ಕಟಕ್ ಪ್ರವಾಸೋದ್ಯಮ : ಒಂದು ಐತಿಹಾಸಿಕ ನಗರ

ಮುಖಪುಟ » ಸ್ಥಳಗಳು » ಕಟಕ್ » ಮುನ್ನೋಟ

ಒಡಿಶಾ(ಒರಿಸ್ಸಾ)ದ ಪ್ರಸ್ತುತ ರಾಜಧಾನಿಯಾಗಿರುವ ಭುವನೇಶ್ವರ್ ನಿಂದ ಸುಮಾರು 28 ಕಿ.ಮೀ. ದೂರದಲ್ಲಿರುವ ಕಟಕ್ ನಗರ ರಾಜ್ಯದ ಮೊದಲಿನ ರಾಜಧಾನಿಯಾಗಿತ್ತು. ಈ ನಗರವನ್ನು ಒರಿಸ್ಸಾದ ಸಾಂಸ್ಕೃತಿಕ ಮತ್ತು ವಾಣಿಜ್ಯ ರಾಜಧಾನಿ ಎಂದು ಪರಿಗಣಿಸಲಾಗಿದೆ. ರಾಜ್ಯದ ಅತ್ಯಂತ ದೊಡ್ಡ ಹಾಗು ಹಳೆ ನಗರಗಳ ಪಟ್ಟಿಯಲ್ಲಿ ಕಟಕ್ ಸಹ ಒಂದಾಗಿದೆ. ಮಧ್ಯಯುಗದಲ್ಲಿ ಇದನ್ನು ಅಭಿನಬ್ ಬನಾರಸಿ ಕಟಕ್ ಎಂದು ಕರೆಯಲಾಗುತ್ತಿತ್ತು.

ಈ ನಗರ ಫಲವತ್ತಾದ ಮುಖಜ ಭೂಮಿಯ ಮೇಲೆ ಉಪಸ್ಥಿತವಿರುವುದರಿಂದ ಸುಂದರವಾದ ಸ್ಥಳಗಳನ್ನು ಒಳಗೊಂಡಿದೆ. ಇಲ್ಲಿ ಮಹಾನದಿ ಮತ್ತು ಕಥಜೋರಿ ನದಿಗಳು ಹರಿಯುತ್ತವೆ. ಕಟಕ್ ನಗರ ಪ್ರವಾಸಿಗರನ್ನು ಪ್ರಚೋದಿಸುವಂಥ ಸಾಕಷ್ಟು ಆಕರ್ಷಣೆಯ ತಾಣಗಳನ್ನು ಹೊಂದಿದೆ. ಇಲ್ಲಿರುವ ಸ್ಮಾರಕಗಳು ಇತಿಹಾಸದ ಕಥೆಗಳನ್ನು ಹೇಳುತ್ತವಾದರೂ, ಇಲ್ಲಿನ ರೋಮಾಂಚಕ ಸಾಂಸ್ಕೃತಿಕ ಜೀವನ ಪ್ರಸ್ತುತ ಕಾಲದಲ್ಲಿ ತಲ್ಲೀನರಾಗುವಂತೆ ಮಾಡುತ್ತದೆ.

ಕಟಕ್ ಸುತ್ತಲಿನ ಪ್ರವಾಸಿ ತಾಣಗಳು

ಕಟಕ್ ಪ್ರವಾಸೋದ್ಯಮ ಹಲವು ವಿಶಿಷ್ಟ ತಾಣಗಳ ಸಮ್ಮಿಲನವಾಗಿದೆ. ಇಲ್ಲಿ ತೀರ್ಥಕ್ಷೇತ್ರಗಳು, ಸ್ಮಾರಕಗಳು, ಮಂದಿರಗಳು, ಕೋಟೆಗಳು ಮತ್ತು ಬೆಟ್ಟಗುಡ್ಡಗಳಿರುವ ಸುಂದರವಾದ ತಾಣಗಳಿವೆ. ಇಲ್ಲಿರುವ ಅನ್ಸುಪ ಎಂಬ ಸರೋವರ ಮತ್ತೊಂದು ಲೋಕಕ್ಕೆ ಕರೆದೊಯ್ಯುವಂತಹ ನೈಸರ್ಗಿಕ ಸೌಂದರ್ಯವನ್ನು ಹೊಂದಿದೆ. ಭವ್ಯವಾದ ಧಾಬಳಶ್ವರ ಬೀಚ್ ಮತ್ತು ಧಾಬಳೇಶ್ವರ ಮಂದಿರ ಅವಲೋಕಿಸುವಂಥವು. ರತ್ನಗಿರಿ, ಲಲಿತಗಿರಿ ಮತ್ತು ಉದಯಗಿರಿ ಬೆಟ್ಟಗಳ ಸೌಂದರ್ಯ ಕಣ್ಮನ ಸೆಳೆಯುವಂಥವು.

ಬಂಕಿಯಲ್ಲಿರುವ ಚಾರ್ ಚಿಕ್ ಮಂದಿರ ಹಿಂದೂ ಯಾತ್ರಾರ್ಥಿಗಳಿಗೆ ಮಹತ್ವವುಳ್ಳದ್ದಾಗಿದೆ. ಭಟ್ಟಾರಿಕ ಮಂದಿರವನ್ನು ತಾಯಿ ಭಟ್ಟಾರಿಕಾಗೆ ಸಮರ್ಪಿಸಲಾಗಿದೆ. ಇಲ್ಲಿಗೆ ಪ್ರವಾಸಿಗರು ಹಾಗು ಯಾತ್ರಾರ್ಥಿಗಳು ಭೇಟಿ ನೀಡುತ್ತಾರೆ. ಮಹಾದೇವನಾದ ಶಿವನ ಅಷ್ಟಪೀಠಗಳಿಗೆ ಚೌಡಾರ್ ಪ್ರಸಿದ್ಧಿ ಹೊಂದಿದೆ. ಬೌದ್ಧ ಧರ್ಮದ ಅಧ್ಯಯನಕ್ಕೆ ಪ್ರಸಿದ್ಧ ನರಜ್ ಪುರಾತನ ಕೇಂದ್ರವಾಗಿದೆ. ಪ್ರವಾಸಿಗರು ಚಂಡಿ ಮಾತೆಗೆ ಸಮರ್ಪಿಸಿರುವ ಸುಪ್ರಸಿದ್ಧ ಚಂಡಿ ಮಂದಿರಕ್ಕೆ ಭೇಟಿ ಕೊಡಬಹುದು.

ಸಟಕೋಸಿಯಾ ವನ್ಯಜೀವಿಧಾಮ ಅನೇಕ ವಿವಿಧ ಜಾತಿಯ ವನ್ಯಮೃಗಗಳ ದರ್ಶನ ಮಾಡಿಸುತ್ತದೆ. ಕ್ರೀಡಾಪ್ರಿಯರಿಗೆ ಬಾರಾಬತಿ ಸ್ಟೇಡಿಯಂ ಆಕರ್ಷಣೆಯ ಕೇಂದ್ರವಾಗಿದೆ. ನಮ್ಮ ದೇಶದ ಸ್ವಾತಂತ್ರ್ಯದ ಬಗ್ಗೆ ಒಂದು ಕ್ಷಣಿಕ ನೋಟವನ್ನು ನೋಡಲು ನೇತಾಜಿ ಸಂಗ್ರಹಾಲಯ ಮತ್ತು ಸ್ವಾತಂತ್ರ್ಯ ಚಳವಳಿಗಾರರ ಸ್ಮಾರಕಗಳಿಗೆ ಭೇಟಿ ನೀಡಬಹುದು.

ಕಟಕ್ : ರಂಗುರಂಗಿನ ಪ್ರವಾಸ

ಕಟಕ್ ನಗರದ ಜನರು ಜೀವನವನ್ನು ಆಚರಿಸುವ ರೀತಿಯಲ್ಲಿಯೇ ನಗರದ ಸೊಬಗು ಅಡಗಿದೆ. ಎಲ್ಲಾ ಧರ್ಮಗಳ ಎಲ್ಲಾ ಹಬ್ಬಗಳನ್ನು ಸಮಾನವಾದ ಹುರುಪಿನಿಂದ ಆಚರಿಸಲಾಗುತ್ತದೆ. ದಸರಾ, ಗಣೇಶ ಚತುರ್ಥಿ, ಕಾಳಿ ಪೂಜಾ, ವಸಂತ ಪಂಚಮಿ, ಕಾರ್ತಿಕೇಶ್ವರ ಪೂಜಾ, ಕ್ರಿಸ್ಮಸ್, ಈದ್, ಗುಡ್ ಫ್ರೈಡೆ, ಹೋಳಿ, ದೀಪಾವಳಿ, ರಥಯಾತ್ರಾದಂತಹ ಹಬ್ಬಗಳ ಆಚರಣೆಯಿಂದ ಕಟಕ್ ನ ಸಾಂಸ್ಕೃತಿಕ ಜೀವನವು ವರ್ಷವಿಡೀ ರೋಮಾಂಚನಕಾರಿಯಾಗಿರುತ್ತದೆ.

ಏಷ್ಯಾದಲ್ಲೇ ಎರಡನೇ ಸ್ಥಾನದಲ್ಲಿರುವ 'ಬಾಲಿಯಾತ್ರಾ' ಎಂಬ ವ್ಯಾಪಾರೋತ್ಸವವನ್ನು ಕಟಕ್ ನಲ್ಲಿ ಪ್ರತಿವರ್ಷ ಆಯೋಜಿಸಲಾಗುತ್ತದೆ. ಇದು ನವೆಂಬರ್ ತಿಂಗಳಲ್ಲಿ ಜರುಗುತ್ತದೆ. ಸಾಂಸ್ಕೃತಿಕ ಆಚರಣೆಗಳ ಪಟ್ಟಿಗೆ ಗಾಳಿಪಟ ಹಾರಿಸುವ ಹಬ್ಬವು ಮತ್ತೊಂದು ಸೇರ್ಪಡೆ. ವಾಣಿಜ್ಯ ಕ್ಷೇತ್ರದಲ್ಲೂ ಮುಂದಿರುವ ಈ ಕಟಕ್ ನಗರದಲ್ಲಿ ಪ್ರವಾಸಿಗರು ಸಿಲ್ಕ್ ಮತ್ತು ಕಾಟನ್ ಬಟ್ಟೆಗಳನ್ನು ಖರೀದಿ ಮಾಡಬಹುದು. ಒಟ್ಟಾರೆ ಶಾಪಿಂಗ್ ಇಷ್ಟಪಡುವವರಿಗೆ ಇದು ಪರ್ಫೆಕ್ಟ್ ಪ್ಲೇಸ್.

ಕಟಕ್ ಹವಾಮಾನ

ಕಟಕ್ ನಗರ ಉಷ್ಣವಲಯದ ಹವಾಮಾನ ಹೊಂದಿದೆ. ಇತರ ಪ್ರದೇಶಗಳಂತೆ ಇಲ್ಲಿಯೂ ಬೇಸಿಗೆಯಲ್ಲಿ ಸುಡುವ ಬಿಸಿಲು ಮತ್ತು ಚಳಿಗಾಲದಲ್ಲಿ ಕೊರೆಯುವ ಚಳಿ ಇರುತ್ತದೆ.

ಕಟಕ್ ತಲುಪುವ ಬಗೆ

ಕಟಕ್ ನಗರಕ್ಕೆ ಉತ್ತಮ ಸಾರಿಗೆ ವ್ಯವಸ್ಥೆ ಇದೆ. ದೊಡ್ಡ ನಗರಗಳಾದ ಚೆನ್ನೈ ಮತ್ತು ಕೋಲ್ಕತಾಗೆ ರಾಷ್ಟ್ರೀಯ ಹೆದ್ದಾರಿ ಮೂಲಕ ಸಂಪರ್ಕವಿದೆ.

Please Wait while comments are loading...