Search
  • Follow NativePlanet
Share
» »ಈ ದೊಡ್ಡಬಸಪ್ಪನ ಮುಂದೆ ತಲೆ ಆಡಿಸಲೇಬೇಕು!

ಈ ದೊಡ್ಡಬಸಪ್ಪನ ಮುಂದೆ ತಲೆ ಆಡಿಸಲೇಬೇಕು!

ಕರ್ನಾಟಕದ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಎಂಬ ಗ್ರಾಮದಲ್ಲಿರುವ ಪ್ರಾಚೀನ ದೊಡ್ಡಬಸಪ್ಪ ಹಾಗೂ ಸೋಮೇಶ್ವರ ದೇವಾಲಯಗಳು ಪ್ರವಾಸಿಗರ ಗಮನಸೆಳೆಯುತ್ತವೆ

By Vijay

ಇದರ ಮುಂದೆ ಬಂದು ನಿಂತವರು ಇದರ ಸೌಂದರ್ಯಕ್ಕೆ ಮರುಳಾಗಿ ಮೆಚ್ಚುಗೆಯಿಂದ ತಲೆ ಆಡಿಸಲೇಬೇಕು. ಇದರ ಒಂದೊಂದು ಸೂಕ್ಷ್ಮತೆಗಳನ್ನು ನೋಡಿ ಹೊಗಳಲೇಬೇಕು. ಇದರ ವಿನ್ಯಾಸ ಹಾಗೂ ನಿರ್ಮಾಣದ ಕುರಿತು ಕೊಂಡಾಡಲೇಬೇಕು. ಇದರ ಪ್ರಾಚೀನತೆಯ ಬಗ್ಗೆ ಹೆಮ್ಮೆ ಪಡಲೇಬೇಕು. ಇದು ಅಂತಿಂಥ ಸಾಮಾನ್ಯದ್ದಲ್ಲ. ಇದು ದೊಡ್ಡಬಸಪ್ಪ.

ಹೌದು, ದೊಡ್ಡಬಸಪ್ಪ ದೇವಾಲಯವೆ ಹಾಗಿದೆ. ಈ ಐತಿಹಾಸಿಕ ದೇವಾಲಯವನ್ನು ಕಣ್ಣಾರೆ ಕಾಣುವವರು ಇದರ ಅಂದ ಚೆಂದಕ್ಕೆ ಮಾರು ಹೋಗದೆ ಇರಲಾಗಲ್ಲ. ಇದರ ಪ್ರಾಚೀನತೆಗೆ ಮನಸೋಲಲೇಬೇಕು. ಹನ್ನೆರಡನೆಯ ಶತಮಾನದಲ್ಲಿ ಚಾಲುಕ್ಯ ವಾಸ್ತುಶೈಲಿಯಲ್ಲಿ ನಿರ್ಮಾಣವಾದ ದೇವಾಲಯ ಇದಾಗಿದ್ದು ದೊಡ್ಡಬಸಪ್ಪ ದೇವಾಲಯ ಎಂದೆ ಪ್ರಸಿದ್ಧಿಗಳಿಸಿದೆ.

ಈ ದೊಡ್ಡಬಸಪ್ಪನ ಮುಂದೆ ತಲೆ ಆಡಿಸಲೇಬೇಕು!

ಚಿತ್ರಕೃಪೆ: Dineshkannambadi

ಉತ್ತರ ಕರ್ನಾಟಕ ಭಾಗದ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿರುವ ಡಂಬಳ ಎಂಬ ಗ್ರಾಮದಲ್ಲಿ ಈ ದೇವಾಲಯವಿದೆ. ಡಂಬಳವು ಗದಗ ನಗರ ಕೆಂದ್ರದಿಂದ 20 ಕಿ.ಮೀ ಗಳಷ್ಟು ದೂರವಿದ್ದು ತೆರಳಲು ಅನೇಕ ಬಸ್ಸುಗಳು ದೊರೆಯುತ್ತವೆ. ಅದ್ಭುತವಾಗಿ ನಿರ್ಮಾಣ ಮಾಡಲಾಗಿರುವ ಈ ದೇವಸ್ಥಾನದ ಮುಖ್ಯ ದೇವರು ಶಿವನಾಗಿದ್ದು ಶಿವಸ್ವರೂಪಿಯಾದ ಶಿವಲಿಂಗದ ರುಪದಲ್ಲಿ ಇಲ್ಲಿನ ಗರ್ಭಗುಡಿಯಲ್ಲಿ ನೆಲೆಸಿದ್ದಾನೆ.

ಇನ್ನೂ ದೇವಾಲಯ ರಚನೆಯನ್ನು ನೋಡಿದಾಗ ಒಂದು ಕ್ಷಣ ರೋಮಾಂಚನ ಉಂಟಾಗುತ್ತದೆ. ಏಕೆಂದರೆ 24 ಕೋನಗಳುಳ್ಳ ನಕ್ಷತ್ರಾಕಾರದಲ್ಲಿ ಕರಾರುವಕ್ಕಾಗಿ ಈ ದೇವಾಲಯ ನಿರ್ಮಾಣ ಮಾಡಿರುವುದನ್ನು ನೋಡಿದಾಗ ಅಂದಿನ ಪ್ರಾಚೀನ ವಿನ್ಯಾಸಗಾರರಿಗೊಂದು ಮನಸ್ಸಿನಲ್ಲೆ ಸಲಾಂ ಹೊಡೆಯಬೇಕೆನಿಸುತ್ತದೆ. ಅಂತರಾಳ, ಮಂಟಪ ಹಾಗೂ ಗರ್ಭಗುಡಿಗಳಿರುವುದನ್ನು ಕಾಣಬಹುದು.

ಈ ದೊಡ್ಡಬಸಪ್ಪನ ಮುಂದೆ ತಲೆ ಆಡಿಸಲೇಬೇಕು!

ಚಿತ್ರಕೃಪೆ: Siddharth Pujari

ಇದರ ವಿಶೇಷತೆ ಎಂದರೆ ದೇವಾಲಯ ಗೊಪುರವು ನಕ್ಷತ್ರಾಕಾರದಲ್ಲಿದ್ದರೂ ವೃತ್ತಾಕಾರದಲ್ಲಿ ರಚಿತವಾಗಿರುವುದು ಹಾಗೂ 24 ಕೋನಗಳುಳ್ಳ ಶಿಖರವು ಮೇಲೇರುತ್ತ ವ್ಯಾಸದಲ್ಲಿ ಕಡಿಮೆಯಾಗುತ್ತ ಆದರೆ 24 ಕೋನಗಳನ್ನೆ ಹೊಂದಿರುವ ತುದಿಯಲ್ಲಿ ಮೊನಚಾಗದೆ ಇರುವುದು. ಇದು ಚಾಲುಕ್ಯರು ವಾಸ್ತುಶೈಲಿಯಲ್ಲಿ ಪ್ರಬುದ್ಧತೆ ಸಾಧಿಸಿರುವ ಅಂಶಕ್ಕೆ ಉದಾಹರಣೆಯಾಗಿ ನಿಲ್ಲುತ್ತದೆ.

ಗದಗಿನಿಂದ ಸಾಕಷ್ಟು ಬಸ್ಸುಗಳು ಡಂಬಳದ ಮುಲಕ ಹಾದು ಹೋಗುವುದರಿಂದ ಡಂಬಳ ತಲುಪುವುದು ಬಲು ಸುಲಭ. ಆದರೆ ಡಂಬಳಕ್ಕೊಮ್ಮೆ ಭೇಟಿ ನೀಡಿದ ನಂತರ ಇಲ್ಲಿನ ಹಳ್ಳಿ ಪರಿಸರ ನೋಡಿ ನಿರಾಸೆಗೊಳ್ಳದಿರಿ. ಏಕೆಂದರೆ ಸ್ವಲ್ಪ ದೂರ ಸಾಗುತ್ತಲೆ ನಿಮ್ಮ ಕಣ್ಣುಗಳ ಮುಂದೆ ಹತ್ತು ಹಾಗೂ ಹನ್ನೇರಡನೇಯ ಶತಮಾನಗಳು ಇಂದಿಗೂ ಜೀವಂತವಾಗಿ ಕಂಡುಬರುತ್ತದೆ.

ಈ ದೊಡ್ಡಬಸಪ್ಪನ ಮುಂದೆ ತಲೆ ಆಡಿಸಲೇಬೇಕು!

ಚಿತ್ರಕೃಪೆ: Siddharth Pujari

ಹೌದು, ದೊಡ್ಡಬಸಪ್ಪನ ದೇವಾಲಯ ಒಂದೆಡೆಯಾದರೆ ಅದರ ಎದುರಿಗೆ ಸಾವಿರ ವರ್ಷಗಳ ಪ್ರಾಚೀನತೆಯನ್ನು ಹೊಂದಿರುವ ಸೋಮೇಶ್ವರನ ದೇವಾಲಯವು ಕಂಡುಬರುತ್ತದೆ. ಇಂದಿಗೂ ಕಾಲವನ್ನು ಸೆಟೆದು ನಿಂತು ಎದುರಿಸುತ್ತ ಗಟ್ಟಿಯಾಗಿ ನೆಲೆಯೂರಿ ನಿಂಟಿರುವುದನ್ನು ನೋಡಿದಾಗ ಮೈಮನದಲ್ಲೆಲ್ಲ ಪುಳಕದ ಅನುಭವವಾಗುತ್ತದೆ.

ಸೋಮೇಶ್ವರ ದೇವಸ್ಥಾನವು ದೊಡ್ಡಬಸಪ್ಪನ ದೇವಸ್ಥಾನಕ್ಕಿಂತ ಪುರಾತನವಾಗಿದೆಯಾದರೂ, ದೊಡ್ಡಬಸಪ್ಪನ ದೇವಸ್ಥಾನವು ಅತ್ಯಂತ ಆಕರ್ಷಕವಾದ ಕೆತ್ತನೆಗಳಿಂದ ಕೂಡಿರುವುದನ್ನು ಗಮನಿಸಬಹುದು. ದೊಡ್ಡಬಸಪ್ಪನ ದೇವಾಲಯದ ಮುಂದೆ ಕೆತ್ತಲಾಗಿರುವ ನಂದಿಯು ದೊಡ್ಡದಾಗಿರುವ ಕಾರಣ ಮೊದಲಿನಿಂದಲೂ ಇದನ್ನು ದೊಡ್ಡಬಸಪ್ಪ ದೇವಾಲಯ ಎಂದೆ ಕರೆಯುತ್ತಾರೆ.

ಗದಗಿನ ಒಂದು ಕುತೂಹಲಕರ ಸ್ಥಳ : ಗಜೇಂದ್ರಗಡ

ಸ್ಥಳೀಯವಾಗಿ ನಂದಿಯನ್ನು ಬಸವಣ್ಣ, ಬಸಪ್ಪ ಮುಂತಾದ ಹೆಸರುಗಳಿಂದ ಕರೆಯುವುದು ಸಾಮಾನ್ಯ. ಅಲ್ಲದೆ ಈ ಪ್ರದೆಶದಲ್ಲಿ ಆಗಿನ ಸಮಯದಲ್ಲಿ ಈ ನಂದಿಯೆ ದೊಡ್ಡ ಆಕಾರ ಹೊಂದಿದ್ದರಿಂದ ಇದಕ್ಕೆ ದೊಡ್ಡಬಸಪ್ಪ ದೇವಾಲಯ ಎಂಬ ಹೆಸರು ಬಂದಿದೆ. ಇದು ಉತ್ತರ ಕರ್ನಾಟಕದಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ಅದ್ಭುತ ದೇವಾಲಯವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X