Search
  • Follow NativePlanet
Share
» »ಇಂದಿಗೂ ಹೆಜ್ಜೆಗುರುತಿದೆ! ಹುಣಸೆ ಬೀಜ ಬೆಳೆಯುವುದಿಲ್ಲ!

ಇಂದಿಗೂ ಹೆಜ್ಜೆಗುರುತಿದೆ! ಹುಣಸೆ ಬೀಜ ಬೆಳೆಯುವುದಿಲ್ಲ!

ಈ ಪಟ್ಟೀಶ್ವರರ್ ದೇವಾಲಯವು ತಮಿಳುನಾಡಿನ ಕೊಯಮತ್ತೂರು ನಗರ ಪಶ್ಚಿಮಕ್ಕಿರುವ ಪೆರೂರು ಎಂಬ ಪ್ರದೇಶದಲ್ಲಿದ್ದು ಕೊಯಮತ್ತೂರು ನಗರ ಕೇಂದ್ರದಿಂದ ಕೇವಲ ಏಳು ಕಿ.ಮೀ ಗಳಷ್ಟು ದೂರದಲ್ಲಿದೆ

By Vijay

ಅರೆ ಏನಪ್ಪಾ ಈ ತಲೆ ಬರಹ ಎಂದು ಗೊಂದಲವಾಗುತ್ತಿದೆಯಲ್ಲವೆ? ಆದರೆ ಈ ಲೇಖನವನ್ನೊಮ್ಮೆ ಓದಿ. ನಿಜಕ್ಕೂ ಈ ರೀತಿಯಾಗಿ ಇಲ್ಲಿದೆಯಾ...ಎಂದು ನಿಮಗೆ ಆಶ್ಚರ್ಯವೂ ಆಗಬಹುದು. ಇದು ಶಿವನ ದೇವಾಲಯವಿರುವ ಸ್ಥಳ. ಇಲ್ಲಿ ಶಿವನು ಸ್ವಯಂಭು ಆಗಿರುವುದಲ್ಲದೆ ಪಟ್ಟೀಶ್ವರರ್ ಎಂದು ಕರೆಯಲ್ಪಡುತ್ತಾನೆ.

ಈ ಶಿವನ ದೇವಾಲಯಕ್ಕೆ ಸಂಬಂಧಿಸಿದಂತೆ ತಳುಕು ಹಾಕಿಕೊಂಡಿರುವ ದಂತಕಥೆಯೂ ಸಹ ರೋಚಕವಾಗಿದೆ. ಪವಿತ್ರ ಆಕಳಾದ ಕಾಮಧೇನು ತನಗೂ ಸಹ ಬ್ರಹ್ಮನ ರೀತಿಯ ಸೃಷ್ಟಿ ಕಾರ್ಯದ ಜವಾಬ್ದಾರಿಯ ಕೆಲಸ ಬೇಕೆಂದು ಅಪೇಕ್ಷಿಸಿ ಅದಕ್ಕಾಗಿ ನಿತ್ಯವು ಶಿವನನ್ನು ಧ್ಯಾನಿಸುತ್ತಿತ್ತು ಹಾಗೂ ಹುತ್ತಾವೊಂದರ ಮೇಲೆ ನಿಂತು ನಿತ್ಯವೂ ಅದರೊಳಗಿದ್ದ ಶಿವಲಿಂಗಕ್ಕೆ ಹಾಲಿನ ಅಭಿಷೇಕ ಮಾಡುತ್ತಿತ್ತು.

ಇಂದಿಗೂ ಹೆಜ್ಜೆಗುರುತಿದೆ! ಹುಣಸೆ ಬೀಜ ಬೆಳೆಯುವುದಿಲ್ಲ!

ಚಿತ್ರಕೃಪೆ: Balajijagadesh

ಆ ಕಾಮಧೇನುವಿಗೆ ಕರುವೊಂದಿತ್ತು ಹಾಗೂ ಅದರ ಹೆಸರು ಪಟ್ಟಿ. ಬಲು ಚೂಟಿಯಾಗಿದ್ದ ಆ ಕರು ತನ್ನ ತಾಯಿಯೊಡನೆ ನಿತ್ಯವೂ ಅದು ಹೋಗುವ ಹುತ್ತದತ್ತ ಬರುತ್ತಿತ್ತು. ಇತ್ತ ಕಾಮಧೇನು ಸೇವೆಯಲ್ಲಿ ನಿರತವಾದಾಗ ಕರು ಅತಿಂದಿತ್ತ ಹಾರಾಡುತ್ತ, ಜಿಗಿದಾಡುತ್ತ ಆಟವಾಡುತ್ತಿತ್ತು. ಒಂದೊಮ್ಮೆ ಆಟವಾಡುವಾಗ ಕರು ಆಕಸ್ಮಿಕವಾಗಿ ಆ ಹುತ್ತಕ್ಕೆ ಹಾನಿ ಉಂಟು ಮಾಡಲು ಸಂಪೂರ್ಣ ಹುತ್ತವು ಕುಸಿದೆ ಬಿಟ್ಟಿತು.

ಆಗ ಕಾಮಧೇನು ಅಕಸ್ಮಾತಾಗಿ ಆ ಶಿವಲಿಂಗದ ಮೇಲೆ ಬಿದ್ದು ಬಿಟ್ಟಿತು. ಆಗ ಅದರ ಕಾಲಿನ ಗುರುತೊಂದು ಆ ಶಿವಲಿಂಗದ ಮೇಲೆ ಮೂಡಿತು. ಇಂದಿಗೂ ಆ ಹೆಜ್ಜೆಗುರುತನ್ನು ಕಾಣಬಹುದು. ತಕ್ಷಣ ಕಾಮಧೇನು ಕ್ಷಮೆ ಕೇಳಲು ಶಿವನು ಪ್ರಸನ್ನನಾಗಿ ಪ್ರತ್ಯಕ್ಷನಾದನು. ಹೀಗೆ ಪ್ರತ್ಯಕ್ಷನಾದ ಶಿವನು ಕಾಮಧೇನುವನ್ನು ಹರಸುತ್ತ ಒಂದು ನಿರ್ದಿಷ್ಟ ಸ್ಥಳದಲ್ಲಿ ತಪಸ್ಸು ಮಾಡುವಂತೆಯೂ, ಈ ಸ್ಥಳವು ಮೋಕ್ಷ ಬಯಸುವವರಿಗೆ ಹರಸುವ ಶಿವನ ಕ್ಷೇತ್ರವಾಗಿಯೂ ಪ್ರಸಿದ್ಧವಾಗುತ್ತದೆಂದು ಹೇಳಿದನು.

ಇಂದಿಗೂ ಹೆಜ್ಜೆಗುರುತಿದೆ! ಹುಣಸೆ ಬೀಜ ಬೆಳೆಯುವುದಿಲ್ಲ!

ಚಿತ್ರಕೃಪೆ: Ssriram mt

ಅಲ್ಲದೆ ಇಲ್ಲಿ ಶಿವನು ಪಟ್ಟಿ ಕರುವಿನ ಕಾರಣದಿಂದಾಗಿ ಮುಂದೆ ಇಲ್ಲಿ ಪಟ್ಟೀಶ್ವರನಾಗಿ ನೆಲೆಸುವುದಾಗಿ ಹೇಳಿದನು. ಅದರಂತೆ ಈ ಕ್ಷೇತ್ರವು ಶಿವನ ಶಕ್ತಿಶಾಲಿ ಕ್ಷೇತ್ರಗಳ ಪೈಕಿ ಒಂದಾಗಿ ಹೆಸರುವಾಸಿಯಾಗಿದೆ. ಇಂದು ಈ ದೇವಾಲಯದಲ್ಲಿ ಶಿವನು ನರ್ತಿಸುತ್ತಿರುವ ಭಂಗಿಯಲ್ಲೂ ಹಾಗೂ ಪಾರ್ವತಿಯು ಪಚೈನಾಯಕಿಯಾಗಿಯೂ ನೆಲೆಸಿದ್ದಾರೆ.

ಸಾಮಾನ್ಯವಾಗಿ ನರ್ತಿಸುತ್ತಿರುವ ಶಿವನ ಭಂಗಿಯು ದೇವಾಲಯಗಳಲ್ಲಿ ಒಂದೆ ತೆರನಾಗಿ ಇದ್ದರೆ, ಈ ದೇವಾಲಯದಲ್ಲಿ ತುಸು ವಿಭಿನ್ನವಾಗಿದೆ. ಅಂದರೆ ನರ್ತನ ಇನ್ನೇನು ಮುಗಿಯಿತು ಎನ್ನುವ ಭಂಗಿಯಲ್ಲಿದೆ. ಇದು ಸಾಂಕೇತಿಕವಾಗಿ ಇಲ್ಲಿ ಬಂದು ಶಿವನ ಕೃಪೆಗೆ ಪಾತ್ರರಾಗುವವರು ಜೀವನ್ಮರಣಗಳ ಚಕ್ರದಿಂದ ತಮ್ಮನ್ನು ತಾವು ಮುಕ್ತಗೊಳಿಸಿಕೊಂಡರು ಎಂದು ನಂಬಲಾಗುತ್ತದೆ. ಹಾಗಾಗಿ ಇದು ಮೋಕ್ಷ ಸ್ಥಳವಾಗಿ ಗಮನಸೆಳೆಯುತ್ತದೆ.

ಇಂದಿಗೂ ಹೆಜ್ಜೆಗುರುತಿದೆ! ಹುಣಸೆ ಬೀಜ ಬೆಳೆಯುವುದಿಲ್ಲ!

ಚಿತ್ರಕೃಪೆ: Ssriram mt

ಅಲ್ಲದೆ ಇಲ್ಲಿರುವ ಇನ್ನೊಂದು ರೋಚಕ ಅಂಶವು ಮೋಕ್ಷದ ಮಹಿಮೆಯನ್ನು ತಿಳಿಸುತ್ತದೆ. ಅದೆನೆಂದರೆ ಈ ದೇವಾಲಯದಾವರಣದಲ್ಲಿರುವ ಹುಣಸೆ ಮರ. ಈ ಹುಣಸೆ ಮರದ ಬೀಜಗಳನ್ನು ಎಲ್ಲಿಯೆ ಆಗಲಿ ಬಿತ್ತಿದರೆ ಅದು ಮೊಳಕೆಯೊಡೆಯುವುದೆ ಇಲ್ಲವಂತೆ! ಇದೂ ಸಹ ಮತ್ತೆ ಜನನ ಹಾಗೂ ಮರಣಗಳ ಸರಪಣಿಯ ಅಂತ್ಯವನ್ನು ಸೂಚಿಸುತ್ತದೆನ್ನಲಾಗಿದೆ.

ಇನ್ನೊಂದು ರೋಚಕ ವಿಷಯವೆಂದರೆ, ಈ ಸ್ಥಳದಲ್ಲಿ ಕಾಣಸಿಗುವ ಸಗಣಿಯಲ್ಲಿ ಎಂದಿಗೂ ಕ್ರಿಮಿ-ಕೀಟಗಳು ಕಂಡುಬರುವುದಿಲ್ಲವಂತೆ. ಈ ದೇವಾಲಯಕ್ಕೆ ತುಸು ಹತ್ತಿರದಲ್ಲಿ ನೊಯ್ಯಾಲ್ ನದಿ ಹರಿದಿದ್ದು ಅದರಲ್ಲಿ ತೀರಿಕೊಂಡವರ ಅಸ್ಥಿಗಳನ್ನು ವಿಸರ್ಜಿಸಿದರೆ ಅವು ಬಿಳಿ ಕಲ್ಲುಗಳಾಗಿ ಪರಿವರ್ತಿತವಾಗುತ್ತವೆ ಎನ್ನಲಾಗಿದೆ.

ಇಂದಿಗೂ ಹೆಜ್ಜೆಗುರುತಿದೆ! ಹುಣಸೆ ಬೀಜ ಬೆಳೆಯುವುದಿಲ್ಲ!

ಚಿತ್ರಕೃಪೆ: Durai.velumani

ಇಲ್ಲಿ ಶಿವನು ನರ್ತಿಸುತ್ತಿರುವ ಕಾರಣದಿಂದಾಗಿ ಚಿದಂಬರಂ ನಂತರ ಈ ದೇವಾಲಯಕ್ಕೆ ಹೆಚ್ಚಿನ ಜನಪ್ರೀಯತೆ ಲಭಿಸಿದೆ. ವಾರ್ಷಿಕವಾಗಿ ಒಂದು ವಾರಗಳ ಕಾಲ ಶಾಸ್ತ್ರೀಯ ನೃತ್ಯ ಅಥವಾ ಭರತನಾಟ್ಯಂ ನೃತ್ಯದ ಉತ್ಸವವನ್ನು ಇಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಈ ಸ್ಥಳದಲ್ಲಿಯೆ ಶಿವನು, ವಿಷ್ಣು ಹಾಗೂ ಬ್ರಹ್ಮರಿಗೆ ಆನಂದ ತಾಂಡವ ನೃತ್ಯ ಮಾಡಿ ತೋರಿಸಿದ್ದನಂತೆ.

ನಿರಂತರ ಅನಾರೋಗ್ಯ, ಸಾಲಬಾಧೆಯೆ? ಇಲ್ಲಿ ಪ್ರಾರ್ಥಿಸಿ!

ಈ ಪಟ್ಟೀಶ್ವರರ್ ದೇವಾಲಯವು ತಮಿಳುನಾಡಿನ ಕೊಯಮತ್ತೂರು ನಗರ ಪಶ್ಚಿಮಕ್ಕಿರುವ ಪೆರೂರು ಎಂಬ ಪ್ರದೇಶದಲ್ಲಿದೆ. ಕೊಯಮತ್ತೂರು ನಗರ ಕೇಂದ್ರದಿಂದ ಕೇವಲ ಏಳು ಕಿ.ಮೀ ಗಳಷ್ಟು ದೂರದಲ್ಲಿ ಈ ದೇವಾಲಯವಿದ್ದು ತೆರಳಲು ಬಸ್ಸುಗಳು ಹಾಗೂ ಬಾಡಿಗೆ ಕಾರುಗಳು, ರಿಕ್ಷಾಗಳು ದೊರೆಯುತ್ತವೆ.

ಒಬ್ಬ ಬೇಡಿದ್ದನ್ನು ಕೊಟ್ಟರೆ ಇನ್ನೊಬ್ಬ ಬೇಡವಾದ್ದನ್ನು ತೆಗೆಯುತ್ತಾನೆ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X