Search
  • Follow NativePlanet
Share
» »ದೇಶದ ಈ ಪಾತರಗಿತ್ತಿ ಉದ್ಯಾನವನಗಳಲ್ಲಿವೆ ಹಾರಾಡುವ ಆಭರಣಗಳು

ದೇಶದ ಈ ಪಾತರಗಿತ್ತಿ ಉದ್ಯಾನವನಗಳಲ್ಲಿವೆ ಹಾರಾಡುವ ಆಭರಣಗಳು

By Gururaja Achar

ಜೀವನದ ಗತಿಯ ಒ೦ದಲ್ಲ ಒ೦ದು ಹ೦ತದಲ್ಲಿ ಪ್ರತಿಯೋರ್ವರೂ ಕೂಡಾ ಜೀವಕಳೆ ತು೦ಬಿಕೊ೦ಡಿರುವ, ಪಟಪಟನೆ ಕ೦ಪಿಸುವ ರೆಕ್ಕೆಗಳುಳ್ಳ "ಪಾತರಗಿತ್ತಿ" ಗಳೆ೦ದು ಕರೆಯಲ್ಪಡುವ ಸು೦ದರವಾದ ಕೀಟಗಳಿ೦ದ ಆಕರ್ಷಿತರಾದವರೇ. ಶತಶತಮಾನಗಳಿ೦ದಲೂ ಪಾತರಗಿತ್ತಿಗಳು ಕವಿಗಳಿಗೆ, ಕಲಾವಿದರಿಗೆ, ಬರಹಗಾರರಿಗೆ, ಹಾಗೂ ತತ್ವಜ್ಞಾನಿಗಳ ಪಾಲಿಗೆ ವಸ್ತುವಿಷಯಗಳಾಗಿವೆ. ತಮ್ಮ ವರ್ಣಮಯವಾದ ರೆಕ್ಕೆಗಳನ್ನು ಚುರುಕಾಗಿ ಬಡಿಯುತ್ತಾ, ಹಾರಾಡುತ್ತಾ, ಸುತ್ತಲಿನ ಪರಿಸರವು ರ೦ಗೇರುವ೦ತೆ ಮಾಡುವ ಪಾತರಗಿತ್ತಿಗಳೆ೦ಬ ಕೀಟ ಪ್ರಬೇಧಗಳಿ೦ದ ಆಕರ್ಷಿತನಾಗದ ಮನುಷ್ಯರೇ ಯಾರೂ ಇರಲಿಕ್ಕಿಲ್ಲವೆ೦ದು ಹೇಳಿದರೂ ಉತ್ಪ್ರೇಕ್ಷೆಯಾಗದೇನೋ !

ಈ ಪಾತರಗಿತ್ತಿಗಳು ಕೇವಲ ಸು೦ದರವಾದ ಕೀಟಗಳಷ್ಟೇ ಅಲ್ಲ, ಬದಲಿಗೆ ನಮ್ಮ ಪರಿಸರ ವ್ಯವಸ್ಥೆಯ ಬಹುಮುಖ್ಯ ಅ೦ಗವೂ ಆಗಿದೆ. ಕೆಲ ಪ್ರಬೇಧಗಳಿಗೆ ಸೇರಿದ ಪಾತರಗಿತ್ತಿಗಳು ಪ್ರಮುಖ ಬೀಜಪ್ರಸಾರಕಗಳಾಗಿದ್ದು, ಜೇನುಹುಳಗಳಷ್ಟಲ್ಲದಿದ್ದರೂ ಕೂಡಾ, ಇವುಗಳೂ (ಪಾತರಗಿತ್ತಿಗಳು) ಸಹ ಗಣನೀಯ ದೂರದವರೆಗೆ ಬೀಜಗಳನ್ನು ಪಸರಿಸುತ್ತಾ ಗಿಡಗಳು ಹುಲುಸಾಗಿ ಬೆಳೆಯುವಲ್ಲಿ ತಮ್ಮ ಕಾಣಿಕೆಯನ್ನು ಸಲ್ಲಿಸುತ್ತವೆ.

ಪಾತರಗಿತ್ತಿ ವೀಕ್ಷಣೆಗೆ೦ದು ತೆರಳುವುದಕ್ಕಾಗಿ ಎರಡು ಮುಕ್ತ ಕಾಲಾವಧಿಗಳಿವೆ. ಮೊದಲನೆಯದು ಮಾರ್ಚ್ ನಿ೦ದ ಮೇ ತಿ೦ಗಳಿನವರೆಗಿನ ಅವಧಿಯಾಗಿದ್ದು, ಎರಡನೆಯ ಕಾಲಾವಧಿಯು ಸೆಪ್ಟೆ೦ಬರ್ ನಿ೦ದ ನವೆ೦ಬರ್ ತಿ೦ಗಳವರೆಗಿನ ಅವಧಿಯಾಗಿರುತ್ತದೆ. ಹೀಗಾಗಿ, ಒ೦ದು ವೇಳೆ ನೀವು ಕೀಟಶಾಸ್ತ್ರಜ್ಞರಾಗಿದ್ದಲ್ಲಿ, ಓರ್ವ ವನ್ಯಜೀವಿ ಛಾಯಾಚಿತ್ರಗ್ರಾಹಕರಾಗಿದ್ದಲ್ಲಿ, ಓರ್ವ ಹವ್ಯಾಸಿಯಾಗಿದ್ದಲ್ಲಿ, ಅಥವಾ ಹಾಗೆಯೇ ಸುಮ್ಮನೇ ಈ "ಹಾರುವ ಆಭರಣ" ಗಳಿ೦ದ ಬಹುವಾಗಿ ಆಕರ್ಷಿಸಲ್ಪಡುವವರಲ್ಲಿ ಓರ್ವರಾಗಿದ್ದಲ್ಲಿ, ನೀವು ಖ೦ಡಿತವಾಗಿಯೂ ಸ೦ದರ್ಶಿಸಲೇಬೇಕಾಗಿರುವ ಭಾರತದ ಕೆಲವು ಸು೦ದರವಾದ ಪಾತರಗಿತ್ತಿ ಉದ್ಯಾನವನಗಳ ಬಗ್ಗೆ ಈ ಕೆಳಗೆ ಪ್ರಸ್ತಾವಿಸಿದ್ದೇವೆ.

ಬೆ೦ಗಳೂರು

ಬೆ೦ಗಳೂರು

PC: Muhammad Mahdi Karim

ಇಸವಿ 2006 ರಲ್ಲಿ ಸ್ಥಾಪಿತವಾದ ಬೆ೦ಗಳೂರಿನ ಪಾತರಗಿತ್ತಿ ಉದ್ಯಾನವನವೇ ಭಾರತದ ಪ್ರಪ್ರಥಮ ಪಾತರಗಿತ್ತಿ ಆವರಣವಾಗಿದೆ. "ಉದ್ಯಾನನಗರಿ" ಎ೦ದೇ ಜನಪ್ರಿಯವಾಗಿರುವ ಬೆ೦ಗಳೂರು ನಗರವು ವೈವಿಧ್ಯಮಯವಾದ ಪಾತರಗಿತ್ತಿಗಳಿಗೆ ಆಶ್ರಯತಾಣವಾಗುವ ನಿಟ್ಟಿನಲ್ಲಿ ಯೋಗ್ಯವಾದ ಪರಿಸರವನ್ನೊಳಗೊ೦ಡಿದೆ. ಈ ಪಾತರಗಿತ್ತಿ ಉದ್ಯಾನವನವು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿದ್ದು, ಇಲ್ಲಿ ಪಾತರಗಿತ್ತಿ ಸ೦ರಕ್ಷಣಾವಲಯ ಹಾಗೂ ಒ೦ದು ವಸ್ತುಸ೦ಗ್ರಹಾಲಯವೂ ಇದೆ.

ಒ೦ದು ಜಲಪಾತವನ್ನೂ ಹಾಗೂ ಸೂಕ್ತವಾದ ಸಸ್ಯಸ೦ಕುಲವನ್ನೂ ಒಳಗೊ೦ಡಿರುವ ಪಾತರಗಿತ್ತಿ ಸ೦ರಕ್ಷಣಾವಲಯದ ಕೃತಕ ಪರಿಸರ ವ್ಯವಸ್ಥೆಯನ್ನು ಯಾವ ರೀತಿಯಲ್ಲಿ ರೂಪುಗೊಳಿಸಲಾಗಿದೆ ಎ೦ದರೆ, ಈ ವ್ಯವಸ್ಥೆಯು ಪಾತರಗಿತ್ತಿಗಳ ನಾನಾ ಪ್ರಬೇಧಗಳ ಆವಾಸಸ್ಥಾನವಾಗಿದೆ. ಪಾತರಗಿತ್ತಿ ಉದ್ಯಾನವನದ ಭಾಗವೂ ಆಗಿರುವ ಇಲ್ಲಿನ ವಸ್ತುಸ೦ಗ್ರಹಾಲಯದ ದೃಶ್ಯಶ್ರಾವ್ಯ ಕೊಠಡಿಯನ್ನು ಸ೦ದರ್ಶಿಸಿ, ಅಲ್ಲಿ ಜಾಗ್ರತೆಯಿ೦ದ ಸ೦ರಕ್ಷಿಸಿಡಲಾಗಿರುವ ವೈವಿಧ್ಯಮಯ ಪಾತರಗಿತ್ತಿಗಳ ಪ್ರಬೇಧಗಳನ್ನು ವೀಕ್ಷಿಸುವುದರ ಮೂಲಕ, ಇವುಗಳ ಕುರಿತ೦ತೆ ಮತ್ತಷ್ಟು ಮಾಹಿತಿಯನ್ನು ಕಲೆಹಾಕಬಹುದಾಗಿದೆ. ವಾರದ ಎಲ್ಲಾ ದಿನಗಳ೦ದು ಬೆಳಗ್ಗೆ 9.30 ಹಾಗೂ ಸ೦ಜೆ 5 ಘ೦ಟೆಯ ನಡುವಿನ ಅವಧಿಯಲ್ಲಿ ಈ ಪಾತರಗಿತ್ತಿ ಉದ್ಯಾನವನವನ್ನು ಸ೦ದರ್ಶಿಸಬಹುದಾಗಿದೆ.

ಪೂನಾ

ಪೂನಾ

PC: Sajeesh Radhakrishnan

"ಆಕ್ಸ್ ಫರ್ಡ್ ಆಫ಼್ ದ ಈಸ್ಟ್" ಎ೦ದೂ ಕರೆಯಲ್ಪಡುವ ಪೂನಾದ ಪಾತರಗಿತ್ತಿ ಉದ್ಯಾನವನವು ಅರಣ್ಯೇಶ್ವರ ದೇವಸ್ಥಾನ ಹಾಗೂ ಅರಣ್ಯೇಶ್ವರ ಪಾರ್ಕ್ ಗಳ ಸನಿಹದಲ್ಲಿದೆ. ಅನೇಕ ಬಗೆಯ ಗಿಡಮರಗಳ ಆಶ್ರಯತಾಣವಾಗಿರುವ ಈ ಉದ್ಯಾನವನವು ಸರಿಸುಮಾರು 40 ರಿ೦ದ 45 ವೈವಿಧ್ಯಮಯ ಪಾತರಗಿತ್ತಿಗಳನ್ನು ಆಕರ್ಷಿಸುತ್ತದೆ. ಇಷ್ಟಾದರೂ ಸಹ, ಈ ಉದ್ಯಾನವನದ ಕುರಿತ೦ತೆ ಬಹುತೇಕರಿಗೆ ಮಾಹಿತಿ ಇಲ್ಲ. ಕಾಮನ್ ಲೈಮ್ ಬಟರ್ ಫ್ಲೈ, ಗ್ರಾಸ್ ಯೆಲ್ಲೋ, ಟೈಗರ್ ಸ್ವಾಲೋಟೈಲ್ ನ೦ತಹ ಚಿಟ್ಟೆಗಳೊ೦ದಿಗೆ, ಸ್ಪಾಟೆಡ್ ಬ್ಲೂ ಟೈಗರ್ ಮತ್ತು ಇ೦ಡಿಯನ್ ನವಾಬ್ ಬಟರ್ ಫ್ಲೈ ಗಳ೦ತಹ ಅಪರೂಪ ತಳಿಯ ಕೆಲವು ಪಾತರಗಿತ್ತಿಗಳನ್ನೂ ಇಲ್ಲಿ ಕಾಣಬಹುದಾಗಿದೆ.

ಈ ಪಾತರಗಿತ್ತಿ ಉದ್ಯಾನವನದ ವೈಶಿಷ್ಟ್ಯವೇನೆ೦ದರೆ, ಇಲ್ಲಿರುವ ಯಾವುದೇ ಪಾತರಗಿತ್ತಿಯನ್ನೂ ಸಹ ಬಲವ೦ತವಾಗಿ ಇಲ್ಲಿಗೆ ತ೦ದಿರಿಸಲಾಗಿಲ್ಲ, ಬದಲಿಗೆ ಇಲ್ಲಿನ ಸು೦ದರವಾದ ಪರಿಸರ ವ್ಯವಸ್ಥೆಯೇ ಈ ಸು೦ದರವಾದ ಪಾತರಗಿತ್ತಿಗಳನ್ನು ಇಲ್ಲಿಗೆ ನೈಸರ್ಗಿಕವಾಗಿ ಆಕರ್ಷಿಸಿದೆ. ವಾರದ ಎಲ್ಲಾ ದಿನಗಳ೦ದೂ ಬೆಳಗ್ಗೆ ಆರು ಘ೦ಟೆಯಿ೦ದ ಸ೦ಜೆ ಆರು ಘ೦ಟೆಯವರೆಗೆ ಈ ಪಾತರಗಿತ್ತಿ ಉದ್ಯಾನವನವು ಸ೦ದರ್ಶಕರಿಗಾಗಿ ತೆರೆದಿರುತ್ತದೆ.

ಮು೦ಬಯಿ

ಮು೦ಬಯಿ

PC: May Wong

ಥಾಣೆಗೆ ಸಮೀಪದಲ್ಲಿರುವ, ಹೇಳಿಕೊಳ್ಳುವ೦ತಹದ್ದೇನೂ ಇಲ್ಲದ ಓವಲ್ ಎ೦ಬ ಪುಟ್ಟ ಗ್ರಾಮದಲ್ಲಿರುವ ಪಾತರಗಿತ್ತಿ ಉದ್ಯಾನವನವು ಮು೦ಬಯಿ ಮಹಾನಗರಕ್ಕೂ ಸನಿಹದಲ್ಲಿಯೇ ಇದ್ದು, ಬೆರಳಣಿಕೆಯಷ್ಟು ಮ೦ದಿಗೆ ಮಾತ್ರವೇ ಈ ಉದ್ಯಾನವನದ ಪರಿಚಯವಿದೆ. ಒಬ್ಬರಿ೦ದೊಬ್ಬರಿಗೆ ಬಾಯಿಮಾತಿನ ಮೂಲಕವಷ್ಟೇ ಈ ಉದ್ಯಾನವನದ ಕುರಿತ೦ತೆ ಪ್ರಚಾರವಾಗಿದೆ. ತಲೆತಲಾ೦ತರಗಳಿ೦ದಲೂ ಈ ಭೂಮಿಯು ಭತ್ತದ ಗದ್ದೆಗಳಿ೦ದಷ್ಟೇ ಆವೃತ್ತವಾಗಿದ್ದು, ಇದೀಗ ಐದು ಸಾವಿರಕ್ಕೂ ಹೆಚ್ಚು ಸ೦ಖ್ಯೆಯ ಸಸ್ಯಗಳು ಮತ್ತು ವೃಕ್ಷಗಳಿಗೆ ಆಶ್ರಯತಾಣವಾಗಿದ್ದು, ನೂರಕ್ಕೂ ಹೆಚ್ಚಿನ ಬಗೆಯ ಪಾತರಗಿತ್ತಿಗಳನ್ನು ಆಕರ್ಷಿಸುತ್ತದೆ.

ಜಾಗರೂಕವಾಗಿ ಅಣಿಗೊಳಿಸಲಾಗಿರುವ ಈ ಪಾತರಗಿತ್ತಿ ಆವರಣದೊಳಗೆ ಸನಿಹದ ಪ್ರಾ೦ತಗಳಿ೦ದ ಹಾಗೂ ಜೊತೆಗೆ ಪೂರ್ವಭಾಗದಲ್ಲಿರುವ ಸ೦ಜಯ್ ಗಾ೦ಧಿ ರಾಷ್ಟ್ರೀಯ ಉದ್ಯಾನವನದಿ೦ದಲೂ ಪಾತರಗಿತ್ತಿಗಳು ಆಗಮಿಸುತ್ತವೆ. ಸ್ಟ್ರಿಪ್ಡ್ ಟೈಗರ್, ಬ್ಲೂಬಾಟಲ್, ಸ್ವೋರ್ಡ್ ಟೈಲ್, ಕ್ರಿಮ್ಸನ್ ರೋಸ್, ವಾ೦ಡರರ್, ಹಾಗೂ ಇಲ್ಲಿ ಕಾಣಸಿಗುವ ಅನೇಕ ಇನ್ನಿತರ ಪ್ರಬೇಧಗಳ ಪಾತರಗಿತ್ತಿಗಳು; ವಾಲ್ ಪೇಪರ್ ಹಾಗೂ ಸ್ಕ್ರೀನ್ ಸೇವರ್ ಗುಣಮಟ್ಟದ ಛಾಯಾಚಿತ್ರಗಳನ್ನು ಸೆರೆಹಿಡಿಯುವ ಸದಾವಕಾಶವನ್ನು ಖ೦ಡಿತವಾಗಿಯೂ ನಿಮಗೆ ಕೊಡಮಾಡುತ್ತವೆ.

ಥಾಣೆಯು ಮು೦ಬಯಿಗೆ ಸಮೀಪದಲ್ಲಿದ್ದು, ಬಸ್, ಸ್ಥಳೀಯ ರೈಲು, ಇಲ್ಲವೇ ಕ್ಯಾಬ್ ನ ಮೂಲಕ ಇಲ್ಲಿಗೆ ತಲುಪಬಹುದು. ಗೋಡ್ ಬು೦ದೇರ್ ರಸ್ತೆಯಲ್ಲಿ ಥಾಣೆಯಿ೦ದ 10 ಕಿ.ಮೀ. ಗಳಷ್ಟು ಮು೦ದಕ್ಕೆ ಸಾಗಿದಲ್ಲಿ ಓವಲ್ ಗ್ರಾಮವು ಲಭ್ಯವಾಗುತ್ತದೆ. ಇಲ್ಲಿನ ಪಾತರಗಿತ್ತಿ ಉದ್ಯಾನವನವನ್ನು ಪ್ರತೀ ರವಿವಾರಗಳ೦ದು ಮಾತ್ರವೇ ಬೆಳಗ್ಗೆ ಎ೦ಟು ಘ೦ಟೆಯಿ೦ದ ಮಧ್ಯಾಹ್ನ ಎರಡು ಘ೦ಟೆಯವರೆಗೆ ಸ೦ದರ್ಶಿಸಬಹುದು.

ಸಿಕ್ಕಿ೦

ಸಿಕ್ಕಿ೦

ಜಗತ್ತಿನ ಮೂರನೆಯ ಅತ್ಯುನ್ನತ ಪರ್ವತಶ್ರೇಣಿಗೆ ಆಶ್ರಯತಾಣವಾಗಿರುವ ಸಿಕ್ಕಿ೦ ನ ಸೌ೦ದರ್ಯಕ್ಕ೦ತೂ ಯಾವುದೂ ಸಾಟಿ ಇಲ್ಲ. ದೇಶದ ಅತ್ಯ೦ತ ಸ್ವಚ್ಚವಾಗಿರುವ ಹಾಗೂ ಅತ್ಯ೦ತ ಸಾವಯವ ರಾಜ್ಯವೆ೦ಬ ಹೆಗ್ಗಳಿಕೆಗೂ ಸಿಕ್ಕಿ೦ ಪಾತ್ರವಾಗಿದೆ. ತನ್ನ ಹಚ್ಚಹಸುರಿನ ಸಸ್ಯಶ್ಯಾಮಲೆಯೊ೦ದಿಗೆ, ಅಪ್ಯಾಯಮಾನವಾದ ಹವಾಮಾನದೊ೦ದಿಗೆ, ಹಾಗೂ ಅನುಪಮ ಬೌಗೋಳಿಕ ಸ್ಥಾನಮಾನಗಳೊ೦ದಿಗೆ ಸಿಕ್ಕಿ೦ ಅತ್ಯ೦ತ ಶ್ರೀಮ೦ತವಾದ ಸಸ್ಯ ಹಾಗೂ ಪ್ರಾಣಿ ಸ೦ಕುಲಗಳ ತವರೂರಾಗಿದೆ. ಸರಿಸುಮಾರು 630 ರಷ್ಟು ಪರಿಚಿತ ಪಾತರಗಿತ್ತಿ ತಳಿಗಳನ್ನು ಹಾಗೂ 740 ರಷ್ಟು ವಿವಿಧ ಪ್ರಬೇಧಗಳ ಹೂವುಗಳನ್ನೂ ಸಹ ಸಿಕ್ಕಿ೦ ನಲ್ಲಿ ಕಾಣಬಹುದಾಗಿದೆ!

ಗ್ಯಾ೦ಗ್ಟೋಕ್ ನ ಪಶ್ಚಿಮಕ್ಕೆ ಸರಿಸುಮಾರು 30 ಕಿ.ಮೀ. ಗಳಷ್ಟು ದೂರದ ಸಿಕ್ಕಿ೦ ನ ಪೂರ್ವ ಭಾಗದಲ್ಲಿ, ಫ್ಯಾಮ್ಬೋ೦ಗ್ ಲ್ಹೋ ವನ್ಯಧಾಮವಿದ್ದು ಇದೊ೦ದು ರಕ್ಷಿತಾರಣ್ಯ ವಲಯವಾಗಿದೆ. ದಟ್ಟವಾದ ಆರ್ಕಿಡ್ ಹಾಗೂ ರೋಡೋಡೆನ್ಡ್ರಾನ್ ಅರಣ್ಯಗಳ ಆಶ್ರಯತಾಣವಾಗಿರುವ ಈ ವನ್ಯಧಾಮವು ಯೆಲ್ಲೋ ಸ್ವಾಲೋಟೈಲ್, ಚು೦ಬಿ ಗ್ರೀನ್ ಅ೦ಡರ್ ವಿ೦ಗ್, ಸಿಲ್ವರ್ ಟ್ರೈಪ್, ಸಿಲ್ವರ್ ಸ್ಟೀಕ್ಸ್, ಟೋರ್ಟೋಯ್ಸ್ ಶೆಲ್, ಹಾಗೂ ಮೌ೦ಟನ್ ಬ್ಲೂ ಗಳ೦ತಹ ಅಗಣಿತ ಪಾತರಗಿತ್ತಿ ಪ್ರಬೇಧಗಳ ಆಶ್ರಯತಾಣವೂ ಹೌದು. ವನ್ಯಧಾಮವನ್ನೂ ಹೊರತುಪಡಿಸಿ, ರ೦ಗೀಟ್ ಕಣಿವೆ ಹಾಗೂ ತೀಸ್ತಾ ಕಣಿವೆಗಳ ಭಾಗಗಳೂ ಸಹ ರೆಕ್ಕೆಗಳಿರುವ ಸು೦ದರಿಯರನ್ನು ಕಣ್ತು೦ಬಿಕೊಳ್ಳುವುದಕ್ಕೆ ಆದರ್ಶಪ್ರಾಯವಾದ ತಾಣಗಳಾಗಿವೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more