
ತಡಿಯಾಂಡಮೋಲ್ ಕರ್ನಾಟಕದ ಎರಡನೇ ಅತೀ ಎತ್ತರದ ಶಿಖರ. ತಡಿಯಾಂಡಮೋಲ್, ಪಶ್ಚಿಮ ಘಟ್ಟದಲ್ಲಿರುವ ಈ ಶಿಖರ ಕೊಡಗು ಜಿಲ್ಲೆಯ ಕಕ್ಕಬ್ಬೆ ಪಟ್ಟಣದ ಸನಿಹದಲ್ಲಿದೆ. ಇದು ಕರ್ನಾಟಕ - ಕೇರಳ ಗಡಿಯಲ್ಲಿದ್ದು, ಸಮುದ್ರಮಟ್ಟದಿಂದ 1748 ಮೀಟರ್ ಎತ್ತರದಲ್ಲಿ ಭವ್ಯವಾಗಿ ನಿಂತಿದೆ. ಶಿಖರಗಾಮಿಗಳು ಮತ್ತು ಆರೋಹಿಗಳಿಗೆ ಈ ಶಿಖರ ಕಠಿಣ ಸವಾಲಾಗಿದೆ

ಬೃಹತ್ ಪರ್ವತ
ತಡಿಯಾಂಡಮೋಲ್ ಮಲೆಯಾಳಂ ಮೂಲದ ಪದವಾಗಿದ್ದು, ಇದರ ಅರ್ಥ "ಬೃಹತ್ ಪರ್ವತ " ಎಂದು. ಚಾರಣದ ಬಗ್ಗೆ ತೀರಾ ಉತ್ಸುಕತೆ ಇಲ್ಲದಿದ್ದರೆ ಅರ್ಧದಷ್ಟು ದೂರವನ್ನು ನಾಲ್ಕು ಚಕ್ರದ ವಾಹನದಲ್ಲಿ ಕ್ರಮಿಸಬಹುದು. ಮುಂದಿನ ದಾರಿ ದುರ್ಗಮವಾಗಿದ್ದರೂ, ಶಿಖರದ ಮೇಲಿನ ನಯನ ಮನೋಹರ ದೃಶ್ಯ, ನಾವು ಪಟ್ಟ ಶ್ರಮ ಸಾರ್ಥಕ ಎನಿಸುವಂತೆ ಮಾಡುತ್ತದೆ. ಶಿಖರದ ಕೆಳಗಿರುವ ನಲಕ್‍ನಾಡು ಆರಮನೆಗೆ ಚಾರಿತ್ರಿಕ ಮಹತ್ವವಿದೆ. ತನ್ನ ಸೈನ್ಯಕ್ಕೆ ಸುರಕ್ಷಿತ ತಂಗುದಾಣವಾಗಿ ಇದನ್ನು ಮಹಾರಾಜಾ ದೊಡ್ಡ ವೀರರಾಜೇಂದ್ರರು 1792ರಲ್ಲಿ ಕಟ್ಟಿಸಿದರು. ಶಿಖರಾಗ್ರ ತಲುಪುವ ಕೆಲವೇ ಕಿಲೋಮೀಟರ್‍ಗಳ ಮೊದಲು ಚಾರಣಿಗರು ಪಡಿ ಇಗ್ಗುತ್ತಪ್ಪ ದೇಗುಲದಲ್ಲಿ ವಿಶ್ರಮಿಸಬಹುದು. ಈ ದೇಗುಲ ಇಲ್ಲಿನ ಸ್ಥಳೀಯರಿಗೆ ಅತ್ಯಂತ ಪವಿತ್ರ ಸ್ಥಳವಾಗಿದೆ. ಶಿಖರದ ಇಳಿಜಾರಿನಲ್ಲಿರುವ ಶೋಲಾ ಅರಣ್ಯವು ನಿರ್ಮಲ ಮತ್ತು ನಿರ್ಭಿಡವಾಗಿದೆ.

ಕೊಡಗಿನ ಅತ್ಯಂತ ಎತ್ತರದ ಶಿಖರ
ತಡಿಯಾಂಡಮೋಲ್, ಕರ್ನಾಟಕದ ಕೊಡಗಿನ ಅತ್ಯಂತ ಎತ್ತರದ ಶಿಖರವಾಗಿದೆ. ಪಶ್ಚಿಮ ಘಟ್ಟದಲ್ಲಿ 5724ಅಡಿ ಎತ್ತರದಲ್ಲಿರುವ ಈ ಶಿಖರ ಚಾರಣಿಗರಿಗೆ ಮತ್ತು ಪ್ರಕೃತಿಪ್ರಿಯರಿಗೆ ಸೂಕ್ತವಾಗಿದೆ. ಇದು ಕರ್ನಾಟಕದ 2ನೇ ಅತ್ಯಂತ ಎತ್ತರದ ಶಿಖರವಾಗಿದೆ.ತಡಿಯಾಂಡಮೋಲ್ ಎಂಬುದು ಮಲೆಯಾಳಂ ಮೂಲದ ಪದವಾಗಿದ್ದು, ಇದರ ಅರ್ಥ ವಿಶಾಲವಾದದ್ದು ಮತ್ತು ಎತ್ತರವಾದದ್ದು ಎಂದು.ಶಿಖರದ ಶೃಂಗದಲ್ಲಿರುವ ನಲಕ್‍ನಾಡ್ ಅರಮನೆ 'ಬೃಹತ್ ತ್ರಿಕೋನ ಮಿತಿ ಸಮೀಕ್ಷೆ' ಯ ಕಾಲದ ಪ್ರಮುಖ ಮೈಲಿಗಲ್ಲಾಗಿದೆ. ತಡಿಯಾಂಡಮೋಲ್ ಸುತ್ತಲೂ ಶೋಲಾ ಅರಣ್ಯಗುಚ್ಛಗಳಿದ್ದು, ಉಷ್ಣವಲಯದ ತೇವ ಅರಣ್ಯಗಳೆಂದು ಕರೆಯಲ್ಪಡುವ ಇದು, ನಯನ ಮನೋಹರ ದೃಶ್ಯವೈಭವವಾಗಿದೆ.ತಡಿಯಾಂಡಮೋಲ್ ನ ಪ್ರಾಕೃತಿಕ ಸೌಂದರ್ಯದ ಬೆರಗು ಸವಿಯಲು ಪ್ರವಾಸಿಗರು ಇಲ್ಲಿಗೆ ತಪ್ಪದೇ ಭೇಟಿ ನೀಡಿರಿ.

ತಲುಪುವುದು ಹೇಗೆ?
ತಡಿಯಾಂಡಮೋಲ್ ಗೆ ಕರ್ನಾಟಕ - ಕೇರಳಗಳೆರಡೂ ಕಡೆಯಿಂದಲೂ ತಲುಪಬಹುದಾಗಿದೆ. ರಾಜ್ಯ ಸರ್ಕಾರಿ ಮತ್ತು ಖಾಸಗಿ ಬಸ್‍ಗಳು ಬೆಂಗಳೂರು ಹಾಗೂ ಹತ್ತಿರದ ಅನೇಕ ಸ್ಥಳಗಳಿಂದ ನಿಗದಿತ ಸಮಯಗಳಲ್ಲಿ ತಡಿಯಾಂಡಮೋಲ್‍ಗೆ ಹೊರಡುತ್ತವೆ.
ತಡಿಯಾಂಡಮೋಲ್‍ನಲ್ಲಿ ರೈಲು ನಿಲ್ದಾಣವಿಲ್ಲ.131 ಕಿಲೋಮೀಟರ್ ದೂರದಲ್ಲಿರುವ ಮಂಗಳೂರು ರೈಲು ನಿಲ್ದಾಣ ತಡಿಯಾಂಡಮೋಲ್‍ಗೆ ಅತ್ಯಂತ ಹತ್ತಿರದ ರೈಲು ನಿಲ್ದಾಣ. ಇದೊಂದು ಪ್ರಮುಖ ರೈಲು ನಿಲ್ದಾಣವಾಗಿದ್ದು, ಇಲ್ಲಿಂದ ದೇಶದ ಎಲ್ಲಾ ಪ್ರಮುಖ ನಗರಗಳಿಗೂ ರೈಲು ಸಂಪರ್ಕವಿದೆ. ಪ್ರವಾಸಿಗರು ಇಲ್ಲಿಂದ ತಡಿಯಾಂಡಮೋಲ್‍ಗೆ ಕಾರ್ ಮತ್ತು ಟ್ಯಾಕ್ಸಿಗಳಿಂದ ತಲುಪಬಹುದು.
ಭಾರತದ ವಿವಿಧ ನಗರಗಳಿಂದ ಬರುವ ಪ್ರವಾಸಿಗರಿಗೆ ಮಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ (139 ಕಿಲೋಮೀಟರ್ ) ಮತ್ತು ಬೆಂಗಳೂರು ಅಂತರ್ರಾಷ್ಟ್ರೀಯ ವಿಮಾನನಿಲ್ದಾಣ (250 ಕಿಲೋಮೀಟರ್ ) ದೂರದಲ್ಲಿದೆ. ಆದರೆ, ಯುರೋಪ್, ಅಮೇರಿಕಾ, ಏಷ್ಯಾ ಮತ್ತು ಮಧ್ಯ ಏಷ್ಯಾದ ದೇಶಗಳಿಂದ ಬರುವ ಪ್ರವಾಸಿಗರಿಗೆ ಬೆಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ಹೆಚ್ಚು ಸೂಕ್ತ.