ದೇವಾಲಯಗಳ ಗ್ರಾಮ ತಿರುಕಾರುಕಾವೂರ್

ತಮಿಳುನಾಡು ರಾಜ್ಯದ ತಂಜಾವೂರ್ ಜಿಲ್ಲೆಯ ತಿರುಕಾರುಕಾವೂರ್ ಒಂದು ಸಣ್ಣ ಹಳ್ಳಿ. ಇದು ತಂಜಾವೂರ್ ನಿಂದ 20 ಕಿಲೋಮೀಟರ್ ದೂರದಲ್ಲಿದೆ ಮತ್ತು ಕುಂಭಕೋಣಮ್ ನಿಂದ 12 ಕಿಲೋಮೀಟರ್ ದೂರವಿದೆ. ಪ್ರವಾಸ ಪ್ರಿಯರಿಗಂತು ಸುತ್ತಾಡಲು ಅನೇಕ ಪ್ರವಾಸಿಸ್ಥಳಗಳು ಈ ಗ್ರಾಮದ ಸುತ್ತಮುತ್ತ ಉಂಟು. ಇದೊಂದು ಸಣ್ಣ ಹಳ್ಳಿಯಾದರೂ ಒಂದು ದೊಡ್ಡ ದೇವಸ್ಥಾನವನ್ನು ಇಲ್ಲಿ ಕಾಣಬಹುದು. ಇದರ ಹೆಸರು "ಅರುಳ್ಮಿಗು ಮುಲ್ಲೈ ವನ ನಾಥರ್ ಕೋಯಿಲ್" ಎಂದು. ಇದನ್ನು "ಗರ್ಭರಕ್ಷಾಂಬಿಕೈ ಕೋಯಿಲ್" ಎಂದೂ ಕರೆಯುತ್ತಾರೆ. ಇವಳು ತಾಯಿ ಪಾರ್ವತಿ ದೇವಿಯ ಒಂದು ಅವತಾರವೆಂದು ಎನ್ನುತ್ತಾರೆ. ಮಕ್ಕಳಿಲ್ಲದ ದಂಪತಿಗಳಿಗೆ ವರಕೊಡುವ ದಿವ್ಯದೇವತೆಯಾಗಿ ಕಂಗೊಳಿಸುತ್ತಿದ್ದಾಳೆ.

ಪಾರ್ವತಿ ದೇವಿಯ ಆಶಿರ್ವಾದದಿಂದ ಪವಿತ್ರವಾಗಿರುವ ಈ ಗ್ರಾಮವು ಭೂಮಾತೆಯ ಕೃಪಾ ಕಟಾಕ್ಷಕ್ಕೂ ಪಾತ್ರವಾಗಿದೆ ಎಂದೆ ಹೇಳಬಹುದು. ಗ್ರಾಮದ ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯ ವರ್ಣಾತೀತವಾಗಿದ್ದು, ಒಂದು ದಿವ್ಯ  ಸನ್ನಿಧಾನವನ್ನು ಪಾರ್ವತೀದೇವಿ ಸೃಷ್ಟಿಸಿದ್ದಾಳೆ ಎಂದರೆ ತಪ್ಪಾಗಲಾರದು. ಈ ಶಾಂತ ವಾತಾವರಣ ನಗರದಿಂದ ದೂರವಾಗಿದ್ದು, ಜನಗಳನ್ನು ಆಕರ್ಷಿಸುವಂತಿದೆ. ಈ ಸ್ಥಳವನ್ನು ರಸ್ತೆಯ ಮುಖಾಂತರ ತಂಜಾವೂರ್ ಮತ್ತು ಕುಂಭಕೋಣಂ ಮಾರ್ಗವಾಗಿ ತಲುಪಬಹುದು. ಇಲ್ಲಿಗೆ ಚಳಿಗಾಲದಲ್ಲಿ ಬಂದರೆ ಒಳ್ಳೆಯದು. ಬೇಸಿಗೆಯಲ್ಲಿ ಬಹಳ ಬಿಸಿಲಿರುತ್ತದೆ.

ಅರುಳ್ಮಿಗು ಮುಲ್ಲೈ ವನ ನಾಥರ್ ಕೋಯಿಲ್

ಕಾವೇರಿಯ ಒಂದು ಶಾಖೆಯಾದ ವೆಟ್ಟಾರ್ ನದಿ ತೀರದಲ್ಲಿರುವ ಈ ದೇವಸ್ಥಾನವು ಗರ್ಭರಕ್ಷಾಂಬಿಕೈ ದೇವಸ್ಥಾನ ಎಂದೇ ಪ್ರಸಿದ್ಧಿಯಾಗಿದೆ. ಈ ದೇವತೆ ಗರ್ಭರಕ್ಷಾದೇವತೆಯಾಗಿದ್ದು ಗರ್ಭಿಣಿ ಮತ್ತು ಮಗುವಿನ ರಕ್ಷಕ ದೇವತೆಯಾಗಿದ್ದಾಳೆ. ಹಾಗು ಸಂತಾನ ವರನೀಡುವ ದೇವರೆಂದೇ ಖ್ಯಾತಿ ಪಡೆದಿದೆ. ಇಲ್ಲಿನ ಮೂಲದೇವರು ಶಿವನಾಗಿದ್ದು ಮುಲ್ಲೈವನನಾಥರ್ ಎಂದು ಕರೆಯಲ್ಪಡುತ್ತಾರೆ. ಅಂದರೆ ಮಲ್ಲಿಗೆ ಕಾಡಿನ ದೇವರು ಎಂದರ್ಥ ಬರುತ್ತದೆ.

ಈ ದೇವಸ್ಥಾನವು ಬಹಳ ದೊಡ್ಡದಾಗಿದ್ದು ಒಂದು ಎಕರೆಯಷ್ಟು ವಿಸ್ತೀರ್ಣದಲ್ಲಿ ವ್ಯಾಪಿಸಿದೆ. ದೇವಸ್ಥಾನದ ದ್ವಾರವು ಆಕರ್ಷಕವಾಗಿದ್ದು, ಭವ್ಯ ಗೋಪುರವನ್ನೊಳಗೊಂಡಿದೆ. ದೇಗುಲದ ಎದುರಿಗೆ ಪುಷ್ಕರಣಿಯನ್ನು ಕಾಣಬಹುದು. ದೇವಸ್ಥಾನದ ಆವರಣದ ಗೋಡೆಯ ಮೇಲೆ ಋಷಿ ನಿರ್ಧುರ ಹಾಗು ಅವನ ಪತ್ನಿ ವೇದಿಕಾಳ ಕಥೆಯನ್ನು ಹೇಳುವ ಕೆತ್ತನೆಯನ್ನು ಕಾಣಬಹುದು.

ಅದೇನೆಂದರೆ ಪುರಾಣಕಾಲದ ಋಷಿಮುನಿ ನಿರ್ಧುರ ಮತ್ತು ಪತ್ನಿ ವೇದಿಕಾ, ಇಬ್ಬರೂ ಪಾರ್ವತೀದೇವಿಯಿಂದ ಶಾಪವಿಮುಕ್ತರಾದರೆಂದು ತಿಳಿಯುತ್ತದೆ (ಊರ್ಧ್ವಪಾದವೆಂಬ ಮುನಿಯಿಂದ ಶಾಪ ಪಡೆದಿರುತ್ತಾರೆ). ಭಾರತದ ಎಲ್ಲೆಡೆಯಿಂದ ಭಕ್ತರು ಇಲ್ಲಿಗೆ ಬರುತ್ತಾರೆ. ಸಾಮಾನ್ಯವಾಗಿ ವಾರಾಂತ್ಯಗಳಲ್ಲಿ ಇದು  ಜನಸಂದಣಿಯಿಂದ ಕೂಡಿರುತ್ತದೆ.

Please Wait while comments are loading...