» »ಮಂದಹಾಸ ಬೀರುತ್ತ ಕರೆಯುವ ನಂದಪ್ರಯಾಗ!

ಮಂದಹಾಸ ಬೀರುತ್ತ ಕರೆಯುವ ನಂದಪ್ರಯಾಗ!

Written By:

ಬದ್ರಿನಾಥ ದೇವಾಲಯ ದರ್ಶನ ಯಾತ್ರೆ ಹಿಂದುಗಳಲ್ಲಿ ಬಹಳವೆ ಪವಿತ್ರವಾದ ತೀರ್ಥ ಯಾತ್ರೆಗಳ ಪೈಕಿ ಒಂದಾಗಿದೆ. ಒಂದೊಮ್ಮೆ ಬದರಿಗೆಂದು ತೆರಳಿದರೆ ಸಾಗುವಾಗ ರಸ್ತೆಯ ಮಧ್ಯದಲ್ಲಿ ಇನ್ನೂ ಅನೇಕ ಧಾರ್ಮಿಕ ತಾಣಗಳು ಸಿಗುತ್ತವೆ. ಹಾಗಾಗಿ ಇಂತಹ ಯಾತ್ರೆಗಳು ಯಾತ್ರಾರ್ಥಿಗಳಿಗೆ ಬಲು ಮಹತ್ವದಾಗಿರುತ್ತವೆ.

ಬದರಿನಾಥಕ್ಕೆ ತೆರಳುವಾಗ ಸಿಗುವ ಒಂದು ಸುಂದರ ಧಾರ್ಮಿಕ ಕ್ಷೇತ್ರವೆ ನಂದಪ್ರಯಾಗ. ಹೌದು, ಪಂಚ ಪ್ರಯಾಗಗಳಲ್ಲಿ ಒಂದಾಗಿರುವ ನಂದಪ್ರಯಾಗವು ಸಾಕಷ್ಟು ಧಾರ್ಮಿಕ ಮಹತ್ವ ಪಡೆದಿರುವ ತಾಣವಾಗಿದೆ. ನಂದಪ್ರಯಾಗ ಕೇವಲ ಧಾರ್ಮಿಕವಾಗಿ ಮಾತ್ರವಲ್ಲದೆ ಪ್ರಾಕೃತಿಕವಾಗಿಯೂ ನಯನಮನೋಹರವಾದ ತಾಣವಾಗಿದೆ.

ಮಂದಹಾಸ ಬೀರುತ್ತ ಕರೆಯುವ ನಂದಪ್ರಯಾಗ!

ನಂದಪ್ರಯಾಗ ಬಳಿಯ ಚೋಪ್ಟಾ, ಚಿತ್ರಕೃಪೆ: Travelling Slacker

ತಂಪು ತಂಪಾದ ಕಲ್ಮಶರಹಿತ ಪರಿಸರ, ಅಲ್ಲಲ್ಲಿ ಕಂಡುಬರುವ ದಟ್ಟ ಹಸಿರು, ದೂರದಲ್ಲಿ ಅಮೋಘವಾಗಿ ಕಾಣುವ ಹಿಮಚ್ಛಾದಿತ ಪರ್ವತಗಳು ಒಟ್ಟಾರೆಯಾಗಿ ಇಲ್ಲಿನ ಸೃಷ್ಟಿ ಸೌಂದರ್ಯವನ್ನು ಶ್ಲಾಘಿಸುವಂತೆ ಮಾಡಿವೆ. ನಂದಪ್ರಯಾಗದಲ್ಲಿ ಮುಖ್ಯವಾಗಿ ಕೆಲವು ದೇವಾಲಯಗಳಿದ್ದು ಅದರಲ್ಲಿ ನಂದ ದೇವಾಲಯವು ಪ್ರಮುಖವಾಗಿದೆ.

ಹಿಂದೆ ಯದು ಸಾಮ್ರಾಜ್ಯದ ರಾಜಧಾನಿಯಾಗಿತ್ತು ನಂದಪ್ರಯಾಗ. ನಂದ ರಾಜನು ಇಲ್ಲಿನ ಶಿಲೆಯೊಂದರ ಮೇಲೆ ಯಜ್ಞವೊಂದನ್ನು ಮಾಡಿದ್ದ. ನಂತರ ಅದೆ ಶಿಲೆಯನ್ನು ನಂದ ದೇವಾಲಯದ ನಿರ್ಮಾಣಕ್ಕೆಂದು ಅಡಿಪಾಯವಾಗಿ ಬಳಸಲಾಗಿದೆ. ಅಲ್ಲದೆ ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದಂತಕಥೆಯೂ ಚಾಲ್ತಿಯಲ್ಲಿದೆ.

ಮಂದಹಾಸ ಬೀರುತ್ತ ಕರೆಯುವ ನಂದಪ್ರಯಾಗ!

ಚಿತ್ರಕೃಪೆ: Michael Scalet

ಆ ಕಥೆಯ ಪ್ರಕಾರ, ನಂದ ರಾಜನಿಗೆ ವಿಷ್ಣು ತನ್ನ ಮಗನಾಗಿ ಹುಟ್ಟಬೇಕೆಂಬ ಉತ್ಕಟ ಬಯಕೆಯಿತ್ತು. ಅತ್ಯಂತ ಧಾರ್ಮಿಕ ಹಾಗೂ ಸಾತ್ವಿಕ ರಾಜನಾಗಿದ್ದ ರಾಜನು ಶಿಲೆಯೊಂದರ ಮೇಲೆ ಮಹಾಯಜ್ಞವನ್ನು ಮಾಡಿ ವಿಷ್ಣುವನ್ನು ಪ್ರಸನ್ನಗೊಳಿಸಿ ಒಂದು ವರದಾನ ಪಡೆದಿದ್ದ. ಅದರಂತೆ ವಿಷ್ಣು ಅವನ ಮಗನಾಗ ಬೇಕಿತ್ತು. ಆದರೆ ಅನಿರೀಕ್ಷಿತವಾಗಿ ಉಂಟಾದ ಬೆಳವಣಿಗೆಯಲ್ಲಿ ವಿಷ್ಣು ಕೃಷ್ಣನಾಗಿ ದೇವಕಿಗೆ ಹುಟ್ಟಿದ.

ಆದರೆ ವಿಷ್ಣು ವರದಾನವನ್ನು ಪಾಲಿಸಲೇಬೇಕಿತ್ತು. ಹಾಗಾಗಿ ನಡೆದ ಧಾರ್ಮಿಕವಾದ ತಿರುವುಗಳಲ್ಲಿ ಕೃಷ್ಣನು ದೇವಕಿನಂದನನಾದರೂ ನಂದರಾಜನ ಮಡದಿಯಾದ ಯಶೋಧೆಯ ಬಳಿ ಬೆಳೆದ. ಹಾಗಾಗಿ ನಂದರಾಜನ ಮಗನಾಗಿಯೂ ವಿಷ್ಣು ತನ್ನ ಕಾರ್ಯ ಪೂರೈಸಿದ್ದ. ರಾಜನು ನಡೆಸಿದ್ದ ಮಹಾಯಜ್ಞದ ಶಿಲೆಯನ್ನೆ ಇಲ್ಲಿನ ದೇವಾಲಯದ ನಿರ್ಮಾಣದಲ್ಲಿ ಬಳಸಲಾಗಿದೆ.

ಮಂದಹಾಸ ಬೀರುತ್ತ ಕರೆಯುವ ನಂದಪ್ರಯಾಗ!

ಚಿತ್ರಕೃಪೆ: Fowler&fowler

ನಂದಪ್ರಯಾಗ ಮೂಲತಃ ಸಂಗಮ ಕ್ಷೇತ್ರವಾಗಿದ್ದು ಇಲ್ಲಿ ಅಲಕನಂದಾ ಹಾಗೂ ನಂದಾಕಿನಿ ನದಿಗಳು ಸಂಗಮ ಹೊಂದುತ್ತವೆ. ಧಾರ್ಮಿಕವಾಗಿ ಈ ಸಂಗಮದಲ್ಲಿ ಮಿಂದವರು ನಿಜವಾಗಿಯೂ ಒಳ್ಳೆಯವರಾಗಿ ಬದಲಾಗಿದ್ದೆ ಆದಲ್ಲಿ ಅವರೆಲ್ಲ ಪಾಪ-ಕರ್ಮಗಳು ನಶಿಸಿ ಹೋಗುತ್ತವೆ ಎಂದು ನಂಬಲಾಗಿದೆ.

ಕೇವಲ ಧಾರ್ಮಿಕವಾಗಿ ಮಾತ್ರವಲ್ಲದೆ ಒಂದು ಸಾಹಸಮಯ ಅದ್ಭುತ ಪ್ರವಾಸಿ ತಾಣವಾಗಿಯೂ ನಂದಪ್ರಯಾಗ ಹೆಸರುವಾಸಿಯಾಗಿದೆ. ಇಲ್ಲಿ ರೋಮಾಂಚನ ನೀಡುವಂತಹ ಚಾರಣ ಮಾರ್ಗಗಳು, ಪರ್ವತಾರೋಹಣ ಸ್ಕಿಯೀಂಗ್ ಹಾಗೂ ದೋಣಿ ಸವಾರಿಯಂತಹ ಆಕರ್ಷಕ ಸಾಹಸಮಯ ಚಟುವಟಿಕೆಗಳನ್ನು ಆಸ್ವಾದಿಸಬಹುದು. ತಂಗಲು ಹೋಟೆಲುಗಳು ದೊರೆಯುತ್ತವೆ. ಮುಂಚಿತವಾಗಿಯೆ ಬುಕ್ ಮಾಡಿದರೆ ಉತ್ತಮ.

ಪಂಚಪ್ರಯಾಗಗಳು ಎಂದರೆ ಯಾವುವು?

ಜೋಶಿಮಠದಿಂದ ಬದರಿಗೆ ತೆರಳುವ ಮಾರ್ಗದಲ್ಲಿ ನಂದಪ್ರಯಾಗವು ಸ್ಥಿತವಿದೆ. ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿರುವ ನಂದಪ್ರಯಾಗಕ್ಕೆ ತೆರಳಲು ದೆಹಲಿ, ಹರಿದ್ವಾರ, ಡೆಹ್ರಾಡೂನ್, ಅಲ್ಮೋರಾ ಹಾಗೂ ನೈನಿತಾಲ್ ಗಳಿಂದ ಬಸ್ಸುಗಳು ದೊರೆಯುತ್ತವೆ. ಭೇಟಿ ನೀಡಲು ಮಾರ್ಚ್ ನಿಂದ ಜೂನ್ ಹಾಗೂ ಅಕ್ಟೋಬರ್ ಮತ್ತು ನವಂಬರ್ ಬಲು ಪ್ರಶಸ್ತವಾದ ಸಮಯವಾಗಿದೆ.

Please Wait while comments are loading...