"ಸಬಕಾ ಮಾಲಿಕ್ ಏಕ್" ಎನ್ನುತ್ತ, ಸರ್ವಧರ್ಮವನ್ನು ಪ್ರೀತಿಸುತ್ತ, ಮನುಷ್ಯರನ್ನು ಸನ್ಮಾರ್ಗ ಪಥದಲ್ಲಿ ಮುನ್ನಡೆಸುತ್ತ ಕೊನೆಗೆ ಸಮಾಧಿಯನ್ನು ಪಡೆದು ಅಲ್ಲಿಂದಲೂ ಕೂಡ ಕ್ರಿಯಾಶೀಲರಾಗಿ ಭಕ್ತರ ಸಕಲ ಕಷ್ಟಗಳನ್ನು ಅಲಿಸುತ್ತ ಪರಿಹರಿಸುತ್ತಿರುವ ಶ್ರೀ ಸದ್ಗುರು ಸಾಯಿನಾಥರು ನೆಲೆಸಿರುವ ಶ್ರೀಕ್ಷೇತ್ರವೆ ಶಿರಡಿ ಪಟ್ಟಣ. ಮಹಾರಾಷ್ಟ್ರ ರಾಜ್ಯದ ಅಹ್ಮದ್ ನಗರ ಜಿಲ್ಲೆಯಲ್ಲಿರುವ ಶಿರಡಿಯು ದೇಶದಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರನ್ನು ಸೆಳೆಯುತ್ತದೆ. ಅಲ್ಲದೆ ಭಾರತದಲ್ಲಿರುವ ಶ್ರೀಮಂತ ದೇವಸ್ಥಾನಗಳ ಪೈಕಿಯೂ ಶಿರಡಿಯ ಸಾಯಿ ದೇವಸ್ಥಾನವು ಒಂದಾಗಿದೆ.
ಹೋಟೆಲ್ ಬುಕ್ ಮಾಡಿ 50% ರಷ್ಟು ಕಡಿತ ಪಡೆಯಿರಿ, ತ್ವರೆ ಮಾಡಿ !

ಚಿತ್ರಕೃಪೆ: Cott12
ಶಿರಡಿ ಪಟ್ಟಣದ ಹೃದಯ ಭಾಗದಲ್ಲಿ ಸಾಯಿಯ ದೇವಸ್ಥಾನ ಸಂಕೀರ್ಣವು ಸ್ಥಿತವಿದೆ. ಈ ದೇವಸ್ಥಾನ ಆವರಣದಲ್ಲಿ ಸಾಯಿಯ ದೇವಾಲಯವಲ್ಲದೆ ಇತರೆ ಕೆಲವು ಪ್ರಮುಖ ದೇಗುಲಗಳಿವೆ. ಸಾಯಿ ದೇವಸ್ಥಾನಕ್ಕೆ ಭೇಟಿ ನೀಡುವವರು ಈ ಎಲ್ಲ ದೇಗುಲಗಳಿಗೂ ಸಾಮಾನ್ಯವಾಗಿ ಭೇಟಿ ನೀಡುತ್ತಾರೆ. ಧರ್ಮಸ್ಥಳ, ಏಳು ಬೆಟ್ಟಗಳ ಒಡೆಯ ನೆಲೆಸಿರುವ ತಿರುಪತಿ ತಿರುಮಲ ಮುಂತಾದ ಕ್ಷೇತ್ರಗಳಲ್ಲಿ ಕಂಡುಬರುವಂತೆ ಇಲ್ಲಿಯೂ ಸಹ ಜನದಟ್ಟನೆಯು ಅಧಿಕವಾಗಿರುತ್ತದೆ. ಸರತಿಯಲ್ಲಿ ನಿಂತು ಸಾಯಿಯ ದರುಶನ ಪಡೆಯಬೇಕಾಗುತ್ತದೆ.
ವಿಶೇಷ ಲೇಖನ : ತಿರುಪತಿ ತಿಮ್ಮಪ್ಪನ ಕ್ಷೇತ್ರ
ಸಾಲು ಅತಿ ಉದ್ದವಿರುವುದರಿಂದ ಕಾಯುವವರಿಗೆ ಅದರಲ್ಲೂ ವಿಶೇಷವಾಗಿ ಮಹಿಳೆಯರು, ಮಕ್ಕಳು ಹಾಗೂ ವೃದ್ಧರಿಗೆ ಅನುಕೂಲವಾಗುವಂತೆ ಅಲ್ಲಲ್ಲಿ ಸ್ಟೀಲಿನ ಬೆಂಚುಗಳನ್ನು ನಿರ್ಮಿಸಲಾಗಿದೆ. ಅಷ್ಟೆ ಅಲ್ಲ ಮುಂದೆ ಸಾಗಿದಂತೆ ನೀರು, ತಂಪಾದ ಮಜ್ಜಿಗೆಗಳೂ ಸಹ ದೊರೆಯುತ್ತವೆ ಅದು ಕೂಡ ವಿಶೇಷವಾಗಿ ಬೇಸಿಗೆಯ ಸಂದರ್ಭದಲ್ಲಿ. ಅಲ್ಲಲ್ಲಿ ಎಲ್ ಸಿ ಡಿ ಟ್ವಿ ಪರದೆಗಳನ್ನೂ ಸಹ ಹಾಕಲಾಗಿದ್ದು ಸಾಯಿಬಾಬಾರ ದರುಶನವು ಲೈವ್ ಆಗಿ ಬಿತ್ತರಿಸುತ್ತಿರಲಾಗುತ್ತದೆ. ಶಿರಡಿಯಲ್ಲಿರುವ ಪವಿತ್ರ ಸನ್ನಿಧಿಗಳ ಕುರಿತು ತಿಳಿ ಮುಂದೆ ತಿಳಿಯಿರಿ.

ಶಿರಡಿಯಲ್ಲಿರುವ ಮುಕ್ತಿಧಾಮ
ಚಿತ್ರಕೃಪೆ: Sanjeev Beekeeper
ಖಂಡೋಬ ದೇವಾಲಯ : ಶಿರಡಿಯಲ್ಲಿರುವ ಒಂದು ಪ್ರಮುಖ ಸ್ಥಳವಾಗಿದೆ. ಸಾಯಿ ಬಾಬಾ ಯುವಕರಿದ್ದಾಗ ಮೊದಲು ದರುಶನ ಪಡೆದ ದೇವಾಲಯವಿದು. ಇದರ ಅರ್ಚಕರಾಗಿದ್ದ ಮಾಳಸಾಪತಿ ಎಂಬುವವರು ಬಾಬಾರನ್ನು ಕುರಿತು ಮೊದಲಿಗೆ "ಯಾ ಸಾಯಿ" ಎಂದು ಕರೆದಿದ್ದರು. ಮರಾಠಿಯಲ್ಲಿ ಯಾ ಎಂದರೆ ಬಾ ಎಂದರ್ಥ. ಈ ದೇಗುಲದ ಮುಂದೆ ಆಲದ ಮರವೊಂದಿದ್ದು ಅದರ ಬುಡದಲ್ಲಿ ಸಾಯಿ ಪಾದುಕೆಗಳನ್ನಿಡಲಾಗಿದೆ.
ವಿಶೇಷ ಲೇಖನ : ಜೆಜುರಿಯ ಖಂಡೋಬ
ಗುರುಸ್ಥಾನ : ಹೆಸರೆ ಹೇಳುವಂತೆ ಇದು ಗುರು (ಬಾಬಾ) ಅವರು ಜೀವನದ ಬಹು ಸಮಯ ಕಳೆದ ಸ್ಥಾನವಾಗಿದೆ. ಸಾಯಿ ಬಾಬಾರು ಹೇಳುವಂತೆ ಈ ಸ್ಥಳದಲ್ಲೆ ಅವರ ಗುರುಗಳ ಸಮಾಧಿಯಿದೆ. ಇಂದು ಇಲ್ಲಿ ಮಾರ್ಬಲ್ ಕಲ್ಲುಗಳಲ್ಲಿ ಮಾಡಲಾದ ಪಾದುಕೆಗಳು, ಶಿವಲಿಂಗ ಹಾಗೂ ಸಾಯಿಬಾಬಾರ ವಿಗ್ರಹವಿರುವುದನ್ನು ಕಾಣಬಹುದು.

ಚಿತ್ರಕೃಪೆ: Amolthefriend
ಸಮಾಧಿ ಮಂದಿರ : ಶಿರಡಿ ಸಾಯಿ ದೇವಸ್ಥಾನದ ಅತಿ ಪ್ರಮುಖ ಘಟ್ಟವೆ ಸಮಾಧಿ ಮಂದಿರ. ಇದು ಸಾಯಿಯವರ ಸಮಾಧಿಯಿರುವ ಸ್ಥಳವಾಗಿದೆ. ಸಮಾಧಿಯ ಮೇಲೆ ಸಾಯಿಯ ಶ್ವೇತಮಯ ಅಮೃತಶಿಲೆಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದ್ದು ಸಾಯಿಯು ಭಕ್ತರನ್ನು ಹರಸುತ್ತಿರುವಂತೆ ಗೋಚರಿಸುತ್ತದೆ. ಭೂಪಾಳಿಯಿಂದ ಪ್ರತಿ ದಿನ ನಸುಕಿಗೆ ಐದು ಘಂಟೆಗೆ ತೆರೆದು ಶೇಜ ಆರತಿಯ ಮೂಲಕ ರಾತ್ರಿ ಹತ್ತು ಘಂಟೆಗೆ ಮುಚ್ಚುತ್ತದೆ. ವರ್ಷದಲ್ಲಿ ಮೂರು ಸಲ ಮಾತ್ರ, ಗುರುಪೂರ್ಣಿಮೆ, ದಸರಾ ಹಾಗೂ ರಾಮನವಮಿ ಸಂದರ್ಭದಲ್ಲಿ ರಾತ್ರಿಯೆಲ್ಲ ತೆರೆದಿರುತ್ತದೆ.

ಜನರಿಂದ ಕಿಕ್ಕಿರಿದು ತುಂಬಿರುವ ದ್ವಾರಕಾಮಾಯಿ
ಚಿತ್ರಕೃಪೆ: Sanjeev Beekeeper
ದ್ವಾರಕಾಮಾಯಿ : ಇದು ಕೂಡ ಒಂದು ಪ್ರಮುಖ ಸನ್ನಿಧಿಯಾಗಿದೆ. ಮದುವೆಯ ಮೆರವಣಿಗೆಯೊಂದಿಗೆ ಶಿರಡಿಗೆ ಬಂದಿದ್ದ ಯುವಕ ಸಾಯಿಯವರು ತಮ್ಮ ಕೊನೆಯವರೆಗೆ ಈ ಸ್ಥಾನದಲ್ಲಿ ವಾಸಿಸುತ್ತಿದ್ದರು. ಪ್ರಸ್ತುತ ಈ ಸ್ಥಳವು ಸಮಾಧಿ ಮಂದಿರ ಪ್ರವೇಶ ಸ್ಥಾನದ ಬಲಭಾಗದಲ್ಲಿದೆ.
ಚಾವಡಿ : ಅಕ್ಷರಶಃ ಚಾವಡಿ ಎಂದರೆ ಗ್ರಾಮ ಕಚೇರಿ ಎಂಬರ್ಥ ಬರುತ್ತದೆ. ಇದು ದ್ವಾರಕಾಮಾಯಿಯ ಬಲಭಾಗದಲ್ಲಿದೆ. ಬಾಬಾ ತಮ್ಮ ಕೊನೆಯ ದಶಾಕದಲ್ಲಿ ಚಾವಡಿಯಲ್ಲಿ ನೆಲೆಸಿದ್ದರು. ಇಂದು ಇಲ್ಲಿ ಬಾಬಾರ ಭಾವ ಇರಿಸಲಾಗಿದೆ. ಅಲ್ಲದೆ ಬಾಬಾರು ಕೊನೆಯುಸಿರೆಳೆಯುವ ಮುಂಚೆ ಕುಳಿತು ಸ್ನಾನ ಮಾಡಿದ್ದರೆನ್ನಲಾದ ಕಟ್ಟಿಗೆಯ ಶಯನಾಸನವನ್ನು ನೋಡಬಹುದು.

ಚಿತ್ರಕೃಪೆ: Sanjeev Beekeeper
ಲೆಂದಿ ಉದ್ಯಾನ : ಸಾಯಿ ಬಾಬಾ ಪ್ರತಿ ದಿನ ತಮ್ಮ ಬೆಳಿಗ್ಗೆಯನ್ನು ಬಹುವಾಗಿ ಕಳೆಯುತ್ತಿದ್ದ ಜಾಗವಿದು. ಇಲ್ಲಿ ಕೆಲ ಸಮಾಧಿಗಳು ಹಾಗೂ ಗಿಡ ಮರಗಳಿವೆ. ಇಂದಿಗೂ ಬಾಬಾ ಅವರು ಹಚ್ಚಿದ್ದರೆನ್ನಲಾದ ದೀಪವನ್ನು ಎರಡು ಗಿಡಗಳ ಮಧ್ಯೆ ಕಾಣಬಹುದಾಗಿದೆ. ಈ ಎರಡು ಗಿಡಗಳನ್ನು ಸ್ವತಃ ಬಾಬಾರವರೆ ನೆಟ್ಟಿದ್ದರೆನ್ನಲಾಗಿದೆ.
ಇನ್ನು ಶಿರಡಿಯು ದೇಶದಲ್ಲೆ ಒಂದು ಪ್ರಮುಖ ಧಾರ್ಮಿಕ ತಾಣಗಳಲ್ಲಿ ಒಂದಾಗಿರುವುದರಿಂದ ಇಲ್ಲಿಗೆ ದೇಶದ ಎಲ್ಲ ಭಾಗಗಳಿಂದ ಸುಲಭವಾಗಿ ತೆರಳಬಹುದು. ಶಿರಡಿಯು ಮುಂಬೈ ಮಹಾನಗರದಿಂದ 296 ಕಿ.ಮೀ ಹಾಗೂ 83 ಕಿ.ಮೀ ಗಳಷ್ಟು ದೂರದಲ್ಲಿದೆ. ಶಿರಡಿ ತನ್ನದೆ ಆದ ಸಾಯಿ ನಗರ ಶಿರಡಿ ಎಂಬ ರೈಲು ನಿಲ್ದಾಣ ಹೊಂದಿದೆ. ಶಿರಡಿ ಹೋಗುವ ವಿವಿಧ ಬಗೆ.


Click it and Unblock the Notifications
















