Search
  • Follow NativePlanet
Share
» »ಗುಜರಾತ್ ನಲ್ಲಿರುವ ಈ ಏಳು ಸ್ಥಳಗಳು - ಪ್ರತಿ ಛಾಯಾಗ್ರಾಹಕನ ಕನಸಿಗ ತಾಣಗಳು

ಗುಜರಾತ್ ನಲ್ಲಿರುವ ಈ ಏಳು ಸ್ಥಳಗಳು - ಪ್ರತಿ ಛಾಯಾಗ್ರಾಹಕನ ಕನಸಿಗ ತಾಣಗಳು

By Arshad Hussain

ಗುಜರಾತ್, ಭಾರತದ ಪಶ್ಚಿಮ ಭಾಗದಲ್ಲಿರುವ ರಾಜ್ಯವಾಗಿದ್ದು ಹಲವಾರು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳನ್ನು ಹೊಂದಿದೆ. ಉತ್ತರದಲ್ಲಿ ಮರುಭೂಮಿ, ಪಶ್ಚಿಮದಲ್ಲಿ ಎರಡು ಕೊಲ್ಲಿಗಳನ್ನು ಹೊಂದಿರುವ ಸಮುದ್ರ, ದಕ್ಷಿಣದಲ್ಲಿ ಪಶ್ಚಿಮ ಘಟ್ಟಗಳ ಪ್ರಾರಂಭಿಕ ಬೆಟ್ಟಗಳು ಪೂರ್ವದಲ್ಲಿ ಸಮತಟ್ಟಾದ ಪ್ರಸ್ಥಭೂಮಿ ಹೀಗೆ ಭಿನ್ನ ಭೌಗೋಳಿಕ ಲಕ್ಷಣಗಳನ್ನು ಹೊಂದಿದೆ. ನಮ್ಮ ಪಶ್ಚಿಮ ಘಟ್ಟಗಳೇ ಮೊದಲಾಗಿ ಅತಿದೊಡ್ಡ ಯುನೆಸ್ಕೋ ಪಾರಂಪರಿಕ ತಾಣವಾಗಿದೆ. ಐತಿಹಾಸಿಕವಾಗಿಯೂ ಬಹಳ ಮಹತ್ವದ ದಾಖಲೆಗಳನ್ನು ಹೊಂದಿರುವ ಈ ರಾಜ್ಯದಾದ್ಯಂತ ಹಲವಾರು ಪುರಾತನ ಕಟ್ಟಡಗಳಿವೆ. ನಾಡನ್ನು ಎರಡು ಕಡೆ ಹೊಕ್ಕಂತಿರುವ ಕೊಲ್ಲಿಗಳು (ಖಂಬತ್ ಮತ್ತು ಕಛ್) ಈ ರಾಜ್ಯದ ಸಮುದ್ರತೀರಗಳ ಒಟ್ಟಾರೆ ಉದ್ದವನ್ನು ಹೆಚ್ಚಿಸಿದ್ದು ನೂರಾರು ಅತ್ಯಂತ ರಮಣೀಯ ಸಮುದ್ರತೀರಗಳನ್ನು ಪಡೆದಿದೆ. ಒಟ್ಟಾರೆಯಾಗಿ ಈ ರಾಜ್ಯದಲ್ಲಿ ಓರ್ವ ಛಾಯಾಗ್ರಾಹಕನ ಗಮನ ಸೆಳೆಯುವ ಹಲವಾರು ಸ್ಥಳಗಳಿವೆ. ಒಂದು ವೇಳೆ ನೀವು ವೃತ್ತಿಪರ ಛಾಯಗ್ರಾಹಕರಾಗಿದ್ದರೆ ಅಥವಾ ಉತ್ಸಾಹಿ ಛಾಯಾಗ್ರಾಹಕರಾಗಿದ್ದರೆ ಗುಜರಾತ್ ರಾಜ್ಯವನ್ನು ಕಡೆಗಣಿಸಲು ಸಾಧ್ಯವೇ ಇಲ್ಲ. ನಿಮ್ಮ ಕ್ಯಾಮೆರಾ ಚಾಕಚಕ್ಯತೆಯನ್ನು ಒರೆಹಚ್ಚಲು ಈ ರಾಜ್ಯದಲ್ಲಿ ಹಲವಾರು ಸ್ಥಳಗಳಿವೆ, ಇವುಗಳಲ್ಲಿ ನೀವು ತಪ್ಪಿಸಿಕೊಳ್ಳಲೇಬಾರದ ಕೆಲವು ಪ್ರಮುಖ ಸ್ಥಳಗಳನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ.

1) ಪಶ್ಚಿಮ ಘಟ್ಟಗಳು

1) ಪಶ್ಚಿಮ ಘಟ್ಟಗಳು

ಹೆಸರೇ ಸೂಚಿಸುವಂತೆ ಭಾರತದ ದಕ್ಷಿಣಭಾಗದ ಪಶ್ಚಿಮ ತೀರಕ್ಕೆ ಸಮಾನಾಂತರವಾಗಿ ಗುಜರಾತ್ ನಿಂದ ಪ್ರಾರಂಭಗೊಂಡು ಮಹಾರಾಷ್ಟ್ರ, ಗೋವಾ, ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಹಬ್ಬಿರುವ ವಿಶಾಲವಾದ ಈ ಬೆಟ್ಟಗಳು ಕರ್ನಾಟಕ-ಕೇರಳ ಗಡಿಯ ಭಾಗದಲ್ಲಿ ಅತ್ಯುನ್ನತ ಶಿಖರಗಳನ್ನು ಹೊಂದಿದ್ದರೂ ಪ್ರಾರಂಭಿಕ ಹಂತದಲ್ಲಿ ಅಂದರೆ ಗುಜರಾತ್ ನಲ್ಲಿ ಅತಿ ಎತ್ತರವಲ್ಲದ ಬೆಟ್ಟಗಳನ್ನು ಹೊಂದಿದೆ. ಆದರೆ ಇಡಿಯ ಭಾರತದಲ್ಲಿ ಮಳೆಯಾಗಲು ಮತ್ತು ಇತರ ಮಾರುತಗಳನ್ನು ನಿರ್ಧರಿಸುವಲ್ಲಿ ಪಶ್ಚಿಮ ಘಟ್ಟಗಳ ಪಾತ್ರ ಮಹತ್ತರದ್ದಾಗಿದೆ. ಹಿಮಾಲಯಕ್ಕಿಂತಲೂ ಪುರಾತನವಾದ ಈ ಬೆಟ್ಟಗಳು ಅತ್ಯಂತ ಸುಂದರ, ನಿತ್ಯಹರಿದ್ವರ್ಣದ ಕಾಡು, ಸಾವಿರಾರು ಜಲಪಾತ ಮತ್ತು ಅತ್ಯಂತ ಮುಖ್ಯವಾಗಿ ಅತ್ಯಂತ ವೈವಿಧ್ಯಮಯ ಜೀವಜಾಲದಿಂದಾಗಿಯೇ ಯುನೆಸ್ಕೋ ಪಾರಂಪರಿಕ ತಾಣವಾಗಿ ಗುರುತಿಸಲ್ಪಟ್ಟಿದೆ. ಗುಜರಾತ್ ನಲ್ಲಿರುವ ಬೆಟ್ಟಗಳು ಅಷ್ಟೊಂದು ದುರ್ಗಮವಲ್ಲದಿದ್ದರೂ ಓರ್ವ ಛಾಯಾಗ್ರಾಹಕನಿಗೆ ಅವಶ್ಯವಿದ್ದಷ್ಟು ನೈಸರ್ಗಿಕ ಸೊಬಗನ್ನಂತೂ ನೀಡಿಯೇ ನೀಡುತ್ತವೆ.

ಈ ಬೆಟ್ಟಗಳು ಬಹುತೇಕ ನಿರ್ಜಜವಾಗಿದ್ದು ಯಾವುದೇ ಪ್ರಗತಿ ಕಾರ್ಯ ನಡೆಯದ ಕಾರಣ ಇಂದಿಗೂ ತನ್ನ ಮೂಲಸ್ಥಿತಿಯನ್ನು ಕಾಯ್ದುಕೊಂಡಿದೆ. ಜನವಸತಿ ಇಲ್ಲದ ಕಾರಣ ಸೌಲಭ್ಯಗಳೂ ಇಲ್ಲಿಲ್ಲ. ಹಾಗಾಗಿ ಪ್ರವಾಸಿಗರೂ ಇಲ್ಲ. ಪರಿಣಾಮವಾಗಿ ಈ ಸ್ಥಳ ಅತ್ಯಂತ ಸ್ವಚ್ಛ ಮತ್ತು ಮಾನವರ ಯಾವುದೇ ಕುಕೃತ್ಯಗಳಿಗೆ ಬಲಿಯಾಗದೇ ಅಪ್ಪಟ ನೈಸರ್ಗಿಕ ಸೌಂದರ್ಯವನ್ನು ಪ್ರಕಟಿಸುತ್ತವೆ. ಈ ಕಾಡುಗಳಲ್ಲಿ ಅಲೆದಾಡಲು ಸೂರತ್ ನಗರದಿಂದ ಸುಮಾರು ನೂರಿಪ್ಪತ್ತು ಕಿಮೀ ಮತ್ತು ವಲ್ಸಾಡ್ ನಿಂದ ಐವತ್ತು ಕಿ.ಮೀ ಕ್ರಮಿಸಬೇಕಾಗುತ್ತದೆ.

2) ಚಂಪಾನೇರ್ - ಪಾವಗಢ ಪ್ರಾಕ್ತಶಾಸ್ತ್ರ ಉದ್ಯಾನ (Champaner-Pavagadh Archaeological Park)

2) ಚಂಪಾನೇರ್ - ಪಾವಗಢ ಪ್ರಾಕ್ತಶಾಸ್ತ್ರ ಉದ್ಯಾನ (Champaner-Pavagadh Archaeological Park)

ನಮ್ಮ ತುಮಕೂರಿನ ಬಳಿ ಇರುವ ಪಾವಗಡದ ಹೆಸರನ್ನೇ ಹೋಲುವ ಪಾವಗಢವೊಂದು ಗುಜರಾತ್ ನಲ್ಲಿಯೂ ಇದೆ. ಇದು ಪಂಚಮಹಲ್ ಜಿಲ್ಲೆಯ ಬೆಟ್ಟಗಳಿಂದ ಕೂಡಿದ ಪ್ರದೇಶವಾಗಿದ್ದು ಇದರ ತಪ್ಪಲಿನಲ್ಲಿರುವ ಚಂಪಾನೇರ್ ನಗರದಲ್ಲಿದೆ. ಈ ಉದ್ಯಾನವೂ ಯುನೆಸ್ಕೋ ವಿಶ್ವ ಪಾರಂಪರಿಕ ತಾಣದಲ್ಲಿ ಒಂದಾಗಿದೆ. ಈ ಉದ್ಯಾನದಲ್ಲಿ ಸಾವಿರಾರು ವರ್ಷದ ಹಿಂದೆ ಇದ್ದ ನಗರಗಳ ಅವಶೇಷಗಳು, ಪಳೆಯುಳಿಕೆಗಳಿದ್ದು ಉತ್ತಮವಾಗಿ ಸಂರಕ್ಷಿಸಲಾಗಿದೆ. ಈ ತಾಣವನ್ನು ವೀಕ್ಷಿಸಲು ಪ್ರತಿವರ್ಷ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಈ ಪುರಾತನ ಕಟ್ಟಡಗಳು ಮತ್ತು ಅವಶೇಷಗಳನ್ನು ನಿಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿಯಲು ಅತ್ಯುತ್ತಮ ಅವಕಾಶಗಳಿವೆ.

ಈ ಉದ್ಯಾನದಲ್ಲಿ ಹಿಂದೂ ಮತ್ತು ಮುಸ್ಲಿಂ ವಾಸ್ತುಶಿಲ್ಪದ ವಿಪುಲ ಕಟ್ಟಡಗಳಿವೆ. ವಿಶೇಷವಾಗಿ ಕಾಳಿಕಾ ಮಾತಾ ದೇವಾಲಯ ಮತ್ತು ಜಾಮಿ ಮಸ್ಜಿದ್. ಇವೆರೆಡೂ ಕನಿಷ್ಟ ನೂರು ವರ್ಷಕ್ಕೂ ಹಿಂದಿನ ಕಟ್ಟಡಗಳಾಗಿದ್ದು ಪ್ರತಿಯೊಂದು ಇಂಚಿನಲ್ಲಿಯೂ ಹೆಚ್ಚಿನ ಮಾಹಿತಿಯನ್ನು ತಮ್ಮಲ್ಲಿ ಅಡಗಿಸಿಕೊಂಡಿವೆ. ಜನಸಾಮಾನ್ಯರ ಕಣ್ಣಿಗೆ ಬೀಳದ ಈ ಸೂಕ್ಷ್ಮ ಮಾಹಿತಿಗಳನ್ನು ನಿಮ್ಮ ಕ್ಯಾಮೆರಾ ಕಣ್ಣು ಹುಡುಕಿದ್ದೇ ಆದರೆ ನಿಮ್ಮ ಛಾಯಾಚಿತ್ರ ಖ್ಯಾತಿ ಗಳಿಸುವುದು ಖಂಡಿತ.

3) ದ್ವಾರಕಾ

3) ದ್ವಾರಕಾ

PC- Sumeet photography

ಸಾವಿರಾರು ವರ್ಷಗಳ ಹಿಂದೆ ಭಗವಾನ್ ಕೃಷ್ಣನ ರಾಜ್ಯದ ರಾಜಧಾನಿಯಾಗಿದ್ದ ದ್ವಾರಕೆ ಐತಿಹಾಸಿಕ ಕುರುಹುಗಳನ್ನು ಇಂದಿಗೂ ಉಳಿಸಿಕೊಂಡಿದೆ. ಈ ನಗರದ ಸರಹದ್ದಿನ ಒಳಗೆ ನೂರಾರು ಧಾರ್ಮಿಕ ಮಹತ್ವದ ಸ್ಥಳಗಳಿವೆ. ವಿಶೇಷವಾಗಿ ಸಮುದ್ರ ತೀರಗಳು ಹೆಚ್ಚಿನ ಮಹತ್ವ ಹೊಂದಿದೆ. ಪುರಾಣಗಳ ಪ್ರಕಾರ, 3138 ಕ್ರಿ. ಪೂರ್ವದಲ್ಲಿ ಈ ನಗರವನ್ನು ಬಿಟ್ಟು ಕೃಷ್ಣ ವೈಕುಂಠಕ್ಕೆ ನಡೆದ ಬಳಿಕ ಅರ್ಜುನ ದ್ವಾರಕಾ ನಗರಕ್ಕೆ ಹೋಗಿ ಕೃಷ್ಣನ ಮೊಮ್ಮಕ್ಕಳು ಹಾಗೂ ಯಾದವರ ಪತ್ನಿಯರನ್ನು ಸುರಕ್ಷಿತತೆಗಾಗಿ ಹಸ್ತಿನಾಪುರಕ್ಕೆ ಕರೆತಂದನು. ಅರ್ಜುನನು ದ್ವಾರಕಾ ನಗರವನ್ನು ಬಿಟ್ಟ ತಕ್ಷಣ ಅದು ಸಮುದ್ರದಲ್ಲಿ ಮುಳುಗಿ ಹೋಯಿತು ಎಂದು ಹೇಳಲಾಗುತ್ತದೆ. ಆ ಪ್ರಕಾರ, ಈಗ ನೆಲದ ಮೇಲಿರುವ ದ್ವಾರಕಾ ನಗರ ನಿಜವಾದ ದ್ವಾರಕೆಯಲ್ಲ, ಬದಲಿಗೆ ನಗರದ ಹೊರವಲಯವಾಗಿದೆ. ಈ ಸ್ಥಳ ವಾಸ್ತವದಲ್ಲಿ ಸಮುದ್ರದಲ್ಲಿ ಮುಳುಗಿದ್ದು ಇಂದಿಗೂ ಈ ಸಮುದ್ರದ ಅಡಿಯಲ್ಲಿ ಪುರಾತನ ನಗರವಿದ್ದ ಕುರುಹುಗಳು ಕಂಡುಬಂದಿವೆ. ಈ ವಾಸ್ತವವನ್ನು ಅರಿಯಲು ನೂರಾರು ಪ್ರವಾಸಿಗರು ದ್ವಾರಕಾ ನಗರಕ್ಕೆ ಆಗಮಿಸುತ್ತಾರೆ.

ನೀವು ಸಮುದ್ರದಲ್ಲಿ ಮುಳುಗಿ ಹಳೆಯ ಪಟ್ಟಣವನ್ನು ಅನ್ವೇಶಿಸುವಷ್ಟು ಪರಿಣಿತಿ ಹೊಂದಿಲ್ಲದಿದ್ದರೆ ಈ ಪಟ್ಟಣದಲ್ಲಿರುವ ಇತರ ಧಾರ್ಮಿಕ ಕೇಂದ್ರಗಳನ್ನು ಮೊದಲು ಸಂದರ್ಶಿಸುವುದು ಉತ್ತಮ. ನಿಮ್ಮ ಮೊದಲ ತಾಣ ದ್ವಾರಕೀಶ ದೇವಾಲಯ. ವಿಶಾಲ ಸಮುದ್ರಕ್ಕೆ ತೆರೆದುಕೊಂಡಂತಿರುವ ಈ ದೇವಾಲಯ ಛಾಯಾಗ್ರಾಹಕನ ಪಾಲಿಗೆ ಅತ್ಯಂತ ಸೂಕ್ತ ಸ್ಥಳದಲ್ಲಿ ಹೇಳಿ ಮಾಡಿ ಇರಿಸಿದಂತಿದ್ದು ನಿಮ್ಮ ಕೌಶಲ್ಯವನ್ನು ಒರೆಹಚ್ಚುತ್ತದೆ.

4) ಸಾಪೂತಾರಾ:

4) ಸಾಪೂತಾರಾ:

PC- Milapmadhikar

ಪಶ್ಚಿಮ ಘಟ್ಟಗಳು ಪ್ರಾರಂಭಗೊಂಡು ಮಹಾರಾಷ್ಟ್ರಕ್ಕೆ ಮುಂದುವರೆಯುವಲ್ಲಿ ಇರುವ ದಂಗ್ ಜಿಲ್ಲೆಯಲ್ಲಿದೆ. ಇದೊಂದು ಅತಿ ಸುಂದರ ಪರ್ವತಧಾಮವಾಗಿದ್ದು ಸುಮಾರು ಹತ್ತಕ್ಕೂ ಹೆಚ್ಚು ಪ್ರೇಕ್ಷಣೀಯ ಸ್ಥಳಗಳಿವೆ. ಜಲಪಾತಗಳು, ಉದ್ಯಾನಗಳು, ವಸ್ತುಸಂಗ್ರಹಾಲಯ ಮೊದಲಾದವುಗಳು ಗಮನ ಸೆಳೆಯುತ್ತವೆ. ಆದರೆ ಅತಿ ಹೆಚ್ಚು ಗಮನ ಸೆಳೆಯುವುದು ಇಲ್ಲಿನ ಸಮುದ್ರ ತೀರಗಳು ಮತ್ತು ಜಲಕ್ರೀಡೆಗಳು. ಇದರಲ್ಲಿಯೂ ವಿಶೇಷವಾಗಿ ಪ್ಯಾರಾಗ್ಲೈಡಿಂಗ್ ಎಂಬ ಕ್ರೀಡೆ ಹೆಚ್ಚು ಆಕರ್ಶಕವಾಗಿವೆ. ವರ್ಷಕ್ಕೊಮ್ಮೆ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಲು ವಿಶ್ವದ ಹಲವೆಡೆಗಳಿಂದ ಉತ್ಸಾಹಿಗಳು ಆಗಮಿಸಿ ಸ್ಪರ್ಧಿಸುತ್ತಾರೆ. ಈ ಸ್ಪರ್ಧೆಯನ್ನು ನೋಡುವುದು ಎಷ್ಟು ಸುಂದರ ಎನ್ನುವನ್ನು ನಿಮ್ಮ ಕ್ಯಾಮೆರಾ ದಾಖಲಿಸಿದ ಚಿತ್ರಗಳೇ ಸಾಕ್ಷಿ ಮೂಲಕ ಪ್ರಕಟಿಸುತ್ತವೆ. ಅಲ್ಲದೇ ಈ ತೀರಗಳಲ್ಲಿ ದಿನದ ವಿವಿಧ ಅವಧಿಯಲ್ಲಿ ಆಗಸದ ಬಣ್ಣ ಹಲವು ಬಣ್ಣಗಳಲ್ಲಿ ಬದಲಾಗುವ ನೈಸರ್ಗಿಕ ವೈಚಿತ್ರ್ಯವನ್ನೂ ನೋಡಬಹುದು. ಕೇವಲ ಅಪಾರ ತಾಳ್ಮೆಹೊಂದಿರುವ ಛಾಯಾಚಿತ್ರಗಾರನ ಕ್ಯಾಮೆರಾದಲ್ಲಿ ಸೆರೆಯಾಗುವ ಈ ಚಿತ್ರಗಳು ಮಾತ್ರವೇ ನಿಸರ್ಗದ ಈ ಚೆಲುವನ್ನು ಇನ್ನಿಲ್ಲದಷ್ಟು ಸುಂದರವಾಗಿ ಚಿತ್ರವೊಂದರಲ್ಲಿ ಸೆರೆಯಾಗಬಹುದು. ವಿಶೇಷವಾಗಿ ಸೂರ್ಯೋದಯ ಮತ್ತು ಸೂರ್ಯಾಸ್ತದ ಚಿತ್ರಗಳು ಒಂದೇ ಕಡೆ ಸಿಗುವಂತಾಗುವುದೂ ಈ ಸ್ಥಳದ ಇನ್ನೊಂದು ಸೊಬಗಾಗಿದೆ.

5) ಕಛ್ ಜಿಲ್ಲೆಯ ಮಹಾನ್ ಕೊಲ್ಲಿ (ಕಛ್ ಕೊಲ್ಲಿ)

5) ಕಛ್ ಜಿಲ್ಲೆಯ ಮಹಾನ್ ಕೊಲ್ಲಿ (ಕಛ್ ಕೊಲ್ಲಿ)

PC- Rahul Zota

ಗುಜರಾತ್ ಜಿಲ್ಲೆಯಲ್ಲಿರುವ ಎರಡು ಕೊಲ್ಲಿಗಳಲ್ಲಿ ದೊಡ್ಡದಾದ ಮತ್ತು ಪ್ರಮುಖವಾದ ಕಛ್ ಕೊಲ್ಲಿ (The Great Rann Of Kutch) ಸಹಾ ಯುನೆಸ್ಕೋ ವಿಶ್ವ ಪಾರಂಪಾರಿಕ ತಾಣವಾಗಿದೆ. ವಾಸ್ತವದಲ್ಲಿ, ಭಾರತದ ಥಾರ್ ಮರುಭೂಮಿಯನ್ನು ಸೀಳಿ ಸಮುದ್ರ ಒಳನುಗ್ಗಿದಂತೆ ಕಾಣುವ ಈ ಭಾಗದಲ್ಲಿ ಓರ್ವ ಛಾಯಾಚಿತ್ರಗ್ರಾಹಕನ ಕೌಶಲ್ಯವನ್ನು ಒರೆಹಚ್ಚಲು ಸೂಕ್ತವಾದ ಹಲವಾರು ತಾಣಗಳಿವೆ. ಭಾರತವನ್ನು ಹಾದು ಹೋಗುವ ಕರ್ಕಾಟಕ ರೇಖೆ ಪಶ್ಚಿಮದಲ್ಲಿ ಪ್ರಾರಂಭವಾಗುವ ಸ್ಥಳವೇ ಇದು. ಮರುಭೂಮಿ ಮತ್ತು ಸಮುದ್ರದ ಸಂಗಮವಿರುವ ಭಾಗದಲ್ಲಿ ಸೂರ್ಯನ ಕಿರಣಗಳು ಬೇರೆಲ್ಲೂ ಇಲ್ಲದಂತಹ ಪರಿಣಾಮಗಳನ್ನುಂಟುಮಾಡುತ್ತವೆ. ಕೇವಲ ನುರಿತ ಛಾಯಾಗ್ರಾಹಕನ ಕಣ್ಣು ಮಾತ್ರವೇ ಈ ಅದ್ಭುತವನ್ನು ಗುರುತಿಸಬಲ್ಲುದು. ಈ ಮರುಭೂಮಿಯಲ್ಲಿ ಇಂಗುವ ಸಮುದ್ರದ ನೀರು ಆವಿಯಾದ ಬಳಿಕ ಉಪ್ಪನ್ನು ಬಿಟ್ಟು ಹೋಗುವ ಕಾರಣ ಇಲ್ಲಿನ ಮರಳು ಅತ್ಯಂತ ಕ್ಷಾರೀಯವಾಗಿದ್ದು ವಿಶ್ವದಲ್ಲಿಯೇ ಅತ್ಯಂತ ವಿಶಾಲವಾದ ಉಪ್ಪಿನ ಮರುಭೂಮಿಯಾನ್ನಾಗಿಸಿದೆ.

6) ಪೋಲೋ ಅರಣ್ಯ

6) ಪೋಲೋ ಅರಣ್ಯ

PC- Nia1kavya2

ಅಹ್ಮದಾಬಾದ್ ನಿಂದ ಸುಮಾರು ನೂರೈವತ್ತು ಕಿ.ಮೀ ದೂರವಿರುವ ಈ ಅರಣ್ಯ ಗುಜರಾತ್ ನ ಉತ್ತರ ಭಾಗದಲ್ಲಿದ್ದು ರಾಜಸ್ಥಾನ ರಾಜ್ಯಕ್ಕೆ ತೆರಳುವ ಬಾಗಿಲಿನಂತಿದೆ. ಇಲ್ಲಿ ಹಲವಾರು ಐತಿಹಾಸಿಕ ಪ್ರದೇಶಗಳಿವೆ ಹಾಗೂ ಸುತ್ತಲೂ ದಟ್ಟ ಹಸಿರಿನ ಗೊಂಡಾರಣ್ಯವಿದೆ. ಇದು ಸಹಾ ಸಂರಕ್ಷಿತ ಪ್ರದೇಶವಾಗಿದ್ದು ಇಂದಿಗೂ ತನ್ನಲ್ಲಿ ಹಲವಾರು ಐತಿಹಾಸಿಕ ಕುರುಹುಗಳನ್ನು ಉಳಿಸಿಕೊಂಡಿದೆ. ಸುಮಾರು ನಾನೂರು ಚದರ ಕಿ.ಮೀ ವ್ಯಾಪ್ತಿಯಲ್ಲಿರುವ ಈ ಅರಣ್ಯಕ್ಕೆ ಪೋಲೋ ಎಂಬ ಹೆಸರು ಬರಲು ಇಲ್ಲಿರುವ ಹರ್ನವ್ ನದಿ ತೀರದಲ್ಲಿದ್ದ ಇದೇ ಹೆಸರಿನ ಪಟ್ಟಣವಾಗಿತ್ತು ಎಂದು ಹೇಳಲಾಗುತ್ತದೆ. ಪೋಲ್ ಅಂದರೆ ಮಾರವಾಡಿ ಭಾಷೆಯಲ್ಲಿ ದ್ವಾರ ಎಂದಾಗಿದೆ. ಈ ಭಾಗದಲ್ಲಿರುವ ಪುಟ್ಟ ಅಣೆಕಟ್ಟು, ಇದನ್ನು ದಾಟಿದ ನೀರು ಪುಟ್ಟ ಜಲಪಾತವನ್ನು ನಿರ್ಮಿಸುತ್ತದೆ. ಪುಟ್ಟ ಶಿವನ ದೇವಸ್ಥಾನ ಹಾಗೂ ಜೈನ ಮಂದಿರಗಳೂ ಇಲ್ಲಿವೆ. ಚಾರಣದ ಮೂಲಕ ಬೆಟ್ಟದ ತುದಿಯನ್ನೂ ತಲುಪಬಹುದು. ಒಟ್ಟಾರೆ, ಓರ್ವ ಛಾಯಾಗ್ರಾಹಕನಿಗೆ ಇಲ್ಲಿ ತನ್ನ ಕೌಶಲ್ಯವನ್ನು ಪ್ರದರ್ಶಿಸಲು ವಿಪುಲವಾದ ಅವಕಾಶಗಳಿವೆ.

7) ನಾಲ್ ಸರೋವರ ಪಕ್ಷಿಧಾಮ

7) ನಾಲ್ ಸರೋವರ ಪಕ್ಷಿಧಾಮ

PC- Vaibhav Sheth

ಒಂದು ವೇಳೆ ನೀವು ಪಕ್ಷಿವೀಕ್ಷಕರೂ ಆಗಿದ್ದು ಪಕ್ಷಿಗಳ ಚಿತ್ರಗಳನ್ನು ಸೆರೆಹಿಡಿಯುವುದು ನಿಮ್ಮ ಆಸಕ್ತಿಯ ವಿಷಯವಾಗಿದ್ದರೆ ಈ ಸ್ಥಳವನ್ನು ನೀವು ಅಲಕ್ಷಿಸಲು ಸಾಧ್ಯವೇ ಇಲ್ಲ. ಅಹ್ಮದಾಬಾದ್ ನಿಂದ ಸುಮಾರು ಅರವತ್ತು ಕಿ.ಮೀ ದೂರವಿರುವ ಈ ಸರೋವರ ಸುಮಾರು 210 ಬಗೆಯ ವಲಸೆ ಹಕ್ಕಿಗಳು ಮತ್ತು ಸ್ಥಳೀಯ ಹಕ್ಕಿಗಳಿಗೆ ಆಶ್ರಯದಾಣವಾಗಿದೆ. ಒಟ್ಟು 120.82 ಚದರ ಕಿಮೀ ವಿಸ್ತಾರವಿರುವ ಈ ವಿಶಾಲ ತಾಣವನ್ನು ಸುತ್ತಲು ದೋಣಿಯ ಸೌಲಭ್ಯವೂ ಇರುವ ಕಾರಣ ಪಕ್ಷಿವೀಕ್ಷಕರಿಗೆ ಬೇರೆ ಪಕ್ಷಿಧಾಮದಲ್ಲಿ ದೊರಕದ ಅವಕಾಶಗಳು ಇಲ್ಲಿ ಲಭ್ಯವಿವೆ. 24 ಸೆಪ್ಟೆಂಭರ್ 2012ರಂದು ಈ ಪಕ್ಷಿಧಾಮವನ್ನು ರಾಂಸರ್ ಸಮಾವೇಶ ತಾಣ ಎಂದು ಗುರುತಿಸಲಾಗಿದೆ. ಬೆಳಿಗ್ಗೆ ಆರೂವರೆಯಿಂದ ಸಂಜೆ ಐದೂವರೆಯವರೆಗೆ ಮಾತ್ರ ತೆರೆದಿರುತ್ತದೆ ಹಾಗೂ ಪ್ರತಿ ಪ್ರವಾಸಿ ಮತ್ತು ಪ್ರತಿ ಕ್ಯಾಮೆರಾಕ್ಕೆ ಪ್ರತ್ಯೇಕ ಶುಲ್ಕಗಳಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X