ಶಾರದೀಯ ನವರಾತ್ರಿಯು ಈ ವರ್ಷ ಸೆಪ್ಟೆಂಬರ್ 3 ರಿಂದ ಪ್ರಾರಂಭವಾಗಿದೆ. ಈ ಅವಧಿಯಲ್ಲಿ ನವರಾತ್ರಿಯನ್ನು ದೇಶದಾದ್ಯಂತ ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ. ಈ ಹಬ್ಬದ ಬಗ್ಗೆ ಜನರಲ್ಲಿ ಒಂದು ರೀತಿಯ ಉತ್ಸಾಹವಿದೆ. ನವರಾತ್ರಿಯಲ್ಲಿ ದುರ್ಗೆಯ ಒಂಬತ್ತು ರೂಪಗಳನ್ನು ಪೂಜಿಸಲಾಗುವುದರಿಂದ ನಾಡಿನಾದ್ಯಂತ ಹಬ್ಬದ ವಾತಾವರಣವಿರುತ್ತದೆ. ದುರ್ಗಾ ಮಾತೆಯನ್ನು ಎಲ್ಲಾ ಸ್ಥಳಗಳಲ್ಲಿ ಭಕ್ತಿಯಿಂದ ಪೂಜಿಸಲಾಗುತ್ತದೆ.
ಶಾರದೀಯ ನವರಾತ್ರಿಯ ಸಮಯದಲ್ಲಿ, ಜನರು ದೇವಿಯ ದರ್ಶನ ಮತ್ತು ಆಶೀರ್ವಾದ ಪಡೆಯಲು ದೇಶಾದ್ಯಂತ ಇರುವ ದುರ್ಗಾ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ನಾವೆಲ್ಲಾ ಈಗಾಗಲೇ ನಮ್ಮ ಮೈಸೂರು, ಮಂಗಳೂರಿನಲ್ಲಿ ನವರಾತ್ರಿ ಹೇಗಿರುತ್ತದೆಯೆಂದು ನೋಡಿದ್ದೇವೆ, ಕೇಳಿದ್ದೇವೆ. ಆದರೆ ನಮ್ಮ ದೇಶದ ಇತರ ರಾಜ್ಯಗಳಲ್ಲಿ ನವರಾತ್ರಿ ಹೇಗೆ ಆಚರಿಸುತ್ತಾರೆ ಗೊತ್ತಾ?, ನವರಾತ್ರಿಯನ್ನು ಒಂದೊಂದು ಕಡೆ ಒಂದೊಂದು ರೀತಿ ಆಚರಿಸಲಿದ್ದು, ದೇಶದ ಇತರ ಭಾಗಗಳಲ್ಲಿ ಯಾವ ರೀತಿ ಆಚರಿಸುತ್ತಾರೆ ನೋಡೋಣ ಬನ್ನಿ...
ಗುಜರಾತ್
ನವರಾತ್ರಿಯ ಸಂದರ್ಭದಲ್ಲಿ ಗುಜರಾತ್‌ನಲ್ಲಿ ದಾಂಡಿಯಾ ಆಯೋಜಿಸಲಾಗುತ್ತದೆ. ಪ್ರಸ್ತುತ ಇದು ಮುಂಬೈನಲ್ಲೂ ಜನಪ್ರಿಯವಾಗಿದೆ. ನವರಾತ್ರಿಯ ಒಂಬತ್ತು ದಿನಗಳಲ್ಲಿ ಆಚರಣೆಗಳು ಆರತಿಯೊಂದಿಗೆ ಪ್ರಾರಂಭವಾಗುತ್ತವೆ. ಈ ಸಂದರ್ಭದಲ್ಲಿ ಗರ್ಬಾ ಆಯೋಜಿಸಲಾಗುತ್ತದೆ. ನೀವು ದಾಂಡಿಯಾ ಮತ್ತು ಗರ್ಬಾ ನೃತ್ಯವನ್ನು ನೋಡಲು ಬಯಸಿದರೆ ಒಮ್ಮೆ ಅಹಮದಾಬಾದ್‌ಗೆ ಭೇಟಿ ನೀಡಿ.
ಮುಂಬೈ
ಮುಂಬೈನಲ್ಲಿ 9 ದಿನಗಳ ಕಾಲ ವಿವಾಹಿತ ಮಹಿಳೆಯರು ಕೆಲವು ಆಚರಣೆಗಳನ್ನು ಮಾಡಲು ಒಂದು ಸಭೆಯನ್ನು ಆಯೋಜಿಸುತ್ತಾರೆ. ಈ ಸಮಯದಲ್ಲಿ ತಮ್ಮ ಹಣೆಯ ಮೇಲೆ ಕುಂಕುಮ ಮತ್ತು ಅರಿಶಿನವನ್ನು ಹಚ್ಚುತ್ತಾರೆ ಮತ್ತು ಪರಸ್ಪರ ಉಡುಗೊರೆಗಳನ್ನು ನೀಡುತ್ತಾರೆ. ಮುಂಬೈನಲ್ಲಿ ದಾಂಡಿಯಾ ಮತ್ತು ಗರ್ಭಾ ನೈಟ್ ಕೂಡ ನೋಡಲು ಚೆನ್ನಾಗಿರುತ್ತದೆ. ಅಷ್ಟೇ ಅಲ್ಲ, ಸೆಲೆಬ್ರಿಟಿಗಳೂ ಇವುಗಳಲ್ಲಿ ಭಾಗವಹಿಸುತ್ತಾರೆ.
ಆಂಧ್ರಪ್ರದೇಶ
ಆಂಧ್ರಪ್ರದೇಶದಲ್ಲಿ ನವರಾತ್ರಿಯನ್ನು ಬತುಕಮ್ಮ ಪಾಂಡುಗ ಎಂದು ಆಚರಿಸಲಾಗುತ್ತದೆ. ಈ ಹಬ್ಬವು ಗೌರಿ ದೇವಿಗೆ ಸಮರ್ಪಿತವಾಗಿದೆ.

ಕೋಲ್ಕತ್ತಾ
ಕೋಲ್ಕತ್ತಾದಲ್ಲಿ ನವರಾತ್ರಿಯನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ದುರ್ಗಾ ಪೂಜೆಗೆ ಇದು ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಈ ಸಮಯದಲ್ಲಿ, ಇಲ್ಲಿ ದೇವಿಯ ದೊಡ್ಡ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುತ್ತದೆ. ಈ ಸಂದರ್ಭದಲ್ಲಿ ಶಾಸ್ತ್ರೋಕ್ತವಾಗಿ ಮಾತೆಯನ್ನು ಪೂಜಿಸಲಾಗುತ್ತದೆ. ಮಹಾರಾಷ್ಟ್ರದಲ್ಲಿ ಗಣಪತಿ ಪೂಜೆ ನಡೆಯುವ ರೀತಿ ದುರ್ಗಾ ಪೂಜೆ ನಡೆಯುತ್ತದೆ ಎಂದು ಹೇಳಲಾಗುತ್ತದೆ. ಪ್ರತಿ ಮನೆಯಲ್ಲೂ ಕಲಶವನ್ನು ಸ್ಥಾಪಿಸಿ ದೇವತೆಯನ್ನು ಪೂಜಿಸಲಾಗುತ್ತದೆ. ಸಾಮಾನ್ಯವಾಗಿ ನವರಾತ್ರಿಯ ಸಮಯದಲ್ಲಿ ಮೈಸೂರು ದಸರಾ ಬಿಟ್ಟರೆ ಬಹುತೇಕರು ಇಲ್ಲಿಗೆ ಭೇಟಿ ನೀಡಲು ಬಯಸುವರು. ಏಕೆಂದರೆ ನೀವಿಲ್ಲಿ ವಿಭಿನ್ನ ಅನುಭವವನ್ನು ಪಡೆಯುತ್ತೀರಿ.

ಛತ್ತೀಸ್‌ಗಢ
ಛತ್ತೀಸ್‌ಗಢದಲ್ಲಿರುವ ಬಸ್ತಾರ್‌ನಲ್ಲಿ ದುರ್ಗಾ ಪೂಜೆಯನ್ನು ಭವ್ಯವಾಗಿ ಸಾಂಪ್ರದಾಯಿಕ ರೀತಿಯಲ್ಲಿ ಆಚರಿಸಲಾಗುತ್ತದೆ. 52 ಶಕ್ತಿಪೀಠಗಳಲ್ಲಿ ಒಂದು ದಂತೇವಾಡದಲ್ಲಿದೆ. ಈ ಶಕ್ತಿಪೀಠ ದೇವಾಲಯವನ್ನು ದಂತೇಶ್ವರಿ ದೇವಾಲಯ ಎಂದು ಕರೆಯಲಾಗುತ್ತದೆ. ಇದೇ ಸಂದರ್ಭದಲ್ಲಿ ರಥಯಾತ್ರೆಯನ್ನೂ ಕೈಗೊಳ್ಳಲಾಗುತ್ತದೆ. ಮಹುವಾ ಲಡ್ಡುಗಳನ್ನು ತಾಯಿಗೆ ಅರ್ಪಿಸಲಾಗುತ್ತದೆ. ಇದಲ್ಲದೆ, ನೀವು ಮುಂಬೈ, ವಾರಣಾಸಿ, ಕುಲು ಮನಾಲಿ ಮುಂತಾದ ಸ್ಥಳಗಳಿಗೆ ಭೇಟಿ ನೀಡಬಹುದು.

ವಾರಣಾಸಿ
ವಾರಣಾಸಿಯಲ್ಲಿಯೂ ನವರಾತ್ರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಹಬ್ಬವು ಸುಮಾರು ಒಂದು ತಿಂಗಳ ಕಾಲ ನಡೆಯುತ್ತದೆ. ಇಲ್ಲಿ ರಾಮಲೀಲಾವನ್ನು ಪ್ರದರ್ಶಿಸುವ ಸಂಪ್ರದಾಯವಿದೆ.


Click it and Unblock the Notifications



















