Search
  • Follow NativePlanet
Share
» »ಪಕ್ಕಾ ಹಳ್ಳಿಯ ಸೊಗಡನ್ನು ನೆನಪಿಸುವ ‘ರಂಗೋಲಿ ಗಾರ್ಡನ್ಸ್’          

ಪಕ್ಕಾ ಹಳ್ಳಿಯ ಸೊಗಡನ್ನು ನೆನಪಿಸುವ ‘ರಂಗೋಲಿ ಗಾರ್ಡನ್ಸ್’          

ಬೆಂಗಳೂರಿನಂತಹ ಮಹಾನಗರಿಯಲ್ಲಿ ಇಂತಹದೊಂದು ಸ್ಥಳವಿದೆ ಎಂದು ಬಹುಶಃ ಅನೇಕರಿಗೆ ತಿಳಿದಿರಲಿಕ್ಕಿಲ್ಲ. ನಿಜಕ್ಕೂ ಈ ಸ್ಥಳ ಎಷ್ಟು ಅದ್ಭುತವಾಗಿದೆಯೆಂದರೆ ಹಳ್ಳಿ ಮತ್ತು ರೈತರ ಬದುಕಿನ ಚಿತ್ರಣವನ್ನು ಇಂಚಿಂಚೂ ತೆರೆದಿಡುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಹಳ್ಳಿಯ ಜನಜೀವನ, ಹಿಂದಿನ ಕಾಲದಲ್ಲಿ ಹಿರಿಯರು ಬಳಸುತ್ತಿದ್ದ ವಸ್ತುಗಳು, ಉಡುಗೆಗಳ ಪರಿಚಯವಾಗಬೇಕೆಂದರೆ ನೀವಿಲ್ಲಿಗೆ ಒಮ್ಮೆಯಾದರೂ ಬರಲೇಬೇಕು.

ಅಷ್ಟೇ ಅಲ್ಲ, ಹಿಂದೆ ಸಮಾಜ ಹೇಗಿತ್ತು, ಹಳ್ಳಿಗರ ಜೀವನ ಮುಂತಾದ ವಿಷಯಗಳನ್ನು ನಮ್ಮ ಮಕ್ಕಳು ತಿಳಿದುಕೊಳ್ಳಲು ಸಹಾಯವಾಗುತ್ತದೆ. ಹಾಗಾದರೆ ಇಂತಹದೊಂದು ಸ್ಥಳ ನಮ್ಮ ಬೆಂಗಳೂರಿನಲ್ಲಿ ಎಲ್ಲಿರಬಹುದೆಂದು ನಿಮ್ಮ ಕುತೂಹಲ ಹೆಚ್ಚಾಗುತ್ತಿದ್ದರೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ...

ಇಲ್ಲಿದೆ ನೋಡಿ ‘ರಂಗೋಲಿ ಗಾರ್ಡನ್ಸ್’

ಇಲ್ಲಿದೆ ನೋಡಿ ‘ರಂಗೋಲಿ ಗಾರ್ಡನ್ಸ್’

ಬೆಂಗಳೂರು ಸಿಟಿ ಸ್ಟೇಷನ್'ನಿಂದ ಸುಮಾರು 18 ಕಿ.ಮೀ.ದೂರದಲ್ಲಿರುವ ಜಕ್ಕೂರಿಗೆ ಬಂದರೆ ರಾಚೇನಹಳ್ಳಿ ಶ್ರೀರಾಂಪುರ ಕ್ರಾಸ್ ಬಳಿ ಮಹಾತ್ಮ ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ರೂರಲ್ ಎನರ್ಜಿ ಅಂಡ್ ಡೆವಲಪ್‌ಮೆಂಟ್ ಒಳಗೆ ರಂಗೋಲಿ ಗಾರ್ಡನ್ಸ್ (ಮಾದರಿ ಕಲಾ ಗ್ರಾಮ) ಇದೆ. ಇಲ್ಲಿ ನಿಮಗೆ ಪ್ರವೇಶ ದ್ವಾರದಲ್ಲಿ ಪಾರ್ಕಿಂಗ್ ಸೌಲಭ್ಯವಿದೆ. ಇನ್ನು ಸ್ವಲ್ಪ ಮುಂದೆ ಹೋದರೆ ಟಿಕೆಟ್ ಕೌಂಟರ್ ಸಿಗುತ್ತದೆ. ಟಿಕೆಟ್ ಕೌಂಟರ್ ಬಳಿ ಮಕ್ಕಳಿಗೆ, ವಯಸ್ಕರ ಪ್ರವೇಶ ಶುಲ್ಕದ ಬಗ್ಗೆ ಮಾಹಿತಿ ಇರುವ ಬೋರ್ಡ್ ಸಿಗುತ್ತದೆ. ಸಾಮಾನ್ಯ ದಿನ ಮತ್ತು ರಜಾ ದಿನಗಳಲ್ಲಿ ಶುಲ್ಕ ಬೇರೆ ಬೇರೆ ಇರುತ್ತದೆ. ಮಕ್ಕಳಿಗೆ ಮತ್ತು ದೊಡ್ಡವರಿಗೂ ಶುಲ್ಕ ಬೇರೆ ಬೇರೆ ಇರುತ್ತದೆ. ರಂಗೋಲಿ ಗಾರ್ಡನ್ಸ್ ಸಾಮಾನ್ಯವಾಗಿ ಬೆಳಗ್ಗೆ 9 ರಿಂದ 6 ರವರೆಗೆ ವೀಕ್ಷಣೆಗೆ ಲಭ್ಯವಿದೆ.

ಥೇಟ್ ಮನುಷ್ಯರಂತೆ ಕಾಣುವ ಪುತ್ಥಳಿಗಳು

ಥೇಟ್ ಮನುಷ್ಯರಂತೆ ಕಾಣುವ ಪುತ್ಥಳಿಗಳು

ನೀವು ಟಿಕೆಟ್ ತೆಗೆದುಕೊಂಡು ಒಳಗೆ ಪ್ರವೇಶಿಸಿದಾಗ ಅಲ್ಲಲ್ಲಿ ಮನೆಗಳು, ಮನುಷ್ಯರನ್ನೇ ಹೋಲುವ ಪುತ್ಥಳಿಗಳನ್ನು ನೋಡಬಹುದು. ಎಲ್ಲಾ ಪುತ್ಥಳಿಗಳು ಬಣ್ಣ, ಬಣ್ಣದ ನಮ್ಮ ಹಿರಿಕರು ತೊಡುವ ಬಟ್ಟೆಗಳನ್ನು ಧರಿಸಿವೆ. ಸಾಮಾನ್ಯವಾಗಿ ಚೌಕ ಬಾರ, ಗೋಲಿ ಆಟ, ಹಗ್ಗದಾಟ, ಟೈಯರ್ ಆಟ, ಚಿನ್ನಿದಾಂಡು, ಗಿರಗಿಟ್ಲೆ ಆಟಗಳು ಇವೆಲ್ಲಾ ಹಳ್ಳಿ ಕಡೆ ಜನಪ್ರಿಯ ಆಟಗಳು. ಈಗಲೂ ಕೆಲವು ಹಳ್ಳಿಗಳಲ್ಲಿ ಆಡುವುದು ರೂಢಿ. ಇಲ್ಲಿ ಕೂಡ ಅದೇ ಹಳ್ಳಿಯ ವಾತವರಣ ಸೃಷ್ಟಿಯಾಗಿದ್ದು, ಇಲ್ಲಿ ಹುಡುಗರು ಗೋಲಿ ಆಟ, ದೊಡ್ಡವರು ಚೌಕ ಬಾರ, ಹೆಣ್ಮಕ್ಕಳು ಗಿರಗಿಟ್ಲೆ ಆಡುವುದನ್ನು ನೀವು ನೋಡಬಹುದು. ಎತ್ತು ಕೂಡ ಬಹಳ ನ್ಯಾಚುರಲ್ ಆಗಿದ್ದು, ಎತ್ತಿನ ಗಾಡಿ ಮತ್ತು ಮಕ್ಕಳ ಸಂಭ್ರಮ ಹೇಳತೀರದು.

ಈ ಮೊದಲೇ ಹೇಳಿದ ಹಾಗೆ ಬಟ್ಟೆ, ವಾತವರಣ ಎಲ್ಲಾ ಹಳ್ಳಿಯದ್ದೇ. ಕಟ್ಟೆ ಮನೆ, ಹಂಚಿನ ಮನೆ, ತೊಟ್ಟಿ ಮನೆಗಳನ್ನು ಸಹ ನಾವಿಲ್ಲಿ ಕಾಣಬಹುದು. ಮಗುವನ್ನು ಕಂಕುಳಲ್ಲಿ ಎತ್ತಿಕೊಂಡು ಬಂದ ಮಹಿಳೆಗೆ ಬುಡಬುಡಿಕೆ ಶಾಸ್ತ್ರ ಹೇಳುತ್ತಿರುವುದು , ಬಟ್ಟೆ ಒಣಗಿಸುವ ರೀತಿ, ಮನೆಯ ಮುಂದೆ ದೀಪಗಳನ್ನು ಇಡಲು ಜಾಗ, ಪ್ರತಿಯೊಂದು ಕೂಡ ನಮ್ಮನ್ನು ಅದ್ಭುತ ಲೋಕಕ್ಕೆ ಕರೆದೊಯ್ಯುತ್ತವೆ.

ಬೋರ್ಡ್ ಸಮೇತ ವಿವರಣೆ

ಬೋರ್ಡ್ ಸಮೇತ ವಿವರಣೆ

ಇಲ್ಲಿ ವಿವಿಧ ವೃತ್ತಿಯ ಬಗ್ಗೆ ಪುತ್ಥಳಿಯ ಮೂಲಕ ಅದ್ಭುತವಾಗಿ ಹೇಳಲಾಗಿದೆ. ಹಾಗೆಯೇ ಪ್ರತಿಯೊಬ್ಬರಿಗೂ ಅರ್ಥವಾಗಲು ಇದರ ಬಗ್ಗೆ ವಿವರಣೆ ಸಹ ಕೊಡಲಾಗಿದೆ. ಉದಾಹರಣೆಗೆ ಗದಗ ಜಿಲ್ಲೆಯ ಗ್ರಾಮೀಣ ನಾಟಿ ವೈದ್ಯರ ಮನೆಯ ಚಿತ್ರಣವನ್ನು ಇಲ್ಲಿ ನೀಡಲಾಗಿದ್ದು, ನಾಟಿ ವೈದ್ಯರು ಮನುಷ್ಯರ ಕೀಲು ಮತ್ತು ಮೂಳೆ ಜೋಡಣೆಯ ಕಾಯಕದಲ್ಲಿ ತೊಡಗಿಸಿಕೊಂಡಿರುವುದು, ಕೀಲು ಜೋಡಣೆ ಮಾಡುತ್ತಿರುವುನ್ನು ನೋಡಬಹುದು. ಕಿರಾಣಿ ಅಂಗಡಿಯೂ ಇದೆ. ಅಕ್ಕಸಾಲಿಗರ ಮನೆ, ಅಗ್ರಹಾರವೂ ಇದೆ. ಮೈಸೂರು ಜಿಲ್ಲೆಯ ಗ್ರಾಮೀಣ ಭಾಗಗಳ ಬ್ರಾಹ್ಮಣರ ಮನೆಗಳನ್ನು ನಿರ್ಮಿಸಲಾಗಿದ್ದು, ಇಲ್ಲಿ ವೇದೋಪನಿಷತ್ ಗಳನ್ನು ಹೇಳಿಕೊಡುವ ಜೋಯಿಸರು, ಕುಂಡಲಿ ಹೇಳಿಕೊಡುವ ಜೋಯಿಸರು ಇದ್ದಾರೆ. ಗ್ರಾಮೀಣ ಭಾಗದ ಗೌಡರ ಮನೆಯೂ ಇದ್ದು, ಅವರು ಊರಿನ ಆಗುಹೋಗಗಳ ಜೊತೆ ಲೆಕ್ಕ ಪತ್ರ ನಿರ್ವಹಿಸುತ್ತಿರುವುದನ್ನು ಗಮನಿಸಬಹುದು.

ಹಳ್ಳಿಗೆ ಬಂದಂತೆ ಭಾಸವಾಗುವುದು!

ಹಳ್ಳಿಗೆ ಬಂದಂತೆ ಭಾಸವಾಗುವುದು!

ಹಾಗೆಯೇ ಹಳ್ಳಿ ಮನೆಯ ಜಗಲಿ ಕಟ್ಟೆ, ನಾಯಿ, ಹುಡುಗಿ, ಅಜ್ಜಿ, ಹೆಂಗಸು ಹೀಗೆ ಪ್ರತಿಯೊಂದವುಗಳ ಪುತ್ಥಳಿಗಳನ್ನು ನೋಡುತ್ತಿದ್ದರೆ ನಿಮಗೆ ಅಲ್ಲಿರುವುದು ನಿಜವಾದ ಮನುಷ್ಯರೇ, ನಾವು ಬಂದಿರುವುದು ಹಳ್ಳಿಗೇ ಎಂಬಂತೆ ಭಾಸವಾಗುತ್ತದೆ. ಹಸುಗಳು ಮೇವು ತಿನ್ನುವುದು, ಹೆಂಗಸರು ಮಜ್ಜಿಗೆ ಕಡಿಯವುದು, ಬೀಸೆಕಲ್ಲಿನಲ್ಲಿ ರುಬ್ಬುವುದು, ಪಾತ್ರೆ ತೊಳೆಯುವುದು, ರಂಗೋಲಿ ಬಿಡುತ್ತಿರುವುದು, ಹಾಸಿಗೆ ಮಾಡುವುದು, ಚರಕದಲ್ಲಿ ನೇಯುವುದು, ತೊಟ್ಟಿ ಮನೆಯಲ್ಲಿ ಮಗುವಿಗೆ ಸ್ನಾನ ಮಾಡಿಸುತ್ತಿರುವುದು, ಹಿಂದೆಲ್ಲಾ ಬಿಸಿಲು ಚೆನ್ನಾಗಿ ಬಂದ ಮೇಲೆ ಮಗುವಿಗೆ ಸ್ನಾನ ಮಾಡಿಸುತ್ತಿದ್ದರು. ಕೊಟ್ಟಿಗೆ ಮನೆ, ಕೊಟ್ಟಿಗೆ ಮನೆಯಲ್ಲಿ ಎಮ್ಮೆ ಹಾಲನ್ನು ಕರಿಯುವ ಹಾಗೆ, ಹಸುಗಳು ಮೇವನ್ನು ಮೇಯುವ ಪುತ್ಥಳಿಗಳಂತೂ ಅದ್ಭುತ.

ಇವೆಲ್ಲಾ ಕಾಣಸಿಗುತ್ತವೆ

ಇವೆಲ್ಲಾ ಕಾಣಸಿಗುತ್ತವೆ

ಮಂಡ್ಯ ಜಿಲ್ಲೆಯಲ್ಲಿರುವ ಮನೆ. ಈ ಮನೆಯಲ್ಲಿ ಗೃಹಿಣಿಯರು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು, ಗಾಣದಲ್ಲಿ ಎಣ್ಣೆ ತೆಗೆಯುವುದು, ಪೋಸ್ಟ್ ಮ್ಯಾನ್ ಪತ್ರ ಕೊಡ್ತಾ ಇರೋದು. ಹಿತ್ತಲಲ್ಲಿ ಬಟ್ಟೆ ಒಗೆಯುತ್ತಿರುವುದು, ಬೆರಣಿ ತಟ್ಟುವುದು, ಸೌದೆ ಒಡೆಯುವ ಚಿತ್ರ, ಬಿದಿರಿನಲ್ಲಿ ಪೊರಕೆ, ಬುಟ್ಟಿ ಮಾಡುತ್ತಿರುವುದು, ಗ್ರಾಮೀಣ ಕುಂಬಾರರ ಮನೆ, ಕಮ್ಮಾರ, ಮರಗೆಲಸ ಮಾಡುವವರ ಮನೆ, ಹಳ್ಳಿ ಮೇಷ್ಟ್ರು ಪಾಠ ಮಾಡುತ್ತಿರುವುದು, ಪಂಚಾಯಿತಿ ಕಟ್ಟೆ, ಬಾವಿ ನೀರು ಸೇದುತ್ತಿರುವುದು, ಮೀನುಗಾರರ ಮನೆ, ಪಾಂಪರಿಕ ಬೇಸಾಯ ಪದ್ಧತಿ, ಕೋಲೆ ಬಸವ, ಸಂತೆ ಹಾಗೂ ಸಂತೆಯಲ್ಲಿ ನಡೆಯುವ ಚೌಕಾಶಿ, ಕುಸ್ತಿ ಆಟ, ಕುಸ್ತಿ ಪಂದ್ಯ ವೀಕ್ಷಣೆ, ಕರಾವಳಿ ಭಾಗದ ಕಂಬಳ ಆಟ, ಮೀನುಗಾರ್ತಿ ಮಹಿಳೆ ಎಲ್ಲವನ್ನೂ ವಿವರವಾಗಿ ತೋರಿಸಲಾಗಿದೆ.

ಈ ಎಲ್ಲಾ ಸೌಲಭ್ಯವೂ ಇದೆ

ಈ ಎಲ್ಲಾ ಸೌಲಭ್ಯವೂ ಇದೆ

‘ರಂಗೋಲಿ ಗಾರ್ಡನ್ಸ್' ಗೆ ಬಂದವರಿಗೆ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಸೌಲಭ್ಯ ಕೂಡ ಇದೆ. ಒಳಗಡೆ ರೆಸ್ಟೋರೆಂಟ್ ಇದೆ. ಇಲ್ಲಿ ಜೋಳದ ರೊಟ್ಟಿ, ಸೀಮೆಬದನೆಕಾಯಿ ಪಲ್ಯ ಸವಿಯಬಹುದು. ಇಲ್ಲಿ ಟಾಂಗ ರೈಡ್ಸ್ ಕೂಡ ಇದೆ. ಮಡಕೆ ಮಾಡಬಹುದು, ಮಹೆಂದಿ ಬಿಡಿಸಿಕೊಳ್ಳಬಹುದು ಜೊತೆಗೆ ಏನಾದರೂ ಖರೀದಿ ಮಾಡುವುದಾದರೆ ಹಳ್ಳಿ ಅಂಗಡಿ ಕೂಡ ಇದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X