• Follow NativePlanet
Share
Menu
» »ಇದೊಂದು ರಮ್ಯ ಲೋಕ... ಇಲ್ಲಿಗೊಮ್ಮೆ ಬರಲೇ ಬೇಕು...

ಇದೊಂದು ರಮ್ಯ ಲೋಕ... ಇಲ್ಲಿಗೊಮ್ಮೆ ಬರಲೇ ಬೇಕು...

Posted By: Divya

ಅಂದು ಶನಿವಾರ ಸಮಯವೇ ಕಳೆಯುತ್ತಿರಲಿಲ್ಲ. ಏನೋ ಒಂದು ತರಹದ ಬೇಸರ ನನ್ನನ್ನು ಕಾಡುತ್ತಿತ್ತು. ಎಲ್ಲಾದರೂ ಹೋಗಬೇಕು ಎಂದು ಒಂದು ಮನಸ್ಸು ಹೇಳುತ್ತಿತ್ತು. ಅಯ್ಯೋ! ಎಲ್ಲೂ ಬೇಡ ಎಂದು ಇನ್ನೊಂದು ಮನಸ್ಸು... ಒಟ್ಟಿನಲ್ಲಿ ಬೇಸರದಿಂದ ಕುಳಿತಿದ್ದೆ... ಆಗ ನನ್ನ ಆಪ್ತ ಸ್ನೇಹಿತೆಯ ಕರೆ ಬಂತು. ನೋಡು ನಾವೆಲ್ಲಾ ಮೈಸೂರಿಗೆ ಹೋಗುತ್ತಿದ್ದೇವೆ... ನೀನು ಬರ್ತೀಯಾ? ಎಂದಳು. ಅಮ್ಮಾ ಅದೆಷ್ಟು ಸಾರಿ ನೋಡಲಿ? ಬೇರೆ ಸ್ಥಳ ವಿದ್ದರೆ ಹೇಳೆಂದೆ... ತಾಯಿ ಸುಮ್ಮನೆ ಬಾ... ಮೈಸೂರಿನಲ್ಲಿರುವ ಒಂದು ಅದ್ಭುತ ಆಶ್ರಮದ ಪರಿಚಯ ಮಾಡಿಸುತ್ತೇನೆ ಎಂದಳು... ಆಶ್ರಮ ಎಂದಾಕ್ಷಣ ಬೇಸರದ ಮನಸ್ಸಿಗೆ ಏನೋ ಒಂದು ಹಿತ ಎನಿಸಿತು ಓಕೆ ಎಂದುಬಿಟ್ಟೆ...

ಮೈಸೂರಿನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮರುದಿನ ಭಾನುವಾರ ಬೆಳಿಗ್ಗೆ 5 ಗಂಟೆಗೆಲ್ಲಾ ಮೈಸೂರಿನ ಕಡೆಗೆ ಪ್ರಯಾಣ ಬೆಳೆಸಿದೆವು. ಮುಂಜಾನೆ ಸಮಯ ಅಷ್ಟಾಗಿ ವಾಹನ ದಟ್ಟಣೆ ಇಲ್ಲದಿರುವುದರಿಂದ 8 ಗಂಟೆಗೆಲ್ಲಾ ಮೈಸೂರು ತಲುಪಿದೆವು. ಹೊಟ್ಟೆಯೂ ಸ್ವಲ್ಪ ತಾಳ ಹಾಕುತ್ತಿದ್ದುದ್ದರಿಂದ ಹೋಟೆಲ್ ಒಂದರಲ್ಲಿ ತಿಂಡಿಯ ಶಾಸ್ತ್ರ ಮುಗಿಸಿ ಆಶ್ರಮದ ಕಡೆಗೆ ನಡೆದೆವು.

ಆಶ್ರಮವನ್ನು ನೋಡುತ್ತಿದ್ದಂತೆಯೇ ಅದೇನೋ ಒಂದು ರೀತಿಯ ನಿರಾಳವಾದ ಭಾವನೆ ಮೂಡಿತು. ಇದರ ಜೊತೆ ಜೊತೆಯಲ್ಲೇ ಒಳಗೇನಿದೆ ಎನ್ನುವ ಕುತೂಹಲ ಬೇರೆ. ಕುತೂಹಲಕ್ಕೆ ಪೂರ್ಣ ವಿರಾಮ ಹಾಕದೆ ಹಾಗೇ ಮುಂದೆ ಹೆಜ್ಜೆ ಹಾಕಿದೆವು... ಈ ಸುಂದರ ತಾಣದ ಅನುಭವ ಹಾಗೂ ಇನ್ನಷ್ಟು ಸಂಗತಿಗಳನ್ನಾ ಫೋಟೋ ಪ್ರವಾಸದ ಮೂಲಕ ಹೇಳುತ್ತೇನೆ ಬನ್ನಿ...

ಆಶ್ರಮದ ಆವರಣ

ಆಶ್ರಮದ ಆವರಣ

ಆಶ್ರಮದ ಆವರಣದಲ್ಲಿ ನಿಂತಾಗ ಸುತ್ತಲೂ ಹಸಿರು ಸಿರಿ, ಸ್ವಚ್ಛವಾದ ಪರಿಸರ, ಶಾಂತವಾದ ವಾತಾವರಣ ಇವೆಲ್ಲವೂ ಹೊಸತನದ ಅನುಭವ. ಮನಸ್ಸಿಗೊಂದಿಷ್ಟು ಕೊಂಚ ವಿರಾಮ.
PC: wikimapia.org

ವೆಂಕಟೇಶ್ವರ ಕ್ಷೇತ್ರ

ವೆಂಕಟೇಶ್ವರ ಕ್ಷೇತ್ರ

ಆಶ್ರಮದ ಆವರಣದಲ್ಲಿ ನಿಂತಾಗ ಗೋಚರಿಸಿದ ಇನ್ನೊಂದು ಸಂಗತಿ ಈಶಾನ್ಯ ಭಾಗಕ್ಕೆ ಇರುವ ಶ್ರೀದತ್ತ ವೆಂಕಟೇಶ್ವರ ಕ್ಷೇತ್ರ. ಇಲ್ಲಿ ದತ್ತವೆಂಕಟೇಶ್ವರ ಸ್ವಾಮಿಯ ಭವ್ಯ ಮೂರ್ತಿ, ಪದ್ಮಾವತಿ ದೇವಿ, ಧನ್ವಂತರಿ ಸಿದ್ಧಿವಿನಾಯಕ, ಸರ್ವ ದೋಶಹರ ಶಿವಾಲಯ, ಮರಕತ ಸುಬ್ರಹ್ಮಣ್ಯ, ಬಯಲು ಆಂಜನೇಯ, ನವಗ್ರಹ ದೇವಾಲಯಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಶನಿವಾರ ಭಕ್ತರು ವಿಶೇಷ ಸೇವೆ ಸಲ್ಲಿಸುತ್ತಾರೆ ಎನ್ನುತ್ತಿದ್ದರು.
PC: wikimapia.org

ಸ್ವಾಮೀಜಿ

ಸ್ವಾಮೀಜಿ

ಆಶ್ರಮದ ಬಗ್ಗೆ ತಿಳಿಯಲು ಹೊರಟಾಗ ಕೇಳಿದ್ದು "ದತ್ತಪೀಠಾದಿಪತಿ ಜಗದ್ಗುರು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ' ಅವರ ವಿಚಾರ. ಈ ಆಶ್ರಮದ ಸ್ಥಾಪಕರಾದ ಇವರು ಎಲ್ಲಾ ಸ್ವಾಮೀಜಿಗಳಿಗಿಂತಲೂ ಭಿನ್ನ. ಸಂಗೀತಗಾರರು ಹಾಗೂ ಸ್ವರ ಸಂಯೋಜಕರು. ಇವರು ತಮ್ಮ ಸಂಗೀತದಿಂದಲೇ ವಿಶ್ವ ಪರ್ಯಟನೆ ಮಾಡಿದ್ದಾರೆ. ಸಂಗೀತದಿಂದಲೇ ಸಮಾಜದಲ್ಲಿ ಶಾಂತಿ ಮೂಡಿಸಲು ಹವಣಿಸುತ್ತಿರುವ ಗುರುಗಳು. ದೈವ ಭಕ್ತಿ ಹಾಗೂ ಸಂಗೀತ ಪ್ರೀತಿಯನ್ನು ಹೊಂದಿರುವ ಇವರಿಗೆ ಗಿಳಿಗಳೆಂದರೆ ಪಂಚಪ್ರಾಣವಂತೆ. ಇವರ ಬಗ್ಗೆ ತಿಳಿದಿದ್ದು, ಇಲ್ಲಿಗೆ ಬಂದಿದ್ದು ಒಮ್ಮೆ ಸಾರ್ಥಕ ಎನಿಸಿತು. ಹಾಗೇ ಮುಂದೆ ಸಾಗಿದೆವು...

ನಾದ ಮಂಟಪ

ನಾದ ಮಂಟಪ

ಆಶ್ರಮದ ಇನ್ನೊಂದು ಆಕರ್ಷಣೆಯಂತೆ ಗೋಚರಿಸಿದ್ದು ನಾದ ಮಂಟಪ. ಈ ಮಂಟಪಕ್ಕೆ 72 ಕಂಬಗಳಿವೆ. ಪ್ರತಿಯೊಂದು ಕಂಬವು ಕರ್ನಾಟಕ ಶಾಸ್ತ್ರೀಯ ಸಂಗೀತದ ಮೇಳಕರ್ತ ರಾಗಗಳನ್ನು ಪ್ರತಿನಿಧಿಸುತ್ತದೆ. ಇಲ್ಲಿ ಸ್ವಲ್ಪ ಸಮಯ ಕಳೆದರೆ ಸಾಕು ಮನಸ್ಸಿಗೊಂದಿಷ್ಟು ವಿಶ್ರಾಂತಿ ದೊರೆಯುತ್ತದೆ. ನಾವು ಅಲ್ಲೇ ಸ್ವಲ್ಪ ಹೊತ್ತು ಕುಳಿತುಕೊಂಡೆವು.

ಆಂಜನೇಯ ಮೂರ್ತಿ

ಆಂಜನೇಯ ಮೂರ್ತಿ

ಇಲ್ಲಿ ನೋಡಲೇ ಬೇಕಾದ ಒಂದು ಅದ್ಭುತವೆಂದರೆ 41 ಅಡಿ ಎತ್ತರ, 200 ಟನ್ ತೂಕದ ಏಕಶಿಲಾ ಮೂರ್ತಿ ಇರುವುದು. ಇದು ವಿಶ್ವದಲ್ಲೇ ಅತಿ ದೊಡ್ಡ ಏಕಶಿಲಾ ಮೂರ್ತಿ ಎನ್ನುವ ಹಿರಿಮೆಗೆ ಪಾತ್ರವಾಗಿದೆ. ಎಲ್ಲವೂ ವಿಶೇಷ ಸಂಗತಿಗಳೇ ಇರುವ ಈ ಶ್ರಮದಲ್ಲಿ ಮತ್ತೊಂದು ಅಚ್ಚರಿ ಮೂಡಿಸಿದ್ದು ಗಿಳಿಗಳ ರಾಶಿ...

ಗಿಳಿ ವನ

ಗಿಳಿ ವನ

ಸ್ವಾಮೀಜಿಯವರಿಗೆ ಪ್ರಾಣಿ -ಪಕ್ಷಿಗಳೆಂದರೆ ಅಚ್ಚು ಮೆಚ್ಚು. ಅದರಲ್ಲೂ ಗಿಳಿಗಳು ಎಂದರೆ ಎಲ್ಲಿಲ್ಲದ ಪ್ರೀತಿ. ಈ ಹಿನ್ನೆಲೆಯಲ್ಲೇ ಆಶ್ರಮದಲ್ಲಿ ಗಿಳಿವನ ವನ್ನು ಮಾಡಲಾಗಿದೆ. ಬಣ್ಣಬಣ್ಣದ ಗಿಳಿಗಳು ವಿವಿಧ ಗಾತ್ರದಲ್ಲಿವೆ. ದೇಶ-ವಿದೇಶದ ತಳಿಗಳು ಇಲ್ಲಿವೆ. ಜೀವನದಲ್ಲಿ ಇನ್ನೆಲ್ಲೂ ನೋಡಲು ಸಿಗದಂತಹ ಗಿಳಿಗಳು ಇಲ್ಲಿವೆ. ಇವುಗಳನ್ನು ನೋಡುತ್ತಿದ್ದರೆ ಎಲ್ಲೋ ಒಂದು ಹೊಸ ಲೋಕಕ್ಕೆ ಕಾಲಿಟ್ಟಂತಹ ಅನುಭವ ಆಗುವುದರಲ್ಲಿ ಸಂದೇಹವಿಲ್ಲ. ಇವುಗಳನ್ನು ದಿನವಿಡೀ ನೋಡಿದರೂ ಸಾಲದು ಎನ್ನುವ ಭಾವನೆ ಮೂಡುತ್ತೆ. ಅಂದು ನನಗೂ ಹಾಗೇ ಆಯಿತು... ಆದರೆ ಮರುದಿನದ ಆಫೀಸ್ ಕೆಲಸ, ಬೆಂಗಳೂರಿನ ವಾಹನ ದಟ್ಟನೆ ನಮ್ಮನ್ನು ಎಚ್ಚರಿಸುತ್ತಿತ್ತು. ಆಶ್ರಮದ ದರ್ಶನದ ನಂತರ ಪುನಃ ಬೆಂಗಳೂರು ದಾರಿಯನ್ನು ಹಿಡಿದೆವು.

ಹೆಚ್ಚಿನ ಮಾಹಿತಿಗೆ

ಹೆಚ್ಚಿನ ಮಾಹಿತಿಗೆ

ಸುಂದರ ಉದ್ಯಾನವನ, ಪ್ರಶಾಂತವಾದ ಪರಿಸರ, ಅದ್ಭುತ ವಿಚಾರಗಳನ್ನು ನೋಡಲು ಬರಬೇಕಾದ ವಿಳಾಸ ಶ್ರೀಗಣಪತಿ ಸಚ್ಚಿದಾನಂದ ಆಶ್ರಮ, ದತ್ತ ನಗರ, ನಂಜನಗೂಡು ರಸ್ತೆ, ಮೈಸೂರು-570025. ಹೆಚ್ಚಿನ ಮಾಹಿತಿಗೆ 08212483200ಗೆ ಕರೆ ಮಾಡಬಹುದು.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ