತಹ ಹಲವು ಆಕರ್ಷಕ ಪ್ರವಾಸಿ ತಾಣಗಳಿವೆ. ಜೂನ್ ಜುಲೈ ತಿಂಗಳುಗಳು ಬಂತೆಂದರೆ ಸಾಕು, ಈ ಸ್ಥಳಗಳಲ್ಲಿ ಪ್ರವಾಸಿ ಚಟುವಟಿಕೆಗಳು ಚುರುಕಗೊಳ್ಳಲಾರಂಭಿಸುತ್ತವೆ. ಸ್ನೇಹಿತರೊಂದಿಗೆ ಗುಂಪು ಕಟ್ಟುಕೊಂಡೊ ಇಲ್ಲವೆ ಕುಟುಂಬ ಸಮೇತರಾಗಿಯೋ ಪ್ರವಾಸ ಹೊರಡಲು ಮನ ಹಂಬಲಿಸತೊಡಗುತ್ತದೆ.

ನಿಮಗೂ ಸಹ ಈ ಸಮಯದಲ್ಲಿ ಅಂದರೆ ಮಳೆಗಾಲದಲ್ಲಿ ಯಾವ್ಯಾವ ಸ್ಥಳಗಳು ಭೇಟಿ ನೀಡಲು ಸೂಕ್ತವಾಗಿರಬಹುದು ಎಂಬ ತಿಳಿಯುವ ಹಂಬಲವಿದ್ದರೆ, ಈ ಲೇಖನವನ್ನೊಮ್ಮೆ ಓದಿ ನೋಡಿ. ಇಲ್ಲಿ ಮಳೆಗಾಲದಲ್ಲೆ ಭೇಟಿ ನೀಡಿದರೆ ಅತಿ ಹೆಚ್ಚು ಸಂತಸವಾಗುವ, ಹಣ ವ್ಯಯ ಮಾಡಿದ್ದಕ್ಕೂ ಸಾರ್ಥಕತೆ ನೀಡುವ ದಕ್ಷಿಣ ಭಾರತದ ಕೆಲವು ಆಯ್ದ ಪ್ರವಾಸಿ ತಾಣಗಳ ಕುರಿತು ತಿಳಿಸಲಾಗಿದೆ. ಇದರಲ್ಲಿ ನಿಮಗಿಷ್ಟವಾಗುವ ಸ್ಥಳಕ್ಕೆ, ಅದರ ಕುರಿತು ಓದಿ ತಿಳಿದು ಯೋಜಿಸಿ ಪ್ರವಾಸ ಮಾಡಿ. ಖಂಡಿತವಾಗಿಯೂ ನಿಮಗೆ ನಿರಾಸೆಯಾಗದು.

ದ.ಭಾರತದ 25 ಅತುತ್ತಮ ಮಳೆಗಾಲ ಸ್ಥಳಗಳು

ದ.ಭಾರತದ 25 ಅತುತ್ತಮ ಮಳೆಗಾಲ ಸ್ಥಳಗಳು

ಕೊಡಗು : ಕರ್ನಾಟಕ ಪ್ರಖ್ಯಾತ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ ಕೊಡಗು. ಮಳೆಗಾಲದಲ್ಲಂತೂ ಈ ಗಿರಿಧಾಮ ಜೀವಕಳೆಯಿಂದ ಕಂಗೊಳಿಸುತ್ತದೆ. ಕಾಫಿ, ಚಹಾ ತೋಟಗಳು, ಪ್ರಸನ್ನಗೊಳಿಸುವ ಹಸಿರಿನಿಂದ ಕೂಡಿದ ಮೈದಾನಗಳು, ತುಂಬಿ ಹರಿಯುವ ಕೆರೆಗಳು, ನದಿಗಳು, ವೈಭವದ ಜಲಪಾತಗಳು ಪ್ರವಾಸಿಗರನ್ನು ಚುಂಬಕದಂತೆ ಆಕರ್ಷಿಸುತ್ತವೆ. ಬೆಂಗಳೂರಿನಿಂದ ಕೊಡಗಿಗೆ ಸಾಕಷ್ಟು ಬಸ್ಸುಗಳು ದೊರೆಯುತ್ತವೆ ಅಲ್ಲದೆ ಕೊಡಗಿನಲ್ಲಿ ತಂಗಲು ವೈವಿಧ್ಯಮಯ ರಿಸಾರ್ಟುಗಳು, ಕಾಟೇಜುಗಳು ಲಭ್ಯ. ಕೊಡಗಿನ ಕೈಪಿಡಿ

ಚಿತ್ರಕೃಪೆ: Kalidas Pavithran

ದ.ಭಾರತದ 25 ಅತುತ್ತಮ ಮಳೆಗಾಲ ಸ್ಥಳಗಳು

ದ.ಭಾರತದ 25 ಅತುತ್ತಮ ಮಳೆಗಾಲ ಸ್ಥಳಗಳು

ಚಿಕ್ಕಮಗಳೂರು : ಚಿಕ್ಕಮಗಳೂರು ಕರ್ನಾಟಕದಲ್ಲಿರುವ ಮತ್ತೊಂದು ಸುಂದರ ಗಿರಿಧಾಮ ಪ್ರದೇಶ. ಮಳೆಗಾಲದಲ್ಲಿ ಈ ಮಲೆನಾಡಿನ ಪರ್ವತಗಳು, ಕಾಡುಗಳು ಎಲ್ಲಿಲ್ಲದ ಅಂದಚೆಂದವನ್ನು ಹೊತ್ತು ಪ್ರವಾಸಿಗರನ್ನು ಕೈಬಿಸಿ ಕರೆಯುತ್ತವೆ. ಚಿಕ್ಕಮಗಳೂರಿನ ಸುಮಧುರ ಆಕರ್ಷಣೆಗಳು.

ಚಿತ್ರಕೃಪೆ: Harsha K R

ದ.ಭಾರತದ 25 ಅತುತ್ತಮ ಮಳೆಗಾಲ ಸ್ಥಳಗಳು

ದ.ಭಾರತದ 25 ಅತುತ್ತಮ ಮಳೆಗಾಲ ಸ್ಥಳಗಳು

ಆಗುಂಬೆ : ಮಳೆಗಾಡು ಎಂತಲೆ ಪ್ರಖ್ಯಾತವಾದ ಆಗುಂಬೆ ಕರ್ನಾಟಕದಲ್ಲೆ ಪ್ರಥಮ ಹಾಗೂ ಜಗತ್ತಿನಲ್ಲೆ ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳ ಪೈಕಿ ಒಂದಾಗಿದೆ. ಇಲ್ಲಿನ ನಿತ್ಯಹರಿದ್ವರ್ಣದ ಕಾಡು ವೈವಿಧ್ಯಮಯ ಜೀವರಾಶಿಗಳಿಂದ ಕೂಡಿದ್ದು ನಿಸರ್ಗ ಪ್ರವಾಸಿಗರಿಗೆ ಸ್ವರ್ಗವೆ ಧರೆಗಿಳಿದು ಬಂದಂತೆ ಕಂಡುಬರುತ್ತದೆ. ಮಳೆಗಾಲದಲ್ಲಿ ವಿಶೇಷವಾಗಿ ಆಗುಂಬೆಯ ಸುತ್ತಮುತ್ತ ಹಲವಾರು ಆಕರ್ಷಕ ಜಲಪಾತ ತಾಣಗಳನ್ನೂ ಸಹ ಕಾಣಬಹುದಾಗಿದೆ. ಆಗುಂಬೆ ಕೈಪಿಡಿ.

ಚಿತ್ರಕೃಪೆ: Harsha K R

ದ.ಭಾರತದ 25 ಅತುತ್ತಮ ಮಳೆಗಾಲ ಸ್ಥಳಗಳು

ದ.ಭಾರತದ 25 ಅತುತ್ತಮ ಮಳೆಗಾಲ ಸ್ಥಳಗಳು

ಜೋಗ ಜಲಪಾತ : ದೇಶದಲ್ಲೆ ಹೆಚ್ಚು ಪ್ರಸಿದ್ಧವಾಗಿರುವ ಶರಾವತಿ ನದಿಯಿಂದ ರೂಪಗೊಂಡಿರುವ ಈ ಅದ್ಭುತ ಹಾಗೂ ವಿಶಾಲಕಾಯದ ಜಲಪಾತ ಕರ್ನಾಟಕದ ಮಟ್ಟಿಗೆ ಮಳೆಗಾಲದಲ್ಲಿ ನಂಬರ್ ವನ್ ಸ್ಥಾನ ಪಡೆದಿರುವ ಪ್ರವಾಸಿ ಆಕರ್ಷಣೆ. ಬೆಳ್ಳನೆಯ ಹಾಲಿನಂತೆ ಶರಾವತಿಯು ತನ್ನ ಪೂರ್ಣ ವೈಭವದಿಂದ ಸಾವಿರ ಅಡಿಗಳಷ್ಟು ಎತ್ತರದಿಂದ ನಾಲ್ಕು ಭಾಗಗಳಲ್ಲಿ ಭೊರ್ಗೆರೆದು ಬೀಳುವುದನ್ನು ನೋಡಿದಾಗ ಮೈಯಲ್ಲೆಲ್ಲ ವಿದ್ಯುತ್ ಸಂಚಾರವಾದಂತೆ ಭಾಸವಾಗುತ್ತದೆ. ಜೋಗದ ಗುಂಡಿ

ಚಿತ್ರಕೃಪೆ: Shuba

ದ.ಭಾರತದ 25 ಅತುತ್ತಮ ಮಳೆಗಾಲ ಸ್ಥಳಗಳು

ದ.ಭಾರತದ 25 ಅತುತ್ತಮ ಮಳೆಗಾಲ ಸ್ಥಳಗಳು

ಕುಮಾರ ಪರ್ವತ : ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹರಡಿಕೊಂಡಿರುವ ಕುಮಾರ ಪರ್ವತ ಚಾರಣವು ಮಳೆಗಾಲದಲ್ಲಿ ವಿಶೇಷವಾಗಿರುತ್ತದೆ. ಸಾಕಷ್ಟು ಯುವ ಜನರು ರಾಜ್ಯದ ವಿವಿಧ ಭಾಗಗಳಿಂದ ಕುಮಾರ ಪರ್ವತದ ಚಾರಣಕ್ಕೆಂದು ಮಳೆಗಾಲದಲ್ಲಿ ವಿಶೇಷವಾಗಿ ಆಗಮಿಸುತ್ತಾರೆ. ಈ ಸಂದರ್ಭದಲ್ಲಿ ಕುಮಾರ ಪರ್ವತದ ಹಸಿರಿನಿಂದ, ಮಂಜಿನಿಂದ ಕೂಡಿದ ಪರಿಸರ ಅದ್ಭುತವಾಗಿರುತ್ತದೆ ಹಾಗೂ ಭೇಟಿ ನೀಡಿದವರ ಮನಸ್ಸಿಗೆ ಉತ್ಸಾಹ ನೀಡುತ್ತದೆ.

ಚಿತ್ರಕೃಪೆ: karthick siva

ದ.ಭಾರತದ 25 ಅತುತ್ತಮ ಮಳೆಗಾಲ ಸ್ಥಳಗಳು

ದ.ಭಾರತದ 25 ಅತುತ್ತಮ ಮಳೆಗಾಲ ಸ್ಥಳಗಳು

ಕಬಿನಿ : ಕಬಿನಿ ವನ್ಯಜೀವಿ ಧಾಮವು ಕರ್ನಾಟಕದ ಒಂದು ಅಪರೂಪದ ಅಭಯಾರಣ್ಯವಾಗಿದ್ದು ಪ್ರವಾಸಿಗರಿಗೆ ಒಂದು ಅನನ್ಯವಾದ ಅನುಭವ ಒದಗಿಸುತ್ತದೆ. ಸಾಮಾನ್ಯವಾದ ಜನಪ್ರಿಯ ಆಕರ್ಷಣೆಗಳನ್ನು ಸುತ್ತಾಡಿ ನಿಮಗೆ "ಬೋರ್" ಎಂತೆನಿಸಿದ್ದರೆ ಇಲ್ಲವೆ ಅಪರೂಪವಾದ ಯಾವುದಾದರೂ ಒಂದು ಸ್ಥಳಕ್ಕೆ ಭೇಟಿ ನೀಡಲು ಮನಸ್ಸು ಹಾತೊರೆಯುತ್ತಿದ್ದರೆ ನಿಮ್ಮ ಆಯ್ಕೆ ಕಬಿನಿಯಾಗಲಿ.

ಚಿತ್ರಕೃಪೆ: ☻☺

ದ.ಭಾರತದ 25 ಅತುತ್ತಮ ಮಳೆಗಾಲ ಸ್ಥಳಗಳು

ದ.ಭಾರತದ 25 ಅತುತ್ತಮ ಮಳೆಗಾಲ ಸ್ಥಳಗಳು

ಭೀಮೇಶ್ವರಿ : ಭೀಮೇಶ್ವರಿ ನಿಜವಾಗಿಯೂ ಆನಂದ ಕರುಣಿಸುವ ಒಂದು ಅದ್ಭುತ ಪ್ರದೇಶ. ಕಾವೇರಿ ನದಿಯು ಸುಶ್ರಾವ್ಯವಾಗಿ ಹಾಡುತ್ತ ಹರಿದಿರುವ, ಸುತ್ತ ಮುತ್ತಲಿನಲ್ಲಿ ದಟ್ಟವಾದ ಹಸಿರು ಹೊತ್ತ, ಬೆರುಗುಗೊಳಿಸುವ ಬೆಟ್ಟ ಗುಡ್ಡಗಳ ಮಧ್ಯೆ ನೆಲೆಸಿರುವ ಭೀಮೇಶ್ವರಿ ಅವಿಶ್ರಾಂತ ಬೆಂಗಳೂರಿನಿಂದ 100 ಕಿ.ಮೀ ದೂರದಲ್ಲಿರುವ ವಿಶ್ರಾಂತಮಯ ತಾಣವಾಗಿದೆ.

ಚಿತ್ರಕೃಪೆ: Ashwin Kumar

ದ.ಭಾರತದ 25 ಅತುತ್ತಮ ಮಳೆಗಾಲ ಸ್ಥಳಗಳು

ದ.ಭಾರತದ 25 ಅತುತ್ತಮ ಮಳೆಗಾಲ ಸ್ಥಳಗಳು

ಮುನ್ನಾರ್ : ಮುನ್ನಾರ್ ಮೂಲತಃ ಕೇರಳ ರಾಜ್ಯದ ಒಂದು ಪ್ರಖ್ಯಾತ ಗಿರಿಧಾಮ ಪ್ರದೇಶವಾಗಿದ್ದು ಇಡುಕ್ಕಿ ಜಿಲ್ಲೆಯ ದೇವಿಕುಲಂ ತಾಲೂಕಿನ ಕಣ್ಣನ್ ದೇವನ್ ಬೆಟ್ಟಗಳ ಹಳ್ಳಿಯಲ್ಲಿರುವ ಸ್ಥಳವಾಗಿದೆ. ಮಳೆಗಾಲವು ಇಲ್ಲಿ ವಿಶೇಷವಾಗಿದ್ದು ನವದಮ್ಪತಿಗಳ ಹನಿಮೂನ್ ಸ್ಥಳವಾಗಿಯೂ ಸಾಕಷ್ಟು ಪ್ರಸಿದ್ಧಿಗಳಿಸಿದೆ ಮುನ್ನಾರ್. ಮುನ್ನಾರ್ ಪದದ ಮೂಲ ಅರ್ಥ "ಮೂರು ನದಿಗಳು" ಎಂದಾಗುತ್ತದೆ. ಮುನ್ನಾರ್ ಕೈಪಿಡಿ.

ಚಿತ್ರಕೃಪೆ: Nishanth Jois

ದ.ಭಾರತದ 25 ಅತುತ್ತಮ ಮಳೆಗಾಲ ಸ್ಥಳಗಳು

ದ.ಭಾರತದ 25 ಅತುತ್ತಮ ಮಳೆಗಾಲ ಸ್ಥಳಗಳು

ವಯನಾಡ್ : ಪಶ್ಚಿಮ ಘಟ್ಟಗಳ ಸುಂದರ ಹಾಗೂ ಅಷ್ಟೆ ದಟ್ಟವಾದ ಹಚ್ಚ ಹಸಿರಿನ ಮರಗಳಿಂದ ಕೂಡಿರುವ ವಯನಾಡ್ ಹಾಗೂ ಸುತ್ತಲಿನ ಅಭಯಾರಣ್ಯವು ತನ್ನಲ್ಲಿರುವ ವೈವಿಧ್ಯಮಯ ಜೀವ ಜಂತುಗಳು ಹಾಗೂ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಈ ಗಿರಿಧಾಮ ಪ್ರದೇಶ ಸುಲ್ತಾನ್ ಬತೇರಿಯಿಂದ 16 ಕಿ.ಮೀ ಗಳಷ್ಟು ದೂರವಿದ್ದು ಕೇರಳದಲ್ಲಿ ಬರುತ್ತದೆ.

ಚಿತ್ರಕೃಪೆ: Sarath Kuchi

ದ.ಭಾರತದ 25 ಅತುತ್ತಮ ಮಳೆಗಾಲ ಸ್ಥಳಗಳು

ದ.ಭಾರತದ 25 ಅತುತ್ತಮ ಮಳೆಗಾಲ ಸ್ಥಳಗಳು

ಕುಮರಕಮ್ : ಮಳೆಗಾಲದಲ್ಲಿ ಮದುಮಗಳಂತೆ ಸಿಂಗರಿಸಿಕೊಳ್ಳುತ್ತದೆ ಕೇರಳ ರಾಜ್ಯ. ಮಳೆಗಾಲದ ಆನಂದ ಸವಿಯಲು ಸಾಕಷ್ಟು ಅದ್ಭುತವಾದ ಸ್ಥಳಗಳು ಈ ರಾಜ್ಯದಲ್ಲಿವೆ. ಅದರಲ್ಲೊಂದಾಗಿದೆ ಕುಮರಕಮ್. ಇಲ್ಲಿ ಎಲ್ಲಿ ನೋಡಿದರೂ ಬರೀ ನೀರೇ ನೀರು. ಸರ್ವಂ ಜಲಮಯಂ. ವಿಹಾರ ಮಾಡಲೂ ಸಹ ದೋಣಿಗಳಲ್ಲಿ ಸಾಗುವುದು ಒಂದು ರೀತಿಯ ರೋಮಾಂಚನ ಉಂಟಾಗುತ್ತದೆ. ಕೇರಳದ ಪ್ರಮುಖ ನಗರವಾದ ಕೊಟ್ಟಾಯಂ ನಿಂದ ಕೇವಲ 16 ಕಿ.ಮೀ ದೂರದಲ್ಲಿ ನೆಲೆಸಿದೆ.

ಚಿತ್ರಕೃಪೆ: Koen

ದ.ಭಾರತದ 25 ಅತುತ್ತಮ ಮಳೆಗಾಲ ಸ್ಥಳಗಳು

ದ.ಭಾರತದ 25 ಅತುತ್ತಮ ಮಳೆಗಾಲ ಸ್ಥಳಗಳು

ಅಲ್ಲೆಪ್ಪಿ : ಕೇರಳದ ಪ್ರವಾಸಿ ಆಕರ್ಷಣೆಯಾದ ಅಲೆಪ್ಪಿ ಅಥವಾ ಮಲಯಾಳಂನಲ್ಲಿ ಕರೆಯಲಾಗುವ ಅಲಪುಳಾ "ಪೂರ್ವದ ವೆನಿಸ್" ಎಂಬ ಅಭಿದಾನಕ್ಕೆ ಪಾತ್ರವಾಗಿದೆ. ನೀವೇನಾದರೂ ವೆನಿಸ್ ಪಟ್ಟಣಕ್ಕೆ ಭೇಟಿ ನೀಡಿದ್ದರೆ, ಈ ಪಟ್ಟಣಕ್ಕೆ ಸಂದ ಬಿರುದು ನಿಜಕ್ಕೂ ಅರ್ಥಪೂರ್ಣವಾದುದು ಎಂತಲೇ ಹೇಳುತ್ತೀರಿ. ಅಲ್ಲದೆ ಇಲ್ಲಿ ಮಳೆಗಾಲದಲ್ಲಿ ಸೃಷ್ಟಿ ಸೌಂದರ್ಯವೂ ಇಮ್ಮಡಿಗೊಂಡು ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: Sarath Kuchi

ದ.ಭಾರತದ 25 ಅತುತ್ತಮ ಮಳೆಗಾಲ ಸ್ಥಳಗಳು

ದ.ಭಾರತದ 25 ಅತುತ್ತಮ ಮಳೆಗಾಲ ಸ್ಥಳಗಳು

ಮರಾರಿಕುಲಂ : ಕೇರಳದ ಅಲ್ಲೆಪ್ಪಿ ಜಿಲ್ಲೆಯಲ್ಲೆ ಇರುವ ಮಾರಾಕುಲಂ ಒಂದು ಕರಾವಳಿ ಹಳ್ಳಿಯಾಗಿದ್ದು ಸುಂದರವಾದ ಕಡಲ ತೀರ ಹೊಂದಿದೆ. ಮಳೆಗಾಲದಲ್ಲಿ ಈ ಕಡಲ ಗ್ರಾಮವು ತನ್ನದೆ ಆದ ವಿಶಿಷ್ಟ ಸೌಂದರ್ಯದಿಂದ ಪ್ರವಾಸಿಗರ ಮನ ಕದಿಯುತ್ತದೆ.

ಚಿತ್ರಕೃಪೆ: Mahendra M

ದ.ಭಾರತದ 25 ಅತುತ್ತಮ ಮಳೆಗಾಲ ಸ್ಥಳಗಳು

ದ.ಭಾರತದ 25 ಅತುತ್ತಮ ಮಳೆಗಾಲ ಸ್ಥಳಗಳು

ಅತ್ತಿರಪಳ್ಳಿ : ತ್ರಿಶೂರ್‌ ಜಿಲ್ಲೆಯ ಮುಕುಂದಪುರಂ ತಾಲೂಕಿನಲ್ಲಿ ಅತ್ತಿರಪಲ್ಲಿ ಇದೆ. ಇದು ಮುಖ್ಯವಾಗಿ ತನ್ನಲ್ಲಿರುವ ಜಲಪಾತ ತಾಣದಿಂದಾಗಿ ಕ್ರಳದಲ್ಲೆ ಸಾಕಷ್ಟು ಹೆಸರುವಾಸಿಯಾಗಿದೆ. ಇಲ್ಲಿನ ಜಲಪಾತ ಹಾಗೂ ಸುತ್ತಮುತ್ತಲಿನ ಸೌಂದರ್ಯ ಹೇಗಿದೆ ಎಂದರೆ ಇಲ್ಲಿ ಆಗಾಗ ಚಿತ್ರೀಕರಣಗಳು ನಡೆಯುತ್ತಿರುತ್ತವೆ. ಮಳೆಗಾಲದಲ್ಲಿ ಈ ಜಲಪಾತದ ಸೌಂದರ್ಯ ದುಪ್ಪಟ್ಟುಗೊಳ್ಳುತ್ತದೆ.

ಚಿತ್ರಕೃಪೆ: Harshitha Kay

ದ.ಭಾರತದ 25 ಅತುತ್ತಮ ಮಳೆಗಾಲ ಸ್ಥಳಗಳು

ದ.ಭಾರತದ 25 ಅತುತ್ತಮ ಮಳೆಗಾಲ ಸ್ಥಳಗಳು

ಕೊಡೈಕೆನಲ್ : ತಮಿಳುನಾಡಿನ ಕೊಡೈಕೆನಾಲ್ ಕೂಡ ಒಂದು ವಿಶಿಷ್ಟವಾದ ಗಿರಿಧಾಮವಾಗಿದೆ. ಬೇಸಿಗೆ ಹಾಗೂ ಚಳಿಗಾಲ ಇಲ್ಲಿಗೆ ಭೇಟಿ ನೀಡಲು ಆದರ್ಶ ಸಮಯ ಎಂದಿದ್ದರೂ ಮಳೆಗಾಲದ ಆಕರ್ಷಣೆಯೂ ಕೂಡ ಏನೂ ಕಮ್ಮಿ ಇಲ್ಲ. ಇನ್ನೇನೂ ಟ್ರೆಕ್ ನಂತಹ ಚಟುವಟಿಕೆ ಮಳೆಗಾಲದ ಸಂದರ್ಭದಲ್ಲಿ ತುಸು ಕಷ್ಟವಾದರೂ ಚಿಮು ಚಿಮು ಮಳೆಯ ನಡುವೆ, ಮನಸ್ಸಿಗೆ ಮುದ ನೀಡುವ ಆಹ್ಲಾದಕರ ವಾತಾವರಣ ಸದಾ ನಿಮ್ಮನ್ನು ಸ್ವಾಗತಿಸುತ್ತದೆ. ಕೊಡೈಕೆನಲ್ ವಿಶೇಷ.

ಚಿತ್ರಕೃಪೆ: V.v

ದ.ಭಾರತದ 25 ಅತುತ್ತಮ ಮಳೆಗಾಲ ಸ್ಥಳಗಳು

ದ.ಭಾರತದ 25 ಅತುತ್ತಮ ಮಳೆಗಾಲ ಸ್ಥಳಗಳು

ಊಟಿ : ಊಟಿ ಗಿರಿಧಾಮದ ಹೆಸರನ್ನು ಕೇಳದವರು ಪ್ರಾಯಶಃ ಯಾರು ಇರಲಿಕ್ಕಿಲ್ಲ. ದಕ್ಷಿಣ ಭಾರತದ ಅಷ್ಟೊಂದು ಸುಪ್ರಸಿದ್ಧವಾದ ಗಿರಿಧಾಮ ಪ್ರದೇಶವಾಗಿದೆ ಊಟಿ. ಅಧಿಕೃತವಾಗಿ ಉದಕಮಂಡಲಂ ಎಂದು ಕರೆಯಲ್ಪಡುವ ಗಿರಿಧಾಮಗಳ ರಾಣಿ ಎಂದೇ ಖ್ಯಾತಿ ಪಡೆದ ಈ ಸುಂದರ ಗಿರಿಧಾಮವಿರುವುದು ತಮಿಳುನಾಡು ರಾಜ್ಯದಲ್ಲಿ. ಮಳೆಗಾಲವು ಇಲ್ಲಿ ತನ್ನದೆ ಛಾಪು ಮೂಡಿಸುತ್ತದೆ. ಮಂಜು ಕವಿದ ವಾತಾವರಣ, ತಂಪಾದ ಪರಿಸರ, ಎತ್ತರದ ಬೆಟ್ಟ ಗುಡ್ಡಗಳು ಹಾಗೂ ಗಿಡ ಮರಗಳು ಮನಸ್ಸಿಗೆ ಮುದ ನೀಡುತ್ತವೆ. ಊಟಿ ಕೈಪಿಡಿ.

ಚಿತ್ರಕೃಪೆ: Ghost Particle

ದ.ಭಾರತದ 25 ಅತುತ್ತಮ ಮಳೆಗಾಲ ಸ್ಥಳಗಳು

ದ.ಭಾರತದ 25 ಅತುತ್ತಮ ಮಳೆಗಾಲ ಸ್ಥಳಗಳು

ಕೊಟ್ರಾಲಂ : ಇದನ್ನು ದಕ್ಷಿಣ ಭಾರತದ ಸ್ಪಾ ಎಂದೆ ಕರೆಯುತ್ತಾರೆ. ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಪಶ್ಚಿಮ ಘಟ್ಟಗಳಲ್ಲಿ ನೆಲೆಸಿರುವ ಈ ಸುಂದರ ತಾಣವು ಸುಂದರವಾದ ಜಲಪಾತಕ್ಕೆ ಹೆಸರುವಾಸಿಯಾಗಿದ್ದು ಮಳೆಗಾಲದಲ್ಲಿ ಇದರ ಥಳುಕು ಬಳುಕು ಇನ್ನಷ್ಟು ಹೆಚ್ಚಾಗಿರುವುದನ್ನು ಕಾಣಬಹುದು.

ಚಿತ್ರಕೃಪೆ: Mdsuhail

ದ.ಭಾರತದ 25 ಅತುತ್ತಮ ಮಳೆಗಾಲ ಸ್ಥಳಗಳು

ದ.ಭಾರತದ 25 ಅತುತ್ತಮ ಮಳೆಗಾಲ ಸ್ಥಳಗಳು

ಕುಣ್ಣೂರು : ಈ ಸುಂದರ ಗಿರಿಧಾಮವು ಸದಾ ಪ್ರವಾಸಿಗರ ಸ್ವಾಗತಕ್ಕೆ ಸಜ್ಜಾಗಿ ನಿಂತಿರುವಂತೆ ಆಕರ್ಷಿಸುತ್ತದೆ. ತಮಿಳುನಾಡು ರಾಜ್ಯದ ನೀಲ್ಗಿರಿ ಜಿಲ್ಲೆಯ ಊಟಿಯ ಬಳಿ ಸ್ಥಿತವಿರುವ ಕುಣ್ಣೂರು ಎಂಬ ನೀಲ್ಗಿರಿ ಜಿಲ್ಲೆಯ ಎರಡನೆಯ ದೊಡ್ಡ ಗಿರಿಧಾಮ ಇದಾಗಿದೆ. ಮಳೆಗಾಲವನ್ನೂ ಸಹ ಅತಿ ಸುಂದರವಾಗಿ ಆಸ್ವಾದಿಸಬಹುದಾಗಿದೆ ಈ ಗಿರಿಧಾಮದಲ್ಲಿ.

ಚಿತ್ರಕೃಪೆ: Thangaraj Kumaravel

ದ.ಭಾರತದ 25 ಅತುತ್ತಮ ಮಳೆಗಾಲ ಸ್ಥಳಗಳು

ದ.ಭಾರತದ 25 ಅತುತ್ತಮ ಮಳೆಗಾಲ ಸ್ಥಳಗಳು

ಕನ್ಯಾಕುಮಾರಿ : ತಮಿಳುನಾಡಿನ ಕನ್ಯಾಕುಮಾರಿ ಒಂದು ಧಾರ್ಮಿಕ ಪ್ರವಾಸಿ ಕೇಂದ್ರವೂ ಸಹ ಆಗಿದೆ. ಮಳೆಗಾಲವು ತನ್ನದೆ ಆದ ವಿಶೇಷತೆಯನ್ನು ಇಲ್ಲಿ ಹೊಂದಿದೆ ಅಲ್ಲದೆ ಇತರೆ ಸಾಕಷ್ಟು ನೈಸರ್ಗಿಕ ಸ್ಥಳಗಳು ಹಾಗೂ ಜಲಪಾತವನ್ನು ಕನ್ಯಾಕುಮಾರಿಯ ಬಳಿ ಕಾಣಬಹುದು. ಕನ್ಯಾಕುಮಾರಿ ಕೈಪಿಡಿ.

ಚಿತ್ರಕೃಪೆ: Ravivg5

ದ.ಭಾರತದ 25 ಅತುತ್ತಮ ಮಳೆಗಾಲ ಸ್ಥಳಗಳು

ದ.ಭಾರತದ 25 ಅತುತ್ತಮ ಮಳೆಗಾಲ ಸ್ಥಳಗಳು

ಅರಕು ಕಣಿವೆ : ಅರಕು ಕಣಿವೆ, ಆಂಧ್ರಪ್ರದೇಶದ ವೈಜಾಗ್(ವಿಶಾಖಪಟ್ಟಣ) ಜಿಲ್ಲೆಯಲ್ಲಿರುವ ಒಂದು ಸುಂದರ ಹಾಗೂ ಮನಮೋಹಕ ಗಿರಿಧಾಮವಾಗಿದೆ. ಮಳೆಗಾಲದಲ್ಲಿ ಗಿರಿಧಾಮವು ಅತ್ಯಂತ ಸುಂದರವಾಗಿ ಕಂಡುಬರುತ್ತದೆ. ನಮ್ಮಲ್ಲಿ ಪಶ್ಚಿಮ ಘಟ್ಟ ಹೇಗೊ ಅದೆ ರೀತಿಯಲ್ಲಿ ಆಂಧ್ರದ ಪೂರ್ವ ಘಟ್ಟಗಳ ಆಕರ್ಷಕ ಪರ್ವತ ಶ್ರೇಣಿಗಳಲ್ಲಿ ನೆಲೆಸಿರುವ ಅರಕು ಕಣಿವೆ ವಿವಿಧ ಬುಡಕಟ್ಟು ಜನಾಂಗಗಳ ಆಶ್ರಯ ತಾಣವಾಗಿದೆ.

ಚಿತ್ರಕೃಪೆ: Amartyabag

ದ.ಭಾರತದ 25 ಅತುತ್ತಮ ಮಳೆಗಾಲ ಸ್ಥಳಗಳು

ದ.ಭಾರತದ 25 ಅತುತ್ತಮ ಮಳೆಗಾಲ ಸ್ಥಳಗಳು

ಹಾರ್ಸ್ಲೀ ಬೆಟ್ಟಗಳು : ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿ ತಾಲೂಕಿನಲ್ಲಿ ಈ ಸುಂದರವಾದ ಬೆಟ್ಟಗಳ ಶ್ರೇಣಿಯನ್ನು ಕಾಣಬಹುದು. ಯೆನುಗು ಮಲ್ಲಮ್ಮ ಕೊಂಡ ಎಂದು ಸ್ಥಳೀಯವಾಗಿ ತೆಲುಗು ಭಾಷೆಯಲ್ಲಿ ಕರೆಯಲ್ಪಡುವ ಈ ತಾಣವು ಮಳೆಗಾಲದಲ್ಲಿ ಮದುವಣಗಿತ್ತಿಯಂತೆ ಸಿಂಗರಿಸಿಕೊಳ್ಳುತ್ತದೆ.

ಚಿತ್ರಕೃಪೆ: Shyamal

ದ.ಭಾರತದ 25 ಅತುತ್ತಮ ಮಳೆಗಾಲ ಸ್ಥಳಗಳು

ದ.ಭಾರತದ 25 ಅತುತ್ತಮ ಮಳೆಗಾಲ ಸ್ಥಳಗಳು

ಎತಿಪೋತಲ ಜಲಪಾತ : ಇದು ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಗಡಿಯಲ್ಲಿ ಸ್ಥಿತವಿರುವ ಈ ಸುಂದರ ಜಲಪಾತ ಗುಂಟೂರು ಜಿಲ್ಲೆಯ ಮಾರ್ಚೇಲ ಪಟ್ಟಣದಲ್ಲಿದೆ. ಈ ಜಲಪಾತಕ್ಕೆ ಹೆಸರು ಎತ್ತಿ ಹಾಗೂ ಪೋತ ಎಂಬ ಎರಡು ತೆಲುಗು ಶಬ್ದಗಳಿಂದ ಬಂದಿದುದಾಗಿದೆ ಎಂದು ಹೇಳಲಾಗುತ್ತದೆ. ಇದರ ಅರ್ಥ ಎತ್ತಿ ಹಾಗೂ ಸುರಿ ಎಂದರ್ಥೈಸಬಹುದು. ಈ ಜಲಪಾತವು 70 ಅಡಿಗಳಷ್ಟು ಎತ್ತರದಿಂದ ಧುಮುಕುತ್ತದೆ ಹಾಗೂ ನೋಡಲು ನಯನ ಮನೋಹರವಾಗಿ ಕಂಡುಬರುತ್ತದೆ. ಮಳೆಗಾಲದಲ್ಲಿ ಈ ಜಲಪಾತ ನೋಡಲು ಸಾಕಷ್ಟು ಪ್ರವಾಸಿಗರು ಬರುತ್ತಾರೆ.

ಚಿತ್ರಕೃಪೆ: Sarvagyana guru

ದ.ಭಾರತದ 25 ಅತುತ್ತಮ ಮಳೆಗಾಲ ಸ್ಥಳಗಳು

ದ.ಭಾರತದ 25 ಅತುತ್ತಮ ಮಳೆಗಾಲ ಸ್ಥಳಗಳು

ತಲಕೋನ ಜಲಪಾತ : ಇದು ಆಂಧ್ರಪ್ರದೇಶದಲ್ಲಿ ಅತಿ ಹೆಚ್ಚು ಜನರಿಂದ ಭೇಟಿ ನೀಡಲ್ಪಡುವ ಸುಂದರ ಜಲಪಾತ ತಾಣವಾಗಿದೆ. ಅಲ್ಲದೆ ಆಂಧ್ರದ ಅತಿ ಎತ್ತರದ ಜಲಪಾತ ಎಂಬ ಖ್ಯಾತಿಗೂ ಇದು ಪಾತ್ರವಾಗಿದೆ. 270 ಅಡಿಗಳಷ್ಟು ಒಟ್ಟಾರೆ ಎತ್ತರ ಹೊಂದಿರುವ ಈ ಜಲಪಾತವು ಆಂಧ್ರದ ಚಿತ್ತೂರು ಜಿಲ್ಲೆಯ ಶ್ರೀ ವೆಂಕಟೇಶ್ವರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ಬರುತ್ತದೆ ಹಾಗೂ ಬಳಿಯಿರುವ ಸಿದ್ಧೇಶ್ವರ ದೇವಾಲಯದಿಂದಾಗಿಯೂ ಪ್ರಸಿದ್ಧಿ ಪಡೆದಿದೆ.

ಚಿತ್ರಕೃಪೆ: VinothChandar

ದ.ಭಾರತದ 25 ಅತುತ್ತಮ ಮಳೆಗಾಲ ಸ್ಥಳಗಳು

ದ.ಭಾರತದ 25 ಅತುತ್ತಮ ಮಳೆಗಾಲ ಸ್ಥಳಗಳು

ಕುಂಟಾಲ/ಕುಂತಲ ಜಲಪಾತ : ತೆಲಂಗಾಣ ರಾಜ್ಯದ ಅದಿಲಾಬಾದ್ ಜಿಲ್ಲೆಯ ಕುಂಟಾಲ್ ಎಂಬಲ್ಲಿದೆ ಈ ಸುಂದರ ಹಾಗೂ ಅಮೋಘ ಜಲಪಾತ. ದುಶ್ಯಂತನ ಪತ್ನಿ ಶಕುಂತಲೆಯಿಂದ ಈ ಜಲಪಾತಕ್ಕೆ ಈ ಹೆಸರು ಬಂದಿದೆ ಎನ್ನಲಾಗುತ್ತದೆ. ಮಳೆಗಾಲದಲ್ಲಿ ಇದು ನೋಡಲು ನಯನ ಮನೋಹರವಾಗಿರುತ್ತದೆ.

ಚಿತ್ರಕೃಪೆ: Ppavan1

ದ.ಭಾರತದ 25 ಅತುತ್ತಮ ಮಳೆಗಾಲ ಸ್ಥಳಗಳು

ದ.ಭಾರತದ 25 ಅತುತ್ತಮ ಮಳೆಗಾಲ ಸ್ಥಳಗಳು

ಬೋಗತಾ ಜಲಪಾತ : ತೆಲಂಗಾಣದ ಖಮ್ಮಂ ಜಿಲ್ಲೆಯ ಜಿ.ಕೋಯವೀರಪುರಂ ಗ್ರಾಮದಲ್ಲಿ ಈ ಅದ್ಭುತ ಜಲಪಾತ ಕೇಂದ್ರವಿದೆ. ಇದು ತೆಲಂಗಾಣದಲ್ಲೆ ಎರಡನೇಯ ದೊಡ್ಡ ಜಲಪಾತವಾಗಿದೆ.

ಚಿತ್ರಕೃಪೆ: Telangana forest Department

ದ.ಭಾರತದ 25 ಅತುತ್ತಮ ಮಳೆಗಾಲ ಸ್ಥಳಗಳು

ದ.ಭಾರತದ 25 ಅತುತ್ತಮ ಮಳೆಗಾಲ ಸ್ಥಳಗಳು

ನಾಗಾರ್ಜುನ ಸಾಗರ : ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಲಾದ ನಾಗಾರ್ಜುನ ಸಾಗರ ಜಲಾಶಯವು ತೆಲಂಗಾಣದ ನಲಗೊಂಡ ಜಿಲ್ಲೆಯಲ್ಲಿರುವ ಪ್ರಸಿದ್ಧ ತಾಣವಾಗಿದೆ. ಮಳೆಗಾಲದ ಸಮಯದಲ್ಲಿ ಜಲಾಶಯದಲ್ಲಿ ನೀರು ಭರ್ತಿಯಾಗಿರುವುದನ್ನು ನೋಡುವುದೆ ಒಂದು ಚೆಂದದ ಅನುಭವವಾಗಿದೆ. ಅಲ್ಲದೆ ಕ್ರೆಸ್ಟು ಗೇಟುಗಳ ಮೂಲಕ ನೀರನ್ನು ಹೊರ ಬಿಡುವುದನ್ನು ನೋಡಿದಾಗ ಮೈಯೆಲ್ಲ ಜುಮ್ಮೆನಿಸುತ್ತದೆ.

ಚಿತ್ರಕೃಪೆ: Chintohere

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X