• Follow NativePlanet
Share
Menu
» »ನಾನು ಕಂಡ ಕೆಲವು ಸುಂದರ ಸ್ಥಳಗಳು

ನಾನು ಕಂಡ ಕೆಲವು ಸುಂದರ ಸ್ಥಳಗಳು

Written By: Sowmyabhai

ಅಂದು ನಾವೆಲ್ಲಾ ಎಲ್ಲಿಗಾದರೂ ಪ್ರವಾಸಕ್ಕೆ ಹೋಗಬೇಕು ಎಂದು ತೀರ್ಮಾನಿಸಿದೆವು. ಮನೆ ಮಂದಿಯೆಲ್ಲರೂ ಸ್ಥಳಗಳ ಅನ್ವೇಷಣೆ ಮಾಡಲು ಶುರು ಮಾಡಿದೆವು. ಒಬ್ಬೊಬ್ಬರ ಬಾಯಲ್ಲಿ ಒಂದೊಂದು ಸ್ಥಳಗಳು ಬರಲು ಆರಂಭಿಸಿದವು. ಕೊನೆಗೆ ಮಹಾರಾಷ್ಟ್ರದಲ್ಲಿರುವ ಶಿರಿಡಿ, ಔರಂಗಬಾದ್, ಎಲ್ಲೋರಾ ಗೂಹೆಗೆ ಭೇಟಿ ಮಾಡೋಣ ಎಂದು ಕೊನೆಗೂ ನಿರ್ಧಾರವಾಯಿತು. ಸರಿ ಟ್ರೈನ್ ಬುಕ್ ಮಾಡಿಸಿದ್ದು ಆಯಿತು, ದಿನಗಳು ಉರುಳಿದ್ದು ಆಯಿತು.

ಈಗ ಮಹಾರಾಷ್ಟ್ರದಲ್ಲಿರುವ ಸುಂದರ ಸ್ಥಳಗಳನ್ನು ನೋಡುವ ಸುಯೋಗ ಒದಗಿ ಬಂತು ಎಂದು ಎಲ್ಲರೂ ಬೆಂಗಳೂರಿನ ಕಡೆ ಪಯಣ ಬೆಳೆಸಿದೆವು. ನಾವು ಸುಮಾರು 20 ಜನ ಹೊರಟ್ಟಿದ್ದೆವು. ರಾತ್ರಿ 9:30 ಗಂಟೆಗೆ ಸರಿಯಾಗಿ ರೈಲು ಬಂತು. ಸರಿ ಬೇಗ ಬೇಗ ಕಾಯ್ದಿರಿಸಿದ ಸ್ಥಳದ ಹುಡುಕಾಟ ನೆಡೆಸಿದೆವು ನಂತರ ಅವರವರ ಜಾಗದಲ್ಲಿ ಕುಳಿತು ಭೋಜನ ಮಾಡಿದೆವು. ಬೆಂಗಳೂರಿನಿಂದ ಮಹಾರಾಷ್ಟ್ರಕ್ಕೆ ಸತತ 24 ಗಂಟೆಗಳ ದೀರ್ಘವಾದ ಪ್ರಯಾಣ ಇದಾಗಿತ್ತು. 24 ಗಂಟೆಗಳ ನಂತರ ಕೊನೆಗೂ ಮಹಾರಾಷ್ಟ್ರದ ಶಿರಿಡಿಗೆ ಬಂದು ಇಳಿದೆವು.

                                  
ಇಲ್ಲಿನ ಆಚಾರ, ವಿಚಾರ, ಉಡುಗೆ, ತುಡುಗೆ, ಭಾಷೆಯಲ್ಲಾ ನಮಗೆ ವಿಚಿತ್ರ ಎಂದು ಅನಿಸಿತು. ಅಲ್ಲಿಂದ ಶಿರಿಡಿಗೆ ಹೋಗಲು ಟ್ಯಾಕ್ಸಿ ಬುಕ್ ಮಾಡಿದೆವು. ಬಳಲಿ ಬೆಂಡಾಗಿದ್ದ ನಮ್ಮ ದೇಹ ಹುಟ್ಟೆಗೆ ಸ್ವಲ್ಪ ಆಹಾರ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಎನಿಸಲು ಪ್ರಾರಂಭವಾಯಿತು. ಲಗೇಜ್‍ಗಳೆಲ್ಲಾ ಲಾಡ್ಜ್‍ನಲ್ಲಿ ತೆಗೆದುಕೊಂಡ ರೂಮಿನಲ್ಲಿ ಇಟ್ಟು ಹತ್ತಿರದ ಹೋಟೆಲ್‍ನತ್ತ ಮುಖ ಮಾಡಿದೆವು. ನಂತರ ಸ್ನಾನ ಮಾಡಿ ಶಿರಿಡಿ ಬಾಬಾ ದರ್ಶನ ಭಾಗ್ಯ ಪಡೆಯಲು ಸಜ್ಜಾದೆವು. ಕ್ಯೂನಲ್ಲಿ ನಿಂತು ಎಲ್ಲಿ ನೋಡಿದರು ಜನ ಸಂಗುಳಿ ಅಬ್ಬಾ ಅನ್ನಿಸಿತು. ಶಿರಿಡಿ ಬಾಬಾನ ದರ್ಶನಕ್ಕೆ ಸತತ 4 ಗಂಟೆಗಳು ಕ್ಯೂನಲ್ಲಿ ನಿಂತು ಕಡೆಗೂ ಸಾಯಿಬಾಬಾನ ದರ್ಶನವನ್ನು ಪಡೆದು ಪುನೀತರಾದೆವು.

ಶಿರಿಡಿ ದೇವಾಲಯದ ಒಳಭಾಗದಲ್ಲಿ ಬಾಬಾ ಉಪಯೋಗಿಸುತ್ತಿದ್ದ ಹಲವಾರು ವಸ್ತುಗಳನ್ನು ಕಂಡು ಚಕಿತರಾದೆವು. ಈಗಾಗಲೇ ರಾತ್ರಿಯ ಸಮಯವಾಗಿತ್ತು ಒಂದಿಷ್ಟು ಶಾಪಿಂಗ್ ಮಾಡಿ ಬರೋಣ ಎಂದು 3 ಗಂಟೆ ಅಲ್ಲೇ ಕಳೆದು ನಂತರ ಬಾಬಾನ ಊಟದ ಮಂದಿರದಲ್ಲಿ ಸ್ವಾಧಿಷ್ಟವಾದ ಭೋಜನ ಮಾಡಿದೆವು. ಕೈಯಲ್ಲಿದ್ದ ಹಲವಾರು ಶಾಪಿಂಗ್ ವಸ್ತುಗಳನ್ನು ಬ್ಯಾಗಿನಲ್ಲಿ ತುರುಕಿಕೊಂಡೆವು. ಸ್ವಲ್ಪ ದೇಹ ವಿಶ್ರಾಂತಿ ಪಡೆಯಲು ಹಾತೊರೆಯುತ್ತಿತ್ತು. ಪ್ರಯಸವಾಗಿದ್ದ ದೇಹ ಹಾಗೇಯೆ ನಿದ್ದೆಗೆ ಜಾರಿತು.

ಬೆಳಗ್ಗೆಯೇ ಔರಂಗಬಾದ್‍ಗೆ ಹೋಗಲು ಸಿದ್ದವಾದೆವು. 20 ಜನರಿದ್ದ ನಾವು ಒಂದು ಮಿನಿ ಬಸ್‍ನ್ನು ಬುಕ್ ಮಾಡಿಕೊಂಡು ಔರಂಗಾ ಬಾದ್‍ಗೆ ಹೊರಟೆವು. ಅಲ್ಲಿನ ಭವ್ಯವಾದ ಅರಮನೆಯನ್ನು ಕಂಡು ಬೆರಗಾದೆವು. ಈ ಔರಂಗಬಾದ್ ತಾಜ್ ಮಹಲ್‍ಗೆ ಹೋಲುವಂತೆ ಇತ್ತು. ಈ ಔರಂಗಬಾದ್ ಅರಮನೆ ನಿರ್ಮಿಸಿದ್ದು ಮೊಗಲ್ ಚಕ್ರವರ್ತಿ ಔರಂಗಜೇಬ್. ಇಲ್ಲಿನ ಅರಮನೆಯ ಸೌಂದರ್ಯಕ್ಕೆ ಬೆರಗಾದ ನಾವು ಫೋಟು ಕ್ಲಿಕ್ಕಿಸಿಕೊಂಡೆವು. ಹಾರಾಡುವ ಪಕ್ಷಿಯ ಹಾಗೆ ಅರಮನೆಯೆಲ್ಲಾ ಸುತ್ತಡಿದೆವು. ಸುಂದರವಾದ ಮೊಗಲರ ವಾಸ್ತುಶಿಲ್ಪ, ಹಸಿರಿನಿಂದ ಕೂಡಿದ್ದ ತೋಟ, ಸ್ವಿಮೀಂಗ್ ಪೂಲ್ ಎಲ್ಲವೂ ನುಡಿದೆವು. ಒಂದು ಐತಿಹಾಸಿಕವಾದ ಅರಮನೆಯನ್ನು ಕಂಡ ತೃಪ್ತಿ ನಮ್ಮೆಲ್ಲಾರಲ್ಲಿ ಇತ್ತು.

ಅಲ್ಲಿಂದ ಎಲ್ಲೋರಾ ಸುಮಾರು 29 ಕಿ,ಮೀಯಷ್ಟು ಅಂತರದಲ್ಲಿತ್ತು. ಮೊದಲ ಬಾರಿಗೆ ನಾವು ಜೈನ ಧರ್ಮದ ಗುಹೆಗೆ ಕಾಲಿಟ್ಟಿದ್ದೆವು. ಅಲ್ಲಿನ ಗುಹೆಗಳು ಬೃಹತ್ ಗಾತ್ರದಿಂದ ಕಂಗೊಳಿಸುತ್ತಿತ್ತು. ಈ ಅದ್ಭುತ ಗುಹೆಯನ್ನು ವಿಕ್ಷೀಸಲು ಕೇವಲ ಭಾರತೀಯರೆ ಅಲ್ಲದೇ ವಿದೇಶಿಯರು ಕೂಡ ಎಲ್ಲೋರಾ ಗುಹೆಗೆ ಆಗಮಿಸಿದ್ದರು. ಎಲ್ಲೋರಾದ ಹಲವು ಸ್ಥಳಗಳಲ್ಲಿ ಜೈನ ಧರ್ಮದ ಗುಹೆಗಳಿವೆ. ಒಂದು ಗುಹೆಗಿಂತ ಮತ್ತೊಂದು ಗುಹೆ ಅಬ್ಬಾ ಎಂಥ ಸೌಂದರ್ಯ ಅನ್ನಿಸುತ್ತಿತ್ತು. ದೇವಲೋಕದ ಸ್ವರ್ಗ ಧರೆಯಲ್ಲಿದೆ ಎಂಬ ಭಾವ ನಮಗೆ ಉಂಟಾಯಿತು. ಎತ್ತರವಾದ ಜೈನನ ನೂರಾರು ಮೂರ್ತಿಗಳನ್ನು ಇಲ್ಲಿ ಕಾಣಬಹುದು. ಇಲ್ಲಿ ಕೇವಲ ಜೈನನಿಗೆ ಸಂಬಂಧಿಸಿದ ಗುಹೆಗಳೇ ಅಲ್ಲದೇ ಹಿಂದೂ ಧರ್ಮದ ದೈವವಾದ ಪರಮ ಶಿವನು ಲಿಂಗ ರೂಪಿಯಾಗಿ ಈ ಎಲ್ಲೋರಾ ಗುಹೆಯಲ್ಲಿ ನೆಲೆಸಿದ್ದಾನೆ. ಶಿವನ ಹಲವಾರು ಮೂರ್ತಿಗಳನ್ನು ಎಲ್ಲೋರಾ ಗುಹೆಯಲ್ಲಿ ಕಂಡೆವು. ಅತ್ಯಂತ ಶಾಂತಯುತವಾಗಿದ್ದ ಈ ಗುಹೆಗಳು ಮೂರ್ತಿಗಳನ್ನು ಮುಟ್ಟಿ ಮುಟ್ಟಿ ಪರಿಕ್ಷೀಸುತ್ತಿದೆವು. ಅಂತೂ ಇಂತು ಇಂತಹ ಅದ್ಭುತವಾದ ಸ್ಥಳನ್ನು ಕಂಡು ನಮ್ಮ ಜೀವನ ಸಾರ್ಥಕವಾಯಿತು ಎಂದು ಅಲ್ಲಿಂದ ಹೊರಟೆವು. ಇಂತಹ ಸ್ಥಳಗಳಿಗೆ ನೀವು ಒಮ್ಮೆ ಭೇಟಿ ಕೊಟ್ಟು ರೋಮಾಂಚನಕಾರಿಯಾದ ಪ್ರವಾಸದ ಅನುಭವವನ್ನು ಪಡೆಯಿರಿ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ