Search
  • Follow NativePlanet
Share
» »ಪ್ರವಾಸಿಗರೇ ಎಚ್ಚರ… ಮಳೆಗಾಲದಲ್ಲಿ ಈ 5 ಸ್ಥಳಗಳಿಗೆ ತೆರಳುವುದು ಸೂಕ್ತವಲ್ಲ!

ಪ್ರವಾಸಿಗರೇ ಎಚ್ಚರ… ಮಳೆಗಾಲದಲ್ಲಿ ಈ 5 ಸ್ಥಳಗಳಿಗೆ ತೆರಳುವುದು ಸೂಕ್ತವಲ್ಲ!

ಈ ವರ್ಷ ದೇಶದೆಲ್ಲೆಡೆ ಮಳೆಯ ಅಬ್ಬರ ಹೆಚ್ಚಾಗಿದೆ. ಕೆಲವೆಡೆ ಶಾಲಾ ಕಾಲೇಜಿಗೆ ರಜೆ ಘೋಷಿಸಿದರೆ, ಮತ್ತೆ ಕೆಲವೆಡೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಹಾಗಾಗಿ ಈ ಸಮಯದಲ್ಲಿ ಪ್ರವಾಸಕ್ಕೆ ತೆರಳಲು ಸಜ್ಜಾಗುತ್ತಿರುವವರು ಬಹಳ ಎಚ್ಚರದಿಂದರಬೇಕಾಗುತ್ತದೆ. ಮಳೆಗಾಲದ ಸಮಯದಲ್ಲಿ ಹಚ್ಚಹಸಿರಿನಿಂದ ನಳನಳಿಸುವ ಬೆಟ್ಟಗುಡ್ಡಗಳು, ಭೊರ್ಗರೆವ ಜಲಪಾತಗಳು, ಉಕ್ಕಿ ಹರಿಯುವ ನದಿಗಳನ್ನು

ಕಣ್ತುಂಬಿಕೊಳ್ಳಬೇಕೆನಿದರೂ, ಹಬ್ಬಗಳ ಆಚರಣೆಗೆ, ರಮಣೀಯ ದೃಶ್ಯಗಳನ್ನು ನೋಡಲು ಮತ್ತು ಕೆಲವು ಚಿಕಿತ್ಸೆಗೆ ಈ ಸಮಯವೇ ಸೂಕ್ತವಾದರೂ ಸಹ ಕೆಲವು ಸ್ಥಳಗಳಲ್ಲಿ ಭಾರೀ ಮಳೆ, ಭೂಕುಸಿತ, ಜಲಾವೃತ ಮತ್ತು ವಿಪರೀತ ಪ್ರವಾಹ ಉಂಟಾಗುವುದರಿಂದ ನೀವು ಮಳೆಗಾಲದಲ್ಲಿ ಆ ಸ್ಥಳಗಳಿಗೆ ಪ್ರಯಾಣಿಸುವುದನ್ನು ತಪ್ಪಿಸುವುದು ಒಳ್ಳೆಯದು. ಆದ್ದರಿಂದ ಇಲ್ಲಿ ಮಾನ್ಸೂನ್ ಅಥವಾ ಮಳೆಗಾಲದ ಸಮಯದಲ್ಲಿ ಯಾವ ಸ್ಥಳಗಳು ಅಸುರಕ್ಷಿತ ಎಂಬ ಪಟ್ಟಿ ಕೊಡಲಾಗಿದೆ ನೋಡಿ...

ಉತ್ತರಾಖಂಡ

ಉತ್ತರಾಖಂಡ

ವಿಹಾರದ ವಿಷಯ ಬಂದಾಗ ಪ್ರತಿಯೊಬ್ಬರು ಉತ್ತರಾಖಂಡಕ್ಕೆ ಭೇಟಿ ನೀಡಲು ಬಯಸುತ್ತಾರೆ. ಭಾರತದಲ್ಲಿ ಅತ್ಯಂತ ಸುಂದರ ಸ್ಥಳಗಳನ್ನು ಹೊಂದಿರುವ ರಾಜ್ಯಗಳ ಪೈಕಿ ಉತ್ತರಾಖಂಡವು ಒಂದೂ. ಉತ್ತರಾಖಂಡದ ಪ್ರವಾಸಿ ಸ್ಥಳಗಳು ಎಷ್ಟೇ ಆಪ್ಯಾಯಮಾನವಾಗಿದ್ದರೂ, ಅದೆಷ್ಟೇ ಆಕರ್ಷಕವಾಗಿದ್ದರೂ ಕೆಲವು ಪ್ರದೇಶಗಳಲ್ಲಿ ಮಳೆಯ ಸಮಯದಲ್ಲಿ ಯಾವಾಗಲೂ ರೆಡ್ ಅಲರ್ಟ್ ಘೋಷಣೆ ಮಾಡಲಾಗುತ್ತದೆ. ಹೌದು, ಉತ್ತರಾಖಂಡ ರಾಜ್ಯವು ದೇಶದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಒಂದಾಗಿದ್ದು, ಇಲ್ಲಿನ ಕೆಲವು ಸ್ಥಳಗಳಲ್ಲಿ ಭೂಕುಸಿತ, ಪ್ರವಾಹ ಮತ್ತು ಮೇಘಸ್ಫೋಟ ಸಾಮಾನ್ಯವಾಗಿದೆ. ಆದ್ದರಿಂದ ಮಾರ್ಚ್ ನಿಂದ ಏಪ್ರಿಲ್ ಮತ್ತು ಸೆಪ್ಟೆಂಬರ್ ಮಧ್ಯದಿಂದ ಅಕ್ಟೋಬರ್ ಮಧ್ಯದವರೆಗೆ ಉತ್ತರಾಖಂಡಕ್ಕೆ ಭೇಟಿ ನೀಡಲು ಉತ್ತಮ ಸಮಯವೆಂದು ಪರಿಗಣಿಸಲಾಗಿದೆ. ಟ್ರೆಕ್ಕಿಂಗ್, ಪ್ಯಾರಾಗ್ಲೈಡಿಂಗ್ ಮತ್ತು ಚಾರ್ ಧಾಮ್ ಯಾತ್ರೆಗಳು ಬೇಸಿಗೆಯಲ್ಲಿ ಅತ್ಯಂತ ಜನಪ್ರಿಯ ಪ್ರವಾಸಿ ಚಟುವಟಿಕೆಗಳಾಗಿವೆ. ಇದು ಉತ್ತರಾಖಂಡದಲ್ಲಿ ಪೀಕ್ ಸೀಸನ್ ಕೂಡ ಆಗಿದೆ.

ಚಿರಾಪುಂಜಿ

ಚಿರಾಪುಂಜಿ

ಮೇಘಾಲಯ ರಾಜ್ಯದ ಸುಂದರವಾದ ಸ್ಥಳವಾದ ‘ಚಿರಾಪುಂಜಿ'. ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದೆ. ಚಿರಾಪುಂಜಿಯಲ್ಲಿ ದಟ್ಟವಾದ ಕಾಡುಗಳು, ನೈಸರ್ಗಿಕ ಗುಹೆಗಳು, ಸಸ್ಯ ಮತ್ತು ಪ್ರಾಣಿಗಳ ಸಂಕುಲ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಆದರೆ ಮಾನ್ಸೂನ್ ಸಮಯದಲ್ಲಿ ಈ ಸ್ಥಳಕ್ಕೆ ನೀವು ‘ನೋ' ಹೇಳಿದರೆ ಬಹಳ ಒಳ್ಳೆಯದು. ಏಕೆಂದರೆ ಮಾನ್ಸೂನ್ ಸಮಯದಲ್ಲಿ ಮಳೆಯ ತೀವ್ರತೆ ಮತ್ತು ಆವರ್ತನವು ಹೆಚ್ಚಾಗುತ್ತದೆ. ಇದರಿಂದ ರಸ್ತೆಗಳು ಮತ್ತು ನಿಮ್ಮ ನೆಚ್ಚಿನ ಸ್ಥಳಗಳು ಅಸ್ತವ್ಯಸ್ತಗೊಂಡಿರುತ್ತವೆ. ಚಿರಾಪುಂಜಿಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಅಕ್ಟೋಬರ್'ನಿಂದ ಫೆಬ್ರವರಿ. ನೀವು ಗುಹೆಗಳು ಮತ್ತು ಡಬಲ್ ಡೆಕ್ಕರ್ ರೂಟ್ ಬ್ರಿಡ್ಜ್'ಗೆ ಭೇಟಿ ಕೊಡಲು ಇದು ಸೂಕ್ತ ಸಮಯವಾಗಿದೆ.

ಕೇರಳ

ಕೇರಳ

ಬಹುಶಃ ಪಕ್ಕದ ರಾಜ್ಯ ಕೇರಳವನ್ನು ಇಷ್ಟಪಡದ ಮಂದಿಯೇ ಇಲ್ಲವೇನೋ. ಸುಂದರವಾದ ಹಿನ್ನೀರು, ಸಾಟಿಯಿಲ್ಲದ ಸೌಂದರ್ಯ ಮತ್ತು ವೈವಿಧ್ಯಮಯವಾದ ಪವಿತ್ರ ದೇವಾಲಯಗಳನ್ನು ಹೊಂದಿರುವ ಕೇರಳವು ಪ್ರವಾಸಕ್ಕೆ ಹೆಚ್ಚು ಸೂಕ್ತವಾದ ಭಾರತೀಯ ಸ್ಥಳವಾಗಿದೆ. ಆದರೆ ಮಳೆಗಾಲದ ಸಮಯದಲ್ಲಿ ಕೇರಳಕ್ಕೆ ಭೇಟಿ ನೀಡದಿದ್ದರೆ ಒಳ್ಳೆಯದು. ಏಕೆಂದರೆ ಕೇರಳದ ಬಹುತೇಕ ಕಡೆ ಭಾರೀ ಮಳೆಯಿಂದ ಆಗಾಗ್ಗೆ ಅನಾಹುತಗಳು ಸಂಭವಿಸುತ್ತಿರುತ್ತದೆ. ಪ್ರತಿ ಮಳೆಗಾಲದಲ್ಲಿಯೂ ಇಲ್ಲಿ ಪ್ರವಾಹ ಉಂಟಾಗುವುದು ಸಾಮಾನ್ಯ. ಇದಲ್ಲದೆ, ಕೆಲವೊಮ್ಮೆ ಪರಿಸ್ಥಿತಿಯು ತೀರಾ ಹದಗೆಡುತ್ತದೆ. ರಸ್ತೆಗಳು ಬಿರುಕು ಬಿಟ್ಟು, ನಡೆಯಲು ಸಹ ಕಷ್ಟಕರವಾಗುತ್ತದೆ. ಸೆಪ್ಟೆಂಬರ್ ನಿಂದ ಫೆಬ್ರವರಿ ಕೇರಳಕ್ಕೆ ಭೇಟಿ ನೀಡಲು ಉತ್ತಮ ಸಮಯ.

ಸಿಕ್ಕಿಂ

ಸಿಕ್ಕಿಂ

ಪ್ರವಾಸ ಹೊರಡುವಾಗ ಸಾಮಾನ್ಯವಾಗಿ ಸಿಕ್ಕಿಂ ಎಲ್ಲರ ಆಯ್ಕೆಯಾಗಿರುತ್ತದೆ. ಸಿಕ್ಕಿಂ ಕೂಡ ಸೌಂದರ್ಯದಲ್ಲಿ ಹಿಂದುಳಿದಿಲ್ಲ. ಇಲ್ಲಿನ ಕೆಲವು ಸ್ಥಳಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತವೆ. ಆದರೆ ಮಳೆಗಾಲದಲ್ಲಿ ಮಾತ್ರ ಈ ಸ್ಥಳಕ್ಕೆ ಭೇಟಿ ನೀಡುವುದು ಸೂಕ್ತವಲ್ಲ. ನಿಮಗೂ ಗೊತ್ತಿರುವಂತೆ ಸಿಕ್ಕಿಂ ಹಿಮದಿಂದ ಕೂಡಿರುವ ಪರ್ವತ ಶ್ರೇಣಿಗಳನ್ನು ಹೊಂದಿದೆ. ವಿಶೇಷವಾಗಿ ಮಳೆಗಾಲದಲ್ಲಿ ಪವರ್ತಕ್ಕೆ ಸಮೀಪವಿರುವ ಸ್ಥಳಗಳು ಪ್ರವಾಹ ಮತ್ತು ಭೂಕುಸಿತದಿಂದ ಕೊಚ್ಚಿ ಹೋಗುತ್ತವೆ. ಆದ್ದರಿಂದ ಮಳೆಗಾಲದಲ್ಲಿ ನಿಮ್ಮ ಪ್ರವಾಸ ಪಟ್ಟಿಯಿಂದ ಈ ಸ್ಥಳವನ್ನು ತೆಗೆದುಹಾಕುವುದು ಉತ್ತಮ. ಸಿಕ್ಕಿಂಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಮಾರ್ಚ್ ನಿಂದ ಜೂನ್. ಸೆಪ್ಟೆಂಬರ್ ನಿಂದ ಡಿಸೆಂಬರ್ ವರೆಗೆ ಹವಾಮಾನವು ಅನುಕೂಲಕರವಾಗಿರುತ್ತದೆ.

ಡಾರ್ಜಿಲಿಂಗ್

ಡಾರ್ಜಿಲಿಂಗ್

ಡಾರ್ಜಿಲಿಂಗ್ ಸೌಂದರ್ಯವನ್ನು ಬಣ್ಣಿಸಲು ಅಸಾಧ್ಯ. ಬಹುತೇಕ ಪ್ರವಾಸಿ ಪ್ರಿಯರ ನೆಚ್ಚಿನ ಸ್ಥಳಗಳಲ್ಲಿ ಒಂದಾಗಿದೆ ಡಾರ್ಜಿಲಿಂಗ್. ಆದರೆ ಮಳೆಗಾಲದಲ್ಲಿ, ಈ ಸ್ಥಳದಲ್ಲಿ ಭೇಟಿ ಕೊಡುವುದು ಸೂಕ್ತವಲ್ಲ. ಮಳೆಗಾಲದಲ್ಲಿ ಡಾರ್ಜಿಲಿಂಗ್'ಗೆ ಭೇಟಿ ಕೊಡುವುದರಿಂದ ಖಂಡಿತವಾಗಿಯೂ ನಿಮ್ಮ ಮೋಜಿಗೆ ಅಡ್ಡಿಯಾಗುತ್ತದೆ. ಹೆಚ್ಚಿನ ಟ್ರಾಫಿಕ್, ಭೂಕುಸಿತ, ಸಂಚಾರ ನಿರ್ಬಂಧ ಮತ್ತು ಮಂಜಿನ ವಾತಾವರಣವು ನಿಮ್ಮ ಪ್ರವಾಸವನ್ನು ಹಾಳು ಮಾಡುತ್ತದೆ. ಆದ್ದರಿಂದ ಮಳೆಗಾಲದ ಪ್ರವಾಸ ಪಟ್ಟಿಯಿಂದ ಈ ಸ್ಥಳವನ್ನು ತೆಗೆದುಹಾಕುವುದು ಒಳ್ಳೆಯದು. ಡಾರ್ಜಿಲಿಂಗ್'ಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಏಪ್ರಿಲ್'ನಿಂದ ಜೂನ್. ಈ ಸಮಯದಲ್ಲಿ ಹವಾಮಾನವು ಆಹ್ಲಾದಕರವಾಗಿರುತ್ತದೆ. ಆದರೆ ಬಹಳಷ್ಟು ಜನರು ಅಕ್ಟೋಬರ್'ನಿಂದ ಡಿಸೆಂಬರ್'ವರೆಗಿನ ಚಳಿಗಾಲದ ತಿಂಗಳುಗಳಲ್ಲಿ ಈ ಸ್ಥಳಕ್ಕೆ ಭೇಟಿ ನೀಡಲು ಬಯಸುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X