ಮುರುದ್ ಜಂಜೀರಾ - ಕೋಟೆ ಪಟ್ಟಣ

ಮುರುದ್ ಜಂಜೀರಾ ಎಂಬುದು ಮಹಾರಾಷ್ಟ್ರದ ರಾಯ್ಗಡ್ ಜಿಲ್ಲೆಯಲ್ಲಿರುವ ಮುರುದ್ ಎಂಬ ಕರಾವಳಿ ಹಳ್ಳಿಯಲ್ಲಿರುವ ಒಂದು ಪ್ರಸಿದ್ಧ ಕೋಟೆಯಾಗಿದೆ. ಒಂದಾನೊಂದು ಕಾಲದಲ್ಲಿ ಸಿದ್ಧಿ ಸಾಮ್ರಾಜ್ಯದವರ ಆಳ್ವಿಕೆಗೆ ಒಳಪಟ್ಟಿದ್ದ ಈ ಕೋಟೆಯು ಮರಾಠರ, ಪೋರ್ಚುಗೀಸರ, ಡಚ್ಚರ ಮತ್ತು ಇಂಗ್ಲೀಷ್ ಈಸ್ಟ್ ಇಂಡಿಯಾ ಕಂಪೆನಿಯವರ ದಾಳಿಗಳನ್ನು ತಡೆದುಕೊಂಡು ಅಜೇಯವಾಗಿ ಮತ್ತು ಒಂದು ಚೂರು ಮಂಕಾಗದಂತೆ ಇಂದಿಗೂ ಉಳಿದುಕೊಂಡಿರುವ ಏಕೈಕ ಕೋಟೆಯಾಗಿದೆ. ಈ ಕೋಟೆಯ ಸಮಕಾಲೀನ ಕೋಟೆಗಳೆಲ್ಲವು ಈಗಾಗಲೆ ಮಣ್ಣಲ್ಲಿ ಮಣ್ಣಾಗಿ ಹೋಗಿವೆ.

ಜಂಜೀರಾ ಎಂಬ ಹೆಸರು ಯಾವುದೇ ಭಾರತೀಯ ಭಾಷೆಯ ಮೂಲದಿಂದ ಬಂದಿಲ್ಲ. ಇದರ ಮೂಲವು ಅರೇಬಿಕ್ ಭಾಷೆಯಲ್ಲಿದೆ. ಅರೇಬಿಯಾ ಭಾಷೆಯಲ್ಲಿ ಇದರರ್ಥ 'ದ್ವೀಪ' ಎಂದಾಗುತ್ತದೆ. ಒಂದಾನೊಂದು ಕಾಲದಲ್ಲಿ ಮುರುದ್ ಅನ್ನು ಹಬ್ಸನ್ ಅಥವಾ ಹಬ್ಷಿ ಎಂದು ಕರೆಯಲಾಗುತ್ತಿತ್ತು. ಮರಾಠಿ ಭಾಷೆಯಲ್ಲಿ ಇದರರ್ಥ ಅಬಿಶ್ಶಿನಿಯನ್ ದೇಶಕ್ಕೆ ಸೇರಿದವನು ಎಂದಾಗುತ್ತದೆ. ಮುರುದ್ ಎಂಬ ಪದವು ಕೊಂಕಣಿ ಪದವಾದ ಮೊರೊಡ್ ಎಂಬ ಪದದೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ. ಹಾಗಾಗಿ ಈ ಕೋಟೆಯು ಮೊರೊಡ್ ಮತ್ತು ಜಜೀರಾ ಕೊಂಕಣಿ ಮತ್ತು ಅರೇಬಿಕ್ ಪದಗಳ ಸಮಿಶ್ರಣದಿಂದಾಗಿ ಆಗಿದೆ. ಮುಂದೆ ಕಾಲಕ್ರಮೇಣ ಇದು ಮುರುದ್ ಜಂಜೀರಾ ಎಂದಾಯಿತು.

ಕುತೂಹಲಕಾರಿ ಅಂಶವೆಂದರೆ ಬಹುತೇಕ ಮಂದಿ ಈ ಕೋಟೆಯನ್ನು ಜಲ್ ಜೀರ ಎಂದು ಸಹ ಕರೆಯುತ್ತಾರೆ. ಕಾರಣ ಈ ಸ್ಮಾರಕವು ತನ್ನ ಸುತ್ತಲು ಅರಬ್ಬೀ ಸಮುದ್ರದ ನೀರಿನಿಂದ ಆವೃತವಾಗಿದೆ.

ಮುರುದ್ ಜಂಜೀರಾದ ಇತಿಹಾಸ

12 ನೇ ಶತಮಾನದಷ್ಟು ಹಿಂದೆ ಅಂದರೆ ಸಿದ್ಧಿ ಮನೆತನದ ಅರಸರು ಈ ಕೋಟೆಯನ್ನು ನಿರ್ಮಿಸಿದ ಕಾಲದಲ್ಲಿ ಮುರುದ್ ಪಟ್ಟಣವು ಜಂಜೀರ ಸಿದ್ಧಿಗಳ ರಾಜ್ಯದ ರಾಜಧಾನಿಯಾಗಿತ್ತು. ಈ ಕೋಟೆಯನ್ನು ತಮ್ಮ ಕೈವಶಪಡಿಸಿಕೊಳ್ಳಲು ಹಲವಾರು ದೇಶೀಯ ಮತ್ತು ವಿದೇಶಿಯ ಆಡಳಿತಗಾರರು ಪ್ರಯತ್ನಿಸಿ ಕೈ ಸುಟ್ಟುಕೊಂಡರು. ಅವುಗಳಲ್ಲಿ ಅತ್ಯಂತ ಮಹತ್ವದ ಸೋಲು ಎಂದರೆ ಮರಾಠರದು. ಛತ್ರಪತಿ ಶಿವಾಜಿ ಮಹಾರಾಜನು ಈ ಕೋಟೆಯನ್ನು ತನ್ನ ವಶಪಡಿಸಿಕೊಳ್ಳಲು ಮತ್ತು ಇಲ್ಲಿನ ಸಂಪತ್ತನ್ನು ಸೂರೆ ಮಾಡಲು ಆರು ಬಾರಿ ಪ್ರಯತ್ನಿಸಿದ್ದನು. ಆದರೆ ಅವನ ಪ್ರತಿ ಪ್ರಯತ್ನವು ಪ್ರತಿಸಲ ವಿಫಲವಾಯಿತು.

ಈ ಸ್ಮಾರಕದ ಸುರಕ್ಷತೆಗಾಗಿ ಕೈಗೊಂಡಿರುವ ಕ್ರಮಗಳು ನಿಜಕ್ಕು ಅದ್ಭುತ ಬುದ್ಧಿವಂತಿಕೆಯನ್ನು ಪ್ರತಿಬಿಂಬಿಸುತ್ತದೆ. ಮೂಲತಃ ಇಲ್ಲಿ ಮರದ ಕೋಟೆಯನ್ನು ಮುರುದ್ ಎನ್ನುವ ಸ್ಥಳೀಯ ಮೀನುಗಾರನು ನಿರ್ಮಿಸಿದನು. ಈ ಕೋಟೆಯನ್ನು ಅವರು ಕಡಲ ಮೂಲಕ ನುಸುಳುವ ಕಡಲ್ಗಳ್ಳರಿಂದ ರಕ್ಷಣೆ ಪಡೆಯುವ ಸಲುವಾಗಿ ನಿರ್ಮಿಸಿದರು. ನಂತರ ಇದನ್ನು  ಅಹಮದ್ ನಗರದ ನಿಜಾಮ್ ಷಾಹಿ ಮನೆತನದ ಪೀರ್ ಖಾನ್ ವಶಪಡಿಸಿಕೊಂಡನು. ನಂತರ ಅವರು ಇದನ್ನು ಶತ್ರುಗಳಿಂದ ಅಭೇದ್ಯವಾಗುವಂತೆ ಪುನರ್ ನಿರ್ಮಾಣ ಮಾಡಿದರು. ಮಲಿಕ್ ಅಂಬರ್ ಎಂಬ ಅಹಮದ್ ನಗರದ ರಾಜ ಪ್ರತಿನಿಧಿಯು ಈ ಕೋಟೆಯನ್ನು ಪುನರ್ರಚನೆ ಮತ್ತು ನವೀಕರಣ ಮಾಡಿದನು. ಈ ಕೋಟೆಯ ಖ್ಯಾತಿಯೆಲ್ಲವು ನೈಜವಾಗಿ ಈತನಿಗೆ ಸಲ್ಲಬೇಕು.

ನೀವು ಇಲ್ಲಿದ್ದಾಗ ಮರೆಯದೆ ನೋಡಬೇಕಾದವು ಏನು

ಮುರುದ್ ಜಂಜೀರಾ ಕೋಟೆಯು ಸದೃಢವಾದ ಕೋಟೆಯಾಗಿದ್ದು ಸಮುದ್ರದ ನೀರಿನಿಂದ ಆವೃತವಾಗಿದ್ದರೂ ಗಟ್ಟಿ ಮುಟ್ಟಾಗಿದೆ. ಇದಕ್ಕೆ ರಾಜಪುರಿ ಬಂದರಿನ ಮೂಲಕವು ಸಹ ತಲುಪಬಹುದು. ಈ ಕೋಟೆಯು ಹಲವಾರು ಫಿರಂಗಿಗಳನ್ನು ಮತ್ತು ಕಂದಕಗಳನ್ನು ಹೊಂದಿದ್ದು, ಇಂದಿಗೂ ಅವು ಸುಸ್ಥಿತಿಯಲ್ಲಿವೆ. ಈ ಕೋಟೆಯ ಆವರಣದಲ್ಲಿ ಒಂದು ಮಸೀದಿ, ಅಧಿಕಾರಿಗಳ ವಸತಿ ಗೃಹಗಳು, ಹಲವಾರು ಅರಮನೆಗಳು ಮತ್ತು ದೊಡ್ಡದಾದ ನೀರಿನ ಕೆರೆಯನ್ನು ಕಾಣಬಹುದು.

ಬಸ್ಸೇನ್ ದ್ವೀಪದ ಕೋಟೆಯು ಇಲ್ಲಿರುವ ಮತ್ತೊಂದು ಐತಿಹಾಸಿಕ ಸ್ಮಾರಕವಾಗಿದ್ದು, ನೋಡಲೆ ಬೇಕಾದ ಒಂದು ಅದ್ಭುತವಾಗಿದೆ. ಇದರ ಮೇಲಿನಿಂದ ಬಸ್ಸೇನ್ ಬೀಚಿನ ನಿರ್ಮಲ ಪರಿಸರವನ್ನು ನೋಡಿ ಸವಿಯುವುದೇ ಒಂದು ಭಾಗ್ಯ. ಇದರ ಸಮೀಪದಲ್ಲಿರುವ ಪಾಂಚಾಲ ಕೋಟೆಯನ್ನು ಸಹ ನೋಡಬಹುದು.

ಪ್ರಸಿದ್ಧವಾದ ಕೋಟೆಯ ಹೊರತಾಗಿ, ಮುರುದ್ ಪಟ್ಟಣವು ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಒಂದು ರಜಾದಿನ ಕಳೆಯುವ ವಿಹಾರ ತಾಣವಾಗಿ ಸೇವೆಯನ್ನು ಒದಗಿಸುತ್ತದೆ. ಇದರ ಬೀಚ್ ಬೆಳ್ಳಿಯಂತೆ ಬೆಳ್ಳಗಿರುವ ಮರಳಿನಿಂದ ಕೂಡಿದ್ದು, ದಂಡೆಯಲ್ಲಿ ಅಡಿಕೆ ಮತ್ತು ತೆಂಗಿನ ಮರಗಳ ಸಾಲನ್ನು ಹೊಂದಿದ್ದು, ನೋಡುಗರ ಕಣ್ಮನ ಸೆಳೆಯುತ್ತದೆ. ತಿಳಿ ಬಣ್ಣದ ನಿಶ್ಕಲ್ಮಷವಾದ ನೀರು ಸೂರ್ಯನ ಕಿರಣಗಳ ಪ್ರಭಾವದಿಂದಾಗಿ ಹಾಗು ಸುತ್ತಲಿನ ಹಚ್ಚ ಹಸಿರಿನ ಪ್ರಭಾವದಿಂದಾಗಿ ಮಿರಿ ಮಿರಿ ಮಿರುಗತ್ತ ಪ್ರವಾಸಿಗರನ್ನು ತನ್ನತ್ತ ಸೂಜಿಗಲ್ಲಿನಂತೆ ಆಕರ್ಷಿಸುತ್ತಿರುತ್ತದೆ.

ಧಾರ್ಮಿಕ ಆಸಕ್ತರಿಗೆ ಇಲ್ಲಿ ಪ್ರಸಿದ್ಧವಾದ ದತ್ತಾತ್ರೇಯ ದೇವಾಲಯವಿದೆ. ಈ ದೇವಾಲಯದಲ್ಲಿರುವ ಮೂರ್ತಿಯು ಮೂರು ಶಿರಗಳನ್ನು ಹೊಂದಿದ್ದು, ಅನುಪಮ ಸೌಂದರ್ಯದಿಂದ ಕೂಡಿದೆ. ಈ ಮೂರು ಶಿರಗಳು ತ್ರಿಮೂರ್ತಿಗಳಾದ ಬ್ರಹ್ಮ , ವಿಷ್ಣು ಮತ್ತು ಮಹೇಶ್ವರರನ್ನು ಪ್ರತಿನಿಧಿಸುತ್ತದೆ.

ಈ ಸಣ್ಣ ಬೆಸ್ತರ ಹಳ್ಳಿಯು ಅತ್ಯಂತ ಶೀಘ್ರವಾಗಿ ಬೆಳೆಯುತ್ತಿರುವ ಪ್ರವಾಸಿ ಕೇಂದ್ರವಾಗಿ ಗುರುತಿಸಲ್ಪಟ್ಟಿದೆ. ಸೂರ್ಯ, ಬಿಸಿಲು, ಐತಿಹಾಸಿಕ ಕೋಟೆಗಳು ಮತ್ತು ಮುದ ನೀಡುವ ಹವಾಮಾನವು ಪ್ರವಾಸಿಗರಿಗೆ ಇಲ್ಲಿ ಸಂಪೂರ್ಣ ಮನೋರಂಜನೆಯನ್ನು ಒದಗಿಸುತ್ತದೆ. ಇಲ್ಲಿಂದ ಅವರು ಜೀವನದಲ್ಲಿ ಮರೆಯಲಾಗದ ನೆನಪುಗಳನ್ನು ತಮ್ಮೊಂದಿಗೆ ಕೊಂಡೊಯ್ಯುವುದರಲ್ಲಿ ಯಾವುದೇ ಸಂಶಯವಿಲ್ಲ.

Please Wait while comments are loading...