Search
  • Follow NativePlanet
Share
» » ಶಿವ-ಪಾರ್ವತಿಯರು ಮದುವೆಯಾದ ಪುಣ್ಯ ಸ್ಥಳ

ಶಿವ-ಪಾರ್ವತಿಯರು ಮದುವೆಯಾದ ಪುಣ್ಯ ಸ್ಥಳ

By Vijay

"ದೇವತೆಗಳ ಪುಣ್ಯಭೂಮಿ" ಎಂದೆ ಜನಜನಿತವಾದ ಉತ್ತರಾಖಂಡ ರಾಜ್ಯವು ಸಾಕಷ್ಟು ಧಾರ್ಮಿಕ ಹಾಗೂ ಪೌರಾಣಿಕ ಘಟನೆಗಳಿಗೆ ಸಾಕ್ಷಿಯಾಗಿ ನಿಂತಿದೆ. ಈ ರಾಜ್ಯದ ಪ್ರತಿಯೊಂದು ಸ್ಥಳಗಳು ಕೇವಲ ಪ್ರಕೃತಿ ಸೌಂದರ್ಯದಿಂದ ಮಾತ್ರವಲ್ಲದೆ ಧಾರ್ಮಿಕ ತೀರ್ಥ ಕೇಂದ್ರಗಳಾಗಿಯೂ ಸಾಕಷ್ಟು ಪ್ರಸಿದ್ಧಿ ಪಡೆದಿವೆ.

ಹಲವು ಪವಿತ್ರ ನದಿಗಳ ಉಗಮ, ಸಂಗಮ ಹೊಂದಿರುವ ಈ ರಾಜ್ಯದಲ್ಲಿ ರೋಚಕ ಹಿನ್ನಿಲೆಯಿರುವ ಅಥವಾ ಘಟನಾವಳಿಗಳು ಸಂಭವಿಸಿರುವ ಅದೆಷ್ಟೊ ತಾಣಗಳಿವೆ. ಅಂತಹ ಒಂದು ಸ್ಥಳಗಳ ಪೈಕಿ ಒಂದಾಗಿದೆ ತ್ರಿಯುಗಿನಾರಾಯಣನ ದೇವಾಲಯವಿರುವ ತ್ರಿಯುಗಿನಾರಾಯಣ ಹಳ್ಳಿ. ಇದು ಉತ್ತರಾಖಂಡ ರಾಜ್ಯದ ರುದ್ರಪ್ರಯಾಗ್ ಜಿಲ್ಲೆಯಲ್ಲಿದೆ.

ಶಿವ-ಪಾರ್ವತಿಯರು ಮದುವೆಯಾದ ಪುಣ್ಯ ಸ್ಥಳ

ಚಿತ್ರಕೃಪೆ: రహ్మానుద్దీన్

ತ್ರಿಯುಗಿನಾರಾಯಣ ದೇವಾಲಯವು ಹಿಂದೆ ಶಿವ ಹಾಗೂ ಪಾರ್ವತಿಯರ ಮದುವೆ ಕಾರ್ಯ ಸಂಪನ್ನಗೊಂಡ ಸ್ಥಳವಾಗಿದೆಯೆನ್ನಲಾಗುತ್ತದೆ. ದೇವಾಲಯದ ವಿಶೇಷತೆ ಎಂದರೆ ಇಲ್ಲಿ ಶಾಶ್ವತವಾಗಿ ಉರಿಯುತ್ತಿರುವ ಬೆಂಕಿ. ಈ ಅಗ್ನಿಯ ಸಾಕ್ಷಿಯಲ್ಲೆ ಶಿವ ಹಾಗೂ ಪಾರ್ವತಿಯರು ಮದುವೆಯಾಗಿದ್ದು ಮೂರು ಯುಗಗಳಿಂದಲೂ ಒಮ್ಮೆಯೂ ಆರದೆ ಇದು ಇಂದಿಗೂ ಉರಿಯುತ್ತಿರುವುದರಿಂದ ಇದಕ್ಕೆ ತ್ರಿಯುಗಿ ಎಂದೂ ದೇವಾಲಯದಲ್ಲಿ ನಾರಾಯಣ ಪ್ರಷ್ಠಾಪಿತವಾಗಿರುವ ಕಾರಣ ನಾರಾಯಣ ಎಂದೂ ಹೆಸರುಬಂದಿದೆ ಎನ್ನಲಾಗುತ್ತದೆ.

ಶಿವ-ಪಾರ್ವತಿಯರು ಮದುವೆಯಾದ ಪುಣ್ಯ ಸ್ಥಳ

ಚಿತ್ರಕೃಪೆ: Naresh Balakrishnan

ಹೀಗಾಗಿ ಇದನ್ನು ತ್ರಿಯುಗಿನಾರಾಯಣ ದೇವಾಲಯ ಎನ್ನಲಾಗುತ್ತದೆ. ಪಾರ್ವತಿ ದೇವಿಯು ಮೂಲತಃ ಹಿಂದಿನ ಜನ್ಮದಲ್ಲಿ ಶಿವನ ಮಡದಿ ಸತಿಯಾಗಿದ್ದಳು ಹಾಗೂ ಶಿವನಿಗೆ ಅವಮಾನವಾದ ಸಂದರ್ಭವೊಂದರಲ್ಲಿ ಅಗ್ನಿಗೆ ಹಾರಿ ತನ್ನ ಪ್ರಾಣ ತ್ಯಾಗ ಮಾಡಿದ್ದಳು. ನಂತರ ಮತ್ತೆ ಜನ್ಮ ಪಡೆದು ಹಿಮಾವತ್ ರಾಜನ ಮಗಳಾಗಿದ್ದಳು ಹಾಗೂ ಶಿವನನ್ನು ವರಿಸಲು ಬಯಸಿದ್ದಳು. ಅದಕ್ಕಾಗಿ ತನ್ನ ಸೌಂದರ್ಯದಿಂದ ಶಿವನನ್ನು ಎಷ್ಟೊ ಸಲ ಆಕರ್ಷಿಸಲು ಪ್ರಯತ್ನಿಸಿದಳಾರೂ ಸಫಲವಾಗಿರಲಿಲ್ಲ.

ಉತ್ತರಾಖಂಡದ ಪ್ರಮುಖ ಆಕರ್ಷಣೆಗಳು

ಕೊನೆಗೆ ಸತ್ಯವನ್ನರಿತ ಪಾರ್ವತಿ ದೇವಿ ಗೌರಿ ಕುಂಡ ಎಂಬಲ್ಲಿ ಅತಿ ಕಠಿಣವಾದ ತಪಸ್ಸು ಮಾಡಿ ಶಿವನ ಮನಗೆದ್ದಳು. ಇವಳ ಭಕ್ತಿಗೆ, ಪ್ರೀತಿಗೆ ಮನಸೋತ ಶಿವನು ಪಾರ್ವತಿಯಲ್ಲಿ ಮೊದಲ ಬಾರಿಗೆ ತನ್ನ ಪ್ರೇಮ ನಿವೇದನೆಯನ್ನು ಮಾಡಿದ. ಅವನು ತನ್ನ ಪ್ರೇಮ ನಿವೇದನೆ ಮಾಡಿದ ಸ್ಥಳವೆ ಇಂದು ಗುಪ್ತಕಾಶಿ ಎಂಬ ಹೆಸರಿನಿಂದ ಗುರುತಿಸಲ್ಪಡುತ್ತದೆ ಹಾಗೂ ಇದು ಕೇದಾರನಾಥಕ್ಕೆ ಹೋಗುವ ಮಾರ್ಗದಲ್ಲಿ ಮಂದಾಕಿನಿ ನದಿಯ ತಟದ ಮೇಲೆ ಸ್ಥಿತವಿದೆ.

ಶಿವ-ಪಾರ್ವತಿಯರು ಮದುವೆಯಾದ ಪುಣ್ಯ ಸ್ಥಳ

ಮಂದಾಕಿನಿ ನದಿ ಹರಿದಿರುವ ಗುಪ್ತಕಾಶಿ, ಚಿತ್ರಕೃಪೆ: Vvnataraj

ಮುಂದೆ ಶಿವ ಹಾಗೂ ಪಾರ್ವತಿಯರ ಮದುವೆಯನ್ನು ಹಿಮಾವತ್ ರಾಜನ ರಾಜಧಾನಿಯಾಗಿದ್ದ ತ್ರಿಯುಗಿನಾರಾಯಣದಲ್ಲಿ ಅದ್ದೂರಿಯಾಗಿ ನೆರವೇರಿಸಲಾಯಿತು. ಈ ಮದುವೆಯ ಕಾರ್ಯದಲ್ಲಿ ಸ್ವತಃ ವಿಷ್ಣು ಪಾರ್ವತಿಯ ಸಹೋದರನಾಗಿ ಕಾರ್ಯನಿರ್ವಹಿಸಿದರೆ, ಬ್ರಹ್ಮನು ಮದುವೆ ಪುರೋಹಿತನಾಗಿ ಮದುವೆ ಮಾಡಿಸಿದನೆಂದು ಹೇಳಲಾಗುತ್ತದೆ. ಈ ಕಾರ್ಯದಲ್ಲಿ ಎಲ್ಲ ಸಾಧು-ಸಂತರು, ದೇವ-ದೇವತೆಗಳು ಭಾಗವಹಿಸಿದ್ದರೆನ್ನಲಾಗಿದೆ. ಅವರುಗಳು ಸ್ನಾನ ಮಾಡಿದ ಸ್ಥಳವೆ ಇಂದು ಬ್ರಹ್ಮಕುಂಡ, ರುದ್ರಕುಂಡ ಹಾಗೂ ವಿಷ್ಣು ಕುಂಡಗಳಾಗಿವೆ.

ಕರಾರುವಕ್ಕಾಗಿ ಮದುವೆ ನಡೆದ ಸ್ಥಳದಲ್ಲಿಂದು ಒಂದು ಶಿಲೆಯಿದ್ದು ಅದನ್ನು ಬ್ರಹ್ಮಶಿಲೆ ಎಂದು ಕರೆಯಲಾಗುತ್ತದೆ. ಇಂದು ಈ ದೇವಾಲಯಕ್ಕೆ ಭೇಟಿ ನೀಡುವವರು ಅಖಂಡ ಧುನಿ ಅಂದರೆ ಯಾವಾಗಲೂ ಉರಿಯುತ್ತಿರುವ ಅಗ್ನಿಗೆ ಒಣ ಕಟ್ಟಿಗೆಗಳನ್ನು ಅರ್ಪಿಸುತ್ತಾರೆ ಹಾಗೂ ಅದರ ಬೂಧಿಯನ್ನು ಪ್ರಸಾದವಾಗಿ ಸ್ವೀಕರಿಸುತ್ತಾರೆ. ಅಲ್ಲದೆ ಇಲ್ಲಿಂದ ಐದು ಕಿ.ಮೀ ದೂರದಲ್ಲಿರುವ ಪಾರ್ವತಿ ತಪಗೈದಿದ್ದ ಗೌರಿಕುಂಡಕ್ಕೂ ಭೇಟಿ ನೀಡುತ್ತಾರೆ.

ಶಿವ-ಪಾರ್ವತಿಯರು ಮದುವೆಯಾದ ಪುಣ್ಯ ಸ್ಥಳ

ಹಿಮದಿಂದ ಆವೃತವಾಗಿರುವ ಗೌರಿಕುಂಡ, ಚಿತ್ರಕೃಪೆ: ccdoh1

ಇಲ್ಲಿನ ಮೂರು ಕುಂಡಗಳಿಗೆ ದೇವಾಲಯದಲ್ಲಿರುವ ನೀರಿನ ಮೂಲವೊಂದು ಸದಾ ನೀರುಣಿಸುತ್ತದೆ ಹಾಗೂ ಇದನ್ನು ಸರಸ್ವತಿ ಕುಂಡ ಎಂದು ಕರೆಯಲಾಗಿದೆ. ಈ ಸರಸ್ವತಿಕುಂಡವು ವಿಷ್ಣುವಿನ ನಾಭಿಯಿಂದ ಜನ್ಮಿಸಿದ್ದೆನ್ನಲಗಿದ್ದು ಇಲ್ಲಿಗೆ ಭೇಟಿ ನೀಡುವ ದಂಪತಿಗಳಿಗೆ ಮಕ್ಕಳಿಲ್ಲದ ಸಂದರ್ಭದಲ್ಲಿ ಸಂತಾನ ಭಾಗ್ಯ ಲಭಿಸುತ್ತದೆ ಹಾಗೂ ಶಿವ-ಪಾರ್ವತಿಯರ ಮದುವೆ ನಡೆದ ಸ್ಥಳ ಇದಾಗಿದ್ದರಿಂದ ದಂಪತಿಗಳ ಜೀವನ ಸದಾ ಸುಖಮಯವಾಗಿರುತ್ತದೆ ಎಂದೂ ಸಹ ನಂಬಲಾಗುತ್ತದೆ.

ಶಿವ-ಪಾರ್ವತಿಯರು ಮದುವೆಯಾದ ಪುಣ್ಯ ಸ್ಥಳ

ಚಿತ್ರಕೃಪೆ: Naresh Balakrishnan

ತ್ರಿಯುಗಿನಾರಾಯಣ ದೇವಾಲಯವನ್ನು ಸೋನಪ್ರಯಾಗ್ ನಿಂದ ಚಾರಣ ಮಾಡುತ್ತ ಇಲ್ಲವೆ ರಸ್ತೆಯ ಮೂಲಕವಾಗಿ ತಲುಪಬಹುದಾಗಿದೆ. ತ್ರಿಯುಗಿನಾರಾಯಣ ಸೋನಪ್ರಯಾಗ್ ನಿಂದ ರಸ್ತೆಯ ಮೂಲಕ 12 ಕಿ.ಮೀ ದೂರವಿದೆ. ಇನ್ನೂ ಸೋನಪ್ರಯಾಗ್ ಅನ್ನು ದೆಹ್ರಾಡೂನ್ ಹಾಗೂ ರಿಶಿಕೇಶಗಳಿಂದ ರಸ್ತೆಯ ಮಾರ್ಗವಾಗಿ ತಲುಪಬಹುದು. ಸೋನಪ್ರಯಾಗ್ ನಿಂದ ದೆಹ್ರಾಡೂನ್ 251 ಕಿ.ಮೀ ದೂರವಿದ್ದರೆ, ರಿಶಿಕೇಶ್ ರೈಲು ನಿಲ್ದಾಣವು 212 ಕಿ.ಮೀ ದೂರವಿದೆ. ನಿಮಗೂ ಈ ತೀರ್ಥಕ್ಷೇತ್ರಕ್ಕೆ ಹೋಗುವ ಬಯಕೆಯಿದ್ದಲ್ಲಿ ಇಂದೆ ಯೋಜನೆ ಪ್ರಾರಂಭಿಸಿ, ಏಕೆಂದರೆ ಅಕ್ಟೋಬರ್ ನಿಂದ ಹಿಡಿದು ಮಾರ್ಚ್ ಮಧ್ಯದ ಸಮಯ ಇಲ್ಲಿಗೆ ಪ್ರಯಾಣಿಸಲು ಪ್ರಶಸ್ತ.

ರಿಶಿಕೇಶ್ ತಲುಪುವ ಬಗೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X